Sunday, October 12, 2014

ಕನಸಿನ ಹುಡುಗಿ -ಸಿಂಚನಾ : Read All Part Once

ಕತೆಯ ಕಾಲ-2010. ಈ ಸಮಯದಲ್ಲಿ ನಾನು ಮಣಿಪಾಲದಲ್ಲಿ ನಾನು ಕೆಲಸದಲ್ಲಿದ್ದೆ.
ನನಗೆ ೨೫೦ ಜನ ಸಹೋದ್ಯೋಗಿಗಳು, ಅದರಲ್ಲಿ ೭೦ ಜನ ನನ್ನ ಜೂನಿಯರ್ ಗಳು ಇದ್ದರು. ಈ ಕತೆ ನನ್ನ ಸುತ್ತಲೇ ಕಟ್ಟಿದ್ದೇನೆ. ಯಾವುದೇ ವ್ಯಕ್ತಿಯ ಬದುಕನ್ನು, ಅಥವಾ ಹಿಂದಿನ ನನ್ನ ಕಂಪನಿಯ ಯಾವುದೇ ವಿಷಯವನ್ನು ನಾನು ಬಳೆಸುತ್ತಿಲ್ಲ. 


  1. ಕನಸಿನ ಹುಡುಗಿ -ಸಿಂಚನಾ ::ಭಾಗ-೧ (ಮಣಿಪಾಲದಲ್ಲಿ ಬಸ್ಸು ಹತ
  2. ಕನಸಿನ ಹುಡುಗಿ -ಸಿಂಚನಾ ::ಭಾಗ-೨ (ಮಣಿಪಾಲದಿಂದ ಪಿರಂಜೆಯ ತ...
  3. ಕನಸಿನ ಹುಡುಗಿ -ಸಿಂಚನಾ ::ಭಾಗ-೩( ಮೂಡುಬಿದರೆಯಲ್ಲಿ ಸಿಂಚನ... 
  4. ಕನಸಿನ ಹುಡುಗಿ -ಸಿಂಚನಾ ::ಭಾಗ-೪(ಪಿರಂಜೆಯಲ್ಲಿ ಸಿಂಚನಾ ಹಿ... 
  5. ಕನಸಿನ ಹುಡುಗಿ -ಸಿಂಚನಾ ::ಭಾಗ-೫(ಪಿರಂಜೆಯಿಂದ ಧರ್ಮಸ್ಥಳಕ್... 
  6. ಕನಸಿನ ಹುಡುಗಿ -ಸಿಂಚನಾ ::ಭಾಗ-೬(ಮಣಿಪಾಲದಲ್ಲಿ ದಿನಗಳು-ಸಿ... 
  7. ಕನಸಿನ ಹುಡುಗಿ -ಸಿಂಚನಾ ::ಭಾಗ-೭ (ಸರಳಾ ಹೆಸರಿಗೆ ಬಂತು ಕಾ...
  8. <wait for next part> 



ಕನಸಿನ ಹುಡುಗಿ -ಸಿಂಚನಾ ::ಭಾಗ-೭ (ಸರಳಾ ಹೆಸರಿಗೆ ಬಂತು ಕಾಲ )

ಮರುದಿನ ಬೆಳಿಗ್ಗೆ ಏಳುವಾಗ ಆನಂದ ಭರಿತ ಮನಸು ಹಾಯಾಗಿತ್ತು. ಚಳಿ ಇರಲಿಲ್ಲ. ಸಂತೋಷವಾದಾಗ ನಿಸರ್ಗ ಅದೆಷ್ಟು ಬೆರಗು ಹುಟ್ಟಿಸುತ್ತದೆ! ಎದ್ದವನು ಶೂ ಧರಿಸಿ, ಮಣಿಪಾಲದ ಟಾಪ್ಮಿಯತ್ತ ನಡೆಯಲಾರಂಭಿಸಿದೆ. ಸೂರ್ಯನ ಆಗಮನ  ಆಗಲೇ ಆಗಿತ್ತು. ಮಣಿಪಾಲದಲ್ಲಿ ಚಳಿಗಾಲ ಅನ್ನುದೆ ಇಲ್ಲ. ನಿಮಗೆ ಚಳಿಗಾಲದ ಅನುಭವ ಆಗಬೇಕಾದರೆ ಬೆಳಿಗಿನ ಜಾವದಲ್ಲಿ ಬೈಕ್ ನ್ನು ೬೦ ಕೀ ಮಿ/ಗಂಟೆ ಓಡಿಸಬೇಕು. ಬೆಟ್ಟ-ಗುಡ್ಡಗಳಿಂದ ಆಗಲೇ ಸೂರ್ಯನ ಕಿರಣಗಳು ಮಂಜಿನ ಮೂಲಕ ಹಾದು ಬರುತ್ತಿದ್ದವು. ಹಾಲು-ಪೇಪರ್ ಹಾಕುವ ಹುಡುಗರು ಸೈಕಲ್ ಮೂಲಕ ಎದುರುಗೊಂಡಿದರು. ಶಾಲೆಗಳಿಗೆ ಯುನಿಫಾರ್ಮ್ ಮಕ್ಕಳು ಅಲ್ಲಿ-ಇಲ್ಲಿ ಎದುರಾಗಿದ್ದರು. KMC ಯಲ್ಲಿ  ಕೆಲಸಕ್ಕೆ ಸೇರುವ ನರ್ಸಗಳು ಆಗಲೇ ಬಸ್ಸಿಗೆ ಕಾಯುತ್ತಿರುವುದು ಅವರ ಸಮವಸ್ತ್ರದ ಮೂಲಕ ಗುರಿತಿಸಿದ್ದೆ.

