Wednesday, January 15, 2014

ರೈತ..!

'ದೇಶದ ಬೆನ್ನೆಲುಬು ರೈತ' ಎನ್ನುವ ವಾಕ್ಯ ಶಾಲೆಯಲ್ಲಿ ಕಲಿತ ಎಲ್ಲರಿಗು ಗೊತ್ತಿರುವ ಸತ್ಯ. ಆತ ಅನ್ನದಾತ;ನೇಗಿಲ ಯೋಗಿ ಅಂತೆಲ್ಲ ಕರೆದು ಗೌರವ ತೋರಿಸುವುದು ನಿಮಗೂ ತಿಳಿದಿರುವ ವಿಚಾರವೇ!  ಆದರೆ ನಾವು ಯಾರು ರೈತರಾಗಲು ಬಯಸುತ್ತಿಲ್ಲ; ಅಥವಾ ನಮ್ಮ ಮಕ್ಕಳು ಕೂಡ ರೈತರಾಗಲು ನಾವು ಬಿಡುತ್ತಿಲ್ಲ. ಅದೇನಿದ್ದರು ರೈತರು  ಎಂಬ ಹಾಡು ಕಾರ್ಯಕ್ರಮದಲ್ಲಿ ಕೇಳಿ, ಒಂದಿಷ್ಟು ರೈತನ ಇಮೇಜ್ ಗಳು ಫೇಸ್ಬುಕ್ ನಲ್ಲಿ ಹಾಕುವುದಕ್ಕೆ ಮಾತ್ರ ಸೀಮಿತವಾಗುತ್ತಿದೆ ನಮ್ಮ ಬದುಕು.

ರೈತರಾಗುತ್ತಿರುವವರು  ಯಾರು ? ಸರ್ಕಾರದ ಎಲ್ಲ ಶೈಕ್ಷಣಿಕ ಯೋಜನೆಗಳ ನಡುವೆಯೂ  ಶಾಲೆಯಿಂದ ತಪ್ಪಿಸಿಸಿಕೊಂಡು, ನಾಲ್ಕು ಗೋಡೆಗಳ ಮಧ್ಯ ತಮ್ಮ ೧೬ ವರ್ಷ ಕಳೆಯದೆ, ಹುಟ್ಟಿದಾರಭ್ಯ ಸಮಾಜದ ಬದುಕಿನ ಸ್ಥಿತಿಗೆ ತಾವೇ ನುಗ್ಗಿಸಿಕೊಂಡ ಅಥವಾ ತಂದೆ-ತಾಯಿಯರ ಅಜ್ಞಾನ, ಬಡತನ ಮುಂತಾದ ಕಾರಣಗಳಿಂದಾಗಿ ಶಾಲೆಯಿಂದ ಹೊರದಬ್ಬಿದ್ದ ಪರಿಣಾಮವಾಗಿ ಮಕ್ಕಳು ರೈತರಾಗುವುದಕ್ಕೆ ಇರುವ ದಾರಿ. ಅದರ ಹೊರತಾಗಿ ರೈತರನ್ನಾಗಿಸಲು ದಾರಿಗಳೇ ಇಲ್ಲ. ಕೃಷಿ ವಿದ್ಯಾನಿಲಯಗಳಿವೆ ಎಂದು ನೀವು ಹೇಳಬಹುದು...! ಆದರೆ ಕೃಷಿ ತರಬೇತಿ ಹೊಂದಿದವರಾರು ಮಣ್ಣಿನೊಂದಿಗೆ ಸರಸವಾಡುತ್ತಿಲ್ಲ; ಬದಲಾಗಿ ಯಾವುದೊ ಕಚೇರಿಯ ಫ್ಯಾನ್ ಗಳಿಗೆ ತಲೆ ಹಿಡಿದು ತುಕಡಿಸುತ್ತಿದ್ದಾರೆ.

ಕೃಷಿಯನ್ನು ಒಂದು ವೃತ್ತಿಯನ್ನು ಮಾಡಿಕೊಳ್ಳಲು ಇಂದಿನ ಓದಿದ ಜನಾಂಗಕ್ಕೆ ಸಾಧ್ಯವೇ ಇಲ್ಲ. ಅದಕ್ಕೆ ಕಾರಣ ಕೃಷಿ ಒಂದು non -organised  sector  ಮಾತ್ರವಲ್ಲ, ಇದಕ್ಕೆ ಸರಕಾರದ ಕೃಪೆಯು ಇಲ್ಲ. ನಿಸರ್ಗದ ಜೊತೆಯಲ್ಲಿ ಹೋರಾಡಿ ತನ್ನ ಬದುಕು-ಸಾವು ನಿರ್ಧರಿಸಬೇಕಾದ ಪೂರ್ಣ ಜವಾಬ್ಧಾರಿ ರೈತನ ಮೇಲಿದೆ.  ಉದಾಹರಣೆಗೆ, ಯಾವುದೇ ಒಂದು ನೌಕರಿ ತೆಗೆದುಕೊಳ್ಳಿ...ಯಾವ ಬೆಲೆ ಏರಿಕೆ ಸಮ್ಭವಿಸುತ್ತದೊ, ಎಲ್ಲರು ಸೇರಿ ತಮ್ಮ ಸಂಬಳದ ಬೇಡಿಕೆಯನ್ನು ಮುಂದಿಟ್ಟು ಸರ್ಕಾರದಿಂದಲೋ, ಸಂಸ್ಥೆಯಿಂದಲೋ  ಲಾಭ ಮಾಡಿಕೊಳ್ಳುತ್ತಾರೆ. ಯಾವುದೇ ಬಿಸಿನೆಸ್ ದಲ್ಲಿರುವರು ಒಂದು ಕಡೆ ನಷ್ಟವಾದರೆ ಇನ್ನೊಂದು ಕಡೆ ಲಾಭ ಮಾಡಿ ಕೊಳ್ಳುತ್ತಾರೆ; ಅಥವಾ ತಮ್ಮ ನಷ್ಟವನ್ನು ಗ್ರಹಕಾರರ ಮೇಲೆ ಹೊರಿಸಿ ಬಿಡುತ್ತಾರೆ. ಆದರೆ ರೈತರು?

ರೈತರು ತಾವು ಏನು ಬೆಳೆಯುತ್ತಾರೋ ಅಷ್ಟನ್ನೇ ಮಾರಿ ಜೀವನ ಮಾಡಬೇಕು. ಅವರು ಬೆಳೆದ ಬೆಳೆಗೆ ಸರ್ಕಾರ ಬೆಲೆ ನಿಗದಿ ಮಾಡುತ್ತದೆ. ಒಂದೊಮ್ಮೆ ಬೆಲೆಯೆನಾದರು ಏರಿಕೆಯಾಗುತ್ತದೆ ಅಂತಾದರೆ ವಿದೇಶದಿಂದ ಕೃಷಿ ವಸ್ತುಗಳನ್ನು ಆಮದು ಮಾಡಿ ರೈತರನ್ನು ಮಣಿಸುತ್ತದೆ. ಹೀಗಾಗಿ ರೈತರ ಬೆಳೆದ ಬೆಳೆಯ ಬೆಲೆ ಯಾವುತ್ತು ಒಂದೇ ಲೆವೆಲ್ ನಲ್ಲಿ ಇಡಲಾಗುತ್ತದೆ. ಇದನ್ನು ಸರಿ ಹೊಂದಿಸಲು ರೈತರು ಭೂತಾಯಿಯ ಜೊತೆ ಗುದ್ದಾಡಬೇಕು; ಮಳೆಯನ್ನೂ ನಂಬಿ ಬದುಕ ಬೇಕು. ಜೊತೆಗೆ ಭೂತಾಯಿಯ ಜೊತೆಗಿನ ಗುದ್ದಾಟವನ್ನು ಹೆಚ್ಚು ರೋಷ ಭಾರಿತವನಾಗಿಸಿದ್ದು ಯಾರು -ಇದೆ ಕಲಿತ ವರ್ಗ ಹಾಗು ಸರ್ಕಾರಗಳು. ಕಲಿತ ವರ್ಗದ ಆಸೆಗಳಿಗಾಗಿ ವಾಹನ, ac ರೂಂ, ಪ್ಲಾಸ್ಟಿಕ್, ಪೆಟ್ರೋಲ್  ಹೆಚ್ಚು ಬಳಕೆಯಾಗಿ ಮಾಲಿನ್ಯದಿಂದ ಭೂತಾಯಿ ಬಸವಳಿದಾಗ, ನೇರ ಪರಿಣಾಮವಾಗುವುದು ರೈತರ ಮೇಲೆ. ಅಷ್ಟೇ ಅಲ್ಲದೆ ಆಗಾಗ ಸರ್ಕಾರಗಳು ತರುವ ಬೃಹತ್ ಯೋಜನೆಗಳು-ಡಾಮ್ಸ್, ವಿದ್ಯುತ ಯೋಜನೆಗಳು ರೈತರನ್ನು ಒಕ್ಕಲೆಬ್ಬಿಸುತ್ತವೆ.
ಇದರ ಪ್ರಾಕೃತಿಕ ಪರಿಣಾಮಗಳನ್ನು ರೈತನೇ ಮಾತ್ರ ಹೊರಬೇಕು.

ರೈತರಾಗುವುದೇ ಕಲಿಯದಿರುವುದರಿಂದ. ಹೀಗಾಗಿ ರೈತವರ್ಗ ಯಾವತ್ತು ಸರ್ಕಾರದ ವಿರುದ್ಧ ತಲೆ ಎತ್ತಿ ನಿಲ್ಲಲಾರದು. ಹಾಗೆಂದು ಅನಾಯಾಸವಾಗಿ ಸಾಯಲು ಬಿಡಬಾರದು ಎಂದು ಒಂದಿಷ್ಟು ಸಾಲ, ಅಕ್ಕಿ, ಕೊಟ್ಟು ತನ್ನ ಕೈ ತೊಳೆದು ಕೊಳ್ಳುತ್ತದೆ. ರೈತರ ಬದುಕು ಈ   ರೀತಿ  subsidized  ಆಗಿರುವುದರಿಂದಲೇ, ನಾವೆಲ್ಲ AC ರೂಂ ನಲ್ಲಿ ಕುಳಿತು ಸ್ವೀಟ್ ಕಾರ್ನ್ ಸೂಪ್ ಮೇಲ್ಳುವುದಕ್ಕೆ ಸಾಧ್ಯವಾಗಿರುವುದು. ಒಂದೊಮ್ಮೆ, ಹೀಗೆ subsidized  ಆಗಲು ರೈತರೇ ಇಲ್ಲದಿದ್ದರೆ, ಅರ್ಥಾತ್ ಎಲ್ಲರು ಶಿಕ್ಷಣ ಪಡೆದ ಪಂಡಿತರೆ ಆದರೆ,ದೇಶದ ಆಹಾರದ ಸ್ಥಿತಿಗತಿ ಹೇಗಿರಬಹುದು ಎಂದು ನೀವೇ ಊಹಿಸಿ ? ಅಂದ ಮೇಲೆ ಈಗಿರುವ ಶಿಕ್ಷಣ ಪದ್ಧತಿ ಹಾಗೂ ರೈತರನ್ನು non -organised  sector ನಲ್ಲಿ ಉಳಿಸಿಕೊಳ್ಳುವುದು ದೇಶದ ಭವಿಷ್ಯಕ್ಕೆ ಒಳ್ಳೆಯದಾಗುವುದಿಲ್ಲ. ಎಲ್ಲರು ಯೋಚಿಸುವುದು ತಾನು ರೈತನಾಗದಿದ್ದರೆ ಸಾಕೆಂದು ಮಾತ್ರ, ಹೀಗಾಗಿ ಇಂತದೊಂದು ಸಮಸ್ಯೆ ಅರಿವಿಗೆ ಬರುವುದು ಕಷ್ಟ.

ಕೃಷಿ ಕ್ಷೇತ್ರಕ್ಕೆ ಭವ್ಯವಾದ ಭವಿಷ್ಯ ಇರಬೇಕು ಅನ್ನುವುದಾದರೆ-ಕೃಷಿಯ ಬಗ್ಗೆ ತಾತ್ಸಾರ ಮನೋಭಾವ ದೂರವಾಗಬೇಕು. ವಿಜ್ಞಾನ ಕ್ರಾಂತಿಯಿಂದ ಸ್ವಿಚ್ ಒತ್ತಿದರೆ ಕಾಫಿ ತಯಾರಿಸಬಹುದು, ಆದರೆ ಕಾಫಿ ಗಿಡ ರೈತನೇ ಬೆಳೆಯ ಬೇಕು ಅನ್ನುವ ಪರಿಕಲ್ಪನೆ ನಮ್ಮ ಶಿಕ್ಷಣ ಕ್ಷೆತ್ರದಲಿರುವರಿಗೆ ಇರಬೇಕು. ಕೇವಲ ಡಿಗ್ರಿ ಗಳ ಉತ್ಪಾದನ ಕೇಂದ್ರಗಳಾಗಿರುವ ಶಾಲೆಗಳಿಂದ ಕೃಷಿಗೆ ಭವಿಷ್ಯವಿಲ್ಲ.

ಇದುವರೆಗೆ, ಯಾವ ಶಾಲೆಯು, ತನ್ನ ಡ್ರಾಪ್ ಔಟ್ ಅಥಾವ ಪಾಸು ಆದ, ಒಬ್ಬ ರೈತನನ್ನು ಸನ್ಮಾನಿಸಿರುವುದನ್ನು ನಾನು ಓದಿಯೇ ಇಲ್ಲ..! 

Thursday, January 9, 2014

ನಿಮ್ಮ ಹವ್ಯಾಸಗಳೇನು ?

ನಾನು ಯಾರನ್ನಾದರು ಹೊಸದಾಗಿ ಭೇಟಿಯಾದಾಗ ಕೇಳುವ ಪ್ರಶ್ನೆಗಳಲ್ಲಿ ಇದು ಒಂದು. ಕೆಲವರಿಗೆ ಇದು ಬಹಳ ತಲೆ ನೋವಿನ ಪ್ರಶ್ನೆ. ಆದರೆ ಹವ್ಯಾಸಗಳ ಹಿಂದೆ ಏನಿದೆ?

