Saturday, December 28, 2013

ಮೂವತ್ತೈದರ (೩೫) ಹರೆಯ..!

ಸುಮ್ಮನೆ ಯಾವುದೊ ಲೇಖನ ಬರೆಯಲು ಸಾಧ್ಯವಾಗುವುದಿಲ್ಲ. ಯಾವುದೊ ಒಂದು ವಿಷಯ ಹೀಗೆ ಯಾಕೆ? ಎಂಬ ಪ್ರಶ್ನೆಗೆ  ಬಿದ್ದಾಗ, ಅದು ಕಾಡಿದಾಗ, ಅದು ಒಂದು ಚಿಂತನೆಯಾದಾಗ, ಅದನ್ನು ಯಾರಿಗಾದರೂ ಹೇಳಲೇ ಬೇಕು ಎಂಬ ಭಾವ ಮೂಡಿದಾಗ ಬರೆಯಲು ಆರಂಭಿಸುತ್ತೇನೆ. ನನಗೆ ಮದುವೆಯ ವ್ಯವಸ್ಥೆ, ಪುಸ್ತಕ -ಸಿನೆಮಾಗಳಿಂದ ನಾನು ತಿಳಿದುಕೊಂಡ ಸತ್ಯಕ್ಕೂ ಬಹಳ  ವ್ಯತ್ಯಾಸ ತಿಳಿದು ಈ  ಮದುವೆಯ ವಿಷಯ ಬಹಳ ಕುತೂಹಲಕಾರಿ ಅನಿಸಿದೆ.

ಸಾವಿರಾರು ಜನ ರಾಜಕೀಯದ ಕುರಿತಾಗಿ, ಸ್ಥಳಗಳ ಕುರಿತಾಗಿ, ನಿಸರ್ಗದ ಕುರಿತಾಗಿ, ವಿಜ್ಞಾನದ ಕುರಿತಾಗಿ ಬರೆಯುತ್ತಲೇ  ಇರುತ್ತಾರೆ. ಆದರೆ ನಮ್ಮ ನಮ್ಮೊಳಗೇ ಸೃಷ್ಟಿ ಮಾಡಿಕೊಂಡಿರುವ ನಿಯಮ ಹಾಗೂ ಪದ್ಧತಿಗಳ ಕುರಿತಾಗಿ ನಾವು ಮಾತನಾಡುವುದು ಅಪರೂಪ. ಯಾಕಂದರೆ ದೈನಂದಿನ ಬದುಕಿನಲ್ಲಿ ಹಾಸುಹೊಕ್ಕಾಗಿರುವ ವಿಷಯದ ಕುರಿತಾಗಿ ಬರೆಯುವುದೇನು ಉಳಿದಿದೆ ಎಂಬ ಭಾವ ಅಥವಾ ಅಂತದೊಂದು ಉದಾಸೀನತೆ  ಇರಬಹುದು. ಏನೇ ಇರಲಿ, ನಾನು ಮಾತ್ರ ಬರೆಯುವುದು ಇಂಥ ವಿಷಯದ ಕುರಿತಾಗಿ...ನೀವು ಓದಿ.

ಅವಳ ಆಫೀಸ್ ಮುಂದೆ ಇರುವ ಬೋರ್ಡ್ ಮೇಲೆ  ಹೀಗೆ ಬರೆದಿದೆ.
                                  Ms. Asha( BE,Mtech,MBA-HR).

ಅವಳು ಈಗ ಕೆಲಸ ಮಾಡುತ್ತಿರುವುದು, ಅತ್ಯಂತ ಶ್ರೇಷ್ಟ ಕಂಪನಿಯಲ್ಲಿ ಮ್ಯಾನೇಜರ್ ಕಮ್ CFO  ಎಂದು. ವೃತ್ತಿಯಲ್ಲಿ ಬಹಳ ಸಾಧಿಸಿದ ಹುಡುಗಿ. ಅವಳು ಇಷ್ಟು ಸಾಧಿಸಲು ಪಟ್ಟಿರುವ ಕಷ್ಟ  ಸಾಮನ್ಯವೇನು  ಅಲ್ಲ. ಅವಳು ಸಾಧಿಸಿರುವ ಡಿಗ್ರಿ, ಪೇಪರ್ ಗಳ ಲಿಸ್ಟ್ ಗೆ ಅವಳ ಹೆಸರ ಮುಂದೆ ಒಂದು website  ಬರೆದು ಅದರಲ್ಲಿ ಲಿಸ್ಟ್ ಮಾಡಬೇಕು ಹೊರತು ನೇರವಾಗಿ ಹೆಸರ ಮುಂದೆ ಜಾಗ ಸಾಲುವುದಿಲ್ಲ. ಓದುವುದರಲ್ಲಿ ಎತ್ತಿದ್ದ ಕೈ. ಸಾಧಿಸುತ್ತೇನೆ ಅನ್ನುವುದರಲ್ಲಿ ಪಳಗಿದ ಕಾನ್ಫಿಡೆನ್ಸ್. ಅವಳ ಕೈ ಕೆಳಗೆ ಕೆಲಸ ಮಾಡುತ್ತಿರುವ BE  graduate ಗಳಿಗಿಂತ ಹತ್ತು ಪಟ್ಟು  ಹೆಚ್ಚಿನ ಸಂಬಳ. ಅತ್ಯುತ್ತಮ ಕಾರಲ್ಲಿ ಬರುತ್ತಾಳೆ. ಅವಳಿಗೆ ಎಲ್ಲ ಫೆಸಿಲಿಟಿ ಇವೆ. ಅವಳಿಗೆ ಎಲ್ಲರು ತಲ್ಲೇ ತಗ್ಗಿ ನಿಲ್ಲುತ್ತಾರೆ. ಅವಳ ಸಾಧನೆಯ ದೃಷ್ಟಿಯಿಂದ, ಕೆಲಸದ ಕಂಪನಿಯಲ್ಲಿ ಅವಳಿಗೆ ಸರಿ ಸಮನಾರು ಯಾರು ಇಲ್ಲ. ಅವಳು ಬಿಡುತ್ತೇನೆ ಅಂದರೆ ಅದೇ ಕಂಪನಿ ಅವಳು ಹೇಳಿದ್ದನ್ನು ಕೊಟ್ಟು ಉಳಿಸಿ ಕೊಂಡೀತು..!  ತುಂಬಾ ಒಳ್ಳೆ ಹುಡುಗಿ. ಆಶಾ (ಮೂವತ್ತೈದು).(ನ್ಯೂಸ್ ಪೇಪರ್ ಗಳಲ್ಲಿ ಹೆಸರಿನ ಮುಂದೆ ವಯಸ್ಸನ್ನು ಈ ರೀತಿ ಬರೆಯುವುದನ್ನು ಗಮನಿಸಿರುತ್ತಿರಿ)

ಕೆಲಸಕ್ಕೆ ಸೇರಿ ಎರಡು  ವರ್ಷದ ತನಕ ಎಲ್ಲವು ಸರಿಯಾಗಿತ್ತು. ಅವಳ ಕೆಲಸ ಎಲ್ಲವು ಮೆಚ್ಚತಕ್ಕದೆ. ಆದರೆ ಇದ್ದಹಾಗೆ ಒಂದು ದಿನ ಕೆಲಸಕ್ಕೆ ಬೈ ಎಂದು ಹೇಳಿದ್ದಳು. ಅವಳು resignation  ಕೊಟ್ಟು ಹೋಗಿಲ್ಲ, ಬದಲಾಗಿ ರಜೆಯ ಮೇಲೆ. 

ಒಂದರ ಮೇಲೆ ಒಂದರಂತೆ ಸಾಧಿಸಿದ ಡಿಗ್ರಿ ಗಳು, ಸಾಧಿಸಿದ ಪ್ರೊಫೆಷನಲ್  ಗೆಲುವು ಎಲ್ಲವು ಅವಳ ಬದುಕಿನ್ನಲ್ಲಿ ಒಂದು ದಿನ ಕೈ ಕೊಟ್ಟಿತ್ತು. ಮನೆಗೆ ಹೋಗಿ, ಬೇಡ ರೂಂ ನ ಸಿಲಕ ಹಾಕಿ, ಬೆಳಗಿನ ಕಾಫ್ಫಿ ಕುಡಿಯದೆ ಅಂಗಾತ ಮಲಗಿ,
"ಮೂವತ್ತೈದು...!" ಎಂದು ಯೋಚಿಸುತ್ತ  ಕಣ್ಣೀರ ಹನಿಗಳೊಂದಿಗೆ, ಮನೆಯ ಸೀಲಿಂಗ್ ನೋಡುತ್ತಿದ್ದಳು. ಮೊವತೈದಕ್ಕೆ ಸಂಬಂಧ ಕೂಡಿ ಬರದು; ಎಪ್ಪತ್ತೈದಕ್ಕೆ ಬಾಲ್ಯ ಬರದು. ಕಳೆದು ಹೋಯಿತು ಸಂತೋಷ ಡಿಗ್ರಿಗಳ ಮಧ್ಯೆ..!

ಇದೆ ಅವಳ ಬದುಕಿನ ತಪ್ಪು.! ನಮ್ಮ ಶಿಕ್ಷಣ, ನಮ್ಮ ನೆರೆ-ಹೊರೆ ಎಲ್ಲರು ಹೇಳುವುದು ಬಹಳಷ್ಟು ಡಿಗ್ರಿ ಗಳು, ತುಂಬಾ ದೊಡ್ಡ ಸ್ಥಾನ ಮಾನ ಹೊರತು, ಯಾವುದನ್ನೂ, ಯಾವಾಗ, ಯಾರು, ಹೇಗೆ ಮಾಡಬೇಕು ಎಂದು ಯಾರು ಹೇಳುವುದಿಲ್ಲ. ಬಿಸಿ ರಕ್ತ ಇರುವಾಗ ಬಹಳ ಮಂದಿ ಇಂಥ ಶಿಕ್ಷಣ ನಮ್ಬಿಯೋ, ನೆರೆ ಹೊರೆಯವರನ್ನು ನಮ್ಬಿಯೋ, ಮತ್ತೊಬ್ಬರ ಜೊತೆ ತಮ್ಮನ್ನು ಹೋಲಿಸಿಯೋ ಅಥವಾ ಸಾಧಿಸಲೇ ಬೇಕು ಎಂಬ ಉತ್ಕಟ ಇಚ್ಛೆಯಿಂದಲೋ ತಮ್ಮ ಬದುಕಿನಲ್ಲಿ ಏನಾಗಬೇಕು, ತಮ್ಮ ಬದುಕಿನ ಸಂತೋಷಕ್ಕೆ ಏನು ಬೇಕು ಎಂದು ಯೋಚಿಸುವುದೇ ಇಲ್ಲ. ಈ ಪರಿಣಾಮವಾಗಿ ನಾಲ್ಕಾರು ಡಿಗ್ರಿ ಗಳಿದ್ದರು, ಎರಡೇ ವರ್ಷದಲ್ಲಿ ಆಶಾ ಇಸ್ ಫ್ಲಾಟ್. ನೋ ಮೊರೆ ವರ್ಕ್ !

ಅವಳ ದುಖದ  ಕಾರಣ- ಜೀವನೋದ್ದೇಶ ಮತ್ತು ಗುರಿಗಳ ಕುರಿತಾದ ಅಜ್ಞಾನ. ಗುರಿಗಳು(aim ) ಮತ್ತು ಉದ್ದೇಶ (purpose ) ಒಂದೇ ಅಲ್ಲ. ಇವುಗಲೆರಡನ್ನು ಒಂದೇ  ಎಂದು ಸಾಧಿಸಲು ಹೊರಟವರು ತಮ್ಮ ಜೀವನದಲ್ಲಿ ಏನನ್ನಾದರೂ ಕಳೆದು ಕೊಳ್ಳಲೆ ಬೇಕು ಅಥವಾ ಒಳ್ಳೆಯ  ಹಣೆಬರಹ ಹೊಂದಿರಬೇಕು. ನನ್ನ ಪ್ರಕಾರ, ಸಂತೋಷದ ಅತ್ಯುತ್ತಮ ಮಟ್ಟ  ಬದುಕಿರುವರೆಗೂ ಸಾಧಿಸುವುದೇ  ನನ್ನ ಉದೇಶ.ಆದರೆ ಗುರಿಗಳು  ಅವರವರ ಇಷ್ಟಕ್ಕೆ ಸರಿಯಾಗಿ ಇರುತ್ತವೆ. ಕೆಲವರಿಗೆ ಮ್ಯಾನೇಜರ್ ಆಗಬೇಕು, ಕೆಲವರಿಗೆ ಡಿಸೈನರ್ ಆಗಬೇಕು, ಕೆಲವರಿಗೆ  ಕಂಪನಿ ಕಟ್ಟಬೇಕು. ಹೀಗೆ ಇರುವುದು ತಪ್ಪಲ್ಲ.

ಆದರೆ ತಪ್ಪಾಗುವುದು ತಾನು ಸಂತೋಷವಾಗಿರಲು ಏನು ಬೇಕು ಎಂದು ಅರಿಯದೆ ಇರುವುದರಿಂದ. ಅದರಲ್ಲೂ ಪ್ರತಿಯೊಬ್ಬರ ಜೀವನದಲ್ಲಿ ತನ್ನದೇ ಅನ್ನುವ ವ್ಯಕ್ತಿಗತ ಸಂತೋಷದ ಕ್ಷಣಗಳಿರುತ್ತವೆ. ಅಂತಹ ಕ್ಷಣಗಳು ಆಯುಷ್ಯದ ಕ್ಷಣಗಳೊಂದಿಗೆ ಜೋಡಣೆಗೊಂಡಿರುತ್ತವೆ. ಬಾಲ್ಯ, ಕಾಲೇಜ್ ಜೀವನ, ಮದುವೆ, ದಾಂಪತ್ಯ, ಮಕ್ಕಳು...ಹೀಗೆ ಬದುಕಿನಲ್ಲಿ ಸರಿಯಾದ ಸಮಯದಲ್ಲಿ ಹಾದು ಹೋದಾಗಲೇ ಬದುಕಿನಲ್ಲಿ ಸಂತೋಷ ಸಾಧ್ಯ. ಒಮ್ಮೆ  ಇಂಥ ವಿಷಯಗಳು ನಮ್ಮಿಂದ ದೂರ ಸರಿದವು ಅಂದರೆ ಬಿಟ್ಟ ಬಾಣದಂತೆ .... ಮತ್ತೆ ಹಿಂತಿರುಗಿ ಬರಲಾರವು.

ಆಶಾ ಗುರಿಗಳನ್ನು ಸಾಧಿಸಿದ್ದಾಳೆ; ಉದೇಶ ಮರೆತಿದ್ದಳು. ಈಗ ಗುರಿಯ ನೆತ್ತಿಯನ್ನು ಏರಿದ ಮೇಲೆ ಉದೇಶ ವೇನೆಂದು ಪ್ರಶ್ನಿಸಿ ಕೊಂಡಿದ್ದಾಳೆ. ದು:ಖಿತಲಾಗಿದ್ದಾಳೆ. ಆದರೆ ದುಖ ಹೇಳಿಕೊಳ್ಳಲು ಗೆಳೆಯರಿಲ್ಲ;ಗೆಳತಿಯರಿಲ್ಲ;ತಂದೆ-ತಾಯಿಗೆ ಹೇಳಲಾಗುತ್ತಿಲ್ಲ. ಅವಳಿಗೆ ಈಗ ಕಾಣುತ್ತಿರುವುದು ಮುಟ್ಟಲಾಗದ ಆ ಮನೆಯ ಸೀಲಿಂಗ್ ಮಾತ್ರ.

ಅದೆಷ್ಟೋ ಸಮಸ್ಯೆಗಳು ನಾವು ಸಮಯಕ್ಕೆ ಸರಿಯಾಗಿ ಯೋಚಿಸುವುದರಿಂದ ಬಗೆಹರಿಸಲು ಸಾಧ್ಯವಿದೆ. ಸ್ಥಾನ, ಗೌರವ, ಅಧಿಕಾರ, ಹಣ ಇವುಗಳು  ಅಲ್ಪಾವಧಿಗೆ ಸಂತೋಷವನ್ನುಂಟು ಮಾಡುತ್ತವೆ. ಹೀಗಾಗಿ ಮನುಷ್ಯ ಜೀವನದ ಉದೇಶ ಖಂಡಿತ ಮರೆಯಬೇಡಿ.

