Sunday, June 30, 2013

ರಾಜಕೀಯ..! ಛಿ ಥೂ...!

     ರಾಜಕೀಯ ಚದುರಂಗ ಆಟದ ಕುರಿತಾಗಿ ಯಾರಿಗೆ ತಾನೇ ಗೊತ್ತಿಲ್ಲ?ರಾಜಕೀಯ ಗೊತ್ತೇ ಇಲ್ಲ ಅನ್ನುವ ಅಥವಾ ನನಗೆ ಇಷ್ಟವಿಲ್ಲದ ವಿಷಯ ಎಂದು ಖಂಡಿತ ಹೇಳುವ ಹಾಗಿಲ್ಲ. ದಿನ ನಿತ್ಯದ ಬದುಕಿನಲ್ಲಿ ರಾಜಕೀಯ ಇದ್ದೆ ಇದೆ.

    ನಾನೊಂದು ದಿನ ಊರಿಗೆ ಬಸ್ಸಿನಲ್ಲಿ ಹೋಗುವಾಗ, ನನ್ನ ಜೊತೆಯಲ್ಲಿ ಒಬ್ಬ BA  ವಿದ್ಯಾರ್ಥಿ ಪಕ್ಕದಲ್ಲಿ ಕುಳಿತ. ಹೀಗೆ-ಹಾಗೆ ಪರಿಚಯ ಮಾಡಿಕೊಂಡು, "ಯಾವ ವಿಷಯ ಓದುತ್ತಿದ್ದಿಯಾ?" ಎಂದು ಕೇಳಿದೆ. "HPE ". ಎಂದ. "ಅಂದ್ರೆ" ಎಂದು ಪುನ ಪ್ರಶ್ನೆ ಮಾಡಿದಾಗ," History , Politics , Economics  ಎಂದು ಹೇಳಿದ. "ಒಹ್ ಹೌದಾ..!...ಹಾಗಿದ್ರೆ, ಕರ್ನಾಟಕದ ಮುಂದಿನ ಮುಖ್ಯಮಂತ್ರಿ ಯಾರಾಗಬಹುದು ಅಂತಿಯ?". (ಕಳೆದ ಚುನಾವಣೆಗಿಂತ ಎರಡು ತಿಂಗಳು ಮೊದಲು ನಡೆದ ಮಾತಿದು).  "ಏನಣ್ಣ... ನನಗಂತೂ ರಾಜಕೀಯ ಅಂದ್ರೇನೆ ಇಷ್ಟ ಇಲ್ಲ... ಇವರೆಲ್ಲ ಕ್ರಿಮಿನಲ್ಸ್.... ಆಡಿದ ಹಾಗೆ ಮಾಡಲ್ಲ.... ಓಟು ಬೇಕಂದ್ರೆ ಮಾತ್ರ ಅವರಿಗೆ ನಮ್ಮ ನೆನಪು... ಒಂದಿಷ್ಟು ದುಡ್ಡು ಮಾಡ್ಕೊಂಡು ಹೋಗಿ ಬಿಡ್ತಾರೆ.. ಅವರ ಬಗ್ಗೆ ತಿಳಿದೇನು ಆಗಬೇಕು?....ನಾನು ಪೊಲಿಟಿಕಲ್ ನ್ಯೂಸ್ ಅಂದ್ರೆ ಆಗಲ್ಲ... I  hate  politics ...!"

ಇದು ಒಬ್ಬ ಸಾಮಾನ್ಯ ಹಳ್ಳಿಯ ಸಾವಿನ ಅಂಚಿನಲ್ಲಿರುವ ಮುದುಕ ಅಥವಾ ಶಿಕ್ಷಣವೇ ಸಿಗದೇ ಹಳ್ಳಿಯ ಮೂಲೆಯಲ್ಲಿ ದನ-ಕುರಿ ಕಾಯ್ದು ಕೊಂಡು ಬದುಕುತ್ತಿರುವ ಒಬ್ಬ ಹುಡುಗ ಹೇಳಿದ ಮಾತಗಿದ್ದರೆ ನಾನು ತೆಪ್ಪಗೆ ಕುಳಿತಿರಬಹುದಿತ್ತು. ಆದರೆ, ಹುಡುಗ ಕಾಲೇಜು ವಿದ್ಯಾರ್ಥಿ. ಇವತ್ತೇ ೧೮ ದಾಟಿದ  ಭಾವಿ ಪ್ರಜೆ..! ಪಾಲಿಟಿಕ್ಸ್ ಓದಿತ್ತಿರುವ ವಿದ್ಯಾವಂತ. ಇಂಥವರು I  hate  politics ...! ಎಂದು ಹೇಳಿದರೆ ಮುಂದಿನ ಪ್ರಜೆಗಳ ರಾಜ ಯಾರು ?

ಅದಕ್ಕೆ ಕಾರಣ ಇಲ್ಲದಿಲ್ಲ. ನಮ್ಮ ರಾಜಕೀಯ ರಂಗ ಮಲಿನ ಗೊಂಡಿದ್ದು ಸತ್ಯ. ಅಪರಾಧಿಗಳು, ಶ್ರೀಮಂತರು ಹಾಗು ವಂಶಾವಳಿಯ ಶಾಪ ಗ್ರಸ್ತ ಕುಡಿಗಳಿಂದ ಒಬ್ಬ ಸಾಮಾನ್ಯ ಯುವಕನಿಗೆ ಪಾಲಿಟಿಕ್ಸ್ ಅಂದರೆ ಒಂದು ಅಲರ್ಜಿ ಸಹಜ. ನಮ್ಮ ದೇಶದಲ್ಲಿ ಎಲ್ಲ ಬಗೆಯ ವೃತ್ತಿಗಳಿಗೆ ಒಂದಲ್ಲ ಒಂದು ಬಗೆಯ  ಅರ್ಹತೆ ಅವಶ್ಯಕ. ಆದರೆ ಪಾಲಿಟಿಕ್ಸ್ ಕ್ಷೇತ್ರಕ್ಕೆ ಮಾತ್ರ ಅದು ಇಲ್ಲವೇ ಇಲ್ಲ. ಕ್ರೈಮ್ ಇದ್ದರು ಸರಿ,ತಲೆ ಇಲ್ಲದಿದ್ದರೂ ಸರಿ, ಹಲ್ಲುದುರಿ ಯಾವ ಪ್ರಶ್ನೆ ಇನ್ನು ಕೇಳಲಾರ ಎನ್ನುವ ಮುದಿತನ ಇದ್ದರು ಸರಿ  ರಾಜಕೀಯ ಕ್ಷೇತ್ರದಲ್ಲಿ ಒಂದು ಸ್ಥಾನ ಇದ್ದೆ ಇದೆ. ಇದಕ್ಕೆ ಮೂಲ ಕಾರಣ ನಮ್ಮ ರಾಜಕೀಯ ವ್ಯವಸ್ತೆ ವ್ಯಕ್ತಿಯ ಅರ್ಹತೆಗಿಂತಲೂ ಅವನ ಜಾತಿ,ಅವನಾವ ರೀತಿಯಲ್ಲಿ ಜನ ಪರವಾಗಿ (ಜನ ಹಿತಕ್ಕಾಗಿ ಅಲ್ಲ) ನಿಲ್ಲ ಬಲ್ಲ, ಅವನಿಗಿರುವ ವಂಶಾವಳಿಯ ಪರಿಚಯ ಹಾಗೂ ಆ ವಂಶದ ಕುರಿತಾಗಿ ಇರುವ ಭಾವನಾತ್ಮಕ ಸಂವೇದನೆಗಳೇ ನಮಗೆ ಮುಖ್ಯ ವಿಷಯವಾಗಿ ಬಿಡುತ್ತಾವೆ. ಅವನ ಯೋಜನೆಗಳ ಕುರಿತಾಗಿಯಾಗಲಿ, ಅವನ ಬುದ್ಧಿವನ್ತಿಕೆಯಾಗಲಿ ನಮಗೆ ಒಂದು ಅವಶ್ಯಕ ಸಂಗತಿಯಾಗಲಿ ನಾವು ಗುರುತಿಸುವುದೇ ಇಲ್ಲ.

