Saturday, January 18, 2014

ಪ್ರೇಮ ಪತ್ರ...!

ಪ್ರೇಮ ಪತ್ರ ಇವತ್ತು ಅಪ್ರಸ್ತುತ ವಸ್ತು. ಬಹುಶ ನನ್ನ ಜಮಾನದ ಯಾವ ಹುಡುಗ-ಹುಡುಗಿ ಪ್ರೀತಿಯನ್ನು  ಪತ್ರದ ಮೂಲಕ ನಿವೇದನೆ ಮಾಡಿರುತ್ತಾರೆ ಅನಿಸುವುದೇ ಇಲ್ಲ. ಆದರೆ ನಾನು ಪ್ರೇಮ ಪತ್ರ ಬರೆದಿದ್ದೇನೆ... ಒಂದಲ್ಲ, ಎರಡಲ್ಲ..ಸುಮಾರು ಐದಕ್ಕು ಹೆಚ್ಚು..! ಆದರೆ ನಾನು ಪ್ರೇಮ ಪತ್ರ ಬರೆದಾಗ ನನ್ನ ವಯಸ್ಸು ಕೇವಲ ೧೪ ಇರಬಹುದು... ಆದರೆ ಇವತ್ತು, ೨೮ರ ಹರೆಯಕ್ಕೆ ಕಾಲಿಡುತ್ತಿರುವಾಗ ನಾನೊಂದು ಪ್ರೇಮ ಪತ್ರವನ್ನು ಬರೆಯಲು    ಸಾಧ್ಯವಿಲ್ಲದ ಕಾಲದಲ್ಲಿ ನಾನು ಬದುಕುತ್ತಿದ್ದೇನೆ ಅಂದುಕೊಂಡಾಗ ನನಗೆ ನೋವು ಇದೆ..! ಈ ಬದಲಾವಣೆ ಒಪ್ಪಿಕೊಳ್ಳುವುದು ನನಗೆ ಸಾಧ್ಯವಾಗುತ್ತಿಲ್ಲ.

ನಾನು ಹಳ್ಳಿಯ ಹುಡುಗ. ಹಳ್ಳಿಯಲ್ಲಿ ಕಲಿತ್ತುರವರ ಸಂಖ್ಯೆ  ತುಂಬಾ ಕಡಿಮೆ. ಬಡತನ ಅಥವಾ ಇನ್ನಾವುದೋ ಕಾರಣದಿಂದ ಓದುವ ಮಕ್ಕಳ ಸಂಖ್ಯೆ ಕಡಿಮೆ ಮಾತ್ರವಲ್ಲ; ಶಿಕ್ಷಣದ ಗುಣ ಮಟ್ಟ ತುಂಬಾ ಕಡಿಮೆಯೂ ಆಗಿರುತ್ತದೆ. ಆದರೆ ನಾನು ಯಕ್ಷಗಾನದ ಪ್ರಭಾವದಿಂದಗಾಗಿ, ರಾಮಾಯಣ-ಮಹಾಭಾರತ  ಕತೆ ಓದಲು ಉತ್ಸುನಾಗಿ ಬಿಟ್ಟಿದ್ದೆ.ಯಾವುದೇ ವ್ಯಕ್ತಿ ಹೇಳಿದ ಶಬ್ಧಗಳನ್ನು ವಾಕ್ಯಗಳಾಗಿ ಬರೆಯುವ ಸಾಮರ್ಥ್ಯ ನನಗಿತ್ತು ಆ ದಿನಗಳಲ್ಲಿ...(ಹಳ್ಳಿಯಲ್ಲಿ ಇದು ಅದ್ಭುತ ..! ಆ ಕಾಲದಲ್ಲಿ).  ಹೀಗಾಗಿ ಹಳ್ಳಿ ಮಂದಿಯ ತಲೆಯಲ್ಲಿ ನಾನೊಬ್ಬ ಓದುವ-ಬುದ್ದಿವಂತ ಹುಡುಗ.

ಪ್ರೀತಿ ಪ್ರೇಮಗಳೇನು ಕೇವಲ ಕಾಲೇಜು ಮೆಟ್ಟಿಲು ಹತ್ತಿ, ಆಂಗ್ಲ ಭಾಷೆಯಲ್ಲಿ, "I LOVE YOU" ಅನ್ನಲು ಬರುವವರಿಗೆ ಮಾತ್ರ ಅಂದು ಕೊಂಡಿದ್ದಿರಾ? ಖಂಡಿತ ಇಲ್ಲ. ಮನುಷ್ಯನಾಗಿ ಹುಟ್ಟಿದ, ಶಿಕ್ಷಣ ಪಡೆಯದ ಹಳ್ಳಿಯ ಮುಗ್ದ ಜನರಲ್ಲೂ ಪ್ರೀತಿಯ ಕುರಿತಾಗಿ ನವಿರಾದ ಭಾವನೆಗಳಿರುತ್ತವೆ. ಆದರೆ ಮೊಬೈಲ್, ಲ್ಯಾಂಡ್ ಲೈನ್ ಗಳೇ ಇಲ್ಲದ ಕಾಲದಲ್ಲಿ ನಂಬಿಕಸ್ತ ವ್ಯಕ್ತಿಯ ಮೂಲಕ ಪ್ರೀತಿಯ ನಿವೇದನೆ ಹೇಳಿಕೊಳ್ಳುವುದು ಇಲ್ಲವೇ ಪ್ರೇಮ ಪತ್ರ ಮಾತ್ರ ದಾರಿ. ಆದರೆ ವ್ಯಕ್ತಿಯ ಮೂಲಕ ಇಷ್ಟ-ಕಷ್ಟಗಳನ್ನೂ ಹೇಳಿ ಕಳಿಹಿಸಬಹುದೇ ಹೊರತು ಭಾವನೆಗಳನ್ನು ತೆರೆದಿಡಲು ಸಾಧ್ಯವಿಲ್ಲ. ಹೀಗಾಗಿ ಪ್ರೇಮ ಪತ್ರಗಳೇ ಕೊನೆಯ ದಾರಿ. ಆದರೆ ದೂರದ ಹೃದಯದ ಬಾಗಿಲು ಬಡಿಯಲು ಅಕ್ಷರ ಬೇಕೇ ಬೇಕು!

ಹೀಗಾಗಿ, ನಾನು ೫-೬-೭ ನೆ ತರಗತಿಗಳಲ್ಲಿ ಓದುತ್ತಿದಾಗ ನೆರೆಯ ಹೆಣ್ಣುಮಕ್ಕಳು, ಗಂಡುಮಕ್ಕಳು ನನ್ನಿಂದ ಪ್ರೇಮ ಪತ್ರ ಬರೆಸಿಕೊಳ್ಳಲು ಬಂದಿದ್ದರು;ನನ್ನನು ತಮ್ಮ ಮನೆಗೂ ಕರಿಸಿ ಕೊಂಡಿದ್ದರು.ಒಂದು ದುರದೃಷ್ಟ ಅಂದರೆ ಒಂದು ಕಡೆ ಒಬ್ಬರಿಗಾಗಿ ಪ್ರೇಮ ಪತ್ರ ಬರೆದು ಕೊಟ್ಟ ಮೇಲೆ, ಅದು ಇನ್ನೊಬ್ಬರಿಗೆ ತಲುಪಿದ ಮೇಲೆ ನಾನೇ ಓದಿ ಹೇಳಿದ ಪ್ರಸಂಗವು ಇದೆ.  ಆ ಪತ್ರಗಳು ಹಳ್ಳಿಯಲ್ಲಿ ಸಿಗುತ್ತಿದ ಉದುಬತ್ತಿಯ ಬಾಕ್ಸ್ ನ ಪೇಪರ್ ಆದರು ಸರಿ, ಇಲ್ಲ ಹಳೆಯ ನೋಟ್ಬುಕ್ ಆದರು ಸರಿ..ಇಲ್ಲ ನನ್ನ ನೋಟ್ ಬುಕ್ ನ ಒಂದು ಹಾಳೆ ಆದರು ಸರಿ.. ಒಂದು ಪತ್ರದ ಸಾಧಾರಣ ವಿಷಯ ಹೀಗೆ ಇರುತ್ತಿತ್ತು:

ಶ್ರೀ ಮನೋಜನಿಗೆ ನಮಸ್ಕಾರಗಳು.
      ನಾನು  ಆರಂ ಇದ್ದೇನೆ. ನೀವು ಆರಂ ಇದ್ದಿರೆಂದು ಭಾವಿಸುತ್ತೇನೆ.
ನಾನು ಮುಂದಿನ ಹುಣ್ಣಿಮೆಯ  ನಂತರದ  ಪಾಡ್ಯದ ದಿನ, ಹೂವಿನತೋಟದಲ್ಲಿ ನಡುಯುವ ಸತ್ಯ ನಾರಾಯಣ ವೃತಕ್ಕೆ ಬರುತ್ತೇನೆ. ನೀವು ಬನ್ನಿ. ಮುದ್ದಾಂ ಬನ್ನಿ. ಉತ್ತರ ಬರೆದು ತಿಳಿಸಿ.