Wednesday, December 25, 2013

ಅವನ್ಯಾಕೆ ಬದಲಾದ?

ಈ ಪ್ರಶ್ನೆ ನೀವು ಬಹಳ ಸಾರಿ ಕೇಳಿಯೇ ಇರುತ್ತೀರಿ. ಕೆಲವೊಮ್ಮೆ ನಿಮ್ಮ ಗೆಳೆಯ-ಗಳತಿ  ಅಥವಾ ಸಹಪಾಟಿ ನಿಮ್ಮ ಜೊತೆಯಲ್ಲಿದ್ದಾಗ ಚೆನ್ನಾಗಿಯೇ ಇದ್ದು ಯಾವುದೋ ಒಂದು ದಿನ ಅವನು/ಅವಳಲೊಂದು ಕನಿಷ್ಠ ಮಟ್ಟದ ಕೆಲಸದಲ್ಲಿ ನರಳಿದಾಗ ನೀವು ಹಿಗಿಯೇ ಹೇಳುತ್ತಿರಿ. "ಕಾಲೇಜ್ ನಲ್ಲಿ ಇದ್ದಾಗ ಅವನ ಫಿಲಾಸಫಿ ಚೆನ್ನಾಗಿಯೇ ಇತ್ತು..ಅವನು ಒಳ್ಳೆಯವನು ... ಹೀಗೆಲ್ಲಾ ಮಾಡಲು ಸಾಧ್ಯನೇ ಇಲ್ಲ ಅನ್ನುತ್ತಾ.." ನಿಮ್ಮ ಗೆಳೆಯನ ಕುರಿತಾಗಿ ಯಾರೋ ಕೀಳಾಗಿ ಪ್ರಶ್ನಿಸಿದರೆ  ಇದೆ ಉತ್ತರ.

ಹಾಗಿದ್ದರೆ ಮನುಷ್ಯ ಯಾವತ್ತು ಬದಲಾಗುವುದಿಲ್ಲವೇ? ಪ್ರತಿಕ್ಷಣದ ಅನುಭವು ಮನುಷ್ಯನ ಮನಸ್ಸಿನ ಮೇಲೆ, ಬದುಕುವ ರೀತಿಯ ಮೇಲೆ ಪ್ರಭಾವ ಬಿರಲಾರದೆ? ಅದಕ್ಕಾಗಿಯೆ ಅಲ್ಲವೇ ಮನೆಯಲ್ಲಿದ್ದಾಗ ಸಸ್ಯಹಾರಿಗಲಾದವರು  ಗೆಳೆಯರ ಮಧ್ಯೆ ಸಿಲುಕಿ  ಮಾಂಸಹಾರಿ ಕೂಡ ಆಗಿ ಬಿಡುತ್ತಾರೆ. ಮನೆಯಲ್ಲಿ ಅಪ್ಪ-ಅಮ್ಮ ಹಾಗೆ ಮಾಡಲಾರ ನಮ್ಮ ಮಗ ಅನ್ನುತ್ತಲೇ ಇರುತ್ತಾರೆ. ಆದರೆ ಮಗ ಬದಲಾವಣೆಗೆ ಗುರಿಯಾಗಿ, 'ಸ್ವಾಹ' ಅನ್ನುತ್ತಾನೆ. ಯಾವತ್ತು ನಾನು ಸ್ನಾನ ಮಾಡದೇ ತಿನ್ನಲಾರೆ ಅನ್ನುವರು ಕೂಡ, ಇಲ್ಲೊಂದು ಕಡೆ ಗೆಳೆಯರ ಮಧ್ಯದಲ್ಲಿ, "ಲೇ ಮಗನೆ, ತಿನ್ನಲೇ ನಾವೇನು ಸ್ನಾನ ಮಾಡಿದ್ದೇವಾ ?" ಎಂದು ಒತ್ತಡ ಹೇರಿದಾಗ, ಆಹಾರವನ್ನು ಮೊದಲು ಪ್ರಯಸದಾಯಕವಾಗಿ ಗಂಟಲೋಳಗಿರಿಸಿದ ಮಹನಿಯ ವರ್ಷವೊಂದು ಉರುಳಲು ಸ್ನಾನವೇ ಮರೆತು ತಿನ್ನಲು ಸಾಧ್ಯವಿದೆ. ಅಂದರೆ, ಮನೆಯಲಿ ಕಲಿಸಿದ ನೀತಿ, ಸಂಸ್ಕೃತಿ ಅಥವಾ ಬದುಕಿನ ಒಂದು ಫಿಲೋಸೋಪ್ಯ್ ಎಲ್ಲೊಂದೆಡೆ ಕಾಲ ಚಕ್ರದಲ್ಲಿ ಬದಲಾಗಲು ಸಾಧ್ಯವಿದೆ; ಆಗುತ್ತಲೇ ಇರುತ್ತದೆ.

ನಾನು ವರದಕ್ಷಿಣೆಯ ವಿರೋಧಿ. ಅದು ಸರಿಯಲ್ಲ ಎಂದು ಪ್ರಾಥಮಿಕ ಶಾಲೆಯಲ್ಲಿ ನನ್ನ ಗುರುಗಳು ಬರೆಸಿದ ನಿಬಂಧಗಳು  ಅಂತಹ ನಿಲುವು ನನ್ನ ಮನಸ್ಸಿನಲ್ಲಿ ಅಚ್ಚಳಿಯದಂತೆ ಮೂಡಿಸಿತ್ತು. ನಾನು, ಅದೆಷ್ಟೋ ಬಾರಿ ಗೆಳೆಯರ ಮಧ್ಯದಲ್ಲಿ ಮದುವೆಯ ಕುರಿತಾಗಿ ಮಾತನಾಡುವಾಗ, ಅಥವಾ ಯಾವುದೊ ಮದುವೆಗೆ  ಹೋದಾಗ ಗುಡ್ಡೆ ಹಾಕಿರುವ ವರದಕ್ಷಿಣೆಯ ರಾಶಿ ವಸ್ತುಗಳು, ಅಥವಾ ಇನ್ನಾರದೋ ಮಾವ ಕಾರು ಕೊಟ್ಟ, ಬಂಗಾರ ಕೊಟ್ಟ ಅಂದಾಗ ಅದೆಲ್ಲ ಸರಿಯಲ್ಲ ಎಂದು ನನ್ನ ವಿರೋಧಿ ನೀತಿಯನ್ನು ತೋರಿಸಿದ್ದು ಮಾತ್ರ ಅಲ್ಲ, ನಾನೊಬ್ಬ ಸಾಚಾ ಎನ್ನುವುದನ್ನು ತೋರಿಸಿದ್ದೆ. ಇಲ್ಲಿಯ ವರೆಗೂ ನಾನು ಸಾಚಾ ನೇ ಆಗಿದ್ದೆ. ಆದರೆ ಇನ್ನು ಸಾಚಾ ತನ ಒಳ್ಳೆಯದಲ್ಲ, ಅಂತ ಘನತೆಯ ಹಿಂದೆ ಕಹಿಯಾದ ಬೇವಿನ ರಸವಿದೆಯೆಂದು ಅರಿಕೆಯಾಗಿದೆ.

ಮದುವೆಗಾಗಿ ಹುಡುಗಿ ಹುಡುಕುತ್ತಿದ್ದೇನೆ  ಅನ್ನುವ ವಿಚಾರ ನಿಮಗೆ ಪ್ರತ್ಯೇಕವಾಗಿ ಹೇಳಲೇ ಬೇಕೆಂದೆನು ಇಲ್ಲ. ಅದು ವಯಸ್ಸಿನ ಸಹಜ ನಿಯಮ ಹಾಗೂ ನೀವು ಕೂಡ ಇಂತ ಕೆಲಸ ಕೆಲವರು  ಮಾಡಿರುತ್ತೀರಿ; ಕೆಲವರು ಮಾಡುತ್ತಲು ಇರಬಹುದು; ಇನ್ನು ಕೆಲವರು ಮಾಡುವವರು ಇರಬಹುದು.

ಕೆಲವು ತಿಂಗಳ ಹಿಂದೆ ಮೊದಲ ಹುಡುಗಿ ನೋಡಲು ಹೋದಾಗ, ನೇರವಾಗಿ ಭಾವಿ ಮಾವ ತನ್ನ ಏಕೈಕ ಕನ್ಯಾ ಮಣಿಯನ್ನು  ನೀಡಲು ಕಾತರನಾಗಿ, ವರದಕ್ಷಿಣೆಯ ಕುರಿತಾಗಿ ಮೊದಲ ದಿನವೇ ಪ್ರಶ್ನಿಸಲ್ಪಟ್ಟೆ. ಯಕ್ಷಗಾನದ ವೀರ ಬಬ್ರುವಾಹನ ಹಾಗೆ ಎದೆತಟ್ಟಿ, " ಭಾವಿ ಮಾವ, ಉಟ್ಟ ಬಟ್ಟೆಯಲ್ಲಿ ನಿನ್ನ ಮಗಳನ್ನು ಕರೆದುಕೊಂಡು  ಹೋಗುತ್ತೇನೆ. ನನ್ನ ಮನೆಯಲ್ಲಿ ವರದಕ್ಷಿಣೆ ಸರಿಯೆಂದು ನಾವು ಯಾರು ಭಾವಿಸುವುದಿಲ್ಲ. ಅದಕ್ಕಾಗಿ ಆ ವಿಷಯಕ್ಕೆ ತಿಲಾಂಜಲಿ ಇಟ್ಟರೆ ಒಳ್ಳೇದು" ಎಂದು  ಹೇಳುವುದರ ಮೂಲಕ, ನನ್ನ ಗುರುಗಳನ್ನು ಒಮ್ಮೆ  ನೆನೆದು ಆ ಮನೆಯಿಂದ ಹೊರಬಂದೆ.

 ಆದರೆ, ಕೆಲವು ದಿನಗಳು ಕಳೆದ ಮೇಲೆ, ಈ ಮದುವೆಯ ಸಂಬಂಧದ ಏರ್ಪಡಿಸಿದ ಅವರ ಸಂಬಂಧಿ, " ನೀವು ಯಾಕೆ  ವರದಕ್ಷಿಣೆ ಬೇಡ ಅಂದಿದ್ದಿರಿ, ಅಂತಾ ಅವರು  ವಿಚಾರ ಮಾಡ್ತಾ ಇದ್ದಾರೆ, ಅವರ ಮನಸ್ಸಿನಲ್ಲಿ ಹುಡುಗ ಏನೋ ಸರಿಯಲ್ಲ ಅದಕ್ಕೆ ವರದಕ್ಷಿಣೆ ಬೇಡ ಅಂತ ಇದ್ದಾನೆ ಅಂತ, ಅವರು ನನ್ನ  ಜೊತೆ  ಒಮ್ಮೆ ಹೇಳಿದರು. ನೀವು ಈಗ, ನಿಮ್ಮ ತಂದೆ ತಾಯಿ ಮೂಲಕ ವರದಕ್ಷಿಣೆಗೆ ಬೇಡಿಕೆ ಇಟ್ಟರೆ, ಈ ಮದುವೆ ಮುಂದುವರಿಯಬಹುದು. ಇಲ್ಲ ಅಂದರೆ  ಅವರು ಸಂದೇಹ ಬಗೆಹರಿಸಿಕೊಂಡು ನಿಮಗೆ ಹುಡುಗಿ ಕೊಡ್ತಾರೆ ಅಂತ ಅನ್ಸ್ತಾ ಇಲ್ಲ...ನೀವು ಎನ್ಮಾಡ್ತಿರಾ?"
"ನಮಗೆ ಇಷ್ಟ ಇಲ್ಲ ಅಂತ ಹೇಳಿ" ಎಂದು ಸಂಬಂಧ ಕಡಿದುಕೊಂಡು  ಸುಮ್ಮನಾದೆ.

ಇನ್ನೊಂದು ಸಂಬಂಧ.... ಮನೆಗೆ ಕರೆದರು. ಮನೆಯ ಮಂದಿ ನೆರದಿದ್ದರು. " ಮತ್ತೆ ಏನು ಹೇಳ್ತಿರ ವೆಂಕಟ್, ನೋಡಿ ಇಷ್ಟು ದೂರ ಸಣ್ಣ ಸಣ್ಣ ವಿಷಯಕ್ಕೆ ಮತ್ತೆ ನಿಮ್ಮ ಕರೆಸುದು ಅಂದ್ರೆ ಕಷ್ಟ. ಅದಕ್ಕೆ ನೀವು ಬೇಸರ ಇಲ್ಲ ಅಂದರೆ, ನೀವು ಮದುವೆ ಬಗ್ಗೆ ಡೀಟೇಲ್ ಆಗಿ ಮಾತನಾಡಬಹುದು... ಅಂದರೆ  ವರದಕ್ಷಿಣೆ ಎಷ್ಟು ಬೇಕು? ನಿಮ್ಮ ಮನೆ ಕಡೆಯಿಂದ ಯಾರು ಮಾತನಾಡುತ್ತಾರೆ".  ನಾನು ಮತ್ತೆ ಹಳೆಯ ರಾಗದಲ್ಲಿ, " ಅಂಕಲ್ ನಮ್ಮ ಮನೆಯಿಂದ ತಂದೆ-ತಾಯಿ ಮಾತನಾಡ್ತಾರೆ. ಮನೆಗೆ ಹೋಗಿ ವಿಷಯ ಹೇಳಿದ ಮೇಲೆ ಎಲ್ಲವನ್ನು ಮಾತನಾಡೋಣ. ಆದರೆ ವರದಕ್ಷಿಣೆ ವಿಷಯದಲ್ಲಿ ನನ್ನ ನಿರ್ಧಾರವೇ ಅಂತಿಮ. ನನಗೆ  ವರದಕ್ಷಿಣೆ ಖಂಡಿತ ಬೇಡ. ಇದರಲ್ಲಿ ತಂದೆ-ತಾಯಿಗೆ ಕೇಳುವುದು ಏನು ಇಲ್ಲ" ಎಂದು ಹೇಳಿ, ಹುಡುಗಿಯೋನ್ನೊಮ್ಮೆ ಒರೆ ದೃಷ್ಟಿಯಿಂದ ನೋಡಿ ಮನೆಯಿಂದ ಹೊರಬಂದೆ.