ಹವ್ಯಾಸಗಳು ಯಾವುದೇ ವ್ಯಕ್ತಿಯ ಸೃಜನಶೀಲ ಅಭಿವ್ಯಕ್ತಿಯ ಪದರಗಳು. ಒಂದು ವ್ಯಕ್ತಿಯ ಹವ್ಯಾಸಗಳಿಂದ ಅವನ ಆಸಕ್ತಿ, ಅವನ ವ್ಯಕ್ತಿತ್ವದ ಕೆಲ ಭಾಗಗಳನ್ನೂ ಗಮನಿಸಲು ಸಾಧ್ಯವಿದೆ. ಹಾಗಿರುವುದಕ್ಕು ಕಾರಣವಿದೆ. ಯಾವುದೇ ಹವ್ಯಾಸ ಮನುಷ್ಯನ ಹೃದಯದಲ್ಲಿನ ಸೃಜನ ಶೀಲ ಭಾವದ ತುಡಿತದಿಂದ ಮೇಲೆ ಬಂದಿರುತ್ತದೆ. ಹವ್ಯಾಸಗಳು ಹಣವನ್ನು ತರುವ  ಉದ್ಯೋಗ ಆಗುವುದು ತುಂಬಾ ಕಡಿಮೆ.ಆದರೆ ಇವು ತರುವ ಮಾನಸಿಕ ಸಂತೃಪ್ತಿ ಹೇಳಲಾಗದು. ಯಾವನಿಗೆ ಒಳ್ಳೆಯ ಹವ್ಯಾಸಗಳು ಇರುತ್ತವೋ ಅಂತ ವ್ಯಕ್ತಿ  ಪಾದರಸದಂತೆ ಕೆಲಸದಲ್ಲಿರುತ್ತಾನೆ.

ಆದರೆ ಹವ್ಯಾಸಗಳು ಅಂದರೇನು? ಕೆಲವರಿಗೆ ತಾವು ಏನು ಮಾಡುತ್ತೇವೋ ಅವೆಲ್ಲ ಹವ್ಯಾಸಗಳೇ ಎಂಬ ಭಾವ ವಿದೆ. ಆದರೆ ಅದು ಖಂಡಿತ ಹಾಗಲ್ಲ..! ಹವ್ಯಾಸದಲ್ಲಿ ಗಮನಿಸುವಿಕೆ ಬಹಳ ಮುಖ್ಯ. ಜೊತೆಗೆ ಆ ಗಮನಿಸುವಿಕೆಯಲ್ಲಿ ಒತ್ತಡವಿಲ್ಲ ;ಬದಲಾಗಿ ವಿನೋದವಿದೆ.  ಉದಾಹರಣೆಗೆ TV ನೋಡುವುದು ಹವ್ಯಾಸವಲ್ಲ; ಆದರೆ ನೀವು ಟಿವಿಯಲ್ಲಿ ಬರುವ ಯಾವೊದೋ ಕಾರ್ಯಕ್ರಮ  ಕುರಿತಾಗಿ ಸತತವಾಗಿ ತಿಳಿದು ಕೊಳ್ಳುತ್ತಿರಿ ಅಂದರೆ ನಿಮಗೆ ಆ ವಿಷಯದಲ್ಲಿ ಆಸಕ್ತಿ ಇದೆ ಎಂದರ್ಥ. ಆದರೆ ಸಮಯವನ್ನು ನೀಗಿಸಲು tv  ರಿಮೋಟ್ ಒತ್ತುತ್ತಾ ಚಾನೆಲ್ ಸ್ಕ್ಯಾನ್ ಮಾಡುತ್ತಿರಿ ಅಂದರೆ ನಿಮ್ಮ ಹವ್ಯಾಸ TV  ನೋಡುವುದಾಗಿರುವುದಿಲ್ಲ; ಬದಲಾಗಿ ರಿಮೋಟ್ ಒತ್ತುವ ಹವ್ಯಾಸವೆಂದೆ ಹೇಳಬೇಕು.

ಹವ್ಯಾಸಗಳ ಇನ್ನೊಂದು ವಿಷಯವೆಂದರೆ, consistancy -ನಿರಂತರತೆ. ನೀವು ಯಾವುದೋ ನೋವಿನಲ್ಲಿರಬಹುದು, ನಿದ್ದೆಯ ಗುಂಗಿನಲ್ಲಿರಬಹುದು, ಆದರೆ ನಿಮ್ಮ ಹವ್ಯಾಸದತ್ತ ಕೈ ಹಾಕಿದರೆ ಅವೆಲ್ಲ ಮರೆಗೆ ಸೇರುತ್ತವೆ. ಒಳ್ಳೆಯ ಹವ್ಯಾಸಗಳು ನಿರಂತರತೆ ಹಾಗೂ ಹೊರ ಜಗತ್ತನ್ನು ಮರೆಸಿ ಬಿಡುತ್ತವೆ.

ಹವ್ಯಾಸಗಳು ಹಣ ತರುವುದು ತುಂಬಾ ಕಡಿಮೆ. ಹಾಗೆಂದು ಹವ್ಯಾಸಗಳು ಉದ್ಯಮವಾದಾಗ ಒಳ್ಳೆಯ ಸಾಧನೆಯೇನೋ ಮಾಡಬಹುದು. ಆದರೆ, ಯಾವುದೇ ಹವ್ಯಾಸ ಉದ್ಯಮವಾಗಿಸಲು ಹೊರಟಾಗ, ನಾಲ್ಕಾರು ಜನರನ್ನು ಸೇರಿಸಲೇ ಬೇಕಾಗಿಬರುತ್ತದೆ. ಹೀಗಾಗಿ ಹವ್ಯಾಸದ ನಿಜವಾದ ಕೆಲಸಕ್ಕಿಂತ ನಾಲ್ಕು ಜನರ ಮ್ಯಾನೇಜ್ಮೆಂಟ್ ಹವ್ಯಾಸವಾಗಿ ಮಾನಸಿಕ ನೆಮ್ಮದಿ ದೂರ ಸರಿಯುತ್ತದೋ ಏನೋ  ಜಿಜ್ಞಾಸೆ ನನಗಿದೆ. ಯಾರಾದರು ಹವ್ಯಾಸವನ್ನು  ಬಿಸಿನೆಸ್ ಮಾಡಿಕೊಂಡವರಿಗೆ ಕೇಳಿದರೆ ತಿಳಿಯಬಹುದು ಅಷ್ಟೇ.

ನಾವು ಮಾಡುವ ಪ್ರತಿಯೊಂದು ಕೆಲಸ ಹವ್ಯಾಸವಾಗಿರಲು ಸಾಧ್ಯವಿಲ್ಲ. ಆಫೀಸ್ ನ ಕೆಲಸದಲ್ಲಿ, ಮನೆಯ ಕೆಲಸದಲ್ಲಿ ಅದೆಷ್ಟೋ ವಿಷಯಗಳು ಒತ್ತಡಕ್ಕೆ ಒಳಗಾಗಿ ಮಾಡಬೇಕಾಗಿ ಬರುತ್ತವೆ. ಅದು ಸಹಜ ನಿಯಮ. ಸಮಾಜದ ಜೊತೆಗಿನ ಜೀವನ ಹಾಗೂ ಹಣವನ್ನು ಗಮನಿಸಿ ನಾವು ಕೆಲಸವನ್ನು-ವೃತ್ತಿಯನ್ನು ಮಾಡಬೇಕು. ಆದರೆ ಪ್ರವೃತ್ತಿ ಹಾಗಲ್ಲ; ಅದು ನಮಗಾಗಿ ಮತ್ತು ಕೇವಲ ನಮಗಾಗಿ ಮಾತ್ರ.

ನಾನು ಬಹಳ ಸಾರಿ ಹವ್ಯಾಸಗಳನ್ನು ಕೇಳಿದಾಗ ಕೆಲವರ ಉತ್ತರಗಳು ಹೇಗಿರುತ್ತವೆ ಗೊತ್ತ ?
"ನನಗೆ ಹವ್ಯಾಸಗಳು ಅಂತ ಏನು ಇಲ್ಲ... tv  ನೋಡ್ತೇನೆ ಅಷ್ಟೇ".
ಇನ್ನು ಕೆಲವರ ಉತ್ತರ ಇನ್ನು ವಿಚಿತ್ರ, " ನಾನು ಚಿತ್ರ ಬಿಡಿಸುತ್ತಿದ್ದೆ, ಡಾನ್ಸ್ ಮಾಡುತ್ತಿದೆ, ಹಾಡುತ್ತಿದೆ,....ಆದರೆ SSLC  ತನಕ ಮಾತ್ರ. ಆದರೆ SSLC  ಓದಬೇಕು ಅಂತ ಅಪ್ಪ-ಅಮ್ಮ ಬೈದು ಎಲ್ಲ ಬಿಡಿಸಿದರು. ಇವಾಗ ಇವಾವುದನ್ನು ನಾನು ಮಾಡುವುದಿಲ್ಲ".

ಈ ಉತ್ತರಗಳನ್ನೂ ಗಮನಿಸಿದಾಗ ಮನುಷ್ಯನ ಒರಿಜಿನಲ್  ಆಸಕ್ತಿಯನ್ನೇ ಶಿಕ್ಷಣಕ್ಕಾಗಿ ಬಲಿಕೊಟ್ಟು ಮತ್ತೆ ಬೇರೆ ಏನೋ ಒಂದನ್ನು ಆಗಬೇಕು ಎಂದು ಅಪೇಕ್ಷೆ ಪಡುತ್ತೇವೆ; ಹಣವನ್ನೇನೋ  ತರುತ್ತೇವೆ;ಆದರೆ ಸಂತೋಷ ಹೊಂದುವುದು ಹೇಗೆಂಬ ಪ್ರಶ್ನೆಯೇ ಹವ್ಯಾಸವಾಗಿರುತ್ತದೆ.

ನಾನು ಹೇಳುವುದಿಷ್ಟೇ. ನಿಮ್ಮ ಹವ್ಯಾಸ ನಿಮ್ಮ ಸಹಿ ಅಷ್ಟೇ ಸತ್ಯ(ಯುನಿಕ್). ಸಾವಿರ ಜನ ಚಿತ್ರ ಬಿಡಿಸಬಹುದು  ಆದರೆ ಪ್ರತಿಯೊಬ್ಬರ ಚಿತ್ರ ಬೇರೆ ಬೇರೆನೆ. ನಿಮ್ಮ ಹವ್ಯಾಸಗಳು ಯಾವತ್ತು ನಿಮ್ಮ ನೆಮ್ಮದಿಯ ಕೇಂದ್ರ ಬಿಂದುಗಳು.ದಿನದ ೨೪ ಗಂಟೆಗಳಲ್ಲಿ, ೮ ತಾಸುಗಳನ್ನು ವೃತ್ತಿಗೆ, ೮ ಗಂಟೆಗಳನ್ನು ಪ್ರವೃತ್ತಿಗೆ, ಹಾಗೂ ಉಳಿದೆಂಟು ಗಂಟೆ ನಿದ್ರೆಗೆ ಮಿಸಲಾಗಿರಿಸಿದರೆ ಉತ್ತಮವಂತೆ. ಒಂದೊಮ್ಮೆ ನೀವು ಈ ವಿಷಯದಲ್ಲಿ ಫೇಲ್ ಆಗಿದ್ದರೆ ಪರವಾಗಿಲ್ಲ, ನಿಮ್ಮ ಮುಂದಿನ ಮಕ್ಕಳಿಗಾದರೂ ಹವ್ಯಾಸಗಳನ್ನು ಬೆಳೆಸಿಕೊಳ್ಳಲು ಅವಕಾಶಕೊಡಿ. 

 ನಿಮ್ಮ ಒಳ್ಳೆಯ ಹವ್ಯಾಸಗಳು ನಮಗೂ ದಾರಿದೀಪವಾಗಬಹುದು.ತಮ್ಮ ಹವ್ಯಾಸಗಳನ್ನು ನಮಗೆ ತಿಳಿಸುತ್ತಿರಾ?

Friday, January 3, 2014

ಸಾವಿರ ಸುಳ್ಳು ಹೇಳಿ ಮದುವೆ ಮಾಡು..!

"ಸಾವಿರ ಸುಳ್ಳು ಹೇಳಿ ಮದುವೆ ಮಾಡು..!" ಎಂಬ ಗಾದೆ ಎಲ್ಲರ ಬಾಯಲ್ಲೂ ಕೇಳಿಯೇ ಇರುತ್ತೀರಿ. ಇದರ ಅರ್ಥ: ಒಂದು ಮದುವೆಯ ನಡೆಯ ಬೇಕಾದರೆ ಒಂದಿಷ್ಟು ಸುಳ್ಳು ಹೇಳಲೇ ಬೇಕು ಎಂಬುದು.ಮದುವೆಯಲ್ಲಿ ಸುಳ್ಳು ಹೇಳಲೇ ಬೇಕೆಂದು ಶಾಸ್ತ್ರವೇನೂ ಇಲ್ಲ.... ಆದರೆ ಹಲವು ಸಮಯದಲ್ಲಿ ಸುಳ್ಳುಗಳು ಅನಿವಾರ್ಯವಾಗಿ ಬಿಡುತ್ತವೆ. ಮತ್ತೊಬ್ಬರಿಗೆ ನೋವು ಆಗಬಾರದು ಅನ್ನುವ ಕಾರಣದಿಂದಲೂ ಸುಳ್ಳುಗಳು ಹೇಳಬೇಕಾಗಿ ಬರುತ್ತವೆ. ಉದಾಹರಣೆಗೆ, ಹುಡುಗಿಗೆ ಹುಡುಗ  ನೋಡಲು ಚೆನ್ನಾಗಿ ಇಲ್ಲ ಅನಿಸರಬಹುದು, ಆದರೆ ಅವಳು, ಹುಡುಗ ಚೆನ್ನಾಗಿ ಇಲ್ಲ ಅನ್ನುವ ವಿಷಯವನ್ನು  ಜಾತಕ ಸರಿಯಿಲ್ಲ ಅಂತಲೋ, ಇನ್ನಾವುದೋ ಸಬೂಬುನಿಂದಲೋ ತಿಳಿಸುತ್ತಾರೆ. ಅದು ಹುಡುಗನ ಕಡೆಯಿಂದಲೂ ಹಾಗೆಯೇ.! ಇಂಥ ಸುಳ್ಳುಗಳು ಕೇವಲ ಅನಿವಾರ್ಯ ಹಾಗೂ ಮತ್ತೊಬ್ಬರ ಮಾನಸಿಕ ನೆಮ್ಮದಿಯನ್ನು ಕಾಪಾಡಲು ಬಳಸುವ ಒಳ್ಳೆಯ ಸುಳ್ಳುಗಳು;ತಪ್ಪಲ್ಲ.

