Thursday, August 7, 2014

ಕನಸಿನ ಹುಡುಗಿ -ಸಿಂಚನಾ ::ಭಾಗ-೨ (ಮಣಿಪಾಲದಿಂದ ಪಿರಂಜೆಯ ತನಕ)

ಅಂತು ಬಸ್ಸು ಏರಿದೆ. ಬಸ್ಸಿನ ಸಹಾಯಕ ದುಂಬ ಪೋಲೇ(ತುಳು:ಮುಂದೆ ಹೋಗು) ,ಮಿಥ್ ಪೋಲೆ (ತುಳು:ಮೇಲೆ ಹೋಗು) ಅನ್ನುತ್ತಲಿದ್ದ. ಮುಂದಿನ ಬಾಗಿಲ ಹತ್ತಿರದ ಎಡಭಾಗದ ಸೀಟ್ ನಲ್ಲಿ ಕುಳಿತು ಕೊಂಡೆ.

ಅದು HMT ಬಸ್ಸು. ಅವಿಭಜಿತ ದಕ್ಷಿಣ ಕನ್ನಡದಲ್ಲಿ ಸರ್ಕಾರಿ ಬಸ್ಸು ವ್ಯವಸ್ಥೆಯಿಲ್ಲ. ಆದರು ಈಗ ಮಂಗಳೂರು ಹಾಗೂ ಮಣಿಪಾಲದ ನಡುವೆ ಕೆಲವು ಸರ್ಕಾರಿ ವೋಲ್ವೋ ಬಸ್ಸುಗಳ ಓಡಾಟ ಇದೆ. ಈ ಬಸ್ಸುಗಳ ವಿಶೇಷ ಅಂದರೆ ಪರಿ ಪೂರ್ಣವಾಗಿ ಸ್ಥಳೀಯ ಉದ್ಯಮಿಗಳೇ ನಡೆಸುತ್ತಾರೆ. ಬಹುತೇಕ ಬಸ್ಸುಗಳ ಕಿಡಕಿಗಳಿಗೆ ಗ್ಲಾಸ್ಸು ಇರುವುದಿಲ್ಲ. ಮಳೆಯಿಂದ ರಕ್ಷಿಸಿಕೊಳ್ಳಲು ದಪ್ಪನೆಯ ಪರದೆಯನ್ನು ಕಿಡಕಿಗಳಿಗೆ ಕಟ್ಟಲಾಗುತ್ತದೆ. ರಸ್ತೆಗಳು ಕಿರಿದಾಗಿರುವುದರಿಂದ ಬಸ್ಸುಗಳ ಉದ್ದ ಕೂಡ ಕಡಿಮೆ. ಅದರ ಸ್ಪೀಡ್ ಹಾಗೂ ಓವರ್ ಟೇಕಿಂಗ್ ಮಾತ್ರ ಕೆಲವೊಮ್ಮೆ ಅನಾಹುತಕಾರಿ ಎಂದು ನನಗೆ ಅನಿಸಿದೆ.

ಮಳೆಗಾಲದ ಚಳಿಗೆ, ಬೆಳಿಗ್ಗೆಯ ಗಾಳಿ 'ಸಖತ್ ಹೊಟ್ ಮಗಾ' ಎಂಬ ರೇಡಿಯೋ ಮಿರ್ಚಿಯ ವಾಕ್ಯ ಬದಲಿಸಿ 'ಸಖತ್ ಚಳಿ ಮಗಾ' ಅನ್ನುವಷ್ಟು ಖಡಕ್ ಆಗಿತ್ತು. ಈ ಚಳಿ-ಮಳೆಯ ಬಗ್ಗೆ ಯೋಚಿಸುತ್ತಿರುವಾಗ, ಹಾಲು ಹಾಕುವ ಹುಡುಗರು, ಪೇಪರ್ ಹಾಕುವ ಹುಡುಗರು, ಆಫೀಸ್ ಗೆ ಏಳು ಗಂಟೆಯೊಳಗೆ ಬಂದು ಹೌಸ್ ಕೀಪಿಂಗ್ ಮಾಡುವರ ನೆನಪು ನನ್ನ ಮನಸ್ಸಿನಲ್ಲಿ ನಡೆದಾಡಿತು. ಒಂದು ಒಳ್ಳೆಯ ಅಂಗಿ ಕೂಡ ಕೊಂಡು ಕೊಳ್ಳಲಾರದ ಬಡ ಹುಡುಗರು ಈ ಬೆಳಿಗ್ಗೆಯ ಚಳಿಯಲ್ಲಿ ಹೇಗೆ ಪೇಪರ್, ಹಾಲು ಹೋಗುತಾರೋ ದೇವರೇ ಬಲ್ಲ. ನಾವು ಯಾವತ್ತು ಮುಖವು ಕೂಡ ನೋಡಿರುವುದಿಲ್ಲ. ಒಂದೊಮ್ಮೆ ಸಕಾಲಕ್ಕೆ ನಮ್ಮ ಅಗತ್ಯತೆ ಬರದಿದ್ದರೆ ನಾವು ಓದಾರಡಿ ಬಿಟ್ಟಿರುತ್ತೇವೆ. ಆದರೆ, ರಾತ್ರಿಯೆಲ್ಲ ಇಂಟರ್ನೆಟ್ ಕೇಬಲ್ ಗೆ ಜೋತು ಬಿದ್ದು ಬೆಳಿಗ್ಗೆ ಸೂರ್ಯ ಬಂದುದ್ದು ಎಲ್ಲಿಂದ ಎಂದು ತಿಳಿಯಲು ಕೂಡ ಗೂಗಲ್ ಉಪಯೋಗಿಸುವ ಪರಿಸ್ಥಿತಿ ಇಂಜಿನಿಯರಿಂಗ್ ಹುಡುಗರದ್ದು. ನಾವು ಸುಖ ಜೀವಿಗಳೋ ಅಥವಾ ಬೆಳಿಗಿನ ಜಾವದಲ್ಲಿ ಏನು ನಡೆಯುತ್ತದೆ ತಿಳಿಯದ ಅಜ್ಞಾತ ಜೀವಿಗಳೋ ಎನ್ನುವ ಪ್ರಶ್ನೆಗಳು ಮೂಡಿದವು.

ಇಷ್ಟು ಯೋಚಿಸುವಾಗ ಬಸ್ಸು ಮಣಿಪಾಲದಿಂದ ಪರ್ಕಳ ದಾಟಿತ್ತು. ಬಸ್ಸಿನ ಪ್ರತಿ ವಾಲುವಿಕೆಯೂ ನನ್ನ ವಿಚಾರದ ದಾರಿಯನ್ನು ಬದಲಿಸುತ್ತಲಿತ್ತು. ಅದೆಷ್ಟೋ ವಿಚಾರಗಳು-ಬಸ್ಸು ಬಿದ್ದರೆ, ಯಾವ ಮರ, ಯಾವ ಬೋರ್ಡ್ ಹೀಗೆ ಏನೇನೋ ವಿಚಾರಗಳು ತಲೆಯಲ್ಲಿ ನಡೆಯುತ್ತಲೇ ಇರುತ್ತವೆ. ಒಂದೊಮ್ಮೆ ಮನುಷ್ಯನ ತಲೆ ಎಲೆಕ್ಟ್ರಾನಿಕ್ಸ್ ಚಿಪ್ ನಿಂದ ಮಾಡಿದ್ದಾಗಿದ್ದರೆ, ಅದರಿಂದ ಉಂಟಾದ ಬಿಸಿಯನ್ನು ಒಬ್ಬನಿಗೆ ಸ್ನಾನ ಮಾಡಲು ಸಾಕಾಗುವಷ್ಟು ನೀರು ಹದನೈದು ನಿಮಿಷದಲ್ಲಿಯೇ ಕಾಯಿಸಬಹುದೋ ಏನು..!

ದೇವರ ದರ್ಶನಕ್ಕೆ ಹೊರಟಿದ್ದರಿಂದ ದೇವರ ಕುರಿತಾಗಿ ವಿಶೇಷ ದೇವರ ಧ್ಯಾನ ಕೂಡ ಮನಸ್ಸಿನಲ್ಲಿ ಉಂಟಾಗಿತ್ತು.ನಾನು ಅಮ್ಮನ ಆದೇಶದ ಮೇರೆಗೆ ದೇವರ ದರ್ಶನಕ್ಕೆ ತೆರಳುತ್ತಿದ್ದರು ದೇವರಲ್ಲಿ ಏನಾದರು ಬೇಡಿಕೆ ಇಡಬೇಕಲ್ಲವೇ ಅನ್ನುವ ಸಣ್ಣದೊಂದು ಪ್ರಶ್ನೆ ಕೂಡ ಹುಟ್ಟಿಕೊಂಡಿತ್ತು. ಅರೋಗ್ಯ ಇದೆ;ಹಣ ಇದೆ;ಉದ್ಯೋಗ ಇದೆ; ನೆಚ್ಚಿನ ಗೆಳೆಯರಿದ್ದಾರೆ. ಎಲ್ಲವು ಇದೆ ಅಂದುಕೊಳ್ಳುತ್ತಲೇ 'ಒಂದು ಹುಡುಗಿಯನ್ನು ಕೇಳಿದರೆ ತಪ್ಪೇ?' ಎಂದು ಪ್ರಶ್ನಿಸಿ ಕೊಂಡು ಹೇಗೆ ಕೇಳುವುದು ಎಂದು ವಾಕ್ಯಗಳನ್ನು ಸರಿ ಹೊಂದಿಸುತ್ತಲೇ ಸೀಟ್ ಗೆ ಒರಗಿ ಕುಳಿತುಕೊಂಡೆ. ಕಣ್ಣು ಮುಚ್ಚಿದವು. ವಾಕ್ಯಗಳು ದೇವರ ಮುಂದಿಡ ಬಹುದಾದ ಪರಿಪೂರ್ಣ ಬೇಡಿಕೆಯಾಗಿ ಮನಸ್ಸಿನಲ್ಲಿ ನುಸುಳಿದವು. ಭಕ್ತಿಯ ಪರಾಕಾಷ್ಟತೆಯೇಮ್ಬಂತೆ, ದೇವರ ಪರಿ ಸಾನಿಧ್ಯದ ಮುಂದೆ ನಿಂತಂತೆ ಭಾಸವಾಯಿತು.ಆದರೆ, ಮುಂದೇನಾಯಿತು ತಿಳಿಯಲಿಲ್ಲ. ಬಸ್ಸಿನ ವಾಲುವಿಕೆ ಜೋಕಾಲಿಯಾಗಿ, ಮಿತ್ತ ಪೋಲೆ-ದುಂಬ ಪೋಲೆ ಗಳು ಜೋಗುಲಾವಾಗಿ, ಬಸ್ಸಿನ ಸೀಟ್ ತೊಟ್ಟಿಲು ಎಂಬಂತೆ ಸುಖ ನಿದ್ರೆಗೆ ಜಾರಿದೆ.

ಮುಂದಿನ ಭಾಗ -೩.

ಕಂಚಿನ ಕಂಠದ ಸಿಂಚನಾ ಕಾಣಲು
ವಂಚನೆಯಿಲ್ಲದ ಭಾವವ ಜನಿಸಲು
ಕೊಂಚ ನಾಚಿಕೆಯೋಳಂದೆ ' ಇಂಚಿನ ಪೋನ್ನು' ಮಹಾರಾಯರೇ??
ಮಿಂಚಿನ ಕಣ್ಣಗಳು, ಸೂರ್ಯ ತೇಜಸ್ಸು
ಮಂಚದ ಮೇಲಿನ ರಾಣಿಯ ಹಾಗೆ
ಮಿಂಚಿದ ಸಿಂಚನಾ ನೋಡಿ, ಭಕ್ತಿಗಾಯಿತು ವಿರುಕ್ತಿ ಭಾವದ ಸೋಲು .