 ಇನ್ನು ಮನೆಯನ್ನು ತಲುಪುವಾಗಲೇ, ನನ್ನ ಮೊಬೈಲ್ ಗೆ ಒಂದಿಷ್ಟು  sms ಗಳು ಬಂದವು. ಆ ಮಸೇಜ್  ಮಾಡಿದವರು ಮತ್ತಾರು ಅಲ್ಲ, ನಾನು ನೋಡಿ ಬಂದ ಹುಡುಗಿ. ತನ್ನ ಹೆಸರನ್ನು ಹೇಳಿ, ನಿಮ್ಮ ಜೊತೆ ಮಾತನಾಡಬಹುದ ಎಂದು ಕೇಳಿದ್ದಳು. ನಾನು ಕಾಲ್ ಮಾಡಿಬಿಟ್ಟೆ. " ಹೇಯ್, ಪ್ಲೀಸ್ ನಾನು ಕಾಲ್ ಮಾಡಿದ್ದೇನೆ ಅಂತ ಅಮ್ಮಗೆ ಹೇಳ್ಬೇಡಿ. ಅವರ ಮೊಬೈಲ್ ನಿಂದ ನಿಮ್ಮ ನಂಬರ್ ತಕೊಂಡೆ. ನೀವೇನು ಚೆನ್ನಾಗಿದ್ದೀರಾ..! ನಾನು ನಿಮಗೊಂದು ಪ್ರಶ್ನೆ ಕೇಳಲಾ?" ಎಂದು ತವಕಿಸಿ ಮಾತನಾಡಿದ್ದಳು. ನಾನು ಭಾವಪರವಸನಾಗಿಯೇ ಇದ್ದೆ. "ನೀವು ಇಂಜಿನಿಯರ್ ಓದ್ದಿದ್ದಿರಿ ಅಂತಿರಲ್ಲ... ಹಾಗಿದ್ದು ಯಾಕ್ರೀ ವರದಕ್ಷಿಣೆ ಬೇಡ ಅಂತ ಹೇಳಿ ಬಿಟ್ರಿ?. ನನಗೆ ಈ ನಿಮ್ಮ ಮಾತು ಸರಿಯನಿಸಲಿಲ್ಲ. ನಾಳೆ ಮದುವೆಯಾಗಿ ಬರುವಳು ನಾನು ತಾನೇ? ನೀವು ಇಷ್ಟು ಹೇಳಿದಕ್ಕೆ ಅಪ್ಪ-ಅಮ್ಮ ಕುಷಿಯಾಗಿದ್ದಾರೆ. ಅವರು ನನ್ನ ಅಕ್ಕನಿಗೆ ಕಾರು-ಚಿನ್ನ ಕೊಟ್ಟಿದ್ದಾರೆ. ನೀವು ಬೇಡ ಅಂದರೆ ನಮಗೆ ಏನು ಕೊಡಲ್ಲ ಗೊತ್ತ? 'atleast  ನಿಮ್ಮ ಇಷ್ಟ' ಅಂತ ಹೇಳುವ ಮನಸ್ಸು ಕೂಡ ನಿಮಗೆ ಅಗಿಲ್ಲಿಲ್ವಾ? ". ಭಯಾನಕ ಅನಿಸಿತ್ತು;ಅವಳು ನನ್ನ ತರಾಟೆಗೆ ತೆಗೆದು ಕೊಂಡಿದ್ದಳು; ಮನಸ್ಸಿನ ಭಾವ ಜಾರಿತ್ತು. ಅವಳಿಗೆ ಹೇಳಿದ್ದು ಒಂದೇ ಉತ್ತರ... " ಮದುವೆಯ ಮುನ್ನ ಎಲ್ಲವು ನನ್ನ ನಿರ್ಧಾರ... ನಿನ್ನ ವಿಚಾರಕ್ಕೆ ನನ್ನಿಂದ ಉತ್ತರ ಇಲ್ಲ. ಆದರೆ ನಿನ್ನ ಅಪ್ಪ-ಅಮ್ಮನ ಬಗ್ಗೆ ನೀನೆ ಯೋಚಿಸ ಬೇಕು ಹೊರತು, ನಾನು ಏನು ಹೇಳಲು ಸಾಧ್ಯವಿಲ್ಲ" ಅಂದೆ. " ಹಾಗಲ್ಲರಿ... ನಾಳೆ ಮದ್ವೇಯಾದ್ರೆ ಖರ್ಚುಗಳು ಬಹಳ ಇರ್ತವಲ್ರಿ... ಸಿಗುದನ್ನು ಯಾಕೆ ಬಿಡ್ತಿರಿ" ಎಂದು ನನ್ನ ಸಮಾಧಾನಿಸಿದ್ದಳು. ಅವಳಿಗಾಗಿ ಕೊನೆಗೆ, "ನಿಮ್ಮ ಮಗಳಿಗೆ ಏನು ಬೇಕು ಅವಳಿಗೆ ಕೊಡಿ ...ನನಗಂತೂ ಏನು ಬೇಡ' ಎಂದು ಅವಳ ತಂದೆ ತಾಯಿಗೆ ನಾನು ಹೇಳುವಂತ ನಿರ್ಧಾರಕ್ಕೆ ನಾವಿಬ್ಬರು, ನೋಡಿದ ೬ ಗಂಟೆಯೊಳಗೆ, ಇಂತ ಒಪ್ಪಂದ ಮಾಡಿಕೊಂಡಿದ್ದೆವು. ಆದರೆ ಗ್ರಹಗಳು ಕೈ ಕೊಟ್ಟಿದ್ದರಿಂದ, ಒಪ್ಪಂದದೊಂದಿಗೆ ಮದುವೆಯು ಮುರಿದುಹೋಯಿತು. ನನ್ನ ವರದಕ್ಷಿಣೆ  ರಹಿತ ಮದುವೆಯ ನನ್ನ ವಿಚಾರದ originality  ಹಾಗೂ variginality ಎರಡು ಉಳಿಸಿಕೊಂಡು ಬಂದೆ.

ಇನ್ನು ಸಾಚಾತನ ಬೇಕಾ ? ವರದಕ್ಷಿಣೆ ಯಾಕೆ ಬೇಕು ? ಬೇಡ ಅನ್ನುದು ಅಷ್ಟು ಸುಲಭನಾ? ಯೋಚನೆಯಲಿರುವಾಗ ಇರುವಾಗಲೇ ಇನ್ನೊಂದು ಘಟನೆ ನನ್ನ ಹೃದಯ ಕಲುಕಿತು.

ಮೂರನೆ ಸಂಬಂಧ: ಅದು ನನ್ನ ಪರಿಚಯದವರೊಬ್ಬರು ಕುದಿರಿಸಿದ ಸಂಬಂಧ. ನನ್ನ ಬೇಡಿಕೆಯ ಮೇರೆಗೆ ಹುಡುಗಿಯ ಅಣ್ಣ ನನಗೆ ಕೆಲವು ಫೋಟೋ ಗಳನ್ನೂ ನನಗೆ ಇಮೇಲ್ ಮಾಡಿದ್ದರು. ಮೊದಲು ಆ ಫೋಟೋಗಳು ಹುಡುಗಿಯ ಇಮೇಲ್ ನಿಂದ ಅಣ್ಣನ ಇಮೇಲ್ ಗೆ ಬಂದಿದ್ದವು. ಅಣ್ಣ ಇಮೇಲ್ ಗೆ ರಿಪ್ಲೈ ಆಲ್ ಮಾಡಿ ನನ್ನ ಇಮೇಲ್ ಸೇರಿಸಿದ್ದ ರಿಂದ  ಹುಡುಗಿಯ ಇಮೇಲ್ ಅದರಲ್ಲಿ ಸೇರಿಕೊಂಡಿತ್ತು. ನಾನು ರಿಪ್ಲೈ ಮಾಡಿ, ಥ್ಯಾಂಕ್ಸ್ ಎಂದು ಕೆಳಗೆ ಮೊಬೈಲ್ ನಂಬರ್ ಸೇರಿಸಿದ್ದೆ. ಇದರಿಂದಾಗಿ ಹುಡುಗಿಗೂ ನನ್ನ  ಮೊಬೈಲ್ ನಂಬರ್ ಹೋಗಿತ್ತು.

ಈ ಸಂಬಂಧದ ಕುರಿತಂತೆ ಅಣ್ಣ, ಅಣ್ಣ ಜೊತೆಯಲ್ಲಿ ಮಾತುಕತೆಗಿಳಿದು, ಯಾವಾಗ ಬರುತ್ತಿರ?, ಎಲ್ಲಿ? ಅಂತೆಲ್ಲ ನಿರ್ಧಾರ ಮಾಡುವ ವಿಷಯದ ಕುರಿತಾಗಿ ಹೇಳುತ್ತಿದ್ದ. ಅದನ್ನೆಲ್ಲಾ ಕೇಳುತ್ತಲಿದ್ದ  ಹುಡುಗಿ ಮರುದಿನ ನನಗೆ ಮಾತನಾಡಬೇಕು ಎಂದು  msg  ಮಾಡಿದ್ದಳು. ಅಗಾ ಅವಳು ಹೇಳಿದ್ದೇನು ಗೊತ್ತೇ?
"ನೀವು ನನ್ನ ನೋಡಲಿಕ್ಕೆ ಬರುತ್ತಿರಂತೆ. ಅಣ್ಣ ನಿಮ್ಮ ಜೊತೆ ಮಾತನಾಡುತ್ತಿರುವುದು ನಾನು ಕೇಳಿದ್ದೇನೆ. ಆದರೆ ಒಂದು ವಿಷಯ. ನೀವು ಇಂಜಿನಿಯರ್ ಅಂತೆ. ನೀವು ವರದಕ್ಷಿಣೆ ಕೇಳಿಯೇ ಕೆಳುತ್ತಿರಿ.! ಆದರೆ ನಾನು ಪೂರ್ ಗರ್ಲ್. ನನಗೆ ತಂದೆ ಇಲ್ಲ. ನೀವು ವರದಕ್ಷಿಣೆ ಕೆಳುದೇ ಆದರೆ ಬರುದೆ ಬೇಡ...ನನ್ನ ಮದುವೆಗಾಗಿ ನನ್ನ ಅಣ್ಣ-ಅಮ್ಮ ಏನು ಬೇಕಾದ್ರೂ ಮಾಡಬಹುದು ಆದರೆ ನನಗೆ ಇಷ್ಟ ಇಲ್ಲ" ಎಂದು ಹೇಳುತ್ತಾ ಸಾಗಿದ ಹುಡುಗಿಗೆ ನಾನು ಮಾತನಾಡಲು ಸಾಧ್ಯವೇ ಇರಲಿಲ್ಲ. ಕೊನೆಗೂ," ನಾನು ವರದಕ್ಷಿಣೆಯ ಕುರಿತಾಗಿ  ಏನು ಹೇಳಿಯೇ ಇಲ್ಲ.. ನೀವು  ಯಾಕೆ ಇದನೆಲ್ಲ ಹೇಳುತ್ತಿರಿ? " ಎಂದು ಕೇಳಿದಾಗ, ಹುಡುಗಿ ಗದ್ಗದಿತಲಾಗಿದ್ದಳು... " ಹಿಂದೆ ನನಗೆ ಇಂಜಿನಿಯರ್ ಪ್ರಪೋಸಲ್ ಬಂದಿತ್ತು. ಇಷ್ಟವು ಆಗಿತ್ತು. ಆದರೆ ಮದುವೆ ಆಗುವ ಲೆವೆಲ್ ಗೆ ಬಂದಾಗ ಬಹಳ ದೊವ್ರಿ ಕೇಳಿದ್ರು. ನಮ್ಮ ಅಮ್ಮ ಮನೆ ಮಾರೋಣ ಅಂದು ಹೇಳಿದ್ರು... ನಾನು ಆ ಮದುವೆ ಬೇಡ ಅಂತ ಹೇಳಿದೆ".

ನನ್ನ ಹೃದಯದಲ್ಲಿ ರಕ್ತವೇ ನಿಂತತೆ ಆಯಿತು. ಹುಡುಗಿಯೊಬ್ಬಳು ಒಂದು ಮನೆಯನ್ನು ಕಟ್ಟಲು ಇನ್ನೊಂದು ಮನೆಯನ್ನು ವಿನಾಶಕ್ಕೆ ತಳ್ಳಬೇಕಾದ ಪರಿಸ್ಥಿತಿ ಸಮಾಜವೇ ನಿರ್ಮಿಸುತ್ತದೆ.

ಯಾವುದು ಸರಿ? ವರದಕ್ಷಿಣೆ ಹುಡುಗನ ಆರೋಗ್ಯದ  ಸಂಕೇತವೇ? ವರದಕ್ಷಿಣೆ ಹೆಂಡತಿಯೆಂಬ ಜೀವಿ ಬಂದಾಗ ಆಗಬಹುದಾದ ಖರ್ಚುಗಳಿಗೆ ಕೊಡುವ ಬಾಬತ್ತೆ ? ಇಲ್ಲ ಬಡ ಹೆಣ್ಣು ಮಕ್ಕಳ ಕಣ್ಣಿರೆ ? ಕಾನೂನು ಹೇಗೆ ಇದ್ದರು, ಮನುಷ್ಯನ ಸಮಾಜದ ರೀತಿ-ನೀತಿಗಳೇ ಸಮಾಜವನ್ನು ಆಳುತ್ತವೆ. ನಾನು ಇದೆ ಸಮಾಜಕ್ಕೆ ಒಳಪಟ್ಟವನು. ನನಗೂ ವರದಕ್ಷಿಣೆ ಬೇಕು. ನಾಳೆ ನನ್ನ ಬೆಲೆ ಎಷ್ಟು ಅಂತ ebay ಯಲ್ಲಿ ನೋಡಬಹುದು..! ಯಾಕಂದ್ರೆ, ನಾನು ಈ ಘಟನೆಗಳಿಂದಾಗಿ ಬದಲಾಗಿದ್ದೇನೆ.

ಛೆ...ಈ ಬದುಕೇ..!

Saturday, December 21, 2013

ಹಳ್ಳಿ ಹುಡುಗ

ಹಳ್ಳಿ ಹುಡುಗ.
     ನೀವು ಯಾವತ್ತಾದರೂ, 'ಲೇ ಹಳ್ಳಿ  ಹೈದ' ಅಂತ ಬೈದಿದ್ದಿರಾ? ಅಥವಾ ಹಿಗಂತಾನು ಜನ ಬೈತಾರೆ ಅಂತ ನಿಮಗೆ ಗೊತ್ತು ತಾನೇ? ಹೌದು, ನಾವು ಬಯ್ಯುವ ಶಬ್ಧಗಳಲ್ಲಿ ಹಳ್ಳಿ ಎಂಬ ಶಬ್ದ ಸೇರಿಸಿ ಬಯ್ಯುವದರ ಹಿಂದೆ ಹಳ್ಳಿಯ ಕುರಿತಾಗಿ, ಹಳ್ಳಿಯ ಜನರ ಕುರಿತಾಗಿ ಇರುವ ಕೀಳು ಭಾವನೆ ಎತ್ತಿ ತೋರಿಸುತ್ತದೆ. ಹಳ್ಳಿಯ ಬಗ್ಗೆ, ಹಳ್ಳಿತನ ಬಗ್ಗೆ ಯಾಕೆ ನಮಗೆ ಅಷ್ಟೊಂದು ಆಕ್ರೋಶ?

ನಾನು ಹಳ್ಳಿಯ ಹುಡುಗ. ಯಾವ ಊರಲ್ಲಿ ರಸ್ತೆ ಇರಲಿಲ್ಲ;ವಿದ್ಯುತ ಇರಲಿಲ್ಲ; ಅಲ್ಲಿಂದ ಬಂದವನು.ಎಲ್ಲರ ಮಧ್ಯದಲ್ಲಿ ನಿಂತಾಗ ಡಿಗ್ರಿ ಯಿಂದ ಇಂಜಿನಿಯರ್ ಅದರೂ, ಬದುಕುತ್ತಿರುವುದು  ಬೃಹತ್ ನಗರದಲ್ಲಾದರು ನನ್ನ ಮನಸ್ಸಿನಲ್ಲಿ ಅಚ್ಚು ಹಾಕಿದಂತ 'ಹಳ್ಳಿತನ' ಬಿಡಲು ಮನಸಾಗುವುದಿಲ್ಲ. ಹಳ್ಳಿತನ ಬಿಟ್ಟು ಹೊರಬಂದು ನಗರದ ಬದುಕಿನೊಂದಿಗೆ ನಾನು ಸೇರಿದ್ದೇನೆ ಎಂದು ತೋರಿಸಿಕೊಳ್ಳಲು ಬಹಳ ಪ್ರಯತ್ನ ಮಾಡಿದ ಮೇಲೆ, ಕೆಲವೊಮ್ಮೆ ನಾನು ಎಲ್ಲೋ ನನ್ನ ಪೂರ್ವ ಪರ ಕಳೆದು 'ನಾನು', 'ನನ್ನದು' ಎಂಬ ಐಡೆಂಟಿಟಿ ಕಳೆದು ಕೊಳ್ಳುತ್ತಿದ್ದೇನೆ ಅನಿಸುತಿತ್ತು.ಆದರೆ ಅದಕ್ಕೊಂದು ದಿನ ಉತ್ತರವೂ ಸಿಕ್ಕಿದೆ.