ಮದುವೆಯ ಕುರಿತಾಗಿ ಎಲ್ಲರ ಒಳತಿಗಾಗಿ ಬಳಸುವ ಯಾವ ಸುಳ್ಳು ತಪ್ಪಲ್ಲ. ಆದರೆ ಕೆಲವು ಸುಳ್ಳುಗಳು ಹೇಳಲೇ ಬಾರದು. ಅಂತ ಸುಳ್ಳುಗಳು ಯಾವುದು ಇರಬಹುದು?

ಇಲ್ಲೊಬ್ಬ ಮಹಾಶಯನಿದ್ದ.ಓದ್ದಿದ್ದು ಇಂಜಿನಿಯರಿಂಗ್. ನಾನು ಹೇಳುದಾದರೆ ಅವನು ಒಳ್ಳೆಯ ವ್ಯಕ್ತಿನೇ. ಮದುವೆಯಲ್ಲಿ ಒಂದು ಸಣ್ಣ ಎಡವಟ್ಟು ಮಾಡಿಕೊಂಡಿದ್ದ. ಅವನ ಕತೆ ಹೀಗಿದೆ ಕೇಳಿ: ಅವನು ತನ್ನ ಕುಟುಂಬ ಸಮೇತವಾಗಿ ಹುಡುಗಿಯನ್ನು ನೋಡಲು ಹೋಗಿದ್ದಾನೆ. ಕುಟುಂಬ-ಕುಟುಂಬಗಳ ನೇರಾನೇರ ಮಾತು ಕತೆಯಲ್ಲಿ ಇವನು ಒಂದು ಮೂಲೆಯಲ್ಲಿ, ಅವಳು ಒಂದು ಮೂಲೆಯಲ್ಲಿ ತಲೆ ತಗ್ಗಿಸಿ ಕುಳಿತಿದ್ದರು. ಭಾವಿ ಮಾವ ಕುಡಿತ ಮುಂತಾದ ವಿಷಯಗಳ ಕುರಿತಾಗಿ, ಸ್ಪಷ್ಟವಾಗಿ ಅಲ್ಲದಿದ್ದರೂ,ಕೆಲವು ಪ್ರಶ್ನೆಗಳನ್ನು ಕೇಳಿದ್ದಾನೆ. ಮಾವನ ಮುಂದೆ, ತನ್ನ ಅರ್ಧಾಂಗಿಯಾಗಿ ಸ್ವಿಕರಿಸಲಿರುವ  ನವ್ಯ ತಾರುಣ್ಯದ ಲಲಿತಾಂಗನೆಯ ಎದುರು, 'ತಾನೆಂದು ಕುಡಿದಿಲ್ಲ...ಕುಡಿಯಲ್ಲ' ಎಂತೆಲ್ಲ ಹೇಳಿದ್ದಾನೆ.

ಹಾಗೆಯೇ, ಜೀವನ ಸಂಗಾತಿಯ ನಿರ್ಧಾರಕ್ಕೆಂದು, ಹಿರಿಯರು  ಹುಡುಗಿಯ ಜೊತೆಗೆ ಮಾತುಕತೆಗೆಂದು ನೀಡಿದ ಒಂದು ತಾಸು ಹೇಗೆ ಮಾತನಾಡಲಿ ಎಂದು ಯೋಚಿಸುತ್ತಲೇ ಇದ್ದ ಇವನಿಗೆ, ಇಂಜಿನಿಯರಿಂಗ್ ನ ಒಂದು ಪರೀಕ್ಷೆಗೆ ಮೂರುತಾಸು ಕೊಡುತ್ತಾರೆ, ಅದು ಒಂದು ಸೆಮಿಸ್ಟರ್ ನ ಒಂದು exam ಗೆ ಸೀಮಿತ. ಹೀಗಿರುವಾಗ ಮುಂದಿನ ೭೫ ವರ್ಷ ಜತೆಗಿರುವ ಸಂಗತಿಯ ಜೊತೆ ಏನೆಲ್ಲಾ ಕೇಳಲಿ ಎನ್ನುವ ಪ್ರಶ್ನೆಗೆಳು ದುಗುಡವಾಗಿ ಮುಖದ ಮೇಲೆ ನಿರಿಗೆಯಾಗಿ ಮೂಡಿದವು. ಅಂತು, ಸಮಯ ಬಂತು.....ಹುಡುಗ ಹುಡುಗಿ ಮನೆಯ ತೋಟಕ್ಕೆ ನಡೆದರು. ಯಾರು ಮೊದಲು ಮಾತನಾಡುವರು ಎಂದು ತಿರ್ಮಾನಿಸುವುದರಲ್ಲಿಯೇ ಹದನೈದು ನಿಮಿಷ ಕಳೆದಿದ್ದವು.

ಕೊನೆಗೂ ಮಾತು ಸುರುವಾಯಿತು. ಏನೇನೋ ಮಾತನಾಡಿದರು. ಆದರೆ, ಹುಡುಗಿ ಕರವಾಕ್ ಆಗಿ ಕೇಳಿದ ಒಂದು ಮಾತು ಅಂದರೆ, "ನೀವು ಕುಡಿಯುವುದಿಲ್ಲ ತಾನೇ? ನಮ್ಮ ಮನೆಯಲ್ಲಿ ಯಾರು ಕುಡಿಯಲ್ಲ.. I  can not  even digest  the smell .." ಅಂದಿದ್ದಳು. ಸಣ್ಣ ಸುಳ್ಳು, ಮದುವೆಯಾದ ಮೇಲೆ ಸರಿಯಾಗುತ್ತೆ ಎಂದುಕೊಂಡ ಮಹಾಶಯ... ಸ್ವಲ್ಪವೂ ಸಂದೇಹ ಬರದ ಹಾಗೆ ವಿಷಯ ಮರೆ ಮಾಡಿ..."ಕುಡಿಯುವುದೇ ಇಲ್ಲ" ಎಂದು ಭರವಸೆ ಹುಟ್ಟಿಸಿದ.

ಒಬ್ಬರಿಗೊಬ್ಬರು, ಎರಡು ಕುಟುಂಬಗಳು ಒಂದಾಗುವತ್ತ ನಡೆದವು. ನಿಶ್ಚಿತಾರ್ತ ಇನ್ನೇನು ನಡೆಯಬೇಕು, ಅನ್ನುವಷ್ಟರಲ್ಲಿ  ಅಧಿಕ ಮಾಸ ಪ್ರಾರಂಭವಾಗಿ ಒಂದು ತಿಂಗಳು ಮುಂದೆ ಸರಿಯಿತು. ಆದರೆ ಹುಡುಗ ಹುಡುಗಿ ಎಂದಿನಂತೆ ಮಾತು-ಸರಸ-ವಿರಸ ಭರವಸೆಗಳ ಮೇಲೆ ಮುಂದುವರಿಯಿತು. ಇಬ್ಬರು ಮಾತನಾಡುವುದು ರಾತ್ರಿ ೯ ರಿಂದ ೧೦ ಗಂಟೆಯ ತನಕ. ತಿಂಗಳ ಕಾಲ ಇವರ ಮಾತು ಕತೆ ಸರಿಯಾಗಿ ಇದೆ ಸಮಯದಲ್ಲಿ ನಡೆದಿದೆ.

ದುರದೃಷ್ಟ, ಅದೊಂದು ಶುಕ್ರವಾರ, ವೀಕೆಂಡ್ ಪ್ರಭಾವಕ್ಕೆ ಒಳಗಾದ ಹುಡುಗ, ಅಂತು ಇಂತೂ ೧೦ ಗಂಟೆ ಭರವಸೆಯ ಸರಸದ ಮಾತುಗಳನ್ನು ಮುಗಿಸಿ, ೧೦ರ ನಂತರ ಬಾರ್ ಒಂದರಲ್ಲಿ ಗೆಳೆಯರ ಜೊತೆ ಕುಡಿದು ಕುಪ್ಪಳಿಸಿದ. ಆದರೆ, ಹೇಗೋ ನಾಳೆ ರಜೆ ಎಂದುಕೊಂಡ ಗೆಳತಿ, ೧೧:೧೫ ಕ್ಕೆ ಮತ್ತೆ ಮಾತನಾಡೋಣವೆಂದು ತವಕಿಸಿದ್ದಾಳೆ. ಇವನ ಧ್ವನಿ ಪೆಟ್ಟಿಗೆಯಿಂದ ಹೊರಡುತ್ತಿದ್ದ ಒಂದೊಂದು ಮಾತಿನ ಮುತ್ತುಗಳು... ಹಳೆಯ ಕ್ಯಾಸೆಟ್ ರೆಕಾರ್ಡರ್ ಗೆ ಹಾಕಿದ ಕ್ಯಾಸೆಟ್ ನ ಧ್ವನಿಯನ್ತಿತ್ತು.ಅದೆಷ್ಟು ಜಗಳವು ಆಯಿತು. ಇವನು ಕುಡಿತದ ಅಮಲಿನಲ್ಲಿ "ಕೆಳಕ್ ನಿನ್ ಯಾರ್?" ಎಂದು ಕೇಳುವ ಮೂಲಕ ತಾನೊಬ್ಬ ಉದ್ಧಾರವಾಗದ ಕುಡುಕವೆಂಬುದನ್ನು ಅಕೆಗೆ ಮನವರಿಕೆ ಮಾಡಿದ. ಜೊತೆಗಾರ ಕುಡುಕರು ಮೊಬೈಲ್ ಕಸಿದುಕೊಂಡು ವಿಷಯ ಮುಗಿಸಿದರು  ಬಾರ್ ಕಡೆಯಿಂದ.

ಆದರೆ, ಯಾರಿಗೂ ತಿಳಿಯದೆ ಹಾಗೆ ಮಹಡಿಯನ್ನು ಹತ್ತಿ , ನಂಬಿಕೆಯ ಆಧಾರದ ಮೇಲೆ ಮಾತನಾಡಲು ತವಕಿಸಿದ  ಹುಡುಗಿ ರಾತ್ರಿ ಇಡಿ ಅತ್ತಳು. ಹುಡುಗರೆಲ್ಲ ಹೀಗೆಯ ಎಂದು ತಿರ್ಮಾನಕ್ಕೆ ಬಂದಳು. ನೋವಿನಿಂದ ಬಳಲಿದಳು. ಮರುದಿನ ೧೧ ಗಂಟೆಗೆ  ಹುಡುಗ ಕಾಲ್ ಮಾಡುತ್ತಾನೆ...
" ಸಾರೀ ಡಿಯರ್... ಗೆಳೆಯರಿದ್ದರು ಅದಕ್ಕೆ ಕುಡಿದೆ. ಇವತ್ತು ಒಂದು ದಿನ.. ಪ್ಲೀಸ್.." ಎಂದೆಲ್ಲ ಅವಲತ್ತುಕೊಂಡ.
 "ನೀನು ಕುಡಿದುದ್ದು ತಪ್ಪು ಅಂತ ಹೇಳ್ತಿಲ್ಲ... ನೀವು ಮೊದಲಿಂದಲೂ ಕುಡಿಯಲ್ಲ ಅಂತ ಹೇಳಿದ್ದಿರಿ... ನಿನ್ನೆ ನಾನು ಮೊದಲು ಮಾತನಾಡುವಾಗಲು ಪಾರ್ಟಿ ಕುರಿತಾಗಿ ಹೇಳಿಲ್ಲ. ನೀವು ವಿಷಯ ಮುಚ್ಚಿ ಇಟ್ಟಿದ್ದಿರಿ..! ನೀವು ಹೀಗೇನೆ ಎಷ್ಟು ವಿಷಯ ಮುಚ್ಚಿ ಇಟ್ಟಿದ್ದಿರೋ ಗೊತ್ತಿಲ್ಲ..!!!! ಸಾರೀ ನೀವು ಕಾಲ್ ಮಾಡಬೇಡಿ... ನಂಗೆ ಇಷ್ಟ ಇಲ್ಲ". ಹುಡುಗಿಯ ಮಾತಿನಲ್ಲಿ ಅರ್ಥವಿತ್ತು; ಹುಡುಗನ ಮನಸಿನಲ್ಲಿ ತಪ್ಪಿನ ಅರಿವು ಇತ್ತು; ಆದರೆ ಕಾಲ ಮೀರಿತ್ತು.

ಆದರೆ, ಸಾವಿರಾರು ಪ್ರಯತ್ನ ಮಾಡಿ, ಹುಡುಗಿಯ ಗೆಳತಿಯನ್ನು ಸಂಪರ್ಕಿಸಿ, ಅವಳಿಂದ ಭರವಸೆಯ  ಮಾತುಗಳನ್ನು ಆಡಿಸಿ.. ಮುಂದೆ ಹೀಗೆ ಮಾಡಲ್ಲ ಎಂದು  ಹುಡುಗ "ಎರಡನೆಯ" ಭರವಸೆ ನೀಡಿದ ಮೇಲೆ ಅವಳು ಒಪ್ಪಿದ್ದಳು.

ಒಟ್ಟಾರೆ, ನಾವು ಹುಡುಗರು, ಹೇಗೋ ಇರಬಹುದು; ಹುಡುಗಿಯ ಕುಟುಂಬಕ್ಕೆ  ಏನೋ ಹೇಳಬಹುದು; ಆದರೆ ಜೀವನದ ಅರ್ಧಾಂಗಿಯನ್ನು ನಿರ್ಧರಿಸುವಲ್ಲಿ  ಸಿಗುವ ಒಂದು ತಾಸು, ನಮ್ಮ ನಂಬಿ ಬರುವ ಹುಡುಗಿಗೆ  ನಮ್ಮ ನಿಜ ಜೀವನದ ಸ್ಥಿತಿಯನ್ನು ಮನವರಿಕೆ ಮಾಡಿಕೊಡುವುದೇ ಯಾಗಿರಬೇಕು..! ಒಮ್ಮೆ ಒಡೆದ ಸಂಬಂಧ ಮತ್ತೆ ಕೂಡಿಸಲು ಸಾಧ್ಯವೇ ಇಲ್ಲ... ಮತ್ತೆ ಒಡೆಯುತ್ತಲೇ ಇರುತ್ತದೆ. ಅದೇ ಮದುವೆಯ ದುರಂತ.

