Saturday, October 19, 2013

ಬ್ಯಾಚುಲರ್ ಜೀವನ ಮತ್ತು ಸಮಾಜ.

ಇದೊಂದು ರೀತಿಯಲ್ಲಿ ಹಾಸ್ಯಮಯ ಲೇಖನವಾದರು ಕೆಲವು ಘಟನೆಗಳು, ನಾನು ಅನುಭವಿಸಿದ ನೋವು ಇದರಲ್ಲಿದೆ. ಇದು ನನ್ನ ಹಾಗೆ, ನೀವು ಕೂಡ ಇಂಥ ಘಟನೆಗಳನ್ನು ಅನುಭವಿಸಿರುತ್ತಿರಿ. ಆದರೆ ಅದೆಲ್ಲ ಸಾಮಾನ್ಯ ಸಂಗತಿಯೆಂದು ಮರೆತು ಬಿಡುತ್ತಿರಿ ಅಷ್ಟೇ.

ಪ್ರತಿಯೊಬ್ಬ ಗಂಡು ಹುಟ್ಟಿದ ದಿನದಿಂದ ಮದುವೆಯ ೭ ನೇ ಹೆಜ್ಜೆ ಹಾಕುವವರೆಗೂ  ಬ್ಯಾಚುಲರ್ ಆಗಿರುತ್ತಾನೆ. ಆದರೆ, ಈ 'ಬ್ಯಾಚುಲರ್' ಪದಕ್ಕೆ ವಿಶೇಷ ಅರ್ಥ ಹಾಗೂ ಕಲ್ಪನೆಗಳು, ನೋವುಗಳು ಅನುಭವಿಸ ಬೇಕಾಗಿಬರುವುದು ಕಾಲೇಜು ಮುಗಿಸಿ, ಎಲ್ಲೋ ನೌಕರಿಯಲ್ಲಿದ್ದು ಮದುವೆಯಾಗುವರೆಗಿನ ದಿನಗಳಲ್ಲಿ ಮಾತ್ರ. ಇದೆ ದಿನಗಳಲ್ಲಿ ' ಎಲಿಜಿಬಲ್ ಬ್ಯಾಚುಲರ್' ಎಂಬ ಪದಗಳು ನಮ್ಮ ಬಗ್ಗೆ ತಿಳಿದಿರುವ  ಗೆಳೆಯರಿಂದ, ಹಿರಿಯ ಸಹದ್ಯೋಗಿಗಳಿಂದ,ಕುಟುಂಬದ ಹಿರಿಯರಿಂದ ಅಲ್ಲಿ-ಇಲ್ಲಿ ಪ್ರಸಂಶೆಗೆ ಒಳಪಡುತ್ತಲೇ ಇರುತ್ತದೆ.

 'ಎಲಿಜಿಬಲ್ ಬ್ಯಾಚುಲರ್' ಎಂದಾಗ ಸಿಗುವ ಸಂತೋಷ ಅದೆಷ್ಟೆಂದರೆ, ಕಾಲ್ಪನಿಕ ಲೋಕದ ಕವಿ ಮಹಾಶಯರು ವರ್ಣಿಸಿದ ತಿಲೋತ್ತಮೆ, ಉರ್ವಸಿಯಂತ  ಗಂಧರ್ವ ಕನ್ಯೆ ನಮಗೆ ಇವರು ಹುಡುಕುತ್ತಿದ್ದಾರೆ ಎನ್ನುವಷ್ಟು. ಅದಲ್ಲದೆ ಬ್ಯಾಚುಲರ್  ಜೀವನದಲ್ಲಿ  ಸಂತೋಷ ಪಡುವ ಹಲವು ವಿಷಯಗಳಿವೆ- ಆಗತಾನೆ ನೌಕರಿಯಿಂದ ಸಿಕ್ಕ ಹಣ, ಯಾರ ಕಟ್ಟಳೆಯೂ ಇಲ್ಲದೆ ಓಡಾಡಬಹುದಾದ ಸ್ವಾತಂತ್ರ್ಯ, ಅಪ್ಪ-ಅಮ್ಮನಿಗೆ ಕೇಳದೆಯೇ ಜೀವನದ ನಿರ್ಧಾರ ತೆಗೆದುಕೊಳ್ಳಬಹುದಾದ(ನನ್ನ ದುಡ್ಡು,,, ನನ್ನ ಕಾಸು) ಅವಕಾಶಗಳು, ಕಾಲೇಜ್ ಜೀವನದ ಓದು, ಟೈಮ್ ಟೇಬಲ್ ಕಿರಿ ಇಲ್ಲದ  ಸ್ವಾತಂತ್ರದ ರಾತ್ರಿಗಳು(PUC ಯಿಂದ ಇಂಜಿನಿಯರಿಂಗ್ ಮುಗಿಯುವ ತನಕ ಸರಿಯಾಗಿ ನಿದ್ರೆ ಮಾಡಿದ ರಾತ್ರಿಗಳೇ ಇಲ್ಲ ಅನಿಸುತ್ತವೆ). ಹಾಗಾಗಿ ಯಾವ ಬಗೆಯ ಕಿರಿ ಕಿರಿ ಇಲ್ಲದ  'ರೈಟ್ ಟು ಎಂಜಾಯ್ ' ಎಂಬ ಅಧಿಕಾರ ಸಿಕ್ಕಿದೆ ಅನಿಸುತ್ತದೆ.