'ಹಳ್ಳಿತನ' ಎನ್ನುದು ಒಂದು ಕೆಟ್ಟ ನಡತೆಯಲ್ಲ;ಅದು ಅಜ್ಞಾನದ ಸಂಕೇತ ಅಲ್ಲ; ಅದು ನಿಸರ್ಗದ ಜೊತೆಯಲ್ಲಿ ಬದುಕುವ ಪರಿ. ಹಳ್ಳಿಯ ಜನತೆಗೆ ಏನಿಲ್ಲ ಅಂದರು ನಿಸರ್ಗದ ಕುರಿತಾಗಿ ಬಹಳ ತಿಳುವಳಿಕೆ ಇರುತ್ತದೆ. ವೈಜ್ಞಾನಿಕವಾಗಿ ಹವಾಮಾನ ವರದಿ ನಿಡುವ ನಮ್ಮ ಹವಾಮಾನ ಇಲಾಖೆಗಿಂತ ಅದೆಷ್ಟೋ ಬಾರಿ ಹಳ್ಳಿಯ ಜನ ಯಾವುದೊ ಮರದ ಎಲೆಗಳನ್ನು, ಕಾಯಿಗಳ ಸಂಖೆಯನ್ನು ನೋಡಿ ಹೇಳುವ ಮಳೆಯ ವರದಿ  ಅದೆಷ್ಟೋ ನಿಖರವಾಗಿರುತ್ತದೆ. ಬೆಂಗಳೂರಿನಲ್ಲಿ ಕನ್ನಡ ಕಾವಲು ಸಮಿತಿಗಳು(ಕನ್ನಡ ಪರಿಷತ್ ನಂತಹ ಸಂಸ್ಥೆಗಳು) ಸಾವಿರಾರು ಇವೆ. ಆದರೆ ಹಳ್ಳಿಗಳಲ್ಲಿ ಕನ್ನಡ ಭಾಷೆಯನ್ನೂ, ಅದರ ಜನಪದ ಕಲೆಯನ್ನು ಉಳಿಸಿಕೊಂಡು ಬರುತ್ತಿರುದು ಹಳ್ಳಿಯ ಮುಗ್ದ ಮನಸ್ಸುಗಲಿಂದಲೇ.( ಕನ್ನಡದ ನಟ-ನಟಿಯರ ಬಗ್ಗೆ ನನಗಂತೂ ಅದೆಷ್ಟೋ ನೋವು ಇದೆ. ಕನ್ನಡ  ಭಾಷೆಯನ್ನೂ ತಮ್ಮ ದುಡ್ಡಿನ ಮೂಲವಾಗಿಸಿ ಕೊಂಡಿರುವ ಇವರಿಗೆ, TV  ಕ್ಯಾಮೆರಾದ ಮುಂದೆ ಮಾತ್ರ ಇಂಗ್ಲೆಂಡ್ ನಿಂದ ಎರವಲು ಪಡೆದ ಜೆವಿಗಳಂತೆ ವರ್ತಿಸುತ್ತಾರೆ.). ಹಳ್ಳಿಗರ ಇನ್ನೊಂದು ವಿಶೇಷ ಅಂದರೆ ನಿಸರ್ಗದತ್ತವದ ಗಿಡಮೂಲಿಕೆಗಳು. ಬಹಳಷ್ಟು ರೋಗಗಳಿಗೆ ಆಸ್ಪತ್ರೆಗಳಲ್ಲಿ ಸಿಗಲಾರದ ಮದ್ದುಗಳು ಹಳ್ಳಿಗಳಲ್ಲಿ ಸಿಗುತ್ತಿವೆ. ಉದಾಹರಣೆಗೆ ಅಂಕೋಲದ ಬೆಲಾಂಬರ್ ಅಂತ ಹಳ್ಳಿಯಲ್ಲಿ ನಿಡುವ ಮದ್ದು ಪಾರ್ಶ್ವವಾಯು ಪಿದಿತರಿಗೆ ವರದಾನ. ಅದೆಷ್ಟೋ ಹಾವು-ಚೇಳು ಕಡಿತಗಳಿಗೆ ಹಳ್ಳಿಗಲ್ಲಿ ಮದ್ದುಗಳಿವೆ.

ಆದರೆ ನಮ್ಮ ಶಿಕ್ಷಣ ವ್ಯವಸ್ತೆಯಲ್ಲಿ ಒಂದು ದೊಡ್ಡ ದುರಂತವೇ ನಡೆದು ಹೋಗಿದೆ. ಅದು ಏನು? (ಇಲ್ಲಿದೆ ಓದಿ-http://epapervijayavani.in/Details.aspx?id=10503&boxid=142241281). ಶಿಕ್ಷಣದ ಉದ್ದೇಶ ಹಣದ ಸಂಪಾದನೆಯಾಯಿತೆ ಹೊರತು ನಿಜವಾದ ನಮ್ಮ ಸಂಸ್ಕೃತಿಯ  ಪುನರುಜ್ಜೀವನ ಆಗಲಿಲ್ಲ. ಅದಕ್ಕೆ ನಾವು ಪಶ್ಚಾತಾಪ ಪದಬಹುದೇ ಹೊರತು, ಧಿಕ್ಕನ್ನು ಬದಲಾಯಿಸಲು ಸಾಧ್ಯವಿಲ್ಲ. ಹೋಗಲಿ ಬಿಡಿ, ಅಂತು ಹಳ್ಳಿಯಿಂದ ಬೆಂಗಳೂರ್ ನಂತಹ ನಗರಗಳಿಗೆ ಬಂದಿದ್ದೇವೆ.

ಆದರೆ ಇಲ್ಲಿ ಹಳ್ಳಿತನ ಅಂದರೆ ಪೆದ್ದತನವೆಂದೆ ಅರ್ಥ ಕಲ್ಪಿಸುತ್ತಾರೆ. ಯಾವನಿಗೆ ಕಾಫಿ ಮಷೀನ್ ಆಪರೇಟ್ ಮಾಡಲು ಬರುವುದಿಲ್ಲವೋ, ಯಾವನಿಗೆ ಲಿಫ್ಟ್ ನಂಬರ್ ಗೊತ್ತಗುವುದಿಲ್ಲವೋ, ಯಾವನು ಇಡ್ಲಿಯನ್ನು ಸ್ಪೂನ್ ಬಳಸಿ ತಿನ್ನುವುದಿಲ್ಲವೋ, ಯಾವನು ಮಾತಾಡುವಾಗ ಇಂಗ್ಲಿಷ್ ಬಳಸುವುದಿಲ್ಲವೋ, ಯಾವನಿಗೆ ಪಿಜ್ಜಾ ಆರ್ಡರ್ ಮಾಡಲು ಬರುವುದಿಲ್ಲವೋ, ಯಾವನು ಪೆಪ್ಸಿ ಬೇಡ ಅನ್ನುತ್ತಾನೋ ಅವನೇ ಹಳ್ಳಿಯ ಪೆದ್ದ ಅನ್ನುತ್ತಾರೆ. ನಿಜವಾಗಿ ಹಳ್ಳಿಯ ಹುಡುಗ ಅದನ್ನೆಲ್ಲಾ ತಿಳಿದಿರಲೇ ಬೇಕಾ? ಮನುಷ್ಯ ಮಾಡಿದ ಮಷೀನ್ಗಳು ದಿನಕ್ಕೊಂದು ರೀತಿ ಬದಲಾಯಿಸುವಾಗ ಅವನೆಲ್ಲ ತಿಲಿದರಲೇ ಬೇಕು ಅನ್ನುವುದು ಶುದ್ಧ ತಪ್ಪು ಅಥವಾ ಇಂತ ಒಂದು ಮಷೀನ್ ಬಗ್ಗೆ ಗೊತ್ತೇ ಇಲ್ಲ ಎಂದು  ನನ್ನಂತ ಹಳ್ಳಿಯ ಹುಡುಗ, 'ಅಯ್ಯೋ ನನಗೆ ಗೊತ್ತಿಲ್ಲ ಅಲ್ವ' ಅಂತರಿಕವಾಗಿ ನೊಂದು ಕೊಳ್ಳಬೇಕಾದ ಅಗತ್ಯವಿದೆಯಾ? 

ಬೆಂಗಳೂರಿಗೆ ನಾನು ಮೊದಲು ಬಂದಾಗ ಬಹಳಷ್ಟು ವಿಷಯಗಳು ಗೊತ್ತಿರಲಿಲ್ಲ. ಬೇಸ್ಮೆಂಟ್ ಎಂಬ ಪದ  ಹೊಸದಾಗಿತ್ತು. ಆದರೆ ಗ್ರೌಂಡ್ ಫ್ಲೋರ್ ನ ಕೆಳಗಿನ ಫ್ಲೋರ್ ಗೆ ಬೇಸ್ ಮೆಂಟ್ ಎಂದು ಕರೆಯುತ್ತಾರೆ ಎಂದು ಸ್ವಲ್ಪ ಮಟ್ಟಿಗೆ ಅರಿವು ಇತ್ತು. ಆದರೆ ಅದೊಂದು ದಿನ ಬೇರೆ ಕಂಪನಿ ಬಿಲ್ಡಿಂಗ್ ಗೆ ಹೋದಾಗ, ಅಲ್ಲಿ ಅಪ್ಪೆರ್ ಬೇಸ್ಮೆಂಟ್, ಲೋವರ್ ಬೇಸ್ಮೆಂಟ್ ಎಂದಿತ್ತು. ಅಪ್ಪೆರ್ ಬೇಸ್ಮೆಂಟ್ ನಲ್ಲಿ ಕ್ಯಾಂಟೀನ್ ಇತ್ತು. ನನ್ನ ಪ್ರಕಾರ ಲೋವರ್ ಬಸ್ಮೆಂತ್ ಗ್ರೌಂಡ್ ಫ್ಲೋರ್ ನ  ಕೆಳಗೆ ಇದ್ದರೇ, ಅಪ್ಪರ್ ಬೇಸ್ಮೆಂಟ್ top most ಫ್ಲೋರ್ ಗಿಂತ ಮೇಲೆ ಇರಬೇಕು. ಹೀಗಾಗಿ ೧೦ ಅಂತಸ್ತಿನ  ಬಿಲ್ಡಿಂಗ್ ನ ೧೦ ನೆ ಫ್ಲೋರ್ ಗೆ ಹೋಗಿ ಅಪ್ಪರ್ ಬೇಸ್ಮೆಂಟ್ ಹುಡುಕಾಡಿದೆ. ಸಿಗಲಿಲ್ಲ; ಬ್ರೇಕ್ಫಾಸ್ಟ್ ಮಾಡಿರಲಿಲ್ಲ. ನನ್ನ ಹಳ್ಳಿತನ ಬಯಲಾದಿತು ಎಂದು ಕೇಳಲು ಸಾಧ್ಯವಾಗದೆ ಮನೆಗೆ ಬಂದು  ಗೆಳೆಯರಿಗೆ ಕೇಳಿದ್ದೆ.
ನನ್ನ ಹಾಗೆ, ಇಂಥ ತೊಳಲಾಟ ಬಳಷ್ಟು  ಗೆಳೆಯರು ಕೂಡ ಅನುಭವಿಸಿದ್ದರಂತೆ. ಆದರೆ ಹಾಗೆ ನಾಚಿಕೆಯಾಗಿ ಯಾರೊಂದಿಗೂ ಹೇಳಿಕೊಳ್ಳಲಿಲ್ಲ ಅಂತೆ!

ಆದರೆ ಅದೊಂದು ದಿನ, ಬೆಂಗಳೂರಿನ BMS  ಕಾಲೇಜಿನಲ್ಲಿ, 'ಹೊಸ ಕಾಲದ ವೈರುಧ್ಯಗಳು' ಎಂಬ ಚರ್ಚ ಗೋಷ್ಠಿಯಲ್ಲಿ, ಹರೀಶ್ ಹಂದೆಯವರು ಹಳ್ಳಿತನ ಅನ್ನುವುದು ಅಜ್ಞಾನವಲ್ಲ. ಅದು ಒಂದು ಬದುಕುವ ರೀತಿ.ಅಲ್ಲೂ ಮೌಲ್ಯಗಳಿವೆ ಎಂದಾಗ, ನನ್ನ ಮನಸ್ಸಿನಲ್ಲಿದ್ದ ಹಳ್ಳಿಯ ಎಂಬ ಪರದೆ ಹರಿದಿತ್ತು.

ಯಾರು ಏನು ಅನ್ನಲಿ, ಇಡ್ಲಿ ಬರಿಗೈಯಲ್ಲಿ ತಿನ್ನುತ್ತೇನೆ. ನೇರವಾಗಿ ಅಪ್ಪರ್ ಬೇಸ್ಮೆಂಟ್ ಯಾವುದು ಎಂದು ಕೇಳುತ್ತೇನೆ. ನನ್ನ ತನ ಹಳ್ಳಿತನ.

Saturday, October 19, 2013

ಬ್ಯಾಚುಲರ್ ಜೀವನ ಮತ್ತು ಸಮಾಜ.

ಇದೊಂದು ರೀತಿಯಲ್ಲಿ ಹಾಸ್ಯಮಯ ಲೇಖನವಾದರು ಕೆಲವು ಘಟನೆಗಳು, ನಾನು ಅನುಭವಿಸಿದ ನೋವು ಇದರಲ್ಲಿದೆ. ಇದು ನನ್ನ ಹಾಗೆ, ನೀವು ಕೂಡ ಇಂಥ ಘಟನೆಗಳನ್ನು ಅನುಭವಿಸಿರುತ್ತಿರಿ. ಆದರೆ ಅದೆಲ್ಲ ಸಾಮಾನ್ಯ ಸಂಗತಿಯೆಂದು ಮರೆತು ಬಿಡುತ್ತಿರಿ ಅಷ್ಟೇ.

ಪ್ರತಿಯೊಬ್ಬ ಗಂಡು ಹುಟ್ಟಿದ ದಿನದಿಂದ ಮದುವೆಯ ೭ ನೇ ಹೆಜ್ಜೆ ಹಾಕುವವರೆಗೂ  ಬ್ಯಾಚುಲರ್ ಆಗಿರುತ್ತಾನೆ. ಆದರೆ, ಈ 'ಬ್ಯಾಚುಲರ್' ಪದಕ್ಕೆ ವಿಶೇಷ ಅರ್ಥ ಹಾಗೂ ಕಲ್ಪನೆಗಳು, ನೋವುಗಳು ಅನುಭವಿಸ ಬೇಕಾಗಿಬರುವುದು ಕಾಲೇಜು ಮುಗಿಸಿ, ಎಲ್ಲೋ ನೌಕರಿಯಲ್ಲಿದ್ದು ಮದುವೆಯಾಗುವರೆಗಿನ ದಿನಗಳಲ್ಲಿ ಮಾತ್ರ. ಇದೆ ದಿನಗಳಲ್ಲಿ ' ಎಲಿಜಿಬಲ್ ಬ್ಯಾಚುಲರ್' ಎಂಬ ಪದಗಳು ನಮ್ಮ ಬಗ್ಗೆ ತಿಳಿದಿರುವ  ಗೆಳೆಯರಿಂದ, ಹಿರಿಯ ಸಹದ್ಯೋಗಿಗಳಿಂದ,ಕುಟುಂಬದ ಹಿರಿಯರಿಂದ ಅಲ್ಲಿ-ಇಲ್ಲಿ ಪ್ರಸಂಶೆಗೆ ಒಳಪಡುತ್ತಲೇ ಇರುತ್ತದೆ.

 'ಎಲಿಜಿಬಲ್ ಬ್ಯಾಚುಲರ್' ಎಂದಾಗ ಸಿಗುವ ಸಂತೋಷ ಅದೆಷ್ಟೆಂದರೆ, ಕಾಲ್ಪನಿಕ ಲೋಕದ ಕವಿ ಮಹಾಶಯರು ವರ್ಣಿಸಿದ ತಿಲೋತ್ತಮೆ, ಉರ್ವಸಿಯಂತ  ಗಂಧರ್ವ ಕನ್ಯೆ ನಮಗೆ ಇವರು ಹುಡುಕುತ್ತಿದ್ದಾರೆ ಎನ್ನುವಷ್ಟು. ಅದಲ್ಲದೆ ಬ್ಯಾಚುಲರ್  ಜೀವನದಲ್ಲಿ  ಸಂತೋಷ ಪಡುವ ಹಲವು ವಿಷಯಗಳಿವೆ- ಆಗತಾನೆ ನೌಕರಿಯಿಂದ ಸಿಕ್ಕ ಹಣ, ಯಾರ ಕಟ್ಟಳೆಯೂ ಇಲ್ಲದೆ ಓಡಾಡಬಹುದಾದ ಸ್ವಾತಂತ್ರ್ಯ, ಅಪ್ಪ-ಅಮ್ಮನಿಗೆ ಕೇಳದೆಯೇ ಜೀವನದ ನಿರ್ಧಾರ ತೆಗೆದುಕೊಳ್ಳಬಹುದಾದ(ನನ್ನ ದುಡ್ಡು,,, ನನ್ನ ಕಾಸು) ಅವಕಾಶಗಳು, ಕಾಲೇಜ್ ಜೀವನದ ಓದು, ಟೈಮ್ ಟೇಬಲ್ ಕಿರಿ ಇಲ್ಲದ  ಸ್ವಾತಂತ್ರದ ರಾತ್ರಿಗಳು(PUC ಯಿಂದ ಇಂಜಿನಿಯರಿಂಗ್ ಮುಗಿಯುವ ತನಕ ಸರಿಯಾಗಿ ನಿದ್ರೆ ಮಾಡಿದ ರಾತ್ರಿಗಳೇ ಇಲ್ಲ ಅನಿಸುತ್ತವೆ). ಹಾಗಾಗಿ ಯಾವ ಬಗೆಯ ಕಿರಿ ಕಿರಿ ಇಲ್ಲದ  'ರೈಟ್ ಟು ಎಂಜಾಯ್ ' ಎಂಬ ಅಧಿಕಾರ ಸಿಕ್ಕಿದೆ ಅನಿಸುತ್ತದೆ.

