Saturday, December 28, 2013

ಮೂವತ್ತೈದರ (೩೫) ಹರೆಯ..!

ಸುಮ್ಮನೆ ಯಾವುದೊ ಲೇಖನ ಬರೆಯಲು ಸಾಧ್ಯವಾಗುವುದಿಲ್ಲ. ಯಾವುದೊ ಒಂದು ವಿಷಯ ಹೀಗೆ ಯಾಕೆ? ಎಂಬ ಪ್ರಶ್ನೆಗೆ  ಬಿದ್ದಾಗ, ಅದು ಕಾಡಿದಾಗ, ಅದು ಒಂದು ಚಿಂತನೆಯಾದಾಗ, ಅದನ್ನು ಯಾರಿಗಾದರೂ ಹೇಳಲೇ ಬೇಕು ಎಂಬ ಭಾವ ಮೂಡಿದಾಗ ಬರೆಯಲು ಆರಂಭಿಸುತ್ತೇನೆ. ನನಗೆ ಮದುವೆಯ ವ್ಯವಸ್ಥೆ, ಪುಸ್ತಕ -ಸಿನೆಮಾಗಳಿಂದ ನಾನು ತಿಳಿದುಕೊಂಡ ಸತ್ಯಕ್ಕೂ ಬಹಳ  ವ್ಯತ್ಯಾಸ ತಿಳಿದು ಈ  ಮದುವೆಯ ವಿಷಯ ಬಹಳ ಕುತೂಹಲಕಾರಿ ಅನಿಸಿದೆ.

ಸಾವಿರಾರು ಜನ ರಾಜಕೀಯದ ಕುರಿತಾಗಿ, ಸ್ಥಳಗಳ ಕುರಿತಾಗಿ, ನಿಸರ್ಗದ ಕುರಿತಾಗಿ, ವಿಜ್ಞಾನದ ಕುರಿತಾಗಿ ಬರೆಯುತ್ತಲೇ  ಇರುತ್ತಾರೆ. ಆದರೆ ನಮ್ಮ ನಮ್ಮೊಳಗೇ ಸೃಷ್ಟಿ ಮಾಡಿಕೊಂಡಿರುವ ನಿಯಮ ಹಾಗೂ ಪದ್ಧತಿಗಳ ಕುರಿತಾಗಿ ನಾವು ಮಾತನಾಡುವುದು ಅಪರೂಪ. ಯಾಕಂದರೆ ದೈನಂದಿನ ಬದುಕಿನಲ್ಲಿ ಹಾಸುಹೊಕ್ಕಾಗಿರುವ ವಿಷಯದ ಕುರಿತಾಗಿ ಬರೆಯುವುದೇನು ಉಳಿದಿದೆ ಎಂಬ ಭಾವ ಅಥವಾ ಅಂತದೊಂದು ಉದಾಸೀನತೆ  ಇರಬಹುದು. ಏನೇ ಇರಲಿ, ನಾನು ಮಾತ್ರ ಬರೆಯುವುದು ಇಂಥ ವಿಷಯದ ಕುರಿತಾಗಿ...ನೀವು ಓದಿ.

ಅವಳ ಆಫೀಸ್ ಮುಂದೆ ಇರುವ ಬೋರ್ಡ್ ಮೇಲೆ  ಹೀಗೆ ಬರೆದಿದೆ.
                                  Ms. Asha( BE,Mtech,MBA-HR).

ಅವಳು ಈಗ ಕೆಲಸ ಮಾಡುತ್ತಿರುವುದು, ಅತ್ಯಂತ ಶ್ರೇಷ್ಟ ಕಂಪನಿಯಲ್ಲಿ ಮ್ಯಾನೇಜರ್ ಕಮ್ CFO  ಎಂದು. ವೃತ್ತಿಯಲ್ಲಿ ಬಹಳ ಸಾಧಿಸಿದ ಹುಡುಗಿ. ಅವಳು ಇಷ್ಟು ಸಾಧಿಸಲು ಪಟ್ಟಿರುವ ಕಷ್ಟ  ಸಾಮನ್ಯವೇನು  ಅಲ್ಲ. ಅವಳು ಸಾಧಿಸಿರುವ ಡಿಗ್ರಿ, ಪೇಪರ್ ಗಳ ಲಿಸ್ಟ್ ಗೆ ಅವಳ ಹೆಸರ ಮುಂದೆ ಒಂದು website  ಬರೆದು ಅದರಲ್ಲಿ ಲಿಸ್ಟ್ ಮಾಡಬೇಕು ಹೊರತು ನೇರವಾಗಿ ಹೆಸರ ಮುಂದೆ ಜಾಗ ಸಾಲುವುದಿಲ್ಲ. ಓದುವುದರಲ್ಲಿ ಎತ್ತಿದ್ದ ಕೈ. ಸಾಧಿಸುತ್ತೇನೆ ಅನ್ನುವುದರಲ್ಲಿ ಪಳಗಿದ ಕಾನ್ಫಿಡೆನ್ಸ್. ಅವಳ ಕೈ ಕೆಳಗೆ ಕೆಲಸ ಮಾಡುತ್ತಿರುವ BE  graduate ಗಳಿಗಿಂತ ಹತ್ತು ಪಟ್ಟು  ಹೆಚ್ಚಿನ ಸಂಬಳ. ಅತ್ಯುತ್ತಮ ಕಾರಲ್ಲಿ ಬರುತ್ತಾಳೆ. ಅವಳಿಗೆ ಎಲ್ಲ ಫೆಸಿಲಿಟಿ ಇವೆ. ಅವಳಿಗೆ ಎಲ್ಲರು ತಲ್ಲೇ ತಗ್ಗಿ ನಿಲ್ಲುತ್ತಾರೆ. ಅವಳ ಸಾಧನೆಯ ದೃಷ್ಟಿಯಿಂದ, ಕೆಲಸದ ಕಂಪನಿಯಲ್ಲಿ ಅವಳಿಗೆ ಸರಿ ಸಮನಾರು ಯಾರು ಇಲ್ಲ. ಅವಳು ಬಿಡುತ್ತೇನೆ ಅಂದರೆ ಅದೇ ಕಂಪನಿ ಅವಳು ಹೇಳಿದ್ದನ್ನು ಕೊಟ್ಟು ಉಳಿಸಿ ಕೊಂಡೀತು..!  ತುಂಬಾ ಒಳ್ಳೆ ಹುಡುಗಿ. ಆಶಾ (ಮೂವತ್ತೈದು).(ನ್ಯೂಸ್ ಪೇಪರ್ ಗಳಲ್ಲಿ ಹೆಸರಿನ ಮುಂದೆ ವಯಸ್ಸನ್ನು ಈ ರೀತಿ ಬರೆಯುವುದನ್ನು ಗಮನಿಸಿರುತ್ತಿರಿ)

ಕೆಲಸಕ್ಕೆ ಸೇರಿ ಎರಡು  ವರ್ಷದ ತನಕ ಎಲ್ಲವು ಸರಿಯಾಗಿತ್ತು. ಅವಳ ಕೆಲಸ ಎಲ್ಲವು ಮೆಚ್ಚತಕ್ಕದೆ. ಆದರೆ ಇದ್ದಹಾಗೆ ಒಂದು ದಿನ ಕೆಲಸಕ್ಕೆ ಬೈ ಎಂದು ಹೇಳಿದ್ದಳು. ಅವಳು resignation  ಕೊಟ್ಟು ಹೋಗಿಲ್ಲ, ಬದಲಾಗಿ ರಜೆಯ ಮೇಲೆ. 

ಒಂದರ ಮೇಲೆ ಒಂದರಂತೆ ಸಾಧಿಸಿದ ಡಿಗ್ರಿ ಗಳು, ಸಾಧಿಸಿದ ಪ್ರೊಫೆಷನಲ್  ಗೆಲುವು ಎಲ್ಲವು ಅವಳ ಬದುಕಿನ್ನಲ್ಲಿ ಒಂದು ದಿನ ಕೈ ಕೊಟ್ಟಿತ್ತು. ಮನೆಗೆ ಹೋಗಿ, ಬೇಡ ರೂಂ ನ ಸಿಲಕ ಹಾಕಿ, ಬೆಳಗಿನ ಕಾಫ್ಫಿ ಕುಡಿಯದೆ ಅಂಗಾತ ಮಲಗಿ,
"ಮೂವತ್ತೈದು...!" ಎಂದು ಯೋಚಿಸುತ್ತ  ಕಣ್ಣೀರ ಹನಿಗಳೊಂದಿಗೆ, ಮನೆಯ ಸೀಲಿಂಗ್ ನೋಡುತ್ತಿದ್ದಳು. ಮೊವತೈದಕ್ಕೆ ಸಂಬಂಧ ಕೂಡಿ ಬರದು; ಎಪ್ಪತ್ತೈದಕ್ಕೆ ಬಾಲ್ಯ ಬರದು. ಕಳೆದು ಹೋಯಿತು ಸಂತೋಷ ಡಿಗ್ರಿಗಳ ಮಧ್ಯೆ..!

ಇದೆ ಅವಳ ಬದುಕಿನ ತಪ್ಪು.! ನಮ್ಮ ಶಿಕ್ಷಣ, ನಮ್ಮ ನೆರೆ-ಹೊರೆ ಎಲ್ಲರು ಹೇಳುವುದು ಬಹಳಷ್ಟು ಡಿಗ್ರಿ ಗಳು, ತುಂಬಾ ದೊಡ್ಡ ಸ್ಥಾನ ಮಾನ ಹೊರತು, ಯಾವುದನ್ನೂ, ಯಾವಾಗ, ಯಾರು, ಹೇಗೆ ಮಾಡಬೇಕು ಎಂದು ಯಾರು ಹೇಳುವುದಿಲ್ಲ. ಬಿಸಿ ರಕ್ತ ಇರುವಾಗ ಬಹಳ ಮಂದಿ ಇಂಥ ಶಿಕ್ಷಣ ನಮ್ಬಿಯೋ, ನೆರೆ ಹೊರೆಯವರನ್ನು ನಮ್ಬಿಯೋ, ಮತ್ತೊಬ್ಬರ ಜೊತೆ ತಮ್ಮನ್ನು ಹೋಲಿಸಿಯೋ ಅಥವಾ ಸಾಧಿಸಲೇ ಬೇಕು ಎಂಬ ಉತ್ಕಟ ಇಚ್ಛೆಯಿಂದಲೋ ತಮ್ಮ ಬದುಕಿನಲ್ಲಿ ಏನಾಗಬೇಕು, ತಮ್ಮ ಬದುಕಿನ ಸಂತೋಷಕ್ಕೆ ಏನು ಬೇಕು ಎಂದು ಯೋಚಿಸುವುದೇ ಇಲ್ಲ. ಈ ಪರಿಣಾಮವಾಗಿ ನಾಲ್ಕಾರು ಡಿಗ್ರಿ ಗಳಿದ್ದರು, ಎರಡೇ ವರ್ಷದಲ್ಲಿ ಆಶಾ ಇಸ್ ಫ್ಲಾಟ್. ನೋ ಮೊರೆ ವರ್ಕ್ !

ಅವಳ ದುಖದ  ಕಾರಣ- ಜೀವನೋದ್ದೇಶ ಮತ್ತು ಗುರಿಗಳ ಕುರಿತಾದ ಅಜ್ಞಾನ. ಗುರಿಗಳು(aim ) ಮತ್ತು ಉದ್ದೇಶ (purpose ) ಒಂದೇ ಅಲ್ಲ. ಇವುಗಲೆರಡನ್ನು ಒಂದೇ  ಎಂದು ಸಾಧಿಸಲು ಹೊರಟವರು ತಮ್ಮ ಜೀವನದಲ್ಲಿ ಏನನ್ನಾದರೂ ಕಳೆದು ಕೊಳ್ಳಲೆ ಬೇಕು ಅಥವಾ ಒಳ್ಳೆಯ  ಹಣೆಬರಹ ಹೊಂದಿರಬೇಕು. ನನ್ನ ಪ್ರಕಾರ, ಸಂತೋಷದ ಅತ್ಯುತ್ತಮ ಮಟ್ಟ  ಬದುಕಿರುವರೆಗೂ ಸಾಧಿಸುವುದೇ  ನನ್ನ ಉದೇಶ.ಆದರೆ ಗುರಿಗಳು  ಅವರವರ ಇಷ್ಟಕ್ಕೆ ಸರಿಯಾಗಿ ಇರುತ್ತವೆ. ಕೆಲವರಿಗೆ ಮ್ಯಾನೇಜರ್ ಆಗಬೇಕು, ಕೆಲವರಿಗೆ ಡಿಸೈನರ್ ಆಗಬೇಕು, ಕೆಲವರಿಗೆ  ಕಂಪನಿ ಕಟ್ಟಬೇಕು. ಹೀಗೆ ಇರುವುದು ತಪ್ಪಲ್ಲ.

ಆದರೆ ತಪ್ಪಾಗುವುದು ತಾನು ಸಂತೋಷವಾಗಿರಲು ಏನು ಬೇಕು ಎಂದು ಅರಿಯದೆ ಇರುವುದರಿಂದ. ಅದರಲ್ಲೂ ಪ್ರತಿಯೊಬ್ಬರ ಜೀವನದಲ್ಲಿ ತನ್ನದೇ ಅನ್ನುವ ವ್ಯಕ್ತಿಗತ ಸಂತೋಷದ ಕ್ಷಣಗಳಿರುತ್ತವೆ. ಅಂತಹ ಕ್ಷಣಗಳು ಆಯುಷ್ಯದ ಕ್ಷಣಗಳೊಂದಿಗೆ ಜೋಡಣೆಗೊಂಡಿರುತ್ತವೆ. ಬಾಲ್ಯ, ಕಾಲೇಜ್ ಜೀವನ, ಮದುವೆ, ದಾಂಪತ್ಯ, ಮಕ್ಕಳು...ಹೀಗೆ ಬದುಕಿನಲ್ಲಿ ಸರಿಯಾದ ಸಮಯದಲ್ಲಿ ಹಾದು ಹೋದಾಗಲೇ ಬದುಕಿನಲ್ಲಿ ಸಂತೋಷ ಸಾಧ್ಯ. ಒಮ್ಮೆ  ಇಂಥ ವಿಷಯಗಳು ನಮ್ಮಿಂದ ದೂರ ಸರಿದವು ಅಂದರೆ ಬಿಟ್ಟ ಬಾಣದಂತೆ .... ಮತ್ತೆ ಹಿಂತಿರುಗಿ ಬರಲಾರವು.

ಆಶಾ ಗುರಿಗಳನ್ನು ಸಾಧಿಸಿದ್ದಾಳೆ; ಉದೇಶ ಮರೆತಿದ್ದಳು. ಈಗ ಗುರಿಯ ನೆತ್ತಿಯನ್ನು ಏರಿದ ಮೇಲೆ ಉದೇಶ ವೇನೆಂದು ಪ್ರಶ್ನಿಸಿ ಕೊಂಡಿದ್ದಾಳೆ. ದು:ಖಿತಲಾಗಿದ್ದಾಳೆ. ಆದರೆ ದುಖ ಹೇಳಿಕೊಳ್ಳಲು ಗೆಳೆಯರಿಲ್ಲ;ಗೆಳತಿಯರಿಲ್ಲ;ತಂದೆ-ತಾಯಿಗೆ ಹೇಳಲಾಗುತ್ತಿಲ್ಲ. ಅವಳಿಗೆ ಈಗ ಕಾಣುತ್ತಿರುವುದು ಮುಟ್ಟಲಾಗದ ಆ ಮನೆಯ ಸೀಲಿಂಗ್ ಮಾತ್ರ.

ಅದೆಷ್ಟೋ ಸಮಸ್ಯೆಗಳು ನಾವು ಸಮಯಕ್ಕೆ ಸರಿಯಾಗಿ ಯೋಚಿಸುವುದರಿಂದ ಬಗೆಹರಿಸಲು ಸಾಧ್ಯವಿದೆ. ಸ್ಥಾನ, ಗೌರವ, ಅಧಿಕಾರ, ಹಣ ಇವುಗಳು  ಅಲ್ಪಾವಧಿಗೆ ಸಂತೋಷವನ್ನುಂಟು ಮಾಡುತ್ತವೆ. ಹೀಗಾಗಿ ಮನುಷ್ಯ ಜೀವನದ ಉದೇಶ ಖಂಡಿತ ಮರೆಯಬೇಡಿ.

Wednesday, December 25, 2013

ಅವನ್ಯಾಕೆ ಬದಲಾದ?

ಈ ಪ್ರಶ್ನೆ ನೀವು ಬಹಳ ಸಾರಿ ಕೇಳಿಯೇ ಇರುತ್ತೀರಿ. ಕೆಲವೊಮ್ಮೆ ನಿಮ್ಮ ಗೆಳೆಯ-ಗಳತಿ  ಅಥವಾ ಸಹಪಾಟಿ ನಿಮ್ಮ ಜೊತೆಯಲ್ಲಿದ್ದಾಗ ಚೆನ್ನಾಗಿಯೇ ಇದ್ದು ಯಾವುದೋ ಒಂದು ದಿನ ಅವನು/ಅವಳಲೊಂದು ಕನಿಷ್ಠ ಮಟ್ಟದ ಕೆಲಸದಲ್ಲಿ ನರಳಿದಾಗ ನೀವು ಹಿಗಿಯೇ ಹೇಳುತ್ತಿರಿ. "ಕಾಲೇಜ್ ನಲ್ಲಿ ಇದ್ದಾಗ ಅವನ ಫಿಲಾಸಫಿ ಚೆನ್ನಾಗಿಯೇ ಇತ್ತು..ಅವನು ಒಳ್ಳೆಯವನು ... ಹೀಗೆಲ್ಲಾ ಮಾಡಲು ಸಾಧ್ಯನೇ ಇಲ್ಲ ಅನ್ನುತ್ತಾ.." ನಿಮ್ಮ ಗೆಳೆಯನ ಕುರಿತಾಗಿ ಯಾರೋ ಕೀಳಾಗಿ ಪ್ರಶ್ನಿಸಿದರೆ  ಇದೆ ಉತ್ತರ.

ಹಾಗಿದ್ದರೆ ಮನುಷ್ಯ ಯಾವತ್ತು ಬದಲಾಗುವುದಿಲ್ಲವೇ? ಪ್ರತಿಕ್ಷಣದ ಅನುಭವು ಮನುಷ್ಯನ ಮನಸ್ಸಿನ ಮೇಲೆ, ಬದುಕುವ ರೀತಿಯ ಮೇಲೆ ಪ್ರಭಾವ ಬಿರಲಾರದೆ? ಅದಕ್ಕಾಗಿಯೆ ಅಲ್ಲವೇ ಮನೆಯಲ್ಲಿದ್ದಾಗ ಸಸ್ಯಹಾರಿಗಲಾದವರು  ಗೆಳೆಯರ ಮಧ್ಯೆ ಸಿಲುಕಿ  ಮಾಂಸಹಾರಿ ಕೂಡ ಆಗಿ ಬಿಡುತ್ತಾರೆ. ಮನೆಯಲ್ಲಿ ಅಪ್ಪ-ಅಮ್ಮ ಹಾಗೆ ಮಾಡಲಾರ ನಮ್ಮ ಮಗ ಅನ್ನುತ್ತಲೇ ಇರುತ್ತಾರೆ. ಆದರೆ ಮಗ ಬದಲಾವಣೆಗೆ ಗುರಿಯಾಗಿ, 'ಸ್ವಾಹ' ಅನ್ನುತ್ತಾನೆ. ಯಾವತ್ತು ನಾನು ಸ್ನಾನ ಮಾಡದೇ ತಿನ್ನಲಾರೆ ಅನ್ನುವರು ಕೂಡ, ಇಲ್ಲೊಂದು ಕಡೆ ಗೆಳೆಯರ ಮಧ್ಯದಲ್ಲಿ, "ಲೇ ಮಗನೆ, ತಿನ್ನಲೇ ನಾವೇನು ಸ್ನಾನ ಮಾಡಿದ್ದೇವಾ ?" ಎಂದು ಒತ್ತಡ ಹೇರಿದಾಗ, ಆಹಾರವನ್ನು ಮೊದಲು ಪ್ರಯಸದಾಯಕವಾಗಿ ಗಂಟಲೋಳಗಿರಿಸಿದ ಮಹನಿಯ ವರ್ಷವೊಂದು ಉರುಳಲು ಸ್ನಾನವೇ ಮರೆತು ತಿನ್ನಲು ಸಾಧ್ಯವಿದೆ. ಅಂದರೆ, ಮನೆಯಲಿ ಕಲಿಸಿದ ನೀತಿ, ಸಂಸ್ಕೃತಿ ಅಥವಾ ಬದುಕಿನ ಒಂದು ಫಿಲೋಸೋಪ್ಯ್ ಎಲ್ಲೊಂದೆಡೆ ಕಾಲ ಚಕ್ರದಲ್ಲಿ ಬದಲಾಗಲು ಸಾಧ್ಯವಿದೆ; ಆಗುತ್ತಲೇ ಇರುತ್ತದೆ.

ನಾನು ವರದಕ್ಷಿಣೆಯ ವಿರೋಧಿ. ಅದು ಸರಿಯಲ್ಲ ಎಂದು ಪ್ರಾಥಮಿಕ ಶಾಲೆಯಲ್ಲಿ ನನ್ನ ಗುರುಗಳು ಬರೆಸಿದ ನಿಬಂಧಗಳು  ಅಂತಹ ನಿಲುವು ನನ್ನ ಮನಸ್ಸಿನಲ್ಲಿ ಅಚ್ಚಳಿಯದಂತೆ ಮೂಡಿಸಿತ್ತು. ನಾನು, ಅದೆಷ್ಟೋ ಬಾರಿ ಗೆಳೆಯರ ಮಧ್ಯದಲ್ಲಿ ಮದುವೆಯ ಕುರಿತಾಗಿ ಮಾತನಾಡುವಾಗ, ಅಥವಾ ಯಾವುದೊ ಮದುವೆಗೆ  ಹೋದಾಗ ಗುಡ್ಡೆ ಹಾಕಿರುವ ವರದಕ್ಷಿಣೆಯ ರಾಶಿ ವಸ್ತುಗಳು, ಅಥವಾ ಇನ್ನಾರದೋ ಮಾವ ಕಾರು ಕೊಟ್ಟ, ಬಂಗಾರ ಕೊಟ್ಟ ಅಂದಾಗ ಅದೆಲ್ಲ ಸರಿಯಲ್ಲ ಎಂದು ನನ್ನ ವಿರೋಧಿ ನೀತಿಯನ್ನು ತೋರಿಸಿದ್ದು ಮಾತ್ರ ಅಲ್ಲ, ನಾನೊಬ್ಬ ಸಾಚಾ ಎನ್ನುವುದನ್ನು ತೋರಿಸಿದ್ದೆ. ಇಲ್ಲಿಯ ವರೆಗೂ ನಾನು ಸಾಚಾ ನೇ ಆಗಿದ್ದೆ. ಆದರೆ ಇನ್ನು ಸಾಚಾ ತನ ಒಳ್ಳೆಯದಲ್ಲ, ಅಂತ ಘನತೆಯ ಹಿಂದೆ ಕಹಿಯಾದ ಬೇವಿನ ರಸವಿದೆಯೆಂದು ಅರಿಕೆಯಾಗಿದೆ.

ಮದುವೆಗಾಗಿ ಹುಡುಗಿ ಹುಡುಕುತ್ತಿದ್ದೇನೆ  ಅನ್ನುವ ವಿಚಾರ ನಿಮಗೆ ಪ್ರತ್ಯೇಕವಾಗಿ ಹೇಳಲೇ ಬೇಕೆಂದೆನು ಇಲ್ಲ. ಅದು ವಯಸ್ಸಿನ ಸಹಜ ನಿಯಮ ಹಾಗೂ ನೀವು ಕೂಡ ಇಂತ ಕೆಲಸ ಕೆಲವರು  ಮಾಡಿರುತ್ತೀರಿ; ಕೆಲವರು ಮಾಡುತ್ತಲು ಇರಬಹುದು; ಇನ್ನು ಕೆಲವರು ಮಾಡುವವರು ಇರಬಹುದು.

ಕೆಲವು ತಿಂಗಳ ಹಿಂದೆ ಮೊದಲ ಹುಡುಗಿ ನೋಡಲು ಹೋದಾಗ, ನೇರವಾಗಿ ಭಾವಿ ಮಾವ ತನ್ನ ಏಕೈಕ ಕನ್ಯಾ ಮಣಿಯನ್ನು  ನೀಡಲು ಕಾತರನಾಗಿ, ವರದಕ್ಷಿಣೆಯ ಕುರಿತಾಗಿ ಮೊದಲ ದಿನವೇ ಪ್ರಶ್ನಿಸಲ್ಪಟ್ಟೆ. ಯಕ್ಷಗಾನದ ವೀರ ಬಬ್ರುವಾಹನ ಹಾಗೆ ಎದೆತಟ್ಟಿ, " ಭಾವಿ ಮಾವ, ಉಟ್ಟ ಬಟ್ಟೆಯಲ್ಲಿ ನಿನ್ನ ಮಗಳನ್ನು ಕರೆದುಕೊಂಡು  ಹೋಗುತ್ತೇನೆ. ನನ್ನ ಮನೆಯಲ್ಲಿ ವರದಕ್ಷಿಣೆ ಸರಿಯೆಂದು ನಾವು ಯಾರು ಭಾವಿಸುವುದಿಲ್ಲ. ಅದಕ್ಕಾಗಿ ಆ ವಿಷಯಕ್ಕೆ ತಿಲಾಂಜಲಿ ಇಟ್ಟರೆ ಒಳ್ಳೇದು" ಎಂದು  ಹೇಳುವುದರ ಮೂಲಕ, ನನ್ನ ಗುರುಗಳನ್ನು ಒಮ್ಮೆ  ನೆನೆದು ಆ ಮನೆಯಿಂದ ಹೊರಬಂದೆ.

 ಆದರೆ, ಕೆಲವು ದಿನಗಳು ಕಳೆದ ಮೇಲೆ, ಈ ಮದುವೆಯ ಸಂಬಂಧದ ಏರ್ಪಡಿಸಿದ ಅವರ ಸಂಬಂಧಿ, " ನೀವು ಯಾಕೆ  ವರದಕ್ಷಿಣೆ ಬೇಡ ಅಂದಿದ್ದಿರಿ, ಅಂತಾ ಅವರು  ವಿಚಾರ ಮಾಡ್ತಾ ಇದ್ದಾರೆ, ಅವರ ಮನಸ್ಸಿನಲ್ಲಿ ಹುಡುಗ ಏನೋ ಸರಿಯಲ್ಲ ಅದಕ್ಕೆ ವರದಕ್ಷಿಣೆ ಬೇಡ ಅಂತ ಇದ್ದಾನೆ ಅಂತ, ಅವರು ನನ್ನ  ಜೊತೆ  ಒಮ್ಮೆ ಹೇಳಿದರು. ನೀವು ಈಗ, ನಿಮ್ಮ ತಂದೆ ತಾಯಿ ಮೂಲಕ ವರದಕ್ಷಿಣೆಗೆ ಬೇಡಿಕೆ ಇಟ್ಟರೆ, ಈ ಮದುವೆ ಮುಂದುವರಿಯಬಹುದು. ಇಲ್ಲ ಅಂದರೆ  ಅವರು ಸಂದೇಹ ಬಗೆಹರಿಸಿಕೊಂಡು ನಿಮಗೆ ಹುಡುಗಿ ಕೊಡ್ತಾರೆ ಅಂತ ಅನ್ಸ್ತಾ ಇಲ್ಲ...ನೀವು ಎನ್ಮಾಡ್ತಿರಾ?"
"ನಮಗೆ ಇಷ್ಟ ಇಲ್ಲ ಅಂತ ಹೇಳಿ" ಎಂದು ಸಂಬಂಧ ಕಡಿದುಕೊಂಡು  ಸುಮ್ಮನಾದೆ.

ಇನ್ನೊಂದು ಸಂಬಂಧ.... ಮನೆಗೆ ಕರೆದರು. ಮನೆಯ ಮಂದಿ ನೆರದಿದ್ದರು. " ಮತ್ತೆ ಏನು ಹೇಳ್ತಿರ ವೆಂಕಟ್, ನೋಡಿ ಇಷ್ಟು ದೂರ ಸಣ್ಣ ಸಣ್ಣ ವಿಷಯಕ್ಕೆ ಮತ್ತೆ ನಿಮ್ಮ ಕರೆಸುದು ಅಂದ್ರೆ ಕಷ್ಟ. ಅದಕ್ಕೆ ನೀವು ಬೇಸರ ಇಲ್ಲ ಅಂದರೆ, ನೀವು ಮದುವೆ ಬಗ್ಗೆ ಡೀಟೇಲ್ ಆಗಿ ಮಾತನಾಡಬಹುದು... ಅಂದರೆ  ವರದಕ್ಷಿಣೆ ಎಷ್ಟು ಬೇಕು? ನಿಮ್ಮ ಮನೆ ಕಡೆಯಿಂದ ಯಾರು ಮಾತನಾಡುತ್ತಾರೆ".  ನಾನು ಮತ್ತೆ ಹಳೆಯ ರಾಗದಲ್ಲಿ, " ಅಂಕಲ್ ನಮ್ಮ ಮನೆಯಿಂದ ತಂದೆ-ತಾಯಿ ಮಾತನಾಡ್ತಾರೆ. ಮನೆಗೆ ಹೋಗಿ ವಿಷಯ ಹೇಳಿದ ಮೇಲೆ ಎಲ್ಲವನ್ನು ಮಾತನಾಡೋಣ. ಆದರೆ ವರದಕ್ಷಿಣೆ ವಿಷಯದಲ್ಲಿ ನನ್ನ ನಿರ್ಧಾರವೇ ಅಂತಿಮ. ನನಗೆ  ವರದಕ್ಷಿಣೆ ಖಂಡಿತ ಬೇಡ. ಇದರಲ್ಲಿ ತಂದೆ-ತಾಯಿಗೆ ಕೇಳುವುದು ಏನು ಇಲ್ಲ" ಎಂದು ಹೇಳಿ, ಹುಡುಗಿಯೋನ್ನೊಮ್ಮೆ ಒರೆ ದೃಷ್ಟಿಯಿಂದ ನೋಡಿ ಮನೆಯಿಂದ ಹೊರಬಂದೆ.

 ಇನ್ನು ಮನೆಯನ್ನು ತಲುಪುವಾಗಲೇ, ನನ್ನ ಮೊಬೈಲ್ ಗೆ ಒಂದಿಷ್ಟು  sms ಗಳು ಬಂದವು. ಆ ಮಸೇಜ್  ಮಾಡಿದವರು ಮತ್ತಾರು ಅಲ್ಲ, ನಾನು ನೋಡಿ ಬಂದ ಹುಡುಗಿ. ತನ್ನ ಹೆಸರನ್ನು ಹೇಳಿ, ನಿಮ್ಮ ಜೊತೆ ಮಾತನಾಡಬಹುದ ಎಂದು ಕೇಳಿದ್ದಳು. ನಾನು ಕಾಲ್ ಮಾಡಿಬಿಟ್ಟೆ. " ಹೇಯ್, ಪ್ಲೀಸ್ ನಾನು ಕಾಲ್ ಮಾಡಿದ್ದೇನೆ ಅಂತ ಅಮ್ಮಗೆ ಹೇಳ್ಬೇಡಿ. ಅವರ ಮೊಬೈಲ್ ನಿಂದ ನಿಮ್ಮ ನಂಬರ್ ತಕೊಂಡೆ. ನೀವೇನು ಚೆನ್ನಾಗಿದ್ದೀರಾ..! ನಾನು ನಿಮಗೊಂದು ಪ್ರಶ್ನೆ ಕೇಳಲಾ?" ಎಂದು ತವಕಿಸಿ ಮಾತನಾಡಿದ್ದಳು. ನಾನು ಭಾವಪರವಸನಾಗಿಯೇ ಇದ್ದೆ. "ನೀವು ಇಂಜಿನಿಯರ್ ಓದ್ದಿದ್ದಿರಿ ಅಂತಿರಲ್ಲ... ಹಾಗಿದ್ದು ಯಾಕ್ರೀ ವರದಕ್ಷಿಣೆ ಬೇಡ ಅಂತ ಹೇಳಿ ಬಿಟ್ರಿ?. ನನಗೆ ಈ ನಿಮ್ಮ ಮಾತು ಸರಿಯನಿಸಲಿಲ್ಲ. ನಾಳೆ ಮದುವೆಯಾಗಿ ಬರುವಳು ನಾನು ತಾನೇ? ನೀವು ಇಷ್ಟು ಹೇಳಿದಕ್ಕೆ ಅಪ್ಪ-ಅಮ್ಮ ಕುಷಿಯಾಗಿದ್ದಾರೆ. ಅವರು ನನ್ನ ಅಕ್ಕನಿಗೆ ಕಾರು-ಚಿನ್ನ ಕೊಟ್ಟಿದ್ದಾರೆ. ನೀವು ಬೇಡ ಅಂದರೆ ನಮಗೆ ಏನು ಕೊಡಲ್ಲ ಗೊತ್ತ? 'atleast  ನಿಮ್ಮ ಇಷ್ಟ' ಅಂತ ಹೇಳುವ ಮನಸ್ಸು ಕೂಡ ನಿಮಗೆ ಅಗಿಲ್ಲಿಲ್ವಾ? ". ಭಯಾನಕ ಅನಿಸಿತ್ತು;ಅವಳು ನನ್ನ ತರಾಟೆಗೆ ತೆಗೆದು ಕೊಂಡಿದ್ದಳು; ಮನಸ್ಸಿನ ಭಾವ ಜಾರಿತ್ತು. ಅವಳಿಗೆ ಹೇಳಿದ್ದು ಒಂದೇ ಉತ್ತರ... " ಮದುವೆಯ ಮುನ್ನ ಎಲ್ಲವು ನನ್ನ ನಿರ್ಧಾರ... ನಿನ್ನ ವಿಚಾರಕ್ಕೆ ನನ್ನಿಂದ ಉತ್ತರ ಇಲ್ಲ. ಆದರೆ ನಿನ್ನ ಅಪ್ಪ-ಅಮ್ಮನ ಬಗ್ಗೆ ನೀನೆ ಯೋಚಿಸ ಬೇಕು ಹೊರತು, ನಾನು ಏನು ಹೇಳಲು ಸಾಧ್ಯವಿಲ್ಲ" ಅಂದೆ. " ಹಾಗಲ್ಲರಿ... ನಾಳೆ ಮದ್ವೇಯಾದ್ರೆ ಖರ್ಚುಗಳು ಬಹಳ ಇರ್ತವಲ್ರಿ... ಸಿಗುದನ್ನು ಯಾಕೆ ಬಿಡ್ತಿರಿ" ಎಂದು ನನ್ನ ಸಮಾಧಾನಿಸಿದ್ದಳು. ಅವಳಿಗಾಗಿ ಕೊನೆಗೆ, "ನಿಮ್ಮ ಮಗಳಿಗೆ ಏನು ಬೇಕು ಅವಳಿಗೆ ಕೊಡಿ ...ನನಗಂತೂ ಏನು ಬೇಡ' ಎಂದು ಅವಳ ತಂದೆ ತಾಯಿಗೆ ನಾನು ಹೇಳುವಂತ ನಿರ್ಧಾರಕ್ಕೆ ನಾವಿಬ್ಬರು, ನೋಡಿದ ೬ ಗಂಟೆಯೊಳಗೆ, ಇಂತ ಒಪ್ಪಂದ ಮಾಡಿಕೊಂಡಿದ್ದೆವು. ಆದರೆ ಗ್ರಹಗಳು ಕೈ ಕೊಟ್ಟಿದ್ದರಿಂದ, ಒಪ್ಪಂದದೊಂದಿಗೆ ಮದುವೆಯು ಮುರಿದುಹೋಯಿತು. ನನ್ನ ವರದಕ್ಷಿಣೆ  ರಹಿತ ಮದುವೆಯ ನನ್ನ ವಿಚಾರದ originality  ಹಾಗೂ variginality ಎರಡು ಉಳಿಸಿಕೊಂಡು ಬಂದೆ.

ಇನ್ನು ಸಾಚಾತನ ಬೇಕಾ ? ವರದಕ್ಷಿಣೆ ಯಾಕೆ ಬೇಕು ? ಬೇಡ ಅನ್ನುದು ಅಷ್ಟು ಸುಲಭನಾ? ಯೋಚನೆಯಲಿರುವಾಗ ಇರುವಾಗಲೇ ಇನ್ನೊಂದು ಘಟನೆ ನನ್ನ ಹೃದಯ ಕಲುಕಿತು.

ಮೂರನೆ ಸಂಬಂಧ: ಅದು ನನ್ನ ಪರಿಚಯದವರೊಬ್ಬರು ಕುದಿರಿಸಿದ ಸಂಬಂಧ. ನನ್ನ ಬೇಡಿಕೆಯ ಮೇರೆಗೆ ಹುಡುಗಿಯ ಅಣ್ಣ ನನಗೆ ಕೆಲವು ಫೋಟೋ ಗಳನ್ನೂ ನನಗೆ ಇಮೇಲ್ ಮಾಡಿದ್ದರು. ಮೊದಲು ಆ ಫೋಟೋಗಳು ಹುಡುಗಿಯ ಇಮೇಲ್ ನಿಂದ ಅಣ್ಣನ ಇಮೇಲ್ ಗೆ ಬಂದಿದ್ದವು. ಅಣ್ಣ ಇಮೇಲ್ ಗೆ ರಿಪ್ಲೈ ಆಲ್ ಮಾಡಿ ನನ್ನ ಇಮೇಲ್ ಸೇರಿಸಿದ್ದ ರಿಂದ  ಹುಡುಗಿಯ ಇಮೇಲ್ ಅದರಲ್ಲಿ ಸೇರಿಕೊಂಡಿತ್ತು. ನಾನು ರಿಪ್ಲೈ ಮಾಡಿ, ಥ್ಯಾಂಕ್ಸ್ ಎಂದು ಕೆಳಗೆ ಮೊಬೈಲ್ ನಂಬರ್ ಸೇರಿಸಿದ್ದೆ. ಇದರಿಂದಾಗಿ ಹುಡುಗಿಗೂ ನನ್ನ  ಮೊಬೈಲ್ ನಂಬರ್ ಹೋಗಿತ್ತು.

ಈ ಸಂಬಂಧದ ಕುರಿತಂತೆ ಅಣ್ಣ, ಅಣ್ಣ ಜೊತೆಯಲ್ಲಿ ಮಾತುಕತೆಗಿಳಿದು, ಯಾವಾಗ ಬರುತ್ತಿರ?, ಎಲ್ಲಿ? ಅಂತೆಲ್ಲ ನಿರ್ಧಾರ ಮಾಡುವ ವಿಷಯದ ಕುರಿತಾಗಿ ಹೇಳುತ್ತಿದ್ದ. ಅದನ್ನೆಲ್ಲಾ ಕೇಳುತ್ತಲಿದ್ದ  ಹುಡುಗಿ ಮರುದಿನ ನನಗೆ ಮಾತನಾಡಬೇಕು ಎಂದು  msg  ಮಾಡಿದ್ದಳು. ಅಗಾ ಅವಳು ಹೇಳಿದ್ದೇನು ಗೊತ್ತೇ?
"ನೀವು ನನ್ನ ನೋಡಲಿಕ್ಕೆ ಬರುತ್ತಿರಂತೆ. ಅಣ್ಣ ನಿಮ್ಮ ಜೊತೆ ಮಾತನಾಡುತ್ತಿರುವುದು ನಾನು ಕೇಳಿದ್ದೇನೆ. ಆದರೆ ಒಂದು ವಿಷಯ. ನೀವು ಇಂಜಿನಿಯರ್ ಅಂತೆ. ನೀವು ವರದಕ್ಷಿಣೆ ಕೇಳಿಯೇ ಕೆಳುತ್ತಿರಿ.! ಆದರೆ ನಾನು ಪೂರ್ ಗರ್ಲ್. ನನಗೆ ತಂದೆ ಇಲ್ಲ. ನೀವು ವರದಕ್ಷಿಣೆ ಕೆಳುದೇ ಆದರೆ ಬರುದೆ ಬೇಡ...ನನ್ನ ಮದುವೆಗಾಗಿ ನನ್ನ ಅಣ್ಣ-ಅಮ್ಮ ಏನು ಬೇಕಾದ್ರೂ ಮಾಡಬಹುದು ಆದರೆ ನನಗೆ ಇಷ್ಟ ಇಲ್ಲ" ಎಂದು ಹೇಳುತ್ತಾ ಸಾಗಿದ ಹುಡುಗಿಗೆ ನಾನು ಮಾತನಾಡಲು ಸಾಧ್ಯವೇ ಇರಲಿಲ್ಲ. ಕೊನೆಗೂ," ನಾನು ವರದಕ್ಷಿಣೆಯ ಕುರಿತಾಗಿ  ಏನು ಹೇಳಿಯೇ ಇಲ್ಲ.. ನೀವು  ಯಾಕೆ ಇದನೆಲ್ಲ ಹೇಳುತ್ತಿರಿ? " ಎಂದು ಕೇಳಿದಾಗ, ಹುಡುಗಿ ಗದ್ಗದಿತಲಾಗಿದ್ದಳು... " ಹಿಂದೆ ನನಗೆ ಇಂಜಿನಿಯರ್ ಪ್ರಪೋಸಲ್ ಬಂದಿತ್ತು. ಇಷ್ಟವು ಆಗಿತ್ತು. ಆದರೆ ಮದುವೆ ಆಗುವ ಲೆವೆಲ್ ಗೆ ಬಂದಾಗ ಬಹಳ ದೊವ್ರಿ ಕೇಳಿದ್ರು. ನಮ್ಮ ಅಮ್ಮ ಮನೆ ಮಾರೋಣ ಅಂದು ಹೇಳಿದ್ರು... ನಾನು ಆ ಮದುವೆ ಬೇಡ ಅಂತ ಹೇಳಿದೆ".

ನನ್ನ ಹೃದಯದಲ್ಲಿ ರಕ್ತವೇ ನಿಂತತೆ ಆಯಿತು. ಹುಡುಗಿಯೊಬ್ಬಳು ಒಂದು ಮನೆಯನ್ನು ಕಟ್ಟಲು ಇನ್ನೊಂದು ಮನೆಯನ್ನು ವಿನಾಶಕ್ಕೆ ತಳ್ಳಬೇಕಾದ ಪರಿಸ್ಥಿತಿ ಸಮಾಜವೇ ನಿರ್ಮಿಸುತ್ತದೆ.

ಯಾವುದು ಸರಿ? ವರದಕ್ಷಿಣೆ ಹುಡುಗನ ಆರೋಗ್ಯದ  ಸಂಕೇತವೇ? ವರದಕ್ಷಿಣೆ ಹೆಂಡತಿಯೆಂಬ ಜೀವಿ ಬಂದಾಗ ಆಗಬಹುದಾದ ಖರ್ಚುಗಳಿಗೆ ಕೊಡುವ ಬಾಬತ್ತೆ ? ಇಲ್ಲ ಬಡ ಹೆಣ್ಣು ಮಕ್ಕಳ ಕಣ್ಣಿರೆ ? ಕಾನೂನು ಹೇಗೆ ಇದ್ದರು, ಮನುಷ್ಯನ ಸಮಾಜದ ರೀತಿ-ನೀತಿಗಳೇ ಸಮಾಜವನ್ನು ಆಳುತ್ತವೆ. ನಾನು ಇದೆ ಸಮಾಜಕ್ಕೆ ಒಳಪಟ್ಟವನು. ನನಗೂ ವರದಕ್ಷಿಣೆ ಬೇಕು. ನಾಳೆ ನನ್ನ ಬೆಲೆ ಎಷ್ಟು ಅಂತ ebay ಯಲ್ಲಿ ನೋಡಬಹುದು..! ಯಾಕಂದ್ರೆ, ನಾನು ಈ ಘಟನೆಗಳಿಂದಾಗಿ ಬದಲಾಗಿದ್ದೇನೆ.

ಛೆ...ಈ ಬದುಕೇ..!