ಹೀಗಾಗಿ ರಾಜಕಾರಣಿಗಳು ಅಂದರೆ ಒಂದು ಬಗೆಯ ತಲೆಯಿಲ್ಲದ,ಅಧಿಕಾರ ಇರುವ, ಖಾಖಿಗಳಿಂದ ಸುತ್ತುವರಿದಿರುವ ಒಂದು ಎಡಬಿಡಂಗಿಗಳು  ಎನ್ನುವಂತೆ ಜನ ಮಾತನಾಡುತ್ತಾರೆ. ಅವರ ಖಾದಿ ಬಟ್ಟೆ ಕೇವಲ ಅವರ ಸಮವಸ್ತ್ರ ಎಂದು ಭಾವಿಸಿ ಕೊಳ್ಳುವ ಮನೋಭಾವ ನಮ್ಮದ್ದು. ಆದರೆ ಜೊತೆಗೆ, ಕೆಲವೊಮ್ಮೆ, ನಾವು ಯಾವುದೊ ತಪ್ಪಿ ಮಾಡಿ ಪೋಲಿಸ್ ಗೆ ಸಿಕ್ಕಿ ಬಿದ್ದಾಗ ಧೈರ್ಯದಿಂದ "ಆ ರಾಜಕೀಯ ವ್ಯಕ್ತಿಗೆ ನನ್ನ ಹತ್ತಿರದ ಸಂಬಂಧವಿದೆ" ಎಂದು ಹೇಳಿ ತಪ್ಪಿಸಿ ಕೊಳ್ಳಲು ಬಳಸಲ್ಪಡುವ ವ್ಯಕ್ತಿ ಅನ್ನುವ ಸಾಮಾನ್ಯ ಅಜ್ಞಾನ ನಮಗೆಲ್ಲರಿಗೂ ಇದೆ. ಅದೆಷ್ಟೋ ಬಾರಿ ಕಾನುನಾತ್ಮಕ ವಿಷಯಗಳಲ್ಲಿ ಅನುಪಯುಕ್ತ ರಾಜಕಾರಣಿಗಳ ಪ್ರವೇಶ ನಿಜವಾದ ನ್ಯಾಯ ವ್ಯವಸ್ತೆಯಲ್ಲಿ ಅನ್ಯಾಯ ವಾಗಿಸುತ್ತದೆ.

ಹಾಗಿದ್ರೆ ರಾಜಕೀಯ ಅಂದ್ರೆ ಅಷ್ಟೇನಾ? ಇದು ನನ್ನ ಪ್ರಶ್ನೆ ಅಲ್ಲ... ಈ ದೇಶದ ಪ್ರಶ್ನೆ, ಈ ದೇಶದ ಜನರ ಪ್ರಶ್ನೆ, ಇಲ್ಲ ನನ್ನ ಜೊತೆ ಕುಳಿತ BA ವಿದ್ಯಾರ್ಥಿಯ ಪ್ರಶ್ನೆಯೂ ಹೌದು?

ರಾಜಕೀಯ ಕ್ಷೇತ್ರ ದೇಶದ ಸೇವೆಯ, ಸಮಾಜ ಸೇವೆಯ ಅತ್ಯುನ್ನತ ಕ್ಷೇತ್ರ.ಅದಕ್ಕೆ ಜಾತಿ-ಮತಗಳ ಹೊರತಾಗಿ ಪವಿತ್ರವಾದ ಭಾವದಿಂದ ಶ್ರಮಿಸುವವರಿಗೆ ಅದು ಖಂಡಿತ ಕೈ ಬಿಡಲಾರದು.ಆದರೆ ಮಥಾಂದ,ಅಧಿಕಾರ ದಾಹ ಪಶುಗಳಿಗೆ ಅದು ಖಂಡಿತ  ಒಳ್ಳೆಯ ಕ್ಷೇತ್ರ ಅಲ್ಲ.

ನಾವು ವಿಜ್ಞಾನ ಓದಬಹುದು,ಅರ್ಥಶಾಸ್ತ್ರ ಓದಬಹುದು ಅವುಗಳ ಓದುವಿಕೆಯಿಂದ ದೇಶಕ್ಕೆ, ನಮ್ಮ ಜನಕ್ಕೆ ಅವು ಒಳ್ಳೇದನ್ನೇ ಮಾಡುತ್ತಾವೆ ಎಂದು ಖಂಡಿತ ಸಾಧ್ಯವಿಲ್ಲ. ಒಬ್ಬ ರಾಜಕಾರಣಿ ಮನುಕುಲದ ಏಳಗೆಯನ್ನು ಬಯಸಿ ಎಲ್ಲ ಕ್ಷೇತ್ರದ ಪರಿಣಿತರನ್ನು 'ದೇಶ' ಎಂಬ  ಪರಿಮಿತಿಯಲ್ಲಿ ದುಡಿಯುವಂತೆ ಅದರ ನೇರ ಜವಾಬ್ಧಾರಿಯನ್ನು ಹೊರುವ ಕುದುರೆ. ಅದೆಷ್ಟೋ ಮಂದಿ ವಿಜ್ಞಾನಿಗಳು- ಇಂಜಿನಿಯರ್ ಗಳು ನಮ್ಮಲ್ಲಿ ಮೊಬೈಲ್ ಚಿಪ್ ತಯಾರಿಕ ತಂತ್ರ-ಜ್ಞಾನ  ತಿಳಿದವರಿದ್ದಾರೆ .ಆದರೆ  ಇಂದಿಗೂ  ಭಾರತದಲ್ಲಿ ಸಂಪೂರ್ಣವಾಗಿ ಒಂದು ದೇಶಿಯ ತಂತ್ರಜ್ಞಾನ ವನ್ನು ಬಳಸುವಲ್ಲಿ ವಿಫಲವೇ..! ಇದಕ್ಕೆ ಕಾರಣ ರಾಜಕೀಯ ಇಚ್ಚಾ ಶಕ್ತಿ!  ಹೀಗಾಗಿ ರಾಜಕಾರಣಿ ನಾಳೆಗಳ ಅವಶ್ಯಕತೆಗಳ ಚಿಂತನೆಯನ್ನು ನಡೆಸಬಲ್ಲ ಬುದ್ದಿವಂತನಿರಬೇಕು.