ಕೆಲವು ತಿಂಗಳ ಹಿಂದೆ, ಗೆಳೆಯನೊಬ್ಬ  ಮದುವೆಯ ನಿಶ್ಚಯವಾದ ವಿಷಯ ಗೆಳೆಯರ ಗುಂಪಿನಲ್ಲಿ ಚರ್ಚೆಗೆ ಒಳಗಾದಾಗ, "ನಗುತ್ತ ಕಳೆಯಬಹುದಾದ ಬ್ಯಾಚುಲರ್ ಅನ್ನುದು ಜೀವನದಲ್ಲಿ ಮದುವೆಯ ಮೊದಲ ದಿನಗಳು ಮಾತ್ರ. ಮದುವೆಯ ನಂತರ ಬ್ಯಾಚುಲರ್ ಆಗಲು ಸಾಧ್ಯವಿಲ್ಲ. ಹಾಗೊಮ್ಮೆ ಆದರು ನೋವಿನ ದಿನಗಳಗಿರುತ್ತವೆ. ಹಾಗಾಗಿ ಮದುವೆಯಾಗುವ ಮುನ್ನ, ಬ್ಯಾಚುಲರ್ ಜೀವನ ಚೆನ್ನಾಗಿ ಅನುಭವಿಸಿಯೇ  ೭ ಹೆಜ್ಜೆ ಹಾಕಲು ನಿರ್ಧರಿಸಬೇಕು". ಈ ಮಾತು ಯಾಕೆ ಹೇಳಿದ, ಯಾರು ಹೇಳಿದ ಎನ್ನುವ ಪ್ರಶ್ನೆಗಳಿಗಿಂತ ಇದರ ನಿಗೂಢ ಅರ್ಥ ಬಹಳ ಯೋಚಿಸಬೇಕಾದುದ್ದೆ.

೩ ವರ್ಷಗಳ ಹಿಂದೆ, ಮಣಿಪಾಲದಲ್ಲಿ ಬಾಡಿಗೆ ಮನೆಗಾಗಿ ಓಣಿ-ಓಣಿಗಲ್ಲಿ  ಬೈಕ್ ಹೊಡಿತ ಇದ್ದೆ. ಅಂತು-ಇಂತೂ ಅಪರಿಚಿತ ಮನೆಗಳ ಮುಂದೆ ನಿಂತು, ಕಾಲಿಂಗ್ ಬೆಲ್ ಬಾರಿಸಿ, ದಿನತೆಯಿಂದ ನಿಂತು, "ನಿಮ್ಮಲ್ಲಿ ಬಾಡಿಗೆ ಮನೆ ಇದೆಯಾ ?" ಎಂದು ಕೇಳುತ್ತ ಸಾಗುತ್ತಿದ್ದೆ. ಮನೆಯ ಮಾಲಿಕರ ಮೊದಲು ಕೇಳುವ ಪ್ರಶ್ನೆ, " ಮನೆಯುಂಟು..! ಆದರೆ ಬ್ಯಾಚುಲರ್ ಗೆ ಕೊಡಲ್ಲ... ನೀವು ಮ್ಯಾರೀಡ್ ತಾನೇ?". ನನಗೆ ಮನೆ ಸಿಗುವ ಚಾನ್ಸ್ ಕಾಣದೆ ಒದ್ದಾಡಿದ್ದೆ. ಹೀಗಿರುವಾಗ, ಒಂದು ರವಿವಾರ ೧೧ ಗಂಟೆಗೆ, ಒಂದು ಮನೆಯ ಮುಂದೆ ನಿಂತಾಗ, ನನ್ನ ಕಂಪನಿಯ ಹೆಸರು ಹೇಳಿದಾಗ ಒಳಗೆ ಕರೆಯಿಸಿ, ಚೆನ್ನಾಗಿ ಮಾತನಾಡಿಸಿ ಕಂಪನಿಯ ಕತೆ, ಪಗಾರು, ರಜೆಗಳ ಕುರಿತಾಗಿ ಒಂದರ ಮೇಲೊಂದು ಪ್ರಶ್ನೆಕೆಳಿದ  ಅಂಕಲ್, ಬ್ಯಾಚುಲರ್ ಆದರೆ ಮನೆ ಕೊಡಲ್ಲರಿ ಎಂದು ಹೇಳಿ ವಿನಯದಿಂದ ಜಾರಿ ಕೊಂಡರು. ಅಷ್ಟು ಚೆನ್ನಾಗಿ ಮಾತನಾಡಿದ ಅವರು ಮನೆ ನನಗೆ ಕೊಡುತ್ತಾರೆ ಎನ್ನುವ ನಂಬಿಕೆ ಬಂದು ಹೋಗಿತ್ತು. ಆದರೆ ಅವರೊಂದು ಗೆಳೆತನ ಇರಿಸಿ ಕೊಳ್ಳುವ ಮನಸ್ಸೆಮ್ಬಂತೆ, ನನ್ನ ಮೊಬೈಲ್ ನಂಬರ್ ಕೇಳಿದ್ದರು; ಕೊಟ್ಟು ಬಂದೆ. ಸುಮಾರು ಎಂಟು ತಿಂಗಳು ಕಳೆದ ಬಳಿಕ, ಅವರು ನನಗೆ ಕಾಲ್ ಮಾಡಿ, "ಹಲೋ ನಮಸ್ಕಾರ, ನಿಮಗೆ ಗೊತ್ತಾಯಿತ್ತಲ್ಲ... ನೀವು ನಮ್ಮ ಮನೆಗೆ ಬಾಡಿಗೆ ಮನೆ ಕೇಳಲು ಬಂದಿದ್ದಿರಿ.. ನಮ್ಮ ಮಗಳು, ಈ ವರ್ಷ ಇಂಜಿನಿಯರಿಂಗ್ ಮುಗಿಸಿದ್ದಾಳೆ, ಕಂಪ್ಯೂಟರ್ ಸೈನ್ಸ್, ನಿಮ್ಮ ಕಂಪನಿ ಯಲ್ಲಿ ಜಾಬ್ ಸಿಗುವುದಾ?". ನನಗೆ ಎಲ್ಲಿಲ್ಲ ಕೋಪ ಬಂತು, "ಇಲ್ಲ ಅಂಕಲ್, ಸಿಂಗಲ್ಸ್ ಗರ್ಲ್ಸ್ ಗಳಿಗೆ ನಮ್ಮ ಕಂಪನಿಯಲ್ಲಿ ತಗೋಳಲ್ಲ" ಎಂದು ಹೇಳಿ ಕಾಲ್ ಕಟ್ ಮಾಡಿದ್ದೆ. ಕಾಲ್ ಕಟ್ ಮಾಡಿದ ಮೇಲೆ ನಾನು ಈ ಹಿರಿಯರಿಗೆ ಇಷ್ಟೊಂದು ಕಡಕ್ ಉತ್ತರ ಕೊಡಬಾರದಿತ್ತು ಅನಿಸಿತ್ತು.

ಅದೆಷ್ಟೋ ಸಾರಿ, ರಾಜಾಂಗಣದಲ್ಲಿ ಕಾರ್ಯಕ್ರಮ  ಮುಗಿಸಿ  ಉಡುಪಿಯ ಯಾವೊದೋ ಹೋಟೆಲ್ ಹೋಗುವಾಗ ನಾನು ಒಬ್ಬನೇ ಇರುತ್ತಿದ್ದೆ. ನನ್ನ ಗೆಳೆಯರಾರಿಗೂ  ಯಕ್ಷಗಾನದಂತ ಕಾರ್ಯಕ್ರಮಗಳು ಇಷ್ಟವಾಗಿರುತ್ತಿರಲಿಲ್ಲ. ಹೀಗಾಗಿ ಹೋಟೆಲ್ ನಲ್ಲಿ ಜಾಗ ಇಲ್ಲದಿದ್ದರೆ, ನೀವು 'ಸಿಂಗಲ್ ತಾನೆ?' ಎಂದು ತಡೆದು, ಮತ್ತೊಬ್ಬ ಪುಣ್ಯಾತ್ಮ ಯಾರೊಬ್ಬ ನನ್ನ ಜೊತೆ 'double  ಅನಿಸಿ' ಕೊಳ್ಳುವ ತನಕವೂ ಕಾಯಬೇಕಾಗಿತ್ತು. ಹೀಗೆ double  ಅನಿಸಿ ಕೊಳ್ಳಲು ನನ್ನ ಟೇಬಲ್ ಗೆ ಬರುವ  ಆ ಸಿಂಗಲ್ ಯಾವ ಮಾತು ಕತೆ ಇಲ್ಲದೆ ತನ್ನ ಪಾಡಿಗೆ ತಾನು ತಿಂದು, ತನ್ನದೇ ಮೊಬೈಲ್ ನಲ್ಲಿ ಆಟವಾಡಿ ಹೋಗುವಾಗ, ನನ್ನ ಮನಸ್ಸಿನಲ್ಲಿ ಹೊರಳುದುತ್ತಿದ್ದ ವಿಚಾರವೆಂದರೆ-' ನಾನು ಯಾಕ್ಷಗಾನ ನೋಡುವಂತ ಹುಡುಗಿನೇ ಮದುವೆಯಾಗಿ ಬಿಟ್ಟರೆ 'ಸಿಂಗಲ್ ತಾನೇ?' ಪ್ರಶ್ನೆಗೆ ಉತ್ತರ  ದೊರಿಕಿತಲ್ಲವೇ?' ಅನ್ನುವಂತ ಕ್ಷಣಗಳು ನಾನು ಅನುಭವಿಸಿದ್ದೇನೆ. ಅದು ಸರಿಯೋ-ತಪ್ಪೋ ಬೇರೆ ವಿಚಾರ.

ಇಷ್ಟೆಲ್ಲಾ ಹಳೆಯ ಕತೆ ನಾನು ಯಾಕೆ ನೆನಪಿಸಿ ಕೊಂಡೆ ಅಂದರೆ, ನಿನ್ನೆ -ಮೊನ್ನೆಯ ವರೆಗೂ ಆಫೀಸ್ ನಲ್ಲಿ ವೀಕೆಂಡ್ ಸಹಿತ ಕೆಲಸ ಮಾಡಿದ್ದೇನೆ. ನನ್ನ ಹಿರಿಯ ಸಹೋದ್ಯೋಗಿ ಒಬ್ಬರು ಬಂದು, 'ವೆಂಕಟ್, ನೀವು ಹೇಗೂ ಬ್ಯಾಚುಲರ್ ಅಲ್ವ?.. ವೀಕೆಂಡ್ ಆಫೀಸ್ ಗೆ ಬನ್ನಿ. ನಾನು ಉಳಿದವರಿಗೆ ಹೇಳಲ್ಲ(ಅವರೆಲ್ಲ ಮ್ಯಾರೀಡ್ )" ಎಂದು ಹೇಳಿದರು. ಸವಿನಯದಿಂದ, ಬ್ಯಾಚುಲರ್ ಗೆ  'ಎಲಿಜೆಬಲ್' ಪದ ನಾನೇ ಸೇರಿಸಿ, ಒಮ್ಮೆ ಸಂತೋಷದ ನಗೆ ಬಿರಿ...ಬರ್ತೇನೆ ಎಂದು ಹೇಳಿದೆ. ವೀಕೆಂಡ್ಸ ಎಲ್ಲ  ನಿರವ ಮೌನವಾದ ಆಫೀಸ್ ನಲ್ಲಿ ಒಂದು ಕಾಫಿ ಗೂ  ಗತಿಯಿಲ್ಲದೆ, ಒಂದೇ ಸವನೆ ಕೀಬೋರ್ಡ್ ಕುಟುಕಿದ್ದೆ ನನ್ನ ಕೆಲಸ. ಆದರೆ ವಿಕೆಂಡ ನಲ್ಲಿ ಮಾಡಬೇಕಾದ ಬಟ್ಟೆ ವಾಶಿಂಗ್, ಮನೆಯ ಕ್ಲೀನಿಂಗ್,ಚಪ್ಪಲಿ ಜೋಡಣೆ ಇತ್ಯಾದಿ ಕೆಲಸಗಳು ಸರಿಯಾಗಿ ನಡೆಯದೆ, ಸೋಮವಾರ  ರಾತ್ರಿ ೧೦ ಗಂಟೆಗೆ ಬಟ್ಟೆ ವಾಶ್ ಮಾಡಿದ್ದೆ. ವೀಕೆಂಡ್ ಎಂದು ಊರಿಗೆ ಹೋದ ಉಳಿದ  ನನ್ನ ರೂಮೇಟ್ ಗಳಿಂದಾಗಿ ರಾತ್ರಿ ಊಟವು  ಇರಲಿಲ್ಲ. ಊಟಕ್ಕಾಗಿ ಮತ್ತೆ ಹುಡುಕಾಟ. ಇದನೆಲ್ಲ ಯೋಚಿಸುವಾಗ, ಬ್ಯಾಚುಲರ್ ಗಳು ವೀಕೆಂಡ್ ಗಳಲ್ಲಿ ಮಾಡಬೇಕಾದ ಕೆಲಸಗಳು ಒಬ್ಬ ಮ್ಯಾರೀಡ್ ಗಳಿಗಿಂತಲೂ ಜಾಸ್ತಿನೆ ಇರುತ್ತವೆ. ಆದರೆ ಯಾಕೆ ಬ್ಯಾಚುಲರ್ ಗಳು ಅಂದ್ರೆ ಗ್ರಾಂಟೆಡ್ ಅನ್ನುವ ಪ್ರಶ್ನೆ ಮೂಡಿ ಬಿಟ್ಟಿತ್ತು.

ಒಟ್ಟಾರೆ ಬ್ಯಾಚುಲರ್ ಜೀವನ ಒಂದು ರೀತಿಯಲ್ಲಿ ಅತ್ಯಂತ ಸ್ವಾತಂತ್ರ್ಯ ಅನುಭವಿಸಬಹುದಾದ ದಿನಗಳು.ಎಲ್ಲರು ಜೀವನದಲಿ ಈ ದಿನಗಳು ಅನುಭವಿಸಿಯೇ ಮುಂದಿನ ಗೃಸ್ಥ(ಗ್ರಹಸ್ತ) ಜೀವನಕ್ಕೆ ಕಾಲಿರಿಸುತ್ತಾರೆ. ಅದರೂ ಯಾಕೆ ಈ ಅಂಕಲ್ ಗಳು , " ಬ್ಯಾಚುಲರ್ ರಾ?" ಎಂದು ಕೇಳಿ, ಒಂದು  ಬಗೆಯ ಉಪದ್ರದ ಜೀವಿಗಳಂತೆ ನೋಡುತ್ತಾರೋ ಗೊತ್ತಿಲ್ಲ.

Sunday, September 29, 2013

ರವಿ ಮತ್ತು ಸಿಂಹ...!

ನಾನು ಬರೆಯುತ್ತಿದ್ದದು ರವಿ ಬೆಳೆಗರೇ ಹಾಗೂ ಪ್ರತಾಪ್ ಸಿಂಹರ ಬಗ್ಗೆ. ಅವರಿಬ್ಬರೂ ಒಂದೇ ನಾಣ್ಯದ ಎರಡು ಮುಖಗಳು(ಯಾವತ್ತು ಒಬ್ಬರನೊಬ್ಬರು ಒಪ್ಪಿಕೊಲ್ಲಲಾರರು ಎನ್ನುವ ಅರ್ಥದಲ್ಲಿ).ಆದರೆ ನನ್ನ ಬದುಕಿನಲ್ಲಿ ಒಂದು ಒಳ್ಳೆಯ ಕಲ್ಪನೆಗಳ ಹಿಂದೆ ಈ ಲೇಖಕರ  ಭಾಷೆ, ನುಡಿ ಹಾಗೂ ಒಂದು ಬಗೆಯ ಗೌರವವಿದೆ.