ಕೆಲವು ತಿಂಗಳ ಹಿಂದೆ, ಗೆಳೆಯನೊಬ್ಬ  ಮದುವೆಯ ನಿಶ್ಚಯವಾದ ವಿಷಯ ಗೆಳೆಯರ ಗುಂಪಿನಲ್ಲಿ ಚರ್ಚೆಗೆ ಒಳಗಾದಾಗ, "ನಗುತ್ತ ಕಳೆಯಬಹುದಾದ ಬ್ಯಾಚುಲರ್ ಅನ್ನುದು ಜೀವನದಲ್ಲಿ ಮದುವೆಯ ಮೊದಲ ದಿನಗಳು ಮಾತ್ರ. ಮದುವೆಯ ನಂತರ ಬ್ಯಾಚುಲರ್ ಆಗಲು ಸಾಧ್ಯವಿಲ್ಲ. ಹಾಗೊಮ್ಮೆ ಆದರು ನೋವಿನ ದಿನಗಳಗಿರುತ್ತವೆ. ಹಾಗಾಗಿ ಮದುವೆಯಾಗುವ ಮುನ್ನ, ಬ್ಯಾಚುಲರ್ ಜೀವನ ಚೆನ್ನಾಗಿ ಅನುಭವಿಸಿಯೇ  ೭ ಹೆಜ್ಜೆ ಹಾಕಲು ನಿರ್ಧರಿಸಬೇಕು". ಈ ಮಾತು ಯಾಕೆ ಹೇಳಿದ, ಯಾರು ಹೇಳಿದ ಎನ್ನುವ ಪ್ರಶ್ನೆಗಳಿಗಿಂತ ಇದರ ನಿಗೂಢ ಅರ್ಥ ಬಹಳ ಯೋಚಿಸಬೇಕಾದುದ್ದೆ.