ಕನಸಿನ ಹುಡುಗಿ -ಸಿಂಚನಾ ::ಭಾಗ-೧ (ಮಣಿಪಾಲದಲ್ಲಿ ಬಸ್ಸು ಹತ್ತಿದ್ದು)

ಕತೆಯ ಕಾಲ-2010. ಈ ಸಮಯದಲ್ಲಿ ನಾನು ಮಣಿಪಾಲದಲ್ಲಿ ನಾನು ಕೆಲಸದಲ್ಲಿದ್ದೆ.
ನನಗೆ ೨೫೦ ಜನ ಸಹೋದ್ಯೋಗಿಗಳು, ಅದರಲ್ಲಿ ೭೦ ಜನ ನನ್ನ ಜೂನಿಯರ್ ಗಳು ಇದ್ದರು. ಈ ಕತೆ ನನ್ನ ಸುತ್ತಲೇ ಕಟ್ಟಿದ್ದೇನೆ. ಯಾವುದೇ ವ್ಯಕ್ತಿಯ ಬದುಕನ್ನು, ಅಥವಾ ಹಿಂದಿನ ನನ್ನ ಕಂಪನಿಯ ಯಾವುದೇ ವಿಷಯವನ್ನು ನಾನು ಬಳೆಸುತ್ತಿಲ್ಲ.


ಭಾಗ-೧ :

ಶ್ರಾವಣ ಮಾಸ. ಹಬ್ಬಗಳ ಆರಂಭದ ದಿನಗಳು. ಮಣಿಪಾಲದಲ್ಲಿ ಭಾರಿ ಮಳೆಯೂ ಪ್ರಾರಂಭವಾಗಿ ಹಲವು ದಿನಗಳು ಕಳೆದಿದ್ದವು .

ಮಣಿಪಾಲದಲ್ಲಿ ಮಳೆ ಅಂದರೆ ಮೂರೂ ನಾಲ್ಕು ತಿಂಗಳು ಗೃಹ ಬಂಧನ ಇದ್ದಹಾಗೆ. ಎಷ್ಟು ಹೊತ್ತಿಗೆ 'ಎಂಥಾ' ಮಳೆ ಬರುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಒಂದೇ ಕ್ಷಣ ಮಾತ್ರದಲ್ಲಿ ರಸ್ತೆ, ಕಾಲುವೆ, ಹಳ್ಳಗಳು ತುಂಬಿ ಹೋಗುತ್ತವೆ.ರಭಸದಿಂದ ಗಾಳಿ ಬೀಸುತ್ತದೆ. ಛತ್ರಿ ಗಟ್ಟಿಯಾಗಿದ್ದರೆ ಮಾತ್ರ ಗಾಳಿಗೆ-ಮಳೆಗೆ ನಿಮ್ಮ ರಕ್ಷಿಸೀತು! ಆದರೆ ಒಮ್ಮೆ ಮಳೆ ನಿಂತಿದೆಯಂದರೆ ಎಲ್ಲವು ಸ್ವಚ್ಚ. ಇರು ಇಲ್ಲ; ಗಾಳಿಯು ಇಲ್ಲ. ನಿರಾಳವಾಗಿ ಹೆಜ್ಜೆ ಹಾಕ ಬಹುದು. ಒಂದೊಮ್ಮೆ ಮಣಿಪಾಲದ ಹಾಗೆ ಹುಬ್ಬಳಿಯಲ್ಲೆನಾದರು ಮಳೆ ಬಿದ್ದರೆ ಹತ್ತು ವರ್ಷ ಹುಬ್ಬಳಿ ನೀರಿನ ಕೆರೆಯೇ ಆಗಿ ಬಿಡಬಹುದು. ಮಳೆ ಆರಂಭವಾಗುತ್ತಿದ್ದನತೆ ಎಲ್ಲವು ಹಸಿರು. ಸುತ್ತಲು ಗಿಡ-ಪೊದೆಗಳು ಹಬ್ಬಿ ಎಲ್ಲವು 'ಗ್ರೀನ್ ವ್ಯೂ' ಅಥವಾ ಎಸಿ ರೂಂ ನಲ್ಲಿ ಕೊಳೆಯುತ್ತಿದವರಿಗೆ 'ನ್ಯಾಚುರಲ್ ಸೀನ್'.

ಮಣಿಪಾಲಕ್ಕೆ ಹೊರಗಿನಿಂದ ಬಂದವರಿಗೆ ಮಣಿಪಾಲದ ಮಳೆ ಒಂದು ರೀತಿಯ ಶಾಪ. ಅದರಲ್ಲೂ ಉತ್ತರ ಕರ್ನಾಟಕದ ಯಾವುದೊ ಪ್ರದೇಶದಲ್ಲಿ ಮಣಿಪಾಲದಲ್ಲಿ ಬೇಸಿಗೆಯಲ್ಲಿ ಬೀಳುವ ಇಬ್ಬನಿಯಷ್ಟು ಮಳೆಯನ್ನೂ ನೋಡಿದವರಿಗೆ ಮಣಿಪಾಲದಲ್ಲಿ ಅವರಿಗೆ ಪ್ರವಾಹ ಅನಿಸುವುದು ಸಹಜವಾಗಿತ್ತು. ಯಾರಿಗಾದರು ಹೊರಗಡೆ ಹೋಗೋಣ ಅಂದರೆ, " ಸಾಕಲೇ...ಈ ಮಳೆ ಕೊಲ್ತಾ ಇದೆ ಲೇ " ಎಂದು ಕೊರಗುತ್ತಲೇ ಕಚೇರಿಯತ್ತ ತೆರಳುವರೆ ಜಾಸ್ತಿ. 'ಇಂಚಿನ ಸಾವು ಮಹರಾಯ !'.

ಅದು ಶ್ರಾವಣ ಮಾಸದ ಮೊದಲ ಶುಕ್ರವಾರ. "ವೀಕೆಂಡ್ ಪ್ಲಾನ್ ?" ಎನ್ನುತ್ತಲೇ ಎಲ್ಲರು ಕೇಳುತ್ತಲಿದ್ದರು. ಎಲ್ಲರು ಒಂದೊಂದು ಸಬೂಬು. ಮಳೆ ಬೇರೆ. ಹೀಗಿರುವಾಗ ನಾನು ಧರ್ಮಸ್ಥಳಕ್ಕೆ ಹೋಗಬೇಕು, ಶ್ರಾವಣ ಮಾಸದ ಪೂಜೆ ಸಲ್ಲಿಸಬೇಕು ಎಂದು ನನ್ನ ಮನೆಯಿಂದ ಆದೇಶ ಬಂತು. ಶನಿವಾರ ಬೆಳಿಗ್ಗೆ ನಾನು ಧರ್ಮಸ್ತಳಕ್ಕೆ ತೆರಳಲು ನಾನು ನಿರ್ಧಾರ ಮಾಡಿ, ಬದುಕಿನ ಏಕಾಂಗಿತನದ ಜೊತೆಯಲ್ಲೂ ನನ್ನ ಜೊತೆಯಿದ್ದ ಗೆಳತಿ ಆಕಾಶವಾಣಿ ಯನ್ನು ಕೇಳುತ್ತ, ಉಡುಪಿಯ ಬಗ್ಗೆ ಕನಸುಗಳನ್ನು ಕಾಣುತ್ತ, ಭರತನಾಟ್ಯ, ಸಂಗೀತ, ರಾಜಾಂಗಣ, ಯಕ್ಷಗಾನ, ಆಭರಣ, ಡಯಾನಾ ಚಿತ್ರಗಳನ್ನು ಕಾಣುತ್ತ ಮಲಗಿದ್ದೆ. ಕೆಲವೊಮ್ಮೆ ಮಳೆಯ ತಪ-ತಪ ಎನ್ನುವ ಹನಿಗಳ ಸದ್ದು , ಗಡಿಯಾರದ ಟಿಕ್ ಟಿಕ್ ಶಬ್ಧವು ಕೂಡ ನನ್ನ ಕನಸ್ಸಿಗ್ಗೆ ತೊಂದರರೆ ಕೊಡುತ್ತಿತ್ತು. ಎಲ್ಲವು ಕನಸಿನೊಳಗೆ ಕನಸಾಗಿ, ನಿದ್ದೆಯೇ ಮುಗಿಯದ ಕಾಲದಲ್ಲಿ ಬೆಳಿಗ್ಗೆ ೬ ಗಂಟೆಗೆ ಅಲರಾಮ ನನ್ನ ಏಳಿಸಿತು...!

ತಣ್ಣೀರಿನ ಸ್ನಾನ ಮಾಡಿ, ಬೆಳಿಗ್ಗಿನ ಜಾವದಲ್ಲಿ ಟೈಗರ್ ಸರ್ಕಲ್(ಹುಲಿ ವೃತ್ತ) ಕ್ಕೆ ಬಂದೆ. ದೇವರ ದರ್ಶನಕ್ಕೆ ಹೊರಟಾಗ ದೇವರ ಭಕ್ತಿ ರೋಮ-ರೋಮ ಗಳಲ್ಲೂ ಸಂಚರಿಸುತ್ತಿತ್ತು. ಬೆಳಿಗಿನ ಜಾವದಲ್ಲಿ ಯಾವ ಹುಡುಗಿಯು ವೃತ್ತದಲ್ಲಿ ಇದ್ದಿರಲಿಲ್ಲ, ಜೊತೆಗೆ ದೇವಲಾಯಕ್ಕೆ ಹೋಗುವಾಗ ಯಾರನ್ನು ನೋಡಬಾರದು ಎಂದು ಕೊಂಡೆ ಬಸ್ಸಿಗೆ ಕಾಯುತ್ತ ಬಸ್ ಸ್ಟಾಂಡ್ ನಲ್ಲಿ ನಿಂತು ಕೊಂಡೆ. ಮಳೆಯ ಮಧ್ಯೆ, ಬೆಳಿಗಿನ ಛಳಿಯ ಕಾಟದಿಂದ ಮೈ ಮನಸ್ಸು ನಡುಕುತ್ತಲಿತ್ತು.

ಸೋಮೆಂದ್ರ( ನನ್ನ ಕಿರಿಯ ಸಹೋದ್ಯೋಗಿ ) KMC ಯ ಯೋಗ ತರಬೇತಿ ಮುಗಿಸಿ, ಹಂಗ್ಯೋ ಸೈಬಾ(ಹೋಟೆಲ್) ಮುಂದೆ ಹಾಸಿ ನನ್ನ ಮುಂದೆ ನಿಂತು,

"ಹಾಯ್ ಗುಡ್ ಮಾರ್ನಿಂಗ್ ವೆಂಕಟ್ ಸರ್, ಏನು ಇಷ್ಟು ಬೆಳಿಗ್ಗೆ ?? "

"ಏನಿಲ್ಲಪ್ಪ ಸೋಮೆಂದು... ಧರ್ಮಸ್ಥಳ ಕಡೆಗೆ ಹೊರೆತಿದ್ದೇನೆ. ನೀನೇನು ಇಲ್ಲಿ ?" ಎಂದು ಪ್ರಶ್ನಿಸಿ. ಅವನ ಹಿಂದೆ ನಿಂತ ಪಡೆಯಲ್ಲಿ, ರೋಶನ್, ದಿವ್ಯ , ಶ್ರಾವ್ಯ, ಕಂಚಿಕಾ, ರೋಶನಿ...ಎಲ್ಲರನ್ನು ನೋಡಿ. ಅಂತು ದೇವರ ದರ್ಶನದಲ್ಲೂ ಸೌಂದರ್ಯದ ಪಿಂಡಗಳು ಮುಂದೆ ಬಂದವಲ್ಲ; ನನ್ನ ಭಕ್ತಿ ಮಾರ್ಗಕ್ಕೆ ತಡೆ ಅಂದು ಕೊಂಡೆ. ಜೊತೆಗೆ, ಸೂರ್ಯೋದಯವನ್ನು ಎಂದು ನೋಡಿಯೇ ಇರಲಾರದ ಸೋಮೆಂದು ನಂತಹ ಪಿಂಡ ಮಳೆಗಾಲದ ಚಳಿಯಲ್ಲಿ ಯೋಗವೆಂದು ೫ ಗಂಟೆಗೆ ಎದ್ದು ಬರುತ್ತಾನೆ ಎಂದರೆ ಹೆಣ್ಣು ಉತ್ಸಾಹದ ಮೂರ್ತಿಯೇ ಇರಬೇಕು ಅನ್ನುವುದು ಕಂಚಿಕಾಳ ಮುಖ ಒಮ್ಮೆ ನೋಡಿದಾಗಲೇ ನನಗೆ ಅನಿಸಿತ್ತು. ಇವರಿಂದಾಗಿ ಯೋಗದ ಬಗ್ಗೆ ನನಗೂ ಆಸಕ್ತಿ ಹುಟ್ಟಿತ್ತು. ಆದರೆ ಇವರಲ್ಲಿ ನೋಡಿದ ಮುಖ ಯಾವುದು ಕೂಡ ಉಡುಪಿಯದಲ್ಲ; ಕರಾವಳಿಯದಲ್ಲ. ನನ್ನ ಗುರಿ ಏನಿದ್ದರು ಉಡುಪಿ. ನೋ ಯೋಗ..! ಎಂದು ಸಮಾಧಾನಿಸಿ ಕೊಂಡು, ಕಣ್ಣುಗಳನ್ನು ಬಸ್ಸಿನ ಅಗಮನದತ್ತ ನೋಡಿದೆ.
"ಬೈ ಸರ್" ಎನುತ್ತಲೆ ಎಲ್ಲರು ಹೊರಟರು. ನೋಡ ಬಾರದು ಅಂದುಕೊಂಡರು ಮತ್ತೆ ಅವರತ್ತ ನೋಡಿದೆ. ನಾವು ಏನೇ ಮಾಡಿದರು ಹುಡುಗರೇ ಬಿಡಿ!