Wednesday, January 1, 2014

೨೦೧೩ಕ್ಕೆ ಧನ್ಯವಾದಗಳು;೨೦೧೪ಕ್ಕೆ ಸ್ವಾಗತ.

ಹೊಸ ವರ್ಷ ಬಂದಿದೆ ನಿಜ. ಹೊಸತನ ತಂದಿದೆಯೇ ಎನ್ನುವುದರ ಕುರಿತಾಗಿ ಒಂದು ಸಿಂಹಲೋಕನ ಮಾಡಿದರೆ ೨೦೧೩ ನನ್ನ ಬದುಕಿನಲ್ಲಂತೂ ಕೆಲವೊಂದು ಒಳ್ಳೆಯ ಬೆಳವಣಿಗೆಯನ್ನು ತಂದು ಕೊಟ್ಟಿದ್ದು, ೨೦೧೪ ಅತ್ಯಂತ  ಸಂತೋಷದಿಂದ ಕಳೆಯಬಹುದೆಂಬ ಭರವಷೆ ಇದೆ.

ಎಲ್ಲವು ನನ್ನ ಕನಸಿನಂತೆ, ನನ್ನ ಆಕಾಂಕ್ಷೆಯಂತೆ ನಡೆದಿದ್ದರೆ, ಉಡುಪಿಯ ಒಂದು ಓಣಿಯಲ್ಲಿ ನನ್ನದೇ ಒಂದು ಮನೆ ನಿರ್ಮಾಣ ಮಾಡಿ 'ನಂದನ ವನ' ಅಂತಲೋ, 'ನಂದ ಗೋಕುಲ' ಅಂತಲೋ ಹೆಸರಿಟ್ಟು, ನಿಮಗೆಲ್ಲರಿಗೂ ಕರೆಸಿ, ಒಂದು ಉಡುಪಿಯ ಊಟ ಹಾಕುತಿದ್ದೇನೋ ಏನೋ? ಆಗ  ನೀವೆಲ್ಲ, 'ವೆಂಕಿ ಉಡುಪಿಯಲ್ಲಿ ಸೆಟ್ಲ್' ಎಂದು ಹೇಳುವುದನ್ನು ಕೇಳಿ, ಅಂಗಿಯ ಕಾಲರ್ ಏರಿಸದೆ ಇರುತ್ತಿರಲಿಲ್ಲ.

   'ಕಾಲ'ದ ಪ್ರಭಾವ ಅದೆಷ್ಟು ಕ್ರೂರ ಅನಿಸುತ್ತದೆ ಕೆಲವೊಮ್ಮೆ. ಆದರೆ 'ಕಾಲ'ದ ಮೇಲೆ ನಮಗಾರಿಗೂ ನಿಯಂತ್ರಣ ಇಲ್ಲ. 'ಕಾಲ'ಕ್ಕೆ ಕೈ  ಮುಗಿದು ಮುಂದೆ ಸಾಗುವುದೇ ಬದುಕು; ಅದೇ ಸಾಧನೆ.

೨೦೧೩ರ ಆರಂಭದಲ್ಲಿ ನಾನು ಉಡುಪಿಯಲ್ಲಿದ್ದೆ. ಇತ್ತ ಕಡೆ ಉದುಪಿಯೆಂಬ ಭಾವನಾತ್ಮಕ ಸಾಂಸ್ಕೃತಿಕ ಪ್ರಪಂಚವನ್ನು ಬಿಡಲಾಗದೆ, ಅಲ್ಲಿಯೂ ಇರಲಾಗದ ಸನ್ನಿವೇಶ ನನಗೆ ಎದುರಾಗಿತ್ತು. ನಾನು ಉಡುಪಿಯನ್ ಎಂದು ಬದಲಾಗುತ್ತೇನೆ ಎಂದು ಬಹಳ ದಿನಗಳಿಂದಲೂ ಅಂದುಕೊಂಡಿದ್ದೆ. ಉಡುಪಿಯೇ ನನ್ನ ಕೊನೆಯ ಸ್ಥಾನ ಎಂದೆಲ್ಲ ಗೆಳೆಯರಿಗೆ ಹೇಳಿದ್ದೆ. ನಾನು ಮನೆಯನ್ನೂ ಖರದಿಸುವ ನಿರ್ಧಾರಕ್ಕೂ ಬಂದಿದೆ. ಆದರೆ, ೨೦೧೩ರ ಆರಂಭಿಕ ಕಾಲದ ವೃತ್ತಿಗತ ಘಟನೆಗಳು ನನ್ನನ್ನು ಬೆಂಗಳೂರಿಗೆ ದೂಡಿತು. ಇಷ್ಟ ಇಲ್ಲದ ನಗರದಲ್ಲಿ, ಸಾವಿರ ಜನರನ್ನು, ನನ್ನ ಶಿಕ್ಷಣವನ್ನು, ನನ್ನ ಹಣೆಬರಹವನ್ನು ಶಪಿಸುತ್ತ  ಹೆಜ್ಜೆ ಇಡುತ್ತಿದ್ದೆ. ಆಕಾಲದಲ್ಲಿ ಬಹಳ ದು:ಖದಲ್ಲಿದ್ದೆ.

ಆದರೆ, ಆಗುವುದೆಲ್ಲ ಒಳ್ಳೆಯದಕ್ಕೆ ಅನ್ನುವಂತೆ, ನಾನು ಬಯಸದ ಎದುರಾದ ಕಾಲದ ಬದಲಾವಣೆಗಳು ನನ್ನನ್ನು ಒಂದು ರೀತಿಯಲ್ಲಿ ಹೊಸತನವನ್ನು ತಂದು ಕೊಟ್ಟಿತ್ತು. ಉಡುಪಿ ಎಂಬ ನಗರದ ಜೊತೆ ನಾನು ಹೊಂದಿದ್ದ ಅವಿನಾಭಾವ ಸಂಬಂಧ ವನ್ನು ಕಳೆದು ಕೊಳ್ಳಬೇಕಾಗಿ ನಿರ್ಧಾರಕ್ಕೆ ಬಂದೆ. ನನ್ನನ್ನು ೬ ವರ್ಷ ನೌಕರಿ ನೀಡಿ ,ಸೇವೆಗೆ ಅನುವು ಮಾಡಿಕೊಟ್ಟ  ಕರ್ನಾಟಕ ಮೈಕ್ರೋಎಲೆಕ್ಟ್ರಾನಿಕ್ಸ್  ಸಂಸ್ಥೆಗೆ ಕೊನೆಯ ನಮನ ಸಲ್ಲಿಸಿದೆ. ಆರು ವರ್ಷಗಳಲ್ಲಿ  ಸಹೋದ್ಯೋಗಿಗಳ ಜೊತೆ  ಗಳಿಸಿದ್ದ  ಬಾಂಧವ್ಯಕ್ಕೆ ಪ್ರತಿಯಾಗಿ, 'ಬೈ ಬೆಸ್ಟ್ ಆಫ್ ಲಕ್' ಎಂದು ಕೈ ಕಲುಕಿ ಶುಭ ವಿದಾಯ ಹೇಳಿದೆ. ಯಾವತ್ತು ನನಗೆ ಪುಸ್ತಕಗಳನ್ನು ನೀಡಿ ಸಹಕರಿಸಿದ್ದ,ಮಣಿಪಾಲದ ನೆಹರು ಗ್ರಂಥಲಾಯಕ್ಕೆ ನಮನ ಸಲ್ಲಿಸಿದೆ. ಯಕ್ಷಗಾನ ರೂಪದಲ್ಲಿ ನನ್ನ ಮನಸ್ಸಿನ ಮೇಲೆ ಅಹ್ವನೆಗೆ ಬರುವ ದೇವ ಶ್ರೀ ಕೃಷ್ಣನಿಗೆ ನಮಸ್ಕರಿಸಿದೆ. ಕಲೆ-ಸಂಸ್ಕೃತಿಯ ಸಂಕೇತದಂತಿದ್ದ 'ರಾಜಾಂಗಣ'ಕ್ಕೆ ಅಷ್ಟಾಂಗ ನಮಸ್ಕಾರ ಮಾಡಿದೆ. ಯಕ್ಷಗಾನ ಮತ್ತು ಮಕ್ಕಳ ಶಿಕ್ಷಣಕ್ಕಾಗಿ ದುಡಿಯುತ್ತಿರುವ ಸಂಸ್ಥೆ 'ಕಲಾರಂಗ ' ಕ್ಕೆ ವಿದಾಯ ಹೇಳಿದೆ.ಸಾಕು, ಎಲ್ಲವು ಮುಗಿದಿದೆ.... ಎಂದು  ಹೇಳಿ ಬೃಹತ ನಗರಕ್ಕೆ ಬಂದೆ. ಸಾವಿರ ಜನರ ಮಧ್ಯದಲ್ಲಿ ಒಬ್ಬನಾಗಿ ಬದುಕುತ್ತಿದೇನೆ.

ಇಷ್ಟು ಬದಲಾವಣೆಗಳ ಮಧ್ಯೆ ನನ್ನ ಅನುಭವಕ್ಕೆ ಬಂದಿರುವ ವಿಷಯ ಅಂದರೆ, ಯಾವುದೇ ಪ್ರದೇಶ, ಮನುಷ್ಯನ ಧನಾತ್ಮಕ ಯೋಚನೆ, ಧನಾತ್ಮಕವಾಗಿ ಪ್ರೋತ್ಸಾಹ ನೀಡುವ ಗೆಳೆಯರು, ಅತ್ಮವಿಶ್ವಾಶವನ್ನು  ಕಾಪಿಟ್ಟು ಕೊಳ್ಳುವ ವ್ಯಕ್ತಿತ್ವಕ್ಕಿಂತ  ಶ್ರೇಷ್ಠವಾಗಲಾರದು.

ಹೀಗೆ, ೨೦೧೩ ಒಳಿತನ್ನು, ೨೦೧೪ ಒಳಿತಿನ ಫಲವನ್ನು ಅನುಭವಿಸುವ ಅವಕಾಶ ಕೊಟ್ಟಿದೆ. ಸ್ವಲ್ಪ ಮಜಾ ಮಾಡೋಣ..
ಹ್ಯಾಪಿ ನ್ಯೂ ಇಯರ್... ಹ್ಯಾಪಿ  ನ್ಯೂ ಇಯರ್...
ಹಾಡು ಸಂತೋಷ ಕೆ... ಹಾಡು ಸಂತೋಷ ಕೆ.....!

ನಿಮಗೂ ಒಳ್ಳೆಯ ದಿನಗಳು ಎದುರಾಗಲಿ ಎಂಬ ಹಾರೈಕೆಗಳೊಂದಿಗೆ...
Good  bye  2013 . WELCOME  2014 .

Saturday, December 28, 2013

ಮೂವತ್ತೈದರ (೩೫) ಹರೆಯ..!

ಸುಮ್ಮನೆ ಯಾವುದೊ ಲೇಖನ ಬರೆಯಲು ಸಾಧ್ಯವಾಗುವುದಿಲ್ಲ. ಯಾವುದೊ ಒಂದು ವಿಷಯ ಹೀಗೆ ಯಾಕೆ? ಎಂಬ ಪ್ರಶ್ನೆಗೆ  ಬಿದ್ದಾಗ, ಅದು ಕಾಡಿದಾಗ, ಅದು ಒಂದು ಚಿಂತನೆಯಾದಾಗ, ಅದನ್ನು ಯಾರಿಗಾದರೂ ಹೇಳಲೇ ಬೇಕು ಎಂಬ ಭಾವ ಮೂಡಿದಾಗ ಬರೆಯಲು ಆರಂಭಿಸುತ್ತೇನೆ. ನನಗೆ ಮದುವೆಯ ವ್ಯವಸ್ಥೆ, ಪುಸ್ತಕ -ಸಿನೆಮಾಗಳಿಂದ ನಾನು ತಿಳಿದುಕೊಂಡ ಸತ್ಯಕ್ಕೂ ಬಹಳ  ವ್ಯತ್ಯಾಸ ತಿಳಿದು ಈ  ಮದುವೆಯ ವಿಷಯ ಬಹಳ ಕುತೂಹಲಕಾರಿ ಅನಿಸಿದೆ.

ಸಾವಿರಾರು ಜನ ರಾಜಕೀಯದ ಕುರಿತಾಗಿ, ಸ್ಥಳಗಳ ಕುರಿತಾಗಿ, ನಿಸರ್ಗದ ಕುರಿತಾಗಿ, ವಿಜ್ಞಾನದ ಕುರಿತಾಗಿ ಬರೆಯುತ್ತಲೇ  ಇರುತ್ತಾರೆ. ಆದರೆ ನಮ್ಮ ನಮ್ಮೊಳಗೇ ಸೃಷ್ಟಿ ಮಾಡಿಕೊಂಡಿರುವ ನಿಯಮ ಹಾಗೂ ಪದ್ಧತಿಗಳ ಕುರಿತಾಗಿ ನಾವು ಮಾತನಾಡುವುದು ಅಪರೂಪ. ಯಾಕಂದರೆ ದೈನಂದಿನ ಬದುಕಿನಲ್ಲಿ ಹಾಸುಹೊಕ್ಕಾಗಿರುವ ವಿಷಯದ ಕುರಿತಾಗಿ ಬರೆಯುವುದೇನು ಉಳಿದಿದೆ ಎಂಬ ಭಾವ ಅಥವಾ ಅಂತದೊಂದು ಉದಾಸೀನತೆ  ಇರಬಹುದು. ಏನೇ ಇರಲಿ, ನಾನು ಮಾತ್ರ ಬರೆಯುವುದು ಇಂಥ ವಿಷಯದ ಕುರಿತಾಗಿ...ನೀವು ಓದಿ.

ಅವಳ ಆಫೀಸ್ ಮುಂದೆ ಇರುವ ಬೋರ್ಡ್ ಮೇಲೆ  ಹೀಗೆ ಬರೆದಿದೆ.
                                  Ms. Asha( BE,Mtech,MBA-HR).