೩ ವರ್ಷಗಳ ಹಿಂದೆ, ಮಣಿಪಾಲದಲ್ಲಿ ಬಾಡಿಗೆ ಮನೆಗಾಗಿ ಓಣಿ-ಓಣಿಗಲ್ಲಿ  ಬೈಕ್ ಹೊಡಿತ ಇದ್ದೆ. ಅಂತು-ಇಂತೂ ಅಪರಿಚಿತ ಮನೆಗಳ ಮುಂದೆ ನಿಂತು, ಕಾಲಿಂಗ್ ಬೆಲ್ ಬಾರಿಸಿ, ದಿನತೆಯಿಂದ ನಿಂತು, "ನಿಮ್ಮಲ್ಲಿ ಬಾಡಿಗೆ ಮನೆ ಇದೆಯಾ ?" ಎಂದು ಕೇಳುತ್ತ ಸಾಗುತ್ತಿದ್ದೆ. ಮನೆಯ ಮಾಲಿಕರ ಮೊದಲು ಕೇಳುವ ಪ್ರಶ್ನೆ, " ಮನೆಯುಂಟು..! ಆದರೆ ಬ್ಯಾಚುಲರ್ ಗೆ ಕೊಡಲ್ಲ... ನೀವು ಮ್ಯಾರೀಡ್ ತಾನೇ?". ನನಗೆ ಮನೆ ಸಿಗುವ ಚಾನ್ಸ್ ಕಾಣದೆ ಒದ್ದಾಡಿದ್ದೆ. ಹೀಗಿರುವಾಗ, ಒಂದು ರವಿವಾರ ೧೧ ಗಂಟೆಗೆ, ಒಂದು ಮನೆಯ ಮುಂದೆ ನಿಂತಾಗ, ನನ್ನ ಕಂಪನಿಯ ಹೆಸರು ಹೇಳಿದಾಗ ಒಳಗೆ ಕರೆಯಿಸಿ, ಚೆನ್ನಾಗಿ ಮಾತನಾಡಿಸಿ ಕಂಪನಿಯ ಕತೆ, ಪಗಾರು, ರಜೆಗಳ ಕುರಿತಾಗಿ ಒಂದರ ಮೇಲೊಂದು ಪ್ರಶ್ನೆಕೆಳಿದ  ಅಂಕಲ್, ಬ್ಯಾಚುಲರ್ ಆದರೆ ಮನೆ ಕೊಡಲ್ಲರಿ ಎಂದು ಹೇಳಿ ವಿನಯದಿಂದ ಜಾರಿ ಕೊಂಡರು. ಅಷ್ಟು ಚೆನ್ನಾಗಿ ಮಾತನಾಡಿದ ಅವರು ಮನೆ ನನಗೆ ಕೊಡುತ್ತಾರೆ ಎನ್ನುವ ನಂಬಿಕೆ ಬಂದು ಹೋಗಿತ್ತು. ಆದರೆ ಅವರೊಂದು ಗೆಳೆತನ ಇರಿಸಿ ಕೊಳ್ಳುವ ಮನಸ್ಸೆಮ್ಬಂತೆ, ನನ್ನ ಮೊಬೈಲ್ ನಂಬರ್ ಕೇಳಿದ್ದರು; ಕೊಟ್ಟು ಬಂದೆ. ಸುಮಾರು ಎಂಟು ತಿಂಗಳು ಕಳೆದ ಬಳಿಕ, ಅವರು ನನಗೆ ಕಾಲ್ ಮಾಡಿ, "ಹಲೋ ನಮಸ್ಕಾರ, ನಿಮಗೆ ಗೊತ್ತಾಯಿತ್ತಲ್ಲ... ನೀವು ನಮ್ಮ ಮನೆಗೆ ಬಾಡಿಗೆ ಮನೆ ಕೇಳಲು ಬಂದಿದ್ದಿರಿ.. ನಮ್ಮ ಮಗಳು, ಈ ವರ್ಷ ಇಂಜಿನಿಯರಿಂಗ್ ಮುಗಿಸಿದ್ದಾಳೆ, ಕಂಪ್ಯೂಟರ್ ಸೈನ್ಸ್, ನಿಮ್ಮ ಕಂಪನಿ ಯಲ್ಲಿ ಜಾಬ್ ಸಿಗುವುದಾ?". ನನಗೆ ಎಲ್ಲಿಲ್ಲ ಕೋಪ ಬಂತು, "ಇಲ್ಲ ಅಂಕಲ್, ಸಿಂಗಲ್ಸ್ ಗರ್ಲ್ಸ್ ಗಳಿಗೆ ನಮ್ಮ ಕಂಪನಿಯಲ್ಲಿ ತಗೋಳಲ್ಲ" ಎಂದು ಹೇಳಿ ಕಾಲ್ ಕಟ್ ಮಾಡಿದ್ದೆ. ಕಾಲ್ ಕಟ್ ಮಾಡಿದ ಮೇಲೆ ನಾನು ಈ ಹಿರಿಯರಿಗೆ ಇಷ್ಟೊಂದು ಕಡಕ್ ಉತ್ತರ ಕೊಡಬಾರದಿತ್ತು ಅನಿಸಿತ್ತು.