Saturday, December 21, 2013

ಹಳ್ಳಿ ಹುಡುಗ

ಹಳ್ಳಿ ಹುಡುಗ.
     ನೀವು ಯಾವತ್ತಾದರೂ, 'ಲೇ ಹಳ್ಳಿ  ಹೈದ' ಅಂತ ಬೈದಿದ್ದಿರಾ? ಅಥವಾ ಹಿಗಂತಾನು ಜನ ಬೈತಾರೆ ಅಂತ ನಿಮಗೆ ಗೊತ್ತು ತಾನೇ? ಹೌದು, ನಾವು ಬಯ್ಯುವ ಶಬ್ಧಗಳಲ್ಲಿ ಹಳ್ಳಿ ಎಂಬ ಶಬ್ದ ಸೇರಿಸಿ ಬಯ್ಯುವದರ ಹಿಂದೆ ಹಳ್ಳಿಯ ಕುರಿತಾಗಿ, ಹಳ್ಳಿಯ ಜನರ ಕುರಿತಾಗಿ ಇರುವ ಕೀಳು ಭಾವನೆ ಎತ್ತಿ ತೋರಿಸುತ್ತದೆ. ಹಳ್ಳಿಯ ಬಗ್ಗೆ, ಹಳ್ಳಿತನ ಬಗ್ಗೆ ಯಾಕೆ ನಮಗೆ ಅಷ್ಟೊಂದು ಆಕ್ರೋಶ?

ನಾನು ಹಳ್ಳಿಯ ಹುಡುಗ. ಯಾವ ಊರಲ್ಲಿ ರಸ್ತೆ ಇರಲಿಲ್ಲ;ವಿದ್ಯುತ ಇರಲಿಲ್ಲ; ಅಲ್ಲಿಂದ ಬಂದವನು.ಎಲ್ಲರ ಮಧ್ಯದಲ್ಲಿ ನಿಂತಾಗ ಡಿಗ್ರಿ ಯಿಂದ ಇಂಜಿನಿಯರ್ ಅದರೂ, ಬದುಕುತ್ತಿರುವುದು  ಬೃಹತ್ ನಗರದಲ್ಲಾದರು ನನ್ನ ಮನಸ್ಸಿನಲ್ಲಿ ಅಚ್ಚು ಹಾಕಿದಂತ 'ಹಳ್ಳಿತನ' ಬಿಡಲು ಮನಸಾಗುವುದಿಲ್ಲ. ಹಳ್ಳಿತನ ಬಿಟ್ಟು ಹೊರಬಂದು ನಗರದ ಬದುಕಿನೊಂದಿಗೆ ನಾನು ಸೇರಿದ್ದೇನೆ ಎಂದು ತೋರಿಸಿಕೊಳ್ಳಲು ಬಹಳ ಪ್ರಯತ್ನ ಮಾಡಿದ ಮೇಲೆ, ಕೆಲವೊಮ್ಮೆ ನಾನು ಎಲ್ಲೋ ನನ್ನ ಪೂರ್ವ ಪರ ಕಳೆದು 'ನಾನು', 'ನನ್ನದು' ಎಂಬ ಐಡೆಂಟಿಟಿ ಕಳೆದು ಕೊಳ್ಳುತ್ತಿದ್ದೇನೆ ಅನಿಸುತಿತ್ತು.ಆದರೆ ಅದಕ್ಕೊಂದು ದಿನ ಉತ್ತರವೂ ಸಿಕ್ಕಿದೆ.

'ಹಳ್ಳಿತನ' ಎನ್ನುದು ಒಂದು ಕೆಟ್ಟ ನಡತೆಯಲ್ಲ;ಅದು ಅಜ್ಞಾನದ ಸಂಕೇತ ಅಲ್ಲ; ಅದು ನಿಸರ್ಗದ ಜೊತೆಯಲ್ಲಿ ಬದುಕುವ ಪರಿ. ಹಳ್ಳಿಯ ಜನತೆಗೆ ಏನಿಲ್ಲ ಅಂದರು ನಿಸರ್ಗದ ಕುರಿತಾಗಿ ಬಹಳ ತಿಳುವಳಿಕೆ ಇರುತ್ತದೆ. ವೈಜ್ಞಾನಿಕವಾಗಿ ಹವಾಮಾನ ವರದಿ ನಿಡುವ ನಮ್ಮ ಹವಾಮಾನ ಇಲಾಖೆಗಿಂತ ಅದೆಷ್ಟೋ ಬಾರಿ ಹಳ್ಳಿಯ ಜನ ಯಾವುದೊ ಮರದ ಎಲೆಗಳನ್ನು, ಕಾಯಿಗಳ ಸಂಖೆಯನ್ನು ನೋಡಿ ಹೇಳುವ ಮಳೆಯ ವರದಿ  ಅದೆಷ್ಟೋ ನಿಖರವಾಗಿರುತ್ತದೆ. ಬೆಂಗಳೂರಿನಲ್ಲಿ ಕನ್ನಡ ಕಾವಲು ಸಮಿತಿಗಳು(ಕನ್ನಡ ಪರಿಷತ್ ನಂತಹ ಸಂಸ್ಥೆಗಳು) ಸಾವಿರಾರು ಇವೆ. ಆದರೆ ಹಳ್ಳಿಗಳಲ್ಲಿ ಕನ್ನಡ ಭಾಷೆಯನ್ನೂ, ಅದರ ಜನಪದ ಕಲೆಯನ್ನು ಉಳಿಸಿಕೊಂಡು ಬರುತ್ತಿರುದು ಹಳ್ಳಿಯ ಮುಗ್ದ ಮನಸ್ಸುಗಲಿಂದಲೇ.( ಕನ್ನಡದ ನಟ-ನಟಿಯರ ಬಗ್ಗೆ ನನಗಂತೂ ಅದೆಷ್ಟೋ ನೋವು ಇದೆ. ಕನ್ನಡ  ಭಾಷೆಯನ್ನೂ ತಮ್ಮ ದುಡ್ಡಿನ ಮೂಲವಾಗಿಸಿ ಕೊಂಡಿರುವ ಇವರಿಗೆ, TV  ಕ್ಯಾಮೆರಾದ ಮುಂದೆ ಮಾತ್ರ ಇಂಗ್ಲೆಂಡ್ ನಿಂದ ಎರವಲು ಪಡೆದ ಜೆವಿಗಳಂತೆ ವರ್ತಿಸುತ್ತಾರೆ.). ಹಳ್ಳಿಗರ ಇನ್ನೊಂದು ವಿಶೇಷ ಅಂದರೆ ನಿಸರ್ಗದತ್ತವದ ಗಿಡಮೂಲಿಕೆಗಳು. ಬಹಳಷ್ಟು ರೋಗಗಳಿಗೆ ಆಸ್ಪತ್ರೆಗಳಲ್ಲಿ ಸಿಗಲಾರದ ಮದ್ದುಗಳು ಹಳ್ಳಿಗಳಲ್ಲಿ ಸಿಗುತ್ತಿವೆ. ಉದಾಹರಣೆಗೆ ಅಂಕೋಲದ ಬೆಲಾಂಬರ್ ಅಂತ ಹಳ್ಳಿಯಲ್ಲಿ ನಿಡುವ ಮದ್ದು ಪಾರ್ಶ್ವವಾಯು ಪಿದಿತರಿಗೆ ವರದಾನ. ಅದೆಷ್ಟೋ ಹಾವು-ಚೇಳು ಕಡಿತಗಳಿಗೆ ಹಳ್ಳಿಗಲ್ಲಿ ಮದ್ದುಗಳಿವೆ.

ಆದರೆ ನಮ್ಮ ಶಿಕ್ಷಣ ವ್ಯವಸ್ತೆಯಲ್ಲಿ ಒಂದು ದೊಡ್ಡ ದುರಂತವೇ ನಡೆದು ಹೋಗಿದೆ. ಅದು ಏನು? (ಇಲ್ಲಿದೆ ಓದಿ-http://epapervijayavani.in/Details.aspx?id=10503&boxid=142241281). ಶಿಕ್ಷಣದ ಉದ್ದೇಶ ಹಣದ ಸಂಪಾದನೆಯಾಯಿತೆ ಹೊರತು ನಿಜವಾದ ನಮ್ಮ ಸಂಸ್ಕೃತಿಯ  ಪುನರುಜ್ಜೀವನ ಆಗಲಿಲ್ಲ. ಅದಕ್ಕೆ ನಾವು ಪಶ್ಚಾತಾಪ ಪದಬಹುದೇ ಹೊರತು, ಧಿಕ್ಕನ್ನು ಬದಲಾಯಿಸಲು ಸಾಧ್ಯವಿಲ್ಲ. ಹೋಗಲಿ ಬಿಡಿ, ಅಂತು ಹಳ್ಳಿಯಿಂದ ಬೆಂಗಳೂರ್ ನಂತಹ ನಗರಗಳಿಗೆ ಬಂದಿದ್ದೇವೆ.

ಆದರೆ ಇಲ್ಲಿ ಹಳ್ಳಿತನ ಅಂದರೆ ಪೆದ್ದತನವೆಂದೆ ಅರ್ಥ ಕಲ್ಪಿಸುತ್ತಾರೆ. ಯಾವನಿಗೆ ಕಾಫಿ ಮಷೀನ್ ಆಪರೇಟ್ ಮಾಡಲು ಬರುವುದಿಲ್ಲವೋ, ಯಾವನಿಗೆ ಲಿಫ್ಟ್ ನಂಬರ್ ಗೊತ್ತಗುವುದಿಲ್ಲವೋ, ಯಾವನು ಇಡ್ಲಿಯನ್ನು ಸ್ಪೂನ್ ಬಳಸಿ ತಿನ್ನುವುದಿಲ್ಲವೋ, ಯಾವನು ಮಾತಾಡುವಾಗ ಇಂಗ್ಲಿಷ್ ಬಳಸುವುದಿಲ್ಲವೋ, ಯಾವನಿಗೆ ಪಿಜ್ಜಾ ಆರ್ಡರ್ ಮಾಡಲು ಬರುವುದಿಲ್ಲವೋ, ಯಾವನು ಪೆಪ್ಸಿ ಬೇಡ ಅನ್ನುತ್ತಾನೋ ಅವನೇ ಹಳ್ಳಿಯ ಪೆದ್ದ ಅನ್ನುತ್ತಾರೆ. ನಿಜವಾಗಿ ಹಳ್ಳಿಯ ಹುಡುಗ ಅದನ್ನೆಲ್ಲಾ ತಿಳಿದಿರಲೇ ಬೇಕಾ? ಮನುಷ್ಯ ಮಾಡಿದ ಮಷೀನ್ಗಳು ದಿನಕ್ಕೊಂದು ರೀತಿ ಬದಲಾಯಿಸುವಾಗ ಅವನೆಲ್ಲ ತಿಲಿದರಲೇ ಬೇಕು ಅನ್ನುವುದು ಶುದ್ಧ ತಪ್ಪು ಅಥವಾ ಇಂತ ಒಂದು ಮಷೀನ್ ಬಗ್ಗೆ ಗೊತ್ತೇ ಇಲ್ಲ ಎಂದು  ನನ್ನಂತ ಹಳ್ಳಿಯ ಹುಡುಗ, 'ಅಯ್ಯೋ ನನಗೆ ಗೊತ್ತಿಲ್ಲ ಅಲ್ವ' ಅಂತರಿಕವಾಗಿ ನೊಂದು ಕೊಳ್ಳಬೇಕಾದ ಅಗತ್ಯವಿದೆಯಾ? 

ಬೆಂಗಳೂರಿಗೆ ನಾನು ಮೊದಲು ಬಂದಾಗ ಬಹಳಷ್ಟು ವಿಷಯಗಳು ಗೊತ್ತಿರಲಿಲ್ಲ. ಬೇಸ್ಮೆಂಟ್ ಎಂಬ ಪದ  ಹೊಸದಾಗಿತ್ತು. ಆದರೆ ಗ್ರೌಂಡ್ ಫ್ಲೋರ್ ನ ಕೆಳಗಿನ ಫ್ಲೋರ್ ಗೆ ಬೇಸ್ ಮೆಂಟ್ ಎಂದು ಕರೆಯುತ್ತಾರೆ ಎಂದು ಸ್ವಲ್ಪ ಮಟ್ಟಿಗೆ ಅರಿವು ಇತ್ತು. ಆದರೆ ಅದೊಂದು ದಿನ ಬೇರೆ ಕಂಪನಿ ಬಿಲ್ಡಿಂಗ್ ಗೆ ಹೋದಾಗ, ಅಲ್ಲಿ ಅಪ್ಪೆರ್ ಬೇಸ್ಮೆಂಟ್, ಲೋವರ್ ಬೇಸ್ಮೆಂಟ್ ಎಂದಿತ್ತು. ಅಪ್ಪೆರ್ ಬೇಸ್ಮೆಂಟ್ ನಲ್ಲಿ ಕ್ಯಾಂಟೀನ್ ಇತ್ತು. ನನ್ನ ಪ್ರಕಾರ ಲೋವರ್ ಬಸ್ಮೆಂತ್ ಗ್ರೌಂಡ್ ಫ್ಲೋರ್ ನ  ಕೆಳಗೆ ಇದ್ದರೇ, ಅಪ್ಪರ್ ಬೇಸ್ಮೆಂಟ್ top most ಫ್ಲೋರ್ ಗಿಂತ ಮೇಲೆ ಇರಬೇಕು. ಹೀಗಾಗಿ ೧೦ ಅಂತಸ್ತಿನ  ಬಿಲ್ಡಿಂಗ್ ನ ೧೦ ನೆ ಫ್ಲೋರ್ ಗೆ ಹೋಗಿ ಅಪ್ಪರ್ ಬೇಸ್ಮೆಂಟ್ ಹುಡುಕಾಡಿದೆ. ಸಿಗಲಿಲ್ಲ; ಬ್ರೇಕ್ಫಾಸ್ಟ್ ಮಾಡಿರಲಿಲ್ಲ. ನನ್ನ ಹಳ್ಳಿತನ ಬಯಲಾದಿತು ಎಂದು ಕೇಳಲು ಸಾಧ್ಯವಾಗದೆ ಮನೆಗೆ ಬಂದು  ಗೆಳೆಯರಿಗೆ ಕೇಳಿದ್ದೆ.
ನನ್ನ ಹಾಗೆ, ಇಂಥ ತೊಳಲಾಟ ಬಳಷ್ಟು  ಗೆಳೆಯರು ಕೂಡ ಅನುಭವಿಸಿದ್ದರಂತೆ. ಆದರೆ ಹಾಗೆ ನಾಚಿಕೆಯಾಗಿ ಯಾರೊಂದಿಗೂ ಹೇಳಿಕೊಳ್ಳಲಿಲ್ಲ ಅಂತೆ!

ಆದರೆ ಅದೊಂದು ದಿನ, ಬೆಂಗಳೂರಿನ BMS  ಕಾಲೇಜಿನಲ್ಲಿ, 'ಹೊಸ ಕಾಲದ ವೈರುಧ್ಯಗಳು' ಎಂಬ ಚರ್ಚ ಗೋಷ್ಠಿಯಲ್ಲಿ, ಹರೀಶ್ ಹಂದೆಯವರು ಹಳ್ಳಿತನ ಅನ್ನುವುದು ಅಜ್ಞಾನವಲ್ಲ. ಅದು ಒಂದು ಬದುಕುವ ರೀತಿ.ಅಲ್ಲೂ ಮೌಲ್ಯಗಳಿವೆ ಎಂದಾಗ, ನನ್ನ ಮನಸ್ಸಿನಲ್ಲಿದ್ದ ಹಳ್ಳಿಯ ಎಂಬ ಪರದೆ ಹರಿದಿತ್ತು.

ಯಾರು ಏನು ಅನ್ನಲಿ, ಇಡ್ಲಿ ಬರಿಗೈಯಲ್ಲಿ ತಿನ್ನುತ್ತೇನೆ. ನೇರವಾಗಿ ಅಪ್ಪರ್ ಬೇಸ್ಮೆಂಟ್ ಯಾವುದು ಎಂದು ಕೇಳುತ್ತೇನೆ. ನನ್ನ ತನ ಹಳ್ಳಿತನ.

Saturday, October 19, 2013

ಬ್ಯಾಚುಲರ್ ಜೀವನ ಮತ್ತು ಸಮಾಜ.

ಇದೊಂದು ರೀತಿಯಲ್ಲಿ ಹಾಸ್ಯಮಯ ಲೇಖನವಾದರು ಕೆಲವು ಘಟನೆಗಳು, ನಾನು ಅನುಭವಿಸಿದ ನೋವು ಇದರಲ್ಲಿದೆ. ಇದು ನನ್ನ ಹಾಗೆ, ನೀವು ಕೂಡ ಇಂಥ ಘಟನೆಗಳನ್ನು ಅನುಭವಿಸಿರುತ್ತಿರಿ. ಆದರೆ ಅದೆಲ್ಲ ಸಾಮಾನ್ಯ ಸಂಗತಿಯೆಂದು ಮರೆತು ಬಿಡುತ್ತಿರಿ ಅಷ್ಟೇ.

ಪ್ರತಿಯೊಬ್ಬ ಗಂಡು ಹುಟ್ಟಿದ ದಿನದಿಂದ ಮದುವೆಯ ೭ ನೇ ಹೆಜ್ಜೆ ಹಾಕುವವರೆಗೂ  ಬ್ಯಾಚುಲರ್ ಆಗಿರುತ್ತಾನೆ. ಆದರೆ, ಈ 'ಬ್ಯಾಚುಲರ್' ಪದಕ್ಕೆ ವಿಶೇಷ ಅರ್ಥ ಹಾಗೂ ಕಲ್ಪನೆಗಳು, ನೋವುಗಳು ಅನುಭವಿಸ ಬೇಕಾಗಿಬರುವುದು ಕಾಲೇಜು ಮುಗಿಸಿ, ಎಲ್ಲೋ ನೌಕರಿಯಲ್ಲಿದ್ದು ಮದುವೆಯಾಗುವರೆಗಿನ ದಿನಗಳಲ್ಲಿ ಮಾತ್ರ. ಇದೆ ದಿನಗಳಲ್ಲಿ ' ಎಲಿಜಿಬಲ್ ಬ್ಯಾಚುಲರ್' ಎಂಬ ಪದಗಳು ನಮ್ಮ ಬಗ್ಗೆ ತಿಳಿದಿರುವ  ಗೆಳೆಯರಿಂದ, ಹಿರಿಯ ಸಹದ್ಯೋಗಿಗಳಿಂದ,ಕುಟುಂಬದ ಹಿರಿಯರಿಂದ ಅಲ್ಲಿ-ಇಲ್ಲಿ ಪ್ರಸಂಶೆಗೆ ಒಳಪಡುತ್ತಲೇ ಇರುತ್ತದೆ.

 'ಎಲಿಜಿಬಲ್ ಬ್ಯಾಚುಲರ್' ಎಂದಾಗ ಸಿಗುವ ಸಂತೋಷ ಅದೆಷ್ಟೆಂದರೆ, ಕಾಲ್ಪನಿಕ ಲೋಕದ ಕವಿ ಮಹಾಶಯರು ವರ್ಣಿಸಿದ ತಿಲೋತ್ತಮೆ, ಉರ್ವಸಿಯಂತ  ಗಂಧರ್ವ ಕನ್ಯೆ ನಮಗೆ ಇವರು ಹುಡುಕುತ್ತಿದ್ದಾರೆ ಎನ್ನುವಷ್ಟು. ಅದಲ್ಲದೆ ಬ್ಯಾಚುಲರ್  ಜೀವನದಲ್ಲಿ  ಸಂತೋಷ ಪಡುವ ಹಲವು ವಿಷಯಗಳಿವೆ- ಆಗತಾನೆ ನೌಕರಿಯಿಂದ ಸಿಕ್ಕ ಹಣ, ಯಾರ ಕಟ್ಟಳೆಯೂ ಇಲ್ಲದೆ ಓಡಾಡಬಹುದಾದ ಸ್ವಾತಂತ್ರ್ಯ, ಅಪ್ಪ-ಅಮ್ಮನಿಗೆ ಕೇಳದೆಯೇ ಜೀವನದ ನಿರ್ಧಾರ ತೆಗೆದುಕೊಳ್ಳಬಹುದಾದ(ನನ್ನ ದುಡ್ಡು,,, ನನ್ನ ಕಾಸು) ಅವಕಾಶಗಳು, ಕಾಲೇಜ್ ಜೀವನದ ಓದು, ಟೈಮ್ ಟೇಬಲ್ ಕಿರಿ ಇಲ್ಲದ  ಸ್ವಾತಂತ್ರದ ರಾತ್ರಿಗಳು(PUC ಯಿಂದ ಇಂಜಿನಿಯರಿಂಗ್ ಮುಗಿಯುವ ತನಕ ಸರಿಯಾಗಿ ನಿದ್ರೆ ಮಾಡಿದ ರಾತ್ರಿಗಳೇ ಇಲ್ಲ ಅನಿಸುತ್ತವೆ). ಹಾಗಾಗಿ ಯಾವ ಬಗೆಯ ಕಿರಿ ಕಿರಿ ಇಲ್ಲದ  'ರೈಟ್ ಟು ಎಂಜಾಯ್ ' ಎಂಬ ಅಧಿಕಾರ ಸಿಕ್ಕಿದೆ ಅನಿಸುತ್ತದೆ.

ಕೆಲವು ತಿಂಗಳ ಹಿಂದೆ, ಗೆಳೆಯನೊಬ್ಬ  ಮದುವೆಯ ನಿಶ್ಚಯವಾದ ವಿಷಯ ಗೆಳೆಯರ ಗುಂಪಿನಲ್ಲಿ ಚರ್ಚೆಗೆ ಒಳಗಾದಾಗ, "ನಗುತ್ತ ಕಳೆಯಬಹುದಾದ ಬ್ಯಾಚುಲರ್ ಅನ್ನುದು ಜೀವನದಲ್ಲಿ ಮದುವೆಯ ಮೊದಲ ದಿನಗಳು ಮಾತ್ರ. ಮದುವೆಯ ನಂತರ ಬ್ಯಾಚುಲರ್ ಆಗಲು ಸಾಧ್ಯವಿಲ್ಲ. ಹಾಗೊಮ್ಮೆ ಆದರು ನೋವಿನ ದಿನಗಳಗಿರುತ್ತವೆ. ಹಾಗಾಗಿ ಮದುವೆಯಾಗುವ ಮುನ್ನ, ಬ್ಯಾಚುಲರ್ ಜೀವನ ಚೆನ್ನಾಗಿ ಅನುಭವಿಸಿಯೇ  ೭ ಹೆಜ್ಜೆ ಹಾಕಲು ನಿರ್ಧರಿಸಬೇಕು". ಈ ಮಾತು ಯಾಕೆ ಹೇಳಿದ, ಯಾರು ಹೇಳಿದ ಎನ್ನುವ ಪ್ರಶ್ನೆಗಳಿಗಿಂತ ಇದರ ನಿಗೂಢ ಅರ್ಥ ಬಹಳ ಯೋಚಿಸಬೇಕಾದುದ್ದೆ.

೩ ವರ್ಷಗಳ ಹಿಂದೆ, ಮಣಿಪಾಲದಲ್ಲಿ ಬಾಡಿಗೆ ಮನೆಗಾಗಿ ಓಣಿ-ಓಣಿಗಲ್ಲಿ  ಬೈಕ್ ಹೊಡಿತ ಇದ್ದೆ. ಅಂತು-ಇಂತೂ ಅಪರಿಚಿತ ಮನೆಗಳ ಮುಂದೆ ನಿಂತು, ಕಾಲಿಂಗ್ ಬೆಲ್ ಬಾರಿಸಿ, ದಿನತೆಯಿಂದ ನಿಂತು, "ನಿಮ್ಮಲ್ಲಿ ಬಾಡಿಗೆ ಮನೆ ಇದೆಯಾ ?" ಎಂದು ಕೇಳುತ್ತ ಸಾಗುತ್ತಿದ್ದೆ. ಮನೆಯ ಮಾಲಿಕರ ಮೊದಲು ಕೇಳುವ ಪ್ರಶ್ನೆ, " ಮನೆಯುಂಟು..! ಆದರೆ ಬ್ಯಾಚುಲರ್ ಗೆ ಕೊಡಲ್ಲ... ನೀವು ಮ್ಯಾರೀಡ್ ತಾನೇ?". ನನಗೆ ಮನೆ ಸಿಗುವ ಚಾನ್ಸ್ ಕಾಣದೆ ಒದ್ದಾಡಿದ್ದೆ. ಹೀಗಿರುವಾಗ, ಒಂದು ರವಿವಾರ ೧೧ ಗಂಟೆಗೆ, ಒಂದು ಮನೆಯ ಮುಂದೆ ನಿಂತಾಗ, ನನ್ನ ಕಂಪನಿಯ ಹೆಸರು ಹೇಳಿದಾಗ ಒಳಗೆ ಕರೆಯಿಸಿ, ಚೆನ್ನಾಗಿ ಮಾತನಾಡಿಸಿ ಕಂಪನಿಯ ಕತೆ, ಪಗಾರು, ರಜೆಗಳ ಕುರಿತಾಗಿ ಒಂದರ ಮೇಲೊಂದು ಪ್ರಶ್ನೆಕೆಳಿದ  ಅಂಕಲ್, ಬ್ಯಾಚುಲರ್ ಆದರೆ ಮನೆ ಕೊಡಲ್ಲರಿ ಎಂದು ಹೇಳಿ ವಿನಯದಿಂದ ಜಾರಿ ಕೊಂಡರು. ಅಷ್ಟು ಚೆನ್ನಾಗಿ ಮಾತನಾಡಿದ ಅವರು ಮನೆ ನನಗೆ ಕೊಡುತ್ತಾರೆ ಎನ್ನುವ ನಂಬಿಕೆ ಬಂದು ಹೋಗಿತ್ತು. ಆದರೆ ಅವರೊಂದು ಗೆಳೆತನ ಇರಿಸಿ ಕೊಳ್ಳುವ ಮನಸ್ಸೆಮ್ಬಂತೆ, ನನ್ನ ಮೊಬೈಲ್ ನಂಬರ್ ಕೇಳಿದ್ದರು; ಕೊಟ್ಟು ಬಂದೆ. ಸುಮಾರು ಎಂಟು ತಿಂಗಳು ಕಳೆದ ಬಳಿಕ, ಅವರು ನನಗೆ ಕಾಲ್ ಮಾಡಿ, "ಹಲೋ ನಮಸ್ಕಾರ, ನಿಮಗೆ ಗೊತ್ತಾಯಿತ್ತಲ್ಲ... ನೀವು ನಮ್ಮ ಮನೆಗೆ ಬಾಡಿಗೆ ಮನೆ ಕೇಳಲು ಬಂದಿದ್ದಿರಿ.. ನಮ್ಮ ಮಗಳು, ಈ ವರ್ಷ ಇಂಜಿನಿಯರಿಂಗ್ ಮುಗಿಸಿದ್ದಾಳೆ, ಕಂಪ್ಯೂಟರ್ ಸೈನ್ಸ್, ನಿಮ್ಮ ಕಂಪನಿ ಯಲ್ಲಿ ಜಾಬ್ ಸಿಗುವುದಾ?". ನನಗೆ ಎಲ್ಲಿಲ್ಲ ಕೋಪ ಬಂತು, "ಇಲ್ಲ ಅಂಕಲ್, ಸಿಂಗಲ್ಸ್ ಗರ್ಲ್ಸ್ ಗಳಿಗೆ ನಮ್ಮ ಕಂಪನಿಯಲ್ಲಿ ತಗೋಳಲ್ಲ" ಎಂದು ಹೇಳಿ ಕಾಲ್ ಕಟ್ ಮಾಡಿದ್ದೆ. ಕಾಲ್ ಕಟ್ ಮಾಡಿದ ಮೇಲೆ ನಾನು ಈ ಹಿರಿಯರಿಗೆ ಇಷ್ಟೊಂದು ಕಡಕ್ ಉತ್ತರ ಕೊಡಬಾರದಿತ್ತು ಅನಿಸಿತ್ತು.

ಅದೆಷ್ಟೋ ಸಾರಿ, ರಾಜಾಂಗಣದಲ್ಲಿ ಕಾರ್ಯಕ್ರಮ  ಮುಗಿಸಿ  ಉಡುಪಿಯ ಯಾವೊದೋ ಹೋಟೆಲ್ ಹೋಗುವಾಗ ನಾನು ಒಬ್ಬನೇ ಇರುತ್ತಿದ್ದೆ. ನನ್ನ ಗೆಳೆಯರಾರಿಗೂ  ಯಕ್ಷಗಾನದಂತ ಕಾರ್ಯಕ್ರಮಗಳು ಇಷ್ಟವಾಗಿರುತ್ತಿರಲಿಲ್ಲ. ಹೀಗಾಗಿ ಹೋಟೆಲ್ ನಲ್ಲಿ ಜಾಗ ಇಲ್ಲದಿದ್ದರೆ, ನೀವು 'ಸಿಂಗಲ್ ತಾನೆ?' ಎಂದು ತಡೆದು, ಮತ್ತೊಬ್ಬ ಪುಣ್ಯಾತ್ಮ ಯಾರೊಬ್ಬ ನನ್ನ ಜೊತೆ 'double  ಅನಿಸಿ' ಕೊಳ್ಳುವ ತನಕವೂ ಕಾಯಬೇಕಾಗಿತ್ತು. ಹೀಗೆ double  ಅನಿಸಿ ಕೊಳ್ಳಲು ನನ್ನ ಟೇಬಲ್ ಗೆ ಬರುವ  ಆ ಸಿಂಗಲ್ ಯಾವ ಮಾತು ಕತೆ ಇಲ್ಲದೆ ತನ್ನ ಪಾಡಿಗೆ ತಾನು ತಿಂದು, ತನ್ನದೇ ಮೊಬೈಲ್ ನಲ್ಲಿ ಆಟವಾಡಿ ಹೋಗುವಾಗ, ನನ್ನ ಮನಸ್ಸಿನಲ್ಲಿ ಹೊರಳುದುತ್ತಿದ್ದ ವಿಚಾರವೆಂದರೆ-' ನಾನು ಯಾಕ್ಷಗಾನ ನೋಡುವಂತ ಹುಡುಗಿನೇ ಮದುವೆಯಾಗಿ ಬಿಟ್ಟರೆ 'ಸಿಂಗಲ್ ತಾನೇ?' ಪ್ರಶ್ನೆಗೆ ಉತ್ತರ  ದೊರಿಕಿತಲ್ಲವೇ?' ಅನ್ನುವಂತ ಕ್ಷಣಗಳು ನಾನು ಅನುಭವಿಸಿದ್ದೇನೆ. ಅದು ಸರಿಯೋ-ತಪ್ಪೋ ಬೇರೆ ವಿಚಾರ.

ಇಷ್ಟೆಲ್ಲಾ ಹಳೆಯ ಕತೆ ನಾನು ಯಾಕೆ ನೆನಪಿಸಿ ಕೊಂಡೆ ಅಂದರೆ, ನಿನ್ನೆ -ಮೊನ್ನೆಯ ವರೆಗೂ ಆಫೀಸ್ ನಲ್ಲಿ ವೀಕೆಂಡ್ ಸಹಿತ ಕೆಲಸ ಮಾಡಿದ್ದೇನೆ. ನನ್ನ ಹಿರಿಯ ಸಹೋದ್ಯೋಗಿ ಒಬ್ಬರು ಬಂದು, 'ವೆಂಕಟ್, ನೀವು ಹೇಗೂ ಬ್ಯಾಚುಲರ್ ಅಲ್ವ?.. ವೀಕೆಂಡ್ ಆಫೀಸ್ ಗೆ ಬನ್ನಿ. ನಾನು ಉಳಿದವರಿಗೆ ಹೇಳಲ್ಲ(ಅವರೆಲ್ಲ ಮ್ಯಾರೀಡ್ )" ಎಂದು ಹೇಳಿದರು. ಸವಿನಯದಿಂದ, ಬ್ಯಾಚುಲರ್ ಗೆ  'ಎಲಿಜೆಬಲ್' ಪದ ನಾನೇ ಸೇರಿಸಿ, ಒಮ್ಮೆ ಸಂತೋಷದ ನಗೆ ಬಿರಿ...ಬರ್ತೇನೆ ಎಂದು ಹೇಳಿದೆ. ವೀಕೆಂಡ್ಸ ಎಲ್ಲ  ನಿರವ ಮೌನವಾದ ಆಫೀಸ್ ನಲ್ಲಿ ಒಂದು ಕಾಫಿ ಗೂ  ಗತಿಯಿಲ್ಲದೆ, ಒಂದೇ ಸವನೆ ಕೀಬೋರ್ಡ್ ಕುಟುಕಿದ್ದೆ ನನ್ನ ಕೆಲಸ. ಆದರೆ ವಿಕೆಂಡ ನಲ್ಲಿ ಮಾಡಬೇಕಾದ ಬಟ್ಟೆ ವಾಶಿಂಗ್, ಮನೆಯ ಕ್ಲೀನಿಂಗ್,ಚಪ್ಪಲಿ ಜೋಡಣೆ ಇತ್ಯಾದಿ ಕೆಲಸಗಳು ಸರಿಯಾಗಿ ನಡೆಯದೆ, ಸೋಮವಾರ  ರಾತ್ರಿ ೧೦ ಗಂಟೆಗೆ ಬಟ್ಟೆ ವಾಶ್ ಮಾಡಿದ್ದೆ. ವೀಕೆಂಡ್ ಎಂದು ಊರಿಗೆ ಹೋದ ಉಳಿದ  ನನ್ನ ರೂಮೇಟ್ ಗಳಿಂದಾಗಿ ರಾತ್ರಿ ಊಟವು  ಇರಲಿಲ್ಲ. ಊಟಕ್ಕಾಗಿ ಮತ್ತೆ ಹುಡುಕಾಟ. ಇದನೆಲ್ಲ ಯೋಚಿಸುವಾಗ, ಬ್ಯಾಚುಲರ್ ಗಳು ವೀಕೆಂಡ್ ಗಳಲ್ಲಿ ಮಾಡಬೇಕಾದ ಕೆಲಸಗಳು ಒಬ್ಬ ಮ್ಯಾರೀಡ್ ಗಳಿಗಿಂತಲೂ ಜಾಸ್ತಿನೆ ಇರುತ್ತವೆ. ಆದರೆ ಯಾಕೆ ಬ್ಯಾಚುಲರ್ ಗಳು ಅಂದ್ರೆ ಗ್ರಾಂಟೆಡ್ ಅನ್ನುವ ಪ್ರಶ್ನೆ ಮೂಡಿ ಬಿಟ್ಟಿತ್ತು.

ಒಟ್ಟಾರೆ ಬ್ಯಾಚುಲರ್ ಜೀವನ ಒಂದು ರೀತಿಯಲ್ಲಿ ಅತ್ಯಂತ ಸ್ವಾತಂತ್ರ್ಯ ಅನುಭವಿಸಬಹುದಾದ ದಿನಗಳು.ಎಲ್ಲರು ಜೀವನದಲಿ ಈ ದಿನಗಳು ಅನುಭವಿಸಿಯೇ ಮುಂದಿನ ಗೃಸ್ಥ(ಗ್ರಹಸ್ತ) ಜೀವನಕ್ಕೆ ಕಾಲಿರಿಸುತ್ತಾರೆ. ಅದರೂ ಯಾಕೆ ಈ ಅಂಕಲ್ ಗಳು , " ಬ್ಯಾಚುಲರ್ ರಾ?" ಎಂದು ಕೇಳಿ, ಒಂದು  ಬಗೆಯ ಉಪದ್ರದ ಜೀವಿಗಳಂತೆ ನೋಡುತ್ತಾರೋ ಗೊತ್ತಿಲ್ಲ.

Sunday, September 29, 2013

ರವಿ ಮತ್ತು ಸಿಂಹ...!

ನಾನು ಬರೆಯುತ್ತಿದ್ದದು ರವಿ ಬೆಳೆಗರೇ ಹಾಗೂ ಪ್ರತಾಪ್ ಸಿಂಹರ ಬಗ್ಗೆ. ಅವರಿಬ್ಬರೂ ಒಂದೇ ನಾಣ್ಯದ ಎರಡು ಮುಖಗಳು(ಯಾವತ್ತು ಒಬ್ಬರನೊಬ್ಬರು ಒಪ್ಪಿಕೊಲ್ಲಲಾರರು ಎನ್ನುವ ಅರ್ಥದಲ್ಲಿ).ಆದರೆ ನನ್ನ ಬದುಕಿನಲ್ಲಿ ಒಂದು ಒಳ್ಳೆಯ ಕಲ್ಪನೆಗಳ ಹಿಂದೆ ಈ ಲೇಖಕರ  ಭಾಷೆ, ನುಡಿ ಹಾಗೂ ಒಂದು ಬಗೆಯ ಗೌರವವಿದೆ.

ನಾನು PUC  ಮುಗಿಸಿದ ಬಳಿಕ ಮೆಡಿಕಲ್ ಸೇರಬೇಕೆಂಬ ತುಂಬಾ ಆಸೆ ಇತ್ತು. CET ಯಲ್ಲಿ ಒಳ್ಳೆಯ ರಾಂಕ್ ಗಳಿಸುವ ಮೂಲಕ ಬಳ್ಳಾರಿಯ ಮೆಡಿಕಲ್ ಸೀಟ್ ಸಿಕ್ಕಿದ್ದರು ಸೇರಲು ಸಾಧ್ಯವಾಗದೆ ನಂತರ ಕೆಲವು ಮಹನಿಯರ ಕೃಪೆಯಿಂದ(ಮುಂದೊಂದು ದಿನ -ಅವರಿಗಾಗಿ ಹೊಸ ಲೇಖವನ್ನೇ ಬರೆಯುತ್ತೇನೆ.) ಇಂಜಿನಿಯರಿಂಗ್ ಸೇರಿ, ಜಾಬ್ ಸಿಕ್ಕಿ ಆರು ವರ್ಷಗಳೇ ಕಳೆದು ಹೋದವು.

ಹೀಗಿರುವಾಗ, ನಾನು ಮೆಡಿಕಲ್ ಸೇರಲಾಗದ ನೋವು ನನಗೆ ಇಂಜಿನಿಯರಿಂಗ್ ದಿನಗಳಲ್ಲಿ ಬಹಳ ಕಾಡಿತ್ತು. ಆ ದಿನಗಳ, ಮೆಡಿಕಲ್ ಎಂಬ ನೋವಿನ ಪರಿಣಾಮವಾಗಿ ನನ್ನಲ್ಲಿ ಹುಟ್ಟಿದ ಹುಚ್ಚು ಕಲ್ಪನೆಯೆಂದರೆ ನಾನು ಡಾಕ್ಟರ ಒಬ್ಬಳನ್ನೇ ಮದುವೆಯಾಗಬೇಕು ಎಂದು. ಇಂಜಿನಿಯರಿಂಗ್ ಮುಗಿಯುವತನಕವು ಆ ಕನಸ್ಸು ನನ್ನ ರಕ್ತದಲ್ಲಿ ಇದ್ದೆ ಇತ್ತು. ಆದರೆ ಇಂಜಿನಿಯರಿಂಗ್ ಮುಗಿಸಿ, ಜಾಬ್ ಸಿಕ್ಕಿದ ಮೇಲೆ, ಅಂತ ಹುಡುಗಿಯೊಬ್ಬಳು ಸಿಗುವಳೇ ? ನನಗಾರಾದರು ತಿಳಿದವರು ಇರುವರೇ ಇಂತಲ್ಲ ಲೆಕ್ಕ ಹಾಕಿದಾಗ ಮೆಡಿಕಲ್ ಹುಡುಗಿಯೊಬ್ಬಳು ಈ ಬಡಪಾಯಿಗೆ ಸಿಗುತ್ತಲೇ ಅನ್ನುವ ನಂಬಿಕೆಯೇ ಬರಲಿಲ್ಲ. ಆದರೆ ನನ್ನ ಅಜ್ಜ, ನನ್ನ ಅಪ್ಪ ತನ್ನ ಜೀವಿತಾವಧಿಯಲ್ಲಿ ದುಡಿದುದ್ದನ್ನು ಒಂದೇ ವರ್ಷದಲ್ಲಿ ದುಡಿಯಲು ಸಾಧ್ಯವಿರುವ ನಾನು, ಯಾಕೆ ಒಂದು ಒಳ್ಳೆಯ ಹುಡುಗಿಯನ್ನು ನೋಡಿ ಅವಳಿಗೆ ಮೆಡಿಕಲ್ ಓದಿಸಬಾರದು ಎಂದು ಆಲೋಚನೆಗೆ ಬಿದ್ದೆ. ಆಲೋಚನೆಯೇನೋ ಒಳ್ಳೆಯದು.. ಆದರೆ ಮದುವೆಗೆ ಒಪ್ಪಿಸಿ ....ನಾನು ಸಹಾಯ ಮಾಡುತ್ತೇನೆ ಎನ್ನುವುದು ಹೆಣ್ಣನ್ನು ಕೊಂಡು-ಕೊಂಡಂತೆ, ಮತ್ತು ಸಂಸ್ಕೃತಿಯ ಭಾಷೆ  ದೃಷ್ಟಿಯಿಂದ ಸರಿಯಲ್ಲ ಎನ್ನುವ  ನೋವು ನನಗೆ ಧರ್ಮ ಸಂಕಟಕ್ಕೆ ತೊಡಗಿಸಿತ್ತು. ಆದರು, ಮದುವೆಯ ಬಗ್ಗೆ ಸ್ವಲ್ಪವೂ ಓಪನ್ ಆಗಿ ಮಾತನಾಡಲಾಗದ ಆ ದಿನಗಳಲಿ ನನ್ನ ಗೆಳೆಯನೊಬ್ಬನಿಗೆ ನನ್ನ ಕತೆ ವಿವರಿಸಿದಾಗ, " ಹುಚ್ಚು ಕಲ್ಪನೆ....ಸಹಾಯ ಬೇಕಾದರೆ ಮಾಡು ....ಆದ್ರೆ ಮದುವೆ ಮತ್ತು ಸಹಾಯ ಬೇರೇನೆ ಇರಬೇಕು..." ಹೇಳಿದ್ದಲ್ಲದೆ, ರವಿ ಬೆಳೆಗೆರೆಯವರ "ಹೇಳಿ ಹೋಗು ಕಾರಣ" ಕಾದಂಬರಿಯನ್ನು ಓದುವಂತೆ ಸಲಹೆ ನೀಡಿದ. "ಹೇಳಿ ಹೋಗು ಕಾರಣ" ಕಾದಂಬರಿ ಹೀಗೆ ಒಬ್ಬ ಮೆಡಿಕಲ್ ಹುಡುಗಿಯನ್ನು ಓದಿಸಿದ ಒಬ್ಬ ಹಳ್ಳಿಯ ಬಡ ಹುಡುಗನ ದುರಂತ ಜೀವನವನ್ನು ಅಧರಿಸಿರುವಂತ್ತದ್ದು. ಕೆಲವೊಮ್ಮೆ ಸಾಹಿತ್ಯ-ಪುಸ್ತಕಗಳು ಬದುಕಿನಲ್ಲಿ ಎಂಥ  ಭಾವನಾತ್ಮಕ ವಿಚಾರಗಳಿಗೆ ಉತ್ತರವನ್ನು , ಸಮಾಧಾನವನ್ನು ಕೊಡುತ್ತವೆ ಅನ್ನುವುದುಕ್ಕೆ ಇದು ಒಳ್ಳೆಯ ಉದಾಹರಣೆ.

