Saturday, August 31, 2013

ಬೆಂಗಳೂರಿ"ನಲ್ಲೇ" ಸೆಟ್ಲ್ ಆಗ್ತಿರಾ?

ಬೆಂಗಳೂರು ಅಭಿವೃದ್ದಿಗೆ  ಹಲವಾರು  ಸಂಸ್ಥೆಗಳಿವೆ :ಬೆಂಗಳೂರು ಮಹಾನಗರ ಪಾಲಿಕೆ ಹಾಗೂ BDA ಇರುವುದು ನಿಮಗೆಲ್ಲ ಗೊತ್ತೇ ಇದೆ. ಆದರೆ ಅದಕ್ಕಿಂತಲೂ ಹೆಚ್ಚಾಗಿ ಬೆಂಗಳೂರಿನ ಕುರಿತಾಗಿ ಸಮಗ್ರವಾಗಿ(a  holistic approach  in thinking ) ಯೋಚಿಸುವ ವ್ಯಕ್ತಿಗಳು ಎಂದರೆ ಹೊಸದಾಗಿ ಬೆಂಗಳೂರಿಗೆ ಬಂದು ಜೀವನ ಸಾಗಿಸಬೇಕು ಎಂದು ಕೊಂಡವರು. ನನ್ನ ಅನುಭವದಿಂದ ಹೇಳುವ ಮಾತೆಂದರೆ, ಇಂಥ ಹೊಸ ವ್ಯಕ್ತಿಗಳು ಬೆಂಗಳೂರಿನ ಭವಿಷ್ಯದ ಬಗ್ಗೆ ಬಹಳ ಯೋಚನೆ ಮಾಡುತ್ತಾರೆ ಅನಿಸುತ್ತದೆ.

ನನಗೆ ಮೊದಲಿಂದಲೂ ಬೆಂಗಳೂರಿನ ಬಗ್ಗೆ ಒಳ್ಳೆಯ ಅಭಿಪ್ರಾಯವಿರಲಿಲ್ಲ. ಅದಕ್ಕೆ ಕಾರಣ, ಹಳ್ಳಿಯಲ್ಲಿ  ಏಳೆಂಟು ಎಕರೆ ತೋಟ-ಗದ್ದೆಗಳಲ್ಲಿ ಓಡಾಡಿ ಕೊಂಡು ಬೆಳದು, ಊರಿನ ಯಾವ ಮನೆಯ ಒಲೆಯ ಮೇಲಿನ ಅನ್ನವಾದರು ಪರವಾಗಿಲ್ಲ ಎನ್ನುವಂತೆ ಬೆಳೆದು,  ಬೆಂಗಳೂರಿನ ೬ x  ೩ ಅಡಿ ಜಾಗದಲ್ಲಿ ಜೀವನ ಮಾಡಬೇಕು ಅಂದರೆ ಹೇಗೆ ಸಾಧ್ಯ? ಆ ಮನಸ್ಸು ಹೇಗೆ ಕುಗ್ಗಿಸಬೇಕು? ನೂರಾರು ಅಡಿ ರಸ್ತೆಗಳಿದ್ದರೂ ಬೈಕ್ ಓಡಿಸಲು ಬೇಕಾದ ೨ ಅಡಿಗೂ ಗುದ್ದಾಡಬೇಕು..:! 

ಹಾಗೆಂದು ಬೆಂಗಳೂರಿಗೆ ಬಂದ ಮೊದಲ ದಿನ ಒಂದು ವಿಶೇಷ ಅನುಭವವೇ... ನಾನು ರಾಜಧಾನಿ ನಗರಿಯಲ್ಲಿ ಓಡಾಡುತ್ತಿದ್ದೇನೆ ಎನ್ನುವುದು ಒಂದು ರೀತಿಯಲ್ಲಿ (ಹಳ್ಳಿಯಲ್ಲಿ) ಗೌರವದ ವಿಷಯ. ಇನ್ನು ನನ್ನ ಹಿತೆಶಿಗಳಿಗೆ ಬೆಂಗಳೂರಿಗೆ ಹೋಗುತ್ತೇನೆ ಅಂದಾಗ, "ಹೌದಾ, ಬೆಂಗಳೂರಿನಲ್ಲಿ ಇದ್ದೀರಿ ಅಂದ್ರೆ.... ನಿಮಗೆ ಕನ್ಯಾ ದಾನ ಮಾಡುವರ ಸಂಖ್ಯೆ ಕೂಡ ಹೆಚ್ಚಾಗುತ್ತೆ...!" ಎಂದು ಹಾಸ್ಯ ಚಟಾಕಿಯನ್ನೇ ಹಾರಿಸಿದ್ದರು. ಬೆಂಗಳೂರಿನ ಫ್ಲೈಓವರ್ ಗಳ ಮೇಲೆ  AC ಬಸ್ಸಿನಲ್ಲಿ ಓಡಾಡುವಾಗ ಸುಖವೇ ಬೇರೆ. ರಸ್ತೆಯ ಪಕ್ಕದಲ್ಲಿ ನಿಲ್ಲಿಸಿರುವ ಬಿಲ್ ಬೋರ್ಡ್ಸ ಗಳು, ವಿವಿಧ ದೀಪಾಲಂಕರಗಳು  ನೋಡುವಾಗ ಅದ್ಭುತ ಸೌಂದರ್ಯ ಲೋಕದ ಅನುಭವಾಗುತ್ತದೆ. AC  ಶಾಪಿಂಗ್ ಮಾಲ್ ಗಳು, ಸ್ವಿಚ್ ಒತ್ತಿದರೆ ಸಿಗುವ ಕಾಫಿ, ಕೈ ಹಿಡಿದರೆ ನೀರು ಬಿಡುವ ನಲ್ಲಿಗಳು ಎಲ್ಲವು ವಿಶೇಷವೇ..!

ಆದರೆ, ವಾರವೊಂದು ಕಳೆಯುತ್ತಿದ್ದಂತೆ ಬೆಂಗಳೂರು ಎಂದರೆ ಏನು? ರಾಜಧಾನಿಯ ಅಂತರಾಳದ ನೋವು ಏನು ಎನ್ನುವುದು ತಿಲಿಯಲಾರಮ್ಬಿಸಿತು. ಮೂಗನ್ನು ಪ್ರವೇಶ ಮಾಡುತ್ತಿರುವ ಧೂಳು ಕಣ್ಣಗಳು,ಕಿವಿಯನ್ನು ಕೆಂಗಡಿಸುತ್ತಿರುವ ವಾಹನಗಳ ಶಬ್ಧ, ಎತ್ತಿ-ಎತ್ತಿ ಬಿಸಾಡುವ ವಾಹನದ ಗಾಲಿಗಳು-ಕೆಟ್ಟಿರುವ ರಸ್ತೆಗಳು, ಮಾತನಾಡದ ಜನಗಳು, ಟ್ರಾಫಿಕ್ ನಲ್ಲಿ ಸಿಕ್ಕಿ ಹಾಕಿಕೊಂಡಿರುವ ಆಂಬುಲೆನ್ಸ್ ಗಳು, ರಸ್ತೆಯಲ್ಲಿ ಹರ ಸಾಹಸ ಮಾಡುತ್ತಿರುವ ಟ್ರಾಫಿಕ್ ಪೋಲಿಷ್ ಗಳು, ರಸ್ತೆಗಿಳಿದು ಕೆಲಸ ಹಗಲು-ರಾತ್ರಿ ದುಡಿಯುವ BBMP ನೌಕರು, ಕೆಟ್ಟ ವಾಸನೆಯಿಂದ ಸಹನೆಯನ್ನೇ ಪ್ರಶ್ನಿಸುವಂತ  ಕಸದ ರಾಸಿಗಳು, .....<removed>, ಈ ಜಗತ್ತೇ ತಮಗೆ ಸಂಬಂಧವಿಲ್ಲದಂತೆ AC ಬಸ್ಸಿನಲ್ಲಿ ಕಿವಿಗೆ earphone  ತುರುಕಿ, ಕಣ್ಣುಗಳನ್ನು ಮೊಬೈಲ್ ಸ್ಕ್ರೀನ್ ಗೆ ನಾಟಿಸಿ ಕುಳಿತುಕೊಳ್ಳುವ ಯೌವನದ ಯುವಕ-ಯುವತಿಯರು.... ಹೀಗೆ ಸಾವಿರಾರು ಬಗೆಯ ದೃಶ್ಯಗಳು ನಿತ್ಯ ಇಲ್ಲಿ ಲಭ್ಯ.