ಬಸ್ಸು ಬಂತು. ಕರ್ಕರ (ಕಾರ್ಕಳ), ಬಿದ್ರೆ( ಮೂಡುಬಿದರೆ), ಬೆಳ್ತಂಗಡಿ ಎನ್ನುತ್ತಾ ವಾಹನ ಸಹಾಯಕ ಕೂಗಿದ ಧ್ವನಿ ಕೇಳಿ ಬಸ್ಸು ಏರಿ ಕುಳಿತೆ. (ಭಾಗ -೨ ರಲ್ಲಿ ಮುಂದಿನ ಕತೆ ಇದೆ)

Thursday, May 1, 2014

ಮರ್ಯಾದಿ ಇಲ್ಲದವರಿಂದ ಮರ್ಯಾದ ಹತ್ಯೆಗಳು!


ಕಳೆದ ಎರಡು ವಾರಗಳಿಂದ ಅಲ್ಲಲ್ಲಿ  ಮರ್ಯಾದ  ಹತ್ಯ ಪ್ರಕರಣಗಳನ್ನು ಪತ್ರಿಕೆಯಲ್ಲಿ ಓದಿದೆ.

ಯಾರೊಬ್ಬರು ಆತ್ಮ ಹತ್ಯೆ ಮಾಡಿಕೊಂಡರು ಅಂದರೆ ನನಗೆ ಅಷ್ಟೊಂದು ಬೇಸರ ಆಗುವುದಿಲ್ಲ. ಆದರೆ, ಯಾರಾದರು ಒಬ್ಬರು ಮರ್ಯದ ಹತ್ಯೆಗೆ ಜೀವ ಕೊಟ್ಟರು ಎಂದರೆ ನನ್ನ ಹೃದಯ  ತೀವ್ರವಾಗಿ ಬಡಿಯುತ್ತದೆ. ಆ ನೋವು, ಕೇವಲ ಶಬ್ಧಗಳಲ್ಲಿ ನಾನು ವ್ಯಕ್ತ ಪಡಿಸಬಹುದೆ ಹೊರತು  ಮರ್ಯಾದಾ ಹತ್ಯ ವಿರುದ್ಧ ಒಂದು  ಕ್ರಮ ಕೈಗೊಳ್ಳಲು ನಾನು ವಿಫಲ ಎಂದು ಬೇಸರವಾಗುತ್ತಿದೆ.

ಮರ್ಯಾದ ಹತ್ಯಗಳ  ಹಿಂದೆ ಇರುವ ಬದುದೊಡ್ಡ ಕಾರಣ 'ಜಾತಿ'. ಪ್ರತಿಯೊಬ್ಬರಿಗೂ ಜಾತಿ ಇದ್ದೀತು; ಸಂಪ್ರದಾಯ ಇದ್ದೀತು; ಆಚರಣೆಗಳು ಇದ್ದಾವು. ಆದರೆ ೧೮ ವರ್ಷ ಮೀರಿದ ಮೇಲೆ, ನಾನು ಯಾವುದನ್ನೂ ಬಿಡಬೇಕು; ಯಾವುದನ್ನೂ ಒಪ್ಪಬೇಕು ಎಂದು ತಿಳಿಯುವ ಅಧಿಕಾರ ಪ್ರತಿಯೊಬ್ಬ ಯುವಕ-ಯುವತಿಗೆ ಇದೆ. ಯಾರಿಗೆ ತಮ್ಮವರು ಎಂದು ಮಮತೆ ಇರುತ್ತದೋ(ಉದಾಹರಣೆಗೆ ಅಪ್ಪ, ಅಮ್ಮ, ಅಣ್ಣ ಅಕ್ಕ...ಸಂಬಂಧಿಕರು) ಅಂತವರು  ಕೇವಲ ತಮ್ಮ ಅಮೂಲ್ಯವಾದ ಸಲಹೆ ನೀಡಬಹುದೇ ಹೊರತು ತಮ್ಮ ಹುಡುಗಿ/ಹುಡುಗ  ತಮ್ಮ ಅಧಿಕಾರದ ಮಾತು ಕೇಳಿಲ್ಲ ಅನ್ನುವ ಕಾರಣಕ್ಕಾಗಿ ಜೀವವನ್ನೇ ತಿನ್ನುವ ಅಧಿಕಾರ ಖಂಡಿತ ಇಲ್ಲ.

ಭಾರತೀಯ secularism /ಜಾತ್ಯತಿತತೆಯಲ್ಲಿ ಒಂದು ದುರಂತ ಇದೆ. ಹೊರಜಗತ್ತಿನಲ್ಲಿ- ಟಿವಿ ಕಾರ್ಯಕ್ರಮಗಳಲ್ಲಿ, ಸಾರ್ವಜನಿಕ ಸಭೆಗಳಲ್ಲಿ ಎಲ್ಲರು ಅದ್ಭುತ  ಜಾತ್ಯತಿತರು. ಉಡುಪಿಯಲ್ಲಿ, ರಾಜಾಂಗಣದಲ್ಲಿ 'ವಸುದೇವ ಕುಟುಂಬಕಂ' ಎಂದು ಹೇಳಿದ ಪ್ರವಚನ ಕೇಳಿದ ನೀವು ಊಟದ ಸಾಲಿಗೆ ಹೋಗುತ್ತಿರುವಾಗ ಅದನ್ನು ಮರೆತಿರಲೇ ಬೇಕು..! ಇಲ್ಲದೆ ಹೋದರೆ ನಿಮ್ಮನ್ನು ಅಡ್ಡಗಟ್ಟುವರು ಇದ್ದೆ ಇರುತ್ತಾರೆ..! ಹೀಗಾಗಿ ಬದುಕುವುದಕ್ಕಾಗಿ, ಸ್ವ-ಶ್ರೇಷ್ಠತೆಯನ್ನು ಸಾರಲು ಇಂತ ಮಾತುಗಳು ಕೇಳುತ್ತಲೇ ಇರುತ್ತವೆ.  ಒಳಗೊಳಗೇ ಎಲ್ಲರಿಗು ಜಾತಿ ಇದ್ದೆ ಇರುತ್ತದೆ. ಅದು ಬಿಡಲಾರರು. ಅದು ಬಿಡಲಾಗದ ನಂಟು ಮನೆಗಳು ಕಳಿಸಿ ಕೊಟ್ಟಿರುತ್ತವೆ. ಹೀಗೆ ಮನೆಯಲ್ಲಿ ಕಳಿಸಿ ಕೊಡುವ ಜಾತಿಯ ಬಗೆಗಿನ ಅನಾಚಾರವನ್ನು ಸಂಸ್ಕಾರವೆಂದು(ಈ ಸಂಸ್ಕಾರದಲ್ಲಿನ  ಎಲ್ಲವು ಕೆಟ್ಟದ್ದು ಎಂದು ನನ್ನ ಅಭಿಪ್ರಾಯ ಅಲ್ಲ) ಭಾವಿಸಿ, ಶಾಲೆಯ ಶಿಕ್ಷಣವನ್ನು ವೃತ್ತಿ ನಿಮ್ಮಿತ ಜ್ಞಾನವೆಂದು ಭಾವಿಸಲಾಗುತ್ತದೆ. ಸತತ ೨೫ ವರ್ಷ ಶಾಲೆಯಲ್ಲಿ ಜಾತ್ಯತೀತ ಪಾಠ ಮಾಡಿದ ಶಿಕ್ಷಕ ಕೂಡ ತನ್ನ ಮಗನಿಗೆ ಅಂತರ್ಜಾತೀಯ ಮದುವೆಗೆ ಒಪ್ಪಲಾರ.

ಅಂತರ್ಜಾತೀಯ ಮದುವೆಗಳು ನೀವು ಮಾಡಿ ಎಂದು ನಾನು ಯಾರಿಗೂ ಹೇಳುತ್ತಿಲ್ಲ. ಯಾವುದನ್ನು ಯಾರಿಗೂ ಒತ್ತಾಯ ಪೂರ್ವಕವಾಗಿ ಹೇರುವುದು ಪ್ರಜಾಪ್ರಭುತ್ವದ ಲಕ್ಷಣವಲ್ಲ. ಆದರೆ, ನಿಮ್ಮ ಮಗಳು/ಮಗನು  ಕಾಲಕ್ಕೆ ಅನುಕೂಲವಾಗಿ ತನಗೆ ಸರಿಯನಿಸಿದ ಸಂಗಾತಿಯನ್ನು ಆರಿಸಿ ತಂದಾಗ ಜಾತಿಯ ಕ್ಯಾತೆ  ಯಾಕೆ ತೆಗೆಯುತ್ತಿರಿ?. ನಿಮ್ಮಗೆ ಒಪ್ಪಿಗೆ ಇಲ್ಲದಿದ್ದರೆ ಸಲಹೆ ಕೊಡಿ; ಎಲ್ಲ ನಿಮ್ಮ ಮಗಳು/ಮಗನ ಸಂಬಂಧದಿಂದ ದೂರಕ್ಕೆ ಸರಿಯಿರಿ. ಇದು ಹಾಯ್ ಕೋರ್ಟ್ ಕೂಡ ಹೇಳಿದ ವಾಕ್ಯ.

ಪ್ರೇಮಲೋಕದಲ್ಲಿ ನಲಿಯುತ್ತಿದ್ದ  ಕ್ರೌಂಚ ಹಕ್ಕಿಗಳನ್ನು ಬೇಟೆಗಾರ ಕೊಂದು ಕೆಡವಿದಾಗ ಮಹಾನ್ ಕವಿ, ರಾಮಾಯಣದ ಕೃತ್ರು ವಾಲ್ಮೀಕಿ ಮಹಿರ್ಷಿ  ಕೊಪೋದ್ರಿಕ್ತನಾಗಿ ಬೇಟೆಗಾರನಿಗೆ, "ನಿನಗೆ ಯಾವತ್ತು ಮೋಕ್ಷ ಸಿಗೆದೆ ಇರಲಿ" ಎನ್ನುತ್ತಾನೆ.
       (मां निषाद प्रतिष्ठां त्वमगमः शाश्वतीः समाः।
         यत्क्रौंचमिथुनादेकम् अवधीः काममोहितम्॥‘)
ಹೀಗೆ ಇರುವ ನಮ್ಮ ಧಾರ್ಮಿಕ ಗ್ರಂಥಗಳ ಉಚ್ಚಾರಣೆ ಯಾಕೆ ನಮ್ಮಗೆ ಸಂಸ್ಕಾರ ರೂಪದಲ್ಲಿ ಬಂದಿಲ್ಲ ? ಜಾತಿಗಾಗಿ ಕೊಲೆಗೈಯುವ ಧೂರ್ತರಿಗೆ ಯಾವ ಬೆಲೆ ಕೊಡಬೇಕು ?

ಬದುಕುವ ಸಾವಿರಾರು ಕನಸುಗಳನ್ನು ಹೊತ್ತು, ಕಾಲ, ಪ್ರದೇಶ, ತನ್ನ ಅವಶ್ಯಕತೆಗಳಿಗನುಗುಣವಾಗಿ ಪ್ರೀತಿಯೆಂಬ ಭಾವ ದಿಂದ ಬದುಕೆಂಬ ಅಮೃತವನ್ನು  ಉಣ್ಣಲು ಬಂದವರಿಗೆ ಯಾಕೆ ನಿಮ್ಮ ತಿರಸ್ಕಾರ?