ಎಲ್ಲ ರಾಜಕಾರಣಿಗಳನ್ನು ಕೆಟ್ಟವರು ಎಂದು ಭಾವಿಸಬಾರದು. ಅವರು  ಸಮಾಜದ ಕೋಟಿ-ಕೋಟಿ ಜನರ ಆಶೋತ್ತರಗಳಿಗೆ ಸ್ಪಂದಿಸಬೇಕದಾಗ ಸಾವಿರಾರು ಬಗ್ಗೆಯ ಒತ್ತಡಗಳನ್ನು ಅನುಭವಿಸಲೇ ಬೇಕಾಗಿರುತ್ತದೆ. ಏಕ ವ್ಯಕ್ತಿಯಿಂದ ಸರ್ಕಾರ ನಡೆಸಲು ಖಂಡಿತ ಸಾಧ್ಯವಿಲ್ಲ. ಹೀಗಾಗಿ ಅನಿವಾರ್ಯವಾಗಿ ಕೆಲವು ಒಳ್ಳೆಯ ರಾಜಕಾರಣಿಗಳು  ನಾವೇ ಆರಿಸಿ ಕಳುಹಿಸಿದ "ಎಡಬಿಡಂಗಿ"ಗಳ ಜೊತೆ  ಸಂಹನದಲ್ಲಿ ಇರಲೇ ಬೇಕಾಗುತ್ತದೆ. ಬೇಡವಾದ ವ್ಯಕ್ತಿಯನ್ನು ಯಾವುದೋ ಅಮಿಶಕ್ಕೋ, ಜಾತಿ-ಭಾಷೆ-ಮತಗಳ ಅಂಧತೆಗೋ ಬಲಿಯಾಗಿ ನಾವೇ  ಆರಿಸಿ ಕಳಿಸಿದ ಮೇಲೆ, ಒಳ್ಳೆಯ ರಾಜಕಾರಣಿಗಳು ತಪ್ಪು ಮಾಡುತ್ತಾರೆ ಎಂದು ಬೊಟ್ಟು ಯಾರ  ಕಡೆ ಮಾಡಬೇಕು ?

ಒಟ್ಟಾರೆ ರಾಜಕೀಯ ದೇಶದ ಸರ್ವ ಶ್ರೇಷ್ಠ ಕ್ಷೇತ್ರ. ರಾಜಕಾರಣಿಗಳ ಬಗ್ಗೆ ತಾತ್ಸರವು ಬೇಡ. ಇವತ್ತು ಎಲ್ಲರ ಬಗ್ಗೆ ತಿಳಿದು ಕೊಳ್ಳಿ, ಮುಂದಿನ ಚುನಾವಣೆಯಲ್ಲಿ ಅವರಿಗೆ ಬುದ್ಧಿ ಕಲಿಸಿ... ಅಥವಾ ನಿಮಗೇನಾದ್ರು ಇಷ್ಟ ಇದ್ರೆ ಮುಂದಿನ ಚುನಾವಣೆಗೆ ನಿಲ್ಲಿ!

Friday, June 21, 2013

ಏನೇ ಇದ್ದರೂ ನಮಗೆ ಜನ ಬೇಕು.... !

ಒಂದು ವರ್ಷದ ಹಿಂದೆ, ಮಣಿಪಾಲದಿಂದ ಊರಿಗೆ ಹೋಗಿದ್ದೆ. ಸಂಜೆ ೭ ರ ಸಮಯದಲ್ಲಿ ನನ್ನ ಮನೆಯಲ್ಲಿ ಭಾರಿ ಸಭೆ. ತಮ್ಮ-ಅಮ್ಮನ  ನಡುವಿನ ಈ ಜಗಳಕ್ಕೆ ನಾನು ನ್ಯಾಯಾಧೀಶ. ತಮ್ಮನನ್ನು ಕುರಿತು ನನ್ನ ಬಳಿ ಅಮ್ಮನ ಆರೋಪ," ಅವನು, ಆರು ಗಂಟೆ ಆಗೋದೇ  ತಡ  ಮನೆಯಲ್ಲಿ ಎಲ್ಲ ಮರೆತು ಬೇರೆಯವರ ಮನೆಗೆ ಹೋಗಿ  ಕುಳಿತು ಕೊಳ್ತಾನೆ ... ಸ್ವಲ್ಪ ಅವನಿಗೆ ಸರಿಯಾಗಿ ಹೇಳಿ  ಹೋಗು" ಎಂದರು.  ತಮ್ಮ ಹೋಗುತಿದುದ್ದು ನಮ್ಮ ನೆರೆಯ ಮನೆಗೆ ಅವನಷ್ಟೇ ವಯಸ್ಸಿನ ಹುಡುಗನ ಜೊತೆ ಹರಟೆ ಹೊಡೆಯಲು.

ನಾನು ಸಿಕ್ಕಿದ್ದೇ ಚಾನ್ಸ್ ಎನ್ನುವಂತೆ ಅವನಿಗೆ ಮುಂದೆ ಕುಳ್ಳರಿಸಿ, " ನಿಂಗೆ ಮನೆಯ ಬಗ್ಗೆ  ಸ್ವಲ್ಪನೂ ಜವಾಬ್ಧಾರಿ ಇಲ್ಲ, ಬೇರೆಯವರ ಮನೆಗೆ ಹೋಗಿ ಕುಳಿತುಕೊಳ್ಳುವುದು   ಎಷ್ಟು ಸರಿ...? ನೀನು ಕೆಲಸ ಮಾಡಲ್ಲ ... ಅವರ ಮನೆಯ ಕೆಲಸಕ್ಕೂ ತೊಂದರೆ..!.  ಮನೆಯಲ್ಲಿ ನಿನಗೆ ಬೇಸರ ಆದರೆ ಟಿವಿ  ಇದೆ, ಪುಸ್ತಕ ಇದೆ, ಒಳ್ಳೆಯ ಮೊಬೈಲ ಇದೆ. ಮಾಡಲು ಬೇಕಾದಷ್ಟು ಕೆಲಸ ಇದೆ". ಆತನ ಉತ್ತರ ಅಷ್ಟೇ ಸರಳವಾಗಿತ್ತು: " TV, Mobile ಬೇಕಾದರೆ  ನೀನು ತಕ್ಕೊಂಡು  ಹೋಗು. ಅದೆಲ್ಲ ಎಷ್ಟೊತ್ತು  ನೋಡಲು ಸಾಧ್ಯ?. ನಾನು ಮನುಷ್ಯ....ನಂಗೆ ಮನುಷ್ಯರ ಜೊತೆ ಮಾತನಾಡದ  ಹೊರತು ಸರಿ ಬರದು."  ಮನೆಯ ಜಗಳ ಇಷ್ಟು  ಹೇಳಿಕೆಯೊಂದಿಗೆ ಮುಗಿಯಿತ್ತು. ಇಂಥ ಜಗಳಗಳು ಎಲ್ಲಿ ಪ್ರೀತಿ ಇರತ್ತೋ ಅಲ್ಲಿ ನಡೆದು ಮತ್ತೆ ಸ್ಮೃತಿ ಪಟಲದಿಂದ ದೂರ ಸರಿಯುತ್ತವೆ.