ಬೆಂಗಳೂರು ನಗರದಲ್ಲಿ ಬದುಕು ಒಂದು ವಿಪರ್ಯಾಸದ ಸಂಕೇತ. ಬಸ್ಸುಗಳಲ್ಲಿ ಹತ್ತಿದರೆ ಆಸನ ಸಿಕ್ಕೀತು ಎನ್ನುವ ಭರವಸೆ ಇಲ್ಲ. ಜನ ಜನ್ಗಳುಲಿಯ ಮಧ್ಯೆ ಯಾರು ಮೊಬೈಲ್, ಪಾಕೆಟ್ ಗೆ ಕೈ ಹಾಕುತ್ತಾರೆ ಅನ್ನುವ ವಿಚಾರದಲ್ಲೇ ತಲೆ ಕೆಡಿಸಿ ಕೊಂಡಿರಬೇಕು. ಅದರಲ್ಲೂ ಈ BMTC  ಕಂಡಕ್ಟರ್ ಗಳು ಕೊಡಬೇಕಾದ ಚಿಲ್ಲರೆ ಹಣವನ್ನು  ಟಿಕೆಟ್ ಮೇಲೆ  ಬರೆದು ಕೊಟ್ಟರೆ ಅಂದರೆ ಬಹಳ  ಗಮನದಲ್ಲಿ ಇಟ್ಟು ಕೊಂಡಿರಬೇಕು. ಒಂದೊಮ್ಮೆ  ಇಳಿಯುವ  ಸ್ಥಳದ ಕುರಿತಾದ ಚಿಂತೆ, ಟ್ರಾಫಿಕ್ ಕಿರಿ ಕಿರಿ ಮಧ್ಯೆ ನಿವೇನಾದರು ಚಿಲ್ಲರೆ ಹಣ ಮರೆತಿರೋ... ಕೃಷ್ಣಾರ್ಪಣ ಅನ್ನಬೇಕು ಅಷ್ಟೇ. ರಾತ್ರಿ ೯ ಗಂಟೆಯಾಗಿದೆ ಅಂದರೆ ಗಂಡಸರಾದ  ನಮ್ಮಂತವರಿಗೂ ನಡೆದಾಡಲು ಒಳ್ಳೆಯ ನಗರ ಅಲ್ಲ. ಕುಡುಕ ಪುಂಡರ ಮಧ್ಯದಲ್ಲಿ ಒಮ್ಮೆ ಸಿಕ್ಕಿ ಹಾಕಿಕೊಂಡು ನಾನು ಹಾಗೂ ನನ್ನ ಗೆಳೆಯರು ಕಸಿ-ವಿಸಿ ಅನುಭವಿಸಿದ್ದೇವೆ.

ಬೆಂಗಳೂರು ನಗರದಲ್ಲಿ ಇರುವುದು ಹಣ ಮಾತ್ರ; ಮಾನವೀಯತೆಗೆ ಬೆಲೆ ಇಲ್ಲ; ನೀರು ಇಲ್ಲ; ರಸ್ತೆಗಳು ಸಾಕಾಗುತ್ತಿಲ್ಲ; ವಿಸ್ತಾರವಾದ ಮನೆಗಳಿಲ್ಲ. ಹಾಗೆಂದು ಎನೂ ಇಲ್ಲವೆಂದು ಹುಬ್ಬೇರಿಸಲು ಹೋಗಬೇಡಿ...! ೨೦೦ ಇಂಜಿನಿಯರಿಂಗ್ ಕಾಲೇಜ್ ಗಳಿವೆ, ವಿಧಾನ ಸೌಧವಿದೆ, ಸರ್ಕಾರದ ಸಂಸ್ಥೆಗಳಿವೆ, ಸಾಂಸ್ಕೃತಿಕ ನೆಲೆಯಲ್ಲಿ ಹುಟ್ಟಿರುವ ಪುರಭವನದಂತ ಸ್ಥಗಳಿವೆ, ರಾಜ-ಮಹಾರಾಜರ ನೆನಪಿನ ಅರಮನೆ ಇದೆ; ದೇಶದ ಪ್ರತಿಷ್ಥಿತ DRDO , ಇಸ್ರೋ ದಂತಹ ಸಂಸ್ಥೆಗಳಿವೆ,   ಸಾವಿರಾರು ಹೋಟೆಲ್ ಗಳಿಗಳಿವೆ, ಸಕಲ ಸೌಲಭ್ಯದಿಂದೊದಗುಡಿದ ಆಸ್ಪತ್ರೆಗಳಿವೆ. ಆದರೆ ಇವೆಲ್ಲ ಇದ್ದು  ಕಣ್ಣಿಗೆ ಕಾಣುತ್ತಿದ್ದರೂ, ಅತಿ ಕಡಿಮೆ ದೂರದಲ್ಲಿದ್ದರು ವಾಹನ ಸಂದಣಿಯ ಮಧ್ಯೆ ಯಾವುದು ಕೂಡ ಸರಳವಾಗಿ ಲಭ್ಯವಾಗುವಂತದಲ್ಲ. ಕೆಲವೊಮ್ಮೆ, ಗುಯಂ ಗುಯಂ ಎಂದು ಹಾರ್ನ ಮಾಡುತ್ತ ಟ್ರಾಫಿಕ್ ನ ಮಧ್ಯೆ ಸಿಕ್ಕಿ ಹಾಕಿಕೊಂಡು ಒದ್ದಾಡುವ ಆಂಬುಲೆನ್ಸ್ ಗಳನ್ನೂ ನೋಡಿದಾಗ, ನಗರದಿಂದ ೫೦ ಕಿಮಿ ದೂರದಲ್ಲಿ ಇರುವ ನಮ್ಮ ಹಳ್ಳಿಯ ಜನ ಬೆಂಗಳೂರಿನ ಜನಕ್ಕಿಂತಲೂ ಬೇಗ ಆಸ್ಪತ್ರೆಗೆ ತಲುಪತ್ತಾರೆ ಅನಿಸುತ್ತದೆ.

ಬೆಂಗಳೂರಿನಲ್ಲಿ ಪೂರ್ಣವಾಗಿ ಸೆಟ್ಲ್ ಆಗಬೇಕು ಅಥವಾ ಆಗುತ್ತಿರುವ ನನ್ನ ಸಹೋದ್ಯೋಗಿಗಳ ವಿಷಯಗಳನ್ನು ತಿಳಿದಾಗ ಬಹಳ ಸಾರಿ ನಾನು ಏನು  ಮಾಡಬೇಕು ಎಂದು ಪ್ರಶ್ನಿಸಿ ಕೊಂಡಿದ್ದೇನೆ.ಬೆಂಗಳೂರಿನಲ್ಲಿ ಒಂದು ಸಾಮಾನ್ಯ ಅರ್ಧ ಹಳ್ಳಿಯನ್ನೇ ಕೊಂಡುಕೊಳ್ಳಬಹುದಾದಷ್ಟು ಹಣವನ್ನು 35 x 40 ಸೈಟ್ ಗೆ ಸುರಿಯ ಬೇಕು. ಅದರ ಜೊತೆಗೆ ತಮಿಳುನಾಡು-ಕರ್ನಾಟಕ ಪ್ರೀತಿಯಿಂದ ವರ್ತಿಸಿದರೆ, ವರುಣ ದೇವನು ಕೃಪೆ ತೋರಿಸಿದರೆ ಮಾತ್ರ ನೀರು..ಇಲ್ಲಾಂದರೆ ಬೆಂಗಳೂರು ಥಾರ್ ಮರುಭೂಮಿಯೇ..! ಬೈಕ್ ನಲ್ಲಿ ಓಡಾಡುವುದು ಕಷ್ಟ.. ಕಾರಗೆ ರಸ್ತೆಯು ಇಲ್ಲ; ಪಾರ್ಕಿಂಗ್ ಜಾಗವು ಇಲ್ಲ. ಟ್ರಾಫಿಕ್ ಮಧ್ಯೆ ಸಿಕ್ಕಿ ಹಾಕಿಕೊಂಡು ಕೋಪಗೊಂಡು, "ಬಿಡ್ರಲೇ ನನ್ನ" ಅನ್ನುವುದರ  ಪರಿಣಾಮವಾಗಿ "BDA " ಎಂಬ ಶಬ್ಧ ಬಂದಿದೆಯೋ ಏನೋ !