ಈ ಕಾದಂಬರಿಯ ಮೂಲಕ ನಾನು ರವಿ ಬೆಳೆಗೆರೆಯನ್ನು ಬಹಳ ಪ್ರೀತಿಸಿದೆ. ನಾನು ಅವರ ಬಗ್ಗೆ ಇರುವ "ಹಾಯ್ ಬೆಂಗಳೂರು" ಮೂವಿ ನೋಡಿದೆ. ಮುಕ್ತ ಧಾರವಾಹಿಯಲ್ಲಿ ನ್ಯಾಧಿಶರಾಗಿಯು ನೋಡಿದೆ. ಅವರ 'ಓ ಮನಸ್ಸೇ...!" (ಈಗ ಬಂದಾಗಿದೆ) ಪುಸ್ತಕಕ್ಕೆ  ಪ್ರತಿತಿಂಗಳ ಚಂದದಾರನು ಆಗಿಬಿಟ್ಟೆ. ತಾನು ಪ್ರೀತಿಸಿದ ಹುಡುಗಿಗಾಗಿ ೧೭ ವರ್ಷ ಶೂನ್ಯ ಸಂಪಾದನೆಯೊಂದಿಗೆ, ಶೂನ್ಯ ಲೋಕವನ್ನೇ ಸೃಷ್ಟಿಸಿ,ಕುಡಿತ-ಸಿಗರಟ್ ಗೆ ಬಲಿಯಾಗಿಕಳೆದು ಹೋದ ಆಯುಷ್ಯದ ಕುರಿತ  ಅವರ ಜೀವನಗತಿ ಓದಿ ಮರುಕ ಹುಟ್ಟಿತ್ತು

ದುರದೃಷ್ಟ ವಶಾತ್, ಅವರ ಬದುಕಿನ ಪ್ರತಿಯೊಂದು ಘಟ್ಟವನ್ನು ಅವಲೋಕಿಸುವಾಗ ಅವರು ವಯಕ್ತಿಗವಾಗಿ ಬದುಕಿನ  ಮೌಲಿಕ ವಿಚಾರಗಳಲ್ಲಿ ಕೆಲೋಮ್ಮೆ 'ಸರಿಯಲ್ಲ' ಎನ್ನುವ ವಿಚಾರಗಳನ್ನು ಓದಿದ ಮೇಲೆ ನಾನು ಅತಿಯಾಗಿ ನೋವು ಅನುಭವಿಸಿದೆ. ಇವರು ಬರೆಯುವುದಕ್ಕೂ ಇವರು ಇರುವುದಕ್ಕೂ ವತ್ಯಾಸವಿದೆ ಎಂದಾಗ ಅವರ ಸಾಹಿತ್ಯದ ನಂಬಿಕೆ ಕಳೆದುಕೊಂಡದ್ದು ಸತ್ಯ. ಪ್ರತಿಯೊಬ್ಬ ವ್ಯಕ್ತಿ, ಸಾಹಿತಿ ಬರೆದ ಲೇಖನ ಹಾಗೂ ಅವನ ಜೀವನದ ರೀತಿ-ನೀತಿಗಳು ತುಲನಾತ್ಮವಾಗಿರಬೆಕು ಎಂದು ಬಯಸುತ್ತಾನೆ. ಹೀಗಾಗಿ ನನ್ನ ಬದುಕಿನಲ್ಲಿ ಒಂದು  ಹುಚ್ಚು ಕಲ್ಪನೆಗೆ ಉತ್ತರ ನೀಡಿದ ಲೇಖಕ, ಹೆಚ್ಚು ದಿನ ಆದರ್ಶ ಲೇಖಕನಾಗಿ ಇಲ್ಲದಿರುವುದು ದುಖದ ವಿಷಯ.

ಸಿಂಹ... ನನ್ನ ಬದುಕಿನಲ್ಲಿ ಬರೆಯುವುದನ್ನು ಕಳಿಸಿದ ಗುರು. ಎಲ್ಲರು ಬರೆಯುತ್ತಾರೆ, ಎಲ್ಲರು ಮಾತನಾಡುತ್ತಾರೆ...ಆದರೆ ಅದಕ್ಕೊಂದು ಶೈಲಿ ಬೇಕು. ಅದು ಪ್ರತಾಪರಲ್ಲಿದೆ. ಯಾವುದೇ ಲೇಖನ ಓದಲು ಕುಳಿತರೆ... ಲೇಖನವೇ ನಮ್ಮನ್ನು ಓದಿಸುವಂತೆ ಪ್ರೆರಿಪಿಸುತ್ತದೆ.

ರವಿ-ಸಿಂಹ ಜಗಳ ಹೊಸದೇನು ಅಲ್ಲ. ಸಿಂಹದ ನೈತಿಕತೆ, ಮದುವೆಯ ಮುಂಚೆ ಕಾಲು ಕಳೆದು ಕೊಂಡ ಪ್ರೇಯಸಿಯನ್ನು  ಒಂದಿಷ್ಟು ನೋವು ಇಲ್ಲದೆ ಒಪ್ಪಿ ಮದುವೆಯಾಗಿ ಜೀವನ ಮಾಡುತ್ತಿರುವುದು ನನಗೆ ಬಹಳ ಹೆಮ್ಮೆ ಅನಿಸಿತು. ನೈತಿಕತೆಯ ಮುಂದೆ ರವಿ ತಗ್ಗಿ ಹೋದಾಗ, ಸಿಂಹ ನನ್ನ ಹೃದಯದಲ್ಲಿ  ನೆಲೆಸಿದ. ಆದರು ಇಬ್ಬರ ಜಗಳ  ಮಾಡುತ್ತಿರುವುದು ನನಗೆ ಸರಿಯಲ್ಲ ಅನಿಸಿತ್ತು.  'ಗಂಡ-ಹೆಂಡತಿಯ ಜಗಳದಲ್ಲಿ ಕೂಸು ಬಡವಾಯಿತ್ತಂತೆ ' ಅನ್ನುವಂತೆ ಇವರ ಜಗಳ ನನಗೆ ನೋವು ಕೊಟ್ಟಿತ್ತು.  ಕಾರಣ ಇಷ್ಟೇ- ಒಬ್ಬ ಸಾಹಿತಿ ಅಂದಾಗ ಒಳ್ಳೆಯ ನಡತೆ, ಗಾಂಭಿರ್ಯತೆ, ನೈತಿಕ ಸ್ವಚತೆ  ಓದಾಗ ಅಪೇಕ್ಷೆ ಪಡುತ್ತಲಿರುತ್ತಾನೆ. ಇದಕ್ಕೆ ಭಂಗವಾದಾಗ ನೋವು ಸಹಜವೇ.

Tuesday, September 3, 2013

ಹುಬ್ಬಳ್ಳಿ-ಗಿರ್ಮಿಟ್ ಇಲ್ಲದ ಮಾಲ್..!

ಕಳೆದ ತಿಂಗಳು ನಾನು ಹುಬ್ಬಳ್ಳಿಯಲ್ಲಿದ್ದೆ. ನನ್ನ ಗೆಳೆಯನೊಬ್ಬನನ್ನು ಕರೆದುಕೊಂಡು,ಓಯಸಿಸ್  mall ಗೆ ಹೋಗಿದ್ದೆ. ಹುಬ್ಬಳ್ಳಿಯಲ್ಲೇ ಇದು ಮೊದಲ mall ಅನಿಸುತ್ತೆ . ಒಂದೊಂದೇ ಶೋ ರೂಂ ಗಳನ್ನೂ ನೋಡುತ್ತಾ, ಯಾವ ವಸ್ತುವನ್ನು ಕೊಂಡುಕೊಳ್ಳುವ ಆಸಕ್ತಿ ನಮಗಿಲ್ಲದಿದ್ದರು ಪ್ರತಿಯೊಂದು ವಸ್ತುವು ನಮ್ಮದೇ ಅನ್ನುವಂತೆ ನಟಿಸಿದೆವು. ಪ್ಯಾಂಟ್-ಶರ್ಟ್ ಹಾಕಿದೆವು, ಟ್ಯಾಬ್ಲೆಟ್ ಮುಟ್ಟಿ ನೋಡಿ cost  ಎಷ್ಟು? ಬ್ಯಾಟರಿ ಎಷ್ಟು ದಿನ ಬರುತ್ತೆ? ಕ್ರೆಡಿಟ್  ಕಾರ್ಡ್ ಓಕೆ ನಾ ? ಹೀಗೆ ಸುಮ್ಮನೆ ಕೇಳುತ್ತ ಸಾಗಿದುದ್ದು  mall  ಗಳಲ್ಲಿ ಶಾಪಿಂಗ್ ಮಾಡುವ ಸಂಸ್ಕೃತಿಯ ಒಂದು ಭಾಗ. ಅದರಲ್ಲಿ ತಪ್ಪೇನು ಇಲ್ಲ..!

ಆದರೆ, ಹಲವಾರು ಅಂಗಡಿಗಲ್ಲಿ ಹೊಕ್ಕಿ ಹೊರಬರುವಾಗ ನಮ್ಮ ಕೈಯಲ್ಲಿ ಇದ್ದಿದ್ದು ಕೇವಲ ನಮ್ಮದೇ ಮೊಬೈಲ್ ಹಾಗು ಕರ್ಚಿಫ್ ಮಾತ್ರ. ಆದರೆ ಗದ್ದಲ, ಪ್ರತಿ ಮಾತು, ಬೇಡವಾದ ಮ್ಯೂಸಿಕ್, AC  ರೂಂ ನಲ್ಲಿ ಎಡೆಬಿಡದ ನಡೆದಾಟ ಇವುಗಳಿಂದಾಗಿ ಸಂಜೆಯ ಸಮಯದಲ್ಲಿ ಸ್ನಾಕ್ ಬೇಕು ಎಂಬ ಹಂಬಲವಾಗಿ ಸ್ನಾಕ್ ಕಾರ್ನರ್  ನತ್ತ ಹೆಜ್ಜೆ ಹಾಕಿದೆವು.

ಇಂತ mall ವೊಂದು ಇರುವುದು ಹುಬ್ಬಳ್ಳಿಯಲ್ಲಾದರು ಅದರ ವ್ಯವಹಾರ, ಸಿಗುವ ವಸ್ತುಗಳು, ಎಲ್ಲವು ಬೆಂಗಳೂರಿನ mall ಗಳಂತೆ ಇತ್ತು. ಸ್ನ್ಯಾಕ್ ಕಾರ್ನರ್ ಗೆ ಬಂದಾಗ, ಮೆನ್ಯು  ನೋಡಿದರೆ ಅದೇ ಪಿಜ್ಜಾ, ಅದೇ ಕೋಕ್, ಅದೇ ಬ್ರೆಡ್...! ಅದೇ ಮೆನ್ಯು ಮೂರೂ ಬಾರಿ ಓದಿದೆ. ಗೆಳೆಯನಿಗೆ, ಬೆಂಗಳೂರ ಹುಡುಗನ mall  ಒಂದರಲ್ಲಿ  ಸ್ನಾಕ್ಸ್ ಒಂದನ್ನು ಆರ್ಡರ್ ಮಾಡಲಾಗದ ಪರಿಸ್ಥಿತಿಗೆ ನಾಚಿಕೆಯಾಗಿರಬೇಕು.ಅದಕ್ಕೆ, ಅವನು ನನ್ನತ್ತ ತಿರುಗಿ, " ಎನಲೇ, ಒಂದು ಸ್ನಾಕ್ ಆರ್ಡರ್ ಮಾಡಕ್ ಬ್ಯಾಂಕ್ ಅಗ್ರಿಮೆಂಟ್ ಒಂದರ terms and conditions ಕಾಗದ ಓದಿದ ಹಾಗೆ ಒದತ್ತ ಇದ್ದೀಯಲ್ಲ? ಪಿಜ್ಜಾ ಆರ್ಡರ್ ಮಾಡನವ?" ಎಂದ.

ನಾನು ಮೆನ್ಯುನಲ್ಲಿ ಹುಡುಕುತಿದ್ದದ್ದು ಗಿರ್ಮಿಟ್..! ಮೆನ್ಯುನ ಕೊನೆಯ ಹಾಳೆಯ ತನಕ ತಲುಪಿದರು ಗಿರ್ಮಿಟ್ ಇರಲೇ ಇಲ್ಲ.  ಆಮೇಲೆ, ಸ್ನಾಕ್ಸ್ ಕೊಡುವವರನ್ನೇ ಗಿರ್ಮಿಟ್ ಕೊಡಿ ಎಂದು ಬೇಡಿಕೆಯನ್ನೇ ಇಟ್ಟೆ. ಹುಚ್ಚು ಮಂಗ್ಯ ಪೇಟೆಗೆ ಬಂದಿದೆ ಎನ್ನುವಂತೆ, " ಇದು mall ಸರ್ ... ಇಲ್ಲಿ ಗಿರ್ಮಿಟ್ ಇಡಲಿಕ್ಕೆ ಆಗತ್ತಾ..?!...ಪಿಜ್ಜಾ ಇದೆ ನೋಡಿ ಸರ್.." ಎಂದು ತಮ್ಮ ಬರದ ಇಂಗ್ಲಿಷ್-ಫ್ರೆಂಚ್ ಹೆಸರುಗಳನ್ನು ದಡ-ದಡ ಎಂದು ಒಸೆರಿದರು. ನನಗೆ ಅವರ ಮಾತು ಕೇಳಿ ನಗುಬಂತು... " ನೋಡಿ, ಪಿಜ್ಜಾ ಬೆಂಗಳೂರಿನಲ್ಲೂ ಸಿಗುತ್ತೆ, ಮಂಗಳೂರಿನಲ್ಲೂ ಸಿಗುತ್ತೆ...ಆದರೆ ಗಿರ್ಮಿಟ್ ಇಲ್ಲೇ ಸಿಗುದು... ಕರಾವಳಿಯಲ್ಲಿ ಮೀನು, ದಾವಣಗೆರೆಯಲ್ಲಿ ಬೆಣ್ಣೆ ದೋಸೆ, ಮಂಡ್ಯದಲ್ಲಿ ಮುದ್ದೆ,  ಧಾರವಾಡದಲ್ಲಿ ಪೇಡ, ಬೆಳಗಾಂ ದಲ್ಲಿ ಕುಂದ, ಗೋಕಾಕದಲ್ಲಿ ಕರದಂಟು..ಇರಲೇ ಬೇಕು. ಅದು ಲೋಕಲ್ ಐಟಂ ಅಂತ ನೀವು  ಮಾಲ್ ದಲ್ಲಿ ಇಡ್ತಾ ಇಲ್ಲ ಅಷ್ಟೇ? ಆದರೆ ನೀವು ಲೋಕಲ್ ಜನ ತಾನೇ?"  ಇಷ್ಟು ಹೇಳಿದ ಮೇಲೆ, ಅವನ ಬಾಯಿ ಸಣ್ಣದಾಯಿತು..."ಆದರೂ.. ರೂಲ್ ಪ್ರಕಾರ ಇಡಲಿಕ್ಕೆ ಆಗಲ್ಲ ಸರ್..." ಎಂದಾಗ ಎಲ್ಲಿಲ್ಲದ ಅಸಹನೆ ಮೂಡಿತ್ತು. "ನೀವು ಲೋಕಲ್ ಮಂದಿಯಾಗಿ...ಲೋಕಲ್ ಪ್ರಾಡಕ್ಟ್ ಪ್ರೋತ್ಸಾಹ ಕೊಡದಿರುವುದು ಸರಿಯಲ್ಲ.ನಿಮಗೆ ಅಭಿಮಾನವಿರಬೇಕಿತ್ತು" ಎಂದಾಗ , "next  ಟೈಮ್ ಟ್ರೈ ಮಾಡ್ತಿವಿ ಸರ್" ಎಂದು ಹೇಳಿದ. ಗೆಳೆಯನ ಸಲಹೆಯ ಮೇರೆಗೆ ಪಿಜ್ಜಾ ತಿಂದು, ಕೊಕ್ ಕುಡಿದು ಹೊರಬಂದೆ.

ಆದರೆ, ಇಲ್ಲಿ ಪ್ರಶ್ನೆ " ನಾನು ಹೀಗೆ ಪ್ರಶ್ನೆ ಮಾಡಿದೆ" ಅನ್ನುವುದಲ್ಲ. ಬದಲಾಗಿ ನಮ್ಮ ಲೋಕಲ್ ಅನಿಸಿಕೊಂಡಿರುವ ವಸ್ತು ಸ್ಥಿತಿಗಳ ಬಗ್ಗೆ ನಮ್ಮ ಜನಕ್ಕೆ ಸ್ವಲ್ಪವೂ ಅಭಿಮಾನ ಇಲ್ಲ ಯಾಕೆ? ಬೇರೆ ದೇಶದಿಂದ ಬಂದದೆಲ್ಲ ಅಮೃತ ಅಂತ ಭಾವಿಸುತ್ತರಲ್ಲ? ಗಿರ್ಮಿಟ್ ಏನು ಪಿಜ್ಜಾ ಗಿಂತ ಕಡಿಮೆಯೇ? ಒಂದು ನೆನಪಿಟ್ಟು ಕೊಳ್ಳಿ...."ಒಂದು ಕಡಿಮೆಯ ಬೆಲೆಯ ಪಿಜ್ಜಾ ಬೆಲೆಯಿಂದ ೧೦ ಜನ ಗಿರ್ಮಿಟ್ ತಿನ್ನಬಹುದು". ದೇಶಿಯ ಮಾರುಕಟ್ಟೆಗೆ ಉತ್ತೇಜನ ನಿಡದಿರುವ ಪರಿಣಾಮವಾಗಿಯೇ ಎಂದು ರುಪಾಯಿ ಕುಸಿಯುತ್ತಿರುವುದು. ವಿದೇಶಿ ವಸ್ತುಗಳ ಹಿಂದೆ ನಾವು ಹೋಗುವುದರಿಂದ ನಮ್ಮ ಹಣ ವಿದೇಶಿಗರ ಹಿಂದೆ ಹೋಗುತಿದೆ.

Saturday, August 31, 2013

ಬೆಂಗಳೂರಿ"ನಲ್ಲೇ" ಸೆಟ್ಲ್ ಆಗ್ತಿರಾ?

ಬೆಂಗಳೂರು ಅಭಿವೃದ್ದಿಗೆ  ಹಲವಾರು  ಸಂಸ್ಥೆಗಳಿವೆ :ಬೆಂಗಳೂರು ಮಹಾನಗರ ಪಾಲಿಕೆ ಹಾಗೂ BDA ಇರುವುದು ನಿಮಗೆಲ್ಲ ಗೊತ್ತೇ ಇದೆ. ಆದರೆ ಅದಕ್ಕಿಂತಲೂ ಹೆಚ್ಚಾಗಿ ಬೆಂಗಳೂರಿನ ಕುರಿತಾಗಿ ಸಮಗ್ರವಾಗಿ(a  holistic approach  in thinking ) ಯೋಚಿಸುವ ವ್ಯಕ್ತಿಗಳು ಎಂದರೆ ಹೊಸದಾಗಿ ಬೆಂಗಳೂರಿಗೆ ಬಂದು ಜೀವನ ಸಾಗಿಸಬೇಕು ಎಂದು ಕೊಂಡವರು. ನನ್ನ ಅನುಭವದಿಂದ ಹೇಳುವ ಮಾತೆಂದರೆ, ಇಂಥ ಹೊಸ ವ್ಯಕ್ತಿಗಳು ಬೆಂಗಳೂರಿನ ಭವಿಷ್ಯದ ಬಗ್ಗೆ ಬಹಳ ಯೋಚನೆ ಮಾಡುತ್ತಾರೆ ಅನಿಸುತ್ತದೆ.

ನನಗೆ ಮೊದಲಿಂದಲೂ ಬೆಂಗಳೂರಿನ ಬಗ್ಗೆ ಒಳ್ಳೆಯ ಅಭಿಪ್ರಾಯವಿರಲಿಲ್ಲ. ಅದಕ್ಕೆ ಕಾರಣ, ಹಳ್ಳಿಯಲ್ಲಿ  ಏಳೆಂಟು ಎಕರೆ ತೋಟ-ಗದ್ದೆಗಳಲ್ಲಿ ಓಡಾಡಿ ಕೊಂಡು ಬೆಳದು, ಊರಿನ ಯಾವ ಮನೆಯ ಒಲೆಯ ಮೇಲಿನ ಅನ್ನವಾದರು ಪರವಾಗಿಲ್ಲ ಎನ್ನುವಂತೆ ಬೆಳೆದು,  ಬೆಂಗಳೂರಿನ ೬ x  ೩ ಅಡಿ ಜಾಗದಲ್ಲಿ ಜೀವನ ಮಾಡಬೇಕು ಅಂದರೆ ಹೇಗೆ ಸಾಧ್ಯ? ಆ ಮನಸ್ಸು ಹೇಗೆ ಕುಗ್ಗಿಸಬೇಕು? ನೂರಾರು ಅಡಿ ರಸ್ತೆಗಳಿದ್ದರೂ ಬೈಕ್ ಓಡಿಸಲು ಬೇಕಾದ ೨ ಅಡಿಗೂ ಗುದ್ದಾಡಬೇಕು..:! 

ಹಾಗೆಂದು ಬೆಂಗಳೂರಿಗೆ ಬಂದ ಮೊದಲ ದಿನ ಒಂದು ವಿಶೇಷ ಅನುಭವವೇ... ನಾನು ರಾಜಧಾನಿ ನಗರಿಯಲ್ಲಿ ಓಡಾಡುತ್ತಿದ್ದೇನೆ ಎನ್ನುವುದು ಒಂದು ರೀತಿಯಲ್ಲಿ (ಹಳ್ಳಿಯಲ್ಲಿ) ಗೌರವದ ವಿಷಯ. ಇನ್ನು ನನ್ನ ಹಿತೆಶಿಗಳಿಗೆ ಬೆಂಗಳೂರಿಗೆ ಹೋಗುತ್ತೇನೆ ಅಂದಾಗ, "ಹೌದಾ, ಬೆಂಗಳೂರಿನಲ್ಲಿ ಇದ್ದೀರಿ ಅಂದ್ರೆ.... ನಿಮಗೆ ಕನ್ಯಾ ದಾನ ಮಾಡುವರ ಸಂಖ್ಯೆ ಕೂಡ ಹೆಚ್ಚಾಗುತ್ತೆ...!" ಎಂದು ಹಾಸ್ಯ ಚಟಾಕಿಯನ್ನೇ ಹಾರಿಸಿದ್ದರು. ಬೆಂಗಳೂರಿನ ಫ್ಲೈಓವರ್ ಗಳ ಮೇಲೆ  AC ಬಸ್ಸಿನಲ್ಲಿ ಓಡಾಡುವಾಗ ಸುಖವೇ ಬೇರೆ. ರಸ್ತೆಯ ಪಕ್ಕದಲ್ಲಿ ನಿಲ್ಲಿಸಿರುವ ಬಿಲ್ ಬೋರ್ಡ್ಸ ಗಳು, ವಿವಿಧ ದೀಪಾಲಂಕರಗಳು  ನೋಡುವಾಗ ಅದ್ಭುತ ಸೌಂದರ್ಯ ಲೋಕದ ಅನುಭವಾಗುತ್ತದೆ. AC  ಶಾಪಿಂಗ್ ಮಾಲ್ ಗಳು, ಸ್ವಿಚ್ ಒತ್ತಿದರೆ ಸಿಗುವ ಕಾಫಿ, ಕೈ ಹಿಡಿದರೆ ನೀರು ಬಿಡುವ ನಲ್ಲಿಗಳು ಎಲ್ಲವು ವಿಶೇಷವೇ..!

ಆದರೆ, ವಾರವೊಂದು ಕಳೆಯುತ್ತಿದ್ದಂತೆ ಬೆಂಗಳೂರು ಎಂದರೆ ಏನು? ರಾಜಧಾನಿಯ ಅಂತರಾಳದ ನೋವು ಏನು ಎನ್ನುವುದು ತಿಲಿಯಲಾರಮ್ಬಿಸಿತು. ಮೂಗನ್ನು ಪ್ರವೇಶ ಮಾಡುತ್ತಿರುವ ಧೂಳು ಕಣ್ಣಗಳು,ಕಿವಿಯನ್ನು ಕೆಂಗಡಿಸುತ್ತಿರುವ ವಾಹನಗಳ ಶಬ್ಧ, ಎತ್ತಿ-ಎತ್ತಿ ಬಿಸಾಡುವ ವಾಹನದ ಗಾಲಿಗಳು-ಕೆಟ್ಟಿರುವ ರಸ್ತೆಗಳು, ಮಾತನಾಡದ ಜನಗಳು, ಟ್ರಾಫಿಕ್ ನಲ್ಲಿ ಸಿಕ್ಕಿ ಹಾಕಿಕೊಂಡಿರುವ ಆಂಬುಲೆನ್ಸ್ ಗಳು, ರಸ್ತೆಯಲ್ಲಿ ಹರ ಸಾಹಸ ಮಾಡುತ್ತಿರುವ ಟ್ರಾಫಿಕ್ ಪೋಲಿಷ್ ಗಳು, ರಸ್ತೆಗಿಳಿದು ಕೆಲಸ ಹಗಲು-ರಾತ್ರಿ ದುಡಿಯುವ BBMP ನೌಕರು, ಕೆಟ್ಟ ವಾಸನೆಯಿಂದ ಸಹನೆಯನ್ನೇ ಪ್ರಶ್ನಿಸುವಂತ  ಕಸದ ರಾಸಿಗಳು, .....<removed>, ಈ ಜಗತ್ತೇ ತಮಗೆ ಸಂಬಂಧವಿಲ್ಲದಂತೆ AC ಬಸ್ಸಿನಲ್ಲಿ ಕಿವಿಗೆ earphone  ತುರುಕಿ, ಕಣ್ಣುಗಳನ್ನು ಮೊಬೈಲ್ ಸ್ಕ್ರೀನ್ ಗೆ ನಾಟಿಸಿ ಕುಳಿತುಕೊಳ್ಳುವ ಯೌವನದ ಯುವಕ-ಯುವತಿಯರು.... ಹೀಗೆ ಸಾವಿರಾರು ಬಗೆಯ ದೃಶ್ಯಗಳು ನಿತ್ಯ ಇಲ್ಲಿ ಲಭ್ಯ.

ಬೆಂಗಳೂರು ನಗರದಲ್ಲಿ ಬದುಕು ಒಂದು ವಿಪರ್ಯಾಸದ ಸಂಕೇತ. ಬಸ್ಸುಗಳಲ್ಲಿ ಹತ್ತಿದರೆ ಆಸನ ಸಿಕ್ಕೀತು ಎನ್ನುವ ಭರವಸೆ ಇಲ್ಲ. ಜನ ಜನ್ಗಳುಲಿಯ ಮಧ್ಯೆ ಯಾರು ಮೊಬೈಲ್, ಪಾಕೆಟ್ ಗೆ ಕೈ ಹಾಕುತ್ತಾರೆ ಅನ್ನುವ ವಿಚಾರದಲ್ಲೇ ತಲೆ ಕೆಡಿಸಿ ಕೊಂಡಿರಬೇಕು. ಅದರಲ್ಲೂ ಈ BMTC  ಕಂಡಕ್ಟರ್ ಗಳು ಕೊಡಬೇಕಾದ ಚಿಲ್ಲರೆ ಹಣವನ್ನು  ಟಿಕೆಟ್ ಮೇಲೆ  ಬರೆದು ಕೊಟ್ಟರೆ ಅಂದರೆ ಬಹಳ  ಗಮನದಲ್ಲಿ ಇಟ್ಟು ಕೊಂಡಿರಬೇಕು. ಒಂದೊಮ್ಮೆ  ಇಳಿಯುವ  ಸ್ಥಳದ ಕುರಿತಾದ ಚಿಂತೆ, ಟ್ರಾಫಿಕ್ ಕಿರಿ ಕಿರಿ ಮಧ್ಯೆ ನಿವೇನಾದರು ಚಿಲ್ಲರೆ ಹಣ ಮರೆತಿರೋ... ಕೃಷ್ಣಾರ್ಪಣ ಅನ್ನಬೇಕು ಅಷ್ಟೇ. ರಾತ್ರಿ ೯ ಗಂಟೆಯಾಗಿದೆ ಅಂದರೆ ಗಂಡಸರಾದ  ನಮ್ಮಂತವರಿಗೂ ನಡೆದಾಡಲು ಒಳ್ಳೆಯ ನಗರ ಅಲ್ಲ. ಕುಡುಕ ಪುಂಡರ ಮಧ್ಯದಲ್ಲಿ ಒಮ್ಮೆ ಸಿಕ್ಕಿ ಹಾಕಿಕೊಂಡು ನಾನು ಹಾಗೂ ನನ್ನ ಗೆಳೆಯರು ಕಸಿ-ವಿಸಿ ಅನುಭವಿಸಿದ್ದೇವೆ.

ಬೆಂಗಳೂರು ನಗರದಲ್ಲಿ ಇರುವುದು ಹಣ ಮಾತ್ರ; ಮಾನವೀಯತೆಗೆ ಬೆಲೆ ಇಲ್ಲ; ನೀರು ಇಲ್ಲ; ರಸ್ತೆಗಳು ಸಾಕಾಗುತ್ತಿಲ್ಲ; ವಿಸ್ತಾರವಾದ ಮನೆಗಳಿಲ್ಲ. ಹಾಗೆಂದು ಎನೂ ಇಲ್ಲವೆಂದು ಹುಬ್ಬೇರಿಸಲು ಹೋಗಬೇಡಿ...! ೨೦೦ ಇಂಜಿನಿಯರಿಂಗ್ ಕಾಲೇಜ್ ಗಳಿವೆ, ವಿಧಾನ ಸೌಧವಿದೆ, ಸರ್ಕಾರದ ಸಂಸ್ಥೆಗಳಿವೆ, ಸಾಂಸ್ಕೃತಿಕ ನೆಲೆಯಲ್ಲಿ ಹುಟ್ಟಿರುವ ಪುರಭವನದಂತ ಸ್ಥಗಳಿವೆ, ರಾಜ-ಮಹಾರಾಜರ ನೆನಪಿನ ಅರಮನೆ ಇದೆ; ದೇಶದ ಪ್ರತಿಷ್ಥಿತ DRDO , ಇಸ್ರೋ ದಂತಹ ಸಂಸ್ಥೆಗಳಿವೆ,   ಸಾವಿರಾರು ಹೋಟೆಲ್ ಗಳಿಗಳಿವೆ, ಸಕಲ ಸೌಲಭ್ಯದಿಂದೊದಗುಡಿದ ಆಸ್ಪತ್ರೆಗಳಿವೆ. ಆದರೆ ಇವೆಲ್ಲ ಇದ್ದು  ಕಣ್ಣಿಗೆ ಕಾಣುತ್ತಿದ್ದರೂ, ಅತಿ ಕಡಿಮೆ ದೂರದಲ್ಲಿದ್ದರು ವಾಹನ ಸಂದಣಿಯ ಮಧ್ಯೆ ಯಾವುದು ಕೂಡ ಸರಳವಾಗಿ ಲಭ್ಯವಾಗುವಂತದಲ್ಲ. ಕೆಲವೊಮ್ಮೆ, ಗುಯಂ ಗುಯಂ ಎಂದು ಹಾರ್ನ ಮಾಡುತ್ತ ಟ್ರಾಫಿಕ್ ನ ಮಧ್ಯೆ ಸಿಕ್ಕಿ ಹಾಕಿಕೊಂಡು ಒದ್ದಾಡುವ ಆಂಬುಲೆನ್ಸ್ ಗಳನ್ನೂ ನೋಡಿದಾಗ, ನಗರದಿಂದ ೫೦ ಕಿಮಿ ದೂರದಲ್ಲಿ ಇರುವ ನಮ್ಮ ಹಳ್ಳಿಯ ಜನ ಬೆಂಗಳೂರಿನ ಜನಕ್ಕಿಂತಲೂ ಬೇಗ ಆಸ್ಪತ್ರೆಗೆ ತಲುಪತ್ತಾರೆ ಅನಿಸುತ್ತದೆ.

ಬೆಂಗಳೂರಿನಲ್ಲಿ ಪೂರ್ಣವಾಗಿ ಸೆಟ್ಲ್ ಆಗಬೇಕು ಅಥವಾ ಆಗುತ್ತಿರುವ ನನ್ನ ಸಹೋದ್ಯೋಗಿಗಳ ವಿಷಯಗಳನ್ನು ತಿಳಿದಾಗ ಬಹಳ ಸಾರಿ ನಾನು ಏನು  ಮಾಡಬೇಕು ಎಂದು ಪ್ರಶ್ನಿಸಿ ಕೊಂಡಿದ್ದೇನೆ.ಬೆಂಗಳೂರಿನಲ್ಲಿ ಒಂದು ಸಾಮಾನ್ಯ ಅರ್ಧ ಹಳ್ಳಿಯನ್ನೇ ಕೊಂಡುಕೊಳ್ಳಬಹುದಾದಷ್ಟು ಹಣವನ್ನು 35 x 40 ಸೈಟ್ ಗೆ ಸುರಿಯ ಬೇಕು. ಅದರ ಜೊತೆಗೆ ತಮಿಳುನಾಡು-ಕರ್ನಾಟಕ ಪ್ರೀತಿಯಿಂದ ವರ್ತಿಸಿದರೆ, ವರುಣ ದೇವನು ಕೃಪೆ ತೋರಿಸಿದರೆ ಮಾತ್ರ ನೀರು..ಇಲ್ಲಾಂದರೆ ಬೆಂಗಳೂರು ಥಾರ್ ಮರುಭೂಮಿಯೇ..! ಬೈಕ್ ನಲ್ಲಿ ಓಡಾಡುವುದು ಕಷ್ಟ.. ಕಾರಗೆ ರಸ್ತೆಯು ಇಲ್ಲ; ಪಾರ್ಕಿಂಗ್ ಜಾಗವು ಇಲ್ಲ. ಟ್ರಾಫಿಕ್ ಮಧ್ಯೆ ಸಿಕ್ಕಿ ಹಾಕಿಕೊಂಡು ಕೋಪಗೊಂಡು, "ಬಿಡ್ರಲೇ ನನ್ನ" ಅನ್ನುವುದರ  ಪರಿಣಾಮವಾಗಿ "BDA " ಎಂಬ ಶಬ್ಧ ಬಂದಿದೆಯೋ ಏನೋ !

ಬೆಂಗಳೂರಿನ ಪರಿಸ್ಥಿಗೆ ಉತ್ತರವಿಲ್ಲ. ಇಲ್ಲಿಯ ಬದುಕು ಪೂರ್ಣವಾಗಿ ಪೆಟ್ರೋಲಿಯಂ  ಹಾಗೂ ವಿದ್ಯುತ್ ಮೇಲೆ ಆಧಾರಿತ(ಎಲ್ಲ ನಗರಗಳು ಅಷ್ಟೇ). ಆದರೆ ಪೆಟ್ರೋಲಿಯಂ ಅಗಲಿ ವಿದ್ಯುತ ಅಗಲಿ ಯಾವತ್ತು ಸಿಗುತ್ತಲೇ ಇರುವ ವಸ್ತುಗಳಲ್ಲ. ಇದರಿಂದಾಗಿ ಕೆಲವೇ ವರ್ಷಗಳಲ್ಲಿ $ ಏರು ಮುಖ, ಎಣ್ಣೆಯ ಅತಿ ಹೆಚ್ಚು ಕರ್ಚುಗಳಿಂದ ಬೆಂಗಳೂರಿನ ಜೀವನ ಬಹಳ ಕಷ್ಟವಾಗಲಿದೆ ಅನ್ನುವ ಒಂದು ಲೆಕ್ಕಾಚಾರ ಕೂಡ ನನ್ನ ತಲೆಯಲ್ಲಿದೆ. ಅದರಲ್ಲೂ, "Small is Beautiful" ಪುಸ್ತಕದ ಕೆಲವು ಹಾಳೆಗಳನ್ನು ತಿರುವಿ ಹಾಕಿದಾಗ ಮಾನವ ಜಗತ್ತು  ಅತಿ ಹೆಚ್ಚಾಗಿ ನವಿಕರಿಸಲಾಗದ ಶಕ್ತಿಗಳ ಮೇಲೆ ಅವಲಂಬಿಸಿರುವುದರ ಪರಿಣಾಮವಾಗಿ ನೋವು ಕಟ್ಟಿಟ್ಟ ಬುತ್ತಿ ಎನ್ನುವುದು ಅರಿವಿಗೆ ಬಂದಿದೆ.

ಬೆಂಗಳೂರಿನ ಸಮಸ್ಯೆಗಳಿಗೆ ಜನ-ಸರ್ಕಾರಗಳು ಬಹಳ ಉಪಾಯ-ತಂತ್ರಜ್ಞಾನ ಕಂಡುಕೊಂಡಿರುವುದಂತು ನಿಜ. ಅಗಲವಾದ ರಸ್ತೆಗಳು, ಫ್ಲ್ಯವೆರ್ ಗಳು, ಮೆಟ್ರೋ, ಅಪಾರ್ಟ್ ಮೆಂಟ್ ಗಳು. ಆದರೆ ವರುಣ ಅವಕೃಪೆ ಯಾದರೆ ಉತ್ತರ ವಿದೆಯೇ? ಮಳೆಯಿಲ್ಲದಿದ್ದರೆ ಬೆಂಗಳೂರಿಗೆ ಯಾವ ತಂತ್ರಜ್ಞಾನವು ನೀರು ತರಲಾರದು. ಅತಿ ಮಳೆ, ಭೂಕಂಪನ ದಂತ ಸಣ್ಣ  ಸಣ್ಣ ವಿಷಯಕ್ಕೂ ನಗರದ ಜೀವನ ಅಸ್ತವ್ಯಸ್ತ ಗೊಳ್ಳುತ್ತದೆ. ಒಂದೊಮ್ಮೆಇಡಿ ನಗರ ಮರು ನಿರ್ಮಾಣ ಮಾಡಬೇಕಾದಾರೆ  ಊಹಿಸಿ ಕೊಳ್ಳಲು ಸಾಧ್ಯವಾಗದಷ್ಟು ನೋವು ಇಲ್ಲಿ ಬರಲಿದೆ. ಹಾಗೆ ಆಗದೆ ಇರಲಿ ಅನ್ನೋದೇ ನನ್ನ ಆಶಯ. ಆದರೆ ಸರ್ಕಾರಗಳು  ಸರಿಯಾಗಿ ಗಮನ ಹರಿಸದಿದ್ದರೆ, ಅಮೆರಿಕಾದ ಡೆಟ್ರಾಯಿಟ್ ನಗರದಂತೆ ಬೆಂಗಳೂರಿನ ಸ್ಥಿತಿ ತಲುಪುದಂತು ನಿಜ.

ಹೀಗೆ ಸಾವಿರಾರು ಸಮಸ್ಯೆಗಳನ್ನು ನಾನು ಪಟ್ಟಿ ಮಾಡಬಲ್ಲೆ. ಆದರೆ ನನ್ನ ಹಾಗೆ ಸಾವಿರಾರು ಜನ ಬೆಂಗಳೂರಿನಲ್ಲಿ ಇಲ್ಲವೆ? ಅದರ ಜೊತೆಗೆ ನಾನೇ ಕೆಲವು ವಾಕ್ಯಗಳನ್ನು ಜೋಡಿಸಿ ಕೊಂಡಿದ್ದೇನೆ, "ಕೋಟಿಗಟ್ಟಲೆ ಜನ ಇರುವ ನಗರಕ್ಕೆ ನಾನೊಬ್ಬ ಭಾರವೇ?", "ಹುಟ್ಟಿಸಿದ ದೇವರು ಹುಲ್ಲು ಮೇಯಿಸಿಯನೆ?(ದೇವರು ನನಗೂ ಇಲ್ಲಿ ಒಂದು ಮನೆ ಕೊಟ್ಟಾನು)," ನೂರು ವರ್ಷದ ಬಾಳುವೆಗಾಗಿ ಇಷ್ಟೊಂದು ಚಿಂತೆಯಾಕೆ?". ಹೀಗೆಲ್ಲ ಯೋಚಿಸಿ...ಕೊನೆಗೂ ನಾನು ಬೆಂಗಳೂರು ನನ್ನದಲ್ಲ ಅನ್ನುತ್ತಲೇ ನಾನು ಬೆಂಗಳೂರಿನವನಾಗುತ್ತಿದ್ದೇನೆ. ಬೆಂಗಳೂರಿಗೆ ಬಂದು ೯ ತಿಂಗಳು ಕಳೆದಿವೆ(ನವ ಮಾಸ ತುಂಬಿದೆ).

ಹುಟ್ಟೂರು ದೂರ ಉಳಿಯಿತು;ಉಡುಪಿ  ಮರೆಗೆ ಸರಿಯಿತು; ಹೊಸ ಬದುಕು-ಹೊಸ ಕಲ್ಪನೆ. ಜೀವನಕ್ಕೆ user guide, reference guide ಇರಲ್ಲ ನೋಡಿ. ಬದುಕು ಹೇಗಾದರೂ ನಡಿತನೇ ಇರುತ್ತೆ... ಏನಂತಿಯ ಮಗಾ? ಆದರೆ, ನನ್ನ ದೊಡ್ಡ ಚಿಂತೆ, "ನೀವು  ಬೆಂಗಳೂರಿ"ನಲ್ಲೆ" ಸೆಟ್ಲ್ ಆಗ್ತಿರಾss...?!" ಅಂತ ಕೇಳ್ತಾರಲ್ಲ... ಅವರಿಗೆ ಏನು ಹೇಳುದು? ಹೇಗೆ ಹೇಳುದು?

Thursday, August 22, 2013

ಒಂದು ವರ್ಷ..!

ಇವತ್ತು ನನ್ನ ಈ ಕನ್ನಡ ಬ್ಲಾಗ್ ಗೆ ಒಂದು ವರ್ಷ..! 

ಅಂಗಡಿಯವನಿಗೆ  ಗಿರಾಕಿ, ಮಠಕ್ಕೆ ಸ್ವಾಮಿ,ದೇಶಕ್ಕೆ ರಾಜಕಾರಣಿ, ಭೂಮಿಗೆ ರೈತ ಇರುವಂತೆ  ಒಬ್ಬ ಬರಹಗಾರನಿಗೆ ಓದುವ ಒಬ್ಬ ಓದುಗ ಬೇಕೇ ಬೇಕು. ಹಾಗಾಗಿ ನನ್ನ ಓದುಗ ಮಿತ್ರರಿಗೆ  ಬರಹಗಳನ್ನು ಸರಿಯಾಗಿ,ಕನಿಷ್ಠ ಪ್ರಯತ್ನದಿಂದ ಓದುವಂತೆ ಸಹಾಯವಾಗಲು ನನ್ನ ಬ್ಲಾಗ್  www.heartwaves4u.blogspot.in ಆದರದಿಂದ ಸ್ವಾಗತಿಸುತ್ತಿದೆ. 'ಓದುಗ' ಗಿರಾಕಿಗೆ ನನ್ನ ನಮಸ್ಕಾರಗಳು. ಒಬ್ಬನು ಬಂದು ನನ್ನ ಬರಹ ಓದಬೇಕು ಎಂಬ ತುಡಿತ, ಬಯಕೆ ಒಬ್ಬ ಬರಹಗಾರನಿಗೆ ಇರುವ ಅತಿ ದೊಡ್ಡ ಹುಚ್ಚು. ಅದರಲ್ಲೂ ನಾನು ಬರೆಯುವುದು ಹಣಕ್ಕಾಗಿಯಲ್ಲ; ಬರಹದ  ಜೊತೆ ನೋವು ಇದೆ, ಆಕಾಂಕ್ಷೆ ಇದೆ; ಹುಚ್ಚು ಕಲ್ಪನೆಗಳಿವೆ. ಇಂಥದೊಂದು ಮನಸ್ಸಿನ ತುಡಿತವನ್ನು ತೆರೆದಿಡುವುದಕ್ಕೆ  ಬರಹಕ್ಕಿಂತ ಒಳ್ಳೆಯ ದಾರಿಯವುದು ನನಗೆ ಕಾಣದು.