ಈ  ಘಟನೆ ನಡೆದು ಮೂರು-ನಾಲ್ಕು ತಿಂಗಳ ನಂತರ ನಾನು ವೃತ್ತಿ ಅನಿವಾರ್ಯತೆಯಿಂದ ಬೆಂಗಳೂರಿಗೆ  ಬಂದೆ. ಬೆಂಗಳೂರಿನ  ಸದ್ದು ಗದ್ದಲಗಳ  ನಡುವೆ, ವಾಹನ ಸಂದಣಿಯ ನಡುವೆಯ, ಸ್ವಿಚ್ ಒತ್ತಿದ್ದರೆ ಬೇಕಾದುದ್ದೆಲ್ಲ ಸಿಗುವ ವ್ಯವಸ್ತೆಯ ನಡುವೆಯ  ಮಾನವ  ಹೃದಯಗಳ ನಿರವ ಮೌನ ನನ್ನ ಪಾಲಿಕೆ ಕತ್ತು ಹಿಸಿಕಿದಂತೆ ಭಾಸವಾಗುತಿತ್ತು. ಮೊದಲ ಹದನೈದು ದಿನ, ಜೀವನದಲ್ಲೇ ಅತಿ ಮೌನದಿಂದ ಕಳೆದ  ದಿನಗಳು ಅನಿಸಿವೆ. ನನ್ನ ಮಾತುಗಳು ಸೆಕ್ಯೂರಿಟಿ  ಜೊತೆ, ಮ್ಯಾನೇಜರ್  ಜೊತೆ, ಊಟಕ್ಕೆ  ಹೋದಾಗ ವೈಟೆರ್  ಜೊತೆ ಬಿಟ್ಟರೆ  ಇನ್ನೆಲ್ಲಿಯೂ  ನಕ್ಕು-ಸಲುಗೆಯಿಂದ ಮಾತನಾಡುವ ಅವಕಾಶವೇ ಇರಲಿಲ್ಲ. ಬಸ್ಸಿನ ನಲ್ಲಿ ನಮ್ಮ ಜೊತೆ ಕೆಲಸ ಮಾಡುವ ಅದೆಷ್ಟೋ ಮಂದಿ ಇದ್ದರೂ  ಕಂಪನಿಯ  ಗೇಟ್ ಹೊರಗೆ ಬಂದ ಮೇಲೆ ಅವರ್ಯಾರೋ-ನಾನ್ಯಾರೋ..!  ಹೃದಯ ಸಂವೇದನೆ  ಹೇಳಿಕೊಳ್ಳದಿದ್ದರೆ ಹೇಗೆ ಅರ್ಥವಾಗಬೇಕು? ಮಾತನಾಡಿದರೆ  ತಾನೇ ಮತ್ತೊಬ್ಬ ಮನುಷ್ಯನ ಕೋರಿಕೆಗಳು ಅರ್ಥವಾಗುವುದು? earphone ಗಳು ಹಾಗೂ  ಸ್ಮಾರ್ಟ್ ಫೋನ್ ಗಳು  ಇಂಥ ಸಂಭಾಷಣೆಯನ್ನೇ ಕೊಲೆಮಾಡಿದ್ದವು.  ಆದರೂ ಒಂದು ದಿನ, ಧೈರ್ಯ ಮಾಡಿ, ನನ್ನ ಬಾಜು ಕುಳಿತವನನ್ನು, "Where do you work ?" ಎಂದು ಕೇಳುವ ಮೂಲಕ ನಾನೇ ಸಂಭಾಷಣೆಗೆ  ಬೀಜ ಹಾಕೋಣವೆಂದುಕೊಂಡರೆ, ಗಂಭಿರವಾಗಿ  ಕಣ್ಣುಗಳಿಂದ ನನ್ನತ್ತ ನೋಡುತ್ತಾ, ಸಂಭಾಷಣೆಯ ಕೊಲೆಗಾರನಾಗಿದ್ದ  earphone  ಒಂದು ಕಿವಿಯಿಂದ ಹೊರತೆಗೆದು ಒರಟು ಧ್ವನಿಯಲ್ಲಿ, "Why ... !?" ಎಂದ. "Simply asked"... ಎಂದು ನಾನು ಹೇಳುತ್ತಿರುವಾಗಲೇ  ಅವನ earphone  ಮತ್ತೆ ಮೊದಲ ಸ್ಥಾನಕ್ಕೆ ಸೇರಿಕೊಂಡಿತ್ತು. ಕಲಿತು ಸಂತೋಷ ಅನುಭವಿಸಬೇಕೆಂದು  ಬೆಂಗಳೂರಿಗೆ  ಬಂದ  ಇಂಜಿನಿಯರ್ ಗಳು, ಪ್ರತಿನಿತ್ಯ  ಯಾರೊಂದಿಗೂ  ಮಾತನಾಡದೆ, ನಿರ್ಜೀವಿ ವಸ್ತುಗಳ(ಮೊಬೈಲ್ earphone ) ಜೊತೆ  ಹೆಣಗಾಡುತ್ತ,  'ಇವರಿಗೆಲ್ಲ ಸೂತಕದ ಛಾಯೆ ಯಾಕಿದೆ?' ಎನ್ನುವಷ್ಟು ಶ್ಮಶಾನ ಮೌನದಲ್ಲಿರುವುದನ್ನು ಕಂಡಾಗ  ನನಗಂತೂ ನೋವು ಕಣ್ರೀ. ಮಣಿಪಾಲದ ವಿಶಾಲವಾದ ಜಗತ್ತಿನಿಂದ ಬೆಂಗಳೂರು ಎಂಬ ಜೈಲ್ ಗೆ ಬಂದೆ ಅನ್ನುವಂತಿತ್ತು ನನ್ನ ಜೀವನ.

ಆದರೆ, ಇಂಥ ಭಾವನಾತ್ಮಕ ಸಮಯದಲ್ಲೂ ಒಳ್ಳೆಯ roomates  ಸಿಕ್ಕಿದ್ದು  ನನ್ನ ಪುಣ್ಯ. ಯಾರೇ ಇದ್ದರು, ಅವರೆಲ್ಲ ಕೈ ಕೊಟ್ಟು ಇವತ್ತು  ತಮ್ಮ ಊರಿಗೆ ಹೋಗಿ ಬಿಟ್ಟಿದ್ದಾರೆ. ಮನೆಯಲ್ಲಿ ಮೌನ. ಅಡಿಗೆ ಮಾಡಲು  ಮನಸಿಲ್ಲ. ಹೊರಗೆ ಹೋಗಲು ಮಳೆ. ನಿದ್ದೆ ಬಾರದು. ಹಾಸಿಗೆಯಲ್ಲಿ ಬಿದ್ದುಕೊಂಡರೂ ಗೋಡೆ ಗಡಿಯಾರದ  ಟಿಕ್ ಟಿಕ್ ಶಬ್ಧ , ಬಾತ್ ರೂಮ್ ನಲ್ಲಿ ಟಪ್  ಎಂದು ಬೀಳುವ ನೀರಿನ ಹನಿಯ ಶಬ್ಧ,  ಬಾಜು ಮನೆಯ  ಬುರ್  ಬುರ್  ಎಂದು ಗಿರಗಿಟಗೆ  ಹೊಡೆಯುವ ಫ್ಯಾನ್ ಶಬ್ದ, ಕಿಡಕಿಯ ಸಂದಿನಿಂದ  ಹಾಸಿಗೆಗೆ ಸಮೀಪಿಸುತ್ತಿರುವ  ಸ್ಟ್ರೀಟ್  ಲೈಟ್  ಎಲ್ಲವು ಮನಸ್ಸು ಗೊಂದಲಕ್ಕೆ  ಇಡು ಮಾಡಿದೆ.