ಬೆಂಗಳೂರಿನ ಪರಿಸ್ಥಿಗೆ ಉತ್ತರವಿಲ್ಲ. ಇಲ್ಲಿಯ ಬದುಕು ಪೂರ್ಣವಾಗಿ ಪೆಟ್ರೋಲಿಯಂ  ಹಾಗೂ ವಿದ್ಯುತ್ ಮೇಲೆ ಆಧಾರಿತ(ಎಲ್ಲ ನಗರಗಳು ಅಷ್ಟೇ). ಆದರೆ ಪೆಟ್ರೋಲಿಯಂ ಅಗಲಿ ವಿದ್ಯುತ ಅಗಲಿ ಯಾವತ್ತು ಸಿಗುತ್ತಲೇ ಇರುವ ವಸ್ತುಗಳಲ್ಲ. ಇದರಿಂದಾಗಿ ಕೆಲವೇ ವರ್ಷಗಳಲ್ಲಿ $ ಏರು ಮುಖ, ಎಣ್ಣೆಯ ಅತಿ ಹೆಚ್ಚು ಕರ್ಚುಗಳಿಂದ ಬೆಂಗಳೂರಿನ ಜೀವನ ಬಹಳ ಕಷ್ಟವಾಗಲಿದೆ ಅನ್ನುವ ಒಂದು ಲೆಕ್ಕಾಚಾರ ಕೂಡ ನನ್ನ ತಲೆಯಲ್ಲಿದೆ. ಅದರಲ್ಲೂ, "Small is Beautiful" ಪುಸ್ತಕದ ಕೆಲವು ಹಾಳೆಗಳನ್ನು ತಿರುವಿ ಹಾಕಿದಾಗ ಮಾನವ ಜಗತ್ತು  ಅತಿ ಹೆಚ್ಚಾಗಿ ನವಿಕರಿಸಲಾಗದ ಶಕ್ತಿಗಳ ಮೇಲೆ ಅವಲಂಬಿಸಿರುವುದರ ಪರಿಣಾಮವಾಗಿ ನೋವು ಕಟ್ಟಿಟ್ಟ ಬುತ್ತಿ ಎನ್ನುವುದು ಅರಿವಿಗೆ ಬಂದಿದೆ.

ಬೆಂಗಳೂರಿನ ಸಮಸ್ಯೆಗಳಿಗೆ ಜನ-ಸರ್ಕಾರಗಳು ಬಹಳ ಉಪಾಯ-ತಂತ್ರಜ್ಞಾನ ಕಂಡುಕೊಂಡಿರುವುದಂತು ನಿಜ. ಅಗಲವಾದ ರಸ್ತೆಗಳು, ಫ್ಲ್ಯವೆರ್ ಗಳು, ಮೆಟ್ರೋ, ಅಪಾರ್ಟ್ ಮೆಂಟ್ ಗಳು. ಆದರೆ ವರುಣ ಅವಕೃಪೆ ಯಾದರೆ ಉತ್ತರ ವಿದೆಯೇ? ಮಳೆಯಿಲ್ಲದಿದ್ದರೆ ಬೆಂಗಳೂರಿಗೆ ಯಾವ ತಂತ್ರಜ್ಞಾನವು ನೀರು ತರಲಾರದು. ಅತಿ ಮಳೆ, ಭೂಕಂಪನ ದಂತ ಸಣ್ಣ  ಸಣ್ಣ ವಿಷಯಕ್ಕೂ ನಗರದ ಜೀವನ ಅಸ್ತವ್ಯಸ್ತ ಗೊಳ್ಳುತ್ತದೆ. ಒಂದೊಮ್ಮೆಇಡಿ ನಗರ ಮರು ನಿರ್ಮಾಣ ಮಾಡಬೇಕಾದಾರೆ  ಊಹಿಸಿ ಕೊಳ್ಳಲು ಸಾಧ್ಯವಾಗದಷ್ಟು ನೋವು ಇಲ್ಲಿ ಬರಲಿದೆ. ಹಾಗೆ ಆಗದೆ ಇರಲಿ ಅನ್ನೋದೇ ನನ್ನ ಆಶಯ. ಆದರೆ ಸರ್ಕಾರಗಳು  ಸರಿಯಾಗಿ ಗಮನ ಹರಿಸದಿದ್ದರೆ, ಅಮೆರಿಕಾದ ಡೆಟ್ರಾಯಿಟ್ ನಗರದಂತೆ ಬೆಂಗಳೂರಿನ ಸ್ಥಿತಿ ತಲುಪುದಂತು ನಿಜ.

ಹೀಗೆ ಸಾವಿರಾರು ಸಮಸ್ಯೆಗಳನ್ನು ನಾನು ಪಟ್ಟಿ ಮಾಡಬಲ್ಲೆ. ಆದರೆ ನನ್ನ ಹಾಗೆ ಸಾವಿರಾರು ಜನ ಬೆಂಗಳೂರಿನಲ್ಲಿ ಇಲ್ಲವೆ? ಅದರ ಜೊತೆಗೆ ನಾನೇ ಕೆಲವು ವಾಕ್ಯಗಳನ್ನು ಜೋಡಿಸಿ ಕೊಂಡಿದ್ದೇನೆ, "ಕೋಟಿಗಟ್ಟಲೆ ಜನ ಇರುವ ನಗರಕ್ಕೆ ನಾನೊಬ್ಬ ಭಾರವೇ?", "ಹುಟ್ಟಿಸಿದ ದೇವರು ಹುಲ್ಲು ಮೇಯಿಸಿಯನೆ?(ದೇವರು ನನಗೂ ಇಲ್ಲಿ ಒಂದು ಮನೆ ಕೊಟ್ಟಾನು)," ನೂರು ವರ್ಷದ ಬಾಳುವೆಗಾಗಿ ಇಷ್ಟೊಂದು ಚಿಂತೆಯಾಕೆ?". ಹೀಗೆಲ್ಲ ಯೋಚಿಸಿ...ಕೊನೆಗೂ ನಾನು ಬೆಂಗಳೂರು ನನ್ನದಲ್ಲ ಅನ್ನುತ್ತಲೇ ನಾನು ಬೆಂಗಳೂರಿನವನಾಗುತ್ತಿದ್ದೇನೆ. ಬೆಂಗಳೂರಿಗೆ ಬಂದು ೯ ತಿಂಗಳು ಕಳೆದಿವೆ(ನವ ಮಾಸ ತುಂಬಿದೆ).

ಹುಟ್ಟೂರು ದೂರ ಉಳಿಯಿತು;ಉಡುಪಿ  ಮರೆಗೆ ಸರಿಯಿತು; ಹೊಸ ಬದುಕು-ಹೊಸ ಕಲ್ಪನೆ. ಜೀವನಕ್ಕೆ user guide, reference guide ಇರಲ್ಲ ನೋಡಿ. ಬದುಕು ಹೇಗಾದರೂ ನಡಿತನೇ ಇರುತ್ತೆ... ಏನಂತಿಯ ಮಗಾ? ಆದರೆ, ನನ್ನ ದೊಡ್ಡ ಚಿಂತೆ, "ನೀವು  ಬೆಂಗಳೂರಿ"ನಲ್ಲೆ" ಸೆಟ್ಲ್ ಆಗ್ತಿರಾss...?!" ಅಂತ ಕೇಳ್ತಾರಲ್ಲ... ಅವರಿಗೆ ಏನು ಹೇಳುದು? ಹೇಗೆ ಹೇಳುದು?

Thursday, August 22, 2013

ಒಂದು ವರ್ಷ..!

ಇವತ್ತು ನನ್ನ ಈ ಕನ್ನಡ ಬ್ಲಾಗ್ ಗೆ ಒಂದು ವರ್ಷ..! 