ನಾನು ಬರೆಯಲು ಸುರು ಮಾಡಿ ನಾನು ನೌಕರಿಗೆ ಸೇರಿದಷ್ಟೇ ವರ್ಷಗಳು(೬ ವರ್ಷಗಳು) ಆಗಿ ಹೋದವು. ಮೊದಲು ಡೈರಿ ಎಂದು ನೋಟ್ ಬುಕ್ ಮೇಲೆ ಗಿಚುತಿದ್ದೆ. ಅದರಲ್ಲಿ ಅಮ್ಮ ನಿಂದ ದೂರ ಬಂದ ದುಖ, ಹೋಂ ಸಿಕ್ನೆಸ್ಸ್ , ಮೊದಲ ಕೃಷ್, ಗೆಳೆಯರ-ಆಫೀಸ್ ನಲ್ಲಿ ನಡೆದ ಯಾವುದೇ ಸಣ್ಣ ನೋವಿನ ಸಂಗತಿಯಿದ್ದರು ದಾಖಲಿಸುತಿದ್ದೆ. ಆದರೆ ಅದೊಂದು ದಿನ  ಡೈರಿ ತಿರುವಿಹಾಕಿದಾಗ, ನಾನೇ ನನ್ನ ಬರಹಕ್ಕೆ ಹೌಹಾರಿದೆ. ಒಂದೊಮ್ಮೆ ನಾನು ಬದುಕಿರುವಾಗಲೇ ಯಾರಾದರು ಡೈರಿ ಓದಿದರೆ, ತೀರ ನನ್ನ ವಯಕ್ತಿಕ ಅನಿಸುವ ವಿಷಯಗಳು ನನ್ನ ಕೈ ಬರಹದಲ್ಲೇ ಮೊತ್ತೊಬ್ಬ ಓದಿದರೆ ಬಹಳ ಅಸಹ್ಯ ಅನಿಸಲಾರದೆ ? ಅದನ್ನೇ ನಮ್ಮ ವಿಕ್ನೆಸ್ಸ್ ಎಂದು ಜನ ಭಾವಿಸಲಾರರೆ ? ಗಲಿಬಿಲಿಯಾದೆ. ಒಂದು ದಿನ ಡೈರಿ ಬೆಂಕಿಗೆ ಅಹುತಿಯಾತು. ಅಲ್ಲಿಗೆ ಬದುಕಿನ ಕುರಿತಾಗಿ ಸಿಲ್ಲಿಯಾಗಿ ಬರೆಯುವುದನ್ನು ನಿಲ್ಲಿಸಿದೆ. ಆದರು ಮನಸ್ಸು ಕೇಳಬೇಕಲ್ಲ. ಅದಕ್ಕೆ ಬ್ಲಾಗ್ ಒಂದನ್ನು ಸುರು ಮಾಡಿದೆ.

ಆದರೆ  ಬ್ಲಾಗ್ ವೊಂದನ್ನು ತೆರೆದು, ಪಬ್ಲಿಕ್ ಆಗಿ ನನ್ನ ಬರಹ ನೀಡುವುದಕ್ಕೆ ಹೆದರಿಕೆಯಾಗಿತ್ತು. ನಾನು ಆಡುವ ಭಾಷೆ, ನನ್ನ ಅಕ್ಷರ ತಪ್ಪುಗಳು, ಯಾವುದೇ ಒಂದು ವಿಷಯವೆಂದಾಗ ಅಲ್ಲಿ ಭಿನ್ನಾಭಿಪ್ರಾಯಗಳು ಏಳುತ್ತವೆ, ಅಂತ ಸಮಯದಲ್ಲಿ ಹೇಗೆ ಬಗೆಹರಿಸಲಿ ಅನ್ನುವ ತೊಡಕು  ನನ್ನನ್ನು ಅಡಗಿಕೊಂಡಿರುವಂತೆ ಮಾಡಿತು.ನಾನು ಪರಿ ಪೂರ್ಣ ವ್ಯಕ್ತಿಯಾದಾಗ ಬರೆದರಾಯಿತು ಎನ್ನುವ ಕಲ್ಪನೆ ಇತ್ತು. ಆದರೆ ೧೬ ವರ್ಷಗಳ ಶಿಕ್ಷಣ ಮುಗಿಸಿ, ೬ ವರ್ಷಗಳೇ ಸಂದು ಹೋದರು ಪರಿಪೂರ್ಣತೆ ಅದೆಷ್ಟೋ ದೂರದಲ್ಲಿ ಇದೆ..! ಬಹುಶ: ಎಲ್ಲಿ ಆಕಾಶ ಭೂಮಿಯನ್ನು ಸಂಧಿಸುತ್ತದೋ ಅಲ್ಲಿರಬಹುದೋ ಏನೋ ? ಆದರೆ, facebook  ಮೂಲಕ ಓದುಗರು ನೀಡಿದ ಪ್ರತಿಕ್ರಿಯೆ ಧನಾತ್ಮವಾಗಿದ್ದರಿಂದ ಏನೋ ಒಂದು ಧೈರ್ಯ ಬಂತು. ಈ ಸಂದರ್ಭದಲ್ಲಿ ನನ್ನ ಬ್ಲಾಗ್ ನ ಪ್ರಥಮ ವರ್ಷಾಚರಣೆಯನ್ನು ಆಚರಿಸುವಲ್ಲಿ ನಿಮಗೂ ಸ್ವಾಗತಿಸುತ್ತೇನೆ.

ಇಂಥ ಬರಹಗಳ ನಡುವೆ ನನಗೆ ದು:ಖವಿದೆ, ಖೇದವಿದೆ. ಉಡುಪಿಯೆಂಬ ಊರಿನಲ್ಲಿ ನಾನು ಹುಟ್ಟದಿದ್ದರೂ ಆ ಊರಿನ ಸಂಸ್ಕೃತಿ, ಕಲೆ, ಸಾಹಿತ್ಯ, ಊಟ, ಶಿಕ್ಷಣ ಇತ್ಯಾದಿಗಳ ಕಾರಣಗಳಿಂದಾಗಿ ನಾನು ಕಂಡ ಕನಸುಗಳು ಅಷ್ಟೇ ಸೊಗಸಾಗಿದ್ದವು. ಜಾನ್ ಮರ್ಫಿ ಹೇಳುವಂತೆ, ಮನಸ್ಸಿನಲ್ಲಿ ಆಳವಾಗಿ ಕಾಣುವ "subconsicous mind" ಎಂದು ಒಂದು ಇರುತ್ತದೆಯಂತೆ. ಬಹುಶ ಆ ಭಾಗದ ಮನಸ್ಸಿನಲ್ಲಿ ನನ್ನ ಕನಸುಗಳು ಸೇರಿಕೊಂಡು ಇತ್ತ ಸಾಧಿಸಲಾಗದ-ಅತ್ತ ಬಿಟ್ಟು ಬದುಕಲಾರದ ನೋವು ನನಗೆ ಕಾಡಿತ್ತು. ಅದೊಂದು ದಿನ ರಾತ್ರಿ ಅತ್ತು ಬಿಟ್ಟೆ. ಮನಸ್ಸಿನಲ್ಲಿ ಬಹಳ ನೋವು, ಏನೋ ಒಂದು ಸಾಧಿಸಲಾಗದ ಗುರಿ, ಯಾರೊಂದಿಗೂ ಹೇಳಲಾಗದ ಯಾತನೆ, ಅಲ್ಪ-ಸ್ವಲ್ಪ ನನ್ನ ಬಗ್ಗೆ ತಿಳಿದ ಗೆಳೆಯರಿಂದಲೂ ತಾತ್ಸಾರ. ಇವೆಲ್ಲದರ ನೋವಿನಿಂದ ಹೊರಬರಲು ನನಗೆ ಯಾವ ದಾರಿಯು ಇರಲಿಲ್ಲ. ದು:ಖದ ಮಡುವಿನಲ್ಲಿ ಅರಳಿದ್ದೆ ಈ ಕನ್ನಡ ಕಥೆಗಳ ಒಂದು ಬ್ಲಾಗ್.

ಕನಸು-ಕಲ್ಪನೆಗಳು ಕೈಗೆ ನಿಲುಕದ  ವಿಚಾರಗಳು,
ಮನದಿಂದ ಕಿತ್ತೆಸೆದೆ ಉಡುಪಿಯೆಂಬ ಭಾವ,
ಮನಸ್ಸು ಇದ್ದರೆ ಬದುಕುವೆ ಸಾಧನೆಯ ಗೈದು..!,
ಕನಸುಗಳು ದೂರ ಸರಿಸಿ ಸರಿಸಿ  ಮೊತ್ತೊಮ್ಮೆ ಸರಿಸಿ.

ನನ್ನ ಬರಹಗಳು ಇಲ್ಲಿಯವರೆಗೆ ಸುತ್ತ ಮುತ್ತಣ ಸಣ್ಣ ವಿಷಯಗಳ ಕುರಿತಾಗಿ ಮಾತ್ರ ವಾಗಿತ್ತು. ಪ್ರೀತಿ-ದೇಶ-ಜಾತಿ-ಭಾವನೆಗಳು ಇವುಗಳೇ ನನ್ನ ಬರಹದ ಮುಖ್ಯ ವಿಷಯಗಳು. ಇನ್ನು ಮುಂದೆ ಇನ್ನು ಅನೇಕ ವಿಷಯಗಳನ್ನು ಬರೆಯ ಬೇಕು ಎಂದು ಕೊಂಡಿದ್ದೇನೆ.

ನನ್ನ ಕೆಲವು ಗೆಳೆಯರು ಪತ್ರಿಕೆಗಳಿಗೆ ಬರೆಯಲು ಸಲಹೆ ನೀಡಿದ್ದಾರೆ.ಆದರೆ, ಸಧ್ಯ ನಾನು ಉದುಪಿಯಂಬ ಊರಿನ ನೆರಳಿನಿಂದ ಸಂಪೂರ್ಣವಾಗಿ ಹೊರ ಬಂದಿಲ್ಲ... ಶ್ರೀ ಕೃಷ್ಣ ಮಠದ ಸಭಾಂಗಣದ ಸಾಂಸ್ಕೃತಿಕ ಪ್ರಪಂಚ ವಾರದ ಕೊನೆಗೊಮ್ಮೆಯಾದಾರು ನನ್ನ ಕಣ್ಣ ಮುಂದೆ ನಾಟ್ಯ ಮಾಡುತ್ತಲೇ ಇದೆ. ಎಲ್ಲಿಯ ತನಕ ಉದುಪಿಯೆಂಬ ಕಲ್ಪನೆಗಳು ನನ್ನ ಸ್ಮೃತಿ ಪಟಲದಿಂದ ದೂರ ಸರಿಯುವದಿಲ್ಲವೋ ಅಲ್ಲಿಯ ತನಕ ನಾನು ನೋವನ್ನೇ ಬರೆಯುತ್ತೇನೆ ಅನಿಸುತ್ತಿದೆ. ಏನೇ ಇದ್ದರು ನನ್ನ ಓದುಗರ ಆಕಾಂಕ್ಷೆಗೆ ನಾನು ಭಂಗವನ್ನುಂಟು ಮಾಡಲಾರೆ... ಮುಂದೊಂದು ದಿನ ನಿಮ್ಮ ಆಸೆಯನ್ನು ಪೋರೈಸುತ್ತೇನೆ.

ಇವತ್ತು ತುಂಬಾ ಬ್ಯುಸಿ ಯಾಗಿದ್ದೇನೆ. ಕೆಲಸ ಹಾಗೂ ಇನ್ನು ಕೆಲವು ವಿಶೇಷ ನಿರ್ಧಾರಗಳನ್ನು ತೆಗೆದುಕೊಳ್ಳುವ ಹಂತದಲ್ಲಿದ್ದೇನೆ. ಮುಂದಿನ ದಿನಗಳಲ್ಲಿ ಒಳ್ಳೆಯ ಬರಹದೊಂದಿಗೆ ಬರುತ್ತೇನೆ.

ಸದಾ ನನ್ನ ಜೊತೆ ಇರ್ತಿರಲ್ವಾ?

                                                                                            ಇಂತಿ ನಿಮ್ಮ ಪ್ರೀತಿಯ ಭಾವಜೀವಿ
                                                                                                                        ವೆಂಕಿ.

Saturday, August 10, 2013

ಬದುಕು ಪುಸ್ತಕಗಳಿಲ್ಲ, ಮಾರ್ಕ್ಸ್ ಗಳಲಿಲ್ಲ ಕಣೋ..!

ಕಳೆದೆರಡು ವಾರಗಳಿಂದ ಹುಬ್ಬಳಿ, ಅಂಕೋಲಾ, ಮಣಿಪಾಲ ಹೀಗೆ ಹಲವಾರು ಊರುಗಳನ್ನು ಸುತ್ತುದಿದ್ದೇನೆ. ಬಿಡುವಿಲ್ಲದ ಸಂಚಾರದ ಪರಿಣಾಮವಾಗಿ ಬರೆಯಲು ನನಗೆ ಸಮಯ ಹಾಗೂ ಮಾನಸಿಕವಾದ ಅವಕಾಶ ಸಿಗಲೇ ಇಲ್ಲ. ಮತ್ತೆ ತಿರುಗಿ ಬೆಂಗಳೂರಿಗೆ ಬಂದು ಸಾವಿರಾರು ಜನರ ಮಧ್ಯೆ ನಾನು ಒಬ್ಬನೇ, ಏಕಾಂಗಿ ಅನ್ನುವ ಮನೋಭಾವ ತಲೆ ದೋರಿದೆ.

ನಾನು ಹುಬ್ಬಳ್ಳಿಗೆ ಹೋದಾಗ, ನನ್ನ ಹಳೆಯ ಗೆಳೆಯನೊಬ್ಬನನ್ನು ಭೇಟಿಯಾಗಿದ್ದೆ.ಅವನು ತನ್ನ ಗೆಳೆಯನೊಬ್ಬನ ಕೂಡಿಕೊಂಡು ಸಂಜೆಯ ಸ್ನಾಕ್ಸ್ ಗೆಂದು ಅಯೋಧ್ಯ ಹೋಟೆಲಿಗೆ ಬಂದ. ಅದೇ ದಿನ ರಾತ್ರಿ ೮ ಗಂಟೆಗೆ ಹುಬ್ಬಳ್ಳಿಯಿಂದ ಬೆಂಗಳೂರಿಗೆ ನನ್ನ ಪ್ರಯಾಣ ನಿಗದಿಯಾಗಿತ್ತು.

ಬಹಳ ದಿನಗಳ ನಂತರ ಒಂದಡೆ ಸೇರಿದ ನಮ್ಮಲ್ಲಿ ಬಹಳ ವಿಷಯಗಳು ಇದ್ದವು. ನಾವು ಗೆಳೆಯರು ಅನಿಸಿಕೊಂಡರು ಫೋನ್ ನಲ್ಲಿ ಮಾತನಾಡುವುದು ಅಪರೂಪವೇ. ಅವನ ಗೆಳೆಯನು ಸೇರಿದ್ದರಿಂದಲೂ ಹೊಸ ವ್ಯಕ್ತಿಯ ಪರಿಚಯ, ಮಾತನಾಡಲು  ಹಲವಾರು ವಿಷಯಗಳು ಇದ್ದವು. ತಿಂಡಿ-ಪಾನೀಯಗಳು ಮುಗಿಸಿ ಇಂದಿರಾ ಗಾಜಿನ ಮನೆಯ ಹುಲ್ಲುಗಾವಲಿನ ಮೇಲೆ ಕುಳಿತು ಕುಶಲೋಪರಿ ಪರಿಭಾಷೆಯಲ್ಲಿ ತೊಡಗಿದಾಗ, ನೌಕರಿ, ಮನೆ, ಅಪ್ಪ-ಅಮ್ಮ, ಮದುವೆ ಹೀಗೆ ಹಲವಾರು ವಿಷಯಗಳು ಬಂದು ಹೋದವು. ಒಟ್ಟಾರೆ, ಒಂದೇ ವಾಕ್ಯದಲ್ಲಿ ಹೇಳುವುದಾದರೆ, "ಸೆಟ್ಲ್ ಅದೇನ್ಲೇ ಮಗನೆ ?".

ಆದರೆ ಮದುವೆ ವಿಷಯ ಬಂದಾಗ, ಆ ವಿಷಯದ ವಿಸ್ತಾರ, ಅಳ ಎಷ್ಟೊಂದು ಇರುತ್ತದೆ ಅನ್ನುವುದು ಹೇಳಲು ಸಾಧ್ಯವಿಲ್ಲ. ಮದುವೆಯೊಂದು "ಸರಿಯಾದ ನಾರಿಯೊಂದಿಗೆ" ನಡೆದರೆ ಬದುಕು, ಅದೊಮ್ಮೆ " ವೈರಿಯಾದ ಮಾರಿಯೊಂದಿಗೆ" ನಡೆದರೆ? ಜೀವನ ಮುಕ್ತಯವೋ ಅಥವಾ ಮತ್ತೊಂದು ರೀತಿಯ ಆರಂಭವೋ? ನನಗೆ ಗೊತ್ತಿಲ್ಲ. ಆದರೆ, ನನ್ನ ಗೆಳೆಯನ- ಗೆಳೆಯನ ಬದುಕಿನಲ್ಲಿ ನಡೆದ ಕತೆ, ಹುಬ್ಬಳಿಯ ಗಾಜಿನ ಮನೆಯ ನವಿರಾದ ಹುಲ್ಲುಗಾವಲಿನ ಮೇಲೆ ತಂಗಾಳಿ ಸೇವಿಸುತ್ತ, ಗೆಳೆತನದ  ರೋಮಾಂಚನಕಾರಿ ಮಾನಸಿಕ ಉಲ್ಲಾಸದ ನಡುವೆಯೂ ಕಣ್ಣೀರು ತರಿಸಿದ ಕತೆ.

ಆತ ಪಕ್ಕ ಉತ್ತರ ಕನ್ನಡಿಗ. ಭಾಷೆಯ ಗಡಸುತನ, ಬಳಸುವ ಶಬ್ಧಗಳು, ಅಮ್ಮ ಅನ್ನುವ ಬದಲಾಗಿ "ಅವ್ವ" ಎನ್ನುವ ಮಾತು ಎಲ್ಲವು "ಆ ನನ್ನ ಮಗ" ಉತ್ತರ ಕರ್ನಾಟಕದವನು ಎಂದು ಹೇಳಲು ಸಾಧ್ಯವಿತ್ತು. ಗೆಳೆಯನ ಗೆಳೆಯ ನನಗೂ ಗೆಳೆಯ ತಾನೇ? ಅಂತೂ ನಾವು ಮೂರೂ ಜನ ಗೆಳೆಯರು. ಆತ MBA ಪಧವಿ ಧರ. ಪ್ರತಿಷ್ಟಿತ ಬ್ಯಾಂಕವೊಂದರಲ್ಲಿ  "Financial Analysyst". ಹಾಗಂದೆರೆನು? ನನಗೆ ಗೊತ್ತಿಲ್ಲ. ಅವನು ಒಳ್ಳೆಯ ಕುಟುಂಬದ  ವ್ಯಕ್ತಿ. ಅವನಿಗೆ ಕಾಲೇಜಿನಲ್ಲಿ ಒಂದು crush ಇದ್ದಿತ್ತಾದರು , ಮಾನ-ಮರ್ಯಾದೆ, ಮನೆತನದ ಗೌರವ ಇತ್ಯಾದಿ ಕಾರಣಗಳಿಂದಾಗಿ ಅವನು ಸ್ವಲ್ಪವೂ ಪ್ರಯತ್ನ ಮಾಡಿರಲಿಲ್ಲ. ಒಳ್ಳೆಯ ಓದು ಮುಗಿಸಿ, ಒಳ್ಳೆಯ ಬ್ಯಾಂಕ್ ಒಂದರಲ್ಲಿ ಒಳ್ಳೆಯ ಸ್ಯಾಲರಿ ಪಡೆಯುತಿದ್ದ ನಮ್ಮ ಒಳ್ಳೆಯ ಗೆಳೆಯ. "ಮಗನೆ, ಮೂವತ್ತು ದಾಟುತ್ತ ಇದೆ(೨೬ ವಯಸ್ಸು), ಬೇಗ ಒಂದು  ಸೊಸೆ ತರಬೇಕು" ಎಂದು ಮನೆಯವರೆಲ್ಲ ಹೇಳಿದ ಮೇಲೆ, ಸಹಜವಾಗಿ ಒಪ್ಪಿಕೊಂಡು, ೨ ವರ್ಷಗಳ ಹಿಂದೆ ಹುಡುಗಿಯನ್ನು ಹುಡುಕಲು ಪ್ರಾರಂಭ ಮಾಡಿದರಂತೆ. "MBA  ಪದವಿಧರ...! ಪದಾ ರಹೇ ಹೈ"....ಎನ್ನುವಂತೆ,  ಅಕ್ಕ, ಅವ್ವ, ಸೋದರ ಮಾವ, ಮತ್ತೊಬ್ಬ ಹಿರಿಯ ಒಳಗೊಂಡ ಕೋರ್ ಕಮಿಟಿ ನಿರ್ಧಾರವಾಗಿ ಮೂರುಜನ ಹುಡುಗಿಯರನ್ನು ತೋರಿಸಿಯೂ ಆಯಿತು. "ನೋಡಲು ಚೆನ್ನಾಗಿರುವ ಒಳ್ಳೆಯ ಗುಣದ ಒಂದು ಹುಡುಗಿ ಇದ್ದಾರೆ ಸಾಕು" ಎನ್ನುವುದ ಮಾತ್ರ ಇವನು ಕೋರ್ ಕಮಿಟಿಗೆ ಮಾಡಿದ ಶಿಪಾರಷು. ಇವನು ನೋಡುವುದು ಮಾತ್ರ- ಕಾಲು ಗುಣ, ಕೈ ಗುಣ, ಹವ್ಯಾಸಗಳು ಎಲ್ಲದರ ಬಗ್ಗೆ ಅವ್ವ ನೋಡಿಕೊಳ್ಳುತ್ತಿದ್ದರೆ;  ಆಕಾಶದಲ್ಲಿದ ಗ್ರಹಗಳು ಪೇಪರ್ ಮೇಲೆ ಹೇಗೆ ಕುಣಿಯುತ್ತವೆ ಎಂದು ಹಿರಿಯರು ನೋಡಿಕೊಳ್ಳುತಿದ್ದರು. ಕೆಲವೊಮ್ಮೆ ಇವೆಲ್ಲ ಯಾಕಪ್ಪ ಅನ್ನುವ ನೋವು ಅವನಿಗೆ ಅನಿಸಿದ್ದರು ಸಂಪ್ರದಾಯದ ವಿರುದ್ಧ ಬಂಡಾಯ ಏಳುವ ಮನಸ್ಥಿತಿ ಅವನದಲ್ಲ. ಇಂಥ ವಿಷಯದಲ್ಲಿ ಬಹಳ ವಿಚಾರ ಮಾಡಬೇಕು-ಹಿರಿಯರಿಂದ ಸೈ ಎನಿಸಿಕೊಳ್ಳಬೇಕಾದರೆ  ಅವರಾಡುವ ನಾಟಕಗಳಿಗೆ ನಾವು ತಲೆದೂಗ ಬೇಕು , ಇಲ್ಲ ಅಂದರೆ  "ವಿದ್ಯಾ ವಿನಯ ಸೋಭತೆ:", "ಈಗಿನ ಕಾಲದ ಹುಡುಗರಿಗೆ ಒಂದಿಷ್ಟು ಡಿಗ್ರೀ ಸಿಕ್ಕರೆ ಸಾಕು, ಎಲ್ಲವು ತಮಗೆ ಗೊತ್ತಿದೆ ಅಂತರೆ" ಹೀಗೆ ಹಲವಾರು ವಾಕ್ಯಗಳು ಕೇಳಿ ಬಿಸಿ ರಕ್ತ ಕಂಟ್ರೋಲ್ ಮಾಡಿಕೊಳ್ಳುವ ಕಲೆ ಗೊತ್ತಿರಬೇಕು.

ಮೂರನೆಯ ಹುಡುಗಿಯ ಮನೆಯ ಬಾಗಿಲು ಇಷ್ಟವಾಯಿತು; ಮನೆಯ ಸ್ಟೇಟಸ್ ಒಪ್ಪಿತವಾಯಿತು; ಆಕಾಶದ ಸೂರ್ಯ-ಚಂದ್ರಾದಿಗಳು  ಇನ್ನು ಮುಂದೆ  ತಮ್ಮ  ಹೆಸರು ಹಾಳುಮಾಡಬೇಡಿ ಅನ್ನುವಂತೆ ಎಲ್ಲವು ಸರಿಯನಿಸಿದರು..ಅರ್ಥಾತ್ ಜಾತಕ ಕೂಡಿತು, ಮೊದಲು ಪರಿಚಯವಿಲ್ಲದ ಮನೆ, ನೆಂಟರು ಎಂಬ ಭಾವದಿಂದ, ಮನೆಯ ಪ್ರತಿಯೊಂದು ವಿಷಯವು ಗೌರವದಿಂದ ನೋಡುವ ಕಾಲ ಬಂತು. ಅದೊಂದು ದಿನ ಗುರು-ಹಿರಿಯರ ಸಮ್ಮುಖದಲ್ಲಿ  ವಿವಾಹ ನಿಶ್ಚಯ ಮಾಡಿ, ಉಂಗುರ ಬದಲಾವಣೆ ನಡೆದು ಹೋಯಿತು. ಅಂತೂ ಕೊನೆಗೂ ಹುಡುಗನಿಗೆ ಹುಡುಗಿಯ ಜೊತೆ ಮಾತನಾಡುವ ಯೋಗ ಬಂತು. ಇಬ್ಬರು ಮಾತನಾಡಿದರು. ಫೇಸ್ಬುಕ್ ನಲ್ಲಿ ಫೋಟೋ ಅಪ್ಲೋಡ್ ಆದವು, ಗೆಳೆಯರಿಂದ " made for each other", "Very nice pair", "settled man...congrats", "looking so beatiful" ... ಹೀಗೆ ಸಾವಿರಾರು ಕಾಮೆಂಟ್ಸ್ ಗಳು ತುಂಬಿದವು.  ಮದುವೆಯ ಟೈಮರ್ ಕೌಂಟ್ ಡೌನ್ ಆರಂಭಿಸಿತ್ತು.

ಆದರೆ,
     ಆ ಹುಡುಗಿ ಪದವಿಧರೆಯಾದರು ತನ್ನ ಅಂತರಂಗದ ವಿಷಯಗಳನ್ನು ಹುಲಿಯಂತಿದ್ದ ತನ್ನ ಅಪ್ಪನ ಮುಂದೆ ಬಿಚ್ಚಿ ಹೇಳುವ ಹಾಗಿರಲಿಲ್ಲ. ಅಮ್ಮನ ಮುಂದೆ ಹೇಳಿಕೊಂಡಿದ್ದರು ಪ್ರಯೋಜನವಾಗುತ್ತಿರಲಿಲ್ಲ. ಮದುವೆಯ ಗಂಡುಗಳು ಬಂದು ಹೋದರು ತನ್ನ  ಅಂತರಂಗದಲ್ಲಿ ತನ್ನ ಕಾಲೇಜಿನ ಗೆಳೆಯನೊಬ್ಬನಿಗೆ  ನೆಲೆ ನೀಡಿದ್ದೇನೆ ಎಂದು ಎಲ್ಲಿಯೂ ಬಿಚ್ಚಿ ಹೇಳಲಿಲ್ಲ. ಅಪ್ಪ-ಅವ್ವನಾ  ಮಾತಿಗೆ ಒಪ್ಪಿಕೊಂಡು, ಮನೆಯಲ್ಲಿ  ಕೊನೆಯ ದಿನ ಕಳೆಯುವ ತನಕವೂ ಸದ್ಗುಣ ಸಂಪನ್ನೆ ಎಂದೇ ಸಾರಿದಳು.

   ಪಾಪ, ಆ ಭಾವಿ ಗಂಡ ತಂದುಕೊಟ್ಟ ಬೆಲೆ ಬಾಳುವ ಮೊಬೈಲ್ ಗಿಫ್ಟ್, ಮನೆಯ ಒಂದು  ಮುಲೆಯಲ್ಲಿರಿಸಿದ್ದಳು. ಅವನು ಕೇಳಿದರೆ ಮದುವೆ ಯಾದ ಮೇಲೆ ಎಂದು ಬಳಸುವುದಾಗಿ ಹೇಳಿ  ಆ ಗಿಫ್ಟ್ ವಿಷಯದಿಂದ ನುಣುಚಿ ಕೊಳ್ಳುತಿದ್ದಳು. ಅವನ ಕಾಲ್ ಮಾಡಿದಾಗಲೆಲ್ಲ, wait  ಎಂದು ಮೆಸೇಜ್ ಕಲಿಸುತಿದ್ದಳು ಅಥವಾ ಇವಳ ಮೊಬೈಲ್  ಬ್ಯುಸಿ ಸಂದೇಶ ಕೊಡುತ್ತಿತ್ತು. ಇಷ್ಟು ಸಣ್ಣ ವಿಷಯಕ್ಕೆಲ್ಲ ಅವಳಿಗೆ ಪ್ರಶ್ನಿಶ ಬಾರದೆಂದು ಸುಮ್ಮನಾಗಿದ ಗೆಳೆಯ ಮದವೆಯ ಟೈಮರ್ ೧೫ ದಿನಗಳ ಕೌಂಟರ್ ಡೌನ್ ತೋರಿಸುವಾಗ ನೇರವಾಗಿ ಅವಳ ಮನೆ ಪ್ರವೇಶ ಮಾಡಿ, ಮದುವೆಯ ಕುರಿತಾಗಿ ಮಾತನಾಡುತ್ತಾನೆ. ಆದರೆ, ಪ್ರೀತಿಯಿಂದ ಹುಡುಗಿ ಮನೆಯ ಮಹಡಿ ಮೇಲೆ ಕರೆಯಿಸಿ ಹೇಳಿದ್ದೇನು ಗೊತ್ತೇ," ನನಗೊಂದು ಭಾಷೆ ಕೊಡ್ತಿಯ?"  ಅವನು, ನಾಳೆ ಹೆಂಡತಿಯಾಗಿ ಬರುವಳು ಏನು ಕೇಳಿಯಾಳು ಎಂದುಕೊಂಡು ನಗುತ್ತಲೇ ಹೇಳು ನಿನ್ನ ಭಾಷೆ ಎಂದು ಕೈ  ಒಡ್ಡಿದ, " ನಾನು ಹೇಳುವ ವಿಷಯ  ಮದುವೆಯ ಮುಹೂರ್ತ ಮುಗಿಯುವವರೆಗೆ ಯಾರಿಗೂ ಹೇಳುವ ಹಾಗಿಲ್ಲ. ನಾನು ಇವಗಲೇ ಒಬ್ಬನನ್ನು ಪ್ರೀತಿಸ್ತ ಇದ್ದೇನೆ. ನಾನು ಅಪ್ಪ-ಅಮ್ಮನಿಗೆ ಹೆದರಿ ಈ ವಿಷಯ ಹೇಳಿಲ್ಲ. ದಯವಿಟ್ಟು ಈ ಮದುವೆ ನೀನೆ ಕ್ಯಾನ್ಸಲ್ ಮಾಡಬೇಕು. ನಾನಂತೂ ನಿನ್ನ ಮದುವೆಯಾಗುವುದಿಲ್ಲ". 

ನಾಲ್ಕು ತಿಂಗಳಿಂದ  ತನ್ನ ಹೆಂಡತಿಯಾಗುವಲೆಂದು ಯೋಚಿಸಿ, ಸಾವಿರಾರು sms  ಮಾಡಿ, ಗಿಫ್ತನ್ನು  ಕೊಟ್ಟು, ತನ್ನ ಹೆಂದಿತಿಯಾಗುವ ಹುಡುಗಿಯನ್ನು ಫೇಸ್ಬುಕ್ ಮೂಲಕ ಎಲ್ಲರಿಗು ತೋರಿಸಿ ಇದ್ದ ಇವನಿಗೆ ಅವಳ ಮಾತು ನಂಬುವುದು ಸುಲಭದ ವಿಷಯವಾಗಿರಲಿಲ್ಲ. ಮುಂದಿನ ಕ್ಷಣದಲ್ಲಿ ಏನಾಗುವುದೋ ತಿಳಿಯದ ಆತ ಹೇಗಾದರೂ ಆ ಮನೆ ಖಾಲಿ ಮಾಡಬೇಕೆಂದು ವೇಗಾವಾಗಿ ತನ್ನ  ಮನೆಗೆ ಬಂದ. ಮುಂದಿನ ಮೂರೂ ತಿಂಗಳು ಅವನ ಬದುಕು ಹೇಗಿತ್ತು, ಹೇಗಾಯಿತು ಆ ಕಥೆ ಭಯಾನಕ. ಯಾವುದಾದರು ಒಂದು ಸಿನೆಮಾದ ದುರಂತ ಕತೆ ನೆನಪಿಸಿಕೊಳ್ಳಿ.

ಈ ಮದುವೆ ನಡುಯುವುದಿಲ್ಲ ಎಂದು ಮನೆಯಲ್ಲಿ ತಿಳಿಯುತಿದ್ದಂತೆ ಹುಲಿ ಅಪ್ಪನಿಗೆ ಪಂಗನಾಮ ಹಾಕಿ, ತನ್ನ ಪ್ರಿಯಕರನ ಜೊತೆ ಒಡಿ ಹೋಗಿ, ಕೆಲವು ತಿಂಗಳು  ಅಲ್ಲಿ-ಇಲ್ಲಿ ಅಲೆದಾಡಿ, ಕರುಳ ಕುಡಿಯ ನಿರ್ಧಾರ ಒಳ್ಳೆಯದೇ ಇರಬಹುದು ಎಂದು  ಮಗಳನ್ನು ಮತ್ತೆ ಕ್ಷಮಿಸಿ ಅವಳ ಪ್ರಿಯಕರನನ್ನು ಅಳಿಯನೆಂದು ಸ್ವೀಕರಿಸಿದರು. ಅಲ್ಲಿಗೆ ಅವಳ ಜೀವನ ಮುಂದುವರಿಯಿತ್ತು.

ಕೆಲವು ತಿಂಗಳು ಮುಗಿದ ಬಳಿಕ, ಅವಳನ್ನು ಮರೆತು ಮತ್ತೆ, ಹುಡುಗಿಗಾಗಿ ಪರದಾಟ. ಗ್ರಹಗಳು ದೂರವಾಗಿ ಎಲ್ಲ ಕೂಡಿದರೂ-" ಹಿಂದೆ ಒಂದು engangement  cancel  ಆಗಿತ್ತಂತೆ" ಎಂಬ ವಿಷಯ ಭಾವಿ ಮಾವನ ಮನೆ ಮಂದಿಯ ಕಿವಿಗೆ ಬಿಳುತಿದ್ದಂತೆ ಎಲ್ಲರು ಶನಿ ಗ್ರಹ ದಂತೆ ಕಾಡಿ,  ಹುಡುಗಿಗೆ ಒಪ್ಪಿತವಲ್ಲ ಎಂಬ ಸಂದೇಶದೊಂದಿಗೆ ಹಿಂತಿರುಗುತ್ತಿದ್ದ. ಹಾಗೆ ಅವನು ನೋಡಿದ ಹುಡುಗಿಯರ ಸಂಖ್ಯೆ "ಕೇವಲ" ೬೧; ಆದರೂ ಅವನನ್ನು ಹಿಂಬಾಲಿಸುವಳು ಒಬ್ಬಳು ಇರಲಿಲ್ಲ.

ಇನ್ನು ಹುಡುಗಿ ನೋಡಲೋ ಬೇಡವೋ ಎಂಬ ತನ್ನ ನಿರ್ಧಾರದ ಕುರಿತಾಗಿ ತನ್ನ ಗೆಳೆಯನ ಜೊತೆ ಮಾತನಾಡಲು ಹುಬ್ಬಳಿಗೆ ಬಂದಿದ್ದ. ಇಷ್ಟು ಕತೆ ಕೆಳುತಿದ್ದಂತೆ, " ನಿನ್ನ ಬಾಳು ಹಾಳು ಮಾಡಿದವಳು  ಮೊದಲು ಮದುವೆಯಾಗಲು ಒಪ್ಪಿದ ಹುಡುಗಿ ತಾನೆ?. ಅವಳು ಎಲ್ಲಿದ್ದಾಳೆ ?, ಅವಳಿಗೆ ಮೊದಲು ಬುದ್ದಿ ಕಲಿಸಬೇಕು" ಎಂದು ನನ್ನ ಗೆಳೆಯ ಕೋಪಾವೇಶದಿಂದ ನುಡಿದಾಗ, " ಅಲ್ಲಲೇ, ನಿನ್ಯಾಕೆ ಅವಳ ಬಗ್ಗೆ ದ್ವೇಷ ಕಾರ್ತಿಯಾ?, ಅವಳು ತನ್ನ ಆಯ್ಕೆ ಮೊದಲೇ ಮಾಡಿದ್ದಳು. ಆದರೆ ಅಪ್ಪ-ಅಮ್ಮಗೆ ಹೆದರಿ ಹೀಗೆ ಮಾಡಿದ್ದಾಳೆ. ಅವಳು ಬದುಕಲಿ ಬಿಡು. ತಪ್ಪು ನನ್ನದು... ಕೇವಲ ಮಾರ್ಕ್ಸ್ ಶೀಟ್ ನೋಡಿ ಬದುಕು ನಿರ್ಧರಿಸಲು ಹೊರಟವನು ನಾನು...! ಅದೊಮ್ಮೆ ಕಾಲೇಜ್ ಡೇಸ್ ನಲ್ಲಿ ನನ್ನದು ಅಂತ ಒಂದು ಪ್ರೀತಿ ಇದ್ದಿದ್ದರೆ, MBA ಪದವಿಧರ  ಇವತ್ತು ೬೧  ಹುಡುಗಿಯರನ್ನು  ನೋಡಿ ಮದುವೆ ಬೇಕಾ ಬೇಡ್ವಾ ಅನ್ನುವ ಸಿದ್ಧಾಂತಕ್ಕೆ ಬರುವ ಸಾಧ್ಯತೆ ಗಳಿರಲಿಲ್ಲ. ಬದುಕು ಪುಸ್ತಕಗಳಿಲ್ಲ, ಮಾರ್ಕ್ಸ್ ಗಳಲಿಲ್ಲ  ಕಣೋ. ಬರ್ತೀನಿ" ಎಂದು  ಹೊರಟೆ ಹೋದ. ಇದೆ ಮೊದಲ ಬಾರಿಗೆ ಅಪರೂಪದ ಪ್ರೀತಿಯ ಸಿದ್ಧಾಂತಕ್ಕೆ ನನ್ನ ಒಂದು ಕಣ್ಣಿರ ಹನಿ ನೆಲಕ್ಕೆ ಬಿತ್ತು.

ಇಲ್ಲಿ ಯಾರದು ತಪ್ಪು ? ಯಾವುದು ಪ್ರಶ್ನೆ? ಯಾವುದು ಉತ್ತರ? ನನಗೆ ತಿಳಿಯಲಿಲ್ಲ. ಇನ್ನು  ನನ್ನ ಬಸ್ಸು ಹತ್ತಲು ೧೫ ನಿಮಿಷಗಳಿದ್ದವು. ಮೌನಕ್ಕೆ ಶರಣಾಗಿದ್ದ ಗೆಳೆಯನ ಹೆಗಲು ಮುಟ್ಟಿ, " ಪ್ರೀತಿ ಪ್ರೇಮದ ವಿಷಯದಲ್ಲಿ ಈ ಜಗತ್ತೇ ಹೋರಾಟದಲ್ಲಿದೆ. ಯಾವ ವಿಜ್ಞಾನ ಕೂಡ ಉತ್ತರ ಹೇಳಲ್ಲ. ೫೦ ನೆ ಶತಮಾನ ಬಂದರು ಇಂಥ ಸಮಸ್ಯೆಗಳು ಇರುತ್ತವೆ ಅನಿಸುತ್ತಾ ಇದೆ" ಎಂದು ಹೇಳಿ, ಒಮ್ಮೆ watch ನೋಡಿ, ಅವನಿಗೆ ಬಸ್ಸಿನ ಸಮಯವಾಗಿದೆ ಎಂದು ಅರಿವು ಮಾಡಿಸಿ ಬಸವ ವನಕ್ಕೆ ಬಂದು ಬಸ್ಸು ಹತ್ತಿದೆ.

Sunday, July 21, 2013

ಮೋದಿಯ ಹಾದಿ ಗದ್ದುಗೆ ಯತ್ತ...!

ಇತ್ತೀಚಿಗೆ facebook,twitter ಗಳಿಂದ ಹಿಡಿದು ಎಲ್ಲ  ಸಮೂಹ ಮಾಧ್ಯಮಗಳು ನರೇಂದ್ರ ಮೋದಿಯ ಬಗ್ಗೆ ಬಹಳ ಹೋಗುಳುತ್ತಿವೆ;ಬಹಳ ಜನ ಈ ವಿಷಯದ ಕುರಿತಾಗಿ 'ಚಿಂತನೆ'ಗೊಳಗಾಗಿರುವುದು ಕಂಡು ಬಂದರೆ, ಕಾಂಗ್ರೆಸ್ಸಿಗರು ಮಾತ್ರ 'ಚಿಂತೆ'ಗೆ ಒಳಗಾಗಿದ್ದಾರೆ. ಮತದಾರ ಯಾವತ್ತು ಪಕ್ಷ, ವ್ಯಕ್ತಿಯನ್ನು ಗಮನಿಸುವುದಿಲ್ಲ ಬದಲಾಗಿ ಪುಂಕಾನುಪುಂಕವಾಗಿ ರಾಜಕೀಯ ನಾಯಕರ ಬಾಯಿಯಿಂದ ಬರುವ ಪ್ರಣಾಳಿಕೆಗಳಲ್ಲಿ ಯಾವದನ್ನು ಭರವಸೆದಾಯಕವೆಂದು ಗಮನಿಸುತ್ತ ಇರುತ್ತಾನೆ. ಹೀಗಾಗಿ,"ಮಾತುದಾರ(ರಾಜಕಾರಣಿ)" ರ ಬಗ್ಗೆ ಗಮನವಿಟ್ಟು ನೋಡುತ್ತಾನೆ ಒಳ್ಳೆಯ "ಮತದಾರ". 'ಪ್ರಣಾಳಿಕೆಯ  ಜೊತೆಗೆ ಅದನ್ನು ಇಡೆರಿಸುತ್ತೇನೆ'  ಎಂಬ ರಾಜಕೀಯ ಇಚ್ಚಾಶಕ್ತಿಯ  ಪ್ರದರ್ಶನ  ಇಂದಿನ ಅವಶ್ಯಕತೆ.

೬೦ರ ಸಂಭ್ರಮದಲ್ಲಿರುವ ಭಾರತಿಯ ಪ್ರಜಾಪ್ರಭುತ್ವಕ್ಕೆ ಅದೆಷ್ಟೋ ಚುನಾವಣೆಗಳು ನಡೆದು ಹೋಗಿಲ್ಲ?  ಅದೆಷ್ಟೋ ಪ್ರಣಾಳಿಕೆಗಳು ಚಪ್ಪಾಳೆಗಳ ಮೂಲಕವಾಗಿ ಸ್ವಾಗತಿಸಲ್ಪಟ್ಟು, ಸಾಮಿಯನ  ಕೆಳಗಿಲಿಸುವಾಗಲೇ ಕೊನೆ ಕಂಡಿಲ್ಲ? ಸತ್ಯವಾಗಿ ಆಡಿದಂತೆ, ಜನತೆಯ  ಭರವಸೆಗೆ ಕುಂದು ಬರದಂತೆ ಜಾರಿಗೆ ತಂದ ಪ್ರಣಾಳಿಕೆಗಳೆಷ್ಟು? ಹೀಗಾಗಿ ಪ್ರಣಾಳಿಕೆಗಳು ಕೇಳಿ ಕೇಳಿ ಸಾಕಾಗಿದೆ ಅನ್ನುವಷ್ಟು ನೋವು ಜನಕ್ಕೆ ಇದೆ. ಜನಕ್ಕೆ ಬೇಕಾಗಿರುವುದು ಪ್ರಣಾಳಿಕೆಗಳ ಉದ್ದುದ್ದ  ಭಾಷಣಗಳಲ್ಲ; ಬಣ್ಣ-ಬಣ್ಣಗಳಿಂದ ರಂಜಿತವಾದ ಪ್ರಣಾಳಿಕೆಯ  pamplet ಗಳಲ್ಲ,"ಭಾರತ ನವ ನಿರ್ಮಾಣ" ಎಂದು ಸಂಗೀತ ಸೇರಿಸಿ ಗುನುಗುವ ಹಾಡಲ್ಲ; ಬದಲಾಗಿ ಇಂದು ಹೇಳಿದ್ದನ್ನು ನಾಳೆ ಮಾಡಿಯೇ ತೀರುತ್ತೇನೆ ಎನ್ನುವ  "ಭರವಸೆಯ ನಾಯಕ". ಅಂತ ನಾಯಕತ್ವದ ಹುಡುಕಾಟದಲ್ಲಿ ಇದ್ದಾನೆ ಇಂದಿನ ಪಜ್ನಾವಂತ ಮತದಾರ. ಆ ಭರವಸೆಯಾಗಿ ಇಂದು ಗೋಚರಿಸುತ್ತಿರುವರು "ನರೇಂದ್ರ ಮೋದಿ ಮಾತ್ರ". ನೀವು ಇದನ್ನು ಗಮನಿಸಿರಬಹುದು-ಯಾರು ಕೂಡ BJP  ಬೇಕು ಅನ್ನುತ್ತಿಲ್ಲ, ಬದಲಾಗಿ ನರೇಂದ್ರ ಮೋದಿ ಬೇಕು ಅನ್ನುತಿದ್ದಾರೆ.