ಅದೆಷ್ಟೋ ಸಾರಿ, ರಾಜಾಂಗಣದಲ್ಲಿ ಕಾರ್ಯಕ್ರಮ  ಮುಗಿಸಿ  ಉಡುಪಿಯ ಯಾವೊದೋ ಹೋಟೆಲ್ ಹೋಗುವಾಗ ನಾನು ಒಬ್ಬನೇ ಇರುತ್ತಿದ್ದೆ. ನನ್ನ ಗೆಳೆಯರಾರಿಗೂ  ಯಕ್ಷಗಾನದಂತ ಕಾರ್ಯಕ್ರಮಗಳು ಇಷ್ಟವಾಗಿರುತ್ತಿರಲಿಲ್ಲ. ಹೀಗಾಗಿ ಹೋಟೆಲ್ ನಲ್ಲಿ ಜಾಗ ಇಲ್ಲದಿದ್ದರೆ, ನೀವು 'ಸಿಂಗಲ್ ತಾನೆ?' ಎಂದು ತಡೆದು, ಮತ್ತೊಬ್ಬ ಪುಣ್ಯಾತ್ಮ ಯಾರೊಬ್ಬ ನನ್ನ ಜೊತೆ 'double  ಅನಿಸಿ' ಕೊಳ್ಳುವ ತನಕವೂ ಕಾಯಬೇಕಾಗಿತ್ತು. ಹೀಗೆ double  ಅನಿಸಿ ಕೊಳ್ಳಲು ನನ್ನ ಟೇಬಲ್ ಗೆ ಬರುವ  ಆ ಸಿಂಗಲ್ ಯಾವ ಮಾತು ಕತೆ ಇಲ್ಲದೆ ತನ್ನ ಪಾಡಿಗೆ ತಾನು ತಿಂದು, ತನ್ನದೇ ಮೊಬೈಲ್ ನಲ್ಲಿ ಆಟವಾಡಿ ಹೋಗುವಾಗ, ನನ್ನ ಮನಸ್ಸಿನಲ್ಲಿ ಹೊರಳುದುತ್ತಿದ್ದ ವಿಚಾರವೆಂದರೆ-' ನಾನು ಯಾಕ್ಷಗಾನ ನೋಡುವಂತ ಹುಡುಗಿನೇ ಮದುವೆಯಾಗಿ ಬಿಟ್ಟರೆ 'ಸಿಂಗಲ್ ತಾನೇ?' ಪ್ರಶ್ನೆಗೆ ಉತ್ತರ  ದೊರಿಕಿತಲ್ಲವೇ?' ಅನ್ನುವಂತ ಕ್ಷಣಗಳು ನಾನು ಅನುಭವಿಸಿದ್ದೇನೆ. ಅದು ಸರಿಯೋ-ತಪ್ಪೋ ಬೇರೆ ವಿಚಾರ.