ಅವಳು ಈಗ ಕೆಲಸ ಮಾಡುತ್ತಿರುವುದು, ಅತ್ಯಂತ ಶ್ರೇಷ್ಟ ಕಂಪನಿಯಲ್ಲಿ ಮ್ಯಾನೇಜರ್ ಕಮ್ CFO  ಎಂದು. ವೃತ್ತಿಯಲ್ಲಿ ಬಹಳ ಸಾಧಿಸಿದ ಹುಡುಗಿ. ಅವಳು ಇಷ್ಟು ಸಾಧಿಸಲು ಪಟ್ಟಿರುವ ಕಷ್ಟ  ಸಾಮನ್ಯವೇನು  ಅಲ್ಲ. ಅವಳು ಸಾಧಿಸಿರುವ ಡಿಗ್ರಿ, ಪೇಪರ್ ಗಳ ಲಿಸ್ಟ್ ಗೆ ಅವಳ ಹೆಸರ ಮುಂದೆ ಒಂದು website  ಬರೆದು ಅದರಲ್ಲಿ ಲಿಸ್ಟ್ ಮಾಡಬೇಕು ಹೊರತು ನೇರವಾಗಿ ಹೆಸರ ಮುಂದೆ ಜಾಗ ಸಾಲುವುದಿಲ್ಲ. ಓದುವುದರಲ್ಲಿ ಎತ್ತಿದ್ದ ಕೈ. ಸಾಧಿಸುತ್ತೇನೆ ಅನ್ನುವುದರಲ್ಲಿ ಪಳಗಿದ ಕಾನ್ಫಿಡೆನ್ಸ್. ಅವಳ ಕೈ ಕೆಳಗೆ ಕೆಲಸ ಮಾಡುತ್ತಿರುವ BE  graduate ಗಳಿಗಿಂತ ಹತ್ತು ಪಟ್ಟು  ಹೆಚ್ಚಿನ ಸಂಬಳ. ಅತ್ಯುತ್ತಮ ಕಾರಲ್ಲಿ ಬರುತ್ತಾಳೆ. ಅವಳಿಗೆ ಎಲ್ಲ ಫೆಸಿಲಿಟಿ ಇವೆ. ಅವಳಿಗೆ ಎಲ್ಲರು ತಲ್ಲೇ ತಗ್ಗಿ ನಿಲ್ಲುತ್ತಾರೆ. ಅವಳ ಸಾಧನೆಯ ದೃಷ್ಟಿಯಿಂದ, ಕೆಲಸದ ಕಂಪನಿಯಲ್ಲಿ ಅವಳಿಗೆ ಸರಿ ಸಮನಾರು ಯಾರು ಇಲ್ಲ. ಅವಳು ಬಿಡುತ್ತೇನೆ ಅಂದರೆ ಅದೇ ಕಂಪನಿ ಅವಳು ಹೇಳಿದ್ದನ್ನು ಕೊಟ್ಟು ಉಳಿಸಿ ಕೊಂಡೀತು..!  ತುಂಬಾ ಒಳ್ಳೆ ಹುಡುಗಿ. ಆಶಾ (ಮೂವತ್ತೈದು).(ನ್ಯೂಸ್ ಪೇಪರ್ ಗಳಲ್ಲಿ ಹೆಸರಿನ ಮುಂದೆ ವಯಸ್ಸನ್ನು ಈ ರೀತಿ ಬರೆಯುವುದನ್ನು ಗಮನಿಸಿರುತ್ತಿರಿ)

ಕೆಲಸಕ್ಕೆ ಸೇರಿ ಎರಡು  ವರ್ಷದ ತನಕ ಎಲ್ಲವು ಸರಿಯಾಗಿತ್ತು. ಅವಳ ಕೆಲಸ ಎಲ್ಲವು ಮೆಚ್ಚತಕ್ಕದೆ. ಆದರೆ ಇದ್ದಹಾಗೆ ಒಂದು ದಿನ ಕೆಲಸಕ್ಕೆ ಬೈ ಎಂದು ಹೇಳಿದ್ದಳು. ಅವಳು resignation  ಕೊಟ್ಟು ಹೋಗಿಲ್ಲ, ಬದಲಾಗಿ ರಜೆಯ ಮೇಲೆ. 

ಒಂದರ ಮೇಲೆ ಒಂದರಂತೆ ಸಾಧಿಸಿದ ಡಿಗ್ರಿ ಗಳು, ಸಾಧಿಸಿದ ಪ್ರೊಫೆಷನಲ್  ಗೆಲುವು ಎಲ್ಲವು ಅವಳ ಬದುಕಿನ್ನಲ್ಲಿ ಒಂದು ದಿನ ಕೈ ಕೊಟ್ಟಿತ್ತು. ಮನೆಗೆ ಹೋಗಿ, ಬೇಡ ರೂಂ ನ ಸಿಲಕ ಹಾಕಿ, ಬೆಳಗಿನ ಕಾಫ್ಫಿ ಕುಡಿಯದೆ ಅಂಗಾತ ಮಲಗಿ,
"ಮೂವತ್ತೈದು...!" ಎಂದು ಯೋಚಿಸುತ್ತ  ಕಣ್ಣೀರ ಹನಿಗಳೊಂದಿಗೆ, ಮನೆಯ ಸೀಲಿಂಗ್ ನೋಡುತ್ತಿದ್ದಳು. ಮೊವತೈದಕ್ಕೆ ಸಂಬಂಧ ಕೂಡಿ ಬರದು; ಎಪ್ಪತ್ತೈದಕ್ಕೆ ಬಾಲ್ಯ ಬರದು. ಕಳೆದು ಹೋಯಿತು ಸಂತೋಷ ಡಿಗ್ರಿಗಳ ಮಧ್ಯೆ..!

ಇದೆ ಅವಳ ಬದುಕಿನ ತಪ್ಪು.! ನಮ್ಮ ಶಿಕ್ಷಣ, ನಮ್ಮ ನೆರೆ-ಹೊರೆ ಎಲ್ಲರು ಹೇಳುವುದು ಬಹಳಷ್ಟು ಡಿಗ್ರಿ ಗಳು, ತುಂಬಾ ದೊಡ್ಡ ಸ್ಥಾನ ಮಾನ ಹೊರತು, ಯಾವುದನ್ನೂ, ಯಾವಾಗ, ಯಾರು, ಹೇಗೆ ಮಾಡಬೇಕು ಎಂದು ಯಾರು ಹೇಳುವುದಿಲ್ಲ. ಬಿಸಿ ರಕ್ತ ಇರುವಾಗ ಬಹಳ ಮಂದಿ ಇಂಥ ಶಿಕ್ಷಣ ನಮ್ಬಿಯೋ, ನೆರೆ ಹೊರೆಯವರನ್ನು ನಮ್ಬಿಯೋ, ಮತ್ತೊಬ್ಬರ ಜೊತೆ ತಮ್ಮನ್ನು ಹೋಲಿಸಿಯೋ ಅಥವಾ ಸಾಧಿಸಲೇ ಬೇಕು ಎಂಬ ಉತ್ಕಟ ಇಚ್ಛೆಯಿಂದಲೋ ತಮ್ಮ ಬದುಕಿನಲ್ಲಿ ಏನಾಗಬೇಕು, ತಮ್ಮ ಬದುಕಿನ ಸಂತೋಷಕ್ಕೆ ಏನು ಬೇಕು ಎಂದು ಯೋಚಿಸುವುದೇ ಇಲ್ಲ. ಈ ಪರಿಣಾಮವಾಗಿ ನಾಲ್ಕಾರು ಡಿಗ್ರಿ ಗಳಿದ್ದರು, ಎರಡೇ ವರ್ಷದಲ್ಲಿ ಆಶಾ ಇಸ್ ಫ್ಲಾಟ್. ನೋ ಮೊರೆ ವರ್ಕ್ !

ಅವಳ ದುಖದ  ಕಾರಣ- ಜೀವನೋದ್ದೇಶ ಮತ್ತು ಗುರಿಗಳ ಕುರಿತಾದ ಅಜ್ಞಾನ. ಗುರಿಗಳು(aim ) ಮತ್ತು ಉದ್ದೇಶ (purpose ) ಒಂದೇ ಅಲ್ಲ. ಇವುಗಲೆರಡನ್ನು ಒಂದೇ  ಎಂದು ಸಾಧಿಸಲು ಹೊರಟವರು ತಮ್ಮ ಜೀವನದಲ್ಲಿ ಏನನ್ನಾದರೂ ಕಳೆದು ಕೊಳ್ಳಲೆ ಬೇಕು ಅಥವಾ ಒಳ್ಳೆಯ  ಹಣೆಬರಹ ಹೊಂದಿರಬೇಕು. ನನ್ನ ಪ್ರಕಾರ, ಸಂತೋಷದ ಅತ್ಯುತ್ತಮ ಮಟ್ಟ  ಬದುಕಿರುವರೆಗೂ ಸಾಧಿಸುವುದೇ  ನನ್ನ ಉದೇಶ.ಆದರೆ ಗುರಿಗಳು  ಅವರವರ ಇಷ್ಟಕ್ಕೆ ಸರಿಯಾಗಿ ಇರುತ್ತವೆ. ಕೆಲವರಿಗೆ ಮ್ಯಾನೇಜರ್ ಆಗಬೇಕು, ಕೆಲವರಿಗೆ ಡಿಸೈನರ್ ಆಗಬೇಕು, ಕೆಲವರಿಗೆ  ಕಂಪನಿ ಕಟ್ಟಬೇಕು. ಹೀಗೆ ಇರುವುದು ತಪ್ಪಲ್ಲ.

ಆದರೆ ತಪ್ಪಾಗುವುದು ತಾನು ಸಂತೋಷವಾಗಿರಲು ಏನು ಬೇಕು ಎಂದು ಅರಿಯದೆ ಇರುವುದರಿಂದ. ಅದರಲ್ಲೂ ಪ್ರತಿಯೊಬ್ಬರ ಜೀವನದಲ್ಲಿ ತನ್ನದೇ ಅನ್ನುವ ವ್ಯಕ್ತಿಗತ ಸಂತೋಷದ ಕ್ಷಣಗಳಿರುತ್ತವೆ. ಅಂತಹ ಕ್ಷಣಗಳು ಆಯುಷ್ಯದ ಕ್ಷಣಗಳೊಂದಿಗೆ ಜೋಡಣೆಗೊಂಡಿರುತ್ತವೆ. ಬಾಲ್ಯ, ಕಾಲೇಜ್ ಜೀವನ, ಮದುವೆ, ದಾಂಪತ್ಯ, ಮಕ್ಕಳು...ಹೀಗೆ ಬದುಕಿನಲ್ಲಿ ಸರಿಯಾದ ಸಮಯದಲ್ಲಿ ಹಾದು ಹೋದಾಗಲೇ ಬದುಕಿನಲ್ಲಿ ಸಂತೋಷ ಸಾಧ್ಯ. ಒಮ್ಮೆ  ಇಂಥ ವಿಷಯಗಳು ನಮ್ಮಿಂದ ದೂರ ಸರಿದವು ಅಂದರೆ ಬಿಟ್ಟ ಬಾಣದಂತೆ .... ಮತ್ತೆ ಹಿಂತಿರುಗಿ ಬರಲಾರವು.

ಆಶಾ ಗುರಿಗಳನ್ನು ಸಾಧಿಸಿದ್ದಾಳೆ; ಉದೇಶ ಮರೆತಿದ್ದಳು. ಈಗ ಗುರಿಯ ನೆತ್ತಿಯನ್ನು ಏರಿದ ಮೇಲೆ ಉದೇಶ ವೇನೆಂದು ಪ್ರಶ್ನಿಸಿ ಕೊಂಡಿದ್ದಾಳೆ. ದು:ಖಿತಲಾಗಿದ್ದಾಳೆ. ಆದರೆ ದುಖ ಹೇಳಿಕೊಳ್ಳಲು ಗೆಳೆಯರಿಲ್ಲ;ಗೆಳತಿಯರಿಲ್ಲ;ತಂದೆ-ತಾಯಿಗೆ ಹೇಳಲಾಗುತ್ತಿಲ್ಲ. ಅವಳಿಗೆ ಈಗ ಕಾಣುತ್ತಿರುವುದು ಮುಟ್ಟಲಾಗದ ಆ ಮನೆಯ ಸೀಲಿಂಗ್ ಮಾತ್ರ.

ಅದೆಷ್ಟೋ ಸಮಸ್ಯೆಗಳು ನಾವು ಸಮಯಕ್ಕೆ ಸರಿಯಾಗಿ ಯೋಚಿಸುವುದರಿಂದ ಬಗೆಹರಿಸಲು ಸಾಧ್ಯವಿದೆ. ಸ್ಥಾನ, ಗೌರವ, ಅಧಿಕಾರ, ಹಣ ಇವುಗಳು  ಅಲ್ಪಾವಧಿಗೆ ಸಂತೋಷವನ್ನುಂಟು ಮಾಡುತ್ತವೆ. ಹೀಗಾಗಿ ಮನುಷ್ಯ ಜೀವನದ ಉದೇಶ ಖಂಡಿತ ಮರೆಯಬೇಡಿ.

Wednesday, December 25, 2013

ಅವನ್ಯಾಕೆ ಬದಲಾದ?

ಈ ಪ್ರಶ್ನೆ ನೀವು ಬಹಳ ಸಾರಿ ಕೇಳಿಯೇ ಇರುತ್ತೀರಿ. ಕೆಲವೊಮ್ಮೆ ನಿಮ್ಮ ಗೆಳೆಯ-ಗಳತಿ  ಅಥವಾ ಸಹಪಾಟಿ ನಿಮ್ಮ ಜೊತೆಯಲ್ಲಿದ್ದಾಗ ಚೆನ್ನಾಗಿಯೇ ಇದ್ದು ಯಾವುದೋ ಒಂದು ದಿನ ಅವನು/ಅವಳಲೊಂದು ಕನಿಷ್ಠ ಮಟ್ಟದ ಕೆಲಸದಲ್ಲಿ ನರಳಿದಾಗ ನೀವು ಹಿಗಿಯೇ ಹೇಳುತ್ತಿರಿ. "ಕಾಲೇಜ್ ನಲ್ಲಿ ಇದ್ದಾಗ ಅವನ ಫಿಲಾಸಫಿ ಚೆನ್ನಾಗಿಯೇ ಇತ್ತು..ಅವನು ಒಳ್ಳೆಯವನು ... ಹೀಗೆಲ್ಲಾ ಮಾಡಲು ಸಾಧ್ಯನೇ ಇಲ್ಲ ಅನ್ನುತ್ತಾ.." ನಿಮ್ಮ ಗೆಳೆಯನ ಕುರಿತಾಗಿ ಯಾರೋ ಕೀಳಾಗಿ ಪ್ರಶ್ನಿಸಿದರೆ  ಇದೆ ಉತ್ತರ.