ನಾನು PUC  ಮುಗಿಸಿದ ಬಳಿಕ ಮೆಡಿಕಲ್ ಸೇರಬೇಕೆಂಬ ತುಂಬಾ ಆಸೆ ಇತ್ತು. CET ಯಲ್ಲಿ ಒಳ್ಳೆಯ ರಾಂಕ್ ಗಳಿಸುವ ಮೂಲಕ ಬಳ್ಳಾರಿಯ ಮೆಡಿಕಲ್ ಸೀಟ್ ಸಿಕ್ಕಿದ್ದರು ಸೇರಲು ಸಾಧ್ಯವಾಗದೆ ನಂತರ ಕೆಲವು ಮಹನಿಯರ ಕೃಪೆಯಿಂದ(ಮುಂದೊಂದು ದಿನ -ಅವರಿಗಾಗಿ ಹೊಸ ಲೇಖವನ್ನೇ ಬರೆಯುತ್ತೇನೆ.) ಇಂಜಿನಿಯರಿಂಗ್ ಸೇರಿ, ಜಾಬ್ ಸಿಕ್ಕಿ ಆರು ವರ್ಷಗಳೇ ಕಳೆದು ಹೋದವು.

ಹೀಗಿರುವಾಗ, ನಾನು ಮೆಡಿಕಲ್ ಸೇರಲಾಗದ ನೋವು ನನಗೆ ಇಂಜಿನಿಯರಿಂಗ್ ದಿನಗಳಲ್ಲಿ ಬಹಳ ಕಾಡಿತ್ತು. ಆ ದಿನಗಳ, ಮೆಡಿಕಲ್ ಎಂಬ ನೋವಿನ ಪರಿಣಾಮವಾಗಿ ನನ್ನಲ್ಲಿ ಹುಟ್ಟಿದ ಹುಚ್ಚು ಕಲ್ಪನೆಯೆಂದರೆ ನಾನು ಡಾಕ್ಟರ ಒಬ್ಬಳನ್ನೇ ಮದುವೆಯಾಗಬೇಕು ಎಂದು. ಇಂಜಿನಿಯರಿಂಗ್ ಮುಗಿಯುವತನಕವು ಆ ಕನಸ್ಸು ನನ್ನ ರಕ್ತದಲ್ಲಿ ಇದ್ದೆ ಇತ್ತು. ಆದರೆ ಇಂಜಿನಿಯರಿಂಗ್ ಮುಗಿಸಿ, ಜಾಬ್ ಸಿಕ್ಕಿದ ಮೇಲೆ, ಅಂತ ಹುಡುಗಿಯೊಬ್ಬಳು ಸಿಗುವಳೇ ? ನನಗಾರಾದರು ತಿಳಿದವರು ಇರುವರೇ ಇಂತಲ್ಲ ಲೆಕ್ಕ ಹಾಕಿದಾಗ ಮೆಡಿಕಲ್ ಹುಡುಗಿಯೊಬ್ಬಳು ಈ ಬಡಪಾಯಿಗೆ ಸಿಗುತ್ತಲೇ ಅನ್ನುವ ನಂಬಿಕೆಯೇ ಬರಲಿಲ್ಲ. ಆದರೆ ನನ್ನ ಅಜ್ಜ, ನನ್ನ ಅಪ್ಪ ತನ್ನ ಜೀವಿತಾವಧಿಯಲ್ಲಿ ದುಡಿದುದ್ದನ್ನು ಒಂದೇ ವರ್ಷದಲ್ಲಿ ದುಡಿಯಲು ಸಾಧ್ಯವಿರುವ ನಾನು, ಯಾಕೆ ಒಂದು ಒಳ್ಳೆಯ ಹುಡುಗಿಯನ್ನು ನೋಡಿ ಅವಳಿಗೆ ಮೆಡಿಕಲ್ ಓದಿಸಬಾರದು ಎಂದು ಆಲೋಚನೆಗೆ ಬಿದ್ದೆ. ಆಲೋಚನೆಯೇನೋ ಒಳ್ಳೆಯದು.. ಆದರೆ ಮದುವೆಗೆ ಒಪ್ಪಿಸಿ ....ನಾನು ಸಹಾಯ ಮಾಡುತ್ತೇನೆ ಎನ್ನುವುದು ಹೆಣ್ಣನ್ನು ಕೊಂಡು-ಕೊಂಡಂತೆ, ಮತ್ತು ಸಂಸ್ಕೃತಿಯ ಭಾಷೆ  ದೃಷ್ಟಿಯಿಂದ ಸರಿಯಲ್ಲ ಎನ್ನುವ  ನೋವು ನನಗೆ ಧರ್ಮ ಸಂಕಟಕ್ಕೆ ತೊಡಗಿಸಿತ್ತು. ಆದರು, ಮದುವೆಯ ಬಗ್ಗೆ ಸ್ವಲ್ಪವೂ ಓಪನ್ ಆಗಿ ಮಾತನಾಡಲಾಗದ ಆ ದಿನಗಳಲಿ ನನ್ನ ಗೆಳೆಯನೊಬ್ಬನಿಗೆ ನನ್ನ ಕತೆ ವಿವರಿಸಿದಾಗ, " ಹುಚ್ಚು ಕಲ್ಪನೆ....ಸಹಾಯ ಬೇಕಾದರೆ ಮಾಡು ....ಆದ್ರೆ ಮದುವೆ ಮತ್ತು ಸಹಾಯ ಬೇರೇನೆ ಇರಬೇಕು..." ಹೇಳಿದ್ದಲ್ಲದೆ, ರವಿ ಬೆಳೆಗೆರೆಯವರ "ಹೇಳಿ ಹೋಗು ಕಾರಣ" ಕಾದಂಬರಿಯನ್ನು ಓದುವಂತೆ ಸಲಹೆ ನೀಡಿದ. "ಹೇಳಿ ಹೋಗು ಕಾರಣ" ಕಾದಂಬರಿ ಹೀಗೆ ಒಬ್ಬ ಮೆಡಿಕಲ್ ಹುಡುಗಿಯನ್ನು ಓದಿಸಿದ ಒಬ್ಬ ಹಳ್ಳಿಯ ಬಡ ಹುಡುಗನ ದುರಂತ ಜೀವನವನ್ನು ಅಧರಿಸಿರುವಂತ್ತದ್ದು. ಕೆಲವೊಮ್ಮೆ ಸಾಹಿತ್ಯ-ಪುಸ್ತಕಗಳು ಬದುಕಿನಲ್ಲಿ ಎಂಥ  ಭಾವನಾತ್ಮಕ ವಿಚಾರಗಳಿಗೆ ಉತ್ತರವನ್ನು , ಸಮಾಧಾನವನ್ನು ಕೊಡುತ್ತವೆ ಅನ್ನುವುದುಕ್ಕೆ ಇದು ಒಳ್ಳೆಯ ಉದಾಹರಣೆ.

ಈ ಕಾದಂಬರಿಯ ಮೂಲಕ ನಾನು ರವಿ ಬೆಳೆಗೆರೆಯನ್ನು ಬಹಳ ಪ್ರೀತಿಸಿದೆ. ನಾನು ಅವರ ಬಗ್ಗೆ ಇರುವ "ಹಾಯ್ ಬೆಂಗಳೂರು" ಮೂವಿ ನೋಡಿದೆ. ಮುಕ್ತ ಧಾರವಾಹಿಯಲ್ಲಿ ನ್ಯಾಧಿಶರಾಗಿಯು ನೋಡಿದೆ. ಅವರ 'ಓ ಮನಸ್ಸೇ...!" (ಈಗ ಬಂದಾಗಿದೆ) ಪುಸ್ತಕಕ್ಕೆ  ಪ್ರತಿತಿಂಗಳ ಚಂದದಾರನು ಆಗಿಬಿಟ್ಟೆ. ತಾನು ಪ್ರೀತಿಸಿದ ಹುಡುಗಿಗಾಗಿ ೧೭ ವರ್ಷ ಶೂನ್ಯ ಸಂಪಾದನೆಯೊಂದಿಗೆ, ಶೂನ್ಯ ಲೋಕವನ್ನೇ ಸೃಷ್ಟಿಸಿ,ಕುಡಿತ-ಸಿಗರಟ್ ಗೆ ಬಲಿಯಾಗಿಕಳೆದು ಹೋದ ಆಯುಷ್ಯದ ಕುರಿತ  ಅವರ ಜೀವನಗತಿ ಓದಿ ಮರುಕ ಹುಟ್ಟಿತ್ತು

ದುರದೃಷ್ಟ ವಶಾತ್, ಅವರ ಬದುಕಿನ ಪ್ರತಿಯೊಂದು ಘಟ್ಟವನ್ನು ಅವಲೋಕಿಸುವಾಗ ಅವರು ವಯಕ್ತಿಗವಾಗಿ ಬದುಕಿನ  ಮೌಲಿಕ ವಿಚಾರಗಳಲ್ಲಿ ಕೆಲೋಮ್ಮೆ 'ಸರಿಯಲ್ಲ' ಎನ್ನುವ ವಿಚಾರಗಳನ್ನು ಓದಿದ ಮೇಲೆ ನಾನು ಅತಿಯಾಗಿ ನೋವು ಅನುಭವಿಸಿದೆ. ಇವರು ಬರೆಯುವುದಕ್ಕೂ ಇವರು ಇರುವುದಕ್ಕೂ ವತ್ಯಾಸವಿದೆ ಎಂದಾಗ ಅವರ ಸಾಹಿತ್ಯದ ನಂಬಿಕೆ ಕಳೆದುಕೊಂಡದ್ದು ಸತ್ಯ. ಪ್ರತಿಯೊಬ್ಬ ವ್ಯಕ್ತಿ, ಸಾಹಿತಿ ಬರೆದ ಲೇಖನ ಹಾಗೂ ಅವನ ಜೀವನದ ರೀತಿ-ನೀತಿಗಳು ತುಲನಾತ್ಮವಾಗಿರಬೆಕು ಎಂದು ಬಯಸುತ್ತಾನೆ. ಹೀಗಾಗಿ ನನ್ನ ಬದುಕಿನಲ್ಲಿ ಒಂದು  ಹುಚ್ಚು ಕಲ್ಪನೆಗೆ ಉತ್ತರ ನೀಡಿದ ಲೇಖಕ, ಹೆಚ್ಚು ದಿನ ಆದರ್ಶ ಲೇಖಕನಾಗಿ ಇಲ್ಲದಿರುವುದು ದುಖದ ವಿಷಯ.

ಸಿಂಹ... ನನ್ನ ಬದುಕಿನಲ್ಲಿ ಬರೆಯುವುದನ್ನು ಕಳಿಸಿದ ಗುರು. ಎಲ್ಲರು ಬರೆಯುತ್ತಾರೆ, ಎಲ್ಲರು ಮಾತನಾಡುತ್ತಾರೆ...ಆದರೆ ಅದಕ್ಕೊಂದು ಶೈಲಿ ಬೇಕು. ಅದು ಪ್ರತಾಪರಲ್ಲಿದೆ. ಯಾವುದೇ ಲೇಖನ ಓದಲು ಕುಳಿತರೆ... ಲೇಖನವೇ ನಮ್ಮನ್ನು ಓದಿಸುವಂತೆ ಪ್ರೆರಿಪಿಸುತ್ತದೆ.

ರವಿ-ಸಿಂಹ ಜಗಳ ಹೊಸದೇನು ಅಲ್ಲ. ಸಿಂಹದ ನೈತಿಕತೆ, ಮದುವೆಯ ಮುಂಚೆ ಕಾಲು ಕಳೆದು ಕೊಂಡ ಪ್ರೇಯಸಿಯನ್ನು  ಒಂದಿಷ್ಟು ನೋವು ಇಲ್ಲದೆ ಒಪ್ಪಿ ಮದುವೆಯಾಗಿ ಜೀವನ ಮಾಡುತ್ತಿರುವುದು ನನಗೆ ಬಹಳ ಹೆಮ್ಮೆ ಅನಿಸಿತು. ನೈತಿಕತೆಯ ಮುಂದೆ ರವಿ ತಗ್ಗಿ ಹೋದಾಗ, ಸಿಂಹ ನನ್ನ ಹೃದಯದಲ್ಲಿ  ನೆಲೆಸಿದ. ಆದರು ಇಬ್ಬರ ಜಗಳ  ಮಾಡುತ್ತಿರುವುದು ನನಗೆ ಸರಿಯಲ್ಲ ಅನಿಸಿತ್ತು.  'ಗಂಡ-ಹೆಂಡತಿಯ ಜಗಳದಲ್ಲಿ ಕೂಸು ಬಡವಾಯಿತ್ತಂತೆ ' ಅನ್ನುವಂತೆ ಇವರ ಜಗಳ ನನಗೆ ನೋವು ಕೊಟ್ಟಿತ್ತು.  ಕಾರಣ ಇಷ್ಟೇ- ಒಬ್ಬ ಸಾಹಿತಿ ಅಂದಾಗ ಒಳ್ಳೆಯ ನಡತೆ, ಗಾಂಭಿರ್ಯತೆ, ನೈತಿಕ ಸ್ವಚತೆ  ಓದಾಗ ಅಪೇಕ್ಷೆ ಪಡುತ್ತಲಿರುತ್ತಾನೆ. ಇದಕ್ಕೆ ಭಂಗವಾದಾಗ ನೋವು ಸಹಜವೇ.

Tuesday, September 3, 2013

ಹುಬ್ಬಳ್ಳಿ-ಗಿರ್ಮಿಟ್ ಇಲ್ಲದ ಮಾಲ್..!

ಕಳೆದ ತಿಂಗಳು ನಾನು ಹುಬ್ಬಳ್ಳಿಯಲ್ಲಿದ್ದೆ. ನನ್ನ ಗೆಳೆಯನೊಬ್ಬನನ್ನು ಕರೆದುಕೊಂಡು,ಓಯಸಿಸ್  mall ಗೆ ಹೋಗಿದ್ದೆ. ಹುಬ್ಬಳ್ಳಿಯಲ್ಲೇ ಇದು ಮೊದಲ mall ಅನಿಸುತ್ತೆ . ಒಂದೊಂದೇ ಶೋ ರೂಂ ಗಳನ್ನೂ ನೋಡುತ್ತಾ, ಯಾವ ವಸ್ತುವನ್ನು ಕೊಂಡುಕೊಳ್ಳುವ ಆಸಕ್ತಿ ನಮಗಿಲ್ಲದಿದ್ದರು ಪ್ರತಿಯೊಂದು ವಸ್ತುವು ನಮ್ಮದೇ ಅನ್ನುವಂತೆ ನಟಿಸಿದೆವು. ಪ್ಯಾಂಟ್-ಶರ್ಟ್ ಹಾಕಿದೆವು, ಟ್ಯಾಬ್ಲೆಟ್ ಮುಟ್ಟಿ ನೋಡಿ cost  ಎಷ್ಟು? ಬ್ಯಾಟರಿ ಎಷ್ಟು ದಿನ ಬರುತ್ತೆ? ಕ್ರೆಡಿಟ್  ಕಾರ್ಡ್ ಓಕೆ ನಾ ? ಹೀಗೆ ಸುಮ್ಮನೆ ಕೇಳುತ್ತ ಸಾಗಿದುದ್ದು  mall  ಗಳಲ್ಲಿ ಶಾಪಿಂಗ್ ಮಾಡುವ ಸಂಸ್ಕೃತಿಯ ಒಂದು ಭಾಗ. ಅದರಲ್ಲಿ ತಪ್ಪೇನು ಇಲ್ಲ..!

ಆದರೆ, ಹಲವಾರು ಅಂಗಡಿಗಲ್ಲಿ ಹೊಕ್ಕಿ ಹೊರಬರುವಾಗ ನಮ್ಮ ಕೈಯಲ್ಲಿ ಇದ್ದಿದ್ದು ಕೇವಲ ನಮ್ಮದೇ ಮೊಬೈಲ್ ಹಾಗು ಕರ್ಚಿಫ್ ಮಾತ್ರ. ಆದರೆ ಗದ್ದಲ, ಪ್ರತಿ ಮಾತು, ಬೇಡವಾದ ಮ್ಯೂಸಿಕ್, AC  ರೂಂ ನಲ್ಲಿ ಎಡೆಬಿಡದ ನಡೆದಾಟ ಇವುಗಳಿಂದಾಗಿ ಸಂಜೆಯ ಸಮಯದಲ್ಲಿ ಸ್ನಾಕ್ ಬೇಕು ಎಂಬ ಹಂಬಲವಾಗಿ ಸ್ನಾಕ್ ಕಾರ್ನರ್  ನತ್ತ ಹೆಜ್ಜೆ ಹಾಕಿದೆವು.