ಹಾಗೆಂದು ಮನೆಯಲ್ಲಿ  ಏನೆಲ್ಲಾ ಇದೆ....ಇಂಟರ್ನೆಟ್... ಬೇಕಾದ ಹಾಡು, ಸಣ್ಣ ಸೌಂಡ್ ಬೇಕೇ --- earphone, ಬಾಜು ಮನೆಯವರನ್ನು ಏಳಿಸಬೇಕೆ- ಸ್ಪೀಕರ್ , ತಿರುಗಾಡುತ್ತ ಹಾಡು ಕೇಳಬೇಕೆ -bluethooth headset, ಓದಬೇಕೆ ಅದೆಷ್ಟೋ  ಪುಸ್ತಕಗಳು. ತಿನ್ನಲು ಹಸಿವೆಯು ಇಲ್ಲ.  ಹಾಗಿದ್ರೆ ಸಮಸ್ಯೆ ಏನು?

ಅದೇ  ನಿರವ ಮೌನ,ನಗುವಿಲ್ಲದ ಮುಖ, ಹರುಪು ಇಲ್ಲದ ಮನಸು, ಕನಸುಗಳೇ ಇಲ್ಲದ  ನಿದ್ದೆ, ಹಸಿವೆ ಇಲ್ಲದ ಊಟ. ಬಹುಶ ತಮ್ಮ ಹೇಳಿದ್ದ ," ಏನೇ ಇದ್ದರೂ  ನಮಗೆ ಜನ ಬೇಕು.... !?"  ಮನುಷ್ಯನಿಗೆ  ಕೇಳುವ-ಹೇಳುವ ಮನುಷ್ಯ ಮತ್ತೊಬ ಇರಲೇ ಬೇಕು.  ಬದುಕಿನ ಸಂತೋಷ ಬ್ಯಾಂಕ್  ಅಕೌಂಟ್ ನಲ್ಲಿ ಇಲ್ಲ, ನಿಮ್ಮನ್ನು ಅರಿತು ನಿಮ್ಮ ಜೊತೆ ವ್ಯವಹರಿಸುವ ಇನ್ನೊಂದು  ಹೃದಯದಲ್ಲಿದೆ.

Sunday, June 16, 2013

ಲವ್ ಮ್ಯಾರೇಜ್ ಬೆಟರ್ ಆಲ್ವಾ, ಆಂಟಿ ...?

ನಾನು ಹುಬ್ಬಳ್ಳಿಯಲ್ಲಿ ಇಂಜಿನಿರಿಂಗ್ ಓದುವಾಗ, ನಾನುಳಿದುಕೊಂಡ ಓಣಿಯಲ್ಲಿ ಕೆಲವು ೭-೮ ನೇ ತರಗತಿಯಲ್ಲಿ ಓದುತಿದ್ದ ಹುಡುಗರಿದ್ದರು. ನಾನು ದಿನಕ್ಕೊಂದು ಬಗೆಯ ಪ್ರಾಜೆಕ್ಟ್ಸ್ ಮಾಡಿ, led ಗಳಿಂದ ನನ್ನ ರೂಮ್ ಹೊಳೆಯುವಂತೆ ಮಾಡುತಿದ್ದೆ. ಅವರೆಲ್ಲ ಶಾಲೆಯ ಪ್ರಾಜೆಕ್ಟ್ ಹೆಲ್ಪ್ ಎಂದು ನನ್ನ ಜೊತೆ ಬಂದು ಹೋಗುವುದು, ಆಮೇಲೆ ಆ ಸಣ್ಣ ಪರಿಚಯವನ್ನೇ ಗಲ್ಲಿ ಕ್ರಿಕೆಟ್ ಗೆ ಕರೆಯಲು ಕಾರಣವಾಗುತಿತ್ತು. ಆದರೆ, ನಾನು ಕ್ರಿಕೆಟ್ ಪ್ರೇಮಿಯಾಗದೆ ಇದ್ದರಿಂದ ಅವರ ಕ್ರಿಕೆಟ್ ತುರ್ನಾಮೆಂಟ್ ಗಳಿಗೆ ಹೋದದ್ದೇ ಇಲ್ಲ. ಆದರು ಕೆಲವೊಮ್ಮೆ ಕಂಟ್ರೋಲ್ ಸಿಸ್ಟಮ್ ನಂತಹ ಪುಸ್ತಕ ಓದಿದ ಮೇಲೆ ಒಮ್ಮೆ ನನ್ನ ತಲೆ ಹಗುರವಾಗಲಿ ಎಂದು ಅವರ ಕ್ರಿಕೆಟ್ -ಕ್ರೀಡಾಂಗಣಕ್ಕೆ ಹೋಗಿ ಕುಳಿತಿರುತ್ತಿದ್ದೆ.

ಆ ಓಣಿಯಲ್ಲಿ, ಆ ಮಕ್ಕಳ ತಂದೆ ತಾಯಿಯರಿಗೆ ನನ್ನ ಮುಖತಃ ಮಾತಾಡಿ ಪರಿಚಯವಿಲ್ಲದಿದ್ದರೂ ನಾನೊಬ್ಬ "ಸ್ಟಡಿ ಮಾಡುವ prefect model" ತರಹ ಅವರ ಮಕ್ಕಳಿಗೆ ಕ್ರಿಕೆಟ್ ಕ್ರೀಡಾಂಗಣದಿಂದ ಹೊರತರಲು ಬಳಸುತಿದುದ್ದು ನನಗೆ ಗೊತಿತ್ತು. ಅವರಿಗೆ ನಾನೊಬ್ಬ ಓದುವ ಹುಡುಗ, ತಮ್ಮ ಮಕ್ಕಳು ಸೇರಿ ಉಳಿದವರೆಲ್ಲ ಪಡ್ಡೆ ಹುಡುಗರು ಎನ್ನುವಷ್ಟು ನನ್ನ ಮೇಲೆ ಅಭಿಮಾನವಿತ್ತು. ನನ್ನ ಇಂಜಿನಿಯರಿಂಗ್ ಕೊನೆ ತಲುಪುತಿದ್ದಂತೆ, ಹುಡುಗರ ಮನೆಯವರೆಲ್ಲ ಒಂದು ಸಣ್ಣ ನಗು, ನಂತರ "ಅಭ್ಯಾಸ ಆಯ್ತಾ" ಎನ್ನುವ ವಾಕ್ಯಗಳು ನನ್ನ ಮೇಲಿನ ಅಭಿಮಾನಕ್ಕಾಗಿ ಹೊರಬರುತಿದ್ದವು. ಕೆಲವರಂತೂ," ನನ್ನ ಮಗನ ತಲೆ ಮೇಲೆ ಸ್ವಲ್ಪ ಕೈ ಇಡಪ್ಪ ..... ಅವನು ಓದುದೇ ಇಲ್ಲ".... ಎಂದೆಲ್ಲ ಹೇಳಿ ಒಂದು ರೀತಿಯ ಕಸಿವಿಸಿಗೆ ಕಾರಣವಾಗುತಿದುದ್ದುಂಟು.