ಆಕಾಶಕ್ಕೆ ಚಂದ್ರಮ ಚಂದ, ಕೆರೆಗೆ ತಾವರೆ ಚಂದ, ನನಗೆ ನೀನೆ ಚಂದ.
ಗುಡಿ ಇಲ್ಲದ ನಾಡು, ನೀನಿಲ್ಲದ ಬಾಳು ಎರಡು ಹಾಳು...!
ಆಕಳು ಕಪ್ಪಾದರೆ ಹಾಲೂ ಕಪ್ಪಲ್ಲ.....
......

                                                                 ನಿನ್ನ ಪ್ರೀತಿಯ (ಮನೋಜಾಕ್ಷಿ).

ಪತ್ರ ಮುಗಿಯಿತು. ಈ ಪತ್ರಕ್ಕೆ ತಾರಿಖು ಹಾಕಿದ್ದು ನನಗಂತೂ ನೆನಪಿಲ್ಲ. ಅವರ ಸಹಿಯಂತು ಇಲ್ಲವೇ ಇಲ್ಲ . ಆದರು ಇವು ಜೀವಂತ ಪ್ರೇಮ ಪತ್ರಗಳು. ಈ ಪತ್ರಗಳು ಒಂದು ಕಡೆಯಿಂದ ಹೊರತು ಇನ್ನೊಂದು ಕಡೆ ಸೇರಲು ವಾರಗಳೇ ಬೇಕಾಗಿದ್ದವು. ಇಂತ ಪತ್ರವನ್ನು ನಂಬಿದ ಆ ಪ್ರೇಮಿಗಳ ಪ್ರೀತಿ ಅದೆಷ್ಟು ಮುಗ್ಧ ಹಾಗೂ ಭಾವುಕತೆಯಿಂದ ಕೂಡಿದ್ದು ಅನಿಸುವುದಿಲ್ಲವೇ? ಅಂತ ಪತ್ರಗಳನ್ನು ಬರೆದು ಪ್ರೀತಿಸಿ ಮದುವೆಯಾದವರ ಮಕ್ಕಳು ಇವತ್ತು ಕಾಲೇಜಿನ ಮೆಟ್ಟಿಲು ಏರಿದರೂ....ಮೊಬೈಲ್ ನಿಂದ ದಿವಾಳಿಯೆದ್ದು...ಪ್ರೇಮ ಪತ್ರದ ಮೂಲಕ ಪ್ರೀತಿಯ ನಿವೇದನೆ ಮಾಡಿಕೊಳ್ಳಲು ಸಾಧ್ಯವೇ ಇಲ್ಲ.

ದೇಶ ಭಾಷೆಗಳರಿಯದ, ಕುಡಿ ಮಿಸೆಯೇ ಇರದ
ಮೋಸ ವಂಚನೆ ತಿಳಿಯದ ಬಾಲ್ಯದಲ್ಲೊಂದು
ವಿಷಯ ಭರಿತ ಪ್ರೇಮ ಪತ್ರವನು ಬರೆದು
ಅಸಮ ಸಾಹಸಿ ನಾನೆಂದರೆ  ನಿವೋಪ್ಪುವಿರೆನು?

ನನ್ನ ಕನ್ನಡ ಉಪಾಧ್ಯಾಯರು ಒಮ್ಮೆ ಕಾಳಿದಾಸನ 'ಮೇಘದೂತ ' ಪ್ರೇಮಿಗಳ ವಿರಹ ಅಗ್ನಿಯ ಪ್ರೇಮ ಒಡಲಿಂದ ಸಿಳಿದು ಬಂದ ಭಾವನೆಗಳ ಸಮಗ್ರ ಕಥನ ಎಂದು ಹೇಳಿದ್ದರು. ಪ್ರೇಮದ ಹಿಂದೆ ಮಧುರ ಭಾವನೆಗಳಿವೆ, ಅದರಲ್ಲಿ ಅಪಾರ ಶಕ್ತಿಯಿದೆ ಎಂದು ಅವರು ಹೇಳಿದ್ದರು. ಆದರೆ ಅವರೆಂದೂ ನೀವು ಪ್ರೇಮ ಪತ್ರ ಬರೀರಿ ಎಂದು ಹೇಳಿಯೇ ಇಲ್ಲ ಅಂತ ನನಗೆ ಇವತ್ತು ಬೇಸರವಾಗುತ್ತಿದೆ. 'ಮೇಘದೂತ' ಇಂದಿಗೂ ನಾನು ಓದಿಲ್ಲ..

ತಂತ್ರಜ್ಞಾನ ಬೆಳೆಯಿತು.. ಕುಳಿತಲ್ಲೇ ಪ್ರೇಮಿಗೆ ಸಂದೇಶವನ್ನು ಕಳಿಸಬಹುದಾದ ಮಾತ್ರವಲ್ಲ ನೋಡಬಹುದಾದ ಸಾಧನಗಳು ಬಂದವು. ಆದರೆ ಇಂದಿನ ಪ್ರೇಮದ ಅತಿದೊಡ್ಡ  ಪ್ರೇಮ ಸಂದೇಶದಲ್ಲಿ ಇರಬಹುದಾದ  ಅಕ್ಷರಗಳ ಸಂಖ್ಯೆ ೮ ಮಾತ್ರ (I LOVE YOU )... ಅಥವಾ ಇನ್ನು ಕೆಲವರು ಅದನ್ನೂ ಕೂಡ ILY  ಎನ್ನುವವರಿದ್ದಾರೆ. ಎಷ್ಟು ಸಣ್ಣದಾಗಿ ಹೇಳಬಹುದು? ಸಮಯ ಉಳಿದಿದೆ ಎಂದು ನಾವು ಭಾವಿಸಿ ಸಮಧಾನ ಪಡಿಸಿಕೊಳ್ಳಬಹುದಾದರು ಇಲ್ಲೊಂದು ದುರಂತ ಸಂಭವಿಸಿದೆ.

ಅದೇನೆಂದರೆ, ಯಾವುದಕ್ಕೂ ಅಭ್ಯಾಸ ಬೇಕು. ಅದಕ್ಕಾಗಿಯೆ "ಪ್ರಾಕ್ಟೀಸ್ ಮೇಕ್ಸ್ ಮ್ಯಾನ್ ಪರ್ಫೆಕ್ಟ್" ಎಂದಿದ್ದು. ಪ್ರೇಮ ಪತ್ರಗಳನ್ನು ಬರೆಯುವ ಕಾಲದಲ್ಲಿ, ಹೇಗೆ ಬರೆದರೆ ಸರಿ ? ಎಂಬ ಪ್ರಮೇಯಗಳು ಸಾವಿರಾರು ಬಗೆಯಲ್ಲಿ ಮನಸ್ಸಿಗೆ ಯೋಗ ಅಭ್ಯಾಸ ಮಾಡಿಸುತ್ತಿತ್ತು... ಮನಸ್ಸು ಪ್ರೇಮದ ವಿಷಯದಲ್ಲಿ ಪರಿ ಪಕ್ವತೆಯನ್ನು ಹೊಂದುತ್ತಿತ್ತು. ವಿರಹದ ಬೆಂಕಿ  ಸಾಹಿತ್ಯವನ್ನು, ನವಿರಾದ ಕಲ್ಪನೆಗಳನ್ನು, ಮಾನವೀಯ ದೃಷ್ಟಿಯನ್ನು  ಬೆಳೆಸಲು ಒತ್ತಡ ಹೆರುತಿತ್ತು. ಆದರೆ, ಇಂದು ಒಂದು ಕ್ಷಣದಲಿ ಪ್ರೇಮ ನಿವೇದನೆಯಾಗಿ, ಎರಡು ದಿನದಲ್ಲಿ ಮದುವೆಯಾಗಿ, ಫೇಸ್ಬುಕ್ ನಲ್ಲಿ ಫೋಟೋ ಹಾಕಿಸಿ ... ಒಂಬತ್ತು ತಿಂಗಳು ಕಳೆಯುವದರಲ್ಲಿಯೇ ಡಿವೋರ್ಸ್  ಅಂತ ಅಲೆಯುವ ಮಂದಿ ಕಂಡಾಗ, ನಾನು ಅಂದು ಕೊಳ್ಳುವುದು..."ಒಹ್ ಇವರ ಮನಸ್ಸಿಗೆ ಪ್ರೇಮದ ಕುರಿತಂತೆ ಯೋಗ ಆಗಿಯೇ ಇಲ್ಲ ಅಂತಾ".

ಏನೇ ಆದರು, ನನ್ನ ಕಾಲದಲ್ಲಿ ಪ್ರೇಮ ಪತ್ರ ಬರೆಯುವ ದಿನಗಳೇ ಅಲ್ಲವಲ್ಲ ಅಂತ ತುಂಬಾ ನೋವು ಇದೇ ರೀ ....ನೀವು ಯಾರಾದರು  ಈ ಕಾಲದಲ್ಲೂ ಪ್ರೇಮ ಪತ್ರ ಬರೆದಿದ್ದಿರಾ? ಹೋಗಲಿ ಬಿಡಿ ಒಂದು ಪತ್ರವನ್ನಾದರೂ ಬರೆದಿದ್ದಿರಾ? ಒಟ್ಟಾರೆ ಮೊಬೈಲ್ ಭಾವನೆಗಳನ್ನೇ ಕೊಲೆ ಮಾಡಿದೆ ರೀ ... ಅದಕ್ಕೆ ಮನುಷತ್ವನು ಕೊಲೆಯಾಗಿದೆ ರೀ ...ಮನುಷತ್ವ ಇಲ್ಲದ ಮೇಲೆ ಮನುಷ್ಯ ಒಂದು ರೋಬೋಟ್ ಅಗ್ತನ್ ರೀ... ಅದಕ್ಕೆ ಪತ್ರ ಬರೇರಿ(ನೀವು ನಿಮ್ಮ ಪ್ರೇಮಿಗೆ )

Wednesday, January 15, 2014

ರೈತ..!