ಇಷ್ಟೆಲ್ಲಾ ಹಳೆಯ ಕತೆ ನಾನು ಯಾಕೆ ನೆನಪಿಸಿ ಕೊಂಡೆ ಅಂದರೆ, ನಿನ್ನೆ -ಮೊನ್ನೆಯ ವರೆಗೂ ಆಫೀಸ್ ನಲ್ಲಿ ವೀಕೆಂಡ್ ಸಹಿತ ಕೆಲಸ ಮಾಡಿದ್ದೇನೆ. ನನ್ನ ಹಿರಿಯ ಸಹೋದ್ಯೋಗಿ ಒಬ್ಬರು ಬಂದು, 'ವೆಂಕಟ್, ನೀವು ಹೇಗೂ ಬ್ಯಾಚುಲರ್ ಅಲ್ವ?.. ವೀಕೆಂಡ್ ಆಫೀಸ್ ಗೆ ಬನ್ನಿ. ನಾನು ಉಳಿದವರಿಗೆ ಹೇಳಲ್ಲ(ಅವರೆಲ್ಲ ಮ್ಯಾರೀಡ್ )" ಎಂದು ಹೇಳಿದರು. ಸವಿನಯದಿಂದ, ಬ್ಯಾಚುಲರ್ ಗೆ  'ಎಲಿಜೆಬಲ್' ಪದ ನಾನೇ ಸೇರಿಸಿ, ಒಮ್ಮೆ ಸಂತೋಷದ ನಗೆ ಬಿರಿ...ಬರ್ತೇನೆ ಎಂದು ಹೇಳಿದೆ. ವೀಕೆಂಡ್ಸ ಎಲ್ಲ  ನಿರವ ಮೌನವಾದ ಆಫೀಸ್ ನಲ್ಲಿ ಒಂದು ಕಾಫಿ ಗೂ  ಗತಿಯಿಲ್ಲದೆ, ಒಂದೇ ಸವನೆ ಕೀಬೋರ್ಡ್ ಕುಟುಕಿದ್ದೆ ನನ್ನ ಕೆಲಸ. ಆದರೆ ವಿಕೆಂಡ ನಲ್ಲಿ ಮಾಡಬೇಕಾದ ಬಟ್ಟೆ ವಾಶಿಂಗ್, ಮನೆಯ ಕ್ಲೀನಿಂಗ್,ಚಪ್ಪಲಿ ಜೋಡಣೆ ಇತ್ಯಾದಿ ಕೆಲಸಗಳು ಸರಿಯಾಗಿ ನಡೆಯದೆ, ಸೋಮವಾರ  ರಾತ್ರಿ ೧೦ ಗಂಟೆಗೆ ಬಟ್ಟೆ ವಾಶ್ ಮಾಡಿದ್ದೆ. ವೀಕೆಂಡ್ ಎಂದು ಊರಿಗೆ ಹೋದ ಉಳಿದ  ನನ್ನ ರೂಮೇಟ್ ಗಳಿಂದಾಗಿ ರಾತ್ರಿ ಊಟವು  ಇರಲಿಲ್ಲ. ಊಟಕ್ಕಾಗಿ ಮತ್ತೆ ಹುಡುಕಾಟ. ಇದನೆಲ್ಲ ಯೋಚಿಸುವಾಗ, ಬ್ಯಾಚುಲರ್ ಗಳು ವೀಕೆಂಡ್ ಗಳಲ್ಲಿ ಮಾಡಬೇಕಾದ ಕೆಲಸಗಳು ಒಬ್ಬ ಮ್ಯಾರೀಡ್ ಗಳಿಗಿಂತಲೂ ಜಾಸ್ತಿನೆ ಇರುತ್ತವೆ. ಆದರೆ ಯಾಕೆ ಬ್ಯಾಚುಲರ್ ಗಳು ಅಂದ್ರೆ ಗ್ರಾಂಟೆಡ್ ಅನ್ನುವ ಪ್ರಶ್ನೆ ಮೂಡಿ ಬಿಟ್ಟಿತ್ತು.

ಒಟ್ಟಾರೆ ಬ್ಯಾಚುಲರ್ ಜೀವನ ಒಂದು ರೀತಿಯಲ್ಲಿ ಅತ್ಯಂತ ಸ್ವಾತಂತ್ರ್ಯ ಅನುಭವಿಸಬಹುದಾದ ದಿನಗಳು.ಎಲ್ಲರು ಜೀವನದಲಿ ಈ ದಿನಗಳು ಅನುಭವಿಸಿಯೇ ಮುಂದಿನ ಗೃಸ್ಥ(ಗ್ರಹಸ್ತ) ಜೀವನಕ್ಕೆ ಕಾಲಿರಿಸುತ್ತಾರೆ. ಅದರೂ ಯಾಕೆ ಈ ಅಂಕಲ್ ಗಳು , " ಬ್ಯಾಚುಲರ್ ರಾ?" ಎಂದು ಕೇಳಿ, ಒಂದು  ಬಗೆಯ ಉಪದ್ರದ ಜೀವಿಗಳಂತೆ ನೋಡುತ್ತಾರೋ ಗೊತ್ತಿಲ್ಲ.