ನಿಸರ್ಗದ ಸೌಂದರ್ಯದ ಮುಂದೆ ಯಾವ ಪೇಂಟೆಡ್(ಬಣ್ಣ ಬಳಿದ) ಚಿತ್ರ ಕೂಡ ಗೆಲ್ಲಲಾರದು. ನೋಡದೆ ಇರುವುದನ್ನು ನೋಡಿದಾಗ ಮನಸ್ಸಿಗೆ ಆಶ್ಚರ್ಯವಾಗುವುದು ಸಹಜ. ಸೂರ್ಯೋದಯ, ಸೂರ್ಯಸ್ತಮಾನ, ಹುಣ್ಣಿಮೆಯ ಚಂದ್ರ, ಮಂಜಿನ ಆವರಣ, ಬೆಟ್ಟಗಳ ಸಾಲು ಇವೆಲ್ಲ ನಿತ್ಯ ನೋಡಬಹುದಾದ ನಿತ್ಯ ನಿಸರ್ಗದ ಕೌತುಕಗಳಾದರು, ಅವನ್ನು ಗಮನಿಸುವ ಮನಸ್ಸು ಅವಗಳತ್ತ ಸೆಳೆದಾಗ ಸಿಗುವ ಮನಸ್ಸಿನ ಸಂತೋಷ ಅವರ್ಣನೀಯ.ಅವುಗಳನ್ನು ನೋಡುತ್ತಾ ನಮ್ಮವರು ಎಂಬುವವರ ಜೊತೆ ಕಾಫಿ ಸೇವಿಸುತ್ತ ಇದಿದ್ದೆ ಆದರೆ ಅದು ಸ್ವರ್ಗ ಸುಖವೇ..!

ನಾನು ಅದೆಷ್ಟು ದಿನ ಮಣಿಪಾಲದ ಗುಡ್ಡ-ಬೆಟ್ಟಗಳ ಮಧ್ಯೆ ಏಕಾಂಗಿಯಾಗಿ ನಡೆದಾಡಿದ್ದೇನೆ; ಅದೆಷ್ಟು ಸಾರಿ ಟಾಪ್ಮಿ, ಅರ್ಬಿ ಕೊಡ್ಲಿ, ಶಾಂತಿ ನಗರದ ಕೆಳಸ್ತರದ ಬೆಟ್ಟಗಳ ಮಧ್ಯೆ ಸಾಗಿ ಬಂದಿದ್ದೇನೆ. ಗರಿ ಬಿಚ್ಚಿ ಕುಣಿದ ನವಿಲುಗಳನ್ನು ನೋಡಿದ್ದೇನೆ. ಮನಸ್ಸಿಗೆ ಸಂತೋಷವಾದಗೆಲ್ಲ ಯಾರು ಇಲ್ಲದ ಬೆಟ್ಟದ ಮಧ್ಯೆ ಯಕ್ಷಗಾನ ಸಂಭಾಷಣೆ ಮಾಡಿದ್ದೇನೆ. ಕಾಡಿನ ಹೂವುಗಳನ್ನು ಕಿತ್ತಿದ್ದೇನೆ; ಫೋಟೋ ತೆಗೆಸಿದ್ದೇನೆ. ಹಳ್ಳಿಯ ಹುಡುಗನಾದ ನಾನು ವಿವಿಧ ಬಗೆಯ ಕಾಡಿನ ಹಣ್ಣು ಕಿತ್ತು ತಿಂದಿದ್ದೇನೆ. ಕೆಲವೊಮ್ಮೆ ಯಾವುದೋ  ಮನೆಯ ಮುಂದೆ ಹೋಗಿ ನಾಯಿಗಳ  ಕರ್ಕಸ ಸ್ವಾಗತವನ್ನು ಪಡೆದು ಕೊಂಡು ಭಯ ಪಿಡಿತನಾಗಿದ್ದು ಇದೆ.