ಮರ್ಯಾದ ಹತ್ಯಗಳು ೨೧ನೆ ಶತಮಾನದಲ್ಲಿ ಅಸ್ತಿತ್ವ ಪಡೆಯುತ್ತವೆ ಅಂದರೆ ನಾವು ಓದುವ ವಿಜ್ಞಾನ, ನಮ್ಮ ವೈಚಾರಿಕತೆಗೆ ಗ್ರಹಣ ಇದೆ ಅಂತಾನೆ ಅರ್ಥ..!

Thursday, February 13, 2014

ಫೆಬ್ರುವರಿ ೧೪-ಪ್ರೇಮಿಗಳ ದಿನ..!

ಇದು  ಹುಚ್ಚುರ ದಿನವೇ ಅನ್ನು ತರ ಸಾಂಪ್ರದಾಯಿಕ  ಜಗತ್ತಿನ ಹಲವು ಮಂದಿ ಫೇಸ್ಬುಕ್, ಪತ್ರಿಕೆ ಅಂಕಣ ಗಳಲ್ಲಿ ಬರೆದುದ್ದನು  ಓದಿದ್ದೇನೆ. ಕೆಲವು ಸಂಘಟನೆಗಳು  ಈ  ದಿನದ ಆಚಾರಣೆಯನ್ನೇ ಬಹಿಸ್ಕಾರ ಕೂಡ ಹಾಕಿವೆ. ಆದರೆ, ಪ್ರೇಮದ ಲೋಕದಲ್ಲಿ ವಿವಹರಿಸುತ್ತಿರುವವರು ಮಾತ್ರ ಯಾವುದು ಸಂಬಂಧವಿಲ್ಲದೆ ಕೆಂಪು ಗುಲಾಬಿ ಖರಿದಿಸುತ್ತಿದ್ದಾರೆ; ಆಫೀಸ್ ಗೆ ರಜೆ ಹಾಕುತ್ತಿದ್ದಾರೆ . ಏನ್ ಕತೆಯೋ ಗೊತ್ತಿಲ್ಲ..! ಎಲ್ಲ ಪ್ರೇಮ ರೀ !

ಅಂದಹಾಗೆ ಪ್ರೀತಿ ಅಂದ್ರೆ ಏನು ? ಎಲ್ಲರು ಕೇಳುವ ಪ್ರಶ್ನೆ ಮಾತ್ರವೊಂದೇ.. ಆದರೆ, ಭೂಮಿಯ ಮೇಲಿರುವ ಪ್ರತಿಯೊಂದು ವ್ಯಕ್ತಿಯ ವಾಖ್ಯನ ಬೇರೆ ಬೇರೆನೆ. ಅದಕ್ಕಾಗಿಯೆ ಸಾವಿರಾರು ಲವ್ ಫಿಲ್ಮ್ಸ್ ಬಂದರು, ಸಾವಿರಾರು ಪುಸ್ತಕಗಳನ್ನು ಪ್ರೀತಿಯ ಕುರಿತಾಗಿ ಬರೆದರೂ ಇವತ್ತಿಗೂ ಪ್ರೀತಿ ಹೀಗೆ ಎಂದು ತಿರ್ಮಾನಕ್ಕೆ ಬಂದವರಿಲ್ಲ. ಪ್ರೇಮಿಗಳ ದಿನಾಚರಣೆ ಸರಿಯೋ ತಪ್ಪೋ ಅನ್ನುವ ಜಿಜ್ಞಾಷೆಗಿಂತಲೂ, ಭಾರತೀಯ ಸಂಸ್ಕೃತಿಯಲ್ಲಿ ಇಂತದೊಂದು ದಿನ ಕೆಟ್ಟದ್ದು ಎಂದು ಹೇಳುವ ವಸ್ತು ಸ್ಥಿತಿ ನನಗೆ ಕಾಣುವುದಿಲ್ಲ. ದೇವರ ದೇವ ಶ್ರೀ ಕೃಷ್ಣನಿಗೆ ರುಕ್ಮಿಣಿ ದೇವಿ ಪ್ರೇಮ ಪತ್ರ ಬರೆದು ಪ್ರೀತಿಯನ್ನು ನಿವೇದನೆ ಮಾಡಿಕೊಂಡ ಭೂಮಿ ಇದು. ಸಮಾಜದಲ್ಲಿ, ನ್ಯಾಯುತವಾದ  ಆಸೆ, ಪ್ರೀತಿ, ಕಾಮ (ವಾತ್ಸಾಯನ ಕಾಮಸೂತ್ರ ಬರೆದುದ್ದು ಇದೆ ಭೂಮಿಯಲ್ಲಿ) ಅಪರಾಧವಲ್ಲ. ಎಲ್ಲವು ಮಿತಿಯೊಳಗೆ ಇದ್ದರೆ ಆರೋಗ್ಯಕ್ಕೆ ಒಳ್ಳೆಯದೇ...!

ಸರಿ, ನಮ್ಮ-ನಿಮ್ಮ ನಡುವೆ ಇರುವ ಒಬ್ಬ ಹುಡುಗನ ಕತೆ ಹೇಳುತ್ತೇನೆ ಕೇಳಿ. ಅವನೊಬ್ಬ ಬುದ್ಧಿವಂತ ಹುಡುಗ.  ಎಂ ಬಿ ಎ  ಓದುವಾಗ, ಜೆರಾಕ್ಸ್ ಅಂಗಡಿಯೊಂದರಲ್ಲಿ ಇವನು ನಿಂತಾಗ ಅವಳು ಇವನಿಗೆ ಪರಿಚಯವಾಗಿದ್ದಳು. ಅವಳು ಅಲ್ಲಿಯೇ ಸಮೀಪದ ಕಾಲೇಜ್ ನಲ್ಲಿ  ಪಿ ಯು ಸಿ  ಓದುತಿದ್ದಳು. ನೂರಾರು ಪೇಜ್ ಜೆರಾಕ್ಸ್ ಮಾಡುತ್ತಿರುವಾಗ, ಸುಮ್ಮನ್ನೆ ನಿಂತಲೇ ನೋಟ, ಭಾವ, ಮಾತು ಸುರುವಾಗಿ, ಪ್ರೀತಿಗೆ ನಾಂದಿಯಾಗಿತ್ತು.ಅವರ ಜಾತಿ ಬೇರೆ; ಮನೆ-ಊರು-ಕೇರಿ ಬೇರೆ ಬೇರೇನೆ, ಭಾಷೆ ಬೇರೆ; ಆದರೆ ಹೃದಯದ ಕೂಗು ಒಂದೇ ಆಗಿತ್ತು. ದಿನದಿಂದ ದಿನಕ್ಕೆ ಅವರ ಪ್ರೀತಿ ಗಾಢವಾಗುತ್ತ ಹೋಯಿತು.ಬಡತನದಲ್ಲಿದ್ದ ಹುಡುಗಿಯ ಓದನ್ನು  ಎಂ ಎಸ್ ಸಿ ಗೆ ತಂದ ಆ ಪುಣ್ಯಾತ್ಮ. ಹುಟ್ಟು ಕುಡಕನ ಮಗಳು ಇವನ ಸಾಂಗತ್ಯದಲ್ಲಿ ಪಿ ಯು ಸಿ ಗಿಂತ  ಮುಂದಿನ ಶಿಕ್ಷಣ ಸಾಧ್ಯವಾಗಿತ್ತು. ಬದುಕಿನ ನಿರ್ಧಾರವಾಗಿ , ಅವಳೇ ತನ್ನ ಹೆಂಡತಿಯೆಂದುಕೊಂಡ ಅವನು ತನಗೆ ನೌಕರಿ ಸಿಗುವ ತನಕ, ಮನೆಯಲ್ಲಿ ಯಾವ ವಿಷಯವನ್ನು ಹೇಳಲಿಲ್ಲ. ತಂಗಿಯ ಮದುವೆ ಮಾಡಿಸಿದ; ಅಪ್ಪನ ಸಾಲ ತಿರಿಸಿದ. ಒಂದು ದಿನ ಅಪ್ಪ-ಅಮ್ಮ ತನ್ನ ಮದುವೆಯ ಕುರಿತಾಗಿ ಹೇಳುವಾಗ, ಮನೆಯಲ್ಲಿ ಶಾಂತವಾಗಿ ಕುಳಿತು ತನ್ನ ಪ್ರೀತಿಯನ್ನು ಹೇಳಿದ.

ಮದುವೆಯಾದ ತಂಗಿಯನ್ನು ಭಾವನೊನ್ದಿಗೆ ಕರೆಸಿದ. ಅಪ್ಪ-ಅಮ್ಮನಿಗೆ ಸಾವಧಾನದಿಂದ ಮಾತಿಗೆ ತಂದ. ವಿಷಯ ಹೀಗೆ ಹೇಳಿದ, " ಅಪ್ಪ, ನಾನು ನಮ್ಮ ಜಾತಿಗಿಂತ ಕೆಳಗಿನ ಹುಡುಗಿಯನ್ನು ಪ್ರೀತಿಸಿದ್ದೇನೆ. ಅವಳು ತುಂಬಾ ಒಳ್ಳೆಯವಳು. ಕಳೆದ ನಾಲ್ಕು ವರ್ಷಗಳಿಂದ ನಾವು ಪ್ರೇತಿಯಲ್ಲಿದ್ದೆವೆ. ಆದರು ನಾನು ನನ್ನ ಯಾವ ಕರ್ತವ್ಯವನ್ನು ಮರೆತಿಲ್ಲ.ಅವಳು ನಂಬಿಕೆಯ ಹಾಗೂ ಪ್ರೀತಿಯಿಂದ ನೋಡಿಕೊಂಡು ಹೋಗುವ ಹುಡುಗಿ ಎಂಬ ಭರವಸೆ ಇದೆ. ಅವಳಲ್ಲದೆ ಬೇರೆಯವರನ್ನು ನಾನು ಒಪುವುದಿಲ್ಲ" ಎಂದು ಹೇಳಿದ. ಅದೊಂದು ಕಾಲದಲ್ಲಿ ಜಬ್ಧಾರಿಯಿಲ್ಲದ ಹುಡುಗ, ಹುಡುಗಿಯಿಂದಾಗಿ ಒಳ್ಳೆಯ ಸಭ್ಯ ವ್ಯಕ್ತಿಯಾಗಿದ್ದ. ಅವನ ಪ್ರೀತಿಯ ಗಿಂತಲೂ, ಜಾತಿಯ ಪ್ರಶ್ನೆ ಕಾಡಿತ್ತು. ನಾಲ್ಕಾರು ಬಾರಿ ತಿಳಿ ಹೇಳಿ, ಜಾತಿ ಹೊರಗಿನ ಮದುವೆಗೆ ಒಪ್ಪಸಲಾಗದೆ, ಒಂದು ದಿನ ಪೋಲೀಸರ ಮುಂದೆ ಮದುವೆ ಮಾಡಿಕೊಂಡರು.

ಮದುವೆಯಾದ ನಂತರ, ಮುಂದಿನ ಒಂದು ವರ್ಷ ಮನೆಯಿಂದ ಹೊರಗೆ ಉಳಿಯಬೇಕಾಯಿತು. ತನ್ನ ತಂದೆ-ತಾಯಿಗೆ ಯತಾವತ್ತಾಗಿ ಹಣವನ್ನು ಕೊಟ್ಟು, ಹೊರಗಿನವರಿಂದ ಮನೆಯ ಸ್ಥಿತಿಗತಿಗಳನ್ನು ತಿಳಿದುಕೊಳ್ಳುತ್ತಾ  ಇರಲು, ಒಂದು ದಿನ ಕಾಲ ಬದಲಾಗಿತ್ತು. ಮೊಮ್ಮಗನ ಕಾಣುವ ಬಯಕೆಯಿಂದ, ಜಾತಿ ಹೀನ ಸೊಸೆಯ ಮನೆಗೆ ಅಪ್ಪ-ಅಮ್ಮ ಬಂದಿದ್ದರು. ಜಾತಿ ಮರೆಗೆ ಸರಿದಿತ್ತು. ಅತುತ್ತಮ ಸಂಸಾರವಾಗಿ, ಸಾರವಾಗಿ ನಡೆಯುತ್ತಿದೆ ಆ ಬದುಕು.