'ದೇಶದ ಬೆನ್ನೆಲುಬು ರೈತ' ಎನ್ನುವ ವಾಕ್ಯ ಶಾಲೆಯಲ್ಲಿ ಕಲಿತ ಎಲ್ಲರಿಗು ಗೊತ್ತಿರುವ ಸತ್ಯ. ಆತ ಅನ್ನದಾತ;ನೇಗಿಲ ಯೋಗಿ ಅಂತೆಲ್ಲ ಕರೆದು ಗೌರವ ತೋರಿಸುವುದು ನಿಮಗೂ ತಿಳಿದಿರುವ ವಿಚಾರವೇ!  ಆದರೆ ನಾವು ಯಾರು ರೈತರಾಗಲು ಬಯಸುತ್ತಿಲ್ಲ; ಅಥವಾ ನಮ್ಮ ಮಕ್ಕಳು ಕೂಡ ರೈತರಾಗಲು ನಾವು ಬಿಡುತ್ತಿಲ್ಲ. ಅದೇನಿದ್ದರು ರೈತರು  ಎಂಬ ಹಾಡು ಕಾರ್ಯಕ್ರಮದಲ್ಲಿ ಕೇಳಿ, ಒಂದಿಷ್ಟು ರೈತನ ಇಮೇಜ್ ಗಳು ಫೇಸ್ಬುಕ್ ನಲ್ಲಿ ಹಾಕುವುದಕ್ಕೆ ಮಾತ್ರ ಸೀಮಿತವಾಗುತ್ತಿದೆ ನಮ್ಮ ಬದುಕು.

ರೈತರಾಗುತ್ತಿರುವವರು  ಯಾರು ? ಸರ್ಕಾರದ ಎಲ್ಲ ಶೈಕ್ಷಣಿಕ ಯೋಜನೆಗಳ ನಡುವೆಯೂ  ಶಾಲೆಯಿಂದ ತಪ್ಪಿಸಿಸಿಕೊಂಡು, ನಾಲ್ಕು ಗೋಡೆಗಳ ಮಧ್ಯ ತಮ್ಮ ೧೬ ವರ್ಷ ಕಳೆಯದೆ, ಹುಟ್ಟಿದಾರಭ್ಯ ಸಮಾಜದ ಬದುಕಿನ ಸ್ಥಿತಿಗೆ ತಾವೇ ನುಗ್ಗಿಸಿಕೊಂಡ ಅಥವಾ ತಂದೆ-ತಾಯಿಯರ ಅಜ್ಞಾನ, ಬಡತನ ಮುಂತಾದ ಕಾರಣಗಳಿಂದಾಗಿ ಶಾಲೆಯಿಂದ ಹೊರದಬ್ಬಿದ್ದ ಪರಿಣಾಮವಾಗಿ ಮಕ್ಕಳು ರೈತರಾಗುವುದಕ್ಕೆ ಇರುವ ದಾರಿ. ಅದರ ಹೊರತಾಗಿ ರೈತರನ್ನಾಗಿಸಲು ದಾರಿಗಳೇ ಇಲ್ಲ. ಕೃಷಿ ವಿದ್ಯಾನಿಲಯಗಳಿವೆ ಎಂದು ನೀವು ಹೇಳಬಹುದು...! ಆದರೆ ಕೃಷಿ ತರಬೇತಿ ಹೊಂದಿದವರಾರು ಮಣ್ಣಿನೊಂದಿಗೆ ಸರಸವಾಡುತ್ತಿಲ್ಲ; ಬದಲಾಗಿ ಯಾವುದೊ ಕಚೇರಿಯ ಫ್ಯಾನ್ ಗಳಿಗೆ ತಲೆ ಹಿಡಿದು ತುಕಡಿಸುತ್ತಿದ್ದಾರೆ.

ಕೃಷಿಯನ್ನು ಒಂದು ವೃತ್ತಿಯನ್ನು ಮಾಡಿಕೊಳ್ಳಲು ಇಂದಿನ ಓದಿದ ಜನಾಂಗಕ್ಕೆ ಸಾಧ್ಯವೇ ಇಲ್ಲ. ಅದಕ್ಕೆ ಕಾರಣ ಕೃಷಿ ಒಂದು non -organised  sector  ಮಾತ್ರವಲ್ಲ, ಇದಕ್ಕೆ ಸರಕಾರದ ಕೃಪೆಯು ಇಲ್ಲ. ನಿಸರ್ಗದ ಜೊತೆಯಲ್ಲಿ ಹೋರಾಡಿ ತನ್ನ ಬದುಕು-ಸಾವು ನಿರ್ಧರಿಸಬೇಕಾದ ಪೂರ್ಣ ಜವಾಬ್ಧಾರಿ ರೈತನ ಮೇಲಿದೆ.  ಉದಾಹರಣೆಗೆ, ಯಾವುದೇ ಒಂದು ನೌಕರಿ ತೆಗೆದುಕೊಳ್ಳಿ...ಯಾವ ಬೆಲೆ ಏರಿಕೆ ಸಮ್ಭವಿಸುತ್ತದೊ, ಎಲ್ಲರು ಸೇರಿ ತಮ್ಮ ಸಂಬಳದ ಬೇಡಿಕೆಯನ್ನು ಮುಂದಿಟ್ಟು ಸರ್ಕಾರದಿಂದಲೋ, ಸಂಸ್ಥೆಯಿಂದಲೋ  ಲಾಭ ಮಾಡಿಕೊಳ್ಳುತ್ತಾರೆ. ಯಾವುದೇ ಬಿಸಿನೆಸ್ ದಲ್ಲಿರುವರು ಒಂದು ಕಡೆ ನಷ್ಟವಾದರೆ ಇನ್ನೊಂದು ಕಡೆ ಲಾಭ ಮಾಡಿ ಕೊಳ್ಳುತ್ತಾರೆ; ಅಥವಾ ತಮ್ಮ ನಷ್ಟವನ್ನು ಗ್ರಹಕಾರರ ಮೇಲೆ ಹೊರಿಸಿ ಬಿಡುತ್ತಾರೆ. ಆದರೆ ರೈತರು?

ರೈತರು ತಾವು ಏನು ಬೆಳೆಯುತ್ತಾರೋ ಅಷ್ಟನ್ನೇ ಮಾರಿ ಜೀವನ ಮಾಡಬೇಕು. ಅವರು ಬೆಳೆದ ಬೆಳೆಗೆ ಸರ್ಕಾರ ಬೆಲೆ ನಿಗದಿ ಮಾಡುತ್ತದೆ. ಒಂದೊಮ್ಮೆ ಬೆಲೆಯೆನಾದರು ಏರಿಕೆಯಾಗುತ್ತದೆ ಅಂತಾದರೆ ವಿದೇಶದಿಂದ ಕೃಷಿ ವಸ್ತುಗಳನ್ನು ಆಮದು ಮಾಡಿ ರೈತರನ್ನು ಮಣಿಸುತ್ತದೆ. ಹೀಗಾಗಿ ರೈತರ ಬೆಳೆದ ಬೆಳೆಯ ಬೆಲೆ ಯಾವುತ್ತು ಒಂದೇ ಲೆವೆಲ್ ನಲ್ಲಿ ಇಡಲಾಗುತ್ತದೆ. ಇದನ್ನು ಸರಿ ಹೊಂದಿಸಲು ರೈತರು ಭೂತಾಯಿಯ ಜೊತೆ ಗುದ್ದಾಡಬೇಕು; ಮಳೆಯನ್ನೂ ನಂಬಿ ಬದುಕ ಬೇಕು. ಜೊತೆಗೆ ಭೂತಾಯಿಯ ಜೊತೆಗಿನ ಗುದ್ದಾಟವನ್ನು ಹೆಚ್ಚು ರೋಷ ಭಾರಿತವನಾಗಿಸಿದ್ದು ಯಾರು -ಇದೆ ಕಲಿತ ವರ್ಗ ಹಾಗು ಸರ್ಕಾರಗಳು. ಕಲಿತ ವರ್ಗದ ಆಸೆಗಳಿಗಾಗಿ ವಾಹನ, ac ರೂಂ, ಪ್ಲಾಸ್ಟಿಕ್, ಪೆಟ್ರೋಲ್  ಹೆಚ್ಚು ಬಳಕೆಯಾಗಿ ಮಾಲಿನ್ಯದಿಂದ ಭೂತಾಯಿ ಬಸವಳಿದಾಗ, ನೇರ ಪರಿಣಾಮವಾಗುವುದು ರೈತರ ಮೇಲೆ. ಅಷ್ಟೇ ಅಲ್ಲದೆ ಆಗಾಗ ಸರ್ಕಾರಗಳು ತರುವ ಬೃಹತ್ ಯೋಜನೆಗಳು-ಡಾಮ್ಸ್, ವಿದ್ಯುತ ಯೋಜನೆಗಳು ರೈತರನ್ನು ಒಕ್ಕಲೆಬ್ಬಿಸುತ್ತವೆ.
ಇದರ ಪ್ರಾಕೃತಿಕ ಪರಿಣಾಮಗಳನ್ನು ರೈತನೇ ಮಾತ್ರ ಹೊರಬೇಕು.