ಇವತ್ತು, ನಾನು ಭೌತಿಕವಾಗಿ ಏಕಾಂಗಿ. ನನ್ನ ಜೊತೆ ಕೈ ಹಿಡಿದು ನಡೆಯುತ್ತಿದ್ದಂತೆ ಭಾಸವಗುತ್ತಿದ್ದಾಳೆ ನನ್ನ ಸಿಂಚನಾ. ಅವಳಿಗೆ ಹೂವುಗಳನ್ನು ಕಿತ್ತು ಕೊಟ್ಟಂತೆ, ಅವಳು ನಗುತ್ತಲೇ ಸ್ವಿಕರಿಸಿದಂತೆ ಎಲ್ಲವು ಮನಸ್ಸಿನ ಮೂಲೆಗಳಲ್ಲಿ ಆಗುತ್ತಿದೆ. ಎಲ್ಲವು ಭಾವ ಮಾತ್ರ. ಅಲ್ಲಿ ನಾನು-ನಿಸರ್ಗದ ಜೊತೆ ಇರುವ ಸಂಹವನ ಹೊರತು ಬೇರೆಯ  ಯಾವ ಕಾರಣವೂ ಇರಲಿಲ್ಲ. ಸಿಂಚನಾ ಎಲ್ಲೆಲ್ಲು ನನ್ನ ಆವರಿಸಿಕೊಂಡಿದ್ದಾಳೆ.

ಬೆಳಿಗ್ಗಿನ ವಾಕ್ ನಿಂದ ಮನೆಗೆ ಮರುಳಿ ಬಂದು, ಸ್ನಾನ-ಪೂಜೆ ಮುಗಿಸಿ, ೯:೦೦ ಕ್ಕೆ ಸರಿಯಾಗಿ ಕೀ ಚೈನ್ ಇರುವ   ಬೈಕ್ ಕೀ ಹಾಕಿ ಬೈಕ್  ರೈಡ್ ಮಾಡುತ್ತಾ ರೋಮ್ಯಾಂಟಿಕ್ ಮೂಡನಲ್ಲೇ ಆಫೀಸ್ ಸೇರಿದೆ (ಎಲ್ಲವು ಕಂಗ್ಲಿಷ್ ಪದಗಳು ). ಆಗಲೇ ಕಚೇರಿಯ ಊಟದ ಮನೆಯಲ್ಲಿ(cafteria ) ದಲ್ಲಿ ಸೇರಿದ  ನಾಲ್ಕಾರು ಸಹೋದ್ಯೋಗಿಗಳ ಜತೆಯಲ್ಲಿ ನಾನು ಸೇರಿದೆ. ಮೇಜಿನ ಮೇಲೆ ಕುಳಿತುಕೊಳ್ಳುವಾಗ, ಅದ್ಭುತ ಹಿರೋ ಬಾಡಿ ಲ್ಯಾಂಗ್ವೇಜ್ ನಲ್ಲೆ  ಬಂದ ನಾನು ಕೀ ಚೈನ್ ಇಟ್ಟುದ್ದನು ನೋಡಿದರು ನನ್ನ ಸುತ್ತಲಿನ ಸಹೋದ್ಯೋಗಿಗಳು.