ಅಂಗಡಿಯವನಿಗೆ  ಗಿರಾಕಿ, ಮಠಕ್ಕೆ ಸ್ವಾಮಿ,ದೇಶಕ್ಕೆ ರಾಜಕಾರಣಿ, ಭೂಮಿಗೆ ರೈತ ಇರುವಂತೆ  ಒಬ್ಬ ಬರಹಗಾರನಿಗೆ ಓದುವ ಒಬ್ಬ ಓದುಗ ಬೇಕೇ ಬೇಕು. ಹಾಗಾಗಿ ನನ್ನ ಓದುಗ ಮಿತ್ರರಿಗೆ  ಬರಹಗಳನ್ನು ಸರಿಯಾಗಿ,ಕನಿಷ್ಠ ಪ್ರಯತ್ನದಿಂದ ಓದುವಂತೆ ಸಹಾಯವಾಗಲು ನನ್ನ ಬ್ಲಾಗ್  www.heartwaves4u.blogspot.in ಆದರದಿಂದ ಸ್ವಾಗತಿಸುತ್ತಿದೆ. 'ಓದುಗ' ಗಿರಾಕಿಗೆ ನನ್ನ ನಮಸ್ಕಾರಗಳು. ಒಬ್ಬನು ಬಂದು ನನ್ನ ಬರಹ ಓದಬೇಕು ಎಂಬ ತುಡಿತ, ಬಯಕೆ ಒಬ್ಬ ಬರಹಗಾರನಿಗೆ ಇರುವ ಅತಿ ದೊಡ್ಡ ಹುಚ್ಚು. ಅದರಲ್ಲೂ ನಾನು ಬರೆಯುವುದು ಹಣಕ್ಕಾಗಿಯಲ್ಲ; ಬರಹದ  ಜೊತೆ ನೋವು ಇದೆ, ಆಕಾಂಕ್ಷೆ ಇದೆ; ಹುಚ್ಚು ಕಲ್ಪನೆಗಳಿವೆ. ಇಂಥದೊಂದು ಮನಸ್ಸಿನ ತುಡಿತವನ್ನು ತೆರೆದಿಡುವುದಕ್ಕೆ  ಬರಹಕ್ಕಿಂತ ಒಳ್ಳೆಯ ದಾರಿಯವುದು ನನಗೆ ಕಾಣದು.

ನಾನು ಬರೆಯಲು ಸುರು ಮಾಡಿ ನಾನು ನೌಕರಿಗೆ ಸೇರಿದಷ್ಟೇ ವರ್ಷಗಳು(೬ ವರ್ಷಗಳು) ಆಗಿ ಹೋದವು. ಮೊದಲು ಡೈರಿ ಎಂದು ನೋಟ್ ಬುಕ್ ಮೇಲೆ ಗಿಚುತಿದ್ದೆ. ಅದರಲ್ಲಿ ಅಮ್ಮ ನಿಂದ ದೂರ ಬಂದ ದುಖ, ಹೋಂ ಸಿಕ್ನೆಸ್ಸ್ , ಮೊದಲ ಕೃಷ್, ಗೆಳೆಯರ-ಆಫೀಸ್ ನಲ್ಲಿ ನಡೆದ ಯಾವುದೇ ಸಣ್ಣ ನೋವಿನ ಸಂಗತಿಯಿದ್ದರು ದಾಖಲಿಸುತಿದ್ದೆ. ಆದರೆ ಅದೊಂದು ದಿನ  ಡೈರಿ ತಿರುವಿಹಾಕಿದಾಗ, ನಾನೇ ನನ್ನ ಬರಹಕ್ಕೆ ಹೌಹಾರಿದೆ. ಒಂದೊಮ್ಮೆ ನಾನು ಬದುಕಿರುವಾಗಲೇ ಯಾರಾದರು ಡೈರಿ ಓದಿದರೆ, ತೀರ ನನ್ನ ವಯಕ್ತಿಕ ಅನಿಸುವ ವಿಷಯಗಳು ನನ್ನ ಕೈ ಬರಹದಲ್ಲೇ ಮೊತ್ತೊಬ್ಬ ಓದಿದರೆ ಬಹಳ ಅಸಹ್ಯ ಅನಿಸಲಾರದೆ ? ಅದನ್ನೇ ನಮ್ಮ ವಿಕ್ನೆಸ್ಸ್ ಎಂದು ಜನ ಭಾವಿಸಲಾರರೆ ? ಗಲಿಬಿಲಿಯಾದೆ. ಒಂದು ದಿನ ಡೈರಿ ಬೆಂಕಿಗೆ ಅಹುತಿಯಾತು. ಅಲ್ಲಿಗೆ ಬದುಕಿನ ಕುರಿತಾಗಿ ಸಿಲ್ಲಿಯಾಗಿ ಬರೆಯುವುದನ್ನು ನಿಲ್ಲಿಸಿದೆ. ಆದರು ಮನಸ್ಸು ಕೇಳಬೇಕಲ್ಲ. ಅದಕ್ಕೆ ಬ್ಲಾಗ್ ಒಂದನ್ನು ಸುರು ಮಾಡಿದೆ.

ಆದರೆ  ಬ್ಲಾಗ್ ವೊಂದನ್ನು ತೆರೆದು, ಪಬ್ಲಿಕ್ ಆಗಿ ನನ್ನ ಬರಹ ನೀಡುವುದಕ್ಕೆ ಹೆದರಿಕೆಯಾಗಿತ್ತು. ನಾನು ಆಡುವ ಭಾಷೆ, ನನ್ನ ಅಕ್ಷರ ತಪ್ಪುಗಳು, ಯಾವುದೇ ಒಂದು ವಿಷಯವೆಂದಾಗ ಅಲ್ಲಿ ಭಿನ್ನಾಭಿಪ್ರಾಯಗಳು ಏಳುತ್ತವೆ, ಅಂತ ಸಮಯದಲ್ಲಿ ಹೇಗೆ ಬಗೆಹರಿಸಲಿ ಅನ್ನುವ ತೊಡಕು  ನನ್ನನ್ನು ಅಡಗಿಕೊಂಡಿರುವಂತೆ ಮಾಡಿತು.ನಾನು ಪರಿ ಪೂರ್ಣ ವ್ಯಕ್ತಿಯಾದಾಗ ಬರೆದರಾಯಿತು ಎನ್ನುವ ಕಲ್ಪನೆ ಇತ್ತು. ಆದರೆ ೧೬ ವರ್ಷಗಳ ಶಿಕ್ಷಣ ಮುಗಿಸಿ, ೬ ವರ್ಷಗಳೇ ಸಂದು ಹೋದರು ಪರಿಪೂರ್ಣತೆ ಅದೆಷ್ಟೋ ದೂರದಲ್ಲಿ ಇದೆ..! ಬಹುಶ: ಎಲ್ಲಿ ಆಕಾಶ ಭೂಮಿಯನ್ನು ಸಂಧಿಸುತ್ತದೋ ಅಲ್ಲಿರಬಹುದೋ ಏನೋ ? ಆದರೆ, facebook  ಮೂಲಕ ಓದುಗರು ನೀಡಿದ ಪ್ರತಿಕ್ರಿಯೆ ಧನಾತ್ಮವಾಗಿದ್ದರಿಂದ ಏನೋ ಒಂದು ಧೈರ್ಯ ಬಂತು. ಈ ಸಂದರ್ಭದಲ್ಲಿ ನನ್ನ ಬ್ಲಾಗ್ ನ ಪ್ರಥಮ ವರ್ಷಾಚರಣೆಯನ್ನು ಆಚರಿಸುವಲ್ಲಿ ನಿಮಗೂ ಸ್ವಾಗತಿಸುತ್ತೇನೆ.

ಇಂಥ ಬರಹಗಳ ನಡುವೆ ನನಗೆ ದು:ಖವಿದೆ, ಖೇದವಿದೆ. ಉಡುಪಿಯೆಂಬ ಊರಿನಲ್ಲಿ ನಾನು ಹುಟ್ಟದಿದ್ದರೂ ಆ ಊರಿನ ಸಂಸ್ಕೃತಿ, ಕಲೆ, ಸಾಹಿತ್ಯ, ಊಟ, ಶಿಕ್ಷಣ ಇತ್ಯಾದಿಗಳ ಕಾರಣಗಳಿಂದಾಗಿ ನಾನು ಕಂಡ ಕನಸುಗಳು ಅಷ್ಟೇ ಸೊಗಸಾಗಿದ್ದವು. ಜಾನ್ ಮರ್ಫಿ ಹೇಳುವಂತೆ, ಮನಸ್ಸಿನಲ್ಲಿ ಆಳವಾಗಿ ಕಾಣುವ "subconsicous mind" ಎಂದು ಒಂದು ಇರುತ್ತದೆಯಂತೆ. ಬಹುಶ ಆ ಭಾಗದ ಮನಸ್ಸಿನಲ್ಲಿ ನನ್ನ ಕನಸುಗಳು ಸೇರಿಕೊಂಡು ಇತ್ತ ಸಾಧಿಸಲಾಗದ-ಅತ್ತ ಬಿಟ್ಟು ಬದುಕಲಾರದ ನೋವು ನನಗೆ ಕಾಡಿತ್ತು. ಅದೊಂದು ದಿನ ರಾತ್ರಿ ಅತ್ತು ಬಿಟ್ಟೆ. ಮನಸ್ಸಿನಲ್ಲಿ ಬಹಳ ನೋವು, ಏನೋ ಒಂದು ಸಾಧಿಸಲಾಗದ ಗುರಿ, ಯಾರೊಂದಿಗೂ ಹೇಳಲಾಗದ ಯಾತನೆ, ಅಲ್ಪ-ಸ್ವಲ್ಪ ನನ್ನ ಬಗ್ಗೆ ತಿಳಿದ ಗೆಳೆಯರಿಂದಲೂ ತಾತ್ಸಾರ. ಇವೆಲ್ಲದರ ನೋವಿನಿಂದ ಹೊರಬರಲು ನನಗೆ ಯಾವ ದಾರಿಯು ಇರಲಿಲ್ಲ. ದು:ಖದ ಮಡುವಿನಲ್ಲಿ ಅರಳಿದ್ದೆ ಈ ಕನ್ನಡ ಕಥೆಗಳ ಒಂದು ಬ್ಲಾಗ್.