ಮೋದಿಯ ನಾಯಕತ್ವದ ಬಗ್ಗೆ  ಅಂತ ಒಂದು ಭರವಸೆ ಮೂಡಿರುವುದು ಇಂಗ್ಲಿಷ್ ಸೆ ಇರದ,  ಹಿಂದಿ ಭಾಷೆಯಿಂದಲೇ  ಮಾಡಿದ ಭಾಷಣಗಳಿಂದಲ್ಲ; ಯಾರಿಂದಲೂ ಪ್ರಶ್ನಿಸಿಲಾಗದ ನಾಯಕತ್ವ ಅವರಿಗೆ ಬಂದಿರುವುದು, ಅದನ್ನು ಜನ ಒಪ್ಪಿರುದಕ್ಕೆ ಕಾರಣ ಅವರು ಗುಜರಾತನಲ್ಲಿ ತಂದಿರುವ ಬದಲಾವಣೆ. ನಾವು ಯಾರು ಕೂಡ ಗುಜರಾತನ್ನು ನೋಡಿದವರಲ್ಲ,ಆದರೆ ಒಟ್ಟಾರೆಯಾಗಿ  ಸಮೂಹ ಮಾಧ್ಯಮಗಳು  ಟ್ವಿಟ್ಟರ್-ಫೇಸ್ಬುಕ್  ಅವಲೋಕಿಸಿದಾಗ ಸಿಗುವ ಧನಾತ್ಮಕ ಧೋರಣೆಗಳಿಂದ ಮೋದಿ ಯೊಬ್ಬ ಬದಲಾವಣೆಯ ಹರಿಕಾರ ಎಂದೇ ಭಾವಿಸುತ್ತೇವೆ.

ಮೊದಿಯಲ್ಲದ ನಾಯಕತ್ವ ಭಾರತದಲ್ಲಿ ಬೇರೊಂದು ಇಲ್ಲವೇ? ಇದ್ದಾರೆ ನಮ್ಮ ರಾಹುಲ್ ಗಾಂಧಿ ಸಾಹೇಬರು. ಅವರಿಗೆ 'ಗಾಂಧಿ' ಹೆಸರಿನಿಂದ ಹಾಗೂ ನೆಹರು-ಇಂದಿರಾ-ರಾಜೀವ ಈ ಮೂವರ ಕೆಲವು ಐತಿಹಾಸಿಕ ಸಾಧನೆಗಳಿಂದಾಗಿ ರಾಹುಲ್ ಒಬ್ಬ ರಾಜಕೀಯದಲ್ಲಿ ಕಡೆಗನಿಸಲಾರದ ವ್ಯಕ್ತಿ ಅಷ್ಟೇ ಅನಿಸುತ್ತದೆ. ಅವರ ಶಿಕ್ಷಣ ಅರ್ಹತೆಯಲ್ಲೂ ಅಲ್ಲ-ಸಲ್ಲದ ಆರೋಪಗಳು ಫೇಸ್ಬುಕ್ ತುಂಬಾ ಓಡಾಡುತ್ತಿದೆ. ಅವರಲ್ಲೊಂದು ಅನುಭವ, ಸಾಧನೆ ಅಥವಾ ಮುಂದಲೋಚನೆಯಿದೆ ಎಂದು ಭಾವಿಸಲು ಯಾವ ಕಾರಣಗಳು ಸಿಗುತ್ತಿಲ್ಲ. ಒಂದೊಮ್ಮೆ ಮಾನ್ಯ ಪ್ರಣಬ್ ಮುಖರ್ಜಿಯವರು ಕಾಂಗ್ರೆಸ್ ಕಡೆಯಿಂದ ಪ್ರಧಾನ ಮಂತ್ರಿ ಸ್ಥಾನಕ್ಕೆ ಏನಾದರು ನಾಮಾಂಕಿತರಾಗಿದ್ದರೆ ರಾಜಕೀಯ ಕಣದಲ್ಲಿ ರಾಜಕೀಯ ಅನುಭವದಲ್ಲಾದರು  ಮೋದಿಗೆ ಸರಿ ಸಮಾನರು ಎಂಬ ಭಾವ ಮತದಾರರಲ್ಲಿ ಮುಡುತಿತ್ತೋ ಏನೋ ? ಇವತ್ತು ಕಾಂಗ್ರೆಸ್ಸ್ ಕೇವಲ ವಂಶವಾಹಕ ಕಣಗಳ ಸಾಮರ್ಥ್ಯದಿಂದಲೇ ಗೆಲ್ಲಬೇಕು ಹೊರತು ಅದಕೊಂದು ಬೇರೆಯಾದ  ಕಾರಣ ನನಗಂತೂ ಸಿಗದು.

ಮೋದಿ ಮುಸ್ಲಿಂ ವಿರೋಧಿ, ಅವರೊಬ್ಬ ಕೊಲೆಗಾರ ಎನ್ನುವ ಆರೋಪಗಳು ಕೇಳುತ್ತಲೇ ಇರುತ್ತೇವೆ..ಇದು ಒಪ್ಪವುದು ಬಹಳ ಕಷ್ಟ. ಒಂದೊಮ್ಮೆ ಮೋದಿ ಗೋದ್ರ ಹತ್ಯಾಕಾಂಡದಲ್ಲಿ ಭಾಗಿಯಾಗಿದ್ದರೆ ಕಾಂಗ್ರೆಸ್ಸ್ ಕೈಯಲ್ಲೇ ನಲಿದಾಡುತ್ತಿರುವ(ನಲಿದಾಡುತಿದ್ದ) ಪಂಜರದ ಗಿಳಿ ಸಿಬಿಐ ಇಷ್ಟು ದಿನ ಮೋದಿಗೆ ಜೈಲಿಗೆ ತಳ್ಳುತಿರಲಿಲ್ಲವೇ? ಅದನ್ನು ಇನ್ನು ತನಕ ಸಾಧ್ಯವಾಗದಿರುವಾಗ, ಇಲ್ಲಿಯ ತನಕ ಮೋದಿ ಬಗ್ಗೆ  ಕ್ಲೀನ್ ಚೀಟ್ (http://goo.gl/otX6O) ಇರುವಾಗ ಈ ಮಾಧ್ಯಮಗಳು, ಕಾಂಗ್ರೆಸ್ಸ್ ನಾಯಕರುಗಳು ಯಾಕೆ ಪದೆ ಪದೆ ಗೋದ್ರ-ಗೋದ್ರ ಎಂದು ಬಾಯಿ ಬಡಿತಾರೋ? ಒಂದೊಮ್ಮೆ ಮೋದಿ ಅಪರಾಧಿಯಾಗಿದ್ದರೆ ಅವರು ಜೈಲಿನಲ್ಲಿ ಕೊಳೆಯಲೇ ಬೇಕು ..! ಅದು ಕೇವಲ ಮುಸ್ಲಿಮರ ಕೊರಿಕೆಯಾಗಲಾರದು; ಸಮಸ್ತ ಭಾರತೀಯರು ಅಪರಾಧಿಯನ್ನು ನೋಡುವ ದೃಷ್ಟಿ ತಾನೇ?

ನಮ್ಮದು ಅತಿ ದೊಡ್ಡ ಪ್ರಜಾಪ್ರಭುತ್ವ. ಪ್ರಜೆಗಳ ಮಾತು ಹೇಳಲು-ಕೇಳಲು  ಕಾರಣವಾಗಿರುವುದೇ ಸಮೂಹ ಮಾಧ್ಯಮಗಳಿಂದ. ಇದಕ್ಕಾಗಿಯೇ, ಸಮೂಹ ಮಾಧ್ಯವನ್ನು ಪ್ರಜಾಪ್ರಭುತ್ವದ ನಾಲ್ಕನೆಯ ಅಂಗವೆಂದು ಭಾವಿಸಲಾಗುತ್ತದೆ. ನಾವೆಲ್ಲ ಇಂದು ಮೋದಿ ಕೆಟ್ಟವರು-ಒಳ್ಳೆಯವರು ಎಂದು ತಿರ್ಮಾನಿಸುತ್ತಿರುದು ಈ ಮಾಧ್ಯಮಗಳು ನಮ್ಮ ಮುಂದೆ ಇಟ್ಟ ವಿಷಯಗಳು ತಾನೆ? ನಾವೆಲ್ಲರೂ ಮೋದಿಯ ಜೊತೆ ಮಾತನಾಡಿದವರಲ್ಲ, ಗುಜರಾತಿನ ಮಣ್ಣು ಮೆಟ್ಟಿದವರಲ್ಲ.. ಹೀಗಿರುವಾಗ, ಯಾವುದೇ ವ್ಯಕ್ತಿ, ಪಕ್ಷದ ಕಡೆ ಮತದಾರ ವಾಲಲು ಕೇವಲ ಸಮೂಹ ಮಾಧ್ಯಮಗಳೇ ಕಾರಣ ವಾಗುತ್ತವೆ. ಒಂದೊಮ್ಮೆ ಅಂತ ನಿರ್ದಿಷ್ಟ ವಿಷಯಗಳಲ್ಲಿ ಮಾಧ್ಯಮ ಕೆಟ್ಟರೆ, ಲಾಬಿಗೆ ಒಳಗಾಗಿ ಕೆಲಸ ವಹಿಸಿದರೆ ದೇಶದ ಗತಿ ಏನು ಹೇಳಲು ಸಾಧ್ಯ? ಕೇವಲ ರಾಜಕಾರಣಿಗಳು ಒಳ್ಳೆಯ ದಾದರೆ ಸಾಲುವುದಿಲ್ಲ; ಒಳ್ಳೆಯ ಮಾಧ್ಯಮವೂ ಬೇಕು.

ಮಾಧ್ಯಮಗಳು ತಪ್ಪುತ್ತಿರುವ ಅಂಶಗಳು ಅನೇಕ ಇವೆ - ಜಾತ್ಯತೀತ ಭಾರತದಲ್ಲಿ ಜಾತಿವಾರು ಮತಗಳ ಕುರಿತಾಗಿ ಅವಲೋಕನ ಮಾಡುವುದು, ಯಾವೊದೋ ಒಬ್ಬ ಬಡಪಾಯಿ ಧರ್ಮ, ಜಾತಿ ಬಗ್ಗೆ ಮಾತನಾಡಿದನೆಂದು ಅದನ್ನೇ ಈಡಿ ದೇಶಕ್ಕೂ ಬೆಂಕಿ ಹತ್ತುವಂತೆ ಮಾಡುವುದು ಸರಿಯಲ್ಲ. ಮಾಧ್ಯಮವೂ ಕೂಡ ದೇಶದ ಒಳಿತಿಗಾಗಿ ಶ್ರಮಿಸುವ ವರ್ಗ ಎಂದು ಭಾವಿಸ ಬೇಕೇ ಹೊರತು, ವಾಕ್ ಸ್ವಾತಂತ್ರ್ಯವೆಂದು ದೇಶಕ್ಕೆ ನಷ್ಟವುಂಟು ಮಾಡುವ ವಿಷಯವನ್ನು  ಪ್ರಸರಿಸುವುದು, ವಾದಿಸುವುದು ತಪ್ಪು ಅನಿಸುತ್ತದೆ. ಮೋದಿಯವರಿಗೆ ಇಲ್ಲಿ ತನಕ ಎಲ್ಲ ನ್ಯಾಯಲಾಯಗಳು 'ಕ್ಲೀನ್' ಎಂದು ಹೇಳಿದ ಮೇಲೆ, ನ್ಯಾಲಯಗಳ ತೀರ್ಪು ತಪ್ಪು ಅನ್ನುವಂತೆ ಅವರನ್ನು ಮತ್ತೆ-ಮತ್ತೆ ಗೋದ್ರದ ಕುರಿತಾಗಿ ಪ್ರತಿ ದಿನ ಪ್ರಶ್ನಿಸುವುದು ತಪ್ಪಲ್ಲವೆ? ಒಮ್ಮೆ ನಿಮಗೆ  ಗೊದ್ರದ ಕುರಿತಾಗಿ ಸರಿಯಾದ ಮಾಹಿತಿ ಗೊತ್ತಿದ್ದರೆ, ಮೋದಿಯನ್ನು ಜೈಲಿಗೆ ತಳ್ಳಬೇಕು ಎನ್ನುವ ಮನಸ್ಸಿದ್ದರೆ ನೀವೇ ನ್ಯಾಲಯಕ್ಕೆ ಹೋಗಬಹುದಲ್ಲ? ನೀವು ಲಾಬಿ ಗೆ ಒಳಗಾಗಿದ್ದಿರಿ ಎಂದು ಭಾವಿಸಲೇ?

ಮೋದಿಗೆ ಗದ್ದುಗೆಯತ್ತ ನುಸುಳುವುದು ಅಷ್ಟು ಸುಲಭವಂತು ಅಲ್ಲ. ಅವರಲ್ಲಿ ಅರ್ಹತೆ ಇದೆ, ದೇಶದ ಬಗ್ಗೆ ಕಲ್ಪನೆಗಳಿವೆ ಎಂದು ನಾವು 'ಭರವಸೆಯ ನಾಯಕ' ನೆಂದು ನೆಚ್ಚಿ ಕೊಂಡರು ಅವರ ದಾರಿ  ಮುಳ್ಳಿನಿಂದ ಕೂಡಿದೆ. ಮೋದಿ ಒಳ್ಳೆಯ ನಾಯಕರಾದರು, ಗೋದ್ರ ಘಟನೆ ನಡೆದಿರುವುದು ಅವರ ಮೂಗಿನ ಕೆಳಗೆ ಅನ್ನುವ ಕಾರಣದಿಂದ ಅವರನ್ನು ಇಂದಿಗೂ ತೆಗಳಲಾಗುತ್ತಿದೆ. ಜೊತೆಗೆ , ಅವರ ಪಕ್ಷದಲ್ಲೇ ಅವರ ಬಗ್ಗೆ ಸಹ ಮತವಿಲ್ಲ. ಮೋದಿಯ ದಿನ-ದಿನ ಕಾಣುತ್ತಿರುವ ಏಳಗೆಯನ್ನು ಅವರ ಸಮಾನ ವಯಸ್ಕರು(ಅಥವಾ ಸಮಾನ ವೃತಿ ಬಾಂಧವರು) ಎತ್ತಿ ಹಿಡಿಯಲು ಮನಸ್ಸು ಮಾಡುತ್ತಿಲ್ಲ. ಅಮೇರಿಕಾದ(western ) ಅಭಿಮಾನಿಗಳು ದೇಶದಲ್ಲಿ ಹೆಚ್ಚುತ್ತಿರುವ ಕಾಲದಲ್ಲಿ, ಅಮೇರಿಕಾದ ವೀಸಾ ನಿರಾಕರಣೆ ಸಹ ಪ್ರಭಾವ ಬಿರುವ ಸಂಗತಿಯೇ ಆಗಿದೆ. ಅಷ್ಟೆಯಲ್ಲದೆ ಮೊದಿಯೊಬ್ಬ ಕೃತಿಯಿಂದ ಸಾಧಿಸಬಲ್ಲ ವ್ಯಕ್ತಿಯಾಗಿದ್ದರೂ ಮಾತಿನಿಂದ  'ನಾಯಿ ಮರಿ', 'ಬುರ್ಖಾ' ದಂತ ಶಬ್ಧಗಳಿಂದಾಗಿ ಹಾಗೂ ವಿರೋಧಿಗಳು ಪ್ರತಿಯೊಂದು ಮಾತನ್ನು ಮೋದಿ ಒಬ್ಬ 'ರಕ್ತ ಪಿಪಾಶು ' ಅನ್ನುವಂತೆ ಪ್ರೇರಿಪಿಸುವುದು ಕೂಡ ಅವರ ಹಿನ್ನಡೆಗೆ ಕಾರಣವಾಗಲಿದೆ. ಜೊತೆಗೆ ಬಿಜೆಪಿ, ಎಲ್ಲಕಡೆ ಒಳ್ಳೆಯ ಇಮೇಜ್ ಉಳಿಸಿಕೊಂಡಿಲ್ಲ. ಉದಾಹರಣೆಗೆ- ಕರ್ನಾಟಕದ ಬಿಜೆಪಿಯ ರೆಸಾರ್ಟ್ ರಾಜಕಾರಣ, ಭೃಷ್ಟಚಾರಗಳಿಂದ ಬೇಸೆತ್ತ ಮತದಾರ ಬೇರೆ ಪಕ್ಷಗಳನ್ನು ನೋಡಿಕೊಲ್ಲಬೇಕಾಯಿತು. ಇದರ ಪರಿಣಾಮವಾಗಿ, "ಕೇಂದ್ರದಲ್ಲಿ ಮೋದಿ ಬಂದರೆ ನಮಗೇನು ಫಲ,ಇಲ್ಲಿರುವ ಒಳ್ಳೆಯವರಲ್ಲದಿದ್ದರೆ?" ಎನ್ನುವ ಮತದಾರ ,ಮೋದಿಯ ನಾಯಕತ್ವದ ಕುರಿತಾದ ಭರವಸೆಯಿಂದ ಪಕ್ಷದ  ಲೋಕಲ್ ಲೀಡರ್ ಗಳನ್ನೂ  ಅಪ್ಪಿಕೊಳ್ಳುತ್ತಾನೆಯೇ?

ಒಟ್ಟಾರೆ, ಮೋದಿ ದೇಶದ ಕೇಂದ್ರ ಸ್ಥಳದಿಂದ ಹಳ್ಳಿ-ಮನೆಯ ಜಗುಲಿಯ ತನಕವೂ ಬಿಜೆಪಿಯನ್ನು ನಿರೂಪಿಸುವ ಕಾರ್ಯದಲ್ಲಿ ತೊಡಗಬೇಕು. ಅವರ ಪ್ರನಾಳಿಕೆ  ದೇಶದ ಜನತೆಯ ಹೃದಯ ಗೆಲ್ಲಬೇಕು.

ಸರ್ವಧರ್ಮಗಳ ಸಮನ್ವಯ ಕಂಡಿರುವ ಭಾರತ ಭೂಮಿ ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ನಿಂದ ಆಳಲ್ಪಟ್ಟಿದೆ. ಅದಕ್ಕೂ ಸಮಾನ ಅವಕಾಶ, ಅಂತದನ್ನು ಒಪ್ಪಿಕೊಳ್ಳುವ ಉದಾರ ಹೃದಯ ಪ್ರತಿ ಭಾರತಿಯನಿಗೂ ಇದೆ. ಯಾರು ಕೂಡ ರಕ್ತ ಕ್ರಾಂತಿಯನ್ನು ಕಾಣಲು ಬಯಸುವುದಿಲ್ಲ. ಅಳುವ ಪಕ್ಷ ಕಾಂಗ್ರೆಸ್ಸ್ ಆಗಲಿ, ಬಿಜೆಪಿಯೇ ಆಗಲಿ ಗತ ಇತಿಹಾಸ ಸೇರಿದ ಭಯೋತ್ಪಾದನೆಯನ್ನು ಆಧಾರವಾಗಿಸಿ ದೇಶವನ್ನು ಕಟ್ಟಲು ಹಪಹಪಿಸುವವರಿಗೆ  ಖಂಡಿತ ಮತದಾರ ದೇಶವನ್ನು ಕೊಡಲಾರ. ನಮಗೆ ನಿಮ್ಮ(ರಾಜಕಾರಣಿಗಳ) ಸೌಂದರ್ಯ, ಜಾತಿ ಧರ್ಮಗಳು ಕಾರಣವಲ್ಲ. ನಮಗೆ ಈ ದೇಶದಲ್ಲಿ ಶಾಂತಿಯಿಂದ  ಸ್ವಾಭಿಮಾನದಿಂದ ಬದುಕಲು ಅವಕಾಶ ಸಿಕ್ಕಿದರೆ ಸಾಕು.

ಮೊದಿಯೋಬ್ಬರು  ಗುಜರಾತಿನ ಬದಲಾವಣೆಯ ಹರಿಕಾರರಾದ  ಕಾರಣ ಅವರ ಅರ್ಹತೆ-" ಭರವಸೆಯ ನಾಯಕ" ಅಷ್ಟೇ. ಒಂದೊಮ್ಮೆ ಕಾಂಗ್ರೆಸ್ಸ್ ಒಳ್ಳೆಯ ಭರವಸೆಯ ನಾಯಕನನ್ನು ೨೦೧೪ ರ ಲೋಕಸಭೆಯ ಒಳಗೆ  ನಿರೂಪಿಸಿದರೆ ನಾವು ಅವರನ್ನು ಇಷ್ಟೇ ಮುಕ್ತ ಹೃದಯದಿಂದ ಸ್ವಾಗತಿಸಬಹುದು. 

ಕಾಯಬೇಕು ೨೦೧೪- ಮೋದಿ  ಗದ್ದುಗೆಯತ್ತ  ಪಯಣಿಸುವರೆ?

ಮೋದಿ ಬದುಕಿನ ಪ್ರತಿಯೊಂದು
ಹಾದಿಯಲಿ ಸದ್ದು ಗದ್ದಳಗಲಿದ್ದು
ಓದಿ ತಿಳಿದು ಚಿಂತನೆಯಲಿ ಮುಳುಗಿ
ಬುದ್ದಿಗೆ ತಿಳಿದಂತೆ ಬರೆದೆ ಈ ಕತನ...

ಎದ್ದು ಬರುವರೆ ಮೋದಿ
ಬಿದ್ದವರನ್ನು ಎತ್ತಲು
ಸಿದ್ಧಿಸುವುದೇ ಅವರಿಗೆ
ಗದ್ದುಗೆಯ  ಅವಕಾಶವು?

Tuesday, July 16, 2013

ಪ್ರೇಮಿಗಳು ದೇಶ ಕಟ್ಟುತ್ತಾರೆಯೇ?

ದೇಶ ಪ್ರೇಮಿಗಳು ದೇಶ ಕಟ್ಟ ಬಹುದು; ಆದರೆ ಕೇವಲ ಪ್ರೇಮಿಗಳು ದೇಶ ಕಟ್ಟುವುದೆಂದರೇನು? ಮನೆಯಿಂದ ಹೊರಬಂದು, ಯಾವ ಕೆಲಸಕ್ಕೂ ಸಿಗದ, ಯಾವುದೊ ಮರದ ಕೆಳಗೆ, ಬೆಳಿಗ್ಗೆಯಿಂದ ಸಾಯಂಕಾಲದ ವರೆಗೂ ಒಬ್ಬರನೊಬ್ಬರ ತೋಳು ಬಂಧಿಯಲ್ಲಿ ಕುಳಿತು "ನನಗಾಗಿ ನೀನು, ನಿನಗಾಗಿ ನಾನು, ನಿನ್ನ ಹೃದಯದೊಳಗೆ  ನಾನು, ನನ್ನ ಹೃದಯದೊಳಗೆ  ನೀನು, ಹಾಗಿದ್ದರೆ ಉಳಿದಿದ್ದೇನು?" ಎಂದು ಹಾಡಿದನ್ನೇ ಹಾಡುತ ಕುಳಿತ ಪ್ರೇಮಿಗಳಿಂದ ದೇಶಕ್ಕೆ ಯಾವ ಪ್ರಯೋಜನ? ಹುಟ್ಟಿಸಿದ ಅಪ್ಪ-ಅಮ್ಮನಿಗೆ, ಕಳಿಸಿದ ಶಾಲೆಗೆ, ಬದುಕಲು ಕೊಟ್ಟ ಸಮಾಜಕ್ಕೆ, ಈ ದೇಶಕ್ಕೆ ಭಾರ ಅಂತೀರಾ??

ಕಳೆದ ವಾರ, ನನ್ನ ಆಫೀಸ್  badge  ಕೆಲಸ ಮಾಡದ ಕಾರಣ ನಾನು ಎರಡು ದಿನ ಆಫೀಸ್ ನಿಂದ ಹೊರಗೆ ಉಳಿಯ ಬೇಕಾಯಿತು. ಒಂದು ದಿನ ಒಬ್ಬನೇ ಮನೆಯಲ್ಲಿ ಕುಳಿತು ಪುಸ್ತಕ ಓದಿ ಕಳೆದೆಯಾದರು ಎರಡನೇ ದಿನ ನನ್ನಿಂದ ಒಬ್ಬನೇ ಇರುವುದು ಸಾಧ್ಯವಾಗಿಲ್ಲ. ನನಗೆ ಹತ್ತಿರದಲ್ಲಿ ಒಂದು ಬೆಟ್ಟ-ಗುಡ್ಡ ಅಥವಾ ಶಾಂತವಾಗಿರುವ ಪ್ರದೇಶವಿದ್ದರೆ ಹೇಳಿ ಎಂದು roomate ಗಳಿಗೆ ಕೇಳಿದಾಗ ಸಲಹೆ ನೀಡಿದ್ದು "Lal Bhag ". ಬೆಂಗಳೂರಿನ ಕೇಂದ್ರೀಯ ಬಸ್ ನಿಲ್ದಾಣದಿಂದ ಮೂರೂ ನಾಲ್ಕು ಕೀ. ಮಿ ದೂರದಲ್ಲಿರುವುದರಿಂದ ಹೋಗಿ ಬರುದು ಕೂಡ ಸುಲಭವೆಂದು Lal Bhag ನಟ್ಟ ಪ್ರಯಾಣ ಮಾಡಿದೆ.

Lal Bhag  ಪ್ರವೇಶ ದ್ವಾರದಲ್ಲಿ ಟಿಕೆಟ್ ಕೌಂಟರ್ ಗೆ ನಿಂತಾಗ, ದ್ವಾರ ಪಲಕ ಎರಡು ಟಿಕೆಟ್ ಕೈಗಿತ್ತು ೨೦/- ಕೇಳಿದ. "ಸರ್ ಎರಡು ಟಿಕೆಟ್ ಯಾಕೆ?" ಎಂದು ಮರು ಪ್ರಶ್ನೆಗೆ, "ಒಬ್ರೇನಾ?  by default ಎರಡು ಟಿಕೆಟ್ ಕೊಟ್ಟು ಬಿಡ್ತೇವೆ" ಎಂದು ಹೇಳಿ, ಒಂದು ಟಿಕೆಟ್ ಅನ್ನು ವಾಪಸು ಪಡೆದು ೧೦/- ಹಿಂದಿರುಗಿಸಿದ. ಆತನ ಬಾಯಿಂದ ಬಂದ, "by default " ಪದಕ್ಕೆ ನಾನ್ಯಾವ ಅರ್ಥವನ್ನು ಆ ಸಂದರ್ಭದಲ್ಲಿ ಕಲ್ಪಿಸಿ ಕೊಳ್ಳಲು ಸಾಧ್ಯವಾಗಿರಲಿಲ್ಲ.

ಲಾಲ್ ಭಾಗ್ ಬೃಹತ್ ಬೆಂಗಳೂರಿನ "ಬೃಹತ್ ಬೆಟ್ಟ-ಗುಡ್ಡ ಪ್ರದೇಶ" ಇರಬೇಕು. ಕಬ್ಬನ್ ಪಾರ್ಕ್ ಅನ್ನೋದೊಂದು ಇದೆಯಂತೆ. ಅಲ್ಲಿ ನಾನಂತೂ ಹೋಗಿಲ್ಲ. ಈ  ಲಾಲ್ ಭಾಗ್ ಪಶ್ಚಿಮ ಘಟದಲ್ಲಿ ಹುಟ್ಟಿ ಬೆಳುದು ಬಂದ ಹುಡುಗರಿಗೆ ಒಂದು ಸಣ್ಣ ತೋಟ ನೋಡಿದ ಅನುಭವ ಕೊಡಬಹುದಷ್ಟೇ. ಇರಲಿ, ಬೆಂಗಳೂರು ಎಂಬ ನಗರದ ಒಂದು ಭಾಗದಲ್ಲಿ  ನೋಡುವದಕ್ಕಾದರು ಒಂದು ಅರಣ್ಯ ಪ್ರೆದೇಶ ಇದೆಯಲ್ಲವೆಂದು  ಸಂತೋಷ ಪಡೋಣ.

ಆದರೆ, ಲಾಲ್ ಭಾಗ್ ಕೇವಲ ಬೆಟ್ಟ ಅಲ್ಲ, ಉದ್ಯನವಲ್ಲ ಅದು ಪ್ರೇಮಿಗಳ ಸ್ವರ್ಗ. ಒಂದೊಂದು ಮರದ ಕೆಳಗೆ ಒಂದೊಂದು ಜೋಡಿ. ಜೋಡಿಗಳ  ಚಲನ-ವಲನ, ತಪ್ಪಿ ಹೋಗುವರೆಂದು ಅಪ್ಪಿ ಕೊಂಡುವರ ದೃಶ್ಯಗಳು ನೋಡತ್ತ ಹೋದಂತೆ ಪ್ರೇಮಿಗಳು ಇರಬೇಕು ಅಂದರೆ ಕಾಡು ಇರಲೇ ಬೇಕು ಅನಿಸಿತು. ಹಾಗೊಮ್ಮೆ ಯೋಚಿಸಿದಾಗ   ಪಶ್ಚಿಮ ಘಟದ ನಾವೇ ಶ್ರೇಷ್ಠ ಪ್ರೇಮಿಗಳು ಎಂದು ಭಾವಿಸಿ ಕೊಂಡೆ. ಏನೇ ಇರಲಿ, ಪ್ರೇಮಿಗಳ ಸ್ವರ್ಗ ನೋಡಿದಾಗ ಇವರಿಂದ ಏನು ಪ್ರಯೋಜನ ಎಂಬ ಪ್ರಶ್ನೆ ಮೂಡುವುದು ಸಹಜ? ನನಗನ್ನಿಸಿದ್ದು ನಿಜವಾಗಿ ದೇಶವನ್ನು ಕಟ್ಟುವರು ಇವರೇ ಎಂದು ..!?

ಒಂದು ದೇಶವನ್ನು ಕಟ್ಟಬೇಕು ಅಂದರೆ ಮೊದಲು ಭಾವನಾತ್ಮಕವಾಗಿ ನಾವೆಲ್ಲಾ ಒಂದು ದೇಶದವರೆಂದು ಭಾವಿಸಬೇಕು. ಎಲ್ಲರು ಎದೆ ತಟ್ಟಿ ಇದು ನನ್ನ ದೇಶ ಎನ್ನಬೇಕಾದರೆ ಅದೆಂತ ಬೆಸುಗೆ ಈ ಜನರ ಮಧ್ಯೆ ಇರಬೇಕು? ಭಾರತದಲ್ಲಿ  ಇಂದಿಗೂ ಅಂತ ಬೆಸುಗೆಯ ವೈಫಲ್ಯತೆ ಇದೆ. ಹಿಂದೂ-ಮುಸಲ್ಮಾನ-ಕ್ರಿಶ್ಚಿನ ಎಂದು ಹೊಡೆದಾದುತ್ತೇವೆ; ಹಿಂದುಗಳಲ್ಲೇ ದಲಿತ, ಕೀಳು, ಕೆಟಗರಿ, ಬ್ರಾಹ್ಮಣ ಅಂತೆಲ್ಲ ಸಾಮಾಜಿಕ ಅಂತಸ್ತುಗಳನ್ನು ಸೃಷ್ಟಿ ಮಾಡಿ ಎಷ್ಟೇ ಗಾಮ್ಭಿರ್ಯದಿಂದ, ಪ್ರಖರಿತ ವಾಗ್ಜರಿಯಿಂದ ಭಾಷಣಗಳನ್ನು ಮಾಡಿದರು,ದೇಶದ ಜಾತ್ಯತೀತ ನಿಲುವಿನ ಮೇಲೆ ಉದ್ಗೃಂಥ ಗಳನ್ನೂ ಬರೆದರೂ ನಾವು-ನೀವು ಎಂಬ ಭೇಧವನ್ನು ಕಳೆದ ೬೦ ವರ್ಷಗಳಿಂದಲೂ ಈ ಜಾತ್ಯತೀತ ಭಾರತದಲ್ಲಿ ಉಳಿಸಿಕೊಂಡು ಬಂದಿದ್ದೇವೆ. ನಾವು ಏನೇ ಹೇಳಿದರು, ಮನಸ್ಸಿನ ಆಳದಲ್ಲಿ ಜಾತಿಗಳ, ಧರ್ಮಗಳ ಕುರಿತಾದ ಬೆಸುಗೆ ತೀರಾ ಕಳಪೇನೆ ಆಗಿರುತ್ತದೆ. ರಾಜಕಾರಣಿಗಳು ಮತಕ್ಕಾಗಿ, ಸ್ವಾಮಿಗಳು ತಮ್ಮ ಮಠ ಉಳಿಸಿಕೊಳ್ಳಲು, ಕೆಳವರ್ಗದವರೆಂದು ಕರೆಸಿ ಕೊಂಡವರು  ಸರ್ಕಾರದಿಂದ ಲಾಭ ಪಡೆಯಲು ಜಾತಿಯನ್ನು ಉಳಿಸಿಕೊಂಡೆ ಜಾತ್ಯತೀತ ನಿಲುವನ್ನು ಪ್ರಕಟಿಸುವುದು ಖೇಧಕರ.

ಇಂಥ ಜಾತಿ, ಮತ, ಧರ್ಮಗಳ  ಸಮ್ಮಿಲನವಾಗಿ ಭಾವನಾತ್ಮಕವಾಗಿ ಜಾತ್ಯತಿತತೆ ಎತ್ತು ಹಿಡಿಯುವ  ಒಂದು ವರ್ಗ ಈ ದೇಶದಲ್ಲಿದ್ದರೆ ಅದು ಪ್ರೇಮಿಗಳಾಗಿ ಅಂತರ್ ಜಾತಿಯ ವಿವಾಹವಾಗುವ  ವರ್ಗ.ಅವರಿಗೆ ಮೇಲು ಕೀಳು ಭಾವವಿಲ್ಲ. ಧರ್ಮದ ನೋವು ಇಲ್ಲ; ಅಂತ ಪ್ರೇಮಿಗಳಲ್ಲಿ ಇರುವುದು ಬುರ್ಖಾ secularism  ವೂ ಅಲ್ಲ; naked  secularism  ವೂ ಅಲ್ಲ; ಅದು ನಿಜಾವಾಗಿ ಭಾರತವನ್ನು ಒಂದು ಎಂದು ಹೇಳಬಲ್ಲ  real  secularism .

ಇಂಥ ಅಂತರ್ ಜಾತಿಯ ವಿವಾಹಗಳು ದೇಶದ ಒಳಿತಿಗೆ ಸಹಕಾರಿಯೆಂದು ನಾನು ಹೇಳಿದ್ದಲ್ಲ; ಯಾವೊದೋ ಒಬ್ಬ ಪ್ರೇಮಿ ಹೇಳಿದ ಮಾತಲ್ಲ; ಅದು ಭಾರತದ  ಮಾನ್ಯ ಸರ್ವೋಚ್ಚನ್ಯಾಲಯ ಹೇಳಿದ ಮಾತು(http://goo.gl/z538W). ಭಾರತದ ಸಧ್ಯದ ಪರಿಸ್ಥಿಯಲ್ಲಿ ಅಂತರ್ ಜಾತಿಯ ವಿವಾಹಗಳು ಸಾಮಾಜಿಕ ಸಂಪ್ರದಾಯಗಳಿಗೆ ವಿರುದ್ಧವಾಗಿರುವದರಿಂದ  ಅರೇಂಜ್ಡ್ ಇಂಟರ್ ಕಾಸ್ಟ  ಮ್ಯಾರೇಜ್ ಗಳು ಒಂದು ಮರೀಚಿಕೆ ಅನ್ನುವಂತಿದೆ. ಹೀಗಾಗಿ ಪ್ರೇಮಿಗಳು ಮಾತ್ರ ಈ ನಿಟ್ಟಿನಲ್ಲಿ ಅಸಾಧ್ಯವಾದನ್ನು ಸಾಧಿಸುತ್ತಾರೆ ಅನ್ನುವುದು ನನ್ನ ನಂಬಿಕೆ. ಅವರಿಗೆ ಒಂದು ಸಲಾಂ..!

ಪ್ರೇಮಿಗಳೇ,
 ನೀವು ಸಮಾಜದ  ದರಿದ್ರ ಜಾತಿ ಸಂಪ್ರದಾಯದ ವಿರುದ್ದ ಬಂಡಾಯವೆದ್ದು  ಬದುಕ ಬೇಕಾದವರು. ಹೀಗಾಗಿ ನಿಮ್ಮ ಪ್ರೇಮದ ಕತೆಯನ್ನು ಸುಖಂತವನ್ನಾಗಿಸಲು ನೀವು ಸಮಾಜದ ಎಲ್ಲ ಅಂಗ (ತಂದೆ, ತಾಯಿ,ಬಂಧು-ಬಳಗ, ಧರ್ಮ)ಗಳಿಂದಲೂ ದೂರವಾಗಿ ಬದುಕ ಬೇಕಾದ ಕಾಲದಲ್ಲೂ ಕೆಂಗೆಡದೆ  ಮುಂದುವರಿಯಬೇಕಾದರೆ ಅರ್ಥಿಕ ಸ್ವಲಂಬನೆ  ನಿಮಗೆ ಅಗತ್ಯವಾಗಿ ಬೇಕು. ಹೀಗಾಗಿ ಓದುವ ಕಾಲದಲ್ಲಿ ನೀವು ಯಾವುದೊ ಮರದ ಕೆಳಗೆ ಕುಳಿತು ಪ್ರೇಮ ಗೀತೆ ಹಾಡಿದರೆ, Newton ತಲೆಯ ಮೇಲೆ  apple    ಬಿದ್ದಹಾಗೆ  ನಿಮ್ಮ ತಲೆ ಮೇಲೆ apple  ಬಿದ್ದರೂ ಪ್ರಯೋಜನವಾಗಲಾರದು. ಓದುವ ಕಾಲದಲ್ಲಿ ಓದಿ ಸ್ವತಂತ್ರರಾದಾಗಲೇ ನಿಮ್ಮ ಪ್ರೀತಿ-ಪ್ರೇಮಕ್ಕೆ ಬೆಲೆ, ದೇಶಕ್ಕೊಂದು ಕೊಡುಗೆ. ಇಲ್ಲದೆ ಹೋದರೆ, 'ಕಿಸ್ಸಿಂಗ್' ಎಂದು ಯಾವ ಮರದ ಕೆಳಗೆ ಕುಳಿತಿದ್ದಿರೋ, ಅದೇ ಮರದ ಕೆಳಗೆ 'ಮಿಸ್ಸಿಂಗ್' ಎಂದು ಬರೆಯುವ ಕಾಲ ಬಂದೀತು. ಜೋಕೆ .....!

ಆ ಪುಣ್ಯಾತ್ಮ ಎರಡು ಟಿಕೆಟ್ "by default" ಆಗಿ ಕೊಡುವುದಕ್ಕೆ ಕಾರಣ ಇಷ್ಟೊಂದು ಪ್ರೇಮಿಗಳ ಆಗಮನವೇ ಕಾರಣ ಎಂದು "ಲಾಲ್ ಭಾಗ್ ಗುಡ್ ಬೈ" ಹೇಳುವಾಗ ಅರಿವಿಗೆ ಬಂತು.

Saturday, July 13, 2013

ಪ್ರೀತಿ ಪ್ರೇಮ ಪ್ರಣಯ-ಅಷ್ಟೆಲ್ಲಾ...?

ನನಗೊತ್ತು...ಲವ್ ಬಗ್ಗೆ  ಮಾತಾಡುವುದಕ್ಕೆ ಬೇಕಾದಷ್ಟು ಜನ ಸಿಗುತ್ತಾರೆ. ಆದರೆ ಮದುವೆ ಬಗ್ಗೆ ಮಾತಾಡುವ ಮಂದಿ ಬಹಳ ಕಡಿಮೆ ಅಥವಾ ಸಿಗುವುದೇ ಇಲ್ಲ. ಅದಕ್ಕೆ ಕಾರಣ ಇಲ್ಲದಿಲ್ಲ. ಪ್ರೀತಿ-ಪ್ರೇಮ ಏನಿದ್ದರು ಅದು ಹುಡುಗ-ಹುಡುಗಿಗೆ ಸಂಬಧಿಸಿದ್ದು; ಮದುವೆ ತಮ್ಮ ಮನೆಯವರಿಗೆ ಸಂಬಂಧಿಸಿದ್ದು ಅನ್ನುವ ಧೋರಣೆ ಯೌವನದ ದಾರಿಯಲ್ಲಿದ್ದಾಗ ಎಲ್ಲರು ಭಾವಿಸುತ್ತಾರೆ. ಹಿರಿಯರು ಕೂಡ ಮದುವೆ ತಮ್ಮ ನಿರ್ಧಾರದಂತೆ ನಡೆಯಬೇಕೆಂದು ಹಂಬಲಿಸುತ್ತಲೇ ಇರುತ್ತಾರೆ(ಯಾಕೆ? ಮುಂದಿನ ಲೇಖನದಲ್ಲಿ).

ಮದುವೆಗೂ-ಪ್ರೀತಿಗೂ ಅಂತರ ಬಹಳ ಕಡಿಮೆ. ಪ್ರೀತಿಗೆ  'ಪ್ರೀತಿ'ಯ ಹುಟ್ಟು ಮಾತ್ರ ಗೊತ್ತು; ಆದರೆ ಮದುವೆಗೆ ಪ್ರೀತಿಯ ಹುಟ್ಟು-ಸಾವುಗಳೆರಡು ಗೊತ್ತು. ಪ್ರೀತಿಯೇ ಮದುವೆಯ ಮೂಲ ಹೆಜ್ಜೆ. ಒಂದೊಮ್ಮೆ ಪ್ರೀತಿಯ ಕುರಿತಾಗಿ ಕಲ್ಪನೆಗಳೇ ಇಲ್ಲದಿದ್ದರೆ ಯಾರು ಮದುವೆನೇ ಆಗುತ್ತಿರಲಿಲ್ಲವೋ  ಏನೋ? ಆದರೆ ಯೌವನದ ಬಿಸಿ ರಕ್ತದ ಪರಿಚಲನೆಯಲ್ಲಿ ದೇಹವೇ ಪ್ರೀತಿ-ಪ್ರೇಮದ ಕುರಿತಾಗಿ ಅಮರವಾದ ಸಂವೇದನೆಗಳನ್ನು ವ್ಯಕ್ತ ಪಡಿಸುತ್ತ ಸಾಗುವಾಗ ಅದೇ ಪ್ರೀತಿಯ ಭಾವನೆಗಳು ಮದುವೆಯೆಂಬ ಕಲ್ಪೆನೆಯಲ್ಲಿ, ಒಂದೇ ಮನೆಯಲ್ಲಿ, ಒಬ್ಬ ವ್ಯಕ್ತಿಯ ಜೊತೆಯಲ್ಲಿ ಬದುಕುವಾಗ ಹೇಗಿರಬಹುದು ಎಂದು ಭಾವಿಸುವದಕ್ಕೂ, ಉಹಿಸಿಕೊಲ್ಲುವುದಕ್ಕೂ  ಮನಸ್ಸಿಗೆ ಸ್ವಲ್ಪವೂ ಬಿಡುವು ಇರುವುದಿಲ್ಲ. ಸಮಾಜದಲ್ಲಿ ಮದುವೆಯ ನಂತರದ ದಿನಗಳಲ್ಲಿ ಗಂಡ-ಹೆಂಡತಿಯರ ಅದೆಷ್ಟು ಜಗಳಗಳು ನಮ್ಮ ಗಮನಕ್ಕೆ ಬಂದರು ನಾವು ಅಷ್ಟೊಂದು ಸೂಕ್ಷ್ಮವಾಗಿ ನೋಡುವುದೇ ಇಲ್ಲ.ಕಾರಣ, ಪ್ರೀತಿಯ ಸಂವೇದನೆ ಮುಂದೆ ಅವೆಲ್ಲ ಗಣಕವೇ ಅಲ್ಲ ಅಂದುಕೊಳ್ಳುದು ಒಂದು ವಿಚಾರ ವಾದರೆ, ಅಂತಹ ವಿಚಾರಗಳನ್ನು ನಾವೊಮ್ಮೆ ಮೆಲಕು ಹಾಕಲೇ ಬೇಕು ಅನ್ನುವ ಜವಾಬ್ಧಾರಿ ಕೂಡ ನಮ್ಮ ಮೇಲಿರುವುದಿಲ್ಲ.