ಕೀ ಚೈನ್ ಆಕರ್ಷಣೆಯ ಕೇಂದ್ರವಾಗಿ ಎಲ್ಲರು ಎತ್ತಿ ನೋಡಿದರು. ಕೀ ಚೈನ್ ಗೆ ಲೆಟರ್-ಗಳು ಇದ್ದರೆ ಅದು ಖಂಡಿತ ಹುಡುಗ-ಹುಡುಗಿಯ ಹೆಸರು ಇದ್ದೆ ಇರುತ್ತದೆ ಅನ್ನುದು ಒಂದು ಸಹಜ ನಿಯಮವೇ ಆಗಿದೆ. ಬಹುಶ: ಪ್ರೀತಿಯ ಒಂದು ಬಗೆಯ ಆನಂದದ ತೋರ್ಪಡಿಕೆಗಾಗಿ ಹೀಗೆಲ್ಲ ಮಾಡುತ್ತಾರೋ ನಾ ಕಾಣೆ. ಆದರೆ, ಸಿಂಚನಾ ಎಂಬ ಸೌಂದರ್ಯದ ಮಧ್ಯೆ ನಾನು ಹಲವು ಬಗೆಯ ಸಂತೋಷದ ತುಡಿತದಲ್ಲಿ ಕೀ ಚೈನ್ ಎತ್ತಿಕೊಂಡುದ್ದು ಹೌದು. ಕೀ ಚೈನ್ ಎತ್ತಿಕೊಂಡಿದ್ದ ಸಹೋದ್ಯೋಗಿಗಳಲ್ಲಿ ಒಬ್ಬನಾದ ರಾಜು, "ಎನಲೇ ವೆಂಕಿ, ಕೀ ಚೈನ್ ಯಾವಾಗ ಬಂತ್ತು ?  'S ' ಲೆಟರ್ ಯಾರದಪ್ಪ?" ನಾಲ್ಕಾರು ಜನರ ಮಧ್ಯ ಒಂದು ಪ್ರಶ್ನೆ ಎಲ್ಲರನ್ನು ಆಕರ್ಷಿತರಾಗಿ, " ಯಾವುದಾದರು ಹುಡುಗಿಯ ಹೆಸರೇ ಇರುತ್ತೆ ಬಿಡು..!" ಎಂದ ಸುಧೀಶ. ಮಾತು ಎಲ್ಲೆಲೋ ಹೊರಟು, ಆಫೀಸ್ ನ   'S ' ನಿಂದ ಆರಂಭವಾಗುವ ಎಲ್ಲ ಹುಡುಗಿಯರ  ಹೆಸರಿಗೂ ಅದು ತಳಕು ಹಾಕಲು ಆರಂಭಿಸಿತ್ತು. ಒಬ್ಬರು ಒಂದು ಹೆಸರನ್ನು ಹೇಳಿ, 'ಇವಳದೇ' ಎಂದು ಹೇಳಲು ಹೊರಟರೆ ಇನ್ನೊಬ್ಬರು  ಇನ್ನೊಬ್ಬಳ ಹೆಸರು ಹೇಳ ತೊಡಗಿದರು. ಹೀಗೆ   ಟೇಬಲ್ ಮೇಲೆ ಎಲ್ಲ ಹುಡುಗಿಯರ ಹೆಸರು  ನನ್ನ ಹೆಸರ ಮುಂದೆ ಜೋಡಿಸಿ ಸಮಾಧಾನ ಪಟ್ಟರು. ನಾನು ಯಾರ ಹೆಸರು ಹೇಳದೆ, "ಅದು ಹುಡುಗಿಯ ಹೆಸರೇ ಅಲ್ಲ ; S  stands  for  single " ಎಂದು ಹೇಳಿ ತಪ್ಪಿಸಲು ಯತ್ನಿಸಿದೆ. ಆದರೆ, ಒಂದು ವರ್ಷದ ಹಿಂದೆ, ಕ್ವಿಜ ಪ್ರೊಗ್ರಾಮ್ ಒಂದರಲ್ಲಿ ನನ್ನ ಜೊತೆಯಲ್ಲಿ ಸಾಥ್ ನೀಡಿದ್ದ  ಸರಳಾ ಳ  ಹೆಸರು  ನನ್ನ ಕೀ ಚೈನ್ ಮೂಲಕ ನನ್ನ ಹೆಸರಿಗೆ ತಳುಕಿ ಕೊಂಡಿತ್ತು. ಬ್ರೇಕ್ಫಾಸ್ಟ್  ಮುಗಿಯುವ ಹೊತ್ತಿಗೆ, 'ವೆಂಕಟ್ & ಸರಳಾ' ಎಂಬ ಹೆಸರು ಎಲ್ಲ ಟೇಬಲ್  ಜೊತೆಗಾರರು ಒಪ್ಪಿಕೊಂಡು, ಹಾಸ್ಯ ಚತಾಕಿಗಳೊಂದಿಗೆ  ಮಾತು ಮುಗಿಸಿ ನಡೆದರು.

ಸರಳಾ... ಒಂದು ಸರಳ ಹುಡುಗಿಯೇ. ಉತ್ತರಕರ್ನಾಟಕದ  ಹುಡುಗಿ. ಒಂದು ವರ್ಷದ ಹಿಂದೆ ನಮ್ಮ ಕಂಪನಿ ಗೆ ಇಂಟರ್ವ್ಯೂ ಕೊಟ್ಟಿದ್ದಳು. ನಾನೇ ಅವಳಿಗೆ ಪ್ರಶ್ನೆಗಳನ್ನು ಕೇಳಿದ್ದೆ. ತುಂಬಾ ರೂಪವತಿ ಅಲ್ಲದಿದ್ದರೂ ಬಹಳ ಬುದ್ಧಿವಂತೆ ಹುಡುಗಿ. ಈ ಬುದ್ಧಿವಂತಿಕೆಯನ್ನು  ಗುರುತಿಸಿದ ನಾನು ಕ್ವಿಜ್ ಪ್ರೊಗ್ರಾಮ್ ಒಂದಕ್ಕೆ ಅವಳನ್ನು ಸಾಥ್ ನೀಡುವಂತೆ ಕೇಳಿಕೊಂಡಿದ್ದೆ. ಅವಳು ದೈನ್ಯತೆಯಿಂದಲೇ ' ಓಕೆ ಸರ್' ಎಂದು ಹೇಳಿ ಪ್ರೊಫೆಷನಲ್ ಸಂಬಂಧದಲ್ಲಿಯೇ  ನನ್ನ ಜೊತೆ ಕಾರ್ಯ ಕ್ರಮಕ್ಕೆ ಜೊತೆಯಾಗಿದ್ದಳು. ಅವಳಿಗೆ ನಾನು ಹಿರಿಯ ಸಹೋದ್ಯೋಗಿ, ಇಂಟರ್ವ್ಯೂ ತೆಗೆದುಕೊಂಡವರು ಎನ್ನುವ ಕಾರಣದಿಂದ ಸಹಜವಾಗಿ 'ಸರ್' ಎಂದು ಗೌರವದಿಂದಲೇ ನಡೆದು ಕೊಂಡಿದ್ದಳು. ಇಷ್ಟು ಬಿಟ್ಟರೆ ನಮ್ಮಿಬ್ಬರ ನಡುವೆ ಯಾವ ವಿಷಯಗಳು ಇರಲಿಲ್ಲ.