ರೈತರಾಗುವುದೇ ಕಲಿಯದಿರುವುದರಿಂದ. ಹೀಗಾಗಿ ರೈತವರ್ಗ ಯಾವತ್ತು ಸರ್ಕಾರದ ವಿರುದ್ಧ ತಲೆ ಎತ್ತಿ ನಿಲ್ಲಲಾರದು. ಹಾಗೆಂದು ಅನಾಯಾಸವಾಗಿ ಸಾಯಲು ಬಿಡಬಾರದು ಎಂದು ಒಂದಿಷ್ಟು ಸಾಲ, ಅಕ್ಕಿ, ಕೊಟ್ಟು ತನ್ನ ಕೈ ತೊಳೆದು ಕೊಳ್ಳುತ್ತದೆ. ರೈತರ ಬದುಕು ಈ   ರೀತಿ  subsidized  ಆಗಿರುವುದರಿಂದಲೇ, ನಾವೆಲ್ಲ AC ರೂಂ ನಲ್ಲಿ ಕುಳಿತು ಸ್ವೀಟ್ ಕಾರ್ನ್ ಸೂಪ್ ಮೇಲ್ಳುವುದಕ್ಕೆ ಸಾಧ್ಯವಾಗಿರುವುದು. ಒಂದೊಮ್ಮೆ, ಹೀಗೆ subsidized  ಆಗಲು ರೈತರೇ ಇಲ್ಲದಿದ್ದರೆ, ಅರ್ಥಾತ್ ಎಲ್ಲರು ಶಿಕ್ಷಣ ಪಡೆದ ಪಂಡಿತರೆ ಆದರೆ,ದೇಶದ ಆಹಾರದ ಸ್ಥಿತಿಗತಿ ಹೇಗಿರಬಹುದು ಎಂದು ನೀವೇ ಊಹಿಸಿ ? ಅಂದ ಮೇಲೆ ಈಗಿರುವ ಶಿಕ್ಷಣ ಪದ್ಧತಿ ಹಾಗೂ ರೈತರನ್ನು non -organised  sector ನಲ್ಲಿ ಉಳಿಸಿಕೊಳ್ಳುವುದು ದೇಶದ ಭವಿಷ್ಯಕ್ಕೆ ಒಳ್ಳೆಯದಾಗುವುದಿಲ್ಲ. ಎಲ್ಲರು ಯೋಚಿಸುವುದು ತಾನು ರೈತನಾಗದಿದ್ದರೆ ಸಾಕೆಂದು ಮಾತ್ರ, ಹೀಗಾಗಿ ಇಂತದೊಂದು ಸಮಸ್ಯೆ ಅರಿವಿಗೆ ಬರುವುದು ಕಷ್ಟ.

ಕೃಷಿ ಕ್ಷೇತ್ರಕ್ಕೆ ಭವ್ಯವಾದ ಭವಿಷ್ಯ ಇರಬೇಕು ಅನ್ನುವುದಾದರೆ-ಕೃಷಿಯ ಬಗ್ಗೆ ತಾತ್ಸಾರ ಮನೋಭಾವ ದೂರವಾಗಬೇಕು. ವಿಜ್ಞಾನ ಕ್ರಾಂತಿಯಿಂದ ಸ್ವಿಚ್ ಒತ್ತಿದರೆ ಕಾಫಿ ತಯಾರಿಸಬಹುದು, ಆದರೆ ಕಾಫಿ ಗಿಡ ರೈತನೇ ಬೆಳೆಯ ಬೇಕು ಅನ್ನುವ ಪರಿಕಲ್ಪನೆ ನಮ್ಮ ಶಿಕ್ಷಣ ಕ್ಷೆತ್ರದಲಿರುವರಿಗೆ ಇರಬೇಕು. ಕೇವಲ ಡಿಗ್ರಿ ಗಳ ಉತ್ಪಾದನ ಕೇಂದ್ರಗಳಾಗಿರುವ ಶಾಲೆಗಳಿಂದ ಕೃಷಿಗೆ ಭವಿಷ್ಯವಿಲ್ಲ.

ಇದುವರೆಗೆ, ಯಾವ ಶಾಲೆಯು, ತನ್ನ ಡ್ರಾಪ್ ಔಟ್ ಅಥಾವ ಪಾಸು ಆದ, ಒಬ್ಬ ರೈತನನ್ನು ಸನ್ಮಾನಿಸಿರುವುದನ್ನು ನಾನು ಓದಿಯೇ ಇಲ್ಲ..! 

Thursday, January 9, 2014

ನಿಮ್ಮ ಹವ್ಯಾಸಗಳೇನು ?

ನಾನು ಯಾರನ್ನಾದರು ಹೊಸದಾಗಿ ಭೇಟಿಯಾದಾಗ ಕೇಳುವ ಪ್ರಶ್ನೆಗಳಲ್ಲಿ ಇದು ಒಂದು. ಕೆಲವರಿಗೆ ಇದು ಬಹಳ ತಲೆ ನೋವಿನ ಪ್ರಶ್ನೆ. ಆದರೆ ಹವ್ಯಾಸಗಳ ಹಿಂದೆ ಏನಿದೆ?

ಹವ್ಯಾಸಗಳು ಯಾವುದೇ ವ್ಯಕ್ತಿಯ ಸೃಜನಶೀಲ ಅಭಿವ್ಯಕ್ತಿಯ ಪದರಗಳು. ಒಂದು ವ್ಯಕ್ತಿಯ ಹವ್ಯಾಸಗಳಿಂದ ಅವನ ಆಸಕ್ತಿ, ಅವನ ವ್ಯಕ್ತಿತ್ವದ ಕೆಲ ಭಾಗಗಳನ್ನೂ ಗಮನಿಸಲು ಸಾಧ್ಯವಿದೆ. ಹಾಗಿರುವುದಕ್ಕು ಕಾರಣವಿದೆ. ಯಾವುದೇ ಹವ್ಯಾಸ ಮನುಷ್ಯನ ಹೃದಯದಲ್ಲಿನ ಸೃಜನ ಶೀಲ ಭಾವದ ತುಡಿತದಿಂದ ಮೇಲೆ ಬಂದಿರುತ್ತದೆ. ಹವ್ಯಾಸಗಳು ಹಣವನ್ನು ತರುವ  ಉದ್ಯೋಗ ಆಗುವುದು ತುಂಬಾ ಕಡಿಮೆ.ಆದರೆ ಇವು ತರುವ ಮಾನಸಿಕ ಸಂತೃಪ್ತಿ ಹೇಳಲಾಗದು. ಯಾವನಿಗೆ ಒಳ್ಳೆಯ ಹವ್ಯಾಸಗಳು ಇರುತ್ತವೋ ಅಂತ ವ್ಯಕ್ತಿ  ಪಾದರಸದಂತೆ ಕೆಲಸದಲ್ಲಿರುತ್ತಾನೆ.

ಆದರೆ ಹವ್ಯಾಸಗಳು ಅಂದರೇನು? ಕೆಲವರಿಗೆ ತಾವು ಏನು ಮಾಡುತ್ತೇವೋ ಅವೆಲ್ಲ ಹವ್ಯಾಸಗಳೇ ಎಂಬ ಭಾವ ವಿದೆ. ಆದರೆ ಅದು ಖಂಡಿತ ಹಾಗಲ್ಲ..! ಹವ್ಯಾಸದಲ್ಲಿ ಗಮನಿಸುವಿಕೆ ಬಹಳ ಮುಖ್ಯ. ಜೊತೆಗೆ ಆ ಗಮನಿಸುವಿಕೆಯಲ್ಲಿ ಒತ್ತಡವಿಲ್ಲ ;ಬದಲಾಗಿ ವಿನೋದವಿದೆ.  ಉದಾಹರಣೆಗೆ TV ನೋಡುವುದು ಹವ್ಯಾಸವಲ್ಲ; ಆದರೆ ನೀವು ಟಿವಿಯಲ್ಲಿ ಬರುವ ಯಾವೊದೋ ಕಾರ್ಯಕ್ರಮ  ಕುರಿತಾಗಿ ಸತತವಾಗಿ ತಿಳಿದು ಕೊಳ್ಳುತ್ತಿರಿ ಅಂದರೆ ನಿಮಗೆ ಆ ವಿಷಯದಲ್ಲಿ ಆಸಕ್ತಿ ಇದೆ ಎಂದರ್ಥ. ಆದರೆ ಸಮಯವನ್ನು ನೀಗಿಸಲು tv  ರಿಮೋಟ್ ಒತ್ತುತ್ತಾ ಚಾನೆಲ್ ಸ್ಕ್ಯಾನ್ ಮಾಡುತ್ತಿರಿ ಅಂದರೆ ನಿಮ್ಮ ಹವ್ಯಾಸ TV  ನೋಡುವುದಾಗಿರುವುದಿಲ್ಲ; ಬದಲಾಗಿ ರಿಮೋಟ್ ಒತ್ತುವ ಹವ್ಯಾಸವೆಂದೆ ಹೇಳಬೇಕು.

