Wednesday, January 15, 2014

ರೈತ..!

'ದೇಶದ ಬೆನ್ನೆಲುಬು ರೈತ' ಎನ್ನುವ ವಾಕ್ಯ ಶಾಲೆಯಲ್ಲಿ ಕಲಿತ ಎಲ್ಲರಿಗು ಗೊತ್ತಿರುವ ಸತ್ಯ. ಆತ ಅನ್ನದಾತ;ನೇಗಿಲ ಯೋಗಿ ಅಂತೆಲ್ಲ ಕರೆದು ಗೌರವ ತೋರಿಸುವುದು ನಿಮಗೂ ತಿಳಿದಿರುವ ವಿಚಾರವೇ!  ಆದರೆ ನಾವು ಯಾರು ರೈತರಾಗಲು ಬಯಸುತ್ತಿಲ್ಲ; ಅಥವಾ ನಮ್ಮ ಮಕ್ಕಳು ಕೂಡ ರೈತರಾಗಲು ನಾವು ಬಿಡುತ್ತಿಲ್ಲ. ಅದೇನಿದ್ದರು ರೈತರು  ಎಂಬ ಹಾಡು ಕಾರ್ಯಕ್ರಮದಲ್ಲಿ ಕೇಳಿ, ಒಂದಿಷ್ಟು ರೈತನ ಇಮೇಜ್ ಗಳು ಫೇಸ್ಬುಕ್ ನಲ್ಲಿ ಹಾಕುವುದಕ್ಕೆ ಮಾತ್ರ ಸೀಮಿತವಾಗುತ್ತಿದೆ ನಮ್ಮ ಬದುಕು.

ರೈತರಾಗುತ್ತಿರುವವರು  ಯಾರು ? ಸರ್ಕಾರದ ಎಲ್ಲ ಶೈಕ್ಷಣಿಕ ಯೋಜನೆಗಳ ನಡುವೆಯೂ  ಶಾಲೆಯಿಂದ ತಪ್ಪಿಸಿಸಿಕೊಂಡು, ನಾಲ್ಕು ಗೋಡೆಗಳ ಮಧ್ಯ ತಮ್ಮ ೧೬ ವರ್ಷ ಕಳೆಯದೆ, ಹುಟ್ಟಿದಾರಭ್ಯ ಸಮಾಜದ ಬದುಕಿನ ಸ್ಥಿತಿಗೆ ತಾವೇ ನುಗ್ಗಿಸಿಕೊಂಡ ಅಥವಾ ತಂದೆ-ತಾಯಿಯರ ಅಜ್ಞಾನ, ಬಡತನ ಮುಂತಾದ ಕಾರಣಗಳಿಂದಾಗಿ ಶಾಲೆಯಿಂದ ಹೊರದಬ್ಬಿದ್ದ ಪರಿಣಾಮವಾಗಿ ಮಕ್ಕಳು ರೈತರಾಗುವುದಕ್ಕೆ ಇರುವ ದಾರಿ. ಅದರ ಹೊರತಾಗಿ ರೈತರನ್ನಾಗಿಸಲು ದಾರಿಗಳೇ ಇಲ್ಲ. ಕೃಷಿ ವಿದ್ಯಾನಿಲಯಗಳಿವೆ ಎಂದು ನೀವು ಹೇಳಬಹುದು...! ಆದರೆ ಕೃಷಿ ತರಬೇತಿ ಹೊಂದಿದವರಾರು ಮಣ್ಣಿನೊಂದಿಗೆ ಸರಸವಾಡುತ್ತಿಲ್ಲ; ಬದಲಾಗಿ ಯಾವುದೊ ಕಚೇರಿಯ ಫ್ಯಾನ್ ಗಳಿಗೆ ತಲೆ ಹಿಡಿದು ತುಕಡಿಸುತ್ತಿದ್ದಾರೆ.