ಆದರೆ ಗಮನಿಸುವರು ಅದೆಷ್ಟು ಸೂಕ್ಷ್ಮವಾಗಿ ಗಮನಿಸುತ್ತಾರೆ ನೋಡಿ!. ಒಂದು ವರ್ಷದ ಹಿಂದೆ  ಕ್ವಿಜ್ ಪ್ರೊಗ್ರಾಮ್ ಗೆ ನನ್ನ ಜೊತೆ ಯಾದ ಸರಳಾ ನನ್ನ ಪ್ರೇಯಸಿಯಾಗಿಸಿದರು ನನ್ನ ಕಲಿಗ್ ಗಳು. ಅದು ಹಾಸ್ಯದ, ಕುತೂಹಲದ ವಿಷಯವಾಗಿ ಒಂದು ಮಾತು ಆ ಸಂದಭದಲ್ಲಿ ಅವರು ಹೇಳಿದ್ದರು. ಸರಳಾಳ ಕುರಿತಾಗಿ ಒಂದು ಕ್ಷಣ ಕೂಡ  ಸಿಂಚನಾಳ  ಕುರಿತಾಗಿ ಯೋಚಿಸಿದಂತೆ ವಿಚಾರ ಮಾಡಿದವನೇ ಅಲ್ಲ. ನಾನು ಇವರ ಈ ಮಾತುಗಳು ತಲೆಗೆ ಹಾಕಿಕೊಳ್ಳಲೇ ಇಲ್ಲ.

ಆದರೆ, ಕಿಡಿ ಹಚ್ಚಿದ ಮೇಲೆ ಬೆಂಕಿ ಹತ್ತಿ ಉರಿಯಲು ಬಹಳ ಸಮಯ ಬೇಡ. ಅದು ಕಾಡನ್ನು ನಾಶ ಮಾಡಲು ಕ್ಷಣಗಳೇ ಸಾಕು.! 'ವೆಂಕಟ್-ಸರಳಾ ಎಂಬ ಹೆಸರು  ಮಧ್ಯಾಹ್ನದ ಟೀ ವೇಳೆಗೆ ಪ್ರತಿಯೊಂದು ಟೇಬಲ್ ಮೇಲೆ ಪ್ರತಿಧ್ವನಿಸ ತೊಡಗಿತ್ತು. ಸರಳಾ  ಕುರಿತಾಗಿ ಯಾರಾರು ಕಣ್ಣಿಟ್ಟಿದ್ದರು, ಅವಳು ಹಾಗೆ-ಹೀಗೆ ಅಂತೆಲ್ಲ ಕತೆ ವಿಚಿತ್ರವಾಗಿ ನಾನು ಮತ್ತೊಬ್ಬರಿಂದ ಕೇಳುವವಾಗ ಅದು ವಿಪರ್ಯಾಸವಾಗಿ ನನಗೆ ಕಾಡಲು ಕಾರಣವಾಗಿತ್ತು.

ಹಾಗೆ ಸರಳಾ ಕತೆ ಅಷ್ಟೊಂದು ಹರಡಲು ಕಾರಣವಿತ್ತು. ಮನುಷ್ಯನ ಒಂದು ಸಹಜ ಮತ್ತು ಕ್ರೂರ ಆಸೆ ಗಾಸಿಪ್. ಸಾಮಾಜಿಕವಾಗಿ ಒಪ್ಪುವ ವಿಷಯಗಳು ವಾರ್ತೆಯಾದರೆ, ಮತ್ತೊಬ್ಬರ ವಯಕ್ತಿಕ ವಿಷಯಗಳು ಅನಾವಶ್ಯಕವಾಗಿ ಹರಡುವುದಕ್ಕೆ ಗಾಸಿಪ್ ಅನ್ನಬಹುದು. ಹಳ್ಳಿಗಳಲ್ಲಿ ರಾಮಣ್ಣ ಮನೆಯಲ್ಲಿ ಆಕಳು ಕರು ಹಾಕಿರುವುದು ನ್ಯೂಸ್... ಆದರೆ ರಾಮಣ್ಣ ಮತ್ತು ಅವನ ಹೆಂಡತಿಗೆ ಬಾಯಿ-ಬಾಯಿ ಅದುದ್ದು ಗಾಸಿಪ್. ಹಾಗೆಯ ಆಫೀಸ್ ನಲ್ಲಿ ಕಡಿಮೆ ಜನರಿರುವಾಗ ಮಾತನಾಡಲು ಪೇಟೆಂಟ್, ಪೇಪರ್, ಪ್ರಾಜೆಕ್ಟ್ ದಂತ ನ್ಯೂಸ್ ಗಳ ಜೊತೆ  ಸರಳಾ-ವೆಂಕಟ್ ಎಂಬ ಜೊತೆಯೂ ಗಾಸಿಪ್ ಆಗಲು ಸಾಧ್ಯತೆ ಇತ್ತು. ಅದು ಗಾಸಿಪ್ ಚಟಕ್ಕೆ ಬಿದ್ದವರ  ಹಸಿವು ತಣಿಸಲು ಅವಕಾಶ ನೀಡಿತ್ತು.