ಆಹಾ!,

ಅದೊಂದು ದಿನ, ಮಣಿಪಾಲದಲ್ಲಿ ಫುಟ್ಬಾಲ್ ಆಟ ಆಡಿ, ಮನೆಯ ಹಾಲ್ ನಲ್ಲೆ ಶವಾಸನದಲ್ಲಿ  ಮಲಗಿಕೊಂಡಿದ್ದೆ. ಶವಾಸನ  ಮುಗಿದು, ಸ್ವಲ್ಪ ನಿದ್ರಾಸನಕ್ಕೆ(ಅಂತದೊಂದು ಆಸನ ಇದೆಯಾ?) ಜಾರುವ ಸಂದರ್ಭದಲ್ಲಿ ನನ್ನ ಫೋನ್ ರಿಂಗ್ ಹೊಡಿಯಿತು. ಎದ್ದು ನಿಂತು, ಹೊರಕ್ಕೆ ಬಂದು, "ಹಲ್ಲೋ ಯಾರು?" ಎಂದು..
"ನಾನು ವರದಾ ಹಸ್ಬಂಡ್, ಜಾನಕಿನಾಥ  ಹೈದರಬಾದ್ ನಿಂದ ಕಾಲ್ ಮಾಡ್ತಾ ಇದ್ದೇನೆ.."..
"ಯಾರು ?! , ವರದಾ!? ಯಾರು ಅಂತ ಗೊತ್ತಾಗುತ್ತಿಲ್ಲ ...ಏನು ವಿಚಾರ ಹೇಳಿ ?" . ಹೀಗೆ ಕೆಲವು ಸಮಯ ನಡೆದ  ಸಂಭಾಷಣೆಯಲ್ಲಿ, ನನ್ನ ಪರಿಚಯದವಲೋಬ್ಬಳು  ಅನ್ನುವುದು ತಿಳಿಯಿತು. ಮನೆಯ ಸೈಟವೊಂದನ್ನು ಖರಿದಿಸಬೇಕೆಂದು ವ್ಯವಹಾರಕ್ಕಿಳಿದಾಗ ಬ್ರೋಕರ್ ಆಗಿ ಸಿಕ್ಕ ವರದಾ,  ವ್ಯವಹಾರ ಚತುರೆಯಾಗಿದ್ದ ಆಕೆ ನನ್ನ ಜೊತೆ ಒಳ್ಳೆಯ ರೀತಿಯಲ್ಲಿ ನಡೆದು ಕೊಂಡಿದ್ದಳು. ಜೊತೆಗೆ, ನನ್ನಿಂದಾಗಿ ನನ್ನ ಕೆಲವು ಸಹೋದ್ಯೋಗಿಗಳ ಜೊತೆಗೂ ವ್ಯವಹಾರ ಕುದುರಿಸಬಹುದು ಅನ್ನುವುದು ಅವಳ ಮನೋಇಂಗಿತವಿದ್ದೀತು. ಹೀಗಾಗಿ ನನ್ನ ನಂಬರ್ ಅವಳ ಮೊಬೈಲ್ ನಲ್ಲಿ ಇತ್ತು.

ನಾವಿಬ್ಬರು ಹೀಗೆ ವ್ಯವಹಾರಕೆ  ಬಂದ ನಾಲ್ಕಾರು ತಿಂಗಳೊಳಗೆ ಅವಳ ಮದುವೆಯಾಯಿತು. ನಂತರ ಅವಳು ಎಲ್ಲಿಗೋ ಹೋದಳು... ನಾಪತ್ತೆ...!

ಅವಳ ಮದುವೆಯಾಗಿ ೬ ತಿಂಗಳು ಕಳೆದ ಬಳಿಕ ಅವಳ ಗಂಡ ಜಾನಕಿನಾಥ, ಅವಳಿಗೆ ತಿಳಿಯದ ಹಾಗೆ  ಅವಳ ಮೊಬೈಲ್ ಶೋಧಿಸಿ ಅವಳ ಮೊಬೈಲ್ contacts ಗೆ ಕಾಲ್ ಮಾಡಲಾರಂಭಿಸಿದ್ದ.
"ಒಹ್, ಗೊತ್ತಾಯಿತು  ವಿಷಯ ಹೇಳಿ? " ಎಂದೇ.
"ಏನಿಲ್ಲ, ಬೇಸರ ಮಾಡ್ಕೋ ಬಾರದು. ನಿಮ್ಮ ಮೇಲೆ ನನಗೇನು ಸಂಶಯ ಅಂತ ಭಾವಿಸಬಾರದು. ನಿಮ್ಮಿಂದ ನನಗೊಂದು ಹೆಲ್ಪ್ ಬೇಕು ಅಷ್ಟೇ". ಅವನಿಗೆ ಧೈರ್ಯ ಸ್ಪಂದನೆ ನೀಡಿದ ಮೇಲೆ ಅವನು ಹೇಳಿದಿಷ್ಟು :

" ನಾನು ೪ ತಿಂಗಳ ಹಿಂದೆ ವರದಾಳನ್ನು  ಮದುವೆಯಾದೆ. ಮದುವೆ ನಮ್ಮ ಮನೆಯವರು ಸೇರಿ, ಜಾತಕ ನೋಡಿ ಮದುವೆ ಮಾಡಿದ್ದು ಸರ್. ಆದರೆ ಅವಳಿಗೆ ನನ್ನ ಜೊತೆಗೆ ಸರಿ ಬರ್ತಿಲ್ಲ... ಏನು ಹೇಳಿದರು ಕೊಪ್ಪಿಸಿ ಕೊಳ್ಳುತ್ತಾಳೆ. ಅವಳು ಯಾಕಿಗೆ ಮಾಡ್ತಾಳೆ ಅಂತ ಗೊತ್ತಿಲ್ಲ...ನನಗೇನು ಜಾತಕ-ಗಿತ್ಕ ನಂಬಿಕೆಯಿಲ್ಲ. Atleast , psycologist ಗೆ ತೋರಿಸಿ ಬರೋಣ ಅಂದ್ಕೊಂಡೆ. ಆದರೆ ಅವಳ ಪೂರ್ವಾಪರ ಏನು ಅಂತಾನೆ ಗೊತ್ತಿಲ್ಲ ಸರ್. ಬಹಳ ಹಿಂದೆ ನೀವೇ ಈ ಮೊಬೈಲ್ ಗೆ ಕಾಲ್ ಮಾಡಿ 'ವರದಾ  ಇದ್ದರಾ' ಅಂತ ಕೇಳಿದ್ದಿರಿ. ಅದಕ್ಕೆ ನೀವು ಅವಳ ಫ್ರೆಂಡ್ ಅಂದ್ಕೊಂಡು ಕೇಳ್ತಾ ಇದ್ದೇನೆ... ದಯವಿಟ್ಟು ತಪ್ಪಾಗಿ ತಿಳಿಬಾರದು".

ಆತನ ಮಾತುಗಳನ್ನು ಕೇಳುತಿದ್ದರೆ  ಒಂದು ಬಗೆಯ ವಿನಮ್ರತೆ ಇತ್ತು ಆದರೆ ಅದೊಂದು ಸಂಶಯ ಬುದ್ದಿಯೋ,ಏನೋ ನೋವಿನ ಸಂಗತಿಯೋ ತಿಳಿಯಲಿಲ್ಲ. ಆದರೆ, ಮದುವೆಯಾದ ಮೇಲೆ, ತನ್ನ ಹೆಂಡತಿಯಂದು ಒಪ್ಪಿದವಳನ್ನು ನಾಲ್ಕು ಜನರಲ್ಲಿ "ಅವಳು ಹೇಗೆ?" ಎಂದು ಪ್ರಶ್ನಿಸಿದರೆ ಯಾರು ತಾನೇ ಹೇಳಿಯಾರು? ಅದೆಷ್ಟು ಸರಿ ?ನಾನು ಯಾಕಾಗಿ ಅವಳ ಜೊತೆ ಮಾತನಾಡಿದೆ ಎಂದು ತಿಳಿಸಿ, ಅವಳ ಬಗ್ಗೆ ವಯಕ್ತಿಕ ವಿಚಾರಗಳ ಕುರಿತಾಗಿ ತಿಳಿದಿಲ್ಲವೆಂದು ಹೇಳಿ,     
"ಹೆಂಡಿತಿಯೆಂದು ಕರೆತಂದ ಹೆಣ್ಣನ್ನು ಕುರಿತಾಗಿ  ಮತ್ತೊಬ್ಬರಲ್ಲಿ ನೀವು ಹೀಗೆ ಪ್ರಶ್ನಿಸುವುದು ತಪ್ಪು, ಬೇಕಾದರೆ ನೀವು ಇಬ್ಬರು ಚೆನ್ನಾಗಿ ಸಂಯಮದಿಂದ ಚರ್ಚೆ ಮಾಡಿ. ಇಲ್ಲವೇ ನೀವಿಬ್ಬರೂ ಡಾಕ್ಟರಗೆ ಭೇಟಿಯಾಗಿ.." ಎಂದು ಸಲಹೆ ನೀಡಿ  ಕಾಲ್ ಮುಗಿಸಿದ್ದೆ.

ಈ ಘಟನೆಯ ಮೂಲಕವಾಗಿ, ನಾನು ಮದುವೆಯ ಕುರಿತಾಗಿ ಪ್ರೀತಿ-ಪ್ರೇಮ-ಪ್ರಣಯದ ಆಚೆಗೂ ಒಂದು ವಿಶಾಲವಾದ ಜಗತ್ತು ಇದೆ ಎಂಬುದನ್ನು ಅರಿತೆ. ಈ ಘಟನೆಯ ನಂತರ ಮದುವೆಯಾದ ಅಂಕಲ್-ಗಳ ಜೊತೆ ಮದುವೆ ನಂತರದ ವಿಷಯವಾಗಿ ಅಲ್ಲಿ-ಇಲಿ ಮಾತನಾಡಿದೆ. ಅವರ ವಿಚಾರಗಳ  ಒಟ್ಟು ಸಾರ ಹೀಗಿದೆ:

ಮದುವೆ ಎಂಬ ಸಂಕೀರ್ಣ ಸಂಬಂಧ ನಾವು ಭಾವಿಸಿಕೊಳ್ಳುವಷ್ಟು ಸರಳ ಅಂತೂ ಖಂಡಿತ ಅಲ್ಲ. ಹಾಗೆಂದು ದಂಪತಿಗಳೆಂಬ ಜೀವಿಗಳ ನಡುವೆ ವಾದ-ಪ್ರತಿವಾದ-ಸಂವಾದ, ಜಗಳ-ಮೌನ-ಮಾತು ಇವುಗಳ ಸರಣಿ ಇದ್ದರೇನೆ ಸುಖವೇನು-ದುಖವೇನು ಎಂಬುದು ಮನುಷ್ಯನ ಸ್ಮೃತಿಗೆ ಬರಲು ಸಾಧ್ಯ, ಹದವಾದ ಸಾಂಬರನ  ಒಗ್ಗರಣೆಯಂತೆ ಸುಖ-ದುಖಗಳ ಮಿಶ್ರಣ ಇರಲೇ ಬೇಕು. ಒಂದೊಮ್ಮೆ, ಸುಖವೊಂದೆ ಇದೆ ಅಥವಾ ದುಖವೊಂದೆ ಇದೆ ಅನ್ನುವುದಾದರೆ ದಾಂಪತ್ಯ ಹಳಿ ತಪ್ಪಿದೆ ಅಂತಾನೆ ಅರ್ಥ.ಮದುವೆಯಾದ ಮೇಲೆ ಗಂಡಸರು ಯಾವಾಗಲು ಹೆಣ್ಣಿಗೆ ಸೋಲುವ, ಸೋಲಲೇ ಬೇಕಾದ ಜೀವಿಗಳು. ಹಾಗಾಗಿ ಹೆಂಡತಿಯ ಜೊತೆ ಬಹಳ ಸಮಯ ಜಗಳ ಮಾಡಿ ಸಮಯ ವ್ಯರ್ಥ ಮಾಡುವುದು ಒಳ್ಳೆಯದಲ್ಲವಂತೆ.

ಮನುಷ್ಯನ ಜೀವನದ ಮೇಲೆ ಏನೋ ಕೆಲಸವಿಲ್ಲದ ಗ್ರಹಗಳು ಅದೆಷ್ಟೋ  ಪ್ರಭಾವ ಬಿರುತ್ತಾವೆ ಗೊತ್ತಿಲ್ಲ. ಆದರೆ ಜಾತಕಗಳು ಎಲ್ಲವನ್ನು ನಿರ್ಧರಿಸಿ, ಯಾವಾಗಲು ಅಮೃತಮಯವಾದ ಸಂಬಂಧ ಒದಗಿ ಬರುತ್ತವೆ ಎಂದು ಹೇಳುವ ಹಾಗಿಲ್ಲ.ಹಿರಿಯರೇ ಮದುವೆ ಮಾಡುವಾಗ ಹುಡುಗಿಯ 'ಬಗೆ'ಯಾಗಲಿ("ಬಗ್ಗೆ" ತಿಳಿದಿರುತ್ತವೆ),  ಹುಡುಗನ 'ಬಗೆ'ಯಾಗಲಿ ತಿಳಿದು ಕೊಳ್ಳಲು ಅವಕಾಶ, ಅದಕೊಂದು ಸಮಯ ಇರುವುದು ತುಂಬಾ ಕಡಿಮೆ. ಕೇವಲ ಬಾಹ್ಯವಾಗಿ ಅವರವರ ಬಗ್ಗೆ ಮಾತ್ರ ತಿಳಿದುಕೊಂಡು ಸಪ್ತಪದಿ ತುಳಿದ ಮೇಲೆ, ಬಗೆಯ ಕುರಿತಾಗಿ ತಿಳಿಯಲು ಹೊರಟಾಗ ಕಾಣುವ ವತ್ಯಾಸಗಳು ಮದುವೆಯೊಂದು ಗೋಳಾಗಿಸಿತು-ಇದು ವರದಾ ಬದುಕಿನ ಸತ್ಯ. ಹೀಗಾಗಿ ಅರೇಂಜ್ಡ್  ಮ್ಯಾರೇಜ್ ನಲ್ಲಿ ಅಂತದೊಂದು ನೋವು ಇದೆ ಅನಿಸುತ್ತಿದೆ. 

ಆದರೆ, ಮುಂದೇನು ಆಗುವುದೋ ನಾ ತಿಳಿಯೆ ? ನನಗೆ ಜೋತಿಷ್ಯವಾಗಲಿ, ರವಿ-ಚಂದ್ರರನ್ನು ಕಾಗದ ಮೇಲೆ ಕುಳ್ಳಿರಿಸಿ
ಮತ್ತೊಂದು ಹುಡುಗಿ ಅಥವಾ ಹುಡುಗನ ಬದುಕಿನ ವ್ಯವಹಾರದ ನೀತಿ ತಿಳಿಯಲು ಸಾಧ್ಯವಾಗಿಲ್ಲ. 

Thursday, July 4, 2013

"ಮದುವೆ ಇಲ್ಲದ ಮೇಲೆ.. !"

ಅದು ನನ್ನ ಸಂಬಂಧಿಕರೊಬ್ಬರ ಮನೆಯಿರುವ ಊರು. ನಾನು ಆಗಾಗ್ಗೆ ಆ ಊರಿಗೆ ಹೋಗುತಿದ್ದೆ. ನನ್ನ ಸಂಬಂಧಿಕರ ಮನೆಗೆ  ಹೋಗುವ ದಾರಿಯಲ್ಲಿ ಒಂದು ಬ್ರಾಹ್ಮಣರ ಮನೆಯಿದೆ(ಜಾತಿಯ ಬಗ್ಗೆ ಬರೆಯಬಾರದೆಂದು ಕೊಂಡಿದ್ದೆ.ಆದರೆ ಕತೆ ಹೇಳಬೇಕೆಂದರೆ ಸಮಾಜದ ಸ್ಥಿತಿಗೆ ಹೊಂದಿಕೊಂಡಿರಲೇ ಬೇಕಲ್ಲವೇ?). ಪಾಪ ಬಡ ಬ್ರಾಹ್ಮಣರು. ಆ ಮನೆಯಲ್ಲಿ ಮೂರೇ ಜನ:ಗಂಡ ಹೆಂಡತಿ ಹಾಗೂ ಒಬ್ಬ ಮಗ. ಒಂದಿಷ್ಟು ಭೂಮಿ,ಎರಡು ದನ ಹಾಗೂ ಹಳ್ಳಿಯ ಸಣ್ಣ ದೇವಲಾಯ ಅಷ್ಟೇ ಅವರ ಆಸ್ತಿ. ಅವರ ಮಗ ೩೫ ರಿಂದ ೪೦ ವರ್ಷದವನು.ನಾನು ಸಣ್ಣವನಿದ್ದಾಗ, ಆ ಸಂಬಂಧಿಕರ ಮನೆಗೆ ಹೋದಾಗ ಅವನಿಗೆ ಭೇಟಿಯಾಗಿ, ಮಾತನಾಡಿ ಬರುತಿದ್ದೆ. ಆ ದಿನಗಳಲ್ಲಿ ಅವನು ಆಟ ಆಡುವ ವಯಸ್ಸಿನ ಮಾಣಿ.  ಅವನು ಒಬ್ಬನೇ ಮಗನಾದ್ದರಿಂದ, ಬ್ರಾಹ್ಮಣರ ಬಡತನ ಸರ್ಕಾರದ ಲೆಕ್ಕಕ್ಕೆ ಸಿಗದೇ ಇರುವುದರಿಂದ ಅವನ ತಂದೆ ತಾಯಿ ಅವನ ಓದುವಿಗೆ ಪ್ರಯತ್ನ ಮಾಡಲೇ ಇಲ್ಲ ಅನಿಸುತ್ತದೆ. ಒಟ್ಟಾರೆ ಅವನು ೩- ೪ ಕ್ಲಾಸು ಓದಿ, ಮನೆ-ತೋಟ-ದನ ಎಂದು ಸ್ವಾಭಿಮಾನದಿಂದ ಬದುಕಿದ ಬಡ ಬ್ರಾಹ್ಮಣ. ವಯಸ್ಸಿನಲ್ಲಿ ನನಗಿಂತ ಸುಮಾರು ೧೦ ವರ್ಷಗಳಷ್ಟು ದೊಡ್ದವನಾಗಿದ್ದರು, ನಾನು ಓದಿ ಮುಂದೆ ಬಂದಿದರಿಂದಲೋ ಏನೋ ನನ್ನ ಜೊತೆ ಗೆಳೆತನ ಇಟ್ಟುಕೊಂಡಿದ್ದ.

ನಿಮಗೆಲ್ಲ ಗೊತ್ತಿರುವಂತೆ, SSLC  ಮುಗಿದ ಕೊಡಲೇ PUC  ಬಗ್ಗೆ , PUC ಮುಗಿದ ಕೂಡಲೇ ಇಂಜಿನಿಯರಿಂಗ್ ಬಗ್ಗೆ, ಇಂಜಿನಿಯರಿಂಗ್ ಮುಗಿದ ಕೂಡಲೇ ಜಾಬ್ ಬಗ್ಗೆ, job  ಸಿಕ್ಕಿದ ಕೂಡಲೇ ಮದುವೆಯ ಬಗ್ಗೆ  ಜನ ಪ್ರಶ್ನೆಗಳನ್ನು ಕೇಳಲು ಕಾತರವಾಗಿರುತ್ತಾರೆ. ನಮಗಿಂತಲೂ ಅದೆಷ್ಟೋ ಮಂದಿ ನಮ್ಮ ಬಗ್ಗೆ ತಿಳಿಯಲು ಉತ್ಸುಕಾರಾಗಿರುವಂತೆ ಕೆಲವೊಮ್ಮೆ ಅನಿಸಿಬಿಡುತ್ತದೆ. ಹೀಗಿರುವಾಗ, ಇಂಜಿನಿಯರಿಂಗ್ ಮುಗಿಸಿ, ನೌಕರಿ ಸಿಕ್ಕಿ ಒಂದು ಒಂದೆರಡು ವರ್ಷಗಳ ಬಳಿಕ ಅವನಿಗೆಲ್ಲ ನನ್ನ job ಕುರಿತಾಗಿ ಮಾಹಿತಿ ಸಿಕ್ಕಿದೆ. ಒಂದು ದಿನ, ಸಂಬಂಧಿಕರ ಮನೆಗೆ ಹೋಗುವಾಗ ಸಿಕ್ಕಿದ, ದೇವರಾಜ, "ಎಷ್ಟು ದೂರ ?.... ಜಾಬ್ ಸಿಕ್ಕೆದೆಯಂತೆ ! ನಮಗೆಲ್ಲ ಗೊತ್ತೇ ಇಲವಲ್ಲ ಮಹರಾಯ! ಮದುವೆ ಯಾವಾಗ? ಮದುವೆಗಾದರೂ ಕರಿತಿಯಾ ತಾನೇ?.. ನೀವೆಲ್ಲಕಾಲೇಜ್ ಹುಡುಗರು ಇವಗಲೇ ಫಿಕ್ಸ್ ಮಾಡಿಕೊಂಡು ಇರ್ತಿರಾ !". ಒಂದು ಮಾರ್ಕ್ಸ್ ಗೆ ಸರಿಯಾಗಿ ಉತ್ತರಿಸಲೇ ಅಥವಾ ೧೦ ಮಾರ್ಕ್ಸ್ ಗೆ ಸರಿಯಾಗಿ ಉತ್ತರಿಸಲೇ ಎಂದು ಯೋಚಿಸುತ್ತಲೇ, " ಹಾಗೇನಿಲ್ಲ, ದೇವರಾಜರವರೆ, ಜಾಬ್ ಸಿಕ್ಕಿ ಎರಡು ವರ್ಷ ಆಯಿತು. ಈ ಕಡೆ ಬರ್ಲಿಕ್ಕು ಆಗಿಲ್ಲ. ಮದುವೆ ಬಗ್ಗೆ ನಮ್ಮದೇನಿದೆ... ಅಪ್ಪ-ಅಮ್ಮ ನೋಡ್ಕೊತ್ತಾರೆ..." ಎಂದು  ಉತ್ತರಿಸಿ, ಅವರ ಅಂಗಳಕ್ಕೆ ಇಳಿದು ಸ್ವಲ್ಪ ನೀರು ಕುಡಿಯಲು ಮುಂದೆ ಬಂದೆ.

ಅವನ ಅಪ್ಪ-ಅಮ್ಮ  ಸಂಬಂಧಿಕರೊಬ್ಬರ ಮದುವೆಗೆಂದು ಒಂದು ವಾರದ ಹಿಂದೆ ಘಟ್ಟ ಇಳಿದು ಹೋಗಿದ್ದಾರೆ. ಮನೆಯ ದಿನ-ನಿತ್ಯದ ಅಡುಗೆ, ದೇವರ ಪೂಜೆ, ದನಗಳ ಚಾಕರಿ ಎಲ್ಲವು ದೇವರಾಜ ಅಚ್ಚು ಕಟ್ಟಾಗಿ ಮಾಡಿಕೊಂಡು ಇರುತ್ತಾನೆ. ಏನೇ ತಪ್ಪಿದರು, ಮನೆ ಮುಂದಿರುವ ದೇವಲಾಯದ  ದೇವರಿಗೆ ಸರಿಯಾದ ಸಮಯದಲ್ಲೊಂದು ಪೂಜೆ,  ಸಂಧ್ಯಾವಂದನೆ ಆಗಲೇ ಬೇಕು- ಹಿರಿಯರು ಕೂಡ ನಡೆದುಕೊಂಡು ಬಂದ ದಾರಿ ಅದು. ಒಬ್ಬನೇ ಇದ್ದ ದೇವರಾಜನಿಗೆ ನನ್ನ ಆಗಮನ, ಮೌನದ ಕದ ತೆರೆದಂತಿತ್ತು.

ಹಲವರು ವಿಚಾರಗಳು ಮಾತನಾಡುತ್ತ, ಉಡುಪಿಯಲ್ಲಿ ನನ್ನ ವಿಹಾರ, ನಾನು ನೋಡಿದ ಯಕ್ಷಗಾನಗಳು, ಭೇಟಿಮಾಡಿದ ವ್ಯಕ್ತಿಗಳು ಎಲ್ಲವನ್ನು ಸೋಗಾಸಾಗಿ ಹೇಳಿ ಎರಡು ತಾಸು ನಾನೇ ಹರಣ ಮಾಡಿರಬೇಕು. ಆತನೊಬ್ಬ ಯಕ್ಷಗಾನದ ಪರಮ ಹುಚ್ಚ...! ಮಾತನಾಡುತ್ತ," ನೀವು ಮದುವೆ ಯಾಗುವುದಿಲ್ಲವೇ ? " ಎಂದು ಪ್ರಶ್ನಿಸಿ ಬಿಟ್ಟೆ. ಆ ಕಾಲದಲ್ಲಿ ಅವರ (ಹಳ್ಳಿಯ ಬಡ, ಓದಿರದ ಬ್ರಾಹ್ಮಣ ಹುಡುಗರ) ಬದುಕಿನ ನೋವು ನನಗೆ  ಗೊತ್ತೇ ಇರಲಿಲ್ಲ.

ಉತ್ತರ ಕನ್ನಡ ಜಿಲ್ಲೆಯಲ್ಲಿರುವ ಬ್ರಾಹ್ಮಣರು  ಶುದ್ಧ ಚಾರಿತ್ರ್ಯಕಾಗಿ ಸ್ವಾಭಿಮಾನದಿಂದ ಬದುಕುವಂತವರು. ಆದರೆ,ಈ ತಲೆಮಾರಿನಲ್ಲಿ ಹೆಣ್ಣು ಮಕ್ಕಳ  ಸಂಖ್ಯೆ ತಿರವೇ ಕುಸಿದಿದೆ. ಹಾಗೆಂದು ಜಾತಿಯನ್ನು ಮೀರಿದ ಮದುವೆಯನ್ನು ಮಾಡಲು ಅವರ ಸಂಪ್ರದಾಯ ಖಂಡಿತ ಒಪ್ಪದು. ಹೀಗಾಗಿ ಕೇವಲ ಓದಿದ, ಹೊರದೇಶಗಳಲ್ಲಿ ಅಥವಾ ಉನ್ನತ ಸ್ಥಾನದಲ್ಲಿರುವ ಹುಡುಗರಿಗೆ ಮಾತ್ರ ಮದುವೆಯ ಭಾಗ್ಯ. ಹಳ್ಳಿಯಲ್ಲಿದ್ದು, ದೇವಸ್ಥಾನ, ದನ, ಕೃಷಿ ಎಂದುಕೊಂಡ ಬದುಕು ಸವೆಸುತ್ತಿರುವ ಹುಡುಗರ  ಹಣೆಬರಹಕ್ಕೆ ಬ್ರಹ್ಮ ದೇವ ಒಳ್ಳೆದನ್ನು ಬರೆಯಲೇ ಇಲ್ಲ ಅನಿಸುತ್ತದೆ.

ದೇವರಾಜ ಕೂಡ ಇಂಥ ಹಳ್ಳಿಯ ಸಂಪ್ರದಾಯ ಬದ್ಧ  ಕುಟುಂಬಕ್ಕೆ ಸೇರಿದ ಹುಡುಗ. ಯೌವನದ ಕಾಲದಲ್ಲಿ ಒಂದೆರಡು ಹುಡುಗಿಯರನ್ನು ನೋಡಿದ್ದರು, ಹಳ್ಳಿಯ ಹುಡುಗ, ಓದಿರದ ಹುಡಗ ಎಂದೆಲ್ಲ ಮೂಗು ಮುರಿದು ಹೋದ ಕನ್ಯಾಪಿತ್ರುಗಳೇ ಬಹಳ. ಒಂದು ಹಂತದಲ್ಲಿ ಅವನಿಗೆ, ತನ್ನ ಬಗ್ಗೆ ಕೀಳಾಗಿ ಕಾಣುವ  ಇಂಥ 'ಸ್ವಜಾತಿಯ'  ಕನ್ಯಾ ಪಿತೃಗಳಲ್ಲಿ ಭಿಕ್ಷೆ ಬೇಡುವದು ಸಾಕೆಂದು, ಅಂತರ ಜಾತಿಯ ವಿವಾಹದ ಬಗ್ಗೆಯೂ ತನ್ನ ಹಿತೈಸಿಗಳಿಂದ ತಂದೆ-ತಾಯಿಗಳಿಗೆ ಒಪ್ಪಿಸಲು ಪ್ರಯತ್ನಿಸಿದ. ಉದ್ದಾಮ ಪಂಡಿತರು ಎನಿಸಿಕೊಂಡಿರುವ ಅವನ ತಂದೆ, ಮುಂದೆ ಸ್ವರ್ಗದಲ್ಲಿ ಸಿಗಬೇಕಾದ ಸ್ಥಾನ-ಮಾನ ಸಿಗದೇ ಹೋದಿತೆಂದು, ಸ್ವಜಾತಿಯರಲ್ಲದ ಮದುವೆಗೆ ಖಂಡಿತ ಒಪ್ಪದಿರುವುದು ಮಾತ್ರವಲ್ಲ, ತಾನು ಬದುಕಿರುವಾಗ ಹಾಗೇನು ನಡೆದರೆ ಮುಂದಿನ ವಿಷಯಕ್ಕೆ ನೀವೇ ಹೊಣೆ ಎಂದು ಹಿತೈಸಿಗಳಿಗೆ ಬಿಸಿ ಮುಟ್ಟಿಸಿದ್ದರು.

ಸ್ವರ್ಗ, ದೇವರು, ಸಂಪ್ರದಾಯ, ಜಾತಿ ಏನೇ ಹೇಳಿದರು ಮನುಷ್ಯರೆಲ್ಲರೂ ಉಪ್ಪು ತಿಂದು ಬದುಕಿದವರೇ. ಎಲ್ಲರಿಗು ಒಂದು ಸ್ವಾಭಿಮಾನ, ಭಾವನಾತ್ಮಕ ಸಂವೇದನೆ ಇದ್ದೆ ಇರುತ್ತದೆ. ಕನ್ಯಾ ಪಿತೃಗಳ  ತಿರಸ್ಕಾರ, ಅಪ್ಪನ ಸ್ವರ್ಗದ ಆಸೆ  ಇವುಗಳ ನಡುವೆ ತನ್ನ ಯೌವನದ ಆಕಾಂಕ್ಷೆಗಳನ್ನು ದಿನ-ದಿನ ಯೋಚಿಸುತ್ತ, ಬದುಕಿನ ಉತ್ತರಕ್ಕಾಗಿ ಹೆಣಗುತಿದ್ದಾನೆ ದೇವರಾಜ. ಒಂದು ಹಂತದಲ್ಲಿ ತನ್ನ ಜೀವನದಲ್ಲಿ ಮದುವೆ ಇಲ್ಲಎಂದು  ನಿರ್ಧಾರಕ್ಕೆ ಬಂದು, ಬದುಕಿನಲ್ಲಿ ತುಂಬಾ ಜಿಗುಪ್ಸೆ ಹೊಂದಿ ದುರಲೋಚನೆಗಲಿಗೂ ಒಳಗಾದ.

ಕೊನೆಗೆ ಅವನ ಮಾತು ಈ ರೀತಿಯಾಗಿ ನನ್ನ ಮುಂದೆ  ನಿಂತಿತು:
"ಕಮಲದ ಹೂವು, ಗುಲಾಬಿ ಹೂವು ಯಾರೋ ಒಬ್ಬರು ಮುಡಿದು ಕೊಳ್ಳಬಹುದು ಎಂದು ಹುಟ್ಟಿದಲ್ಲ. ಹಾಗೆಯ ನಾನು ಕೂಡ ಯಾರಿಗಾಗಿಯೂ ಬದುಕಬಾರದು. ಕನ್ಯಾಪಿತೃಗಳ ತಿರಸ್ಕಾರ ನನೆಗೇನು ಎಂದು ಕೊಂಡು ಸಮಾಧಾನಿಸಿ ಕೊಂಡೆ. ಆದರೆ ಕಮಲ ಅರಳಿ ನಿಲ್ಲ ಬೇಕಾದರೆ ಕನಿಷ್ಠ ನೀರು-ಕೆಸರು ಇರಲೇ ಬೇಕಲ್ಲವೇ? ಮನುಷ್ಯನಿಗೆ ಸ್ವಾಭಿಮಾನ - ಭಾವನೆ, ಪ್ರೀತಿಗಳೇ ಅಧಾರ. ಅದಿಲ್ಲದಿದ್ದರೆ  ಹೇಗೆ ತಾನೇ ಬದುಕ ಬೇಕು? ಮದುವೆ ಇಲ್ಲದ ಮೇಲೆ ಮಕ್ಕಳು ಎಂಬ ಭಾಗ್ಯವಿದೆಯೇ?  ನಾನು ಯಾರಿಗಾಗಿ ಬದುಕಬೇಕು? ಅದಕ್ಕೆ ನಾನು ಕಳೆದ ಒಂದೆರಡು ವರ್ಷಗಳಿಂದ ನಮ್ಮ ಭೂಮಿಯ ಅರ್ಧ ಭಾಗ ಸಾಗುವಳಿನೇ ಮಾಡಿಲ್ಲ. ಒಂದು ದೇವರ ಪೂಜೆ, ಒಂದು ಊಟ...ಅಷ್ಟೇ ಸಾಕು....ಅರ್ಧ ಜೀವನ ಮುಗಿದಿದೆ ... ಮತ್ತೇನು ಬೇಕು ಈ ಜೀವನದಲ್ಲಿ...?"

ಹಳ್ಳಿಗಾಡಿನ ಮಧ್ಯೆ, ಶಿಕ್ಷಣವೇ  ಇಲ್ಲದಿದ್ದರೂ ಬದುಕಿನ ಬಗ್ಗೆ ಅದೆಷ್ಟೋ ನೋವು ಇದ್ದರು ಮನೆ ಯೊಂದನ್ನು ಏಕಾಂಗಿಯಾಗಿ ನಡೆಸುತ್ತ  ಬದುಕಿಗೊಂದು ಅರ್ಥ ಬರೆಯಲು ಹೋರಾಟ ಅವನಿಗೆ  ನನ್ನಲ್ಲಿ ಉತ್ತರವೇ ಇರಲಿಲ್ಲ. ಮದುವೆಯ ಪರಿಕಲ್ಪನೆ, ಅದರ ಹಿಂದೆ ಅಂತಹ ನೋವುಗಳು ಅಷ್ಟೊಂದು ಆಳವಾಗಿ ಇರುತ್ತವೆ ಎಂದು ನಾನು ಭಾವಿಸಿಯೇ ಇರಲಿಲ್ಲ. ಪುರುಷ ಜೀವನದ ಯಾವುದೇ ಗುರಿ-ಕಲ್ಪನೆಗಳಿದ್ದರು ಅದು ಒಂದು ಹೆಣ್ಣಿನೊಂದಿಗೆ ತಳಕು ಹಾಕಿ ಕೊಂಡಿರುತ್ತದೆ. ಪುರುಷನ ಕ್ರಿಯಾತ್ಮಕ ಚಟುವಟಿಕೆಗಳಿಗೆ ಹೆಂಡತಿಯ ನೋಟ, ಮಕ್ಕಳ ಆಟ  ಪ್ರೇರಣೆಯಾಗಿರುತ್ತದೆ.
ಹೆಣ್ಣಿನ ತಾರತಮ್ಯ, ವರದಕ್ಷಿಣೆ ಮತ್ತು 'ಹೆಣ್ಣು ಒಂದು ವಸ್ತು' ಎಂದು ಪರಿಗಣಿಸುವ ಸಾಮಾಜಿಕ ಧೋರಣೆಯಿಂದಾಗಿ 'ಹೆಣ್ಣು ಮಗು ಬೇಡ' ಎಂಬ ಕೂಗು ಇದೆ. 'ಹೆಣ್ಣು  ಮಗು ಹುಟ್ಟಲಿ" ಎಂದು ದೇವರಲ್ಲಿ ಮೊರೆ ಇಡುತ್ತಿರುವ  ಹೆಣ್ಣುಗಳಿಗೆ ಈ ಲೇಖನ ಅರ್ಪಿಸುತ್ತೇನೆ.

ನನ್ನ  ಸಹೋದ್ಯೋಗಿಯೊಬ್ಬ  ಇತ್ತೀಚಿಗೆ ಒಂದು ಹುಡುಗಿಯನ್ನು ನೋಡಿ ಬಂದ . ಅವನಿಗೆ  ಅವಳು ಇಷ್ಟವಾಗಿದ್ದಳು. ಆದರೆ ಕುಟುಂಬದ ಹಿರಿಯರಿಗೆ ಯಾವೊದೋ ಕಾರಣಕ್ಕೆ ಸರಿಬರದಿದ್ದರಿಂದ ಸಂಬಂಧವನ್ನೇ ಮುರಿದುಕೊಂಡರು. ತನ್ನ ಕತೆಯನ್ನು ವಿವರಿಸುವಾಗ ,"ಏನ್  ಐತ್ಲೇ  ಜೀವನ... ಎಷ್ಟು ಓದಿದರೂ , ಎಷ್ಟು ಸಂಪಾದನೆ ಮಾಡಿದರೂ  ಜೀವನ ಅಷ್ಟೇ ...ನಮ್ಮ ಬೇಕು-ಬೇಡಗಳನ್ನು  ನಿರ್ಧರಿಸುವರು ಬೇರೆಯವರೇ ಆಗಿರುತ್ತಾರೆ". ಈ ಮಾತು ದೇವರಾಜನ ನೆನಪು ತಂದು ಕೊಟ್ಟಿತ್ತು . 

Sunday, June 30, 2013

ರಾಜಕೀಯ..! ಛಿ ಥೂ...!

     ರಾಜಕೀಯ ಚದುರಂಗ ಆಟದ ಕುರಿತಾಗಿ ಯಾರಿಗೆ ತಾನೇ ಗೊತ್ತಿಲ್ಲ?ರಾಜಕೀಯ ಗೊತ್ತೇ ಇಲ್ಲ ಅನ್ನುವ ಅಥವಾ ನನಗೆ ಇಷ್ಟವಿಲ್ಲದ ವಿಷಯ ಎಂದು ಖಂಡಿತ ಹೇಳುವ ಹಾಗಿಲ್ಲ. ದಿನ ನಿತ್ಯದ ಬದುಕಿನಲ್ಲಿ ರಾಜಕೀಯ ಇದ್ದೆ ಇದೆ.

    ನಾನೊಂದು ದಿನ ಊರಿಗೆ ಬಸ್ಸಿನಲ್ಲಿ ಹೋಗುವಾಗ, ನನ್ನ ಜೊತೆಯಲ್ಲಿ ಒಬ್ಬ BA  ವಿದ್ಯಾರ್ಥಿ ಪಕ್ಕದಲ್ಲಿ ಕುಳಿತ. ಹೀಗೆ-ಹಾಗೆ ಪರಿಚಯ ಮಾಡಿಕೊಂಡು, "ಯಾವ ವಿಷಯ ಓದುತ್ತಿದ್ದಿಯಾ?" ಎಂದು ಕೇಳಿದೆ. "HPE ". ಎಂದ. "ಅಂದ್ರೆ" ಎಂದು ಪುನ ಪ್ರಶ್ನೆ ಮಾಡಿದಾಗ," History , Politics , Economics  ಎಂದು ಹೇಳಿದ. "ಒಹ್ ಹೌದಾ..!...ಹಾಗಿದ್ರೆ, ಕರ್ನಾಟಕದ ಮುಂದಿನ ಮುಖ್ಯಮಂತ್ರಿ ಯಾರಾಗಬಹುದು ಅಂತಿಯ?". (ಕಳೆದ ಚುನಾವಣೆಗಿಂತ ಎರಡು ತಿಂಗಳು ಮೊದಲು ನಡೆದ ಮಾತಿದು).  "ಏನಣ್ಣ... ನನಗಂತೂ ರಾಜಕೀಯ ಅಂದ್ರೇನೆ ಇಷ್ಟ ಇಲ್ಲ... ಇವರೆಲ್ಲ ಕ್ರಿಮಿನಲ್ಸ್.... ಆಡಿದ ಹಾಗೆ ಮಾಡಲ್ಲ.... ಓಟು ಬೇಕಂದ್ರೆ ಮಾತ್ರ ಅವರಿಗೆ ನಮ್ಮ ನೆನಪು... ಒಂದಿಷ್ಟು ದುಡ್ಡು ಮಾಡ್ಕೊಂಡು ಹೋಗಿ ಬಿಡ್ತಾರೆ.. ಅವರ ಬಗ್ಗೆ ತಿಳಿದೇನು ಆಗಬೇಕು?....ನಾನು ಪೊಲಿಟಿಕಲ್ ನ್ಯೂಸ್ ಅಂದ್ರೆ ಆಗಲ್ಲ... I  hate  politics ...!"

ಇದು ಒಬ್ಬ ಸಾಮಾನ್ಯ ಹಳ್ಳಿಯ ಸಾವಿನ ಅಂಚಿನಲ್ಲಿರುವ ಮುದುಕ ಅಥವಾ ಶಿಕ್ಷಣವೇ ಸಿಗದೇ ಹಳ್ಳಿಯ ಮೂಲೆಯಲ್ಲಿ ದನ-ಕುರಿ ಕಾಯ್ದು ಕೊಂಡು ಬದುಕುತ್ತಿರುವ ಒಬ್ಬ ಹುಡುಗ ಹೇಳಿದ ಮಾತಗಿದ್ದರೆ ನಾನು ತೆಪ್ಪಗೆ ಕುಳಿತಿರಬಹುದಿತ್ತು. ಆದರೆ, ಹುಡುಗ ಕಾಲೇಜು ವಿದ್ಯಾರ್ಥಿ. ಇವತ್ತೇ ೧೮ ದಾಟಿದ  ಭಾವಿ ಪ್ರಜೆ..! ಪಾಲಿಟಿಕ್ಸ್ ಓದಿತ್ತಿರುವ ವಿದ್ಯಾವಂತ. ಇಂಥವರು I  hate  politics ...! ಎಂದು ಹೇಳಿದರೆ ಮುಂದಿನ ಪ್ರಜೆಗಳ ರಾಜ ಯಾರು ?