ಕೃಷಿಯನ್ನು ಒಂದು ವೃತ್ತಿಯನ್ನು ಮಾಡಿಕೊಳ್ಳಲು ಇಂದಿನ ಓದಿದ ಜನಾಂಗಕ್ಕೆ ಸಾಧ್ಯವೇ ಇಲ್ಲ. ಅದಕ್ಕೆ ಕಾರಣ ಕೃಷಿ ಒಂದು non -organised  sector  ಮಾತ್ರವಲ್ಲ, ಇದಕ್ಕೆ ಸರಕಾರದ ಕೃಪೆಯು ಇಲ್ಲ. ನಿಸರ್ಗದ ಜೊತೆಯಲ್ಲಿ ಹೋರಾಡಿ ತನ್ನ ಬದುಕು-ಸಾವು ನಿರ್ಧರಿಸಬೇಕಾದ ಪೂರ್ಣ ಜವಾಬ್ಧಾರಿ ರೈತನ ಮೇಲಿದೆ.  ಉದಾಹರಣೆಗೆ, ಯಾವುದೇ ಒಂದು ನೌಕರಿ ತೆಗೆದುಕೊಳ್ಳಿ...ಯಾವ ಬೆಲೆ ಏರಿಕೆ ಸಮ್ಭವಿಸುತ್ತದೊ, ಎಲ್ಲರು ಸೇರಿ ತಮ್ಮ ಸಂಬಳದ ಬೇಡಿಕೆಯನ್ನು ಮುಂದಿಟ್ಟು ಸರ್ಕಾರದಿಂದಲೋ, ಸಂಸ್ಥೆಯಿಂದಲೋ  ಲಾಭ ಮಾಡಿಕೊಳ್ಳುತ್ತಾರೆ. ಯಾವುದೇ ಬಿಸಿನೆಸ್ ದಲ್ಲಿರುವರು ಒಂದು ಕಡೆ ನಷ್ಟವಾದರೆ ಇನ್ನೊಂದು ಕಡೆ ಲಾಭ ಮಾಡಿ ಕೊಳ್ಳುತ್ತಾರೆ; ಅಥವಾ ತಮ್ಮ ನಷ್ಟವನ್ನು ಗ್ರಹಕಾರರ ಮೇಲೆ ಹೊರಿಸಿ ಬಿಡುತ್ತಾರೆ. ಆದರೆ ರೈತರು?

ರೈತರು ತಾವು ಏನು ಬೆಳೆಯುತ್ತಾರೋ ಅಷ್ಟನ್ನೇ ಮಾರಿ ಜೀವನ ಮಾಡಬೇಕು. ಅವರು ಬೆಳೆದ ಬೆಳೆಗೆ ಸರ್ಕಾರ ಬೆಲೆ ನಿಗದಿ ಮಾಡುತ್ತದೆ. ಒಂದೊಮ್ಮೆ ಬೆಲೆಯೆನಾದರು ಏರಿಕೆಯಾಗುತ್ತದೆ ಅಂತಾದರೆ ವಿದೇಶದಿಂದ ಕೃಷಿ ವಸ್ತುಗಳನ್ನು ಆಮದು ಮಾಡಿ ರೈತರನ್ನು ಮಣಿಸುತ್ತದೆ. ಹೀಗಾಗಿ ರೈತರ ಬೆಳೆದ ಬೆಳೆಯ ಬೆಲೆ ಯಾವುತ್ತು ಒಂದೇ ಲೆವೆಲ್ ನಲ್ಲಿ ಇಡಲಾಗುತ್ತದೆ. ಇದನ್ನು ಸರಿ ಹೊಂದಿಸಲು ರೈತರು ಭೂತಾಯಿಯ ಜೊತೆ ಗುದ್ದಾಡಬೇಕು; ಮಳೆಯನ್ನೂ ನಂಬಿ ಬದುಕ ಬೇಕು. ಜೊತೆಗೆ ಭೂತಾಯಿಯ ಜೊತೆಗಿನ ಗುದ್ದಾಟವನ್ನು ಹೆಚ್ಚು ರೋಷ ಭಾರಿತವನಾಗಿಸಿದ್ದು ಯಾರು -ಇದೆ ಕಲಿತ ವರ್ಗ ಹಾಗು ಸರ್ಕಾರಗಳು. ಕಲಿತ ವರ್ಗದ ಆಸೆಗಳಿಗಾಗಿ ವಾಹನ, ac ರೂಂ, ಪ್ಲಾಸ್ಟಿಕ್, ಪೆಟ್ರೋಲ್  ಹೆಚ್ಚು ಬಳಕೆಯಾಗಿ ಮಾಲಿನ್ಯದಿಂದ ಭೂತಾಯಿ ಬಸವಳಿದಾಗ, ನೇರ ಪರಿಣಾಮವಾಗುವುದು ರೈತರ ಮೇಲೆ. ಅಷ್ಟೇ ಅಲ್ಲದೆ ಆಗಾಗ ಸರ್ಕಾರಗಳು ತರುವ ಬೃಹತ್ ಯೋಜನೆಗಳು-ಡಾಮ್ಸ್, ವಿದ್ಯುತ ಯೋಜನೆಗಳು ರೈತರನ್ನು ಒಕ್ಕಲೆಬ್ಬಿಸುತ್ತವೆ.
ಇದರ ಪ್ರಾಕೃತಿಕ ಪರಿಣಾಮಗಳನ್ನು ರೈತನೇ ಮಾತ್ರ ಹೊರಬೇಕು.