ಹೀಗಿರುವಾಗ, ಕಾಲಗಟ್ಟದಲ್ಲಿ ಉಂಟಾದ ಪ್ರೀತಿ ಹುಡುಗಿಯ ಕನಸುಗಳು, ಹುಡುಗನ ಬವಣೆಗಳನ್ನು ದೂರಿಕರಿಸುವಲ್ಲಿ ಸಹಕಾರಿಯಾಯಿತು. ಜಾತಕ ನೋಡಲಿಲ್ಲ ;ವರದಕ್ಷಿಣೆ ತೆರಲಿಲ್ಲ. ವಾದ್ಯ ಬಾರಿಸಿ ನಾಲ್ಕು ಜನರಿಗೆ ಊಟ ಬಡಿಸಲಿಲ್ಲ ಅನ್ನುವ ಕಾರಣಕ್ಕೆ ಇಂತ ಮದುವೆ ತಪ್ಪು ಎಂದು ಯಾವತ್ತು ಹೇಳುತ್ತಲೇ ಇರಬೇಕೆ? ಆದರೆ ಒಪ್ಪಿದ ಹೃದಯಗಳು ಕೂಡಿದಾಗ, ಜೀವನದ ಗುರಿ ಸಾಧಿಸಿದಂತಲೇ ಅಲ್ಲವೇ?

ಪ್ರೀತಿ ಬದುಕಿನ ನಿಜವಾದ ಆಶವಾದದ ಕಿರಣ. ಮನುಷ್ಯ ಕೇವಲ ಹೊಟ್ಟೆಗಾಗಿ ಮಾತ್ರ ದುಡಿಯುತ್ತಿಲ್ಲ; ಭಾವನಾತ್ಮಕವಾದ ಆಕಾಂಕ್ಷೆಗಳು ಮುಖ್ಯ. ಪ್ರೀತಿಯಾರಲ್ಲಿ ಹುಟ್ಟುತದ್ದೋ ಅವರೇ ಪ್ರೀತಿಯನ್ನು ತುಂಬಬಲ್ಲರು. ತಮ್ಮ ಮಗಳು/ಮಗ   ತಮ್ಮದೇ ಜಾತಿಯ ಹುಡುಗ/ಹುಡುಗಿ ಪ್ರೀತಿಸಿಲ್ಲ ಅನ್ನುವ ಕಾರಣದಿಂದ ನಿಮ್ಮ ಮನಸ್ಸಿಗೆ ಬಂದವರನ್ನು ಬದಲಿಸಿ ಮದುವೆ ಮಾಡುವ ವಿಕೃತ ವ್ಯವಹಾರ  ಸರಿಯಲ್ಲ. ಅದಕ್ಕಾಗಿ, ಪ್ರೀತಿಸಿದವರನ್ನೇ ಕೈ ಹಿಡಿಯಬೇಕು  ಎನ್ನುವ ಸಂದೇಶವನ್ನು ಸಾರುವುದೇ ಪ್ರೇಮಿಗಳ ದಿನವಾಗಲಿ ಅನ್ನುವುದು ನನ್ನ ಉದ್ದೇಶ.

ಪ್ರೇಮಕ್ಕೂ ಮಿತಿ ಇದೆ ಅನ್ನುವುದನ್ನು ತಿಳಿದಿರಬೇಕಾದ ಸತ್ಯ. ಇಲ್ಲವಾದರೆ, ಒಳ್ಳೆಯದಾಗುವ ಬದಲು ಇನ್ನೇನೋ ನಡೆದು, ಏನೇನೋ ಆಗಿ ಜೀವನ ಕಷ್ಟವಾದೀತು. ಏನೇನೋ ಆಗುವ ಆಚರಣೆಗಳು ಬೇಡ. ಬದಲಾಗಿ, ತಮ್ಮ ಪ್ರೇಯಸಿ/ಪ್ರಿಯಕರಿಂದ ಜೀವನದ ಕುರಿತಾಗಿ ವಿಶಾಲ ಚರ್ಚೆಗೆ ಇಂಥ ದಿನ ವಿಶ್ವಾಶ ಪೂರ್ವಕವಾಗಿ ಬಳಸಿಕೊಂಡರೆ  ಉತ್ತಮ.

ಜಾತಿವ್ಯವಸ್ಥೆಯ ವಿರುದ್ಧ ಹೊರಡಲು ನೀವು ಮಾತ್ರ ಸಕ್ತರು; ನಿಮಗೆ ನಾನು ಹಾರ್ದಿಕವಾಗಿ ಅಭಿನಂದಿಸುತ್ತೇನೆ.

Saturday, January 18, 2014

ಪ್ರೇಮ ಪತ್ರ...!

ಪ್ರೇಮ ಪತ್ರ ಇವತ್ತು ಅಪ್ರಸ್ತುತ ವಸ್ತು. ಬಹುಶ ನನ್ನ ಜಮಾನದ ಯಾವ ಹುಡುಗ-ಹುಡುಗಿ ಪ್ರೀತಿಯನ್ನು  ಪತ್ರದ ಮೂಲಕ ನಿವೇದನೆ ಮಾಡಿರುತ್ತಾರೆ ಅನಿಸುವುದೇ ಇಲ್ಲ. ಆದರೆ ನಾನು ಪ್ರೇಮ ಪತ್ರ ಬರೆದಿದ್ದೇನೆ... ಒಂದಲ್ಲ, ಎರಡಲ್ಲ..ಸುಮಾರು ಐದಕ್ಕು ಹೆಚ್ಚು..! ಆದರೆ ನಾನು ಪ್ರೇಮ ಪತ್ರ ಬರೆದಾಗ ನನ್ನ ವಯಸ್ಸು ಕೇವಲ ೧೪ ಇರಬಹುದು... ಆದರೆ ಇವತ್ತು, ೨೮ರ ಹರೆಯಕ್ಕೆ ಕಾಲಿಡುತ್ತಿರುವಾಗ ನಾನೊಂದು ಪ್ರೇಮ ಪತ್ರವನ್ನು ಬರೆಯಲು    ಸಾಧ್ಯವಿಲ್ಲದ ಕಾಲದಲ್ಲಿ ನಾನು ಬದುಕುತ್ತಿದ್ದೇನೆ ಅಂದುಕೊಂಡಾಗ ನನಗೆ ನೋವು ಇದೆ..! ಈ ಬದಲಾವಣೆ ಒಪ್ಪಿಕೊಳ್ಳುವುದು ನನಗೆ ಸಾಧ್ಯವಾಗುತ್ತಿಲ್ಲ.

ನಾನು ಹಳ್ಳಿಯ ಹುಡುಗ. ಹಳ್ಳಿಯಲ್ಲಿ ಕಲಿತ್ತುರವರ ಸಂಖ್ಯೆ  ತುಂಬಾ ಕಡಿಮೆ. ಬಡತನ ಅಥವಾ ಇನ್ನಾವುದೋ ಕಾರಣದಿಂದ ಓದುವ ಮಕ್ಕಳ ಸಂಖ್ಯೆ ಕಡಿಮೆ ಮಾತ್ರವಲ್ಲ; ಶಿಕ್ಷಣದ ಗುಣ ಮಟ್ಟ ತುಂಬಾ ಕಡಿಮೆಯೂ ಆಗಿರುತ್ತದೆ. ಆದರೆ ನಾನು ಯಕ್ಷಗಾನದ ಪ್ರಭಾವದಿಂದಗಾಗಿ, ರಾಮಾಯಣ-ಮಹಾಭಾರತ  ಕತೆ ಓದಲು ಉತ್ಸುನಾಗಿ ಬಿಟ್ಟಿದ್ದೆ.ಯಾವುದೇ ವ್ಯಕ್ತಿ ಹೇಳಿದ ಶಬ್ಧಗಳನ್ನು ವಾಕ್ಯಗಳಾಗಿ ಬರೆಯುವ ಸಾಮರ್ಥ್ಯ ನನಗಿತ್ತು ಆ ದಿನಗಳಲ್ಲಿ...(ಹಳ್ಳಿಯಲ್ಲಿ ಇದು ಅದ್ಭುತ ..! ಆ ಕಾಲದಲ್ಲಿ).  ಹೀಗಾಗಿ ಹಳ್ಳಿ ಮಂದಿಯ ತಲೆಯಲ್ಲಿ ನಾನೊಬ್ಬ ಓದುವ-ಬುದ್ದಿವಂತ ಹುಡುಗ.

ಪ್ರೀತಿ ಪ್ರೇಮಗಳೇನು ಕೇವಲ ಕಾಲೇಜು ಮೆಟ್ಟಿಲು ಹತ್ತಿ, ಆಂಗ್ಲ ಭಾಷೆಯಲ್ಲಿ, "I LOVE YOU" ಅನ್ನಲು ಬರುವವರಿಗೆ ಮಾತ್ರ ಅಂದು ಕೊಂಡಿದ್ದಿರಾ? ಖಂಡಿತ ಇಲ್ಲ. ಮನುಷ್ಯನಾಗಿ ಹುಟ್ಟಿದ, ಶಿಕ್ಷಣ ಪಡೆಯದ ಹಳ್ಳಿಯ ಮುಗ್ದ ಜನರಲ್ಲೂ ಪ್ರೀತಿಯ ಕುರಿತಾಗಿ ನವಿರಾದ ಭಾವನೆಗಳಿರುತ್ತವೆ. ಆದರೆ ಮೊಬೈಲ್, ಲ್ಯಾಂಡ್ ಲೈನ್ ಗಳೇ ಇಲ್ಲದ ಕಾಲದಲ್ಲಿ ನಂಬಿಕಸ್ತ ವ್ಯಕ್ತಿಯ ಮೂಲಕ ಪ್ರೀತಿಯ ನಿವೇದನೆ ಹೇಳಿಕೊಳ್ಳುವುದು ಇಲ್ಲವೇ ಪ್ರೇಮ ಪತ್ರ ಮಾತ್ರ ದಾರಿ. ಆದರೆ ವ್ಯಕ್ತಿಯ ಮೂಲಕ ಇಷ್ಟ-ಕಷ್ಟಗಳನ್ನೂ ಹೇಳಿ ಕಳಿಹಿಸಬಹುದೇ ಹೊರತು ಭಾವನೆಗಳನ್ನು ತೆರೆದಿಡಲು ಸಾಧ್ಯವಿಲ್ಲ. ಹೀಗಾಗಿ ಪ್ರೇಮ ಪತ್ರಗಳೇ ಕೊನೆಯ ದಾರಿ. ಆದರೆ ದೂರದ ಹೃದಯದ ಬಾಗಿಲು ಬಡಿಯಲು ಅಕ್ಷರ ಬೇಕೇ ಬೇಕು!

ಹೀಗಾಗಿ, ನಾನು ೫-೬-೭ ನೆ ತರಗತಿಗಳಲ್ಲಿ ಓದುತ್ತಿದಾಗ ನೆರೆಯ ಹೆಣ್ಣುಮಕ್ಕಳು, ಗಂಡುಮಕ್ಕಳು ನನ್ನಿಂದ ಪ್ರೇಮ ಪತ್ರ ಬರೆಸಿಕೊಳ್ಳಲು ಬಂದಿದ್ದರು;ನನ್ನನು ತಮ್ಮ ಮನೆಗೂ ಕರಿಸಿ ಕೊಂಡಿದ್ದರು.ಒಂದು ದುರದೃಷ್ಟ ಅಂದರೆ ಒಂದು ಕಡೆ ಒಬ್ಬರಿಗಾಗಿ ಪ್ರೇಮ ಪತ್ರ ಬರೆದು ಕೊಟ್ಟ ಮೇಲೆ, ಅದು ಇನ್ನೊಬ್ಬರಿಗೆ ತಲುಪಿದ ಮೇಲೆ ನಾನೇ ಓದಿ ಹೇಳಿದ ಪ್ರಸಂಗವು ಇದೆ.  ಆ ಪತ್ರಗಳು ಹಳ್ಳಿಯಲ್ಲಿ ಸಿಗುತ್ತಿದ ಉದುಬತ್ತಿಯ ಬಾಕ್ಸ್ ನ ಪೇಪರ್ ಆದರು ಸರಿ, ಇಲ್ಲ ಹಳೆಯ ನೋಟ್ಬುಕ್ ಆದರು ಸರಿ..ಇಲ್ಲ ನನ್ನ ನೋಟ್ ಬುಕ್ ನ ಒಂದು ಹಾಳೆ ಆದರು ಸರಿ.. ಒಂದು ಪತ್ರದ ಸಾಧಾರಣ ವಿಷಯ ಹೀಗೆ ಇರುತ್ತಿತ್ತು:

ಶ್ರೀ ಮನೋಜನಿಗೆ ನಮಸ್ಕಾರಗಳು.
      ನಾನು  ಆರಂ ಇದ್ದೇನೆ. ನೀವು ಆರಂ ಇದ್ದಿರೆಂದು ಭಾವಿಸುತ್ತೇನೆ.
ನಾನು ಮುಂದಿನ ಹುಣ್ಣಿಮೆಯ  ನಂತರದ  ಪಾಡ್ಯದ ದಿನ, ಹೂವಿನತೋಟದಲ್ಲಿ ನಡುಯುವ ಸತ್ಯ ನಾರಾಯಣ ವೃತಕ್ಕೆ ಬರುತ್ತೇನೆ. ನೀವು ಬನ್ನಿ. ಮುದ್ದಾಂ ಬನ್ನಿ. ಉತ್ತರ ಬರೆದು ತಿಳಿಸಿ.