ಇಂತ mall ವೊಂದು ಇರುವುದು ಹುಬ್ಬಳ್ಳಿಯಲ್ಲಾದರು ಅದರ ವ್ಯವಹಾರ, ಸಿಗುವ ವಸ್ತುಗಳು, ಎಲ್ಲವು ಬೆಂಗಳೂರಿನ mall ಗಳಂತೆ ಇತ್ತು. ಸ್ನ್ಯಾಕ್ ಕಾರ್ನರ್ ಗೆ ಬಂದಾಗ, ಮೆನ್ಯು  ನೋಡಿದರೆ ಅದೇ ಪಿಜ್ಜಾ, ಅದೇ ಕೋಕ್, ಅದೇ ಬ್ರೆಡ್...! ಅದೇ ಮೆನ್ಯು ಮೂರೂ ಬಾರಿ ಓದಿದೆ. ಗೆಳೆಯನಿಗೆ, ಬೆಂಗಳೂರ ಹುಡುಗನ mall  ಒಂದರಲ್ಲಿ  ಸ್ನಾಕ್ಸ್ ಒಂದನ್ನು ಆರ್ಡರ್ ಮಾಡಲಾಗದ ಪರಿಸ್ಥಿತಿಗೆ ನಾಚಿಕೆಯಾಗಿರಬೇಕು.ಅದಕ್ಕೆ, ಅವನು ನನ್ನತ್ತ ತಿರುಗಿ, " ಎನಲೇ, ಒಂದು ಸ್ನಾಕ್ ಆರ್ಡರ್ ಮಾಡಕ್ ಬ್ಯಾಂಕ್ ಅಗ್ರಿಮೆಂಟ್ ಒಂದರ terms and conditions ಕಾಗದ ಓದಿದ ಹಾಗೆ ಒದತ್ತ ಇದ್ದೀಯಲ್ಲ? ಪಿಜ್ಜಾ ಆರ್ಡರ್ ಮಾಡನವ?" ಎಂದ.

ನಾನು ಮೆನ್ಯುನಲ್ಲಿ ಹುಡುಕುತಿದ್ದದ್ದು ಗಿರ್ಮಿಟ್..! ಮೆನ್ಯುನ ಕೊನೆಯ ಹಾಳೆಯ ತನಕ ತಲುಪಿದರು ಗಿರ್ಮಿಟ್ ಇರಲೇ ಇಲ್ಲ.  ಆಮೇಲೆ, ಸ್ನಾಕ್ಸ್ ಕೊಡುವವರನ್ನೇ ಗಿರ್ಮಿಟ್ ಕೊಡಿ ಎಂದು ಬೇಡಿಕೆಯನ್ನೇ ಇಟ್ಟೆ. ಹುಚ್ಚು ಮಂಗ್ಯ ಪೇಟೆಗೆ ಬಂದಿದೆ ಎನ್ನುವಂತೆ, " ಇದು mall ಸರ್ ... ಇಲ್ಲಿ ಗಿರ್ಮಿಟ್ ಇಡಲಿಕ್ಕೆ ಆಗತ್ತಾ..?!...ಪಿಜ್ಜಾ ಇದೆ ನೋಡಿ ಸರ್.." ಎಂದು ತಮ್ಮ ಬರದ ಇಂಗ್ಲಿಷ್-ಫ್ರೆಂಚ್ ಹೆಸರುಗಳನ್ನು ದಡ-ದಡ ಎಂದು ಒಸೆರಿದರು. ನನಗೆ ಅವರ ಮಾತು ಕೇಳಿ ನಗುಬಂತು... " ನೋಡಿ, ಪಿಜ್ಜಾ ಬೆಂಗಳೂರಿನಲ್ಲೂ ಸಿಗುತ್ತೆ, ಮಂಗಳೂರಿನಲ್ಲೂ ಸಿಗುತ್ತೆ...ಆದರೆ ಗಿರ್ಮಿಟ್ ಇಲ್ಲೇ ಸಿಗುದು... ಕರಾವಳಿಯಲ್ಲಿ ಮೀನು, ದಾವಣಗೆರೆಯಲ್ಲಿ ಬೆಣ್ಣೆ ದೋಸೆ, ಮಂಡ್ಯದಲ್ಲಿ ಮುದ್ದೆ,  ಧಾರವಾಡದಲ್ಲಿ ಪೇಡ, ಬೆಳಗಾಂ ದಲ್ಲಿ ಕುಂದ, ಗೋಕಾಕದಲ್ಲಿ ಕರದಂಟು..ಇರಲೇ ಬೇಕು. ಅದು ಲೋಕಲ್ ಐಟಂ ಅಂತ ನೀವು  ಮಾಲ್ ದಲ್ಲಿ ಇಡ್ತಾ ಇಲ್ಲ ಅಷ್ಟೇ? ಆದರೆ ನೀವು ಲೋಕಲ್ ಜನ ತಾನೇ?"  ಇಷ್ಟು ಹೇಳಿದ ಮೇಲೆ, ಅವನ ಬಾಯಿ ಸಣ್ಣದಾಯಿತು..."ಆದರೂ.. ರೂಲ್ ಪ್ರಕಾರ ಇಡಲಿಕ್ಕೆ ಆಗಲ್ಲ ಸರ್..." ಎಂದಾಗ ಎಲ್ಲಿಲ್ಲದ ಅಸಹನೆ ಮೂಡಿತ್ತು. "ನೀವು ಲೋಕಲ್ ಮಂದಿಯಾಗಿ...ಲೋಕಲ್ ಪ್ರಾಡಕ್ಟ್ ಪ್ರೋತ್ಸಾಹ ಕೊಡದಿರುವುದು ಸರಿಯಲ್ಲ.ನಿಮಗೆ ಅಭಿಮಾನವಿರಬೇಕಿತ್ತು" ಎಂದಾಗ , "next  ಟೈಮ್ ಟ್ರೈ ಮಾಡ್ತಿವಿ ಸರ್" ಎಂದು ಹೇಳಿದ. ಗೆಳೆಯನ ಸಲಹೆಯ ಮೇರೆಗೆ ಪಿಜ್ಜಾ ತಿಂದು, ಕೊಕ್ ಕುಡಿದು ಹೊರಬಂದೆ.

ಆದರೆ, ಇಲ್ಲಿ ಪ್ರಶ್ನೆ " ನಾನು ಹೀಗೆ ಪ್ರಶ್ನೆ ಮಾಡಿದೆ" ಅನ್ನುವುದಲ್ಲ. ಬದಲಾಗಿ ನಮ್ಮ ಲೋಕಲ್ ಅನಿಸಿಕೊಂಡಿರುವ ವಸ್ತು ಸ್ಥಿತಿಗಳ ಬಗ್ಗೆ ನಮ್ಮ ಜನಕ್ಕೆ ಸ್ವಲ್ಪವೂ ಅಭಿಮಾನ ಇಲ್ಲ ಯಾಕೆ? ಬೇರೆ ದೇಶದಿಂದ ಬಂದದೆಲ್ಲ ಅಮೃತ ಅಂತ ಭಾವಿಸುತ್ತರಲ್ಲ? ಗಿರ್ಮಿಟ್ ಏನು ಪಿಜ್ಜಾ ಗಿಂತ ಕಡಿಮೆಯೇ? ಒಂದು ನೆನಪಿಟ್ಟು ಕೊಳ್ಳಿ...."ಒಂದು ಕಡಿಮೆಯ ಬೆಲೆಯ ಪಿಜ್ಜಾ ಬೆಲೆಯಿಂದ ೧೦ ಜನ ಗಿರ್ಮಿಟ್ ತಿನ್ನಬಹುದು". ದೇಶಿಯ ಮಾರುಕಟ್ಟೆಗೆ ಉತ್ತೇಜನ ನಿಡದಿರುವ ಪರಿಣಾಮವಾಗಿಯೇ ಎಂದು ರುಪಾಯಿ ಕುಸಿಯುತ್ತಿರುವುದು. ವಿದೇಶಿ ವಸ್ತುಗಳ ಹಿಂದೆ ನಾವು ಹೋಗುವುದರಿಂದ ನಮ್ಮ ಹಣ ವಿದೇಶಿಗರ ಹಿಂದೆ ಹೋಗುತಿದೆ.

Saturday, August 31, 2013

ಬೆಂಗಳೂರಿ"ನಲ್ಲೇ" ಸೆಟ್ಲ್ ಆಗ್ತಿರಾ?

ಬೆಂಗಳೂರು ಅಭಿವೃದ್ದಿಗೆ  ಹಲವಾರು  ಸಂಸ್ಥೆಗಳಿವೆ :ಬೆಂಗಳೂರು ಮಹಾನಗರ ಪಾಲಿಕೆ ಹಾಗೂ BDA ಇರುವುದು ನಿಮಗೆಲ್ಲ ಗೊತ್ತೇ ಇದೆ. ಆದರೆ ಅದಕ್ಕಿಂತಲೂ ಹೆಚ್ಚಾಗಿ ಬೆಂಗಳೂರಿನ ಕುರಿತಾಗಿ ಸಮಗ್ರವಾಗಿ(a  holistic approach  in thinking ) ಯೋಚಿಸುವ ವ್ಯಕ್ತಿಗಳು ಎಂದರೆ ಹೊಸದಾಗಿ ಬೆಂಗಳೂರಿಗೆ ಬಂದು ಜೀವನ ಸಾಗಿಸಬೇಕು ಎಂದು ಕೊಂಡವರು. ನನ್ನ ಅನುಭವದಿಂದ ಹೇಳುವ ಮಾತೆಂದರೆ, ಇಂಥ ಹೊಸ ವ್ಯಕ್ತಿಗಳು ಬೆಂಗಳೂರಿನ ಭವಿಷ್ಯದ ಬಗ್ಗೆ ಬಹಳ ಯೋಚನೆ ಮಾಡುತ್ತಾರೆ ಅನಿಸುತ್ತದೆ.

ನನಗೆ ಮೊದಲಿಂದಲೂ ಬೆಂಗಳೂರಿನ ಬಗ್ಗೆ ಒಳ್ಳೆಯ ಅಭಿಪ್ರಾಯವಿರಲಿಲ್ಲ. ಅದಕ್ಕೆ ಕಾರಣ, ಹಳ್ಳಿಯಲ್ಲಿ  ಏಳೆಂಟು ಎಕರೆ ತೋಟ-ಗದ್ದೆಗಳಲ್ಲಿ ಓಡಾಡಿ ಕೊಂಡು ಬೆಳದು, ಊರಿನ ಯಾವ ಮನೆಯ ಒಲೆಯ ಮೇಲಿನ ಅನ್ನವಾದರು ಪರವಾಗಿಲ್ಲ ಎನ್ನುವಂತೆ ಬೆಳೆದು,  ಬೆಂಗಳೂರಿನ ೬ x  ೩ ಅಡಿ ಜಾಗದಲ್ಲಿ ಜೀವನ ಮಾಡಬೇಕು ಅಂದರೆ ಹೇಗೆ ಸಾಧ್ಯ? ಆ ಮನಸ್ಸು ಹೇಗೆ ಕುಗ್ಗಿಸಬೇಕು? ನೂರಾರು ಅಡಿ ರಸ್ತೆಗಳಿದ್ದರೂ ಬೈಕ್ ಓಡಿಸಲು ಬೇಕಾದ ೨ ಅಡಿಗೂ ಗುದ್ದಾಡಬೇಕು..:! 

ಹಾಗೆಂದು ಬೆಂಗಳೂರಿಗೆ ಬಂದ ಮೊದಲ ದಿನ ಒಂದು ವಿಶೇಷ ಅನುಭವವೇ... ನಾನು ರಾಜಧಾನಿ ನಗರಿಯಲ್ಲಿ ಓಡಾಡುತ್ತಿದ್ದೇನೆ ಎನ್ನುವುದು ಒಂದು ರೀತಿಯಲ್ಲಿ (ಹಳ್ಳಿಯಲ್ಲಿ) ಗೌರವದ ವಿಷಯ. ಇನ್ನು ನನ್ನ ಹಿತೆಶಿಗಳಿಗೆ ಬೆಂಗಳೂರಿಗೆ ಹೋಗುತ್ತೇನೆ ಅಂದಾಗ, "ಹೌದಾ, ಬೆಂಗಳೂರಿನಲ್ಲಿ ಇದ್ದೀರಿ ಅಂದ್ರೆ.... ನಿಮಗೆ ಕನ್ಯಾ ದಾನ ಮಾಡುವರ ಸಂಖ್ಯೆ ಕೂಡ ಹೆಚ್ಚಾಗುತ್ತೆ...!" ಎಂದು ಹಾಸ್ಯ ಚಟಾಕಿಯನ್ನೇ ಹಾರಿಸಿದ್ದರು. ಬೆಂಗಳೂರಿನ ಫ್ಲೈಓವರ್ ಗಳ ಮೇಲೆ  AC ಬಸ್ಸಿನಲ್ಲಿ ಓಡಾಡುವಾಗ ಸುಖವೇ ಬೇರೆ. ರಸ್ತೆಯ ಪಕ್ಕದಲ್ಲಿ ನಿಲ್ಲಿಸಿರುವ ಬಿಲ್ ಬೋರ್ಡ್ಸ ಗಳು, ವಿವಿಧ ದೀಪಾಲಂಕರಗಳು  ನೋಡುವಾಗ ಅದ್ಭುತ ಸೌಂದರ್ಯ ಲೋಕದ ಅನುಭವಾಗುತ್ತದೆ. AC  ಶಾಪಿಂಗ್ ಮಾಲ್ ಗಳು, ಸ್ವಿಚ್ ಒತ್ತಿದರೆ ಸಿಗುವ ಕಾಫಿ, ಕೈ ಹಿಡಿದರೆ ನೀರು ಬಿಡುವ ನಲ್ಲಿಗಳು ಎಲ್ಲವು ವಿಶೇಷವೇ..!

ಆದರೆ, ವಾರವೊಂದು ಕಳೆಯುತ್ತಿದ್ದಂತೆ ಬೆಂಗಳೂರು ಎಂದರೆ ಏನು? ರಾಜಧಾನಿಯ ಅಂತರಾಳದ ನೋವು ಏನು ಎನ್ನುವುದು ತಿಲಿಯಲಾರಮ್ಬಿಸಿತು. ಮೂಗನ್ನು ಪ್ರವೇಶ ಮಾಡುತ್ತಿರುವ ಧೂಳು ಕಣ್ಣಗಳು,ಕಿವಿಯನ್ನು ಕೆಂಗಡಿಸುತ್ತಿರುವ ವಾಹನಗಳ ಶಬ್ಧ, ಎತ್ತಿ-ಎತ್ತಿ ಬಿಸಾಡುವ ವಾಹನದ ಗಾಲಿಗಳು-ಕೆಟ್ಟಿರುವ ರಸ್ತೆಗಳು, ಮಾತನಾಡದ ಜನಗಳು, ಟ್ರಾಫಿಕ್ ನಲ್ಲಿ ಸಿಕ್ಕಿ ಹಾಕಿಕೊಂಡಿರುವ ಆಂಬುಲೆನ್ಸ್ ಗಳು, ರಸ್ತೆಯಲ್ಲಿ ಹರ ಸಾಹಸ ಮಾಡುತ್ತಿರುವ ಟ್ರಾಫಿಕ್ ಪೋಲಿಷ್ ಗಳು, ರಸ್ತೆಗಿಳಿದು ಕೆಲಸ ಹಗಲು-ರಾತ್ರಿ ದುಡಿಯುವ BBMP ನೌಕರು, ಕೆಟ್ಟ ವಾಸನೆಯಿಂದ ಸಹನೆಯನ್ನೇ ಪ್ರಶ್ನಿಸುವಂತ  ಕಸದ ರಾಸಿಗಳು, .....<removed>, ಈ ಜಗತ್ತೇ ತಮಗೆ ಸಂಬಂಧವಿಲ್ಲದಂತೆ AC ಬಸ್ಸಿನಲ್ಲಿ ಕಿವಿಗೆ earphone  ತುರುಕಿ, ಕಣ್ಣುಗಳನ್ನು ಮೊಬೈಲ್ ಸ್ಕ್ರೀನ್ ಗೆ ನಾಟಿಸಿ ಕುಳಿತುಕೊಳ್ಳುವ ಯೌವನದ ಯುವಕ-ಯುವತಿಯರು.... ಹೀಗೆ ಸಾವಿರಾರು ಬಗೆಯ ದೃಶ್ಯಗಳು ನಿತ್ಯ ಇಲ್ಲಿ ಲಭ್ಯ.