ಹವ್ಯಾಸಗಳ ಇನ್ನೊಂದು ವಿಷಯವೆಂದರೆ, consistancy -ನಿರಂತರತೆ. ನೀವು ಯಾವುದೋ ನೋವಿನಲ್ಲಿರಬಹುದು, ನಿದ್ದೆಯ ಗುಂಗಿನಲ್ಲಿರಬಹುದು, ಆದರೆ ನಿಮ್ಮ ಹವ್ಯಾಸದತ್ತ ಕೈ ಹಾಕಿದರೆ ಅವೆಲ್ಲ ಮರೆಗೆ ಸೇರುತ್ತವೆ. ಒಳ್ಳೆಯ ಹವ್ಯಾಸಗಳು ನಿರಂತರತೆ ಹಾಗೂ ಹೊರ ಜಗತ್ತನ್ನು ಮರೆಸಿ ಬಿಡುತ್ತವೆ.

ಹವ್ಯಾಸಗಳು ಹಣ ತರುವುದು ತುಂಬಾ ಕಡಿಮೆ. ಹಾಗೆಂದು ಹವ್ಯಾಸಗಳು ಉದ್ಯಮವಾದಾಗ ಒಳ್ಳೆಯ ಸಾಧನೆಯೇನೋ ಮಾಡಬಹುದು. ಆದರೆ, ಯಾವುದೇ ಹವ್ಯಾಸ ಉದ್ಯಮವಾಗಿಸಲು ಹೊರಟಾಗ, ನಾಲ್ಕಾರು ಜನರನ್ನು ಸೇರಿಸಲೇ ಬೇಕಾಗಿಬರುತ್ತದೆ. ಹೀಗಾಗಿ ಹವ್ಯಾಸದ ನಿಜವಾದ ಕೆಲಸಕ್ಕಿಂತ ನಾಲ್ಕು ಜನರ ಮ್ಯಾನೇಜ್ಮೆಂಟ್ ಹವ್ಯಾಸವಾಗಿ ಮಾನಸಿಕ ನೆಮ್ಮದಿ ದೂರ ಸರಿಯುತ್ತದೋ ಏನೋ  ಜಿಜ್ಞಾಸೆ ನನಗಿದೆ. ಯಾರಾದರು ಹವ್ಯಾಸವನ್ನು  ಬಿಸಿನೆಸ್ ಮಾಡಿಕೊಂಡವರಿಗೆ ಕೇಳಿದರೆ ತಿಳಿಯಬಹುದು ಅಷ್ಟೇ.

ನಾವು ಮಾಡುವ ಪ್ರತಿಯೊಂದು ಕೆಲಸ ಹವ್ಯಾಸವಾಗಿರಲು ಸಾಧ್ಯವಿಲ್ಲ. ಆಫೀಸ್ ನ ಕೆಲಸದಲ್ಲಿ, ಮನೆಯ ಕೆಲಸದಲ್ಲಿ ಅದೆಷ್ಟೋ ವಿಷಯಗಳು ಒತ್ತಡಕ್ಕೆ ಒಳಗಾಗಿ ಮಾಡಬೇಕಾಗಿ ಬರುತ್ತವೆ. ಅದು ಸಹಜ ನಿಯಮ. ಸಮಾಜದ ಜೊತೆಗಿನ ಜೀವನ ಹಾಗೂ ಹಣವನ್ನು ಗಮನಿಸಿ ನಾವು ಕೆಲಸವನ್ನು-ವೃತ್ತಿಯನ್ನು ಮಾಡಬೇಕು. ಆದರೆ ಪ್ರವೃತ್ತಿ ಹಾಗಲ್ಲ; ಅದು ನಮಗಾಗಿ ಮತ್ತು ಕೇವಲ ನಮಗಾಗಿ ಮಾತ್ರ.

ನಾನು ಬಹಳ ಸಾರಿ ಹವ್ಯಾಸಗಳನ್ನು ಕೇಳಿದಾಗ ಕೆಲವರ ಉತ್ತರಗಳು ಹೇಗಿರುತ್ತವೆ ಗೊತ್ತ ?
"ನನಗೆ ಹವ್ಯಾಸಗಳು ಅಂತ ಏನು ಇಲ್ಲ... tv  ನೋಡ್ತೇನೆ ಅಷ್ಟೇ".
ಇನ್ನು ಕೆಲವರ ಉತ್ತರ ಇನ್ನು ವಿಚಿತ್ರ, " ನಾನು ಚಿತ್ರ ಬಿಡಿಸುತ್ತಿದ್ದೆ, ಡಾನ್ಸ್ ಮಾಡುತ್ತಿದೆ, ಹಾಡುತ್ತಿದೆ,....ಆದರೆ SSLC  ತನಕ ಮಾತ್ರ. ಆದರೆ SSLC  ಓದಬೇಕು ಅಂತ ಅಪ್ಪ-ಅಮ್ಮ ಬೈದು ಎಲ್ಲ ಬಿಡಿಸಿದರು. ಇವಾಗ ಇವಾವುದನ್ನು ನಾನು ಮಾಡುವುದಿಲ್ಲ".

ಈ ಉತ್ತರಗಳನ್ನೂ ಗಮನಿಸಿದಾಗ ಮನುಷ್ಯನ ಒರಿಜಿನಲ್  ಆಸಕ್ತಿಯನ್ನೇ ಶಿಕ್ಷಣಕ್ಕಾಗಿ ಬಲಿಕೊಟ್ಟು ಮತ್ತೆ ಬೇರೆ ಏನೋ ಒಂದನ್ನು ಆಗಬೇಕು ಎಂದು ಅಪೇಕ್ಷೆ ಪಡುತ್ತೇವೆ; ಹಣವನ್ನೇನೋ  ತರುತ್ತೇವೆ;ಆದರೆ ಸಂತೋಷ ಹೊಂದುವುದು ಹೇಗೆಂಬ ಪ್ರಶ್ನೆಯೇ ಹವ್ಯಾಸವಾಗಿರುತ್ತದೆ.

ನಾನು ಹೇಳುವುದಿಷ್ಟೇ. ನಿಮ್ಮ ಹವ್ಯಾಸ ನಿಮ್ಮ ಸಹಿ ಅಷ್ಟೇ ಸತ್ಯ(ಯುನಿಕ್). ಸಾವಿರ ಜನ ಚಿತ್ರ ಬಿಡಿಸಬಹುದು  ಆದರೆ ಪ್ರತಿಯೊಬ್ಬರ ಚಿತ್ರ ಬೇರೆ ಬೇರೆನೆ. ನಿಮ್ಮ ಹವ್ಯಾಸಗಳು ಯಾವತ್ತು ನಿಮ್ಮ ನೆಮ್ಮದಿಯ ಕೇಂದ್ರ ಬಿಂದುಗಳು.ದಿನದ ೨೪ ಗಂಟೆಗಳಲ್ಲಿ, ೮ ತಾಸುಗಳನ್ನು ವೃತ್ತಿಗೆ, ೮ ಗಂಟೆಗಳನ್ನು ಪ್ರವೃತ್ತಿಗೆ, ಹಾಗೂ ಉಳಿದೆಂಟು ಗಂಟೆ ನಿದ್ರೆಗೆ ಮಿಸಲಾಗಿರಿಸಿದರೆ ಉತ್ತಮವಂತೆ. ಒಂದೊಮ್ಮೆ ನೀವು ಈ ವಿಷಯದಲ್ಲಿ ಫೇಲ್ ಆಗಿದ್ದರೆ ಪರವಾಗಿಲ್ಲ, ನಿಮ್ಮ ಮುಂದಿನ ಮಕ್ಕಳಿಗಾದರೂ ಹವ್ಯಾಸಗಳನ್ನು ಬೆಳೆಸಿಕೊಳ್ಳಲು ಅವಕಾಶಕೊಡಿ. 

 ನಿಮ್ಮ ಒಳ್ಳೆಯ ಹವ್ಯಾಸಗಳು ನಮಗೂ ದಾರಿದೀಪವಾಗಬಹುದು.ತಮ್ಮ ಹವ್ಯಾಸಗಳನ್ನು ನಮಗೆ ತಿಳಿಸುತ್ತಿರಾ?

Friday, January 3, 2014

ಸಾವಿರ ಸುಳ್ಳು ಹೇಳಿ ಮದುವೆ ಮಾಡು..!