ಕನಸು-ಕಲ್ಪನೆಗಳು ಕೈಗೆ ನಿಲುಕದ  ವಿಚಾರಗಳು,
ಮನದಿಂದ ಕಿತ್ತೆಸೆದೆ ಉಡುಪಿಯೆಂಬ ಭಾವ,
ಮನಸ್ಸು ಇದ್ದರೆ ಬದುಕುವೆ ಸಾಧನೆಯ ಗೈದು..!,
ಕನಸುಗಳು ದೂರ ಸರಿಸಿ ಸರಿಸಿ  ಮೊತ್ತೊಮ್ಮೆ ಸರಿಸಿ.

ನನ್ನ ಬರಹಗಳು ಇಲ್ಲಿಯವರೆಗೆ ಸುತ್ತ ಮುತ್ತಣ ಸಣ್ಣ ವಿಷಯಗಳ ಕುರಿತಾಗಿ ಮಾತ್ರ ವಾಗಿತ್ತು. ಪ್ರೀತಿ-ದೇಶ-ಜಾತಿ-ಭಾವನೆಗಳು ಇವುಗಳೇ ನನ್ನ ಬರಹದ ಮುಖ್ಯ ವಿಷಯಗಳು. ಇನ್ನು ಮುಂದೆ ಇನ್ನು ಅನೇಕ ವಿಷಯಗಳನ್ನು ಬರೆಯ ಬೇಕು ಎಂದು ಕೊಂಡಿದ್ದೇನೆ.

ನನ್ನ ಕೆಲವು ಗೆಳೆಯರು ಪತ್ರಿಕೆಗಳಿಗೆ ಬರೆಯಲು ಸಲಹೆ ನೀಡಿದ್ದಾರೆ.ಆದರೆ, ಸಧ್ಯ ನಾನು ಉದುಪಿಯಂಬ ಊರಿನ ನೆರಳಿನಿಂದ ಸಂಪೂರ್ಣವಾಗಿ ಹೊರ ಬಂದಿಲ್ಲ... ಶ್ರೀ ಕೃಷ್ಣ ಮಠದ ಸಭಾಂಗಣದ ಸಾಂಸ್ಕೃತಿಕ ಪ್ರಪಂಚ ವಾರದ ಕೊನೆಗೊಮ್ಮೆಯಾದಾರು ನನ್ನ ಕಣ್ಣ ಮುಂದೆ ನಾಟ್ಯ ಮಾಡುತ್ತಲೇ ಇದೆ. ಎಲ್ಲಿಯ ತನಕ ಉದುಪಿಯೆಂಬ ಕಲ್ಪನೆಗಳು ನನ್ನ ಸ್ಮೃತಿ ಪಟಲದಿಂದ ದೂರ ಸರಿಯುವದಿಲ್ಲವೋ ಅಲ್ಲಿಯ ತನಕ ನಾನು ನೋವನ್ನೇ ಬರೆಯುತ್ತೇನೆ ಅನಿಸುತ್ತಿದೆ. ಏನೇ ಇದ್ದರು ನನ್ನ ಓದುಗರ ಆಕಾಂಕ್ಷೆಗೆ ನಾನು ಭಂಗವನ್ನುಂಟು ಮಾಡಲಾರೆ... ಮುಂದೊಂದು ದಿನ ನಿಮ್ಮ ಆಸೆಯನ್ನು ಪೋರೈಸುತ್ತೇನೆ.

ಇವತ್ತು ತುಂಬಾ ಬ್ಯುಸಿ ಯಾಗಿದ್ದೇನೆ. ಕೆಲಸ ಹಾಗೂ ಇನ್ನು ಕೆಲವು ವಿಶೇಷ ನಿರ್ಧಾರಗಳನ್ನು ತೆಗೆದುಕೊಳ್ಳುವ ಹಂತದಲ್ಲಿದ್ದೇನೆ. ಮುಂದಿನ ದಿನಗಳಲ್ಲಿ ಒಳ್ಳೆಯ ಬರಹದೊಂದಿಗೆ ಬರುತ್ತೇನೆ.

ಸದಾ ನನ್ನ ಜೊತೆ ಇರ್ತಿರಲ್ವಾ?

                                                                                            ಇಂತಿ ನಿಮ್ಮ ಪ್ರೀತಿಯ ಭಾವಜೀವಿ
                                                                                                                        ವೆಂಕಿ.

Saturday, August 10, 2013

ಬದುಕು ಪುಸ್ತಕಗಳಿಲ್ಲ, ಮಾರ್ಕ್ಸ್ ಗಳಲಿಲ್ಲ ಕಣೋ..!

ಕಳೆದೆರಡು ವಾರಗಳಿಂದ ಹುಬ್ಬಳಿ, ಅಂಕೋಲಾ, ಮಣಿಪಾಲ ಹೀಗೆ ಹಲವಾರು ಊರುಗಳನ್ನು ಸುತ್ತುದಿದ್ದೇನೆ. ಬಿಡುವಿಲ್ಲದ ಸಂಚಾರದ ಪರಿಣಾಮವಾಗಿ ಬರೆಯಲು ನನಗೆ ಸಮಯ ಹಾಗೂ ಮಾನಸಿಕವಾದ ಅವಕಾಶ ಸಿಗಲೇ ಇಲ್ಲ. ಮತ್ತೆ ತಿರುಗಿ ಬೆಂಗಳೂರಿಗೆ ಬಂದು ಸಾವಿರಾರು ಜನರ ಮಧ್ಯೆ ನಾನು ಒಬ್ಬನೇ, ಏಕಾಂಗಿ ಅನ್ನುವ ಮನೋಭಾವ ತಲೆ ದೋರಿದೆ.

ನಾನು ಹುಬ್ಬಳ್ಳಿಗೆ ಹೋದಾಗ, ನನ್ನ ಹಳೆಯ ಗೆಳೆಯನೊಬ್ಬನನ್ನು ಭೇಟಿಯಾಗಿದ್ದೆ.ಅವನು ತನ್ನ ಗೆಳೆಯನೊಬ್ಬನ ಕೂಡಿಕೊಂಡು ಸಂಜೆಯ ಸ್ನಾಕ್ಸ್ ಗೆಂದು ಅಯೋಧ್ಯ ಹೋಟೆಲಿಗೆ ಬಂದ. ಅದೇ ದಿನ ರಾತ್ರಿ ೮ ಗಂಟೆಗೆ ಹುಬ್ಬಳ್ಳಿಯಿಂದ ಬೆಂಗಳೂರಿಗೆ ನನ್ನ ಪ್ರಯಾಣ ನಿಗದಿಯಾಗಿತ್ತು.

ಬಹಳ ದಿನಗಳ ನಂತರ ಒಂದಡೆ ಸೇರಿದ ನಮ್ಮಲ್ಲಿ ಬಹಳ ವಿಷಯಗಳು ಇದ್ದವು. ನಾವು ಗೆಳೆಯರು ಅನಿಸಿಕೊಂಡರು ಫೋನ್ ನಲ್ಲಿ ಮಾತನಾಡುವುದು ಅಪರೂಪವೇ. ಅವನ ಗೆಳೆಯನು ಸೇರಿದ್ದರಿಂದಲೂ ಹೊಸ ವ್ಯಕ್ತಿಯ ಪರಿಚಯ, ಮಾತನಾಡಲು  ಹಲವಾರು ವಿಷಯಗಳು ಇದ್ದವು. ತಿಂಡಿ-ಪಾನೀಯಗಳು ಮುಗಿಸಿ ಇಂದಿರಾ ಗಾಜಿನ ಮನೆಯ ಹುಲ್ಲುಗಾವಲಿನ ಮೇಲೆ ಕುಳಿತು ಕುಶಲೋಪರಿ ಪರಿಭಾಷೆಯಲ್ಲಿ ತೊಡಗಿದಾಗ, ನೌಕರಿ, ಮನೆ, ಅಪ್ಪ-ಅಮ್ಮ, ಮದುವೆ ಹೀಗೆ ಹಲವಾರು ವಿಷಯಗಳು ಬಂದು ಹೋದವು. ಒಟ್ಟಾರೆ, ಒಂದೇ ವಾಕ್ಯದಲ್ಲಿ ಹೇಳುವುದಾದರೆ, "ಸೆಟ್ಲ್ ಅದೇನ್ಲೇ ಮಗನೆ ?".