ಅದಕ್ಕೆ ಕಾರಣ ಇಲ್ಲದಿಲ್ಲ. ನಮ್ಮ ರಾಜಕೀಯ ರಂಗ ಮಲಿನ ಗೊಂಡಿದ್ದು ಸತ್ಯ. ಅಪರಾಧಿಗಳು, ಶ್ರೀಮಂತರು ಹಾಗು ವಂಶಾವಳಿಯ ಶಾಪ ಗ್ರಸ್ತ ಕುಡಿಗಳಿಂದ ಒಬ್ಬ ಸಾಮಾನ್ಯ ಯುವಕನಿಗೆ ಪಾಲಿಟಿಕ್ಸ್ ಅಂದರೆ ಒಂದು ಅಲರ್ಜಿ ಸಹಜ. ನಮ್ಮ ದೇಶದಲ್ಲಿ ಎಲ್ಲ ಬಗೆಯ ವೃತ್ತಿಗಳಿಗೆ ಒಂದಲ್ಲ ಒಂದು ಬಗೆಯ  ಅರ್ಹತೆ ಅವಶ್ಯಕ. ಆದರೆ ಪಾಲಿಟಿಕ್ಸ್ ಕ್ಷೇತ್ರಕ್ಕೆ ಮಾತ್ರ ಅದು ಇಲ್ಲವೇ ಇಲ್ಲ. ಕ್ರೈಮ್ ಇದ್ದರು ಸರಿ,ತಲೆ ಇಲ್ಲದಿದ್ದರೂ ಸರಿ, ಹಲ್ಲುದುರಿ ಯಾವ ಪ್ರಶ್ನೆ ಇನ್ನು ಕೇಳಲಾರ ಎನ್ನುವ ಮುದಿತನ ಇದ್ದರು ಸರಿ  ರಾಜಕೀಯ ಕ್ಷೇತ್ರದಲ್ಲಿ ಒಂದು ಸ್ಥಾನ ಇದ್ದೆ ಇದೆ. ಇದಕ್ಕೆ ಮೂಲ ಕಾರಣ ನಮ್ಮ ರಾಜಕೀಯ ವ್ಯವಸ್ತೆ ವ್ಯಕ್ತಿಯ ಅರ್ಹತೆಗಿಂತಲೂ ಅವನ ಜಾತಿ,ಅವನಾವ ರೀತಿಯಲ್ಲಿ ಜನ ಪರವಾಗಿ (ಜನ ಹಿತಕ್ಕಾಗಿ ಅಲ್ಲ) ನಿಲ್ಲ ಬಲ್ಲ, ಅವನಿಗಿರುವ ವಂಶಾವಳಿಯ ಪರಿಚಯ ಹಾಗೂ ಆ ವಂಶದ ಕುರಿತಾಗಿ ಇರುವ ಭಾವನಾತ್ಮಕ ಸಂವೇದನೆಗಳೇ ನಮಗೆ ಮುಖ್ಯ ವಿಷಯವಾಗಿ ಬಿಡುತ್ತಾವೆ. ಅವನ ಯೋಜನೆಗಳ ಕುರಿತಾಗಿಯಾಗಲಿ, ಅವನ ಬುದ್ಧಿವನ್ತಿಕೆಯಾಗಲಿ ನಮಗೆ ಒಂದು ಅವಶ್ಯಕ ಸಂಗತಿಯಾಗಲಿ ನಾವು ಗುರುತಿಸುವುದೇ ಇಲ್ಲ.

ಹೀಗಾಗಿ ರಾಜಕಾರಣಿಗಳು ಅಂದರೆ ಒಂದು ಬಗೆಯ ತಲೆಯಿಲ್ಲದ,ಅಧಿಕಾರ ಇರುವ, ಖಾಖಿಗಳಿಂದ ಸುತ್ತುವರಿದಿರುವ ಒಂದು ಎಡಬಿಡಂಗಿಗಳು  ಎನ್ನುವಂತೆ ಜನ ಮಾತನಾಡುತ್ತಾರೆ. ಅವರ ಖಾದಿ ಬಟ್ಟೆ ಕೇವಲ ಅವರ ಸಮವಸ್ತ್ರ ಎಂದು ಭಾವಿಸಿ ಕೊಳ್ಳುವ ಮನೋಭಾವ ನಮ್ಮದ್ದು. ಆದರೆ ಜೊತೆಗೆ, ಕೆಲವೊಮ್ಮೆ, ನಾವು ಯಾವುದೊ ತಪ್ಪಿ ಮಾಡಿ ಪೋಲಿಸ್ ಗೆ ಸಿಕ್ಕಿ ಬಿದ್ದಾಗ ಧೈರ್ಯದಿಂದ "ಆ ರಾಜಕೀಯ ವ್ಯಕ್ತಿಗೆ ನನ್ನ ಹತ್ತಿರದ ಸಂಬಂಧವಿದೆ" ಎಂದು ಹೇಳಿ ತಪ್ಪಿಸಿ ಕೊಳ್ಳಲು ಬಳಸಲ್ಪಡುವ ವ್ಯಕ್ತಿ ಅನ್ನುವ ಸಾಮಾನ್ಯ ಅಜ್ಞಾನ ನಮಗೆಲ್ಲರಿಗೂ ಇದೆ. ಅದೆಷ್ಟೋ ಬಾರಿ ಕಾನುನಾತ್ಮಕ ವಿಷಯಗಳಲ್ಲಿ ಅನುಪಯುಕ್ತ ರಾಜಕಾರಣಿಗಳ ಪ್ರವೇಶ ನಿಜವಾದ ನ್ಯಾಯ ವ್ಯವಸ್ತೆಯಲ್ಲಿ ಅನ್ಯಾಯ ವಾಗಿಸುತ್ತದೆ.

ಹಾಗಿದ್ರೆ ರಾಜಕೀಯ ಅಂದ್ರೆ ಅಷ್ಟೇನಾ? ಇದು ನನ್ನ ಪ್ರಶ್ನೆ ಅಲ್ಲ... ಈ ದೇಶದ ಪ್ರಶ್ನೆ, ಈ ದೇಶದ ಜನರ ಪ್ರಶ್ನೆ, ಇಲ್ಲ ನನ್ನ ಜೊತೆ ಕುಳಿತ BA ವಿದ್ಯಾರ್ಥಿಯ ಪ್ರಶ್ನೆಯೂ ಹೌದು?

ರಾಜಕೀಯ ಕ್ಷೇತ್ರ ದೇಶದ ಸೇವೆಯ, ಸಮಾಜ ಸೇವೆಯ ಅತ್ಯುನ್ನತ ಕ್ಷೇತ್ರ.ಅದಕ್ಕೆ ಜಾತಿ-ಮತಗಳ ಹೊರತಾಗಿ ಪವಿತ್ರವಾದ ಭಾವದಿಂದ ಶ್ರಮಿಸುವವರಿಗೆ ಅದು ಖಂಡಿತ ಕೈ ಬಿಡಲಾರದು.ಆದರೆ ಮಥಾಂದ,ಅಧಿಕಾರ ದಾಹ ಪಶುಗಳಿಗೆ ಅದು ಖಂಡಿತ  ಒಳ್ಳೆಯ ಕ್ಷೇತ್ರ ಅಲ್ಲ.

ನಾವು ವಿಜ್ಞಾನ ಓದಬಹುದು,ಅರ್ಥಶಾಸ್ತ್ರ ಓದಬಹುದು ಅವುಗಳ ಓದುವಿಕೆಯಿಂದ ದೇಶಕ್ಕೆ, ನಮ್ಮ ಜನಕ್ಕೆ ಅವು ಒಳ್ಳೇದನ್ನೇ ಮಾಡುತ್ತಾವೆ ಎಂದು ಖಂಡಿತ ಸಾಧ್ಯವಿಲ್ಲ. ಒಬ್ಬ ರಾಜಕಾರಣಿ ಮನುಕುಲದ ಏಳಗೆಯನ್ನು ಬಯಸಿ ಎಲ್ಲ ಕ್ಷೇತ್ರದ ಪರಿಣಿತರನ್ನು 'ದೇಶ' ಎಂಬ  ಪರಿಮಿತಿಯಲ್ಲಿ ದುಡಿಯುವಂತೆ ಅದರ ನೇರ ಜವಾಬ್ಧಾರಿಯನ್ನು ಹೊರುವ ಕುದುರೆ. ಅದೆಷ್ಟೋ ಮಂದಿ ವಿಜ್ಞಾನಿಗಳು- ಇಂಜಿನಿಯರ್ ಗಳು ನಮ್ಮಲ್ಲಿ ಮೊಬೈಲ್ ಚಿಪ್ ತಯಾರಿಕ ತಂತ್ರ-ಜ್ಞಾನ  ತಿಳಿದವರಿದ್ದಾರೆ .ಆದರೆ  ಇಂದಿಗೂ  ಭಾರತದಲ್ಲಿ ಸಂಪೂರ್ಣವಾಗಿ ಒಂದು ದೇಶಿಯ ತಂತ್ರಜ್ಞಾನ ವನ್ನು ಬಳಸುವಲ್ಲಿ ವಿಫಲವೇ..! ಇದಕ್ಕೆ ಕಾರಣ ರಾಜಕೀಯ ಇಚ್ಚಾ ಶಕ್ತಿ!  ಹೀಗಾಗಿ ರಾಜಕಾರಣಿ ನಾಳೆಗಳ ಅವಶ್ಯಕತೆಗಳ ಚಿಂತನೆಯನ್ನು ನಡೆಸಬಲ್ಲ ಬುದ್ದಿವಂತನಿರಬೇಕು.

ಎಲ್ಲ ರಾಜಕಾರಣಿಗಳನ್ನು ಕೆಟ್ಟವರು ಎಂದು ಭಾವಿಸಬಾರದು. ಅವರು  ಸಮಾಜದ ಕೋಟಿ-ಕೋಟಿ ಜನರ ಆಶೋತ್ತರಗಳಿಗೆ ಸ್ಪಂದಿಸಬೇಕದಾಗ ಸಾವಿರಾರು ಬಗ್ಗೆಯ ಒತ್ತಡಗಳನ್ನು ಅನುಭವಿಸಲೇ ಬೇಕಾಗಿರುತ್ತದೆ. ಏಕ ವ್ಯಕ್ತಿಯಿಂದ ಸರ್ಕಾರ ನಡೆಸಲು ಖಂಡಿತ ಸಾಧ್ಯವಿಲ್ಲ. ಹೀಗಾಗಿ ಅನಿವಾರ್ಯವಾಗಿ ಕೆಲವು ಒಳ್ಳೆಯ ರಾಜಕಾರಣಿಗಳು  ನಾವೇ ಆರಿಸಿ ಕಳುಹಿಸಿದ "ಎಡಬಿಡಂಗಿ"ಗಳ ಜೊತೆ  ಸಂಹನದಲ್ಲಿ ಇರಲೇ ಬೇಕಾಗುತ್ತದೆ. ಬೇಡವಾದ ವ್ಯಕ್ತಿಯನ್ನು ಯಾವುದೋ ಅಮಿಶಕ್ಕೋ, ಜಾತಿ-ಭಾಷೆ-ಮತಗಳ ಅಂಧತೆಗೋ ಬಲಿಯಾಗಿ ನಾವೇ  ಆರಿಸಿ ಕಳಿಸಿದ ಮೇಲೆ, ಒಳ್ಳೆಯ ರಾಜಕಾರಣಿಗಳು ತಪ್ಪು ಮಾಡುತ್ತಾರೆ ಎಂದು ಬೊಟ್ಟು ಯಾರ  ಕಡೆ ಮಾಡಬೇಕು ?

ಒಟ್ಟಾರೆ ರಾಜಕೀಯ ದೇಶದ ಸರ್ವ ಶ್ರೇಷ್ಠ ಕ್ಷೇತ್ರ. ರಾಜಕಾರಣಿಗಳ ಬಗ್ಗೆ ತಾತ್ಸರವು ಬೇಡ. ಇವತ್ತು ಎಲ್ಲರ ಬಗ್ಗೆ ತಿಳಿದು ಕೊಳ್ಳಿ, ಮುಂದಿನ ಚುನಾವಣೆಯಲ್ಲಿ ಅವರಿಗೆ ಬುದ್ಧಿ ಕಲಿಸಿ... ಅಥವಾ ನಿಮಗೇನಾದ್ರು ಇಷ್ಟ ಇದ್ರೆ ಮುಂದಿನ ಚುನಾವಣೆಗೆ ನಿಲ್ಲಿ!

Friday, June 21, 2013

ಏನೇ ಇದ್ದರೂ ನಮಗೆ ಜನ ಬೇಕು.... !

ಒಂದು ವರ್ಷದ ಹಿಂದೆ, ಮಣಿಪಾಲದಿಂದ ಊರಿಗೆ ಹೋಗಿದ್ದೆ. ಸಂಜೆ ೭ ರ ಸಮಯದಲ್ಲಿ ನನ್ನ ಮನೆಯಲ್ಲಿ ಭಾರಿ ಸಭೆ. ತಮ್ಮ-ಅಮ್ಮನ  ನಡುವಿನ ಈ ಜಗಳಕ್ಕೆ ನಾನು ನ್ಯಾಯಾಧೀಶ. ತಮ್ಮನನ್ನು ಕುರಿತು ನನ್ನ ಬಳಿ ಅಮ್ಮನ ಆರೋಪ," ಅವನು, ಆರು ಗಂಟೆ ಆಗೋದೇ  ತಡ  ಮನೆಯಲ್ಲಿ ಎಲ್ಲ ಮರೆತು ಬೇರೆಯವರ ಮನೆಗೆ ಹೋಗಿ  ಕುಳಿತು ಕೊಳ್ತಾನೆ ... ಸ್ವಲ್ಪ ಅವನಿಗೆ ಸರಿಯಾಗಿ ಹೇಳಿ  ಹೋಗು" ಎಂದರು.  ತಮ್ಮ ಹೋಗುತಿದುದ್ದು ನಮ್ಮ ನೆರೆಯ ಮನೆಗೆ ಅವನಷ್ಟೇ ವಯಸ್ಸಿನ ಹುಡುಗನ ಜೊತೆ ಹರಟೆ ಹೊಡೆಯಲು.

ನಾನು ಸಿಕ್ಕಿದ್ದೇ ಚಾನ್ಸ್ ಎನ್ನುವಂತೆ ಅವನಿಗೆ ಮುಂದೆ ಕುಳ್ಳರಿಸಿ, " ನಿಂಗೆ ಮನೆಯ ಬಗ್ಗೆ  ಸ್ವಲ್ಪನೂ ಜವಾಬ್ಧಾರಿ ಇಲ್ಲ, ಬೇರೆಯವರ ಮನೆಗೆ ಹೋಗಿ ಕುಳಿತುಕೊಳ್ಳುವುದು   ಎಷ್ಟು ಸರಿ...? ನೀನು ಕೆಲಸ ಮಾಡಲ್ಲ ... ಅವರ ಮನೆಯ ಕೆಲಸಕ್ಕೂ ತೊಂದರೆ..!.  ಮನೆಯಲ್ಲಿ ನಿನಗೆ ಬೇಸರ ಆದರೆ ಟಿವಿ  ಇದೆ, ಪುಸ್ತಕ ಇದೆ, ಒಳ್ಳೆಯ ಮೊಬೈಲ ಇದೆ. ಮಾಡಲು ಬೇಕಾದಷ್ಟು ಕೆಲಸ ಇದೆ". ಆತನ ಉತ್ತರ ಅಷ್ಟೇ ಸರಳವಾಗಿತ್ತು: " TV, Mobile ಬೇಕಾದರೆ  ನೀನು ತಕ್ಕೊಂಡು  ಹೋಗು. ಅದೆಲ್ಲ ಎಷ್ಟೊತ್ತು  ನೋಡಲು ಸಾಧ್ಯ?. ನಾನು ಮನುಷ್ಯ....ನಂಗೆ ಮನುಷ್ಯರ ಜೊತೆ ಮಾತನಾಡದ  ಹೊರತು ಸರಿ ಬರದು."  ಮನೆಯ ಜಗಳ ಇಷ್ಟು  ಹೇಳಿಕೆಯೊಂದಿಗೆ ಮುಗಿಯಿತ್ತು. ಇಂಥ ಜಗಳಗಳು ಎಲ್ಲಿ ಪ್ರೀತಿ ಇರತ್ತೋ ಅಲ್ಲಿ ನಡೆದು ಮತ್ತೆ ಸ್ಮೃತಿ ಪಟಲದಿಂದ ದೂರ ಸರಿಯುತ್ತವೆ.

ಈ  ಘಟನೆ ನಡೆದು ಮೂರು-ನಾಲ್ಕು ತಿಂಗಳ ನಂತರ ನಾನು ವೃತ್ತಿ ಅನಿವಾರ್ಯತೆಯಿಂದ ಬೆಂಗಳೂರಿಗೆ  ಬಂದೆ. ಬೆಂಗಳೂರಿನ  ಸದ್ದು ಗದ್ದಲಗಳ  ನಡುವೆ, ವಾಹನ ಸಂದಣಿಯ ನಡುವೆಯ, ಸ್ವಿಚ್ ಒತ್ತಿದ್ದರೆ ಬೇಕಾದುದ್ದೆಲ್ಲ ಸಿಗುವ ವ್ಯವಸ್ತೆಯ ನಡುವೆಯ  ಮಾನವ  ಹೃದಯಗಳ ನಿರವ ಮೌನ ನನ್ನ ಪಾಲಿಕೆ ಕತ್ತು ಹಿಸಿಕಿದಂತೆ ಭಾಸವಾಗುತಿತ್ತು. ಮೊದಲ ಹದನೈದು ದಿನ, ಜೀವನದಲ್ಲೇ ಅತಿ ಮೌನದಿಂದ ಕಳೆದ  ದಿನಗಳು ಅನಿಸಿವೆ. ನನ್ನ ಮಾತುಗಳು ಸೆಕ್ಯೂರಿಟಿ  ಜೊತೆ, ಮ್ಯಾನೇಜರ್  ಜೊತೆ, ಊಟಕ್ಕೆ  ಹೋದಾಗ ವೈಟೆರ್  ಜೊತೆ ಬಿಟ್ಟರೆ  ಇನ್ನೆಲ್ಲಿಯೂ  ನಕ್ಕು-ಸಲುಗೆಯಿಂದ ಮಾತನಾಡುವ ಅವಕಾಶವೇ ಇರಲಿಲ್ಲ. ಬಸ್ಸಿನ ನಲ್ಲಿ ನಮ್ಮ ಜೊತೆ ಕೆಲಸ ಮಾಡುವ ಅದೆಷ್ಟೋ ಮಂದಿ ಇದ್ದರೂ  ಕಂಪನಿಯ  ಗೇಟ್ ಹೊರಗೆ ಬಂದ ಮೇಲೆ ಅವರ್ಯಾರೋ-ನಾನ್ಯಾರೋ..!  ಹೃದಯ ಸಂವೇದನೆ  ಹೇಳಿಕೊಳ್ಳದಿದ್ದರೆ ಹೇಗೆ ಅರ್ಥವಾಗಬೇಕು? ಮಾತನಾಡಿದರೆ  ತಾನೇ ಮತ್ತೊಬ್ಬ ಮನುಷ್ಯನ ಕೋರಿಕೆಗಳು ಅರ್ಥವಾಗುವುದು? earphone ಗಳು ಹಾಗೂ  ಸ್ಮಾರ್ಟ್ ಫೋನ್ ಗಳು  ಇಂಥ ಸಂಭಾಷಣೆಯನ್ನೇ ಕೊಲೆಮಾಡಿದ್ದವು.  ಆದರೂ ಒಂದು ದಿನ, ಧೈರ್ಯ ಮಾಡಿ, ನನ್ನ ಬಾಜು ಕುಳಿತವನನ್ನು, "Where do you work ?" ಎಂದು ಕೇಳುವ ಮೂಲಕ ನಾನೇ ಸಂಭಾಷಣೆಗೆ  ಬೀಜ ಹಾಕೋಣವೆಂದುಕೊಂಡರೆ, ಗಂಭಿರವಾಗಿ  ಕಣ್ಣುಗಳಿಂದ ನನ್ನತ್ತ ನೋಡುತ್ತಾ, ಸಂಭಾಷಣೆಯ ಕೊಲೆಗಾರನಾಗಿದ್ದ  earphone  ಒಂದು ಕಿವಿಯಿಂದ ಹೊರತೆಗೆದು ಒರಟು ಧ್ವನಿಯಲ್ಲಿ, "Why ... !?" ಎಂದ. "Simply asked"... ಎಂದು ನಾನು ಹೇಳುತ್ತಿರುವಾಗಲೇ  ಅವನ earphone  ಮತ್ತೆ ಮೊದಲ ಸ್ಥಾನಕ್ಕೆ ಸೇರಿಕೊಂಡಿತ್ತು. ಕಲಿತು ಸಂತೋಷ ಅನುಭವಿಸಬೇಕೆಂದು  ಬೆಂಗಳೂರಿಗೆ  ಬಂದ  ಇಂಜಿನಿಯರ್ ಗಳು, ಪ್ರತಿನಿತ್ಯ  ಯಾರೊಂದಿಗೂ  ಮಾತನಾಡದೆ, ನಿರ್ಜೀವಿ ವಸ್ತುಗಳ(ಮೊಬೈಲ್ earphone ) ಜೊತೆ  ಹೆಣಗಾಡುತ್ತ,  'ಇವರಿಗೆಲ್ಲ ಸೂತಕದ ಛಾಯೆ ಯಾಕಿದೆ?' ಎನ್ನುವಷ್ಟು ಶ್ಮಶಾನ ಮೌನದಲ್ಲಿರುವುದನ್ನು ಕಂಡಾಗ  ನನಗಂತೂ ನೋವು ಕಣ್ರೀ. ಮಣಿಪಾಲದ ವಿಶಾಲವಾದ ಜಗತ್ತಿನಿಂದ ಬೆಂಗಳೂರು ಎಂಬ ಜೈಲ್ ಗೆ ಬಂದೆ ಅನ್ನುವಂತಿತ್ತು ನನ್ನ ಜೀವನ.

ಆದರೆ, ಇಂಥ ಭಾವನಾತ್ಮಕ ಸಮಯದಲ್ಲೂ ಒಳ್ಳೆಯ roomates  ಸಿಕ್ಕಿದ್ದು  ನನ್ನ ಪುಣ್ಯ. ಯಾರೇ ಇದ್ದರು, ಅವರೆಲ್ಲ ಕೈ ಕೊಟ್ಟು ಇವತ್ತು  ತಮ್ಮ ಊರಿಗೆ ಹೋಗಿ ಬಿಟ್ಟಿದ್ದಾರೆ. ಮನೆಯಲ್ಲಿ ಮೌನ. ಅಡಿಗೆ ಮಾಡಲು  ಮನಸಿಲ್ಲ. ಹೊರಗೆ ಹೋಗಲು ಮಳೆ. ನಿದ್ದೆ ಬಾರದು. ಹಾಸಿಗೆಯಲ್ಲಿ ಬಿದ್ದುಕೊಂಡರೂ ಗೋಡೆ ಗಡಿಯಾರದ  ಟಿಕ್ ಟಿಕ್ ಶಬ್ಧ , ಬಾತ್ ರೂಮ್ ನಲ್ಲಿ ಟಪ್  ಎಂದು ಬೀಳುವ ನೀರಿನ ಹನಿಯ ಶಬ್ಧ,  ಬಾಜು ಮನೆಯ  ಬುರ್  ಬುರ್  ಎಂದು ಗಿರಗಿಟಗೆ  ಹೊಡೆಯುವ ಫ್ಯಾನ್ ಶಬ್ದ, ಕಿಡಕಿಯ ಸಂದಿನಿಂದ  ಹಾಸಿಗೆಗೆ ಸಮೀಪಿಸುತ್ತಿರುವ  ಸ್ಟ್ರೀಟ್  ಲೈಟ್  ಎಲ್ಲವು ಮನಸ್ಸು ಗೊಂದಲಕ್ಕೆ  ಇಡು ಮಾಡಿದೆ.

ಹಾಗೆಂದು ಮನೆಯಲ್ಲಿ  ಏನೆಲ್ಲಾ ಇದೆ....ಇಂಟರ್ನೆಟ್... ಬೇಕಾದ ಹಾಡು, ಸಣ್ಣ ಸೌಂಡ್ ಬೇಕೇ --- earphone, ಬಾಜು ಮನೆಯವರನ್ನು ಏಳಿಸಬೇಕೆ- ಸ್ಪೀಕರ್ , ತಿರುಗಾಡುತ್ತ ಹಾಡು ಕೇಳಬೇಕೆ -bluethooth headset, ಓದಬೇಕೆ ಅದೆಷ್ಟೋ  ಪುಸ್ತಕಗಳು. ತಿನ್ನಲು ಹಸಿವೆಯು ಇಲ್ಲ.  ಹಾಗಿದ್ರೆ ಸಮಸ್ಯೆ ಏನು?

ಅದೇ  ನಿರವ ಮೌನ,ನಗುವಿಲ್ಲದ ಮುಖ, ಹರುಪು ಇಲ್ಲದ ಮನಸು, ಕನಸುಗಳೇ ಇಲ್ಲದ  ನಿದ್ದೆ, ಹಸಿವೆ ಇಲ್ಲದ ಊಟ. ಬಹುಶ ತಮ್ಮ ಹೇಳಿದ್ದ ," ಏನೇ ಇದ್ದರೂ  ನಮಗೆ ಜನ ಬೇಕು.... !?"  ಮನುಷ್ಯನಿಗೆ  ಕೇಳುವ-ಹೇಳುವ ಮನುಷ್ಯ ಮತ್ತೊಬ ಇರಲೇ ಬೇಕು.  ಬದುಕಿನ ಸಂತೋಷ ಬ್ಯಾಂಕ್  ಅಕೌಂಟ್ ನಲ್ಲಿ ಇಲ್ಲ, ನಿಮ್ಮನ್ನು ಅರಿತು ನಿಮ್ಮ ಜೊತೆ ವ್ಯವಹರಿಸುವ ಇನ್ನೊಂದು  ಹೃದಯದಲ್ಲಿದೆ.

Sunday, June 16, 2013

ಲವ್ ಮ್ಯಾರೇಜ್ ಬೆಟರ್ ಆಲ್ವಾ, ಆಂಟಿ ...?

ನಾನು ಹುಬ್ಬಳ್ಳಿಯಲ್ಲಿ ಇಂಜಿನಿರಿಂಗ್ ಓದುವಾಗ, ನಾನುಳಿದುಕೊಂಡ ಓಣಿಯಲ್ಲಿ ಕೆಲವು ೭-೮ ನೇ ತರಗತಿಯಲ್ಲಿ ಓದುತಿದ್ದ ಹುಡುಗರಿದ್ದರು. ನಾನು ದಿನಕ್ಕೊಂದು ಬಗೆಯ ಪ್ರಾಜೆಕ್ಟ್ಸ್ ಮಾಡಿ, led ಗಳಿಂದ ನನ್ನ ರೂಮ್ ಹೊಳೆಯುವಂತೆ ಮಾಡುತಿದ್ದೆ. ಅವರೆಲ್ಲ ಶಾಲೆಯ ಪ್ರಾಜೆಕ್ಟ್ ಹೆಲ್ಪ್ ಎಂದು ನನ್ನ ಜೊತೆ ಬಂದು ಹೋಗುವುದು, ಆಮೇಲೆ ಆ ಸಣ್ಣ ಪರಿಚಯವನ್ನೇ ಗಲ್ಲಿ ಕ್ರಿಕೆಟ್ ಗೆ ಕರೆಯಲು ಕಾರಣವಾಗುತಿತ್ತು. ಆದರೆ, ನಾನು ಕ್ರಿಕೆಟ್ ಪ್ರೇಮಿಯಾಗದೆ ಇದ್ದರಿಂದ ಅವರ ಕ್ರಿಕೆಟ್ ತುರ್ನಾಮೆಂಟ್ ಗಳಿಗೆ ಹೋದದ್ದೇ ಇಲ್ಲ. ಆದರು ಕೆಲವೊಮ್ಮೆ ಕಂಟ್ರೋಲ್ ಸಿಸ್ಟಮ್ ನಂತಹ ಪುಸ್ತಕ ಓದಿದ ಮೇಲೆ ಒಮ್ಮೆ ನನ್ನ ತಲೆ ಹಗುರವಾಗಲಿ ಎಂದು ಅವರ ಕ್ರಿಕೆಟ್ -ಕ್ರೀಡಾಂಗಣಕ್ಕೆ ಹೋಗಿ ಕುಳಿತಿರುತ್ತಿದ್ದೆ.

ಆ ಓಣಿಯಲ್ಲಿ, ಆ ಮಕ್ಕಳ ತಂದೆ ತಾಯಿಯರಿಗೆ ನನ್ನ ಮುಖತಃ ಮಾತಾಡಿ ಪರಿಚಯವಿಲ್ಲದಿದ್ದರೂ ನಾನೊಬ್ಬ "ಸ್ಟಡಿ ಮಾಡುವ prefect model" ತರಹ ಅವರ ಮಕ್ಕಳಿಗೆ ಕ್ರಿಕೆಟ್ ಕ್ರೀಡಾಂಗಣದಿಂದ ಹೊರತರಲು ಬಳಸುತಿದುದ್ದು ನನಗೆ ಗೊತಿತ್ತು. ಅವರಿಗೆ ನಾನೊಬ್ಬ ಓದುವ ಹುಡುಗ, ತಮ್ಮ ಮಕ್ಕಳು ಸೇರಿ ಉಳಿದವರೆಲ್ಲ ಪಡ್ಡೆ ಹುಡುಗರು ಎನ್ನುವಷ್ಟು ನನ್ನ ಮೇಲೆ ಅಭಿಮಾನವಿತ್ತು. ನನ್ನ ಇಂಜಿನಿಯರಿಂಗ್ ಕೊನೆ ತಲುಪುತಿದ್ದಂತೆ, ಹುಡುಗರ ಮನೆಯವರೆಲ್ಲ ಒಂದು ಸಣ್ಣ ನಗು, ನಂತರ "ಅಭ್ಯಾಸ ಆಯ್ತಾ" ಎನ್ನುವ ವಾಕ್ಯಗಳು ನನ್ನ ಮೇಲಿನ ಅಭಿಮಾನಕ್ಕಾಗಿ ಹೊರಬರುತಿದ್ದವು. ಕೆಲವರಂತೂ," ನನ್ನ ಮಗನ ತಲೆ ಮೇಲೆ ಸ್ವಲ್ಪ ಕೈ ಇಡಪ್ಪ ..... ಅವನು ಓದುದೇ ಇಲ್ಲ".... ಎಂದೆಲ್ಲ ಹೇಳಿ ಒಂದು ರೀತಿಯ ಕಸಿವಿಸಿಗೆ ಕಾರಣವಾಗುತಿದುದ್ದುಂಟು.

ಹೀಗಿರುವಾಗ, ಇಂಜಿನಿಯರಿಂಗ್ ಮುಗಿಸಿ, ಕ್ಯಾಂಪಸ್ ನಲ್ಲೆ ಸೆಲೆಕ್ಟ್ ಆಗಿ ನೌಕರಿಗಾಗಿ ಉಡುಪಿಗೆ ಬಂದ ನಾನು, ಸುಮಾರು ನಾಲ್ಕು ವರ್ಷಗಳು ಉರುಳಿದ ಮೇಲೆ ಉತ್ತರ ಕರ್ನಾಟಕದಲ್ಲಿ ನನ್ನ ಸಹೋದ್ಯೋಗಿಯೊಬ್ಬರ ಮದುವೆಗೆ ಹೋಗಿದ್ದೆ. ಮದುವೆ ಮುಗಿಸಿ ಮರಳುವಾಗ ಹುಬ್ಬಳಿಯಲ್ಲಿ ಇಳಿದುಕೊಂಡು  ನಾನು ಉಳಿದುಕೊಂಡಿದ್ದ ಮನೆ-ಮಂದಿಯನ್ನು ಭೇಟಿ ಮಾಡಿ, ನಾಲ್ಕು ಮಾತನಾಡಿ ಬರೋಣ ಎಂದು ಭಾವಿಸಿ ಆ ಓಣಿಯನ್ನು ಪ್ರವೇಶ ಮಾಡಿದ್ದೆ(ಉಡುಪಿಯಲ್ಲಿ ಅಂಥದೊಂದು ಸಂಬಂಧ ಅಸಾಧ್ಯವೇ !). ನಾನು ಮೊದಲು ಓಣಿಗೆ ಪ್ರವೇಶ ಮಾಡುವಾಗ ಹೈ ಸ್ಕೂಲ್ ಓದುತಿದ್ದ ಹುಡುಗರು, ಈಗ ವಿವಿಧ ಡಿಗ್ರಿಯ ಎರಡು-ಮೂರನೇ ವರ್ಷದಲ್ಲಿ ಓದುತಿದ್ದರು. ದೇಹದಲ್ಲಿ ದೊಡ್ಡಗಾತ್ರ , ಮುಖದಲ್ಲಿ ಮೀಸೆ, ಮಾತಿನಲ್ಲಿ ದೊಡ್ಡತನ, ತಿರುಗಾಡಲು ಬೈಕ್-ಸ್ಕೂಟಿ, ಕೈಯಲ್ಲಿ ಸ್ಮಾರ್ಟ್ ಫೋನ್  ಹೀಗೆ  ಹಲವಾರು ಬದಲಾವಣೆಗಳನ್ನು  ಗಮನಿಸಿದ್ದೆ.

    ಹೀಗೆ  ಸಾಗುವಾಗ ಎದುರುಗೊಂಡ ರಾಜೇಂದ್ರ(ರಾಜ್ ), "ಅಣ್ಣ, ಇಷ್ಟುದಿನಗಳ ನಂತರ ಬಂದಿದ್ದಿಯಾ... ನಮ್ಮನೆಲ್ಲ ಮರೆತೇ ಬಿಟ್ಟಿ ಆಲ್ವಾ?....ನಂಬರ್ ಕೊಡು... ನಮ್ಮ ಮನೆಗೆ ಬಾ.... ಹೋಗೋಣ... " ಹೀಗೆ ಅವರ ಮನೆಗೆ ಕರೆದುಕೊಂಡು ಹೋದ. ಅವರ ಮನೆ ಗಲ್ಲಿ ಕ್ರಿಕೆಟ್ ಕ್ರೀಡಾಂಗದ ಒಂದು ಸೆಕ್ಯೂರಿಟಿ  ಆಫೀಸ್ ಇದ್ದಹಾಗೆ ಇದೆ. ನಾನು ಅಲ್ಲಿಗೆ ಇಂಜಿನಿಯರಿಂಗ್  ಓದುತಿದ್ದಾಗ ಆ ಮನೆಯ ಮುಂದೆ, ರಸ್ತೆಯಲ್ಲಿ ಕುಳಿತಾಗ ಅವನ ಮನೆಯ ಸದಸ್ಯರೆಲ್ಲರನ್ನು ನೋಡಿದ್ದೆ. ಒಂದು ಪರಿಚಯ ಮಾತ್ರ, ಆದರೆ ಯಾವತ್ತು ಟೀ ಸಹ ಕುಡಿದಿರಲಿಲ್ಲ.

ರಾಜ್ ನ ಮನೆ ಪ್ರವೇಶ  ಮಾಡಿದ ಮೇಲೆ, ಅವನ ಅಮ್ಮ,ತಮ್ಮ ಎಲ್ಲರು ಎದುರುಗೊಂಡು ಸ್ವಾಗತಿಸಿದರು. ಸಾಕ್ಷಾತ್  ಸರಸ್ವತಿಯ ಪುತ್ರ ತಮ್ಮ ಮನೆಗೆ ಪ್ರವೇಶ ಮಾಡಿದ್ದಾನೆ ಎನ್ನುವ ಮನೋಭಾವ ಅವನ ಅಮ್ಮನದು. ಏನು ಕೆಲಸ ? ಎಲ್ಲಿರುದು? ಪಗಾರು ಎಷ್ಟು ಕೊಡ್ತಾರೆ? ಇಂಜಿನಿಯರಿಂಗ್ ಮುಗಿಸಿ ಎಷ್ಟು ವರ್ಷಗಳು ಮುಗಿದವು ? ಮದುವೆ ಆಯಿತೆ ? ಇನ್ನು ಇಂಜಿನಿಯರಿಂಗ್ ಮಾಡಿದರೆ  ಜಾಬ್  ಸಿಗುವುದೇ ? ಇಂಥ  ಹಲವಾರು ಪ್ರಶ್ನೆಗಳ ಸುರಿಮಳೆಗೆ ಉತ್ತರಿಸುತ್ತ  ಸಾಗಿದೆ. ರಾಜ್  ಇಂಜಿನಿಯರಿಂಗ್  ನ instrumentation stream ನಲ್ಲಿ ಓದುತ್ತಿರುವುದು ತಿಳಿಯಿತು. ೩ ನೆ ವರ್ಷದ ಕೊನೆಯ ಸೆಮಿಸ್ಟರ್ ನ ಕೊನೆಯ ಪರೀಕ್ಷೆ ಬರೆಯಲು  ಸಿದ್ದತೆಯಲ್ಲಿ ತೊಡಗಿದ್ದಾನೆ. On an average 73% ಇನ್ ಇಂಜಿನಿಯರಿಂಗ್.  ಆದರೆ ರಾಜ್ ನ ಮನೆಯಲ್ಲಿ ಒಂದು ನೋವು ಇತ್ತು. ಅವಳ ಅಮ್ಮ ಹೇಳಿದ್ದು  ಹೀಗೆ:
"ನೀವು ಇಲ್ಲಿಂದ ನಡೆದೇ ಕಾಲೇಜ್ ಗೆ ಹೋಗ್ತಾ ಇದ್ರಿ, ಆದರೆ ಇವನು PUC ಮುಗಿದ ಮೇಲೆ  ಬೈಕ್  ಬೇಕು ಅಂತ ಹಠ  ಹಿಡಿದ. ಬೈಕ್ ಕೊಟ್ಟೆವು. ಆದರೆ ಇವಾಗ  ಓದುದು ಬಿಟ್ಟು ಲವ್-ಗಿವ್  ಅಂತ ಹುಡುಗಿ ಹಿಂದೆ ಬಿದ್ದಿದ್ದಾನೆ. ಕಾಲೇಜ್ ಬಿಟ್ಟ ಮೇಲೆ ನೇರವಾಗಿ ನೀವೆಲ್ಲ ಮನೆಗೆ ಬರ್ತಿದ್ರಿ ಆಲ್ವಾ ? ಅವನು ಏಳು-ಗಂಟೆ ತನಕ ಅವಳ ಸುತ್ತಾಡಿ ಮನೆಗೆ ಬರ್ತಾನೆ... ಅವನು ಹೇಗೆ ಇಂಜಿನಿಯರಿಂಗ್ ಮುಗಿಸುತ್ತಾನೋ -ಇಲ್ಲವೋ ಅಂತ ನನಗೆ ನೋವು ಇದೆ... ಮಕ್ಕಳು ತಮ್ಮ ಕಾಲ ಮೇಲೆ ನಿಂತ್ಕೊಳ್ಳಿ ಅಂತ ತಾನೇ ಪ್ರತಿಯೊಬ್ಬ ತಂದೆ-ತಾಯಿ ಯೋಚಿಸಿವುದು ?".

ರಾಜ್ ಪ್ರೀತಿ ಪ್ರೇಮದ ಕತೆ ನನಗೆ ಗೊತ್ತಿರಲಿಲ್ಲ.ಅವನ ಅಮ್ಮನಿಗೆ  ನಾನು "ಇಂಜಿನಿಯರಿಂಗ್ ಹುಡುಗರು ಪ್ರೀತಿ -ಪ್ರೇಮ ಮಾಡಬಾರದು" ಎಂದು ನನ್ನ ಬಾಯಿಂದ ಮಗನ ಕಿವಿಯ ಮೇಲೆ ತಮ್ಮ ಕಣ್ಣ ಮುಂದೆ ಮಾತು ಹೊರಬಿಳಲಿ ಎಂದು ಆಕಾಂಕ್ಷೆ ಇತ್ತು. ಆದರೆ ಪ್ರೀತಿ ಪ್ರೇಮ ವಿಷಯದಲ್ಲಿ ನನ್ನ ನಂಬಿಕೆ ಇಂಜಿನಿಯರಿಂಗ್ ದಿನಗಳಿಗಿಂತ ತುಂಬಾ ಬದಲಾಗಿತ್ತು.

ಮನುಷ್ಯನ ಬದುಕಿನ  ಉದ್ದೇಶ ಕೇವಲ ಹಣ ಸಂಪಾದನೆಯಲ್ಲ. ಹೆಸರು ಹೆಸರು ಗಳಿಸಬೇಕು; ತನ್ನ ಸಾಧನೆ ಪ್ರಪಂಚದಲ್ಲೆಡೆ  ಪ್ರತಿಧ್ವನಿಸಬೇಕು  ಎಂದು ಜೀವನದ ಮೂಲಭೂತ , ಸಣ್ಣ ಆಸೆಗಳೆನಿಸಿದ  ಪ್ರೀತಿ-ಪ್ರೇಮ ತಪ್ಪೆಂದು ಭಾವಿಸುವುದು ಸರಿಯಲ್ಲವೆನಿಸಿತು. ಸಮಾಜದಲ್ಲಿ ಮದುವೆಯಾದ ಮೇಲೆ ಎಲ್ಲವು ಇರುತ್ತೆ, ಅದಕ್ಕೆಲ್ಲ ಇವಗಲೇ ಯಾಕೆ ಎಂದು ಸಮಜಾಯಿಸಿ ತಮ್ಮ ವಾದವನ್ನೇ ಸರಿಯನ್ನುವ  ಸಂಪ್ರದಾಯಸ್ತರನ್ನು  ನೋಡಿದ್ದೇನೆ. ಆದರೆ  ಪ್ರೀತಿ ಪ್ರಪಂಚದ ಯಾವ ಗಣಿತ, ಭೌತಿಕ ಸೂತ್ರ ,ಕಾನೂನಿನ ಹೆಸರಿನಲ್ಲಿ ಬಂಧಿಸಲಾಗದ ಒಂದು ಭಾವನೆ . ಅದು ಅದರ ಹುಟ್ಟು ಸಾವು ಹೇಗೆ ಎಂದು ಹೇಳಿದವರು ಯಾರು ಇಲ್ಲ . ಅಂತ  ಪವಿತ್ರವಾದ ಪ್ರೀತಿಗೆ ಧರ್ಮಗಳು ಜಾತಿಗಳು ಗ್ರಹ ನಕ್ಷತ್ರಗಳ ತೊಡಕು ಇಲ್ಲ. ಹುಟ್ಟಿದ ಪ್ರೀತಿಗೆ ಒಳ್ಳೆಯ ಭವಿಷ್ಯ ನೀಡಬೇಕಾದುದ್ದು ತಂದೆ-ತಾಯಿಯರ ಕರ್ತವ್ಯ  ಹೊರತು ಹೂವಿನ ಮೊಗ್ಗನ್ನು ಕಿತ್ತು ಹಾಕಿದ ಹಾಗೆ ಮಗನ  ಪ್ರೀತಿ  ಕಿತ್ತು ಹಾಕಬೇಕೆಂದು  ರಾಜನ ಅಮ್ಮ ಬಯಸಿದ್ದು ಸರಿಯನಿಸಲಿಲ್ಲ.

"ಇರಲಿ ಬಿಡಿ ಆಂಟಿ, ಅವನು ಸ್ಟಡಿ ಅಂತು ಚೆನ್ನಾಗಿ ಮಾಡ್ತಾ ಇದಾನಲ್ವಾ ?  ಇನ್ನು ಒಂದು ವರ್ಷದ ಸ್ಟಡಿ ಉಳಿದಿದೆ, ಜಾಬ್  ಸಿಕ್ಕಿದ ಮೇಲೆ ಮದುವೆ ಆಗ್ತಾನೆ ಅಂದ್ರೆ ಮಾಡಿಸಿದರೆ ಆಯ್ತು... ! ಲವ್ ಮ್ಯಾರೇಜ್ ಬೆಟರ್ ಆಲ್ವಾ, ಆಂಟಿ ...? ಜಾತಿ-ಜಾತಕ  ಎಂದು ಊರೂರು  ಸುತ್ತ ಬೇಕಿಲ್ಲ. ವರದಕ್ಷಿಣೆ-ವಧು ದಕ್ಷಿಣೆ ಎಂತೆಲ್ಲ ತಲೆ ಕೆಡಿಸುದೇ ಬೇಕಾಗಿಲ್ಲ. ಲವ್ ಮ್ಯಾರೇಜ್ ಗೆ ಸಪೋರ್ಟ್ ಮಾಡ್ಬೇಕು ಆಂಟಿ...! ".