ಹಾಗಿದ್ದರೆ ಮನುಷ್ಯ ಯಾವತ್ತು ಬದಲಾಗುವುದಿಲ್ಲವೇ? ಪ್ರತಿಕ್ಷಣದ ಅನುಭವು ಮನುಷ್ಯನ ಮನಸ್ಸಿನ ಮೇಲೆ, ಬದುಕುವ ರೀತಿಯ ಮೇಲೆ ಪ್ರಭಾವ ಬಿರಲಾರದೆ? ಅದಕ್ಕಾಗಿಯೆ ಅಲ್ಲವೇ ಮನೆಯಲ್ಲಿದ್ದಾಗ ಸಸ್ಯಹಾರಿಗಲಾದವರು  ಗೆಳೆಯರ ಮಧ್ಯೆ ಸಿಲುಕಿ  ಮಾಂಸಹಾರಿ ಕೂಡ ಆಗಿ ಬಿಡುತ್ತಾರೆ. ಮನೆಯಲ್ಲಿ ಅಪ್ಪ-ಅಮ್ಮ ಹಾಗೆ ಮಾಡಲಾರ ನಮ್ಮ ಮಗ ಅನ್ನುತ್ತಲೇ ಇರುತ್ತಾರೆ. ಆದರೆ ಮಗ ಬದಲಾವಣೆಗೆ ಗುರಿಯಾಗಿ, 'ಸ್ವಾಹ' ಅನ್ನುತ್ತಾನೆ. ಯಾವತ್ತು ನಾನು ಸ್ನಾನ ಮಾಡದೇ ತಿನ್ನಲಾರೆ ಅನ್ನುವರು ಕೂಡ, ಇಲ್ಲೊಂದು ಕಡೆ ಗೆಳೆಯರ ಮಧ್ಯದಲ್ಲಿ, "ಲೇ ಮಗನೆ, ತಿನ್ನಲೇ ನಾವೇನು ಸ್ನಾನ ಮಾಡಿದ್ದೇವಾ ?" ಎಂದು ಒತ್ತಡ ಹೇರಿದಾಗ, ಆಹಾರವನ್ನು ಮೊದಲು ಪ್ರಯಸದಾಯಕವಾಗಿ ಗಂಟಲೋಳಗಿರಿಸಿದ ಮಹನಿಯ ವರ್ಷವೊಂದು ಉರುಳಲು ಸ್ನಾನವೇ ಮರೆತು ತಿನ್ನಲು ಸಾಧ್ಯವಿದೆ. ಅಂದರೆ, ಮನೆಯಲಿ ಕಲಿಸಿದ ನೀತಿ, ಸಂಸ್ಕೃತಿ ಅಥವಾ ಬದುಕಿನ ಒಂದು ಫಿಲೋಸೋಪ್ಯ್ ಎಲ್ಲೊಂದೆಡೆ ಕಾಲ ಚಕ್ರದಲ್ಲಿ ಬದಲಾಗಲು ಸಾಧ್ಯವಿದೆ; ಆಗುತ್ತಲೇ ಇರುತ್ತದೆ.

ನಾನು ವರದಕ್ಷಿಣೆಯ ವಿರೋಧಿ. ಅದು ಸರಿಯಲ್ಲ ಎಂದು ಪ್ರಾಥಮಿಕ ಶಾಲೆಯಲ್ಲಿ ನನ್ನ ಗುರುಗಳು ಬರೆಸಿದ ನಿಬಂಧಗಳು  ಅಂತಹ ನಿಲುವು ನನ್ನ ಮನಸ್ಸಿನಲ್ಲಿ ಅಚ್ಚಳಿಯದಂತೆ ಮೂಡಿಸಿತ್ತು. ನಾನು, ಅದೆಷ್ಟೋ ಬಾರಿ ಗೆಳೆಯರ ಮಧ್ಯದಲ್ಲಿ ಮದುವೆಯ ಕುರಿತಾಗಿ ಮಾತನಾಡುವಾಗ, ಅಥವಾ ಯಾವುದೊ ಮದುವೆಗೆ  ಹೋದಾಗ ಗುಡ್ಡೆ ಹಾಕಿರುವ ವರದಕ್ಷಿಣೆಯ ರಾಶಿ ವಸ್ತುಗಳು, ಅಥವಾ ಇನ್ನಾರದೋ ಮಾವ ಕಾರು ಕೊಟ್ಟ, ಬಂಗಾರ ಕೊಟ್ಟ ಅಂದಾಗ ಅದೆಲ್ಲ ಸರಿಯಲ್ಲ ಎಂದು ನನ್ನ ವಿರೋಧಿ ನೀತಿಯನ್ನು ತೋರಿಸಿದ್ದು ಮಾತ್ರ ಅಲ್ಲ, ನಾನೊಬ್ಬ ಸಾಚಾ ಎನ್ನುವುದನ್ನು ತೋರಿಸಿದ್ದೆ. ಇಲ್ಲಿಯ ವರೆಗೂ ನಾನು ಸಾಚಾ ನೇ ಆಗಿದ್ದೆ. ಆದರೆ ಇನ್ನು ಸಾಚಾ ತನ ಒಳ್ಳೆಯದಲ್ಲ, ಅಂತ ಘನತೆಯ ಹಿಂದೆ ಕಹಿಯಾದ ಬೇವಿನ ರಸವಿದೆಯೆಂದು ಅರಿಕೆಯಾಗಿದೆ.

ಮದುವೆಗಾಗಿ ಹುಡುಗಿ ಹುಡುಕುತ್ತಿದ್ದೇನೆ  ಅನ್ನುವ ವಿಚಾರ ನಿಮಗೆ ಪ್ರತ್ಯೇಕವಾಗಿ ಹೇಳಲೇ ಬೇಕೆಂದೆನು ಇಲ್ಲ. ಅದು ವಯಸ್ಸಿನ ಸಹಜ ನಿಯಮ ಹಾಗೂ ನೀವು ಕೂಡ ಇಂತ ಕೆಲಸ ಕೆಲವರು  ಮಾಡಿರುತ್ತೀರಿ; ಕೆಲವರು ಮಾಡುತ್ತಲು ಇರಬಹುದು; ಇನ್ನು ಕೆಲವರು ಮಾಡುವವರು ಇರಬಹುದು.

ಕೆಲವು ತಿಂಗಳ ಹಿಂದೆ ಮೊದಲ ಹುಡುಗಿ ನೋಡಲು ಹೋದಾಗ, ನೇರವಾಗಿ ಭಾವಿ ಮಾವ ತನ್ನ ಏಕೈಕ ಕನ್ಯಾ ಮಣಿಯನ್ನು  ನೀಡಲು ಕಾತರನಾಗಿ, ವರದಕ್ಷಿಣೆಯ ಕುರಿತಾಗಿ ಮೊದಲ ದಿನವೇ ಪ್ರಶ್ನಿಸಲ್ಪಟ್ಟೆ. ಯಕ್ಷಗಾನದ ವೀರ ಬಬ್ರುವಾಹನ ಹಾಗೆ ಎದೆತಟ್ಟಿ, " ಭಾವಿ ಮಾವ, ಉಟ್ಟ ಬಟ್ಟೆಯಲ್ಲಿ ನಿನ್ನ ಮಗಳನ್ನು ಕರೆದುಕೊಂಡು  ಹೋಗುತ್ತೇನೆ. ನನ್ನ ಮನೆಯಲ್ಲಿ ವರದಕ್ಷಿಣೆ ಸರಿಯೆಂದು ನಾವು ಯಾರು ಭಾವಿಸುವುದಿಲ್ಲ. ಅದಕ್ಕಾಗಿ ಆ ವಿಷಯಕ್ಕೆ ತಿಲಾಂಜಲಿ ಇಟ್ಟರೆ ಒಳ್ಳೇದು" ಎಂದು  ಹೇಳುವುದರ ಮೂಲಕ, ನನ್ನ ಗುರುಗಳನ್ನು ಒಮ್ಮೆ  ನೆನೆದು ಆ ಮನೆಯಿಂದ ಹೊರಬಂದೆ.

 ಆದರೆ, ಕೆಲವು ದಿನಗಳು ಕಳೆದ ಮೇಲೆ, ಈ ಮದುವೆಯ ಸಂಬಂಧದ ಏರ್ಪಡಿಸಿದ ಅವರ ಸಂಬಂಧಿ, " ನೀವು ಯಾಕೆ  ವರದಕ್ಷಿಣೆ ಬೇಡ ಅಂದಿದ್ದಿರಿ, ಅಂತಾ ಅವರು  ವಿಚಾರ ಮಾಡ್ತಾ ಇದ್ದಾರೆ, ಅವರ ಮನಸ್ಸಿನಲ್ಲಿ ಹುಡುಗ ಏನೋ ಸರಿಯಲ್ಲ ಅದಕ್ಕೆ ವರದಕ್ಷಿಣೆ ಬೇಡ ಅಂತ ಇದ್ದಾನೆ ಅಂತ, ಅವರು ನನ್ನ  ಜೊತೆ  ಒಮ್ಮೆ ಹೇಳಿದರು. ನೀವು ಈಗ, ನಿಮ್ಮ ತಂದೆ ತಾಯಿ ಮೂಲಕ ವರದಕ್ಷಿಣೆಗೆ ಬೇಡಿಕೆ ಇಟ್ಟರೆ, ಈ ಮದುವೆ ಮುಂದುವರಿಯಬಹುದು. ಇಲ್ಲ ಅಂದರೆ  ಅವರು ಸಂದೇಹ ಬಗೆಹರಿಸಿಕೊಂಡು ನಿಮಗೆ ಹುಡುಗಿ ಕೊಡ್ತಾರೆ ಅಂತ ಅನ್ಸ್ತಾ ಇಲ್ಲ...ನೀವು ಎನ್ಮಾಡ್ತಿರಾ?"
"ನಮಗೆ ಇಷ್ಟ ಇಲ್ಲ ಅಂತ ಹೇಳಿ" ಎಂದು ಸಂಬಂಧ ಕಡಿದುಕೊಂಡು  ಸುಮ್ಮನಾದೆ.

ಇನ್ನೊಂದು ಸಂಬಂಧ.... ಮನೆಗೆ ಕರೆದರು. ಮನೆಯ ಮಂದಿ ನೆರದಿದ್ದರು. " ಮತ್ತೆ ಏನು ಹೇಳ್ತಿರ ವೆಂಕಟ್, ನೋಡಿ ಇಷ್ಟು ದೂರ ಸಣ್ಣ ಸಣ್ಣ ವಿಷಯಕ್ಕೆ ಮತ್ತೆ ನಿಮ್ಮ ಕರೆಸುದು ಅಂದ್ರೆ ಕಷ್ಟ. ಅದಕ್ಕೆ ನೀವು ಬೇಸರ ಇಲ್ಲ ಅಂದರೆ, ನೀವು ಮದುವೆ ಬಗ್ಗೆ ಡೀಟೇಲ್ ಆಗಿ ಮಾತನಾಡಬಹುದು... ಅಂದರೆ  ವರದಕ್ಷಿಣೆ ಎಷ್ಟು ಬೇಕು? ನಿಮ್ಮ ಮನೆ ಕಡೆಯಿಂದ ಯಾರು ಮಾತನಾಡುತ್ತಾರೆ".  ನಾನು ಮತ್ತೆ ಹಳೆಯ ರಾಗದಲ್ಲಿ, " ಅಂಕಲ್ ನಮ್ಮ ಮನೆಯಿಂದ ತಂದೆ-ತಾಯಿ ಮಾತನಾಡ್ತಾರೆ. ಮನೆಗೆ ಹೋಗಿ ವಿಷಯ ಹೇಳಿದ ಮೇಲೆ ಎಲ್ಲವನ್ನು ಮಾತನಾಡೋಣ. ಆದರೆ ವರದಕ್ಷಿಣೆ ವಿಷಯದಲ್ಲಿ ನನ್ನ ನಿರ್ಧಾರವೇ ಅಂತಿಮ. ನನಗೆ  ವರದಕ್ಷಿಣೆ ಖಂಡಿತ ಬೇಡ. ಇದರಲ್ಲಿ ತಂದೆ-ತಾಯಿಗೆ ಕೇಳುವುದು ಏನು ಇಲ್ಲ" ಎಂದು ಹೇಳಿ, ಹುಡುಗಿಯೋನ್ನೊಮ್ಮೆ ಒರೆ ದೃಷ್ಟಿಯಿಂದ ನೋಡಿ ಮನೆಯಿಂದ ಹೊರಬಂದೆ.