ಆದರೆ ಮದುವೆ ವಿಷಯ ಬಂದಾಗ, ಆ ವಿಷಯದ ವಿಸ್ತಾರ, ಅಳ ಎಷ್ಟೊಂದು ಇರುತ್ತದೆ ಅನ್ನುವುದು ಹೇಳಲು ಸಾಧ್ಯವಿಲ್ಲ. ಮದುವೆಯೊಂದು "ಸರಿಯಾದ ನಾರಿಯೊಂದಿಗೆ" ನಡೆದರೆ ಬದುಕು, ಅದೊಮ್ಮೆ " ವೈರಿಯಾದ ಮಾರಿಯೊಂದಿಗೆ" ನಡೆದರೆ? ಜೀವನ ಮುಕ್ತಯವೋ ಅಥವಾ ಮತ್ತೊಂದು ರೀತಿಯ ಆರಂಭವೋ? ನನಗೆ ಗೊತ್ತಿಲ್ಲ. ಆದರೆ, ನನ್ನ ಗೆಳೆಯನ- ಗೆಳೆಯನ ಬದುಕಿನಲ್ಲಿ ನಡೆದ ಕತೆ, ಹುಬ್ಬಳಿಯ ಗಾಜಿನ ಮನೆಯ ನವಿರಾದ ಹುಲ್ಲುಗಾವಲಿನ ಮೇಲೆ ತಂಗಾಳಿ ಸೇವಿಸುತ್ತ, ಗೆಳೆತನದ  ರೋಮಾಂಚನಕಾರಿ ಮಾನಸಿಕ ಉಲ್ಲಾಸದ ನಡುವೆಯೂ ಕಣ್ಣೀರು ತರಿಸಿದ ಕತೆ.

ಆತ ಪಕ್ಕ ಉತ್ತರ ಕನ್ನಡಿಗ. ಭಾಷೆಯ ಗಡಸುತನ, ಬಳಸುವ ಶಬ್ಧಗಳು, ಅಮ್ಮ ಅನ್ನುವ ಬದಲಾಗಿ "ಅವ್ವ" ಎನ್ನುವ ಮಾತು ಎಲ್ಲವು "ಆ ನನ್ನ ಮಗ" ಉತ್ತರ ಕರ್ನಾಟಕದವನು ಎಂದು ಹೇಳಲು ಸಾಧ್ಯವಿತ್ತು. ಗೆಳೆಯನ ಗೆಳೆಯ ನನಗೂ ಗೆಳೆಯ ತಾನೇ? ಅಂತೂ ನಾವು ಮೂರೂ ಜನ ಗೆಳೆಯರು. ಆತ MBA ಪಧವಿ ಧರ. ಪ್ರತಿಷ್ಟಿತ ಬ್ಯಾಂಕವೊಂದರಲ್ಲಿ  "Financial Analysyst". ಹಾಗಂದೆರೆನು? ನನಗೆ ಗೊತ್ತಿಲ್ಲ. ಅವನು ಒಳ್ಳೆಯ ಕುಟುಂಬದ  ವ್ಯಕ್ತಿ. ಅವನಿಗೆ ಕಾಲೇಜಿನಲ್ಲಿ ಒಂದು crush ಇದ್ದಿತ್ತಾದರು , ಮಾನ-ಮರ್ಯಾದೆ, ಮನೆತನದ ಗೌರವ ಇತ್ಯಾದಿ ಕಾರಣಗಳಿಂದಾಗಿ ಅವನು ಸ್ವಲ್ಪವೂ ಪ್ರಯತ್ನ ಮಾಡಿರಲಿಲ್ಲ. ಒಳ್ಳೆಯ ಓದು ಮುಗಿಸಿ, ಒಳ್ಳೆಯ ಬ್ಯಾಂಕ್ ಒಂದರಲ್ಲಿ ಒಳ್ಳೆಯ ಸ್ಯಾಲರಿ ಪಡೆಯುತಿದ್ದ ನಮ್ಮ ಒಳ್ಳೆಯ ಗೆಳೆಯ. "ಮಗನೆ, ಮೂವತ್ತು ದಾಟುತ್ತ ಇದೆ(೨೬ ವಯಸ್ಸು), ಬೇಗ ಒಂದು  ಸೊಸೆ ತರಬೇಕು" ಎಂದು ಮನೆಯವರೆಲ್ಲ ಹೇಳಿದ ಮೇಲೆ, ಸಹಜವಾಗಿ ಒಪ್ಪಿಕೊಂಡು, ೨ ವರ್ಷಗಳ ಹಿಂದೆ ಹುಡುಗಿಯನ್ನು ಹುಡುಕಲು ಪ್ರಾರಂಭ ಮಾಡಿದರಂತೆ. "MBA  ಪದವಿಧರ...! ಪದಾ ರಹೇ ಹೈ"....ಎನ್ನುವಂತೆ,  ಅಕ್ಕ, ಅವ್ವ, ಸೋದರ ಮಾವ, ಮತ್ತೊಬ್ಬ ಹಿರಿಯ ಒಳಗೊಂಡ ಕೋರ್ ಕಮಿಟಿ ನಿರ್ಧಾರವಾಗಿ ಮೂರುಜನ ಹುಡುಗಿಯರನ್ನು ತೋರಿಸಿಯೂ ಆಯಿತು. "ನೋಡಲು ಚೆನ್ನಾಗಿರುವ ಒಳ್ಳೆಯ ಗುಣದ ಒಂದು ಹುಡುಗಿ ಇದ್ದಾರೆ ಸಾಕು" ಎನ್ನುವುದ ಮಾತ್ರ ಇವನು ಕೋರ್ ಕಮಿಟಿಗೆ ಮಾಡಿದ ಶಿಪಾರಷು. ಇವನು ನೋಡುವುದು ಮಾತ್ರ- ಕಾಲು ಗುಣ, ಕೈ ಗುಣ, ಹವ್ಯಾಸಗಳು ಎಲ್ಲದರ ಬಗ್ಗೆ ಅವ್ವ ನೋಡಿಕೊಳ್ಳುತ್ತಿದ್ದರೆ;  ಆಕಾಶದಲ್ಲಿದ ಗ್ರಹಗಳು ಪೇಪರ್ ಮೇಲೆ ಹೇಗೆ ಕುಣಿಯುತ್ತವೆ ಎಂದು ಹಿರಿಯರು ನೋಡಿಕೊಳ್ಳುತಿದ್ದರು. ಕೆಲವೊಮ್ಮೆ ಇವೆಲ್ಲ ಯಾಕಪ್ಪ ಅನ್ನುವ ನೋವು ಅವನಿಗೆ ಅನಿಸಿದ್ದರು ಸಂಪ್ರದಾಯದ ವಿರುದ್ಧ ಬಂಡಾಯ ಏಳುವ ಮನಸ್ಥಿತಿ ಅವನದಲ್ಲ. ಇಂಥ ವಿಷಯದಲ್ಲಿ ಬಹಳ ವಿಚಾರ ಮಾಡಬೇಕು-ಹಿರಿಯರಿಂದ ಸೈ ಎನಿಸಿಕೊಳ್ಳಬೇಕಾದರೆ  ಅವರಾಡುವ ನಾಟಕಗಳಿಗೆ ನಾವು ತಲೆದೂಗ ಬೇಕು , ಇಲ್ಲ ಅಂದರೆ  "ವಿದ್ಯಾ ವಿನಯ ಸೋಭತೆ:", "ಈಗಿನ ಕಾಲದ ಹುಡುಗರಿಗೆ ಒಂದಿಷ್ಟು ಡಿಗ್ರೀ ಸಿಕ್ಕರೆ ಸಾಕು, ಎಲ್ಲವು ತಮಗೆ ಗೊತ್ತಿದೆ ಅಂತರೆ" ಹೀಗೆ ಹಲವಾರು ವಾಕ್ಯಗಳು ಕೇಳಿ ಬಿಸಿ ರಕ್ತ ಕಂಟ್ರೋಲ್ ಮಾಡಿಕೊಳ್ಳುವ ಕಲೆ ಗೊತ್ತಿರಬೇಕು.