ಹೀಗಿರುವಾಗ, ಇಂಜಿನಿಯರಿಂಗ್ ಮುಗಿಸಿ, ಕ್ಯಾಂಪಸ್ ನಲ್ಲೆ ಸೆಲೆಕ್ಟ್ ಆಗಿ ನೌಕರಿಗಾಗಿ ಉಡುಪಿಗೆ ಬಂದ ನಾನು, ಸುಮಾರು ನಾಲ್ಕು ವರ್ಷಗಳು ಉರುಳಿದ ಮೇಲೆ ಉತ್ತರ ಕರ್ನಾಟಕದಲ್ಲಿ ನನ್ನ ಸಹೋದ್ಯೋಗಿಯೊಬ್ಬರ ಮದುವೆಗೆ ಹೋಗಿದ್ದೆ. ಮದುವೆ ಮುಗಿಸಿ ಮರಳುವಾಗ ಹುಬ್ಬಳಿಯಲ್ಲಿ ಇಳಿದುಕೊಂಡು  ನಾನು ಉಳಿದುಕೊಂಡಿದ್ದ ಮನೆ-ಮಂದಿಯನ್ನು ಭೇಟಿ ಮಾಡಿ, ನಾಲ್ಕು ಮಾತನಾಡಿ ಬರೋಣ ಎಂದು ಭಾವಿಸಿ ಆ ಓಣಿಯನ್ನು ಪ್ರವೇಶ ಮಾಡಿದ್ದೆ(ಉಡುಪಿಯಲ್ಲಿ ಅಂಥದೊಂದು ಸಂಬಂಧ ಅಸಾಧ್ಯವೇ !). ನಾನು ಮೊದಲು ಓಣಿಗೆ ಪ್ರವೇಶ ಮಾಡುವಾಗ ಹೈ ಸ್ಕೂಲ್ ಓದುತಿದ್ದ ಹುಡುಗರು, ಈಗ ವಿವಿಧ ಡಿಗ್ರಿಯ ಎರಡು-ಮೂರನೇ ವರ್ಷದಲ್ಲಿ ಓದುತಿದ್ದರು. ದೇಹದಲ್ಲಿ ದೊಡ್ಡಗಾತ್ರ , ಮುಖದಲ್ಲಿ ಮೀಸೆ, ಮಾತಿನಲ್ಲಿ ದೊಡ್ಡತನ, ತಿರುಗಾಡಲು ಬೈಕ್-ಸ್ಕೂಟಿ, ಕೈಯಲ್ಲಿ ಸ್ಮಾರ್ಟ್ ಫೋನ್  ಹೀಗೆ  ಹಲವಾರು ಬದಲಾವಣೆಗಳನ್ನು  ಗಮನಿಸಿದ್ದೆ.

    ಹೀಗೆ  ಸಾಗುವಾಗ ಎದುರುಗೊಂಡ ರಾಜೇಂದ್ರ(ರಾಜ್ ), "ಅಣ್ಣ, ಇಷ್ಟುದಿನಗಳ ನಂತರ ಬಂದಿದ್ದಿಯಾ... ನಮ್ಮನೆಲ್ಲ ಮರೆತೇ ಬಿಟ್ಟಿ ಆಲ್ವಾ?....ನಂಬರ್ ಕೊಡು... ನಮ್ಮ ಮನೆಗೆ ಬಾ.... ಹೋಗೋಣ... " ಹೀಗೆ ಅವರ ಮನೆಗೆ ಕರೆದುಕೊಂಡು ಹೋದ. ಅವರ ಮನೆ ಗಲ್ಲಿ ಕ್ರಿಕೆಟ್ ಕ್ರೀಡಾಂಗದ ಒಂದು ಸೆಕ್ಯೂರಿಟಿ  ಆಫೀಸ್ ಇದ್ದಹಾಗೆ ಇದೆ. ನಾನು ಅಲ್ಲಿಗೆ ಇಂಜಿನಿಯರಿಂಗ್  ಓದುತಿದ್ದಾಗ ಆ ಮನೆಯ ಮುಂದೆ, ರಸ್ತೆಯಲ್ಲಿ ಕುಳಿತಾಗ ಅವನ ಮನೆಯ ಸದಸ್ಯರೆಲ್ಲರನ್ನು ನೋಡಿದ್ದೆ. ಒಂದು ಪರಿಚಯ ಮಾತ್ರ, ಆದರೆ ಯಾವತ್ತು ಟೀ ಸಹ ಕುಡಿದಿರಲಿಲ್ಲ.

ರಾಜ್ ನ ಮನೆ ಪ್ರವೇಶ  ಮಾಡಿದ ಮೇಲೆ, ಅವನ ಅಮ್ಮ,ತಮ್ಮ ಎಲ್ಲರು ಎದುರುಗೊಂಡು ಸ್ವಾಗತಿಸಿದರು. ಸಾಕ್ಷಾತ್  ಸರಸ್ವತಿಯ ಪುತ್ರ ತಮ್ಮ ಮನೆಗೆ ಪ್ರವೇಶ ಮಾಡಿದ್ದಾನೆ ಎನ್ನುವ ಮನೋಭಾವ ಅವನ ಅಮ್ಮನದು. ಏನು ಕೆಲಸ ? ಎಲ್ಲಿರುದು? ಪಗಾರು ಎಷ್ಟು ಕೊಡ್ತಾರೆ? ಇಂಜಿನಿಯರಿಂಗ್ ಮುಗಿಸಿ ಎಷ್ಟು ವರ್ಷಗಳು ಮುಗಿದವು ? ಮದುವೆ ಆಯಿತೆ ? ಇನ್ನು ಇಂಜಿನಿಯರಿಂಗ್ ಮಾಡಿದರೆ  ಜಾಬ್  ಸಿಗುವುದೇ ? ಇಂಥ  ಹಲವಾರು ಪ್ರಶ್ನೆಗಳ ಸುರಿಮಳೆಗೆ ಉತ್ತರಿಸುತ್ತ  ಸಾಗಿದೆ. ರಾಜ್  ಇಂಜಿನಿಯರಿಂಗ್  ನ instrumentation stream ನಲ್ಲಿ ಓದುತ್ತಿರುವುದು ತಿಳಿಯಿತು. ೩ ನೆ ವರ್ಷದ ಕೊನೆಯ ಸೆಮಿಸ್ಟರ್ ನ ಕೊನೆಯ ಪರೀಕ್ಷೆ ಬರೆಯಲು  ಸಿದ್ದತೆಯಲ್ಲಿ ತೊಡಗಿದ್ದಾನೆ. On an average 73% ಇನ್ ಇಂಜಿನಿಯರಿಂಗ್.  ಆದರೆ ರಾಜ್ ನ ಮನೆಯಲ್ಲಿ ಒಂದು ನೋವು ಇತ್ತು. ಅವಳ ಅಮ್ಮ ಹೇಳಿದ್ದು  ಹೀಗೆ:
"ನೀವು ಇಲ್ಲಿಂದ ನಡೆದೇ ಕಾಲೇಜ್ ಗೆ ಹೋಗ್ತಾ ಇದ್ರಿ, ಆದರೆ ಇವನು PUC ಮುಗಿದ ಮೇಲೆ  ಬೈಕ್  ಬೇಕು ಅಂತ ಹಠ  ಹಿಡಿದ. ಬೈಕ್ ಕೊಟ್ಟೆವು. ಆದರೆ ಇವಾಗ  ಓದುದು ಬಿಟ್ಟು ಲವ್-ಗಿವ್  ಅಂತ ಹುಡುಗಿ ಹಿಂದೆ ಬಿದ್ದಿದ್ದಾನೆ. ಕಾಲೇಜ್ ಬಿಟ್ಟ ಮೇಲೆ ನೇರವಾಗಿ ನೀವೆಲ್ಲ ಮನೆಗೆ ಬರ್ತಿದ್ರಿ ಆಲ್ವಾ ? ಅವನು ಏಳು-ಗಂಟೆ ತನಕ ಅವಳ ಸುತ್ತಾಡಿ ಮನೆಗೆ ಬರ್ತಾನೆ... ಅವನು ಹೇಗೆ ಇಂಜಿನಿಯರಿಂಗ್ ಮುಗಿಸುತ್ತಾನೋ -ಇಲ್ಲವೋ ಅಂತ ನನಗೆ ನೋವು ಇದೆ... ಮಕ್ಕಳು ತಮ್ಮ ಕಾಲ ಮೇಲೆ ನಿಂತ್ಕೊಳ್ಳಿ ಅಂತ ತಾನೇ ಪ್ರತಿಯೊಬ್ಬ ತಂದೆ-ತಾಯಿ ಯೋಚಿಸಿವುದು ?".