ಆಂಟಿಯ ಮುಖ,ಅರಳಿ ನಿಂತ ಕಮಲದ ಹೂವುನ್ನು ಕಾದ ಬಂಡೆಯ ಮೇಲೆ ಹಾಕಿದ ಹಾಗೆ  ಬಾಡಿ ಬಸವಳಿತು. ನನ್ನ ಮಾತು ಅವರಿಗೆ ಸರಿ ಬರಲಿಲ್ಲ ಎಂದು ಹೇಳಲು ಬಹಳ ಸಮಯ ಬೇಕಾಗಿರಲಿಲ್ಲ. ಅಷ್ಟೊತ್ತಿಗೆ ಟೀ ಮುಗಿದಿತ್ತು. ನನಗೆ ತಡವಾಗುತ್ತೆ ಎನ್ನುವ ನೆಪದಿಂದ, ಏನಾದ್ರೂ  ಬಿಸಿ ನೀರು ಸೋಕಿಸಿಯಾರು  ಎನ್ನುವ ಭಯದಿಂದಲೂ ಕಾಲುಕಿತ್ತು  ಬಿಟ್ಟೆ. ರಾಜ, ಅಮ್ಮನ ಮುಂದೆ ಮೌನವಾಗಿದ್ದರು, ಮನೆಯ ಹೊರಗೆ ನನ್ನ ಕಳುಹಿಸಲು ಹೊರಬಂದ. "ಅಣ್ಣ, ನಿನಗೆ ಫೋನ್ ನಲ್ಲಿ ಹುಡುಗಿ ವಿಷಯ  ಹೇಳ್ತೇನೆ. ಅಮ್ಮನ ಬೇಗ ಬೇಸರ ಮಾಡಬೇಡ" ಎಂದು ಹೇಳಿ ಹೋದ.

ನಾನು ಹೋಗಬೇಕಾದ  ಮನೆಗೆ ಹೋಗಿ-ಮಾತನಾಡಿಸಿ, ರಾತ್ರಿ 8 ಗಂಟೆಗೆ ಬಸ್ಸು ಹತ್ತಿ ಕುಳಿತು ರಾಜ ಗೆ ಫೋನ್ ಮಾಡಿದೆ. ಅವನು ಮನೆಯಯಿಂದ ಹೊರಬಂದು  ಕಾಲ್  ಮಾಡಿದ.

 ಹುಡುಗಿಯ ವಿಷಯ ಹೇಳಿದ. ಅಮ್ಮನ  ಪ್ರೀತಿಗೆ ಅಡ್ಡಿ ಬಂದಿರುವುದು ಅವನಿಗೆ ನೋವಿನ ವಿಷಯ. ನಾನು ಮನೆಯಿಂದ ಹೊರಬಿದ್ದ ಮೇಲೆ ಅವನ ಅಮ್ಮ  ಹೇಳಿದ ವಾಕ್ಯ, " ಮೊದಲು ಚೆನ್ನಾಗಿ ಓದುತಿದ್ದ. ಸ್ವಲ್ಪ ಹಣ ಬಂದಮೇಲೆ  ಕೆಟ್ಟು ಹೋದ  ಅನ್ಸ್ತಾ...ಲವ್ ಗೆ ಸಪೋರ್ಟ್ ಬೇರೆ... ಅಂತವನ ಜೊತೆ ಇನ್ನು ಸಂಬಂಧ ಬೇಡ" ಎಂದು ತನಗೆ  ತಾಕಿತು  ಮಾಡಿದರೆಂದು  ರಾಜ  ಹೇಳಿಕೊಂಡ.

"ರಾಜ , ನೋಡು..! ನಿನ್ನ ಅಮ್ಮ ಏನು ಹೇಳಿದರು ನನಗಂತೂ ಭಯವಿಲ್ಲ;ಬೇಸರವಿಲ್ಲ. ಪ್ರೀತಿಯ ಕುರಿತಾಗಿ ಪ್ರಾಕ್ಟಿಕಲ್ ಅನುಭವ ನನಗಿಲ್ಲ. ಆದರೆ ಪ್ರೀತಿಯ ಕತೆಗೆ ಸುಧಾ ಮೂರ್ತಿ ಅಂಥವರ ಕತೆ ಓದಿದ್ದೇನೆ. ಅದರಲ್ಲೂ ನನಗೆ ಬಹಳ ಇಷ್ಟವಾದ ಮಹಾಭಾರತದಲ್ಲಿ  ಎಲ್ಲವು ಪ್ರೇಮ ವಿವಾಹಗಳೇ..!. ಅಂದಿನ ಆ  ಹಳೆಯ ಗ್ರಂಥಗಳನ್ನೇ  ಇಂದಿಗೂ ನಮ್ಮ ಧರ್ಮದ ಮೂಲವೆಂದು  ಭಾವಿಸುವಾಗ ಪ್ರೀತಿಯ ವಿಷಯದಲ್ಲಿ ಆ ಪುಸ್ತಕಗಳನ್ನು ಗೌರವಿಸಬಾರದು ಎಂದರೆ ಹೇಗೆ ಆಲ್ವಾ?. ಇನ್ನು ನೀನು ಸಣ್ಣವನಿದ್ದಿಯಾ .  ಯಾವುದೇ ಸಂದರ್ಭದಲ್ಲೂ ತಪ್ಪು ನಿರ್ಣಯ ಮಾಡಬೇಡ. ಏನೇ ಅದ್ರು ನಿನ್ನ ಇಂಜಿನಿಯರಿಂಗ್ ಮುಗಿಸಿ, ಜಾಬ್ ಸಿಗುವುದು  ಬಹಳ ಮುಖ್ಯ; ಅಲ್ಲಿ ತನಕ ಪ್ರೀತಿಯ ಬಗ್ಗೆ, ಅಮ್ಮನ ಬಗ್ಗೆ ಬಹಳ ತಲೆ ಕೆಡಿಸಿಕೊ ಬೇಡ. ಜಾಬ್ ಸಿಕ್ಕಿದ ಮೇಲೆ, ನೀವಿಬ್ಬರು ಇಷ್ಟ ಪಡ್ತೀರಾ ಅನ್ನುದಾದರೆ, ಅಮ್ಮನ ವಿರೋಧದ ನಡುವೆಯೂ ಮದುವೆ ಸಾಧ್ಯ. ಇವಾಗ ಮಾತ್ರ ಚೆನಾಗಿ ಓದು."

ಅವನಿಗೆ ಇವಾಗ ಜಾಬ್  ಸಿಕ್ಕಿದೆ . ಮುಂದಿನ ವರ್ಷ ಮದುವೆ. ನಾನು ಮದುವೆಗೆ  ಹೋದ್ರೆ  ಆ ಆಂಟಿ ನನ್ನ  ಬಿಡ್ತಾರಾ?

Tuesday, May 14, 2013

ಕುಡುಕನಿಗೊಂದು ಸರ್ಕಾರ...!

ನನ್ನದು ಸಣ್ಣ ಹಳ್ಳಿ. ಐವತ್ತು ಮನೆಗಳಿರುವ ಹಳ್ಳಿ. ಊರಿನ ಪ್ರತಿಯೊಂದು ಮನೆಯ ಬಾಗಿಲು ನನಗೆ ಗೊತ್ತು; ಪ್ರತಿಯೊಬ್ಬರ ಜೊತೆ ಒಂದು ಬಗೆಯ ಸಂಬಂಧವು ನನಗಿದೆ. ಹೀಗಿರುವಾಗ...

ಅವಳು ನಾನು ೭ ನೇ ತರಗತಿಯಲ್ಲಿ ಓದುತ್ತಿರುವಾಗ ನಮ್ಮೂರ ಹುಡುಗನೊಬ್ಬನ ಕೈ ಹಿಡಿದು ಬಂದವಳು;ಅರ್ಥಾತ್  ಮದುವೆಯಾದವಳು. ಆತ  ಮಾತ್ರ ಸಕತ್ ಕುಡುಕ. ಮಾವನ ಮನೆಯವರು ಹೆಂಡತಿಗೆ  ಹಾಕಿದ  ಬಂಗಾರವನೆಲ್ಲ  ಕುಡಿದೆ ಬಿಟ್ಟಿದ್ದಾನೆ. ಅದೆಷ್ಟೋ ಬಾರಿ ಬುದ್ದಿ ಹೇಳಿದರು  ತನ್ನ ಕುಡಿತ ಮಾತ್ರ ಬಿಟ್ಟವನಲ್ಲ. ಆತನ  ಕುಡಿತ ಏನಾದ್ರು ಸ್ವಲ್ಪ ಕಡಿಮೆ ಇದೆ ಅನಿಸಿದರೆ :-ಒಂದು ಅವನಲ್ಲಿ ಹಣವಿಲ್ಲ, ಎರಡನೇದಾಗಿ ಯಾರು ಸಾಲ ಕೊಟ್ಟಿಲ್ಲ ಅಂತಾನೆ ಅರ್ಥ. ಇಂಥಹ ಸಂದರ್ಭದಲ್ಲಿ  ಹೆಂಡತಿ-ಮಕ್ಕಳಿಗೆ ದುಡ್ಡಿಗಾಗಿ ಪಿಡಿಸುವುದು  ಅವನ  ದುರುಳತನದ ವಿಚಾರ. ಹೀಗಿರುವಾಗ ಕಷ್ಟ ಪಾಡಿನಲ್ಲಿ ಬದುಕಿತ್ತಿರುವ ಅವನ ಹೆಂಡತಿಯ ಬದುಕು ಹೇಗಿರಬೇಡ? ಅವಳ ಕಷ್ಟಕ್ಕೆ ಒಂದಿಷ್ಟೂ ಸಾಂತ್ವನ ಹೇಳುವ ಮಂದಿಯಲ್ಲಿ ನಾನು ಒಬ್ಬ.

ಎಂದಿನಂತೆ  ನಿನ್ನೆ ಕಾಲ್ ಮಾಡಿ ಮಾತನಾಡುತಿದ್ದಂತೆ.... ಅವಳು ತನ್ನ ವ್ಯಕ್ತಿತ್ವಕ್ಕೆ ನಿಲುಕದ, ನಾನೆಂದು ಅವಳಿಂದ ನಿರಕ್ಷಿಸಿರದ  ವಿಚಾರ -ಚುನಾವಣೆ,ಸರ್ಕಾರದ ಕುರಿತಾಗಿ ಹೇಳುತ್ತಿದ್ದಳು.ಅವಳ ಮಾತು ಹೀಗಿತ್ತು:
"ಚುನಾವಣಾ ಆಯಿತು... ರಾಮಣ್ಣ ಅಂತ ಮುಖ್ಯ ಮಂತ್ರಿ ಅಂತೆ... ಅವರು ತಿಂಗಳಿಗೆ 30 ಕೆ. ಜಿ  ಅಕ್ಕಿ  30 /- ಗೆ ಕೊಡ್ತಾರಂತೆ.. ಇವಗಲೇ ನಮ್ಮ ಮನೆಯವರು ರೇಶನ್ ಅಕ್ಕಿ ನಂಬ್ಕೊಂಡು ... ದುಡಿದುದ್ದೆಲ್ಲಾ  ಕುಡಿತ್ತಾರೆ . ಇನ್ನು 1/- ಗೆ ಅಕ್ಕಿ ಕೊಡ್ತಾರೆ ಅಂದ್ರೆ ಖಂಡಿತ ಅವರು ಕುಡಿದೇ ಸಾಯ್ತರೆ...!. ಸೀರೆಗೆ ಹಾಕುವ ನಾಲ್ಕು ಪಿನ್ 10/- ರೂಪಾಯಿಗೆ  ಸಿಗದೇ ಇರುವ ಕಾಲದಲ್ಲಿ 1/- ಗೆ ಅಕ್ಕಿ ಅಂದ್ರೆ ಅದು ಹೇಗೆ ಸಾಧ್ಯ?... ಅದರ ಬದಲಾಗಿ ಮಕ್ಕಳಿಗೆ ಒಂದಿಷ್ಟು ಪುಸ್ತಕ- ಬಟ್ಟೆ ಕೊಟ್ಟರೆ ಒಳ್ಳೆದಾಗ್ತಿತ್ತು ... ಒಟ್ಟಾರೆ  ಈ ಕುಡಿತಕ್ಕೆ ನಾನು ಮಾಂಗಲ್ಯನೂ  ಕಳ್ಕೋ ಬೇಕೋ ಏನು ?"

ನನಗೆ ಮನಸಿನಲ್ಲಿ ಒಂದು ಕ್ಷಣ ಮೌನ ಆವರಿಸಿತ್ತು. ಹಳ್ಳಿಯ ಹೆಣ್ಣು ಮಗಳಿಗೆ ರಾಜಧಾನಿಯಲ್ಲಿ  ಕುಳಿತು ಮಾಡುವ ಒಂದೊಂದು ಕೆಲಸ ಕೂಡ ಎಷ್ಟೊಂದು ನೋವು ಉಂಟು ಮಾಡಬಲ್ಲದು ? ಎಂಬ ಕಲ್ಪನೆ ನನಗೆ ಇದೆ ಮೊದಲ ಬಾರಿಗೆ ಕ್ಷಣ ಮಾತ್ರದಲ್ಲಿ ಮೂಡಿ ಹೋಗಿತ್ತು. ಅವಳು ಕೇಳಿದ ಪ್ರಶ್ನೆಗೆ ನನ್ನಲ್ಲಿ ಉತ್ತರವೂ ಇರಲಿಲ್ಲ... 

"ಅತ್ತೆಗೊಂದು ಕಾಲ , ಸೊಸೆಗೊಂದು ಕಾಲ" ಅಂತಾರಲ್ಲ  ಹಾಗೆಯೇ  "ಕುಡಿಯದಿರುವರಿಗೊಂದು ಸರ್ಕಾರ, ಕುಡಿಯುವರಿಗೊಂದು ಸರ್ಕಾರ" ಎಂದು ಹೇಳಿ, ವಿಷಯಕ್ಕೆ ಕಡಿವಾಣ ಹಾಕಿದೆ.

ಒಂದುಂತು ಸತ್ಯ ..ಎಲ್ಲಿಯ ತನಕ "ಉಚಿತ " ಎನ್ನುವ  ಮಾತಿರುತ್ತದೋ  ಅಲ್ಲಿಯ ತನಕ ಜನ ಯಾರು ದುಡಿಯುವುದಿಲ್ಲ.ಅದೆಷ್ಟೋ ರೈತರು ಸಾಲ ಮೊನ್ನ ವಾಗುತ್ತದೆ ಎಂದು ಸಾಲ ತೆಗೆದು ಕುಡಿದು ಕುಪ್ಪಳಿಸಿದ ಕತೆಗಳು ನಾನು ಕೇಳಿದ್ದೇನೆ. ಮತ-ರಾಜಕಾರಣ  ದೇಶದ ದುಡಿಯುವ ವರ್ಗವನ್ನು ದುಶ್ಚಟಗಳಿಗೆ ಬಲಿಕೊಡುವಂತಿದೆ. ಅಹಿಂದ ಉದ್ಧಾರವೆಂದು ಅವರ ಸಂಪೂರ್ಣ ನಿರ್ನಾಮವಾಗುವಂತಿದೆ. ಆದರೆ ಸತ್ಯ ಗೊತ್ತಾಗಲು  ಇನ್ನು ಕೆಲವು ವರ್ಷಗಳು ಬೇಕು...!

Monday, May 13, 2013

ಚುನಾವಣೆ -"ನಾನು ಬೆಂಗಳೂರಿನಿಂದ ಬಂದೆ"

ಕಾರ್ಮಿಕ ದಿನಚಾರಣೆ ನಿಮಿತ್ತ ಸಿಕ್ಕ ರಜೆ,ಮನೆಗೆ ಹೋಗಬೇಕೆಂಬ ತವಕದೊಂದಿಗೆ ಚುನಾವಣೆ ಕಾರಣವನ್ನಿಟ್ಟುಕೊಂಡು ಏಪ್ರಿಲ್ 30 ರಾತ್ರಿಯೇ ಬೆಂಗಳೂರಿನಿಂದ ಹೊರಟಿದ್ದೆ. ನನ್ನ ಊರು ಯಾಣದ ಬಲ ಭಾಗದ ಗುಡ್ಡದ ಮೇಲೆ ಇದೆ . ಹೀಗಾಗಿ ಕುಮಟಾದಲ್ಲಿ ಬಸ್ಸಿಳಿದು, ಸಿರ್ಸಿ ಬಸ್ಸನ್ನು ಹತ್ತಿ, ಯಾಣ ಕ್ರಾಸ್ ಬಳಿ ಯಾವುದಾದರು ವಾಹನ ಸಿಗಬಹುದೇ ಎಂದು ಕಾದು ಕುಳಿತಿದ್ದೆ.

ಚುನಾವಣ ಪ್ರಚಾರಕ್ಕೆ ಅದೆಷ್ಟೋ ಮಂದಿ ಅದೇ ರಸ್ತೆಯಲ್ಲಿ ಓಡಾಡಿದರು. ಅದೆಷ್ಟೋ ಬೈಕ್ ಗಳು ನನ್ನ ಕಣ್ಣ ಮುಂದೆ ಸಾಗಿ ಹೋದವು. ಯಾರು ಕೂಡ ಯಾಣದ ತುದಿಯ ತನಕ ತಲುಪುವವರು ಆಗಿರಲಿಲ್ಲ(೧೬ ಕೀ .ಮಿ ). ಸುಮಾರು ನಾನು ಕ್ರಾಸ್ ಗೆ ಇಳಿದ ಒಂದೂವರೆ ತಾಸಿನ ಬಳಿಕ ಒಬ್ಬ ಯುವಕ ಬೈಕ್ ನ ಮೇಲೆ ಬಂದು ನಾನು ಕುಳಿತ ಸ್ತಳದಲ್ಲಿಯೇ ಬೈಕ್ ನಿಲ್ಲಿಸಿ, ಬಹುಶ ನನ್ನ ಬೆಂಗಳೂರಿನ ಡ್ರೆಸ್, ಶೂಸ್, ಸ್ಟೈಲ್ ಗಮನಿಸಿ ನೀವು ಯಾಣಕ್ಕೆ ಪ್ರವಾಸಿಗರೊ? ಎಂದು ಪ್ರಶ್ನಿಸಿ ಮಾತಿಗೆ ತೊಡಗಿದ. ಹೀಗೆ ಮಾತಿಗೆ ಮಾತು ಬೆಳೆದು, ನನ್ನ ಊರು ಯಾಣ ಸಮೀಪವೆಂದು ತಿಳಿ ಹೇಳಿ, ವಂಶದ ಸಾರವನ್ನೆಲ್ಲ ಹೇಳಿಕೊಂಡ ಮೇಲೆ, ನನ್ನ ತಮ್ಮನಿಗೆ ಪರಿಚಯದವನು ಎಂದು ತಿಳಿದು ಬಂತು. ಜೊತೆಗೆ, ನಮ್ಮೂರಿನ ಮೂಲಕ ಮುಂದಿನ ಯಾವುದೋ ಊರುಗಳನ್ನು ಕೆಲಸ ನಿಮಿತ್ತವಾಗಿ ತೆರಳುವುದಾಗಿ ಹೇಳಿದ ಮೇಲೆ, ನನಗೆ ಸ್ವಲ್ಪ ನನ್ನ ಊರಿಗೆ ಬಿಡುತ್ತಿರಾ ಎಂದು ದೈನ್ಯತೆಯಿಂದ ಕೇಳಿಕೊಳ್ಳಬೇಕಾಯಿತು. ಅವನ ಬೈಕ್ ಹತ್ತಿ ಒಂದು ಕೀ . ಮೀ ಸುಮಾರು ಕ್ರಮಿಸಿದ ಬಳಿಕ ತಾನು ದಾರಿಯಲ್ಲಿ ಸಿಗುವ ಎಲ್ಲ ಮನೆಗಳಿಗೂ ಹೋಗಿ ಹೋಗುವನೆಂದು, ತಾನೊಂದು ರಾಜಕೀಯ ಪಕ್ಷದ ಪ್ರಚಾರಕ್ಕಾಗಿ ಹೋಗುತ್ತಿರುವನೆಂದು ಹೇಳಿದ. ಇವನು ಪ್ರಚಾರ ಮಾಡಿದರೆ ನನಗೇನು, ನಾನು ಯಾವತ್ತು ಹೋಗದ ಹಳ್ಳಿಗಳಿಗೆ ಒಂದು ಪ್ರವಾಸ ದಂತೆ ಎಂದು ಭಾವಿಸಿ, ಅವನ ಪಕ್ಷದ ಪರವಾಗಿಯೇ ಧನಾತ್ಮಕವಾಗಿ ಮಾತುನಾಡುತ್ತ ಸಾಗಿದೆ.( ಬೈಕ್ ಮೇಲೆ ಕುಳಿತುದ್ದಕ್ಕೆ ಅಷ್ಟು ಕೆಲಸವಾದರೂ ನಾನು ಮಾಡಲೇ ಬೇಕಾಗಿತ್ತು). ಹಾಗೆಂದು ನಾನು ಯಾವ ಕಾರಣಕ್ಕೂ ಒಂದು ರಾಜಕೀಯ ಪಕ್ಷದ ಜೊತೆಯಲ್ಲಿ ಗುರಿತಿಸಿಕೊಳ್ಳಲು ಮನಸಿರಲಿಲ್ಲ. ನಾನು ಒಬ್ಬ ಒಳ್ಳೆಯ ಮತದಾರ ಮಾತ್ರವೆಂದು ನಾನು ಭಾವಿಸಿಕೊಂಡವನಾಗಿದ್ದೆ.

ಮೊದಲ ಹಳ್ಳಿಯ ಮನೆಗೆ ಪ್ರವೇಶ ಮಾಡಿದ ಬಳಿಕ, ಬೈಕ್ ಶಬ್ಧಕ್ಕೆ ಆಚೆ-ಇಚೆ ಮನೆಯವರೆಲ್ಲ ಸೇರಲಾರಮ್ಬಿಸಿದರು. ನನ್ನ ಡ್ರೆಸ್, ನನ್ನ ಮೊಬೈಲ್, ನನ್ನ ಶೂ ಇವೆಲ್ಲ ಒಂದುರಿತಿಯಲ್ಲಿ ಪ್ರದರ್ಶನಕ್ಕೆ ಇಟ್ಟಂತೆ ಇತ್ತು ಆ ಸಂದರ್ಭ. ಎಲ್ಲರು ಬಂದು ಸುತ್ತಲು ನೆರದ ಬಳಿಕ, "ನೋಡಿ, ಈ ವರ್ಷ ನಾವು ಈ XYZ ಪಕ್ಷದವರನ್ನು ಆಯ್ಕೆ ಮಾಡಬೇಕೆಂದಿದ್ದೇವೆ. ನೀವೆಲ್ಲ ಇದಕ್ಕೆ ವೋಟ್ ಮಾಡಬೇಕು. ನಿಮಗೆ ರಸ್ತೆ, ರೇಶನ್, ಕರೆಂಟ್ ಎಲ್ಲ ನಮ್ಮ ಪಕ್ಷದವರು ಮಾಡಿಕೊಳ್ಳುತ್ತಾರೆ..(ನನ್ನ ಕೈ ತೋರಿಸುತ್ತ )... ಇವರು ನಿಮಗೆ ಗೊತ್ತಿರಬೇಕಲ್ಲ..? ಇವರದು ಕೂಡ ಇಲ್ಲೇ ಪಕ್ಕದ ಹಳ್ಳಿ...ಇವರು ಬೆಂಗಳೂರಿನಲ್ಲಿ ಇಂಜಿನಿಯರ್ ಸಾಹೇಬ್ರು. ಇವರು ಕೂಡ XYZ ಪಕ್ಷಕ್ಕೆನೇ ಮತ ಹಾಕುದು. ಅದನ್ನು ಹೇಳುದಕ್ಕೆ ಇವರು ಬೆಂಗಳೂರಿಂದ ಅವರು ನಮ್ಮ ಜೊತೆ ಬಂದಿದ್ದಾರೆ . ನಮ್ಮ ಮೇಲೆ ನಂಬಿಕೆ ಬರಲಿಲ್ಲ ಅಂದರೆ ...ನಿಮ್ಮ ಸಮೀಪದವರಾದ ಇವರನ್ನು ನಂಬಿ..." ಎಂದು ಹೇಳಿ, ಕೆಲವು ಆಮಿಷದ ಮಾತುಗಳನ್ನು ತೋಡಿಕೊಂಡರು. ಅವನ ಮಾತು ಮುಗಿದ ಬಳಿಕ, ನಾನು ಹಾಗೇನೆ ಮಾತು ಆಡುತ್ತೇನೆ ಎಂದು ಕೊಂಡಿದ್ದ ಹಳ್ಳಿಯ ಮಂದಿಗೆ, ಒಂದು ರೀತಿಯಲ್ಲಿ ಚುನಾವಣೆಗೆ ಬಂದ ನಟ ನಂತೆ ನನ್ನ ಕಡೆ ನೋಡಿದರು. ನಾನು ಅವನ ಮಾತಿಗೆ ವಿಷ್ಮಯಗೊಂಡು, ನನ್ನ ನೋವು ನುಂಗಿ, ಮೌನವಾದೆ . ನನಗೆ ಮಾತನಾಡಲು ಏನು ಉಳಿದಿರಲಿಲ್ಲ.

ಮುಂದಿನ ಮನೆಗೆಳಿಗೆ ಹೋದ ಮೇಲೆ, ಇದೆ ಪರಿಸ್ಥಿತಿ ನನಗಾಗಬರದೆಂದು, "ನನ್ನನ್ನು ನಿಮ್ಮ ಪ್ರಚಾರ ಕಾರ್ಯಕ್ಕೆ ಬಳಸಿಕೊಳ್ಳಬೇಡಿ" ಎಂದು ತಾಕೀತು ಮಾಡುವುದು ದೈನ್ಯತೆಯಿಂದ ನನ್ನ ಊರಿಗೆ ಬಿಡುತ್ತಿರಾ ಎಂದು ಕೇಳಿಕೊಂಡ ನನ್ನ ಮಾತಿಗೆ ವಿರೋಧಭಾಷವಾಗಿ ಕಾಣುತ್ತಿರುವುದರಿಂದಲೂ, ನಾನೇ ಹೇಗಾದರೂ ಮಾಡಿ ನನ್ನ ಸಮಸ್ಯೆ ನಾನೇ ಬಗೆಹರಿಸಿಕೊಳ್ಳಬೇಕೆಂದು ನಿರ್ಧರಿಸಿದೆ. ಮುಂದಿನ ಮನೆಗೆ ಪ್ರವೇಶಿಸಿದ ಕೂಡಲೇ,"ನಾನು ಯಾಣ ಸಮೀಪದ ಹಳ್ಳಿಯವನು, ಬೆಂಗಳೂರಿನಲ್ಲಿ ಇಂಜಿನಿಯರ್ ಆಗಿದ್ದೇನೆ. ಊರಿಗೆ ಬರಲು ಯಾಣದ ಕ್ರಾಸ್ ನಲ್ಲಿ ಬಸ್ಸು ಕಾಯುತ್ತ ಇದ್ದೆ.ಇವರ ಪರಿಚಯವಾಯಿತು.. ಹೀಗಾಗಿ ಇವರ ಜೊತೆ ಬಂದೆ... ನಾನು ಬೆಂಗಳೂರಿಂದ ಬಂದೆ...." (ಈ ಮಾತಿನಲ್ಲಿ ನನಗೂ-ನನ್ನ ಜೊತೆಯಲ್ಲಿದ್ದ ಪ್ರಚಾರಕನಿಗೂ ಯಾವ ರಾಜಕೀಯ ಸಂಬಂಧವಿಲ್ಲ ಎಂದು ಎತ್ತಿ ಹಿಡಿಯುವುದಾಗಿತ್ತು.).

ಹೀಗೆ ಒಂದು ಮನೆಯಿಂದ ಇನ್ನೊಂದು ಮನೆಗೆ ಪ್ರವೇಶಿಸದ ಕೂಡಲೇ, ಅವನ ರಾಜಕೀಯ ಪ್ರಚಾರಕ್ಕಿಂತಲೂ ನಾನು ಬೆಂಗಳೂರಿಂದ ಬಂದುದ್ದೆ ದೊಡ್ಡ ಪ್ರಚಾರವೆನ್ನುವಂತೆ ನನಗೆ ಅನಿಸಲಾರಂಭಿಸಿತು. ಅದೆಷ್ಟೋ ಬಾರಿ ಮೇಲಿನ ಮಾತು ಹೇಳಿದೆನೋ ದೇವರಿಗೆ ಗೊತ್ತು. ಕೊನೆಗೂ ಅವನಿಗೆ ನನ್ನನ್ನು ರಾಜಕೀಯ ದಲ್ಲಿ ಸೇರಿಸಿ ಕೊಳ್ಳಲು ಆಗಲಿಲ್ಲ.

ಬೆಂಗಳೂರುರಾಜಧಾನಿಯಗಿದ್ದರು, ಸ್ವಚ ಬದುಕಿನ ನೆಲೆಯಲ್ಲಿ ಯೋಚಿಸಿದಾಗ ನನ್ನ ಪುಟ್ಟ ಹಳ್ಳಿ, ಮನೆ ಬೆಂಗಳೂರಿನ ವರ್ಣ ರಂಜಿತ ಬದುಕಿಗಿಂತ ಎಷ್ಟೋ ಮೆಲು. ಬೆಂಗಳೂರಿಂದ ನಾನು ಕಳೆದ ಮೂರೂ ಬಾರಿ ಮನೆಗೆ ಹೋದರು ಮನೆಯ ಅಕ್ಕ-ಪಕ್ಕದವರಿಗೂ ನಾನು ಬೆಂಗಳೂರಿನಲ್ಲಿದ್ದಿನೋ ... ಮಂಗಳೂರಿನಲ್ಲಿದ್ದಿನೋ... ತಿಳಿಯದಾಗಿತ್ತು. ಈ ಬಾರಿ ಮಾತ್ರ ನಾನೇ ಚುನಾವಣೆಯಲ್ಲಿ ಪ್ರಚಾರದ ಹಾಗೇನೆ , "ಬೆಂಗಳೂರಿನಿಂದ ಬಂದೆ" ಎಂಬ ಘೋಷ ವಾಕ್ಯದೊಂದಿಗೆ ಪ್ರಚಾರ ಮಾಡಿದ ಹಾಗಿತ್ತು. ಕೊನೆಗೂ ನಾನು ಸ್ವತಂತ್ರ ಅಭ್ಯರ್ತಿಯಾಗಿ ಗುರುತಿಸಿಕೊಂಡೆ.

ಆದರೆ, ಅದೆಷ್ಟೋ ಹಳ್ಳಿಯ ಮಂದಿ ನನ್ನ ಕುರಿತಾಗಿ " ಬೆಂಗಳೂರಿಗೆ ಹೊದುದ್ದಕ್ಕೆ ಅವನಿಗೆ ಸೊಕ್ಕು ನೋಡಿ" ಅಂದುಕೊಂಡರೋ ತಿಳಿಯದು.

ಅಡುಗೆ ಕಲೆ..!

ಬಹುಶ ನನ್ನ resume ದಲ್ಲಿ ನಾನು ಹೊಸ skill update ಮಾಡಬೇಕಾಗಿದೆ.I know self cooking ..!
ನಾವೆಲ್ಲಾ ಅಡುಗೆ ಕೆಲಸ ಅಂದರೆ ಅದು ಹೆಣ್ಣಿಗೆ ಮಾತ್ರ ಸೀಮಿತ ...ನಮ್ಮ ಕೆಲಸ ಏನಿದ್ರೂ ತಟ್ಟೆಯಲ್ಲಿ ಅನ್ನ ಹಾಕಿದರಿಂದ -ಹೆಚ್ಚೆಂದರೆ ತಟ್ಟೆ ತೊಳೆಯುವತನಕ ಮಾತ್ರ ಅಂತ ಭಾವಿಸಿರುತ್ತೇವೆ. ಮಣಿಪಾಲ ದಲ್ಲಿ ಒಂದು ವರ್ಷದಿಂದ ಎಲ್ಲ ವ್ಯವಸ್ತೆ ಇದ್ದರು ಒಂದು ದಿಂದ ಸಹ ಅಡುಗೆ ಮಾಡಿ ಊಟ ಮಾಡಿರಲಿಲ್ಲ. ಆದರೆ ಬೆಂಗಳೂರಿನ ಪರಿಸ್ಥಿತಿ ನನ್ನ ಅಡಿಗೆ ಮನೆಯಲ್ಲೂ ಪಳಗ ಬೇಕಾದ ದಾರಿಗೆ ನಾಂದಿಯಾಯಿತು . ಆದರೆ ನನಗೆ ಸಂತೋಷವಿದೆ .
ನಾವು ಬೈಕು-ಕಾರು ಓಡಿಸುವುದು, ಇಜಾಡುವುದು ಇತ್ಯಾದಿಗಳನ್ನ "emergency ಬೇಕಾಗುತ್ತೆ ..ಮಗಾ ..!" ಎಂದು ಹೇಳಿಕೊಂಡು ಕಲಿತಿದ್ದೇವೆ . ಆದರೆ ಅಡುಗೆ ಮಾತ್ರ emergency ಗು ಬೇಕಾಗುತ್ತೆ ಅಂತ ಯಾಕೆ ಅನಿಸಲೇ ಇಲ್ಲಿಯ ತನಕ? ಇತ್ತಿಚ್ಚಿ ಗೆ ನಮ್ಮ ಸಹೋದ್ಯೋಗಿಯ ಜತೆ ನನ್ನ ಅಡುಗೆ ಸಾಮರ್ಥ್ಯದ ಬಗ್ಗೆ ಜಂಬ ಕೊಚ್ಚಿ ಕೊಳ್ಳುತ್ತಿರುವಾಗ, ಅವರು ಏನು ಹೇಳಿದರು ಗೊತ್ತ ...." ಲೇ .. ನಿನ್ನ ಅದೃಷ್ಟ ಚೆನ್ನಾಗಿದೆ ನೀನು ಇವಾಗಲಾದ್ರೂ ಕಲಿತ ಇದ್ದೀಯ ..? ನಾನೆಲ್ಲ ಬೈಕ್ ಹಿಡ್ಕೊಂಡು ದಿನ ಹೊರಗೆ ಹೋಗ್ತಾ ಇದ್ದೆ ...ಆದರೆ ಮದುವೆ ಆದ ಮೇಲೆ...ನನ್ನ ಕಷ್ಟ ಹೇಳಿದ್ರೆ ..ನನಗೆ ನಾಚಿಕೆ ಅನಿಸುತ್ತೆ ....ನೀನು ಫ್ರೆಂಡ್ಸ್ ಹತ್ತಿರ ಅಡುಗೆ ಕಲಿತ ಇದ್ದೀಯ ...? ಹೆಂಡತಿಯ ಹತ್ತಿರ ಏನ್ ಬೇಕಾದ್ರೂ ಕಲಿ ಬಹುದು ಆದರೆ ಅಡುಗೆ ಮಾತ್ರ ಬೇಡ ಗೊತ್ತ?" ಅಂದರು .
"ಬೆಂಗಳೊರಿನಲ್ಲಿ ಎಲ್ಲ ಹುಡುಗರು ಅಂದುಕೊಳ್ಳುವ ತಪ್ಪು ಕಲ್ಪನೆ ಅಂದರೆ ಮದುವೆಯಾದರೆ ಊಟದ ಸಮಸ್ಯೆ ತಾನಾಗಿಯೇ ನಿಗುತ್ತೆ ಅಂತ. ಅದು ಶುದ್ಧ ತಪ್ಪು . ಹುಡುಗರ ಜತೆ ಹೆಗಲು ಕೊಟ್ಟು ದುಡಿಯುವ ಹುಡುಗಿಯರಿಗೂ ತಮ್ಮದೇ ಜಗತ್ತು, ತಮ್ಮದೇ ನೋವು-ಕಷ್ಟ ಇರುತ್ತೆ ನೋಡು ..ಅವರಿಗೆ ಪ್ರತಿನಿತ್ಯ ಅಡುಗೆ ಮಾಡುವುದಂದರು ಬೇಸರ ಅಲ್ವಾ ..?. ಆದರೆ ಜತೆಗೆ ಬರುವ ಶೀತ-ನೆಗಡಿ, ಓವರ್ ವರ್ಕ್ ಲೋಡ್, ಅಪ್ಪ ಮನೆಯ ಕಾಲ್ ಅಂತ ಎಷ್ಟೋ ಸಲ ಕೈ ಕೊಡ್ತಾರೆ ಗೊತ್ತ ? ಊಟದ ಸಮಸ್ಯೆ ಗೊತ್ತಾಗುವ ಹೊತ್ತಿಗೆ ರಾತ್ರಿಯಾಗಿರತ್ತೆ ? ಊಟ ಎಲ್ಲಿ ಹುಡುಕುತ್ತಿಯಾ ? ನಾನು ಹೆಂಡತಿಯ ಬಳಿ ಅಡುಗಿ ಕಲಿತಿದ್ದೇನೆ ...ಅಡುಗೆ ಏನು ಸಾಮಾನ್ಯ ಅಂತ ತಿಳಿಯ ಬೇಡ ... ಉಪ್ಪು ಖಾರ ಎಲ್ಲ ಕೂಡಿಸುವ ಕಲೆ ಸಣ್ಣದಲ್ಲ. ಅಪ್ಪಿ ತಪ್ಪಿ ಹೆಂಡತಿಗೆ ಇಷ್ಟ ವಾಗದ ಅಡುಗೆ ನಡೆದು ಹೋಗಿ(ಮಾಡಿದ್ದಲ್ಲ ) ಬಿಟ್ಟರೆ...ಊಟದ ಗೋಳು ಬೇರೆ... ನಮ್ಮ ego ಮೇಲೆ ಹೆಂಡತಿಯ ದಾಳಿ ಬೇರೆ... ಚೆನ್ನಾಗಿ ಇವಗಲೇ ಕಲಿತುಕೋ ..ಗೆಳೆಯರ ಮೇಲೆ ಅಡುಗೆಯ ಟೆಸ್ಟ್ ಕೇಸ್ ಮಾಡಬಹುದು...ಹೆಂಡತಿ ಮೇಲೆ ಆಗಲ್ಲ ಕಣಯ್ಯಾ ..."

ಹೌದು, ಹಿಂದೆ ಮನೆ ಅಂದರೆ ಅಪ್ಪ-ಅಮ್ಮ,ತಂಗಿ-ನಾದಿನಿ- ಅತ್ತಿಗೆ ಯಾರಾದ್ರೂ ಇದ್ದು ಅಡಿಗೆ ಸಹಾಯವಾಗುತಿತ್ತು. ಒಬ್ಬರು ಕೈ ಕೊಟ್ಟರು ಇನ್ಯಾರಾದರೂ ಅನುಕೂಲಕ್ಕೆ ಬರುತಿದ್ದರು. ಆದರೆ ಇವತ್ತು ಬೆಂಗಳೂರು ನಂತ ನಗರದಲ್ಲಿರುವ ಬೆಂಕಿ ಪೆಟ್ಟಿಗೆಯಷ್ಟು ಚಿಕ್ಕ ಮನೆಯಲ್ಲಿ ಗಂಡ ಹೆಂಡತಿನೇ ಭಾರ ವಾಗಿರುವಾಗ ಬೇರೆಯವರನ್ನು ಕರೆಯುವುದಾದರೂ ಹೇಗೆ ?

ಅಡುಗೆ ಅಂದರೆ -ಕೇವಲ ತಿನ್ನುವ ಪರಿಕರಗಳ ತಯಾರಿಕೆ ಮಾತ್ರ ಅಲ್ಲ...ಒಮ್ಮೆ ಅಡುಗಿ ಮುಗಿಸಿದ ಮೇಲೆ ಮತ್ತೊಮ್ಮೆ ಅಡುಗೆ ಮನೆಗೆ ಹೋದಾಗ ಮೂಗು ಹಿಡಿಯುವ ಪರಿಸ್ಥಿತಿ ಇರಬಾರದು. ಅಚ್ಚು ಕಟ್ಟಾಗಿ ಪಾತ್ರೆ ಗಳನ್ನೂ ಒರಾಣವಾಗಿಸಿ ಇಡುವುದು ಬಹಳ ಮುಖ್ಯ. ಒಟ್ಟಾರೆ ಅಡುಗೆ ಮನೆಯಲ್ಲಿ ಊಟ ಮಾಡಿ ಅನುಭವಿದ್ದರು, ಅಡುಗೆ ಮಾಡುವ ಅನುಭವ ಹೊಸತು. ಅಡುಗೆ ಮನೆಯ ಅನುಭವ ೧ ತಿಂಗಳು.
Kitchen Guruji-Mallikarjun A Biradar and Chetan Hoskoti

ರಾಜಧಾನಿಗೆ ಬಂದಾಗ..!

ನಾನು ನನ್ನ ಹಳ್ಳಿಗಿಂತಲೂ ಅತಿ ಹೆಚ್ಚು ಪ್ರೀತಿಸಿದ ಸ್ಥಳ ಇದ್ದರೆ ಅದು ಉಡುಪಿ. ಉಡುಪಿಯ ಕಲೆ-ಸಂಸ್ಕೃತಿ-ಆಹಾರ ನನ್ನ ಹೃದಯದಲ್ಲಿ ಬಹುದೊಡ್ಡ ಸ್ಥಾನ ಪಡೆದಿರುವ ಸಂಗತಿಗಳು. ಹಿಗುರುವಾಗ-ರಾಜಧಾನಿ ಬೆಂಗಳೂರಿಗೆ ಒಲ್ಲದ ಮನಸ್ಸಿನಿಂದ ಬಂದವನು ನಾನು. ಇವತ್ತು ಸುಮಾರು ದಿನಗಳು ಕಳೆದು ಹೋದವು.
ರಾಜಧಾನಿಯ ಧೂಳು, ವಾಹನ ಸಂದಣಿ, ಸ್ವಲ್ಪವೂ ಹೃದಯ ಬಿಚ್ಚದ(ಮಾತಾಡದ) ಜನ ನೋಡಿ ಯಾವ ನರಕಕ್ಕೆ ನಾನು ಬಂದೆ ಅಂದುಕೊಂಡಿದ್ದೆ ಮೊದಲ ದಿನಗಳಲ್ಲಿ. ಬೆಂಗಳೊರಿನಲ್ಲಿ ಬದುಕು ಅನ್ನುದು ಒಂದು ಇದೆಯಾ ? ಇವರೆಲ್ಲ ಯಾಕೆ ಹುಚ್ಚಾರ ಹಾಗೆ ರಾತ್ರಿ ಹಗಲು ರಸ್ತೆಯ ನೂಕು-ನುಗ್ಗಲಿನಲ್ಲಿ ಕಾಲ ಕಳೆಯುತ್ತಿದ್ದಾರೆ ಅನ್ನುವ ಪ್ರಶ್ನೆ ಕೆಲವೊಮ್ಮೆ ನಿದ್ದೆಯಲ್ಲೂ ಕನಸುಗಳಾಗಿ ಕಾಣಿಸಿದ್ದುಂಟು. ಇಂತ ವಿಚಿತ್ರ ಸ್ಥಿತಿಯಿಂದ ಯೋಚಿಸುತಿದ್ದ ನಾನು ಇವತ್ತು ಧೂಳನ್ನು ಉಸಿರಾಡುತ್ತಾ....ವಾಹನಗಳ ಶಬ್ಧವನ್ನು ಜೋಗುಳವೆಂದೆ ಭಾವಿಸಿ ದಿನದ ಎರಡು ತಾಸು ನಿದ್ರೆ ಮಾಡುತಿದ್ದೇನೆ. ಉಡುಪಿಯಲ್ಲಿ ನಾನು ಆಲೋಚಿಸಿತ್ತಿದ್ದ ಬದುಕಿಗೂ ಇಲ್ಲಿರುವ ಬದುಕಿಗೂ ವತ್ಯಾಸವಿದೆ. ಬದುಕು ನಾಟ್ಯ-ಸಂಗೀತದಷ್ಟು ಸುಲಭವಲ್ಲ. ಇಲ್ಲಿಯ ಬದುಕಿನ ವಿವಿಧ ಅಂಗಗಳ ಕುರಿತಾಗಿ - ನಾನು ಅನುಭವಿಸಿದ್ದು, ಕೇಳಿದ್ದು, ಜನ ಹೇಳಿದ್ದು -ಬರೆಯುತ್ತೇನೆ.

ನಿರೀಕ್ಷಿಸಿ ಮುಂದಿನ ಅಂಕಣದಲ್ಲಿ ..