 ಇನ್ನು ಮನೆಯನ್ನು ತಲುಪುವಾಗಲೇ, ನನ್ನ ಮೊಬೈಲ್ ಗೆ ಒಂದಿಷ್ಟು  sms ಗಳು ಬಂದವು. ಆ ಮಸೇಜ್  ಮಾಡಿದವರು ಮತ್ತಾರು ಅಲ್ಲ, ನಾನು ನೋಡಿ ಬಂದ ಹುಡುಗಿ. ತನ್ನ ಹೆಸರನ್ನು ಹೇಳಿ, ನಿಮ್ಮ ಜೊತೆ ಮಾತನಾಡಬಹುದ ಎಂದು ಕೇಳಿದ್ದಳು. ನಾನು ಕಾಲ್ ಮಾಡಿಬಿಟ್ಟೆ. " ಹೇಯ್, ಪ್ಲೀಸ್ ನಾನು ಕಾಲ್ ಮಾಡಿದ್ದೇನೆ ಅಂತ ಅಮ್ಮಗೆ ಹೇಳ್ಬೇಡಿ. ಅವರ ಮೊಬೈಲ್ ನಿಂದ ನಿಮ್ಮ ನಂಬರ್ ತಕೊಂಡೆ. ನೀವೇನು ಚೆನ್ನಾಗಿದ್ದೀರಾ..! ನಾನು ನಿಮಗೊಂದು ಪ್ರಶ್ನೆ ಕೇಳಲಾ?" ಎಂದು ತವಕಿಸಿ ಮಾತನಾಡಿದ್ದಳು. ನಾನು ಭಾವಪರವಸನಾಗಿಯೇ ಇದ್ದೆ. "ನೀವು ಇಂಜಿನಿಯರ್ ಓದ್ದಿದ್ದಿರಿ ಅಂತಿರಲ್ಲ... ಹಾಗಿದ್ದು ಯಾಕ್ರೀ ವರದಕ್ಷಿಣೆ ಬೇಡ ಅಂತ ಹೇಳಿ ಬಿಟ್ರಿ?. ನನಗೆ ಈ ನಿಮ್ಮ ಮಾತು ಸರಿಯನಿಸಲಿಲ್ಲ. ನಾಳೆ ಮದುವೆಯಾಗಿ ಬರುವಳು ನಾನು ತಾನೇ? ನೀವು ಇಷ್ಟು ಹೇಳಿದಕ್ಕೆ ಅಪ್ಪ-ಅಮ್ಮ ಕುಷಿಯಾಗಿದ್ದಾರೆ. ಅವರು ನನ್ನ ಅಕ್ಕನಿಗೆ ಕಾರು-ಚಿನ್ನ ಕೊಟ್ಟಿದ್ದಾರೆ. ನೀವು ಬೇಡ ಅಂದರೆ ನಮಗೆ ಏನು ಕೊಡಲ್ಲ ಗೊತ್ತ? 'atleast  ನಿಮ್ಮ ಇಷ್ಟ' ಅಂತ ಹೇಳುವ ಮನಸ್ಸು ಕೂಡ ನಿಮಗೆ ಅಗಿಲ್ಲಿಲ್ವಾ? ". ಭಯಾನಕ ಅನಿಸಿತ್ತು;ಅವಳು ನನ್ನ ತರಾಟೆಗೆ ತೆಗೆದು ಕೊಂಡಿದ್ದಳು; ಮನಸ್ಸಿನ ಭಾವ ಜಾರಿತ್ತು. ಅವಳಿಗೆ ಹೇಳಿದ್ದು ಒಂದೇ ಉತ್ತರ... " ಮದುವೆಯ ಮುನ್ನ ಎಲ್ಲವು ನನ್ನ ನಿರ್ಧಾರ... ನಿನ್ನ ವಿಚಾರಕ್ಕೆ ನನ್ನಿಂದ ಉತ್ತರ ಇಲ್ಲ. ಆದರೆ ನಿನ್ನ ಅಪ್ಪ-ಅಮ್ಮನ ಬಗ್ಗೆ ನೀನೆ ಯೋಚಿಸ ಬೇಕು ಹೊರತು, ನಾನು ಏನು ಹೇಳಲು ಸಾಧ್ಯವಿಲ್ಲ" ಅಂದೆ. " ಹಾಗಲ್ಲರಿ... ನಾಳೆ ಮದ್ವೇಯಾದ್ರೆ ಖರ್ಚುಗಳು ಬಹಳ ಇರ್ತವಲ್ರಿ... ಸಿಗುದನ್ನು ಯಾಕೆ ಬಿಡ್ತಿರಿ" ಎಂದು ನನ್ನ ಸಮಾಧಾನಿಸಿದ್ದಳು. ಅವಳಿಗಾಗಿ ಕೊನೆಗೆ, "ನಿಮ್ಮ ಮಗಳಿಗೆ ಏನು ಬೇಕು ಅವಳಿಗೆ ಕೊಡಿ ...ನನಗಂತೂ ಏನು ಬೇಡ' ಎಂದು ಅವಳ ತಂದೆ ತಾಯಿಗೆ ನಾನು ಹೇಳುವಂತ ನಿರ್ಧಾರಕ್ಕೆ ನಾವಿಬ್ಬರು, ನೋಡಿದ ೬ ಗಂಟೆಯೊಳಗೆ, ಇಂತ ಒಪ್ಪಂದ ಮಾಡಿಕೊಂಡಿದ್ದೆವು. ಆದರೆ ಗ್ರಹಗಳು ಕೈ ಕೊಟ್ಟಿದ್ದರಿಂದ, ಒಪ್ಪಂದದೊಂದಿಗೆ ಮದುವೆಯು ಮುರಿದುಹೋಯಿತು. ನನ್ನ ವರದಕ್ಷಿಣೆ  ರಹಿತ ಮದುವೆಯ ನನ್ನ ವಿಚಾರದ originality  ಹಾಗೂ variginality ಎರಡು ಉಳಿಸಿಕೊಂಡು ಬಂದೆ.

ಇನ್ನು ಸಾಚಾತನ ಬೇಕಾ ? ವರದಕ್ಷಿಣೆ ಯಾಕೆ ಬೇಕು ? ಬೇಡ ಅನ್ನುದು ಅಷ್ಟು ಸುಲಭನಾ? ಯೋಚನೆಯಲಿರುವಾಗ ಇರುವಾಗಲೇ ಇನ್ನೊಂದು ಘಟನೆ ನನ್ನ ಹೃದಯ ಕಲುಕಿತು.

ಮೂರನೆ ಸಂಬಂಧ: ಅದು ನನ್ನ ಪರಿಚಯದವರೊಬ್ಬರು ಕುದಿರಿಸಿದ ಸಂಬಂಧ. ನನ್ನ ಬೇಡಿಕೆಯ ಮೇರೆಗೆ ಹುಡುಗಿಯ ಅಣ್ಣ ನನಗೆ ಕೆಲವು ಫೋಟೋ ಗಳನ್ನೂ ನನಗೆ ಇಮೇಲ್ ಮಾಡಿದ್ದರು. ಮೊದಲು ಆ ಫೋಟೋಗಳು ಹುಡುಗಿಯ ಇಮೇಲ್ ನಿಂದ ಅಣ್ಣನ ಇಮೇಲ್ ಗೆ ಬಂದಿದ್ದವು. ಅಣ್ಣ ಇಮೇಲ್ ಗೆ ರಿಪ್ಲೈ ಆಲ್ ಮಾಡಿ ನನ್ನ ಇಮೇಲ್ ಸೇರಿಸಿದ್ದ ರಿಂದ  ಹುಡುಗಿಯ ಇಮೇಲ್ ಅದರಲ್ಲಿ ಸೇರಿಕೊಂಡಿತ್ತು. ನಾನು ರಿಪ್ಲೈ ಮಾಡಿ, ಥ್ಯಾಂಕ್ಸ್ ಎಂದು ಕೆಳಗೆ ಮೊಬೈಲ್ ನಂಬರ್ ಸೇರಿಸಿದ್ದೆ. ಇದರಿಂದಾಗಿ ಹುಡುಗಿಗೂ ನನ್ನ  ಮೊಬೈಲ್ ನಂಬರ್ ಹೋಗಿತ್ತು.

ಈ ಸಂಬಂಧದ ಕುರಿತಂತೆ ಅಣ್ಣ, ಅಣ್ಣ ಜೊತೆಯಲ್ಲಿ ಮಾತುಕತೆಗಿಳಿದು, ಯಾವಾಗ ಬರುತ್ತಿರ?, ಎಲ್ಲಿ? ಅಂತೆಲ್ಲ ನಿರ್ಧಾರ ಮಾಡುವ ವಿಷಯದ ಕುರಿತಾಗಿ ಹೇಳುತ್ತಿದ್ದ. ಅದನ್ನೆಲ್ಲಾ ಕೇಳುತ್ತಲಿದ್ದ  ಹುಡುಗಿ ಮರುದಿನ ನನಗೆ ಮಾತನಾಡಬೇಕು ಎಂದು  msg  ಮಾಡಿದ್ದಳು. ಅಗಾ ಅವಳು ಹೇಳಿದ್ದೇನು ಗೊತ್ತೇ?
"ನೀವು ನನ್ನ ನೋಡಲಿಕ್ಕೆ ಬರುತ್ತಿರಂತೆ. ಅಣ್ಣ ನಿಮ್ಮ ಜೊತೆ ಮಾತನಾಡುತ್ತಿರುವುದು ನಾನು ಕೇಳಿದ್ದೇನೆ. ಆದರೆ ಒಂದು ವಿಷಯ. ನೀವು ಇಂಜಿನಿಯರ್ ಅಂತೆ. ನೀವು ವರದಕ್ಷಿಣೆ ಕೇಳಿಯೇ ಕೆಳುತ್ತಿರಿ.! ಆದರೆ ನಾನು ಪೂರ್ ಗರ್ಲ್. ನನಗೆ ತಂದೆ ಇಲ್ಲ. ನೀವು ವರದಕ್ಷಿಣೆ ಕೆಳುದೇ ಆದರೆ ಬರುದೆ ಬೇಡ...ನನ್ನ ಮದುವೆಗಾಗಿ ನನ್ನ ಅಣ್ಣ-ಅಮ್ಮ ಏನು ಬೇಕಾದ್ರೂ ಮಾಡಬಹುದು ಆದರೆ ನನಗೆ ಇಷ್ಟ ಇಲ್ಲ" ಎಂದು ಹೇಳುತ್ತಾ ಸಾಗಿದ ಹುಡುಗಿಗೆ ನಾನು ಮಾತನಾಡಲು ಸಾಧ್ಯವೇ ಇರಲಿಲ್ಲ. ಕೊನೆಗೂ," ನಾನು ವರದಕ್ಷಿಣೆಯ ಕುರಿತಾಗಿ  ಏನು ಹೇಳಿಯೇ ಇಲ್ಲ.. ನೀವು  ಯಾಕೆ ಇದನೆಲ್ಲ ಹೇಳುತ್ತಿರಿ? " ಎಂದು ಕೇಳಿದಾಗ, ಹುಡುಗಿ ಗದ್ಗದಿತಲಾಗಿದ್ದಳು... " ಹಿಂದೆ ನನಗೆ ಇಂಜಿನಿಯರ್ ಪ್ರಪೋಸಲ್ ಬಂದಿತ್ತು. ಇಷ್ಟವು ಆಗಿತ್ತು. ಆದರೆ ಮದುವೆ ಆಗುವ ಲೆವೆಲ್ ಗೆ ಬಂದಾಗ ಬಹಳ ದೊವ್ರಿ ಕೇಳಿದ್ರು. ನಮ್ಮ ಅಮ್ಮ ಮನೆ ಮಾರೋಣ ಅಂದು ಹೇಳಿದ್ರು... ನಾನು ಆ ಮದುವೆ ಬೇಡ ಅಂತ ಹೇಳಿದೆ".

ನನ್ನ ಹೃದಯದಲ್ಲಿ ರಕ್ತವೇ ನಿಂತತೆ ಆಯಿತು. ಹುಡುಗಿಯೊಬ್ಬಳು ಒಂದು ಮನೆಯನ್ನು ಕಟ್ಟಲು ಇನ್ನೊಂದು ಮನೆಯನ್ನು ವಿನಾಶಕ್ಕೆ ತಳ್ಳಬೇಕಾದ ಪರಿಸ್ಥಿತಿ ಸಮಾಜವೇ ನಿರ್ಮಿಸುತ್ತದೆ.

ಯಾವುದು ಸರಿ? ವರದಕ್ಷಿಣೆ ಹುಡುಗನ ಆರೋಗ್ಯದ  ಸಂಕೇತವೇ? ವರದಕ್ಷಿಣೆ ಹೆಂಡತಿಯೆಂಬ ಜೀವಿ ಬಂದಾಗ ಆಗಬಹುದಾದ ಖರ್ಚುಗಳಿಗೆ ಕೊಡುವ ಬಾಬತ್ತೆ ? ಇಲ್ಲ ಬಡ ಹೆಣ್ಣು ಮಕ್ಕಳ ಕಣ್ಣಿರೆ ? ಕಾನೂನು ಹೇಗೆ ಇದ್ದರು, ಮನುಷ್ಯನ ಸಮಾಜದ ರೀತಿ-ನೀತಿಗಳೇ ಸಮಾಜವನ್ನು ಆಳುತ್ತವೆ. ನಾನು ಇದೆ ಸಮಾಜಕ್ಕೆ ಒಳಪಟ್ಟವನು. ನನಗೂ ವರದಕ್ಷಿಣೆ ಬೇಕು. ನಾಳೆ ನನ್ನ ಬೆಲೆ ಎಷ್ಟು ಅಂತ ebay ಯಲ್ಲಿ ನೋಡಬಹುದು..! ಯಾಕಂದ್ರೆ, ನಾನು ಈ ಘಟನೆಗಳಿಂದಾಗಿ ಬದಲಾಗಿದ್ದೇನೆ.

ಛೆ...ಈ ಬದುಕೇ..!

Saturday, December 21, 2013

ಹಳ್ಳಿ ಹುಡುಗ

ಹಳ್ಳಿ ಹುಡುಗ.
     ನೀವು ಯಾವತ್ತಾದರೂ, 'ಲೇ ಹಳ್ಳಿ  ಹೈದ' ಅಂತ ಬೈದಿದ್ದಿರಾ? ಅಥವಾ ಹಿಗಂತಾನು ಜನ ಬೈತಾರೆ ಅಂತ ನಿಮಗೆ ಗೊತ್ತು ತಾನೇ? ಹೌದು, ನಾವು ಬಯ್ಯುವ ಶಬ್ಧಗಳಲ್ಲಿ ಹಳ್ಳಿ ಎಂಬ ಶಬ್ದ ಸೇರಿಸಿ ಬಯ್ಯುವದರ ಹಿಂದೆ ಹಳ್ಳಿಯ ಕುರಿತಾಗಿ, ಹಳ್ಳಿಯ ಜನರ ಕುರಿತಾಗಿ ಇರುವ ಕೀಳು ಭಾವನೆ ಎತ್ತಿ ತೋರಿಸುತ್ತದೆ. ಹಳ್ಳಿಯ ಬಗ್ಗೆ, ಹಳ್ಳಿತನ ಬಗ್ಗೆ ಯಾಕೆ ನಮಗೆ ಅಷ್ಟೊಂದು ಆಕ್ರೋಶ?