ಆಕಾಶಕ್ಕೆ ಚಂದ್ರಮ ಚಂದ, ಕೆರೆಗೆ ತಾವರೆ ಚಂದ, ನನಗೆ ನೀನೆ ಚಂದ.
ಗುಡಿ ಇಲ್ಲದ ನಾಡು, ನೀನಿಲ್ಲದ ಬಾಳು ಎರಡು ಹಾಳು...!
ಆಕಳು ಕಪ್ಪಾದರೆ ಹಾಲೂ ಕಪ್ಪಲ್ಲ.....
......

                                                                 ನಿನ್ನ ಪ್ರೀತಿಯ (ಮನೋಜಾಕ್ಷಿ).

ಪತ್ರ ಮುಗಿಯಿತು. ಈ ಪತ್ರಕ್ಕೆ ತಾರಿಖು ಹಾಕಿದ್ದು ನನಗಂತೂ ನೆನಪಿಲ್ಲ. ಅವರ ಸಹಿಯಂತು ಇಲ್ಲವೇ ಇಲ್ಲ . ಆದರು ಇವು ಜೀವಂತ ಪ್ರೇಮ ಪತ್ರಗಳು. ಈ ಪತ್ರಗಳು ಒಂದು ಕಡೆಯಿಂದ ಹೊರತು ಇನ್ನೊಂದು ಕಡೆ ಸೇರಲು ವಾರಗಳೇ ಬೇಕಾಗಿದ್ದವು. ಇಂತ ಪತ್ರವನ್ನು ನಂಬಿದ ಆ ಪ್ರೇಮಿಗಳ ಪ್ರೀತಿ ಅದೆಷ್ಟು ಮುಗ್ಧ ಹಾಗೂ ಭಾವುಕತೆಯಿಂದ ಕೂಡಿದ್ದು ಅನಿಸುವುದಿಲ್ಲವೇ? ಅಂತ ಪತ್ರಗಳನ್ನು ಬರೆದು ಪ್ರೀತಿಸಿ ಮದುವೆಯಾದವರ ಮಕ್ಕಳು ಇವತ್ತು ಕಾಲೇಜಿನ ಮೆಟ್ಟಿಲು ಏರಿದರೂ....ಮೊಬೈಲ್ ನಿಂದ ದಿವಾಳಿಯೆದ್ದು...ಪ್ರೇಮ ಪತ್ರದ ಮೂಲಕ ಪ್ರೀತಿಯ ನಿವೇದನೆ ಮಾಡಿಕೊಳ್ಳಲು ಸಾಧ್ಯವೇ ಇಲ್ಲ.

ದೇಶ ಭಾಷೆಗಳರಿಯದ, ಕುಡಿ ಮಿಸೆಯೇ ಇರದ
ಮೋಸ ವಂಚನೆ ತಿಳಿಯದ ಬಾಲ್ಯದಲ್ಲೊಂದು
ವಿಷಯ ಭರಿತ ಪ್ರೇಮ ಪತ್ರವನು ಬರೆದು
ಅಸಮ ಸಾಹಸಿ ನಾನೆಂದರೆ  ನಿವೋಪ್ಪುವಿರೆನು?

ನನ್ನ ಕನ್ನಡ ಉಪಾಧ್ಯಾಯರು ಒಮ್ಮೆ ಕಾಳಿದಾಸನ 'ಮೇಘದೂತ ' ಪ್ರೇಮಿಗಳ ವಿರಹ ಅಗ್ನಿಯ ಪ್ರೇಮ ಒಡಲಿಂದ ಸಿಳಿದು ಬಂದ ಭಾವನೆಗಳ ಸಮಗ್ರ ಕಥನ ಎಂದು ಹೇಳಿದ್ದರು. ಪ್ರೇಮದ ಹಿಂದೆ ಮಧುರ ಭಾವನೆಗಳಿವೆ, ಅದರಲ್ಲಿ ಅಪಾರ ಶಕ್ತಿಯಿದೆ ಎಂದು ಅವರು ಹೇಳಿದ್ದರು. ಆದರೆ ಅವರೆಂದೂ ನೀವು ಪ್ರೇಮ ಪತ್ರ ಬರೀರಿ ಎಂದು ಹೇಳಿಯೇ ಇಲ್ಲ ಅಂತ ನನಗೆ ಇವತ್ತು ಬೇಸರವಾಗುತ್ತಿದೆ. 'ಮೇಘದೂತ' ಇಂದಿಗೂ ನಾನು ಓದಿಲ್ಲ..

ತಂತ್ರಜ್ಞಾನ ಬೆಳೆಯಿತು.. ಕುಳಿತಲ್ಲೇ ಪ್ರೇಮಿಗೆ ಸಂದೇಶವನ್ನು ಕಳಿಸಬಹುದಾದ ಮಾತ್ರವಲ್ಲ ನೋಡಬಹುದಾದ ಸಾಧನಗಳು ಬಂದವು. ಆದರೆ ಇಂದಿನ ಪ್ರೇಮದ ಅತಿದೊಡ್ಡ  ಪ್ರೇಮ ಸಂದೇಶದಲ್ಲಿ ಇರಬಹುದಾದ  ಅಕ್ಷರಗಳ ಸಂಖ್ಯೆ ೮ ಮಾತ್ರ (I LOVE YOU )... ಅಥವಾ ಇನ್ನು ಕೆಲವರು ಅದನ್ನೂ ಕೂಡ ILY  ಎನ್ನುವವರಿದ್ದಾರೆ. ಎಷ್ಟು ಸಣ್ಣದಾಗಿ ಹೇಳಬಹುದು? ಸಮಯ ಉಳಿದಿದೆ ಎಂದು ನಾವು ಭಾವಿಸಿ ಸಮಧಾನ ಪಡಿಸಿಕೊಳ್ಳಬಹುದಾದರು ಇಲ್ಲೊಂದು ದುರಂತ ಸಂಭವಿಸಿದೆ.

ಅದೇನೆಂದರೆ, ಯಾವುದಕ್ಕೂ ಅಭ್ಯಾಸ ಬೇಕು. ಅದಕ್ಕಾಗಿಯೆ "ಪ್ರಾಕ್ಟೀಸ್ ಮೇಕ್ಸ್ ಮ್ಯಾನ್ ಪರ್ಫೆಕ್ಟ್" ಎಂದಿದ್ದು. ಪ್ರೇಮ ಪತ್ರಗಳನ್ನು ಬರೆಯುವ ಕಾಲದಲ್ಲಿ, ಹೇಗೆ ಬರೆದರೆ ಸರಿ ? ಎಂಬ ಪ್ರಮೇಯಗಳು ಸಾವಿರಾರು ಬಗೆಯಲ್ಲಿ ಮನಸ್ಸಿಗೆ ಯೋಗ ಅಭ್ಯಾಸ ಮಾಡಿಸುತ್ತಿತ್ತು... ಮನಸ್ಸು ಪ್ರೇಮದ ವಿಷಯದಲ್ಲಿ ಪರಿ ಪಕ್ವತೆಯನ್ನು ಹೊಂದುತ್ತಿತ್ತು. ವಿರಹದ ಬೆಂಕಿ  ಸಾಹಿತ್ಯವನ್ನು, ನವಿರಾದ ಕಲ್ಪನೆಗಳನ್ನು, ಮಾನವೀಯ ದೃಷ್ಟಿಯನ್ನು  ಬೆಳೆಸಲು ಒತ್ತಡ ಹೆರುತಿತ್ತು. ಆದರೆ, ಇಂದು ಒಂದು ಕ್ಷಣದಲಿ ಪ್ರೇಮ ನಿವೇದನೆಯಾಗಿ, ಎರಡು ದಿನದಲ್ಲಿ ಮದುವೆಯಾಗಿ, ಫೇಸ್ಬುಕ್ ನಲ್ಲಿ ಫೋಟೋ ಹಾಕಿಸಿ ... ಒಂಬತ್ತು ತಿಂಗಳು ಕಳೆಯುವದರಲ್ಲಿಯೇ ಡಿವೋರ್ಸ್  ಅಂತ ಅಲೆಯುವ ಮಂದಿ ಕಂಡಾಗ, ನಾನು ಅಂದು ಕೊಳ್ಳುವುದು..."ಒಹ್ ಇವರ ಮನಸ್ಸಿಗೆ ಪ್ರೇಮದ ಕುರಿತಂತೆ ಯೋಗ ಆಗಿಯೇ ಇಲ್ಲ ಅಂತಾ".

ಏನೇ ಆದರು, ನನ್ನ ಕಾಲದಲ್ಲಿ ಪ್ರೇಮ ಪತ್ರ ಬರೆಯುವ ದಿನಗಳೇ ಅಲ್ಲವಲ್ಲ ಅಂತ ತುಂಬಾ ನೋವು ಇದೇ ರೀ ....ನೀವು ಯಾರಾದರು  ಈ ಕಾಲದಲ್ಲೂ ಪ್ರೇಮ ಪತ್ರ ಬರೆದಿದ್ದಿರಾ? ಹೋಗಲಿ ಬಿಡಿ ಒಂದು ಪತ್ರವನ್ನಾದರೂ ಬರೆದಿದ್ದಿರಾ? ಒಟ್ಟಾರೆ ಮೊಬೈಲ್ ಭಾವನೆಗಳನ್ನೇ ಕೊಲೆ ಮಾಡಿದೆ ರೀ ... ಅದಕ್ಕೆ ಮನುಷತ್ವನು ಕೊಲೆಯಾಗಿದೆ ರೀ ...ಮನುಷತ್ವ ಇಲ್ಲದ ಮೇಲೆ ಮನುಷ್ಯ ಒಂದು ರೋಬೋಟ್ ಅಗ್ತನ್ ರೀ... ಅದಕ್ಕೆ ಪತ್ರ ಬರೇರಿ(ನೀವು ನಿಮ್ಮ ಪ್ರೇಮಿಗೆ )

Wednesday, January 15, 2014

ರೈತ..!

'ದೇಶದ ಬೆನ್ನೆಲುಬು ರೈತ' ಎನ್ನುವ ವಾಕ್ಯ ಶಾಲೆಯಲ್ಲಿ ಕಲಿತ ಎಲ್ಲರಿಗು ಗೊತ್ತಿರುವ ಸತ್ಯ. ಆತ ಅನ್ನದಾತ;ನೇಗಿಲ ಯೋಗಿ ಅಂತೆಲ್ಲ ಕರೆದು ಗೌರವ ತೋರಿಸುವುದು ನಿಮಗೂ ತಿಳಿದಿರುವ ವಿಚಾರವೇ!  ಆದರೆ ನಾವು ಯಾರು ರೈತರಾಗಲು ಬಯಸುತ್ತಿಲ್ಲ; ಅಥವಾ ನಮ್ಮ ಮಕ್ಕಳು ಕೂಡ ರೈತರಾಗಲು ನಾವು ಬಿಡುತ್ತಿಲ್ಲ. ಅದೇನಿದ್ದರು ರೈತರು  ಎಂಬ ಹಾಡು ಕಾರ್ಯಕ್ರಮದಲ್ಲಿ ಕೇಳಿ, ಒಂದಿಷ್ಟು ರೈತನ ಇಮೇಜ್ ಗಳು ಫೇಸ್ಬುಕ್ ನಲ್ಲಿ ಹಾಕುವುದಕ್ಕೆ ಮಾತ್ರ ಸೀಮಿತವಾಗುತ್ತಿದೆ ನಮ್ಮ ಬದುಕು.