ಮೂರನೆಯ ಹುಡುಗಿಯ ಮನೆಯ ಬಾಗಿಲು ಇಷ್ಟವಾಯಿತು; ಮನೆಯ ಸ್ಟೇಟಸ್ ಒಪ್ಪಿತವಾಯಿತು; ಆಕಾಶದ ಸೂರ್ಯ-ಚಂದ್ರಾದಿಗಳು  ಇನ್ನು ಮುಂದೆ  ತಮ್ಮ  ಹೆಸರು ಹಾಳುಮಾಡಬೇಡಿ ಅನ್ನುವಂತೆ ಎಲ್ಲವು ಸರಿಯನಿಸಿದರು..ಅರ್ಥಾತ್ ಜಾತಕ ಕೂಡಿತು, ಮೊದಲು ಪರಿಚಯವಿಲ್ಲದ ಮನೆ, ನೆಂಟರು ಎಂಬ ಭಾವದಿಂದ, ಮನೆಯ ಪ್ರತಿಯೊಂದು ವಿಷಯವು ಗೌರವದಿಂದ ನೋಡುವ ಕಾಲ ಬಂತು. ಅದೊಂದು ದಿನ ಗುರು-ಹಿರಿಯರ ಸಮ್ಮುಖದಲ್ಲಿ  ವಿವಾಹ ನಿಶ್ಚಯ ಮಾಡಿ, ಉಂಗುರ ಬದಲಾವಣೆ ನಡೆದು ಹೋಯಿತು. ಅಂತೂ ಕೊನೆಗೂ ಹುಡುಗನಿಗೆ ಹುಡುಗಿಯ ಜೊತೆ ಮಾತನಾಡುವ ಯೋಗ ಬಂತು. ಇಬ್ಬರು ಮಾತನಾಡಿದರು. ಫೇಸ್ಬುಕ್ ನಲ್ಲಿ ಫೋಟೋ ಅಪ್ಲೋಡ್ ಆದವು, ಗೆಳೆಯರಿಂದ " made for each other", "Very nice pair", "settled man...congrats", "looking so beatiful" ... ಹೀಗೆ ಸಾವಿರಾರು ಕಾಮೆಂಟ್ಸ್ ಗಳು ತುಂಬಿದವು.  ಮದುವೆಯ ಟೈಮರ್ ಕೌಂಟ್ ಡೌನ್ ಆರಂಭಿಸಿತ್ತು.

ಆದರೆ,
     ಆ ಹುಡುಗಿ ಪದವಿಧರೆಯಾದರು ತನ್ನ ಅಂತರಂಗದ ವಿಷಯಗಳನ್ನು ಹುಲಿಯಂತಿದ್ದ ತನ್ನ ಅಪ್ಪನ ಮುಂದೆ ಬಿಚ್ಚಿ ಹೇಳುವ ಹಾಗಿರಲಿಲ್ಲ. ಅಮ್ಮನ ಮುಂದೆ ಹೇಳಿಕೊಂಡಿದ್ದರು ಪ್ರಯೋಜನವಾಗುತ್ತಿರಲಿಲ್ಲ. ಮದುವೆಯ ಗಂಡುಗಳು ಬಂದು ಹೋದರು ತನ್ನ  ಅಂತರಂಗದಲ್ಲಿ ತನ್ನ ಕಾಲೇಜಿನ ಗೆಳೆಯನೊಬ್ಬನಿಗೆ  ನೆಲೆ ನೀಡಿದ್ದೇನೆ ಎಂದು ಎಲ್ಲಿಯೂ ಬಿಚ್ಚಿ ಹೇಳಲಿಲ್ಲ. ಅಪ್ಪ-ಅವ್ವನಾ  ಮಾತಿಗೆ ಒಪ್ಪಿಕೊಂಡು, ಮನೆಯಲ್ಲಿ  ಕೊನೆಯ ದಿನ ಕಳೆಯುವ ತನಕವೂ ಸದ್ಗುಣ ಸಂಪನ್ನೆ ಎಂದೇ ಸಾರಿದಳು.

   ಪಾಪ, ಆ ಭಾವಿ ಗಂಡ ತಂದುಕೊಟ್ಟ ಬೆಲೆ ಬಾಳುವ ಮೊಬೈಲ್ ಗಿಫ್ಟ್, ಮನೆಯ ಒಂದು  ಮುಲೆಯಲ್ಲಿರಿಸಿದ್ದಳು. ಅವನು ಕೇಳಿದರೆ ಮದುವೆ ಯಾದ ಮೇಲೆ ಎಂದು ಬಳಸುವುದಾಗಿ ಹೇಳಿ  ಆ ಗಿಫ್ಟ್ ವಿಷಯದಿಂದ ನುಣುಚಿ ಕೊಳ್ಳುತಿದ್ದಳು. ಅವನ ಕಾಲ್ ಮಾಡಿದಾಗಲೆಲ್ಲ, wait  ಎಂದು ಮೆಸೇಜ್ ಕಲಿಸುತಿದ್ದಳು ಅಥವಾ ಇವಳ ಮೊಬೈಲ್  ಬ್ಯುಸಿ ಸಂದೇಶ ಕೊಡುತ್ತಿತ್ತು. ಇಷ್ಟು ಸಣ್ಣ ವಿಷಯಕ್ಕೆಲ್ಲ ಅವಳಿಗೆ ಪ್ರಶ್ನಿಶ ಬಾರದೆಂದು ಸುಮ್ಮನಾಗಿದ ಗೆಳೆಯ ಮದವೆಯ ಟೈಮರ್ ೧೫ ದಿನಗಳ ಕೌಂಟರ್ ಡೌನ್ ತೋರಿಸುವಾಗ ನೇರವಾಗಿ ಅವಳ ಮನೆ ಪ್ರವೇಶ ಮಾಡಿ, ಮದುವೆಯ ಕುರಿತಾಗಿ ಮಾತನಾಡುತ್ತಾನೆ. ಆದರೆ, ಪ್ರೀತಿಯಿಂದ ಹುಡುಗಿ ಮನೆಯ ಮಹಡಿ ಮೇಲೆ ಕರೆಯಿಸಿ ಹೇಳಿದ್ದೇನು ಗೊತ್ತೇ," ನನಗೊಂದು ಭಾಷೆ ಕೊಡ್ತಿಯ?"  ಅವನು, ನಾಳೆ ಹೆಂಡತಿಯಾಗಿ ಬರುವಳು ಏನು ಕೇಳಿಯಾಳು ಎಂದುಕೊಂಡು ನಗುತ್ತಲೇ ಹೇಳು ನಿನ್ನ ಭಾಷೆ ಎಂದು ಕೈ  ಒಡ್ಡಿದ, " ನಾನು ಹೇಳುವ ವಿಷಯ  ಮದುವೆಯ ಮುಹೂರ್ತ ಮುಗಿಯುವವರೆಗೆ ಯಾರಿಗೂ ಹೇಳುವ ಹಾಗಿಲ್ಲ. ನಾನು ಇವಗಲೇ ಒಬ್ಬನನ್ನು ಪ್ರೀತಿಸ್ತ ಇದ್ದೇನೆ. ನಾನು ಅಪ್ಪ-ಅಮ್ಮನಿಗೆ ಹೆದರಿ ಈ ವಿಷಯ ಹೇಳಿಲ್ಲ. ದಯವಿಟ್ಟು ಈ ಮದುವೆ ನೀನೆ ಕ್ಯಾನ್ಸಲ್ ಮಾಡಬೇಕು. ನಾನಂತೂ ನಿನ್ನ ಮದುವೆಯಾಗುವುದಿಲ್ಲ". 