"ಸಾವಿರ ಸುಳ್ಳು ಹೇಳಿ ಮದುವೆ ಮಾಡು..!" ಎಂಬ ಗಾದೆ ಎಲ್ಲರ ಬಾಯಲ್ಲೂ ಕೇಳಿಯೇ ಇರುತ್ತೀರಿ. ಇದರ ಅರ್ಥ: ಒಂದು ಮದುವೆಯ ನಡೆಯ ಬೇಕಾದರೆ ಒಂದಿಷ್ಟು ಸುಳ್ಳು ಹೇಳಲೇ ಬೇಕು ಎಂಬುದು.ಮದುವೆಯಲ್ಲಿ ಸುಳ್ಳು ಹೇಳಲೇ ಬೇಕೆಂದು ಶಾಸ್ತ್ರವೇನೂ ಇಲ್ಲ.... ಆದರೆ ಹಲವು ಸಮಯದಲ್ಲಿ ಸುಳ್ಳುಗಳು ಅನಿವಾರ್ಯವಾಗಿ ಬಿಡುತ್ತವೆ. ಮತ್ತೊಬ್ಬರಿಗೆ ನೋವು ಆಗಬಾರದು ಅನ್ನುವ ಕಾರಣದಿಂದಲೂ ಸುಳ್ಳುಗಳು ಹೇಳಬೇಕಾಗಿ ಬರುತ್ತವೆ. ಉದಾಹರಣೆಗೆ, ಹುಡುಗಿಗೆ ಹುಡುಗ  ನೋಡಲು ಚೆನ್ನಾಗಿ ಇಲ್ಲ ಅನಿಸರಬಹುದು, ಆದರೆ ಅವಳು, ಹುಡುಗ ಚೆನ್ನಾಗಿ ಇಲ್ಲ ಅನ್ನುವ ವಿಷಯವನ್ನು  ಜಾತಕ ಸರಿಯಿಲ್ಲ ಅಂತಲೋ, ಇನ್ನಾವುದೋ ಸಬೂಬುನಿಂದಲೋ ತಿಳಿಸುತ್ತಾರೆ. ಅದು ಹುಡುಗನ ಕಡೆಯಿಂದಲೂ ಹಾಗೆಯೇ.! ಇಂಥ ಸುಳ್ಳುಗಳು ಕೇವಲ ಅನಿವಾರ್ಯ ಹಾಗೂ ಮತ್ತೊಬ್ಬರ ಮಾನಸಿಕ ನೆಮ್ಮದಿಯನ್ನು ಕಾಪಾಡಲು ಬಳಸುವ ಒಳ್ಳೆಯ ಸುಳ್ಳುಗಳು;ತಪ್ಪಲ್ಲ.

ಮದುವೆಯ ಕುರಿತಾಗಿ ಎಲ್ಲರ ಒಳತಿಗಾಗಿ ಬಳಸುವ ಯಾವ ಸುಳ್ಳು ತಪ್ಪಲ್ಲ. ಆದರೆ ಕೆಲವು ಸುಳ್ಳುಗಳು ಹೇಳಲೇ ಬಾರದು. ಅಂತ ಸುಳ್ಳುಗಳು ಯಾವುದು ಇರಬಹುದು?

ಇಲ್ಲೊಬ್ಬ ಮಹಾಶಯನಿದ್ದ.ಓದ್ದಿದ್ದು ಇಂಜಿನಿಯರಿಂಗ್. ನಾನು ಹೇಳುದಾದರೆ ಅವನು ಒಳ್ಳೆಯ ವ್ಯಕ್ತಿನೇ. ಮದುವೆಯಲ್ಲಿ ಒಂದು ಸಣ್ಣ ಎಡವಟ್ಟು ಮಾಡಿಕೊಂಡಿದ್ದ. ಅವನ ಕತೆ ಹೀಗಿದೆ ಕೇಳಿ: ಅವನು ತನ್ನ ಕುಟುಂಬ ಸಮೇತವಾಗಿ ಹುಡುಗಿಯನ್ನು ನೋಡಲು ಹೋಗಿದ್ದಾನೆ. ಕುಟುಂಬ-ಕುಟುಂಬಗಳ ನೇರಾನೇರ ಮಾತು ಕತೆಯಲ್ಲಿ ಇವನು ಒಂದು ಮೂಲೆಯಲ್ಲಿ, ಅವಳು ಒಂದು ಮೂಲೆಯಲ್ಲಿ ತಲೆ ತಗ್ಗಿಸಿ ಕುಳಿತಿದ್ದರು. ಭಾವಿ ಮಾವ ಕುಡಿತ ಮುಂತಾದ ವಿಷಯಗಳ ಕುರಿತಾಗಿ, ಸ್ಪಷ್ಟವಾಗಿ ಅಲ್ಲದಿದ್ದರೂ,ಕೆಲವು ಪ್ರಶ್ನೆಗಳನ್ನು ಕೇಳಿದ್ದಾನೆ. ಮಾವನ ಮುಂದೆ, ತನ್ನ ಅರ್ಧಾಂಗಿಯಾಗಿ ಸ್ವಿಕರಿಸಲಿರುವ  ನವ್ಯ ತಾರುಣ್ಯದ ಲಲಿತಾಂಗನೆಯ ಎದುರು, 'ತಾನೆಂದು ಕುಡಿದಿಲ್ಲ...ಕುಡಿಯಲ್ಲ' ಎಂತೆಲ್ಲ ಹೇಳಿದ್ದಾನೆ.

ಹಾಗೆಯೇ, ಜೀವನ ಸಂಗಾತಿಯ ನಿರ್ಧಾರಕ್ಕೆಂದು, ಹಿರಿಯರು  ಹುಡುಗಿಯ ಜೊತೆಗೆ ಮಾತುಕತೆಗೆಂದು ನೀಡಿದ ಒಂದು ತಾಸು ಹೇಗೆ ಮಾತನಾಡಲಿ ಎಂದು ಯೋಚಿಸುತ್ತಲೇ ಇದ್ದ ಇವನಿಗೆ, ಇಂಜಿನಿಯರಿಂಗ್ ನ ಒಂದು ಪರೀಕ್ಷೆಗೆ ಮೂರುತಾಸು ಕೊಡುತ್ತಾರೆ, ಅದು ಒಂದು ಸೆಮಿಸ್ಟರ್ ನ ಒಂದು exam ಗೆ ಸೀಮಿತ. ಹೀಗಿರುವಾಗ ಮುಂದಿನ ೭೫ ವರ್ಷ ಜತೆಗಿರುವ ಸಂಗತಿಯ ಜೊತೆ ಏನೆಲ್ಲಾ ಕೇಳಲಿ ಎನ್ನುವ ಪ್ರಶ್ನೆಗೆಳು ದುಗುಡವಾಗಿ ಮುಖದ ಮೇಲೆ ನಿರಿಗೆಯಾಗಿ ಮೂಡಿದವು. ಅಂತು, ಸಮಯ ಬಂತು.....ಹುಡುಗ ಹುಡುಗಿ ಮನೆಯ ತೋಟಕ್ಕೆ ನಡೆದರು. ಯಾರು ಮೊದಲು ಮಾತನಾಡುವರು ಎಂದು ತಿರ್ಮಾನಿಸುವುದರಲ್ಲಿಯೇ ಹದನೈದು ನಿಮಿಷ ಕಳೆದಿದ್ದವು.

ಕೊನೆಗೂ ಮಾತು ಸುರುವಾಯಿತು. ಏನೇನೋ ಮಾತನಾಡಿದರು. ಆದರೆ, ಹುಡುಗಿ ಕರವಾಕ್ ಆಗಿ ಕೇಳಿದ ಒಂದು ಮಾತು ಅಂದರೆ, "ನೀವು ಕುಡಿಯುವುದಿಲ್ಲ ತಾನೇ? ನಮ್ಮ ಮನೆಯಲ್ಲಿ ಯಾರು ಕುಡಿಯಲ್ಲ.. I  can not  even digest  the smell .." ಅಂದಿದ್ದಳು. ಸಣ್ಣ ಸುಳ್ಳು, ಮದುವೆಯಾದ ಮೇಲೆ ಸರಿಯಾಗುತ್ತೆ ಎಂದುಕೊಂಡ ಮಹಾಶಯ... ಸ್ವಲ್ಪವೂ ಸಂದೇಹ ಬರದ ಹಾಗೆ ವಿಷಯ ಮರೆ ಮಾಡಿ..."ಕುಡಿಯುವುದೇ ಇಲ್ಲ" ಎಂದು ಭರವಸೆ ಹುಟ್ಟಿಸಿದ.

ಒಬ್ಬರಿಗೊಬ್ಬರು, ಎರಡು ಕುಟುಂಬಗಳು ಒಂದಾಗುವತ್ತ ನಡೆದವು. ನಿಶ್ಚಿತಾರ್ತ ಇನ್ನೇನು ನಡೆಯಬೇಕು, ಅನ್ನುವಷ್ಟರಲ್ಲಿ  ಅಧಿಕ ಮಾಸ ಪ್ರಾರಂಭವಾಗಿ ಒಂದು ತಿಂಗಳು ಮುಂದೆ ಸರಿಯಿತು. ಆದರೆ ಹುಡುಗ ಹುಡುಗಿ ಎಂದಿನಂತೆ ಮಾತು-ಸರಸ-ವಿರಸ ಭರವಸೆಗಳ ಮೇಲೆ ಮುಂದುವರಿಯಿತು. ಇಬ್ಬರು ಮಾತನಾಡುವುದು ರಾತ್ರಿ ೯ ರಿಂದ ೧೦ ಗಂಟೆಯ ತನಕ. ತಿಂಗಳ ಕಾಲ ಇವರ ಮಾತು ಕತೆ ಸರಿಯಾಗಿ ಇದೆ ಸಮಯದಲ್ಲಿ ನಡೆದಿದೆ.