ಗಾಸಿಪ್ ಚಟದ ದುರಂತವೆಂದರೆ-ಅದು ಯಾವತ್ತು ಅಧಿಕೃತ ವಿಷಯವಲ್ಲ. ಆದರೆ ಕೇಳಿದವರೆಲ್ಲ ಅದನ್ನು ಅಧಿಕೃತ ವಿಷಯವೆಂದೇ ಭಾವಿಸುತ್ತಾರೆ.  ಗಾಸಿಪ್ ಹರಡುವಾಗ ಬರಿ  ಕೀ ಚೈನ್ ನಲ್ಲಿ 'S ' ಮತ್ತು 'V ' ಇರುವುದರಿಂದ ಸರಳಾ-ವೆಂಕಟ್ ಎಂಬುದು ಜೊತೆಯಾಗಿದೆ ಎಂದು ಹೇಳಿದರೆ  ಯಾರು ಬೆಲೆ ಕೊಡಲಾರರು. ಆ ಸುದ್ಧಿ ಹೇಳುವ ಅನಧಿಕೃತ ಪಶುವಿಗೆ ವಿಷಯ ಅಧಿಕೃತವಾಗಿ ಕೇಳುಗನ ಮೇಲೆ ಮುಡಿಸಬೇಕಾದರೆ  'ಬಿಳಿಯ ಕಾಗೆಯನ್ನು, ಒಂದು ಕಾಲಿನ ಹಸುವನ್ನು, ಕಾಲಿರುವ ಹಾವನ್ನು, ಕೊಂಬು ಇರುವ ಕುದುರೆಯನ್ನು' ಸೃಷ್ಟಿಸಿ ಬಿಡುತ್ತಾನೆ.  ಕೇಳುಗ 'ಮತ್ತೆ.. ಮತ್ತೆ...!" ಎಂದು ಉತ್ಸಾಹ ತೋರಿದ ಅಂದರೆ ಗಾಸಿಪ್ ವಿಷಯದಲ್ಲಿನ ವ್ಯಕ್ತಿಯ(ಇಲ್ಲಿ ನಾನು ಮತ್ತು ಸರಳಾ) ಸಮಾಧಿ ಖಂಡಿತ ಆಗಿತ್ತದೆ. ಸರಳಾ  ಹುಟ್ಟು ಹಬ್ಬಕ್ಕೆ ನಾನು ಗಿಫ್ಟ್ ಕೊಟ್ಟೆಯೆಂದು... ನಾವಿಬ್ಬರು ಬೈಕ್ ಮೇಲೆ ಹೋಗಿದ್ದೆವು ಎಂದು.... ನಾನೇ ಅವಳ ಬಸ್ ಟಿಕೆಟ್  ಬುಕ್ ಮಾಡಿರುವುದಾಗಿ .... ಅವಳು ನಾನು ಟೈಗರ್ ಸರ್ಕಲ್ ನಲ್ಲಿ ಒಂದೇ ಕಪ್ ನಲ್ಲಿ ಜ್ಯೂಸು ಕುಡಿದಿರುವುದನ್ನು ನೋಡಿರುವುದಾಗಿ  ವಿಚಿತ್ರ ವಿಷಯಗಳು ಹೊರಬಂದುದ್ದನ್ನು  ನಾನು ದಿನದ ಕೊನೆಯಲ್ಲಿ ಕೇಳಿ ಕಂಗಾಲಾದೆ. ನನಗೆ ಅಸಹ್ಯವಾಗ ತೊಡಗಿತ್ತು. ಸರಳಾ ಸೀದಾ-ಸದಾ ಹುಡುಗಿ ಕೇಳಿ ಏನು ತಿಳಿದಲೋ ಏನೋ ?

ನಾನಂತೂ ಎಲ್ಲವನ್ನು ಮರೆತು ಸಿಂಚನಾ ಕುರಿತಾಗಿ ಯೋಚಿಸುತ್ತಲೇ  ಆಫೀಸ್ ನಿಂದ ಹೊರ ಬಂದೆ.

ಭಾಗ ೮ ರಲ್ಲಿ ಮುಂದುವರಿಯಲಿದೆ ಮುಂದಿನ ಕತೆ.