ರಾಜ್ ಪ್ರೀತಿ ಪ್ರೇಮದ ಕತೆ ನನಗೆ ಗೊತ್ತಿರಲಿಲ್ಲ.ಅವನ ಅಮ್ಮನಿಗೆ  ನಾನು "ಇಂಜಿನಿಯರಿಂಗ್ ಹುಡುಗರು ಪ್ರೀತಿ -ಪ್ರೇಮ ಮಾಡಬಾರದು" ಎಂದು ನನ್ನ ಬಾಯಿಂದ ಮಗನ ಕಿವಿಯ ಮೇಲೆ ತಮ್ಮ ಕಣ್ಣ ಮುಂದೆ ಮಾತು ಹೊರಬಿಳಲಿ ಎಂದು ಆಕಾಂಕ್ಷೆ ಇತ್ತು. ಆದರೆ ಪ್ರೀತಿ ಪ್ರೇಮ ವಿಷಯದಲ್ಲಿ ನನ್ನ ನಂಬಿಕೆ ಇಂಜಿನಿಯರಿಂಗ್ ದಿನಗಳಿಗಿಂತ ತುಂಬಾ ಬದಲಾಗಿತ್ತು.

ಮನುಷ್ಯನ ಬದುಕಿನ  ಉದ್ದೇಶ ಕೇವಲ ಹಣ ಸಂಪಾದನೆಯಲ್ಲ. ಹೆಸರು ಹೆಸರು ಗಳಿಸಬೇಕು; ತನ್ನ ಸಾಧನೆ ಪ್ರಪಂಚದಲ್ಲೆಡೆ  ಪ್ರತಿಧ್ವನಿಸಬೇಕು  ಎಂದು ಜೀವನದ ಮೂಲಭೂತ , ಸಣ್ಣ ಆಸೆಗಳೆನಿಸಿದ  ಪ್ರೀತಿ-ಪ್ರೇಮ ತಪ್ಪೆಂದು ಭಾವಿಸುವುದು ಸರಿಯಲ್ಲವೆನಿಸಿತು. ಸಮಾಜದಲ್ಲಿ ಮದುವೆಯಾದ ಮೇಲೆ ಎಲ್ಲವು ಇರುತ್ತೆ, ಅದಕ್ಕೆಲ್ಲ ಇವಗಲೇ ಯಾಕೆ ಎಂದು ಸಮಜಾಯಿಸಿ ತಮ್ಮ ವಾದವನ್ನೇ ಸರಿಯನ್ನುವ  ಸಂಪ್ರದಾಯಸ್ತರನ್ನು  ನೋಡಿದ್ದೇನೆ. ಆದರೆ  ಪ್ರೀತಿ ಪ್ರಪಂಚದ ಯಾವ ಗಣಿತ, ಭೌತಿಕ ಸೂತ್ರ ,ಕಾನೂನಿನ ಹೆಸರಿನಲ್ಲಿ ಬಂಧಿಸಲಾಗದ ಒಂದು ಭಾವನೆ . ಅದು ಅದರ ಹುಟ್ಟು ಸಾವು ಹೇಗೆ ಎಂದು ಹೇಳಿದವರು ಯಾರು ಇಲ್ಲ . ಅಂತ  ಪವಿತ್ರವಾದ ಪ್ರೀತಿಗೆ ಧರ್ಮಗಳು ಜಾತಿಗಳು ಗ್ರಹ ನಕ್ಷತ್ರಗಳ ತೊಡಕು ಇಲ್ಲ. ಹುಟ್ಟಿದ ಪ್ರೀತಿಗೆ ಒಳ್ಳೆಯ ಭವಿಷ್ಯ ನೀಡಬೇಕಾದುದ್ದು ತಂದೆ-ತಾಯಿಯರ ಕರ್ತವ್ಯ  ಹೊರತು ಹೂವಿನ ಮೊಗ್ಗನ್ನು ಕಿತ್ತು ಹಾಕಿದ ಹಾಗೆ ಮಗನ  ಪ್ರೀತಿ  ಕಿತ್ತು ಹಾಕಬೇಕೆಂದು  ರಾಜನ ಅಮ್ಮ ಬಯಸಿದ್ದು ಸರಿಯನಿಸಲಿಲ್ಲ.

"ಇರಲಿ ಬಿಡಿ ಆಂಟಿ, ಅವನು ಸ್ಟಡಿ ಅಂತು ಚೆನ್ನಾಗಿ ಮಾಡ್ತಾ ಇದಾನಲ್ವಾ ?  ಇನ್ನು ಒಂದು ವರ್ಷದ ಸ್ಟಡಿ ಉಳಿದಿದೆ, ಜಾಬ್  ಸಿಕ್ಕಿದ ಮೇಲೆ ಮದುವೆ ಆಗ್ತಾನೆ ಅಂದ್ರೆ ಮಾಡಿಸಿದರೆ ಆಯ್ತು... ! ಲವ್ ಮ್ಯಾರೇಜ್ ಬೆಟರ್ ಆಲ್ವಾ, ಆಂಟಿ ...? ಜಾತಿ-ಜಾತಕ  ಎಂದು ಊರೂರು  ಸುತ್ತ ಬೇಕಿಲ್ಲ. ವರದಕ್ಷಿಣೆ-ವಧು ದಕ್ಷಿಣೆ ಎಂತೆಲ್ಲ ತಲೆ ಕೆಡಿಸುದೇ ಬೇಕಾಗಿಲ್ಲ. ಲವ್ ಮ್ಯಾರೇಜ್ ಗೆ ಸಪೋರ್ಟ್ ಮಾಡ್ಬೇಕು ಆಂಟಿ...! ".