ನಾನು ಹಳ್ಳಿಯ ಹುಡುಗ. ಯಾವ ಊರಲ್ಲಿ ರಸ್ತೆ ಇರಲಿಲ್ಲ;ವಿದ್ಯುತ ಇರಲಿಲ್ಲ; ಅಲ್ಲಿಂದ ಬಂದವನು.ಎಲ್ಲರ ಮಧ್ಯದಲ್ಲಿ ನಿಂತಾಗ ಡಿಗ್ರಿ ಯಿಂದ ಇಂಜಿನಿಯರ್ ಅದರೂ, ಬದುಕುತ್ತಿರುವುದು  ಬೃಹತ್ ನಗರದಲ್ಲಾದರು ನನ್ನ ಮನಸ್ಸಿನಲ್ಲಿ ಅಚ್ಚು ಹಾಕಿದಂತ 'ಹಳ್ಳಿತನ' ಬಿಡಲು ಮನಸಾಗುವುದಿಲ್ಲ. ಹಳ್ಳಿತನ ಬಿಟ್ಟು ಹೊರಬಂದು ನಗರದ ಬದುಕಿನೊಂದಿಗೆ ನಾನು ಸೇರಿದ್ದೇನೆ ಎಂದು ತೋರಿಸಿಕೊಳ್ಳಲು ಬಹಳ ಪ್ರಯತ್ನ ಮಾಡಿದ ಮೇಲೆ, ಕೆಲವೊಮ್ಮೆ ನಾನು ಎಲ್ಲೋ ನನ್ನ ಪೂರ್ವ ಪರ ಕಳೆದು 'ನಾನು', 'ನನ್ನದು' ಎಂಬ ಐಡೆಂಟಿಟಿ ಕಳೆದು ಕೊಳ್ಳುತ್ತಿದ್ದೇನೆ ಅನಿಸುತಿತ್ತು.ಆದರೆ ಅದಕ್ಕೊಂದು ದಿನ ಉತ್ತರವೂ ಸಿಕ್ಕಿದೆ.

'ಹಳ್ಳಿತನ' ಎನ್ನುದು ಒಂದು ಕೆಟ್ಟ ನಡತೆಯಲ್ಲ;ಅದು ಅಜ್ಞಾನದ ಸಂಕೇತ ಅಲ್ಲ; ಅದು ನಿಸರ್ಗದ ಜೊತೆಯಲ್ಲಿ ಬದುಕುವ ಪರಿ. ಹಳ್ಳಿಯ ಜನತೆಗೆ ಏನಿಲ್ಲ ಅಂದರು ನಿಸರ್ಗದ ಕುರಿತಾಗಿ ಬಹಳ ತಿಳುವಳಿಕೆ ಇರುತ್ತದೆ. ವೈಜ್ಞಾನಿಕವಾಗಿ ಹವಾಮಾನ ವರದಿ ನಿಡುವ ನಮ್ಮ ಹವಾಮಾನ ಇಲಾಖೆಗಿಂತ ಅದೆಷ್ಟೋ ಬಾರಿ ಹಳ್ಳಿಯ ಜನ ಯಾವುದೊ ಮರದ ಎಲೆಗಳನ್ನು, ಕಾಯಿಗಳ ಸಂಖೆಯನ್ನು ನೋಡಿ ಹೇಳುವ ಮಳೆಯ ವರದಿ  ಅದೆಷ್ಟೋ ನಿಖರವಾಗಿರುತ್ತದೆ. ಬೆಂಗಳೂರಿನಲ್ಲಿ ಕನ್ನಡ ಕಾವಲು ಸಮಿತಿಗಳು(ಕನ್ನಡ ಪರಿಷತ್ ನಂತಹ ಸಂಸ್ಥೆಗಳು) ಸಾವಿರಾರು ಇವೆ. ಆದರೆ ಹಳ್ಳಿಗಳಲ್ಲಿ ಕನ್ನಡ ಭಾಷೆಯನ್ನೂ, ಅದರ ಜನಪದ ಕಲೆಯನ್ನು ಉಳಿಸಿಕೊಂಡು ಬರುತ್ತಿರುದು ಹಳ್ಳಿಯ ಮುಗ್ದ ಮನಸ್ಸುಗಲಿಂದಲೇ.( ಕನ್ನಡದ ನಟ-ನಟಿಯರ ಬಗ್ಗೆ ನನಗಂತೂ ಅದೆಷ್ಟೋ ನೋವು ಇದೆ. ಕನ್ನಡ  ಭಾಷೆಯನ್ನೂ ತಮ್ಮ ದುಡ್ಡಿನ ಮೂಲವಾಗಿಸಿ ಕೊಂಡಿರುವ ಇವರಿಗೆ, TV  ಕ್ಯಾಮೆರಾದ ಮುಂದೆ ಮಾತ್ರ ಇಂಗ್ಲೆಂಡ್ ನಿಂದ ಎರವಲು ಪಡೆದ ಜೆವಿಗಳಂತೆ ವರ್ತಿಸುತ್ತಾರೆ.). ಹಳ್ಳಿಗರ ಇನ್ನೊಂದು ವಿಶೇಷ ಅಂದರೆ ನಿಸರ್ಗದತ್ತವದ ಗಿಡಮೂಲಿಕೆಗಳು. ಬಹಳಷ್ಟು ರೋಗಗಳಿಗೆ ಆಸ್ಪತ್ರೆಗಳಲ್ಲಿ ಸಿಗಲಾರದ ಮದ್ದುಗಳು ಹಳ್ಳಿಗಳಲ್ಲಿ ಸಿಗುತ್ತಿವೆ. ಉದಾಹರಣೆಗೆ ಅಂಕೋಲದ ಬೆಲಾಂಬರ್ ಅಂತ ಹಳ್ಳಿಯಲ್ಲಿ ನಿಡುವ ಮದ್ದು ಪಾರ್ಶ್ವವಾಯು ಪಿದಿತರಿಗೆ ವರದಾನ. ಅದೆಷ್ಟೋ ಹಾವು-ಚೇಳು ಕಡಿತಗಳಿಗೆ ಹಳ್ಳಿಗಲ್ಲಿ ಮದ್ದುಗಳಿವೆ.

ಆದರೆ ನಮ್ಮ ಶಿಕ್ಷಣ ವ್ಯವಸ್ತೆಯಲ್ಲಿ ಒಂದು ದೊಡ್ಡ ದುರಂತವೇ ನಡೆದು ಹೋಗಿದೆ. ಅದು ಏನು? (ಇಲ್ಲಿದೆ ಓದಿ-http://epapervijayavani.in/Details.aspx?id=10503&boxid=142241281). ಶಿಕ್ಷಣದ ಉದ್ದೇಶ ಹಣದ ಸಂಪಾದನೆಯಾಯಿತೆ ಹೊರತು ನಿಜವಾದ ನಮ್ಮ ಸಂಸ್ಕೃತಿಯ  ಪುನರುಜ್ಜೀವನ ಆಗಲಿಲ್ಲ. ಅದಕ್ಕೆ ನಾವು ಪಶ್ಚಾತಾಪ ಪದಬಹುದೇ ಹೊರತು, ಧಿಕ್ಕನ್ನು ಬದಲಾಯಿಸಲು ಸಾಧ್ಯವಿಲ್ಲ. ಹೋಗಲಿ ಬಿಡಿ, ಅಂತು ಹಳ್ಳಿಯಿಂದ ಬೆಂಗಳೂರ್ ನಂತಹ ನಗರಗಳಿಗೆ ಬಂದಿದ್ದೇವೆ.

ಆದರೆ ಇಲ್ಲಿ ಹಳ್ಳಿತನ ಅಂದರೆ ಪೆದ್ದತನವೆಂದೆ ಅರ್ಥ ಕಲ್ಪಿಸುತ್ತಾರೆ. ಯಾವನಿಗೆ ಕಾಫಿ ಮಷೀನ್ ಆಪರೇಟ್ ಮಾಡಲು ಬರುವುದಿಲ್ಲವೋ, ಯಾವನಿಗೆ ಲಿಫ್ಟ್ ನಂಬರ್ ಗೊತ್ತಗುವುದಿಲ್ಲವೋ, ಯಾವನು ಇಡ್ಲಿಯನ್ನು ಸ್ಪೂನ್ ಬಳಸಿ ತಿನ್ನುವುದಿಲ್ಲವೋ, ಯಾವನು ಮಾತಾಡುವಾಗ ಇಂಗ್ಲಿಷ್ ಬಳಸುವುದಿಲ್ಲವೋ, ಯಾವನಿಗೆ ಪಿಜ್ಜಾ ಆರ್ಡರ್ ಮಾಡಲು ಬರುವುದಿಲ್ಲವೋ, ಯಾವನು ಪೆಪ್ಸಿ ಬೇಡ ಅನ್ನುತ್ತಾನೋ ಅವನೇ ಹಳ್ಳಿಯ ಪೆದ್ದ ಅನ್ನುತ್ತಾರೆ. ನಿಜವಾಗಿ ಹಳ್ಳಿಯ ಹುಡುಗ ಅದನ್ನೆಲ್ಲಾ ತಿಳಿದಿರಲೇ ಬೇಕಾ? ಮನುಷ್ಯ ಮಾಡಿದ ಮಷೀನ್ಗಳು ದಿನಕ್ಕೊಂದು ರೀತಿ ಬದಲಾಯಿಸುವಾಗ ಅವನೆಲ್ಲ ತಿಲಿದರಲೇ ಬೇಕು ಅನ್ನುವುದು ಶುದ್ಧ ತಪ್ಪು ಅಥವಾ ಇಂತ ಒಂದು ಮಷೀನ್ ಬಗ್ಗೆ ಗೊತ್ತೇ ಇಲ್ಲ ಎಂದು  ನನ್ನಂತ ಹಳ್ಳಿಯ ಹುಡುಗ, 'ಅಯ್ಯೋ ನನಗೆ ಗೊತ್ತಿಲ್ಲ ಅಲ್ವ' ಅಂತರಿಕವಾಗಿ ನೊಂದು ಕೊಳ್ಳಬೇಕಾದ ಅಗತ್ಯವಿದೆಯಾ? 

ಬೆಂಗಳೂರಿಗೆ ನಾನು ಮೊದಲು ಬಂದಾಗ ಬಹಳಷ್ಟು ವಿಷಯಗಳು ಗೊತ್ತಿರಲಿಲ್ಲ. ಬೇಸ್ಮೆಂಟ್ ಎಂಬ ಪದ  ಹೊಸದಾಗಿತ್ತು. ಆದರೆ ಗ್ರೌಂಡ್ ಫ್ಲೋರ್ ನ ಕೆಳಗಿನ ಫ್ಲೋರ್ ಗೆ ಬೇಸ್ ಮೆಂಟ್ ಎಂದು ಕರೆಯುತ್ತಾರೆ ಎಂದು ಸ್ವಲ್ಪ ಮಟ್ಟಿಗೆ ಅರಿವು ಇತ್ತು. ಆದರೆ ಅದೊಂದು ದಿನ ಬೇರೆ ಕಂಪನಿ ಬಿಲ್ಡಿಂಗ್ ಗೆ ಹೋದಾಗ, ಅಲ್ಲಿ ಅಪ್ಪೆರ್ ಬೇಸ್ಮೆಂಟ್, ಲೋವರ್ ಬೇಸ್ಮೆಂಟ್ ಎಂದಿತ್ತು. ಅಪ್ಪೆರ್ ಬೇಸ್ಮೆಂಟ್ ನಲ್ಲಿ ಕ್ಯಾಂಟೀನ್ ಇತ್ತು. ನನ್ನ ಪ್ರಕಾರ ಲೋವರ್ ಬಸ್ಮೆಂತ್ ಗ್ರೌಂಡ್ ಫ್ಲೋರ್ ನ  ಕೆಳಗೆ ಇದ್ದರೇ, ಅಪ್ಪರ್ ಬೇಸ್ಮೆಂಟ್ top most ಫ್ಲೋರ್ ಗಿಂತ ಮೇಲೆ ಇರಬೇಕು. ಹೀಗಾಗಿ ೧೦ ಅಂತಸ್ತಿನ  ಬಿಲ್ಡಿಂಗ್ ನ ೧೦ ನೆ ಫ್ಲೋರ್ ಗೆ ಹೋಗಿ ಅಪ್ಪರ್ ಬೇಸ್ಮೆಂಟ್ ಹುಡುಕಾಡಿದೆ. ಸಿಗಲಿಲ್ಲ; ಬ್ರೇಕ್ಫಾಸ್ಟ್ ಮಾಡಿರಲಿಲ್ಲ. ನನ್ನ ಹಳ್ಳಿತನ ಬಯಲಾದಿತು ಎಂದು ಕೇಳಲು ಸಾಧ್ಯವಾಗದೆ ಮನೆಗೆ ಬಂದು  ಗೆಳೆಯರಿಗೆ ಕೇಳಿದ್ದೆ.
ನನ್ನ ಹಾಗೆ, ಇಂಥ ತೊಳಲಾಟ ಬಳಷ್ಟು  ಗೆಳೆಯರು ಕೂಡ ಅನುಭವಿಸಿದ್ದರಂತೆ. ಆದರೆ ಹಾಗೆ ನಾಚಿಕೆಯಾಗಿ ಯಾರೊಂದಿಗೂ ಹೇಳಿಕೊಳ್ಳಲಿಲ್ಲ ಅಂತೆ!

ಆದರೆ ಅದೊಂದು ದಿನ, ಬೆಂಗಳೂರಿನ BMS  ಕಾಲೇಜಿನಲ್ಲಿ, 'ಹೊಸ ಕಾಲದ ವೈರುಧ್ಯಗಳು' ಎಂಬ ಚರ್ಚ ಗೋಷ್ಠಿಯಲ್ಲಿ, ಹರೀಶ್ ಹಂದೆಯವರು ಹಳ್ಳಿತನ ಅನ್ನುವುದು ಅಜ್ಞಾನವಲ್ಲ. ಅದು ಒಂದು ಬದುಕುವ ರೀತಿ.ಅಲ್ಲೂ ಮೌಲ್ಯಗಳಿವೆ ಎಂದಾಗ, ನನ್ನ ಮನಸ್ಸಿನಲ್ಲಿದ್ದ ಹಳ್ಳಿಯ ಎಂಬ ಪರದೆ ಹರಿದಿತ್ತು.

ಯಾರು ಏನು ಅನ್ನಲಿ, ಇಡ್ಲಿ ಬರಿಗೈಯಲ್ಲಿ ತಿನ್ನುತ್ತೇನೆ. ನೇರವಾಗಿ ಅಪ್ಪರ್ ಬೇಸ್ಮೆಂಟ್ ಯಾವುದು ಎಂದು ಕೇಳುತ್ತೇನೆ. ನನ್ನ ತನ ಹಳ್ಳಿತನ.