Sunday, October 5, 2014

ಕನಸಿನ ಹುಡುಗಿ -ಸಿಂಚನಾ ::ಭಾಗ-೬(ಮಣಿಪಾಲದಲ್ಲಿ ದಿನಗಳು-ಸಿಂಚನಾ ನೆನಪಲ್ಲಿ)

ಯಾವತ್ತೂ ಇಲ್ಲದ ಸಂತೋಷ, ಸ್ವರ್ಗ ಲೋಕದ ಆನಂದ  ಮನಸಲ್ಲಿ ಜನಸಿತ್ತು. ಯಾರಿಗೂ ಹೇಳಲಾಗದ ಭಾವನೆಗಳ ಅಲೆ ಮನಸ್ಸಿನಲ್ಲಿ  ವಿವಿಧ ರೀತಿಯಲ್ಲಿ ಅಪ್ಪಳಿಸಿದಾಗ, ಕಣ್ಣು ಮುಚ್ಚಿ ಒಳಗೊಳಗೇ ನಗುತ್ತಿದ್ದೆ . ಹತ್ತಾರು ಸಹೋದ್ಯೋಗಿಗಳ ಮಧ್ಯೆ ಊಟ-ತಿಂಡಿಗೆ ಕುಳಿತಾಗಲು ಸಿಂಚನಾಳ ಭಾವುಕ ಜಗತ್ತು,  ನನ್ನನು ಮೇಜಿನ ಮೇಲೆ ನಡೆಯುವ ಚರ್ಚೆಗಳಿಂದ ದೂರವಾಗಿಸುತ್ತಿದ್ದವು. New  android  ಫೋನ್ ಬಗ್ಗೆ ಮಾತನಾಡಲಿ, ಪೇಟೆಂಟ್ ಗಳ ಕುರಿತಾಗಿ ವಿವರಿಸುತ್ತಿರಲಿ, ನಾಳೆಯ ಕೆಲಸದ  ಕುರಿತಾಗಿ ಚರ್ಚೆ ನಡೆಯಲಿ, ಸಾಲರಿಯ ಕುರಿತಾದ ವಾಖ್ಯನಗಳು ಗುಲ್ಲೆಬ್ಬಿಸಲಿ ನನಗೆ ಯಾವುದು ಸಂಬಂಧವಿಲ್ಲದಂತೆ ನಾನು ಮುಕ್ತ ಮನಸ್ಸಿನಿಂದ ಸಿಂಚನಾ ಕುರಿತಾಗಿ ಭಾವುಕ ಜಗತ್ತಿನಲ್ಲಿ ವಿಹರಿಸುತ್ತಿದ್ದೆ. ಆದರೆ, ನಿದ್ದೆಯಿಂದ ಎಚ್ಚೆತಾಗ ನೈಜತೆ ಅರ್ಥವಾಗುವಂತೆ, 'ಅವಳು ನನಗೆ ಸಿಗಲು ಸಾಧ್ಯವೇ?' ಅನ್ನುವ ಪ್ರಶ್ನೆಗೆ ಬಂದು ನಿಂತಾಗ ಮಾತ್ರ, ಏನು ಕಳೆದುಕೊಂಡವನ ಹಾಗೆ ಗಾಬರಿಯಾಗುತ್ತಿದ್ದೆ.

ನಾನು ಯಾವತ್ತು ಮೌನಿಯಲ್ಲ. ಮಾತು ಇಲ್ಲದೆ ನನ್ನ ದಿನವೇ ನಡೆಯದು. ಎಲ್ಲರನ್ನು ಮಾತನಾಡಿಸುತ್ತಲೇ ಧನಾತ್ಮಕವಾಗಿ ಕಾಲೆಳೆಯುತ್ತಾ ಸಾಗುವುದು ನನ್ನ ದಿನಚರಿಯೇ ಅಂದರೆ ತಪ್ಪಲ್ಲ.ಆದರೆ ಇದು ಅತಿಯಾಗಿ ಕೆಲವೊಮ್ಮೆ ಅಸಹ್ಯವಾಗುತ್ತದೆಯಾದರು ಅದು  ಬಿಡಲು ಮನಸ್ಸಿಲ್ಲ. ಹೊಸಬರು-ಹಳೆಬರು ಎಂದು ಬೇಧವಿಲ್ಲದೆ ಯಾರನ್ನಾದರು ಮಾತನಾಡಿಸುವ ತವಕ. ಆ ಗುಣದಿಂದಲೇ ಯಾವ ಬಸ್ಸು-ಜನ ಜನ್ಗುಲಿಯಿಲ್ಲದ ಹಳ್ಳಿಯಿಂದ ನಾನು ಬೆಂಗಳೂರಿಗೆ ಬಂದೆ. ನನಗೆ ಹೆದರಿಕೆಯೇ ಇಲ್ಲ. ಈ ಗುಣ ಒಳ್ಳೆಯದು, ಕೆಟ್ಟದು ಅನ್ನುವುದು ಆಯಾ ವಿಷಯ ಹಾಗೂ ವಕ್ತಿಗಳ ಮೇಲೆ ಅವಲಂಬಿತವಾಗಿರುತ್ತದೆ.