ರೈತರಾಗುತ್ತಿರುವವರು  ಯಾರು ? ಸರ್ಕಾರದ ಎಲ್ಲ ಶೈಕ್ಷಣಿಕ ಯೋಜನೆಗಳ ನಡುವೆಯೂ  ಶಾಲೆಯಿಂದ ತಪ್ಪಿಸಿಸಿಕೊಂಡು, ನಾಲ್ಕು ಗೋಡೆಗಳ ಮಧ್ಯ ತಮ್ಮ ೧೬ ವರ್ಷ ಕಳೆಯದೆ, ಹುಟ್ಟಿದಾರಭ್ಯ ಸಮಾಜದ ಬದುಕಿನ ಸ್ಥಿತಿಗೆ ತಾವೇ ನುಗ್ಗಿಸಿಕೊಂಡ ಅಥವಾ ತಂದೆ-ತಾಯಿಯರ ಅಜ್ಞಾನ, ಬಡತನ ಮುಂತಾದ ಕಾರಣಗಳಿಂದಾಗಿ ಶಾಲೆಯಿಂದ ಹೊರದಬ್ಬಿದ್ದ ಪರಿಣಾಮವಾಗಿ ಮಕ್ಕಳು ರೈತರಾಗುವುದಕ್ಕೆ ಇರುವ ದಾರಿ. ಅದರ ಹೊರತಾಗಿ ರೈತರನ್ನಾಗಿಸಲು ದಾರಿಗಳೇ ಇಲ್ಲ. ಕೃಷಿ ವಿದ್ಯಾನಿಲಯಗಳಿವೆ ಎಂದು ನೀವು ಹೇಳಬಹುದು...! ಆದರೆ ಕೃಷಿ ತರಬೇತಿ ಹೊಂದಿದವರಾರು ಮಣ್ಣಿನೊಂದಿಗೆ ಸರಸವಾಡುತ್ತಿಲ್ಲ; ಬದಲಾಗಿ ಯಾವುದೊ ಕಚೇರಿಯ ಫ್ಯಾನ್ ಗಳಿಗೆ ತಲೆ ಹಿಡಿದು ತುಕಡಿಸುತ್ತಿದ್ದಾರೆ.

ಕೃಷಿಯನ್ನು ಒಂದು ವೃತ್ತಿಯನ್ನು ಮಾಡಿಕೊಳ್ಳಲು ಇಂದಿನ ಓದಿದ ಜನಾಂಗಕ್ಕೆ ಸಾಧ್ಯವೇ ಇಲ್ಲ. ಅದಕ್ಕೆ ಕಾರಣ ಕೃಷಿ ಒಂದು non -organised  sector  ಮಾತ್ರವಲ್ಲ, ಇದಕ್ಕೆ ಸರಕಾರದ ಕೃಪೆಯು ಇಲ್ಲ. ನಿಸರ್ಗದ ಜೊತೆಯಲ್ಲಿ ಹೋರಾಡಿ ತನ್ನ ಬದುಕು-ಸಾವು ನಿರ್ಧರಿಸಬೇಕಾದ ಪೂರ್ಣ ಜವಾಬ್ಧಾರಿ ರೈತನ ಮೇಲಿದೆ.  ಉದಾಹರಣೆಗೆ, ಯಾವುದೇ ಒಂದು ನೌಕರಿ ತೆಗೆದುಕೊಳ್ಳಿ...ಯಾವ ಬೆಲೆ ಏರಿಕೆ ಸಮ್ಭವಿಸುತ್ತದೊ, ಎಲ್ಲರು ಸೇರಿ ತಮ್ಮ ಸಂಬಳದ ಬೇಡಿಕೆಯನ್ನು ಮುಂದಿಟ್ಟು ಸರ್ಕಾರದಿಂದಲೋ, ಸಂಸ್ಥೆಯಿಂದಲೋ  ಲಾಭ ಮಾಡಿಕೊಳ್ಳುತ್ತಾರೆ. ಯಾವುದೇ ಬಿಸಿನೆಸ್ ದಲ್ಲಿರುವರು ಒಂದು ಕಡೆ ನಷ್ಟವಾದರೆ ಇನ್ನೊಂದು ಕಡೆ ಲಾಭ ಮಾಡಿ ಕೊಳ್ಳುತ್ತಾರೆ; ಅಥವಾ ತಮ್ಮ ನಷ್ಟವನ್ನು ಗ್ರಹಕಾರರ ಮೇಲೆ ಹೊರಿಸಿ ಬಿಡುತ್ತಾರೆ. ಆದರೆ ರೈತರು?

ರೈತರು ತಾವು ಏನು ಬೆಳೆಯುತ್ತಾರೋ ಅಷ್ಟನ್ನೇ ಮಾರಿ ಜೀವನ ಮಾಡಬೇಕು. ಅವರು ಬೆಳೆದ ಬೆಳೆಗೆ ಸರ್ಕಾರ ಬೆಲೆ ನಿಗದಿ ಮಾಡುತ್ತದೆ. ಒಂದೊಮ್ಮೆ ಬೆಲೆಯೆನಾದರು ಏರಿಕೆಯಾಗುತ್ತದೆ ಅಂತಾದರೆ ವಿದೇಶದಿಂದ ಕೃಷಿ ವಸ್ತುಗಳನ್ನು ಆಮದು ಮಾಡಿ ರೈತರನ್ನು ಮಣಿಸುತ್ತದೆ. ಹೀಗಾಗಿ ರೈತರ ಬೆಳೆದ ಬೆಳೆಯ ಬೆಲೆ ಯಾವುತ್ತು ಒಂದೇ ಲೆವೆಲ್ ನಲ್ಲಿ ಇಡಲಾಗುತ್ತದೆ. ಇದನ್ನು ಸರಿ ಹೊಂದಿಸಲು ರೈತರು ಭೂತಾಯಿಯ ಜೊತೆ ಗುದ್ದಾಡಬೇಕು; ಮಳೆಯನ್ನೂ ನಂಬಿ ಬದುಕ ಬೇಕು. ಜೊತೆಗೆ ಭೂತಾಯಿಯ ಜೊತೆಗಿನ ಗುದ್ದಾಟವನ್ನು ಹೆಚ್ಚು ರೋಷ ಭಾರಿತವನಾಗಿಸಿದ್ದು ಯಾರು -ಇದೆ ಕಲಿತ ವರ್ಗ ಹಾಗು ಸರ್ಕಾರಗಳು. ಕಲಿತ ವರ್ಗದ ಆಸೆಗಳಿಗಾಗಿ ವಾಹನ, ac ರೂಂ, ಪ್ಲಾಸ್ಟಿಕ್, ಪೆಟ್ರೋಲ್  ಹೆಚ್ಚು ಬಳಕೆಯಾಗಿ ಮಾಲಿನ್ಯದಿಂದ ಭೂತಾಯಿ ಬಸವಳಿದಾಗ, ನೇರ ಪರಿಣಾಮವಾಗುವುದು ರೈತರ ಮೇಲೆ. ಅಷ್ಟೇ ಅಲ್ಲದೆ ಆಗಾಗ ಸರ್ಕಾರಗಳು ತರುವ ಬೃಹತ್ ಯೋಜನೆಗಳು-ಡಾಮ್ಸ್, ವಿದ್ಯುತ ಯೋಜನೆಗಳು ರೈತರನ್ನು ಒಕ್ಕಲೆಬ್ಬಿಸುತ್ತವೆ.
ಇದರ ಪ್ರಾಕೃತಿಕ ಪರಿಣಾಮಗಳನ್ನು ರೈತನೇ ಮಾತ್ರ ಹೊರಬೇಕು.

ರೈತರಾಗುವುದೇ ಕಲಿಯದಿರುವುದರಿಂದ. ಹೀಗಾಗಿ ರೈತವರ್ಗ ಯಾವತ್ತು ಸರ್ಕಾರದ ವಿರುದ್ಧ ತಲೆ ಎತ್ತಿ ನಿಲ್ಲಲಾರದು. ಹಾಗೆಂದು ಅನಾಯಾಸವಾಗಿ ಸಾಯಲು ಬಿಡಬಾರದು ಎಂದು ಒಂದಿಷ್ಟು ಸಾಲ, ಅಕ್ಕಿ, ಕೊಟ್ಟು ತನ್ನ ಕೈ ತೊಳೆದು ಕೊಳ್ಳುತ್ತದೆ. ರೈತರ ಬದುಕು ಈ   ರೀತಿ  subsidized  ಆಗಿರುವುದರಿಂದಲೇ, ನಾವೆಲ್ಲ AC ರೂಂ ನಲ್ಲಿ ಕುಳಿತು ಸ್ವೀಟ್ ಕಾರ್ನ್ ಸೂಪ್ ಮೇಲ್ಳುವುದಕ್ಕೆ ಸಾಧ್ಯವಾಗಿರುವುದು. ಒಂದೊಮ್ಮೆ, ಹೀಗೆ subsidized  ಆಗಲು ರೈತರೇ ಇಲ್ಲದಿದ್ದರೆ, ಅರ್ಥಾತ್ ಎಲ್ಲರು ಶಿಕ್ಷಣ ಪಡೆದ ಪಂಡಿತರೆ ಆದರೆ,ದೇಶದ ಆಹಾರದ ಸ್ಥಿತಿಗತಿ ಹೇಗಿರಬಹುದು ಎಂದು ನೀವೇ ಊಹಿಸಿ ? ಅಂದ ಮೇಲೆ ಈಗಿರುವ ಶಿಕ್ಷಣ ಪದ್ಧತಿ ಹಾಗೂ ರೈತರನ್ನು non -organised  sector ನಲ್ಲಿ ಉಳಿಸಿಕೊಳ್ಳುವುದು ದೇಶದ ಭವಿಷ್ಯಕ್ಕೆ ಒಳ್ಳೆಯದಾಗುವುದಿಲ್ಲ. ಎಲ್ಲರು ಯೋಚಿಸುವುದು ತಾನು ರೈತನಾಗದಿದ್ದರೆ ಸಾಕೆಂದು ಮಾತ್ರ, ಹೀಗಾಗಿ ಇಂತದೊಂದು ಸಮಸ್ಯೆ ಅರಿವಿಗೆ ಬರುವುದು ಕಷ್ಟ.

ಕೃಷಿ ಕ್ಷೇತ್ರಕ್ಕೆ ಭವ್ಯವಾದ ಭವಿಷ್ಯ ಇರಬೇಕು ಅನ್ನುವುದಾದರೆ-ಕೃಷಿಯ ಬಗ್ಗೆ ತಾತ್ಸಾರ ಮನೋಭಾವ ದೂರವಾಗಬೇಕು. ವಿಜ್ಞಾನ ಕ್ರಾಂತಿಯಿಂದ ಸ್ವಿಚ್ ಒತ್ತಿದರೆ ಕಾಫಿ ತಯಾರಿಸಬಹುದು, ಆದರೆ ಕಾಫಿ ಗಿಡ ರೈತನೇ ಬೆಳೆಯ ಬೇಕು ಅನ್ನುವ ಪರಿಕಲ್ಪನೆ ನಮ್ಮ ಶಿಕ್ಷಣ ಕ್ಷೆತ್ರದಲಿರುವರಿಗೆ ಇರಬೇಕು. ಕೇವಲ ಡಿಗ್ರಿ ಗಳ ಉತ್ಪಾದನ ಕೇಂದ್ರಗಳಾಗಿರುವ ಶಾಲೆಗಳಿಂದ ಕೃಷಿಗೆ ಭವಿಷ್ಯವಿಲ್ಲ.

ಇದುವರೆಗೆ, ಯಾವ ಶಾಲೆಯು, ತನ್ನ ಡ್ರಾಪ್ ಔಟ್ ಅಥಾವ ಪಾಸು ಆದ, ಒಬ್ಬ ರೈತನನ್ನು ಸನ್ಮಾನಿಸಿರುವುದನ್ನು ನಾನು ಓದಿಯೇ ಇಲ್ಲ..! 

Thursday, January 9, 2014

ನಿಮ್ಮ ಹವ್ಯಾಸಗಳೇನು ?