ನಾಲ್ಕು ತಿಂಗಳಿಂದ  ತನ್ನ ಹೆಂಡತಿಯಾಗುವಲೆಂದು ಯೋಚಿಸಿ, ಸಾವಿರಾರು sms  ಮಾಡಿ, ಗಿಫ್ತನ್ನು  ಕೊಟ್ಟು, ತನ್ನ ಹೆಂದಿತಿಯಾಗುವ ಹುಡುಗಿಯನ್ನು ಫೇಸ್ಬುಕ್ ಮೂಲಕ ಎಲ್ಲರಿಗು ತೋರಿಸಿ ಇದ್ದ ಇವನಿಗೆ ಅವಳ ಮಾತು ನಂಬುವುದು ಸುಲಭದ ವಿಷಯವಾಗಿರಲಿಲ್ಲ. ಮುಂದಿನ ಕ್ಷಣದಲ್ಲಿ ಏನಾಗುವುದೋ ತಿಳಿಯದ ಆತ ಹೇಗಾದರೂ ಆ ಮನೆ ಖಾಲಿ ಮಾಡಬೇಕೆಂದು ವೇಗಾವಾಗಿ ತನ್ನ  ಮನೆಗೆ ಬಂದ. ಮುಂದಿನ ಮೂರೂ ತಿಂಗಳು ಅವನ ಬದುಕು ಹೇಗಿತ್ತು, ಹೇಗಾಯಿತು ಆ ಕಥೆ ಭಯಾನಕ. ಯಾವುದಾದರು ಒಂದು ಸಿನೆಮಾದ ದುರಂತ ಕತೆ ನೆನಪಿಸಿಕೊಳ್ಳಿ.

ಈ ಮದುವೆ ನಡುಯುವುದಿಲ್ಲ ಎಂದು ಮನೆಯಲ್ಲಿ ತಿಳಿಯುತಿದ್ದಂತೆ ಹುಲಿ ಅಪ್ಪನಿಗೆ ಪಂಗನಾಮ ಹಾಕಿ, ತನ್ನ ಪ್ರಿಯಕರನ ಜೊತೆ ಒಡಿ ಹೋಗಿ, ಕೆಲವು ತಿಂಗಳು  ಅಲ್ಲಿ-ಇಲ್ಲಿ ಅಲೆದಾಡಿ, ಕರುಳ ಕುಡಿಯ ನಿರ್ಧಾರ ಒಳ್ಳೆಯದೇ ಇರಬಹುದು ಎಂದು  ಮಗಳನ್ನು ಮತ್ತೆ ಕ್ಷಮಿಸಿ ಅವಳ ಪ್ರಿಯಕರನನ್ನು ಅಳಿಯನೆಂದು ಸ್ವೀಕರಿಸಿದರು. ಅಲ್ಲಿಗೆ ಅವಳ ಜೀವನ ಮುಂದುವರಿಯಿತ್ತು.

ಕೆಲವು ತಿಂಗಳು ಮುಗಿದ ಬಳಿಕ, ಅವಳನ್ನು ಮರೆತು ಮತ್ತೆ, ಹುಡುಗಿಗಾಗಿ ಪರದಾಟ. ಗ್ರಹಗಳು ದೂರವಾಗಿ ಎಲ್ಲ ಕೂಡಿದರೂ-" ಹಿಂದೆ ಒಂದು engangement  cancel  ಆಗಿತ್ತಂತೆ" ಎಂಬ ವಿಷಯ ಭಾವಿ ಮಾವನ ಮನೆ ಮಂದಿಯ ಕಿವಿಗೆ ಬಿಳುತಿದ್ದಂತೆ ಎಲ್ಲರು ಶನಿ ಗ್ರಹ ದಂತೆ ಕಾಡಿ,  ಹುಡುಗಿಗೆ ಒಪ್ಪಿತವಲ್ಲ ಎಂಬ ಸಂದೇಶದೊಂದಿಗೆ ಹಿಂತಿರುಗುತ್ತಿದ್ದ. ಹಾಗೆ ಅವನು ನೋಡಿದ ಹುಡುಗಿಯರ ಸಂಖ್ಯೆ "ಕೇವಲ" ೬೧; ಆದರೂ ಅವನನ್ನು ಹಿಂಬಾಲಿಸುವಳು ಒಬ್ಬಳು ಇರಲಿಲ್ಲ.

ಇನ್ನು ಹುಡುಗಿ ನೋಡಲೋ ಬೇಡವೋ ಎಂಬ ತನ್ನ ನಿರ್ಧಾರದ ಕುರಿತಾಗಿ ತನ್ನ ಗೆಳೆಯನ ಜೊತೆ ಮಾತನಾಡಲು ಹುಬ್ಬಳಿಗೆ ಬಂದಿದ್ದ. ಇಷ್ಟು ಕತೆ ಕೆಳುತಿದ್ದಂತೆ, " ನಿನ್ನ ಬಾಳು ಹಾಳು ಮಾಡಿದವಳು  ಮೊದಲು ಮದುವೆಯಾಗಲು ಒಪ್ಪಿದ ಹುಡುಗಿ ತಾನೆ?. ಅವಳು ಎಲ್ಲಿದ್ದಾಳೆ ?, ಅವಳಿಗೆ ಮೊದಲು ಬುದ್ದಿ ಕಲಿಸಬೇಕು" ಎಂದು ನನ್ನ ಗೆಳೆಯ ಕೋಪಾವೇಶದಿಂದ ನುಡಿದಾಗ, " ಅಲ್ಲಲೇ, ನಿನ್ಯಾಕೆ ಅವಳ ಬಗ್ಗೆ ದ್ವೇಷ ಕಾರ್ತಿಯಾ?, ಅವಳು ತನ್ನ ಆಯ್ಕೆ ಮೊದಲೇ ಮಾಡಿದ್ದಳು. ಆದರೆ ಅಪ್ಪ-ಅಮ್ಮಗೆ ಹೆದರಿ ಹೀಗೆ ಮಾಡಿದ್ದಾಳೆ. ಅವಳು ಬದುಕಲಿ ಬಿಡು. ತಪ್ಪು ನನ್ನದು... ಕೇವಲ ಮಾರ್ಕ್ಸ್ ಶೀಟ್ ನೋಡಿ ಬದುಕು ನಿರ್ಧರಿಸಲು ಹೊರಟವನು ನಾನು...! ಅದೊಮ್ಮೆ ಕಾಲೇಜ್ ಡೇಸ್ ನಲ್ಲಿ ನನ್ನದು ಅಂತ ಒಂದು ಪ್ರೀತಿ ಇದ್ದಿದ್ದರೆ, MBA ಪದವಿಧರ  ಇವತ್ತು ೬೧  ಹುಡುಗಿಯರನ್ನು  ನೋಡಿ ಮದುವೆ ಬೇಕಾ ಬೇಡ್ವಾ ಅನ್ನುವ ಸಿದ್ಧಾಂತಕ್ಕೆ ಬರುವ ಸಾಧ್ಯತೆ ಗಳಿರಲಿಲ್ಲ. ಬದುಕು ಪುಸ್ತಕಗಳಿಲ್ಲ, ಮಾರ್ಕ್ಸ್ ಗಳಲಿಲ್ಲ  ಕಣೋ. ಬರ್ತೀನಿ" ಎಂದು  ಹೊರಟೆ ಹೋದ. ಇದೆ ಮೊದಲ ಬಾರಿಗೆ ಅಪರೂಪದ ಪ್ರೀತಿಯ ಸಿದ್ಧಾಂತಕ್ಕೆ ನನ್ನ ಒಂದು ಕಣ್ಣಿರ ಹನಿ ನೆಲಕ್ಕೆ ಬಿತ್ತು.

ಇಲ್ಲಿ ಯಾರದು ತಪ್ಪು ? ಯಾವುದು ಪ್ರಶ್ನೆ? ಯಾವುದು ಉತ್ತರ? ನನಗೆ ತಿಳಿಯಲಿಲ್ಲ. ಇನ್ನು  ನನ್ನ ಬಸ್ಸು ಹತ್ತಲು ೧೫ ನಿಮಿಷಗಳಿದ್ದವು. ಮೌನಕ್ಕೆ ಶರಣಾಗಿದ್ದ ಗೆಳೆಯನ ಹೆಗಲು ಮುಟ್ಟಿ, " ಪ್ರೀತಿ ಪ್ರೇಮದ ವಿಷಯದಲ್ಲಿ ಈ ಜಗತ್ತೇ ಹೋರಾಟದಲ್ಲಿದೆ. ಯಾವ ವಿಜ್ಞಾನ ಕೂಡ ಉತ್ತರ ಹೇಳಲ್ಲ. ೫೦ ನೆ ಶತಮಾನ ಬಂದರು ಇಂಥ ಸಮಸ್ಯೆಗಳು ಇರುತ್ತವೆ ಅನಿಸುತ್ತಾ ಇದೆ" ಎಂದು ಹೇಳಿ, ಒಮ್ಮೆ watch ನೋಡಿ, ಅವನಿಗೆ ಬಸ್ಸಿನ ಸಮಯವಾಗಿದೆ ಎಂದು ಅರಿವು ಮಾಡಿಸಿ ಬಸವ ವನಕ್ಕೆ ಬಂದು ಬಸ್ಸು ಹತ್ತಿದೆ.