ದುರದೃಷ್ಟ, ಅದೊಂದು ಶುಕ್ರವಾರ, ವೀಕೆಂಡ್ ಪ್ರಭಾವಕ್ಕೆ ಒಳಗಾದ ಹುಡುಗ, ಅಂತು ಇಂತೂ ೧೦ ಗಂಟೆ ಭರವಸೆಯ ಸರಸದ ಮಾತುಗಳನ್ನು ಮುಗಿಸಿ, ೧೦ರ ನಂತರ ಬಾರ್ ಒಂದರಲ್ಲಿ ಗೆಳೆಯರ ಜೊತೆ ಕುಡಿದು ಕುಪ್ಪಳಿಸಿದ. ಆದರೆ, ಹೇಗೋ ನಾಳೆ ರಜೆ ಎಂದುಕೊಂಡ ಗೆಳತಿ, ೧೧:೧೫ ಕ್ಕೆ ಮತ್ತೆ ಮಾತನಾಡೋಣವೆಂದು ತವಕಿಸಿದ್ದಾಳೆ. ಇವನ ಧ್ವನಿ ಪೆಟ್ಟಿಗೆಯಿಂದ ಹೊರಡುತ್ತಿದ್ದ ಒಂದೊಂದು ಮಾತಿನ ಮುತ್ತುಗಳು... ಹಳೆಯ ಕ್ಯಾಸೆಟ್ ರೆಕಾರ್ಡರ್ ಗೆ ಹಾಕಿದ ಕ್ಯಾಸೆಟ್ ನ ಧ್ವನಿಯನ್ತಿತ್ತು.ಅದೆಷ್ಟು ಜಗಳವು ಆಯಿತು. ಇವನು ಕುಡಿತದ ಅಮಲಿನಲ್ಲಿ "ಕೆಳಕ್ ನಿನ್ ಯಾರ್?" ಎಂದು ಕೇಳುವ ಮೂಲಕ ತಾನೊಬ್ಬ ಉದ್ಧಾರವಾಗದ ಕುಡುಕವೆಂಬುದನ್ನು ಅಕೆಗೆ ಮನವರಿಕೆ ಮಾಡಿದ. ಜೊತೆಗಾರ ಕುಡುಕರು ಮೊಬೈಲ್ ಕಸಿದುಕೊಂಡು ವಿಷಯ ಮುಗಿಸಿದರು  ಬಾರ್ ಕಡೆಯಿಂದ.

ಆದರೆ, ಯಾರಿಗೂ ತಿಳಿಯದೆ ಹಾಗೆ ಮಹಡಿಯನ್ನು ಹತ್ತಿ , ನಂಬಿಕೆಯ ಆಧಾರದ ಮೇಲೆ ಮಾತನಾಡಲು ತವಕಿಸಿದ  ಹುಡುಗಿ ರಾತ್ರಿ ಇಡಿ ಅತ್ತಳು. ಹುಡುಗರೆಲ್ಲ ಹೀಗೆಯ ಎಂದು ತಿರ್ಮಾನಕ್ಕೆ ಬಂದಳು. ನೋವಿನಿಂದ ಬಳಲಿದಳು. ಮರುದಿನ ೧೧ ಗಂಟೆಗೆ  ಹುಡುಗ ಕಾಲ್ ಮಾಡುತ್ತಾನೆ...
" ಸಾರೀ ಡಿಯರ್... ಗೆಳೆಯರಿದ್ದರು ಅದಕ್ಕೆ ಕುಡಿದೆ. ಇವತ್ತು ಒಂದು ದಿನ.. ಪ್ಲೀಸ್.." ಎಂದೆಲ್ಲ ಅವಲತ್ತುಕೊಂಡ.
 "ನೀನು ಕುಡಿದುದ್ದು ತಪ್ಪು ಅಂತ ಹೇಳ್ತಿಲ್ಲ... ನೀವು ಮೊದಲಿಂದಲೂ ಕುಡಿಯಲ್ಲ ಅಂತ ಹೇಳಿದ್ದಿರಿ... ನಿನ್ನೆ ನಾನು ಮೊದಲು ಮಾತನಾಡುವಾಗಲು ಪಾರ್ಟಿ ಕುರಿತಾಗಿ ಹೇಳಿಲ್ಲ. ನೀವು ವಿಷಯ ಮುಚ್ಚಿ ಇಟ್ಟಿದ್ದಿರಿ..! ನೀವು ಹೀಗೇನೆ ಎಷ್ಟು ವಿಷಯ ಮುಚ್ಚಿ ಇಟ್ಟಿದ್ದಿರೋ ಗೊತ್ತಿಲ್ಲ..!!!! ಸಾರೀ ನೀವು ಕಾಲ್ ಮಾಡಬೇಡಿ... ನಂಗೆ ಇಷ್ಟ ಇಲ್ಲ". ಹುಡುಗಿಯ ಮಾತಿನಲ್ಲಿ ಅರ್ಥವಿತ್ತು; ಹುಡುಗನ ಮನಸಿನಲ್ಲಿ ತಪ್ಪಿನ ಅರಿವು ಇತ್ತು; ಆದರೆ ಕಾಲ ಮೀರಿತ್ತು.

ಆದರೆ, ಸಾವಿರಾರು ಪ್ರಯತ್ನ ಮಾಡಿ, ಹುಡುಗಿಯ ಗೆಳತಿಯನ್ನು ಸಂಪರ್ಕಿಸಿ, ಅವಳಿಂದ ಭರವಸೆಯ  ಮಾತುಗಳನ್ನು ಆಡಿಸಿ.. ಮುಂದೆ ಹೀಗೆ ಮಾಡಲ್ಲ ಎಂದು  ಹುಡುಗ "ಎರಡನೆಯ" ಭರವಸೆ ನೀಡಿದ ಮೇಲೆ ಅವಳು ಒಪ್ಪಿದ್ದಳು.

ಒಟ್ಟಾರೆ, ನಾವು ಹುಡುಗರು, ಹೇಗೋ ಇರಬಹುದು; ಹುಡುಗಿಯ ಕುಟುಂಬಕ್ಕೆ  ಏನೋ ಹೇಳಬಹುದು; ಆದರೆ ಜೀವನದ ಅರ್ಧಾಂಗಿಯನ್ನು ನಿರ್ಧರಿಸುವಲ್ಲಿ  ಸಿಗುವ ಒಂದು ತಾಸು, ನಮ್ಮ ನಂಬಿ ಬರುವ ಹುಡುಗಿಗೆ  ನಮ್ಮ ನಿಜ ಜೀವನದ ಸ್ಥಿತಿಯನ್ನು ಮನವರಿಕೆ ಮಾಡಿಕೊಡುವುದೇ ಯಾಗಿರಬೇಕು..! ಒಮ್ಮೆ ಒಡೆದ ಸಂಬಂಧ ಮತ್ತೆ ಕೂಡಿಸಲು ಸಾಧ್ಯವೇ ಇಲ್ಲ... ಮತ್ತೆ ಒಡೆಯುತ್ತಲೇ ಇರುತ್ತದೆ. ಅದೇ ಮದುವೆಯ ದುರಂತ.

Wednesday, January 1, 2014

೨೦೧೩ಕ್ಕೆ ಧನ್ಯವಾದಗಳು;೨೦೧೪ಕ್ಕೆ ಸ್ವಾಗತ.

ಹೊಸ ವರ್ಷ ಬಂದಿದೆ ನಿಜ. ಹೊಸತನ ತಂದಿದೆಯೇ ಎನ್ನುವುದರ ಕುರಿತಾಗಿ ಒಂದು ಸಿಂಹಲೋಕನ ಮಾಡಿದರೆ ೨೦೧೩ ನನ್ನ ಬದುಕಿನಲ್ಲಂತೂ ಕೆಲವೊಂದು ಒಳ್ಳೆಯ ಬೆಳವಣಿಗೆಯನ್ನು ತಂದು ಕೊಟ್ಟಿದ್ದು, ೨೦೧೪ ಅತ್ಯಂತ  ಸಂತೋಷದಿಂದ ಕಳೆಯಬಹುದೆಂಬ ಭರವಷೆ ಇದೆ.