ಬೆಂಗಳೂರು ನಗರದಲ್ಲಿ ಬದುಕು ಒಂದು ವಿಪರ್ಯಾಸದ ಸಂಕೇತ. ಬಸ್ಸುಗಳಲ್ಲಿ ಹತ್ತಿದರೆ ಆಸನ ಸಿಕ್ಕೀತು ಎನ್ನುವ ಭರವಸೆ ಇಲ್ಲ. ಜನ ಜನ್ಗಳುಲಿಯ ಮಧ್ಯೆ ಯಾರು ಮೊಬೈಲ್, ಪಾಕೆಟ್ ಗೆ ಕೈ ಹಾಕುತ್ತಾರೆ ಅನ್ನುವ ವಿಚಾರದಲ್ಲೇ ತಲೆ ಕೆಡಿಸಿ ಕೊಂಡಿರಬೇಕು. ಅದರಲ್ಲೂ ಈ BMTC  ಕಂಡಕ್ಟರ್ ಗಳು ಕೊಡಬೇಕಾದ ಚಿಲ್ಲರೆ ಹಣವನ್ನು  ಟಿಕೆಟ್ ಮೇಲೆ  ಬರೆದು ಕೊಟ್ಟರೆ ಅಂದರೆ ಬಹಳ  ಗಮನದಲ್ಲಿ ಇಟ್ಟು ಕೊಂಡಿರಬೇಕು. ಒಂದೊಮ್ಮೆ  ಇಳಿಯುವ  ಸ್ಥಳದ ಕುರಿತಾದ ಚಿಂತೆ, ಟ್ರಾಫಿಕ್ ಕಿರಿ ಕಿರಿ ಮಧ್ಯೆ ನಿವೇನಾದರು ಚಿಲ್ಲರೆ ಹಣ ಮರೆತಿರೋ... ಕೃಷ್ಣಾರ್ಪಣ ಅನ್ನಬೇಕು ಅಷ್ಟೇ. ರಾತ್ರಿ ೯ ಗಂಟೆಯಾಗಿದೆ ಅಂದರೆ ಗಂಡಸರಾದ  ನಮ್ಮಂತವರಿಗೂ ನಡೆದಾಡಲು ಒಳ್ಳೆಯ ನಗರ ಅಲ್ಲ. ಕುಡುಕ ಪುಂಡರ ಮಧ್ಯದಲ್ಲಿ ಒಮ್ಮೆ ಸಿಕ್ಕಿ ಹಾಕಿಕೊಂಡು ನಾನು ಹಾಗೂ ನನ್ನ ಗೆಳೆಯರು ಕಸಿ-ವಿಸಿ ಅನುಭವಿಸಿದ್ದೇವೆ.

ಬೆಂಗಳೂರು ನಗರದಲ್ಲಿ ಇರುವುದು ಹಣ ಮಾತ್ರ; ಮಾನವೀಯತೆಗೆ ಬೆಲೆ ಇಲ್ಲ; ನೀರು ಇಲ್ಲ; ರಸ್ತೆಗಳು ಸಾಕಾಗುತ್ತಿಲ್ಲ; ವಿಸ್ತಾರವಾದ ಮನೆಗಳಿಲ್ಲ. ಹಾಗೆಂದು ಎನೂ ಇಲ್ಲವೆಂದು ಹುಬ್ಬೇರಿಸಲು ಹೋಗಬೇಡಿ...! ೨೦೦ ಇಂಜಿನಿಯರಿಂಗ್ ಕಾಲೇಜ್ ಗಳಿವೆ, ವಿಧಾನ ಸೌಧವಿದೆ, ಸರ್ಕಾರದ ಸಂಸ್ಥೆಗಳಿವೆ, ಸಾಂಸ್ಕೃತಿಕ ನೆಲೆಯಲ್ಲಿ ಹುಟ್ಟಿರುವ ಪುರಭವನದಂತ ಸ್ಥಗಳಿವೆ, ರಾಜ-ಮಹಾರಾಜರ ನೆನಪಿನ ಅರಮನೆ ಇದೆ; ದೇಶದ ಪ್ರತಿಷ್ಥಿತ DRDO , ಇಸ್ರೋ ದಂತಹ ಸಂಸ್ಥೆಗಳಿವೆ,   ಸಾವಿರಾರು ಹೋಟೆಲ್ ಗಳಿಗಳಿವೆ, ಸಕಲ ಸೌಲಭ್ಯದಿಂದೊದಗುಡಿದ ಆಸ್ಪತ್ರೆಗಳಿವೆ. ಆದರೆ ಇವೆಲ್ಲ ಇದ್ದು  ಕಣ್ಣಿಗೆ ಕಾಣುತ್ತಿದ್ದರೂ, ಅತಿ ಕಡಿಮೆ ದೂರದಲ್ಲಿದ್ದರು ವಾಹನ ಸಂದಣಿಯ ಮಧ್ಯೆ ಯಾವುದು ಕೂಡ ಸರಳವಾಗಿ ಲಭ್ಯವಾಗುವಂತದಲ್ಲ. ಕೆಲವೊಮ್ಮೆ, ಗುಯಂ ಗುಯಂ ಎಂದು ಹಾರ್ನ ಮಾಡುತ್ತ ಟ್ರಾಫಿಕ್ ನ ಮಧ್ಯೆ ಸಿಕ್ಕಿ ಹಾಕಿಕೊಂಡು ಒದ್ದಾಡುವ ಆಂಬುಲೆನ್ಸ್ ಗಳನ್ನೂ ನೋಡಿದಾಗ, ನಗರದಿಂದ ೫೦ ಕಿಮಿ ದೂರದಲ್ಲಿ ಇರುವ ನಮ್ಮ ಹಳ್ಳಿಯ ಜನ ಬೆಂಗಳೂರಿನ ಜನಕ್ಕಿಂತಲೂ ಬೇಗ ಆಸ್ಪತ್ರೆಗೆ ತಲುಪತ್ತಾರೆ ಅನಿಸುತ್ತದೆ.

ಬೆಂಗಳೂರಿನಲ್ಲಿ ಪೂರ್ಣವಾಗಿ ಸೆಟ್ಲ್ ಆಗಬೇಕು ಅಥವಾ ಆಗುತ್ತಿರುವ ನನ್ನ ಸಹೋದ್ಯೋಗಿಗಳ ವಿಷಯಗಳನ್ನು ತಿಳಿದಾಗ ಬಹಳ ಸಾರಿ ನಾನು ಏನು  ಮಾಡಬೇಕು ಎಂದು ಪ್ರಶ್ನಿಸಿ ಕೊಂಡಿದ್ದೇನೆ.ಬೆಂಗಳೂರಿನಲ್ಲಿ ಒಂದು ಸಾಮಾನ್ಯ ಅರ್ಧ ಹಳ್ಳಿಯನ್ನೇ ಕೊಂಡುಕೊಳ್ಳಬಹುದಾದಷ್ಟು ಹಣವನ್ನು 35 x 40 ಸೈಟ್ ಗೆ ಸುರಿಯ ಬೇಕು. ಅದರ ಜೊತೆಗೆ ತಮಿಳುನಾಡು-ಕರ್ನಾಟಕ ಪ್ರೀತಿಯಿಂದ ವರ್ತಿಸಿದರೆ, ವರುಣ ದೇವನು ಕೃಪೆ ತೋರಿಸಿದರೆ ಮಾತ್ರ ನೀರು..ಇಲ್ಲಾಂದರೆ ಬೆಂಗಳೂರು ಥಾರ್ ಮರುಭೂಮಿಯೇ..! ಬೈಕ್ ನಲ್ಲಿ ಓಡಾಡುವುದು ಕಷ್ಟ.. ಕಾರಗೆ ರಸ್ತೆಯು ಇಲ್ಲ; ಪಾರ್ಕಿಂಗ್ ಜಾಗವು ಇಲ್ಲ. ಟ್ರಾಫಿಕ್ ಮಧ್ಯೆ ಸಿಕ್ಕಿ ಹಾಕಿಕೊಂಡು ಕೋಪಗೊಂಡು, "ಬಿಡ್ರಲೇ ನನ್ನ" ಅನ್ನುವುದರ  ಪರಿಣಾಮವಾಗಿ "BDA " ಎಂಬ ಶಬ್ಧ ಬಂದಿದೆಯೋ ಏನೋ !

ಬೆಂಗಳೂರಿನ ಪರಿಸ್ಥಿಗೆ ಉತ್ತರವಿಲ್ಲ. ಇಲ್ಲಿಯ ಬದುಕು ಪೂರ್ಣವಾಗಿ ಪೆಟ್ರೋಲಿಯಂ  ಹಾಗೂ ವಿದ್ಯುತ್ ಮೇಲೆ ಆಧಾರಿತ(ಎಲ್ಲ ನಗರಗಳು ಅಷ್ಟೇ). ಆದರೆ ಪೆಟ್ರೋಲಿಯಂ ಅಗಲಿ ವಿದ್ಯುತ ಅಗಲಿ ಯಾವತ್ತು ಸಿಗುತ್ತಲೇ ಇರುವ ವಸ್ತುಗಳಲ್ಲ. ಇದರಿಂದಾಗಿ ಕೆಲವೇ ವರ್ಷಗಳಲ್ಲಿ $ ಏರು ಮುಖ, ಎಣ್ಣೆಯ ಅತಿ ಹೆಚ್ಚು ಕರ್ಚುಗಳಿಂದ ಬೆಂಗಳೂರಿನ ಜೀವನ ಬಹಳ ಕಷ್ಟವಾಗಲಿದೆ ಅನ್ನುವ ಒಂದು ಲೆಕ್ಕಾಚಾರ ಕೂಡ ನನ್ನ ತಲೆಯಲ್ಲಿದೆ. ಅದರಲ್ಲೂ, "Small is Beautiful" ಪುಸ್ತಕದ ಕೆಲವು ಹಾಳೆಗಳನ್ನು ತಿರುವಿ ಹಾಕಿದಾಗ ಮಾನವ ಜಗತ್ತು  ಅತಿ ಹೆಚ್ಚಾಗಿ ನವಿಕರಿಸಲಾಗದ ಶಕ್ತಿಗಳ ಮೇಲೆ ಅವಲಂಬಿಸಿರುವುದರ ಪರಿಣಾಮವಾಗಿ ನೋವು ಕಟ್ಟಿಟ್ಟ ಬುತ್ತಿ ಎನ್ನುವುದು ಅರಿವಿಗೆ ಬಂದಿದೆ.

ಬೆಂಗಳೂರಿನ ಸಮಸ್ಯೆಗಳಿಗೆ ಜನ-ಸರ್ಕಾರಗಳು ಬಹಳ ಉಪಾಯ-ತಂತ್ರಜ್ಞಾನ ಕಂಡುಕೊಂಡಿರುವುದಂತು ನಿಜ. ಅಗಲವಾದ ರಸ್ತೆಗಳು, ಫ್ಲ್ಯವೆರ್ ಗಳು, ಮೆಟ್ರೋ, ಅಪಾರ್ಟ್ ಮೆಂಟ್ ಗಳು. ಆದರೆ ವರುಣ ಅವಕೃಪೆ ಯಾದರೆ ಉತ್ತರ ವಿದೆಯೇ? ಮಳೆಯಿಲ್ಲದಿದ್ದರೆ ಬೆಂಗಳೂರಿಗೆ ಯಾವ ತಂತ್ರಜ್ಞಾನವು ನೀರು ತರಲಾರದು. ಅತಿ ಮಳೆ, ಭೂಕಂಪನ ದಂತ ಸಣ್ಣ  ಸಣ್ಣ ವಿಷಯಕ್ಕೂ ನಗರದ ಜೀವನ ಅಸ್ತವ್ಯಸ್ತ ಗೊಳ್ಳುತ್ತದೆ. ಒಂದೊಮ್ಮೆಇಡಿ ನಗರ ಮರು ನಿರ್ಮಾಣ ಮಾಡಬೇಕಾದಾರೆ  ಊಹಿಸಿ ಕೊಳ್ಳಲು ಸಾಧ್ಯವಾಗದಷ್ಟು ನೋವು ಇಲ್ಲಿ ಬರಲಿದೆ. ಹಾಗೆ ಆಗದೆ ಇರಲಿ ಅನ್ನೋದೇ ನನ್ನ ಆಶಯ. ಆದರೆ ಸರ್ಕಾರಗಳು  ಸರಿಯಾಗಿ ಗಮನ ಹರಿಸದಿದ್ದರೆ, ಅಮೆರಿಕಾದ ಡೆಟ್ರಾಯಿಟ್ ನಗರದಂತೆ ಬೆಂಗಳೂರಿನ ಸ್ಥಿತಿ ತಲುಪುದಂತು ನಿಜ.

ಹೀಗೆ ಸಾವಿರಾರು ಸಮಸ್ಯೆಗಳನ್ನು ನಾನು ಪಟ್ಟಿ ಮಾಡಬಲ್ಲೆ. ಆದರೆ ನನ್ನ ಹಾಗೆ ಸಾವಿರಾರು ಜನ ಬೆಂಗಳೂರಿನಲ್ಲಿ ಇಲ್ಲವೆ? ಅದರ ಜೊತೆಗೆ ನಾನೇ ಕೆಲವು ವಾಕ್ಯಗಳನ್ನು ಜೋಡಿಸಿ ಕೊಂಡಿದ್ದೇನೆ, "ಕೋಟಿಗಟ್ಟಲೆ ಜನ ಇರುವ ನಗರಕ್ಕೆ ನಾನೊಬ್ಬ ಭಾರವೇ?", "ಹುಟ್ಟಿಸಿದ ದೇವರು ಹುಲ್ಲು ಮೇಯಿಸಿಯನೆ?(ದೇವರು ನನಗೂ ಇಲ್ಲಿ ಒಂದು ಮನೆ ಕೊಟ್ಟಾನು)," ನೂರು ವರ್ಷದ ಬಾಳುವೆಗಾಗಿ ಇಷ್ಟೊಂದು ಚಿಂತೆಯಾಕೆ?". ಹೀಗೆಲ್ಲ ಯೋಚಿಸಿ...ಕೊನೆಗೂ ನಾನು ಬೆಂಗಳೂರು ನನ್ನದಲ್ಲ ಅನ್ನುತ್ತಲೇ ನಾನು ಬೆಂಗಳೂರಿನವನಾಗುತ್ತಿದ್ದೇನೆ. ಬೆಂಗಳೂರಿಗೆ ಬಂದು ೯ ತಿಂಗಳು ಕಳೆದಿವೆ(ನವ ಮಾಸ ತುಂಬಿದೆ).

ಹುಟ್ಟೂರು ದೂರ ಉಳಿಯಿತು;ಉಡುಪಿ  ಮರೆಗೆ ಸರಿಯಿತು; ಹೊಸ ಬದುಕು-ಹೊಸ ಕಲ್ಪನೆ. ಜೀವನಕ್ಕೆ user guide, reference guide ಇರಲ್ಲ ನೋಡಿ. ಬದುಕು ಹೇಗಾದರೂ ನಡಿತನೇ ಇರುತ್ತೆ... ಏನಂತಿಯ ಮಗಾ? ಆದರೆ, ನನ್ನ ದೊಡ್ಡ ಚಿಂತೆ, "ನೀವು  ಬೆಂಗಳೂರಿ"ನಲ್ಲೆ" ಸೆಟ್ಲ್ ಆಗ್ತಿರಾss...?!" ಅಂತ ಕೇಳ್ತಾರಲ್ಲ... ಅವರಿಗೆ ಏನು ಹೇಳುದು? ಹೇಗೆ ಹೇಳುದು?