ರೈತರಾಗುವುದೇ ಕಲಿಯದಿರುವುದರಿಂದ. ಹೀಗಾಗಿ ರೈತವರ್ಗ ಯಾವತ್ತು ಸರ್ಕಾರದ ವಿರುದ್ಧ ತಲೆ ಎತ್ತಿ ನಿಲ್ಲಲಾರದು. ಹಾಗೆಂದು ಅನಾಯಾಸವಾಗಿ ಸಾಯಲು ಬಿಡಬಾರದು ಎಂದು ಒಂದಿಷ್ಟು ಸಾಲ, ಅಕ್ಕಿ, ಕೊಟ್ಟು ತನ್ನ ಕೈ ತೊಳೆದು ಕೊಳ್ಳುತ್ತದೆ. ರೈತರ ಬದುಕು ಈ   ರೀತಿ  subsidized  ಆಗಿರುವುದರಿಂದಲೇ, ನಾವೆಲ್ಲ AC ರೂಂ ನಲ್ಲಿ ಕುಳಿತು ಸ್ವೀಟ್ ಕಾರ್ನ್ ಸೂಪ್ ಮೇಲ್ಳುವುದಕ್ಕೆ ಸಾಧ್ಯವಾಗಿರುವುದು. ಒಂದೊಮ್ಮೆ, ಹೀಗೆ subsidized  ಆಗಲು ರೈತರೇ ಇಲ್ಲದಿದ್ದರೆ, ಅರ್ಥಾತ್ ಎಲ್ಲರು ಶಿಕ್ಷಣ ಪಡೆದ ಪಂಡಿತರೆ ಆದರೆ,ದೇಶದ ಆಹಾರದ ಸ್ಥಿತಿಗತಿ ಹೇಗಿರಬಹುದು ಎಂದು ನೀವೇ ಊಹಿಸಿ ? ಅಂದ ಮೇಲೆ ಈಗಿರುವ ಶಿಕ್ಷಣ ಪದ್ಧತಿ ಹಾಗೂ ರೈತರನ್ನು non -organised  sector ನಲ್ಲಿ ಉಳಿಸಿಕೊಳ್ಳುವುದು ದೇಶದ ಭವಿಷ್ಯಕ್ಕೆ ಒಳ್ಳೆಯದಾಗುವುದಿಲ್ಲ. ಎಲ್ಲರು ಯೋಚಿಸುವುದು ತಾನು ರೈತನಾಗದಿದ್ದರೆ ಸಾಕೆಂದು ಮಾತ್ರ, ಹೀಗಾಗಿ ಇಂತದೊಂದು ಸಮಸ್ಯೆ ಅರಿವಿಗೆ ಬರುವುದು ಕಷ್ಟ.

ಕೃಷಿ ಕ್ಷೇತ್ರಕ್ಕೆ ಭವ್ಯವಾದ ಭವಿಷ್ಯ ಇರಬೇಕು ಅನ್ನುವುದಾದರೆ-ಕೃಷಿಯ ಬಗ್ಗೆ ತಾತ್ಸಾರ ಮನೋಭಾವ ದೂರವಾಗಬೇಕು. ವಿಜ್ಞಾನ ಕ್ರಾಂತಿಯಿಂದ ಸ್ವಿಚ್ ಒತ್ತಿದರೆ ಕಾಫಿ ತಯಾರಿಸಬಹುದು, ಆದರೆ ಕಾಫಿ ಗಿಡ ರೈತನೇ ಬೆಳೆಯ ಬೇಕು ಅನ್ನುವ ಪರಿಕಲ್ಪನೆ ನಮ್ಮ ಶಿಕ್ಷಣ ಕ್ಷೆತ್ರದಲಿರುವರಿಗೆ ಇರಬೇಕು. ಕೇವಲ ಡಿಗ್ರಿ ಗಳ ಉತ್ಪಾದನ ಕೇಂದ್ರಗಳಾಗಿರುವ ಶಾಲೆಗಳಿಂದ ಕೃಷಿಗೆ ಭವಿಷ್ಯವಿಲ್ಲ.

ಇದುವರೆಗೆ, ಯಾವ ಶಾಲೆಯು, ತನ್ನ ಡ್ರಾಪ್ ಔಟ್ ಅಥಾವ ಪಾಸು ಆದ, ಒಬ್ಬ ರೈತನನ್ನು ಸನ್ಮಾನಿಸಿರುವುದನ್ನು ನಾನು ಓದಿಯೇ ಇಲ್ಲ..! 

No comments:

Post a Comment