ಆಂಟಿಯ ಮುಖ,ಅರಳಿ ನಿಂತ ಕಮಲದ ಹೂವುನ್ನು ಕಾದ ಬಂಡೆಯ ಮೇಲೆ ಹಾಕಿದ ಹಾಗೆ  ಬಾಡಿ ಬಸವಳಿತು. ನನ್ನ ಮಾತು ಅವರಿಗೆ ಸರಿ ಬರಲಿಲ್ಲ ಎಂದು ಹೇಳಲು ಬಹಳ ಸಮಯ ಬೇಕಾಗಿರಲಿಲ್ಲ. ಅಷ್ಟೊತ್ತಿಗೆ ಟೀ ಮುಗಿದಿತ್ತು. ನನಗೆ ತಡವಾಗುತ್ತೆ ಎನ್ನುವ ನೆಪದಿಂದ, ಏನಾದ್ರೂ  ಬಿಸಿ ನೀರು ಸೋಕಿಸಿಯಾರು  ಎನ್ನುವ ಭಯದಿಂದಲೂ ಕಾಲುಕಿತ್ತು  ಬಿಟ್ಟೆ. ರಾಜ, ಅಮ್ಮನ ಮುಂದೆ ಮೌನವಾಗಿದ್ದರು, ಮನೆಯ ಹೊರಗೆ ನನ್ನ ಕಳುಹಿಸಲು ಹೊರಬಂದ. "ಅಣ್ಣ, ನಿನಗೆ ಫೋನ್ ನಲ್ಲಿ ಹುಡುಗಿ ವಿಷಯ  ಹೇಳ್ತೇನೆ. ಅಮ್ಮನ ಬೇಗ ಬೇಸರ ಮಾಡಬೇಡ" ಎಂದು ಹೇಳಿ ಹೋದ.

ನಾನು ಹೋಗಬೇಕಾದ  ಮನೆಗೆ ಹೋಗಿ-ಮಾತನಾಡಿಸಿ, ರಾತ್ರಿ 8 ಗಂಟೆಗೆ ಬಸ್ಸು ಹತ್ತಿ ಕುಳಿತು ರಾಜ ಗೆ ಫೋನ್ ಮಾಡಿದೆ. ಅವನು ಮನೆಯಯಿಂದ ಹೊರಬಂದು  ಕಾಲ್  ಮಾಡಿದ.

 ಹುಡುಗಿಯ ವಿಷಯ ಹೇಳಿದ. ಅಮ್ಮನ  ಪ್ರೀತಿಗೆ ಅಡ್ಡಿ ಬಂದಿರುವುದು ಅವನಿಗೆ ನೋವಿನ ವಿಷಯ. ನಾನು ಮನೆಯಿಂದ ಹೊರಬಿದ್ದ ಮೇಲೆ ಅವನ ಅಮ್ಮ  ಹೇಳಿದ ವಾಕ್ಯ, " ಮೊದಲು ಚೆನ್ನಾಗಿ ಓದುತಿದ್ದ. ಸ್ವಲ್ಪ ಹಣ ಬಂದಮೇಲೆ  ಕೆಟ್ಟು ಹೋದ  ಅನ್ಸ್ತಾ...ಲವ್ ಗೆ ಸಪೋರ್ಟ್ ಬೇರೆ... ಅಂತವನ ಜೊತೆ ಇನ್ನು ಸಂಬಂಧ ಬೇಡ" ಎಂದು ತನಗೆ  ತಾಕಿತು  ಮಾಡಿದರೆಂದು  ರಾಜ  ಹೇಳಿಕೊಂಡ.

"ರಾಜ , ನೋಡು..! ನಿನ್ನ ಅಮ್ಮ ಏನು ಹೇಳಿದರು ನನಗಂತೂ ಭಯವಿಲ್ಲ;ಬೇಸರವಿಲ್ಲ. ಪ್ರೀತಿಯ ಕುರಿತಾಗಿ ಪ್ರಾಕ್ಟಿಕಲ್ ಅನುಭವ ನನಗಿಲ್ಲ. ಆದರೆ ಪ್ರೀತಿಯ ಕತೆಗೆ ಸುಧಾ ಮೂರ್ತಿ ಅಂಥವರ ಕತೆ ಓದಿದ್ದೇನೆ. ಅದರಲ್ಲೂ ನನಗೆ ಬಹಳ ಇಷ್ಟವಾದ ಮಹಾಭಾರತದಲ್ಲಿ  ಎಲ್ಲವು ಪ್ರೇಮ ವಿವಾಹಗಳೇ..!. ಅಂದಿನ ಆ  ಹಳೆಯ ಗ್ರಂಥಗಳನ್ನೇ  ಇಂದಿಗೂ ನಮ್ಮ ಧರ್ಮದ ಮೂಲವೆಂದು  ಭಾವಿಸುವಾಗ ಪ್ರೀತಿಯ ವಿಷಯದಲ್ಲಿ ಆ ಪುಸ್ತಕಗಳನ್ನು ಗೌರವಿಸಬಾರದು ಎಂದರೆ ಹೇಗೆ ಆಲ್ವಾ?. ಇನ್ನು ನೀನು ಸಣ್ಣವನಿದ್ದಿಯಾ .  ಯಾವುದೇ ಸಂದರ್ಭದಲ್ಲೂ ತಪ್ಪು ನಿರ್ಣಯ ಮಾಡಬೇಡ. ಏನೇ ಅದ್ರು ನಿನ್ನ ಇಂಜಿನಿಯರಿಂಗ್ ಮುಗಿಸಿ, ಜಾಬ್ ಸಿಗುವುದು  ಬಹಳ ಮುಖ್ಯ; ಅಲ್ಲಿ ತನಕ ಪ್ರೀತಿಯ ಬಗ್ಗೆ, ಅಮ್ಮನ ಬಗ್ಗೆ ಬಹಳ ತಲೆ ಕೆಡಿಸಿಕೊ ಬೇಡ. ಜಾಬ್ ಸಿಕ್ಕಿದ ಮೇಲೆ, ನೀವಿಬ್ಬರು ಇಷ್ಟ ಪಡ್ತೀರಾ ಅನ್ನುದಾದರೆ, ಅಮ್ಮನ ವಿರೋಧದ ನಡುವೆಯೂ ಮದುವೆ ಸಾಧ್ಯ. ಇವಾಗ ಮಾತ್ರ ಚೆನಾಗಿ ಓದು."

ಅವನಿಗೆ ಇವಾಗ ಜಾಬ್  ಸಿಕ್ಕಿದೆ . ಮುಂದಿನ ವರ್ಷ ಮದುವೆ. ನಾನು ಮದುವೆಗೆ  ಹೋದ್ರೆ  ಆ ಆಂಟಿ ನನ್ನ  ಬಿಡ್ತಾರಾ?