ಎಲ್ಲವು ನನ್ನ ಕನಸಿನಂತೆ, ನನ್ನ ಆಕಾಂಕ್ಷೆಯಂತೆ ನಡೆದಿದ್ದರೆ, ಉಡುಪಿಯ ಒಂದು ಓಣಿಯಲ್ಲಿ ನನ್ನದೇ ಒಂದು ಮನೆ ನಿರ್ಮಾಣ ಮಾಡಿ 'ನಂದನ ವನ' ಅಂತಲೋ, 'ನಂದ ಗೋಕುಲ' ಅಂತಲೋ ಹೆಸರಿಟ್ಟು, ನಿಮಗೆಲ್ಲರಿಗೂ ಕರೆಸಿ, ಒಂದು ಉಡುಪಿಯ ಊಟ ಹಾಕುತಿದ್ದೇನೋ ಏನೋ? ಆಗ  ನೀವೆಲ್ಲ, 'ವೆಂಕಿ ಉಡುಪಿಯಲ್ಲಿ ಸೆಟ್ಲ್' ಎಂದು ಹೇಳುವುದನ್ನು ಕೇಳಿ, ಅಂಗಿಯ ಕಾಲರ್ ಏರಿಸದೆ ಇರುತ್ತಿರಲಿಲ್ಲ.

   'ಕಾಲ'ದ ಪ್ರಭಾವ ಅದೆಷ್ಟು ಕ್ರೂರ ಅನಿಸುತ್ತದೆ ಕೆಲವೊಮ್ಮೆ. ಆದರೆ 'ಕಾಲ'ದ ಮೇಲೆ ನಮಗಾರಿಗೂ ನಿಯಂತ್ರಣ ಇಲ್ಲ. 'ಕಾಲ'ಕ್ಕೆ ಕೈ  ಮುಗಿದು ಮುಂದೆ ಸಾಗುವುದೇ ಬದುಕು; ಅದೇ ಸಾಧನೆ.

೨೦೧೩ರ ಆರಂಭದಲ್ಲಿ ನಾನು ಉಡುಪಿಯಲ್ಲಿದ್ದೆ. ಇತ್ತ ಕಡೆ ಉದುಪಿಯೆಂಬ ಭಾವನಾತ್ಮಕ ಸಾಂಸ್ಕೃತಿಕ ಪ್ರಪಂಚವನ್ನು ಬಿಡಲಾಗದೆ, ಅಲ್ಲಿಯೂ ಇರಲಾಗದ ಸನ್ನಿವೇಶ ನನಗೆ ಎದುರಾಗಿತ್ತು. ನಾನು ಉಡುಪಿಯನ್ ಎಂದು ಬದಲಾಗುತ್ತೇನೆ ಎಂದು ಬಹಳ ದಿನಗಳಿಂದಲೂ ಅಂದುಕೊಂಡಿದ್ದೆ. ಉಡುಪಿಯೇ ನನ್ನ ಕೊನೆಯ ಸ್ಥಾನ ಎಂದೆಲ್ಲ ಗೆಳೆಯರಿಗೆ ಹೇಳಿದ್ದೆ. ನಾನು ಮನೆಯನ್ನೂ ಖರದಿಸುವ ನಿರ್ಧಾರಕ್ಕೂ ಬಂದಿದೆ. ಆದರೆ, ೨೦೧೩ರ ಆರಂಭಿಕ ಕಾಲದ ವೃತ್ತಿಗತ ಘಟನೆಗಳು ನನ್ನನ್ನು ಬೆಂಗಳೂರಿಗೆ ದೂಡಿತು. ಇಷ್ಟ ಇಲ್ಲದ ನಗರದಲ್ಲಿ, ಸಾವಿರ ಜನರನ್ನು, ನನ್ನ ಶಿಕ್ಷಣವನ್ನು, ನನ್ನ ಹಣೆಬರಹವನ್ನು ಶಪಿಸುತ್ತ  ಹೆಜ್ಜೆ ಇಡುತ್ತಿದ್ದೆ. ಆಕಾಲದಲ್ಲಿ ಬಹಳ ದು:ಖದಲ್ಲಿದ್ದೆ.

ಆದರೆ, ಆಗುವುದೆಲ್ಲ ಒಳ್ಳೆಯದಕ್ಕೆ ಅನ್ನುವಂತೆ, ನಾನು ಬಯಸದ ಎದುರಾದ ಕಾಲದ ಬದಲಾವಣೆಗಳು ನನ್ನನ್ನು ಒಂದು ರೀತಿಯಲ್ಲಿ ಹೊಸತನವನ್ನು ತಂದು ಕೊಟ್ಟಿತ್ತು. ಉಡುಪಿ ಎಂಬ ನಗರದ ಜೊತೆ ನಾನು ಹೊಂದಿದ್ದ ಅವಿನಾಭಾವ ಸಂಬಂಧ ವನ್ನು ಕಳೆದು ಕೊಳ್ಳಬೇಕಾಗಿ ನಿರ್ಧಾರಕ್ಕೆ ಬಂದೆ. ನನ್ನನ್ನು ೬ ವರ್ಷ ನೌಕರಿ ನೀಡಿ ,ಸೇವೆಗೆ ಅನುವು ಮಾಡಿಕೊಟ್ಟ  ಕರ್ನಾಟಕ ಮೈಕ್ರೋಎಲೆಕ್ಟ್ರಾನಿಕ್ಸ್  ಸಂಸ್ಥೆಗೆ ಕೊನೆಯ ನಮನ ಸಲ್ಲಿಸಿದೆ. ಆರು ವರ್ಷಗಳಲ್ಲಿ  ಸಹೋದ್ಯೋಗಿಗಳ ಜೊತೆ  ಗಳಿಸಿದ್ದ  ಬಾಂಧವ್ಯಕ್ಕೆ ಪ್ರತಿಯಾಗಿ, 'ಬೈ ಬೆಸ್ಟ್ ಆಫ್ ಲಕ್' ಎಂದು ಕೈ ಕಲುಕಿ ಶುಭ ವಿದಾಯ ಹೇಳಿದೆ. ಯಾವತ್ತು ನನಗೆ ಪುಸ್ತಕಗಳನ್ನು ನೀಡಿ ಸಹಕರಿಸಿದ್ದ,ಮಣಿಪಾಲದ ನೆಹರು ಗ್ರಂಥಲಾಯಕ್ಕೆ ನಮನ ಸಲ್ಲಿಸಿದೆ. ಯಕ್ಷಗಾನ ರೂಪದಲ್ಲಿ ನನ್ನ ಮನಸ್ಸಿನ ಮೇಲೆ ಅಹ್ವನೆಗೆ ಬರುವ ದೇವ ಶ್ರೀ ಕೃಷ್ಣನಿಗೆ ನಮಸ್ಕರಿಸಿದೆ. ಕಲೆ-ಸಂಸ್ಕೃತಿಯ ಸಂಕೇತದಂತಿದ್ದ 'ರಾಜಾಂಗಣ'ಕ್ಕೆ ಅಷ್ಟಾಂಗ ನಮಸ್ಕಾರ ಮಾಡಿದೆ. ಯಕ್ಷಗಾನ ಮತ್ತು ಮಕ್ಕಳ ಶಿಕ್ಷಣಕ್ಕಾಗಿ ದುಡಿಯುತ್ತಿರುವ ಸಂಸ್ಥೆ 'ಕಲಾರಂಗ ' ಕ್ಕೆ ವಿದಾಯ ಹೇಳಿದೆ.ಸಾಕು, ಎಲ್ಲವು ಮುಗಿದಿದೆ.... ಎಂದು  ಹೇಳಿ ಬೃಹತ ನಗರಕ್ಕೆ ಬಂದೆ. ಸಾವಿರ ಜನರ ಮಧ್ಯದಲ್ಲಿ ಒಬ್ಬನಾಗಿ ಬದುಕುತ್ತಿದೇನೆ.

ಇಷ್ಟು ಬದಲಾವಣೆಗಳ ಮಧ್ಯೆ ನನ್ನ ಅನುಭವಕ್ಕೆ ಬಂದಿರುವ ವಿಷಯ ಅಂದರೆ, ಯಾವುದೇ ಪ್ರದೇಶ, ಮನುಷ್ಯನ ಧನಾತ್ಮಕ ಯೋಚನೆ, ಧನಾತ್ಮಕವಾಗಿ ಪ್ರೋತ್ಸಾಹ ನೀಡುವ ಗೆಳೆಯರು, ಅತ್ಮವಿಶ್ವಾಶವನ್ನು  ಕಾಪಿಟ್ಟು ಕೊಳ್ಳುವ ವ್ಯಕ್ತಿತ್ವಕ್ಕಿಂತ  ಶ್ರೇಷ್ಠವಾಗಲಾರದು.

ಹೀಗೆ, ೨೦೧೩ ಒಳಿತನ್ನು, ೨೦೧೪ ಒಳಿತಿನ ಫಲವನ್ನು ಅನುಭವಿಸುವ ಅವಕಾಶ ಕೊಟ್ಟಿದೆ. ಸ್ವಲ್ಪ ಮಜಾ ಮಾಡೋಣ..
ಹ್ಯಾಪಿ ನ್ಯೂ ಇಯರ್... ಹ್ಯಾಪಿ  ನ್ಯೂ ಇಯರ್...
ಹಾಡು ಸಂತೋಷ ಕೆ... ಹಾಡು ಸಂತೋಷ ಕೆ.....!

ನಿಮಗೂ ಒಳ್ಳೆಯ ದಿನಗಳು ಎದುರಾಗಲಿ ಎಂಬ ಹಾರೈಕೆಗಳೊಂದಿಗೆ...
Good  bye  2013 . WELCOME  2014 .