ನಾನು ಯಾರನ್ನಾದರು ಹೊಸದಾಗಿ ಭೇಟಿಯಾದಾಗ ಕೇಳುವ ಪ್ರಶ್ನೆಗಳಲ್ಲಿ ಇದು ಒಂದು. ಕೆಲವರಿಗೆ ಇದು ಬಹಳ ತಲೆ ನೋವಿನ ಪ್ರಶ್ನೆ. ಆದರೆ ಹವ್ಯಾಸಗಳ ಹಿಂದೆ ಏನಿದೆ?

ಹವ್ಯಾಸಗಳು ಯಾವುದೇ ವ್ಯಕ್ತಿಯ ಸೃಜನಶೀಲ ಅಭಿವ್ಯಕ್ತಿಯ ಪದರಗಳು. ಒಂದು ವ್ಯಕ್ತಿಯ ಹವ್ಯಾಸಗಳಿಂದ ಅವನ ಆಸಕ್ತಿ, ಅವನ ವ್ಯಕ್ತಿತ್ವದ ಕೆಲ ಭಾಗಗಳನ್ನೂ ಗಮನಿಸಲು ಸಾಧ್ಯವಿದೆ. ಹಾಗಿರುವುದಕ್ಕು ಕಾರಣವಿದೆ. ಯಾವುದೇ ಹವ್ಯಾಸ ಮನುಷ್ಯನ ಹೃದಯದಲ್ಲಿನ ಸೃಜನ ಶೀಲ ಭಾವದ ತುಡಿತದಿಂದ ಮೇಲೆ ಬಂದಿರುತ್ತದೆ. ಹವ್ಯಾಸಗಳು ಹಣವನ್ನು ತರುವ  ಉದ್ಯೋಗ ಆಗುವುದು ತುಂಬಾ ಕಡಿಮೆ.ಆದರೆ ಇವು ತರುವ ಮಾನಸಿಕ ಸಂತೃಪ್ತಿ ಹೇಳಲಾಗದು. ಯಾವನಿಗೆ ಒಳ್ಳೆಯ ಹವ್ಯಾಸಗಳು ಇರುತ್ತವೋ ಅಂತ ವ್ಯಕ್ತಿ  ಪಾದರಸದಂತೆ ಕೆಲಸದಲ್ಲಿರುತ್ತಾನೆ.

ಆದರೆ ಹವ್ಯಾಸಗಳು ಅಂದರೇನು? ಕೆಲವರಿಗೆ ತಾವು ಏನು ಮಾಡುತ್ತೇವೋ ಅವೆಲ್ಲ ಹವ್ಯಾಸಗಳೇ ಎಂಬ ಭಾವ ವಿದೆ. ಆದರೆ ಅದು ಖಂಡಿತ ಹಾಗಲ್ಲ..! ಹವ್ಯಾಸದಲ್ಲಿ ಗಮನಿಸುವಿಕೆ ಬಹಳ ಮುಖ್ಯ. ಜೊತೆಗೆ ಆ ಗಮನಿಸುವಿಕೆಯಲ್ಲಿ ಒತ್ತಡವಿಲ್ಲ ;ಬದಲಾಗಿ ವಿನೋದವಿದೆ.  ಉದಾಹರಣೆಗೆ TV ನೋಡುವುದು ಹವ್ಯಾಸವಲ್ಲ; ಆದರೆ ನೀವು ಟಿವಿಯಲ್ಲಿ ಬರುವ ಯಾವೊದೋ ಕಾರ್ಯಕ್ರಮ  ಕುರಿತಾಗಿ ಸತತವಾಗಿ ತಿಳಿದು ಕೊಳ್ಳುತ್ತಿರಿ ಅಂದರೆ ನಿಮಗೆ ಆ ವಿಷಯದಲ್ಲಿ ಆಸಕ್ತಿ ಇದೆ ಎಂದರ್ಥ. ಆದರೆ ಸಮಯವನ್ನು ನೀಗಿಸಲು tv  ರಿಮೋಟ್ ಒತ್ತುತ್ತಾ ಚಾನೆಲ್ ಸ್ಕ್ಯಾನ್ ಮಾಡುತ್ತಿರಿ ಅಂದರೆ ನಿಮ್ಮ ಹವ್ಯಾಸ TV  ನೋಡುವುದಾಗಿರುವುದಿಲ್ಲ; ಬದಲಾಗಿ ರಿಮೋಟ್ ಒತ್ತುವ ಹವ್ಯಾಸವೆಂದೆ ಹೇಳಬೇಕು.

ಹವ್ಯಾಸಗಳ ಇನ್ನೊಂದು ವಿಷಯವೆಂದರೆ, consistancy -ನಿರಂತರತೆ. ನೀವು ಯಾವುದೋ ನೋವಿನಲ್ಲಿರಬಹುದು, ನಿದ್ದೆಯ ಗುಂಗಿನಲ್ಲಿರಬಹುದು, ಆದರೆ ನಿಮ್ಮ ಹವ್ಯಾಸದತ್ತ ಕೈ ಹಾಕಿದರೆ ಅವೆಲ್ಲ ಮರೆಗೆ ಸೇರುತ್ತವೆ. ಒಳ್ಳೆಯ ಹವ್ಯಾಸಗಳು ನಿರಂತರತೆ ಹಾಗೂ ಹೊರ ಜಗತ್ತನ್ನು ಮರೆಸಿ ಬಿಡುತ್ತವೆ.

ಹವ್ಯಾಸಗಳು ಹಣ ತರುವುದು ತುಂಬಾ ಕಡಿಮೆ. ಹಾಗೆಂದು ಹವ್ಯಾಸಗಳು ಉದ್ಯಮವಾದಾಗ ಒಳ್ಳೆಯ ಸಾಧನೆಯೇನೋ ಮಾಡಬಹುದು. ಆದರೆ, ಯಾವುದೇ ಹವ್ಯಾಸ ಉದ್ಯಮವಾಗಿಸಲು ಹೊರಟಾಗ, ನಾಲ್ಕಾರು ಜನರನ್ನು ಸೇರಿಸಲೇ ಬೇಕಾಗಿಬರುತ್ತದೆ. ಹೀಗಾಗಿ ಹವ್ಯಾಸದ ನಿಜವಾದ ಕೆಲಸಕ್ಕಿಂತ ನಾಲ್ಕು ಜನರ ಮ್ಯಾನೇಜ್ಮೆಂಟ್ ಹವ್ಯಾಸವಾಗಿ ಮಾನಸಿಕ ನೆಮ್ಮದಿ ದೂರ ಸರಿಯುತ್ತದೋ ಏನೋ  ಜಿಜ್ಞಾಸೆ ನನಗಿದೆ. ಯಾರಾದರು ಹವ್ಯಾಸವನ್ನು  ಬಿಸಿನೆಸ್ ಮಾಡಿಕೊಂಡವರಿಗೆ ಕೇಳಿದರೆ ತಿಳಿಯಬಹುದು ಅಷ್ಟೇ.

ನಾವು ಮಾಡುವ ಪ್ರತಿಯೊಂದು ಕೆಲಸ ಹವ್ಯಾಸವಾಗಿರಲು ಸಾಧ್ಯವಿಲ್ಲ. ಆಫೀಸ್ ನ ಕೆಲಸದಲ್ಲಿ, ಮನೆಯ ಕೆಲಸದಲ್ಲಿ ಅದೆಷ್ಟೋ ವಿಷಯಗಳು ಒತ್ತಡಕ್ಕೆ ಒಳಗಾಗಿ ಮಾಡಬೇಕಾಗಿ ಬರುತ್ತವೆ. ಅದು ಸಹಜ ನಿಯಮ. ಸಮಾಜದ ಜೊತೆಗಿನ ಜೀವನ ಹಾಗೂ ಹಣವನ್ನು ಗಮನಿಸಿ ನಾವು ಕೆಲಸವನ್ನು-ವೃತ್ತಿಯನ್ನು ಮಾಡಬೇಕು. ಆದರೆ ಪ್ರವೃತ್ತಿ ಹಾಗಲ್ಲ; ಅದು ನಮಗಾಗಿ ಮತ್ತು ಕೇವಲ ನಮಗಾಗಿ ಮಾತ್ರ.

ನಾನು ಬಹಳ ಸಾರಿ ಹವ್ಯಾಸಗಳನ್ನು ಕೇಳಿದಾಗ ಕೆಲವರ ಉತ್ತರಗಳು ಹೇಗಿರುತ್ತವೆ ಗೊತ್ತ ?
"ನನಗೆ ಹವ್ಯಾಸಗಳು ಅಂತ ಏನು ಇಲ್ಲ... tv  ನೋಡ್ತೇನೆ ಅಷ್ಟೇ".
ಇನ್ನು ಕೆಲವರ ಉತ್ತರ ಇನ್ನು ವಿಚಿತ್ರ, " ನಾನು ಚಿತ್ರ ಬಿಡಿಸುತ್ತಿದ್ದೆ, ಡಾನ್ಸ್ ಮಾಡುತ್ತಿದೆ, ಹಾಡುತ್ತಿದೆ,....ಆದರೆ SSLC  ತನಕ ಮಾತ್ರ. ಆದರೆ SSLC  ಓದಬೇಕು ಅಂತ ಅಪ್ಪ-ಅಮ್ಮ ಬೈದು ಎಲ್ಲ ಬಿಡಿಸಿದರು. ಇವಾಗ ಇವಾವುದನ್ನು ನಾನು ಮಾಡುವುದಿಲ್ಲ".

ಈ ಉತ್ತರಗಳನ್ನೂ ಗಮನಿಸಿದಾಗ ಮನುಷ್ಯನ ಒರಿಜಿನಲ್  ಆಸಕ್ತಿಯನ್ನೇ ಶಿಕ್ಷಣಕ್ಕಾಗಿ ಬಲಿಕೊಟ್ಟು ಮತ್ತೆ ಬೇರೆ ಏನೋ ಒಂದನ್ನು ಆಗಬೇಕು ಎಂದು ಅಪೇಕ್ಷೆ ಪಡುತ್ತೇವೆ; ಹಣವನ್ನೇನೋ  ತರುತ್ತೇವೆ;ಆದರೆ ಸಂತೋಷ ಹೊಂದುವುದು ಹೇಗೆಂಬ ಪ್ರಶ್ನೆಯೇ ಹವ್ಯಾಸವಾಗಿರುತ್ತದೆ.

ನಾನು ಹೇಳುವುದಿಷ್ಟೇ. ನಿಮ್ಮ ಹವ್ಯಾಸ ನಿಮ್ಮ ಸಹಿ ಅಷ್ಟೇ ಸತ್ಯ(ಯುನಿಕ್). ಸಾವಿರ ಜನ ಚಿತ್ರ ಬಿಡಿಸಬಹುದು  ಆದರೆ ಪ್ರತಿಯೊಬ್ಬರ ಚಿತ್ರ ಬೇರೆ ಬೇರೆನೆ. ನಿಮ್ಮ ಹವ್ಯಾಸಗಳು ಯಾವತ್ತು ನಿಮ್ಮ ನೆಮ್ಮದಿಯ ಕೇಂದ್ರ ಬಿಂದುಗಳು.ದಿನದ ೨೪ ಗಂಟೆಗಳಲ್ಲಿ, ೮ ತಾಸುಗಳನ್ನು ವೃತ್ತಿಗೆ, ೮ ಗಂಟೆಗಳನ್ನು ಪ್ರವೃತ್ತಿಗೆ, ಹಾಗೂ ಉಳಿದೆಂಟು ಗಂಟೆ ನಿದ್ರೆಗೆ ಮಿಸಲಾಗಿರಿಸಿದರೆ ಉತ್ತಮವಂತೆ. ಒಂದೊಮ್ಮೆ ನೀವು ಈ ವಿಷಯದಲ್ಲಿ ಫೇಲ್ ಆಗಿದ್ದರೆ ಪರವಾಗಿಲ್ಲ, ನಿಮ್ಮ ಮುಂದಿನ ಮಕ್ಕಳಿಗಾದರೂ ಹವ್ಯಾಸಗಳನ್ನು ಬೆಳೆಸಿಕೊಳ್ಳಲು ಅವಕಾಶಕೊಡಿ. 

 ನಿಮ್ಮ ಒಳ್ಳೆಯ ಹವ್ಯಾಸಗಳು ನಮಗೂ ದಾರಿದೀಪವಾಗಬಹುದು.ತಮ್ಮ ಹವ್ಯಾಸಗಳನ್ನು ನಮಗೆ ತಿಳಿಸುತ್ತಿರಾ?