ನನ್ನ ಮೌನ  ಕಚೇರಿಯಲ್ಲಿ ಹೊಸ ಬದಲಾವಣೆಗೆ ಕಾರಣವಾಯಿತು. ಯಾವ ತಲೆ ಹರಟೆ ಇಲ್ಲದೆ ಸೀದಾ ನನ್ನ ಡೆಸ್ಕ್ ಗೆ ಬಂದು ಕೆಲಸ ಮಾಡುತ್ತಿದ್ದೆ. ಪ್ರತಿದಿನ ಮೊದಲು ಡೆಸ್ಕ್ ಸಮೀಪಿಸುವಾಗ ದೇವರ ಧ್ಯಾನ ಮಾಡುವುದು ರೂಢಿ. ಆದರೆ ಸಿಂಚನಾ ಧ್ಯಾನವಾಗಿದೆ. ಕಂಪ್ಯೂಟರ್ ನ ವಾಲ್ ಪೇಪರ್ ಸಿಂಚನಾ ನಂತ ಹುಡುಗಿಯ ಫೋಟೋ ಹಾಕಿದೆ(ಸಿಂಚನಾ ಫೋಟೋ ಇರಲಿಲ್ಲ). ಇದನ್ನು ಗೂಗಲ್ ನಲ್ಲಿ ಹುಡುಕಲು ಎರಡು ತಾಸು ವ್ಯಯಿಸಿದ್ದೆ. ನಾನು ಸಿನೆಮಾಗಳನ್ನು ನೋಡುತ್ತೆನಾದರು ಯಾವತ್ತೂ ಯಾವ ನಟಿಯನ್ನು, ನಟನ್ನು ರೋಲ್ ಮಾಡೆಲ್ ಎಂದು ಕಂಪ್ಯೂಟರ್ ಸ್ಕ್ರೀನ್ ಗಾಗಲಿ ಮನೆಯ ಗೋಡೆಗಾಗಲಿ ತಂದವನಲ್ಲ. ಆದರೆ, ಸಿಂಚನಾಳ ಫೋಟೋ ಒಂದು ಸಿಗಬಾರದೇ ಎಂದು ಅದೆಷ್ಟೋ ಬಾರಿ ಅಂದು ಕೊಂಡೆ. ಕಂಪ್ಯೂಟರ್ ಸ್ಕ್ರೀನ್ ಗೆ  ಹುಡುಗಿಯನ್ನು ಬದಲಾಯಿಸುತ್ತಲೇ ಹೋದೆ ಹೊರತು ಸಿಂಚನಾಳ ಯಾವ ಚೆಲುವು ಅವಳಲ್ಲಿ ಕಾಣಲಿಲ್ಲ. ಸಿಂಚು ಎಂಬ ಹೆಸರಿಂದ ಕಂಪ್ಯೂಟರ್ ಗೆ ಬೇಕಾದ ಪಾಸ್ವರ್ಡ್ ಗಳು ಬದಲಾದವು. ಸಿಂಚು ಎಂಬ ಹೆಸರು ಎಲ್ಲದಕ್ಕೂ  ಮೌಲ್ಯಯುತವಾಗಿತ್ತು.

ಕಚೆರಿಯಲ್ಲಿ  ಅದೆಷ್ಟೋ ಕೆಲಸಗಳು ಸಮಯಕ್ಕೆ ಸರಿಯಾಗಿ ಮಾಡಬೇಕಾಗಿರುತ್ತವೆ. ಇಲ್ಲದೆ ಹೋದರೆ ನಮ್ಮ ತಲೆಯ ಮೇಲೆ ಕುಳಿತುಕೊಳ್ಳಲು ಸಾಕಷ್ಟು ಜನ ಇದ್ದೆ ಇರುತ್ತಾರೆ. ಒಂದೊಮ್ಮೆ ನಮಗಿಂತ ಕಿರಿಯರು ನಮ್ಮ ತಲೆ ಮೇಲೆ ಕುಳಿತುಕೊಳ್ಳುವ ಪ್ರಸಂಗ ಬಂದಾಗ ಬದುಕು ಖಂಡಿತ ಅಸಹನಿಯವಾಗಿ ಬಿಡುತ್ತದೆ. ಸಣ್ಣವರಿಂದ ಕಲಿಯಬೇಕಾದ ವಿಷಯಗಳಿದ್ದಾಗ  ಕಲಿಯುವುದು ಒಳ್ಳೆಯ ಗುಣ. ಆದರೆ ಸಣ್ಣವರು ನಮ್ಮ ನಿರ್ಲಕ್ಷ್ಯತನವನ್ನು ನೋಡಿ-ನಮ್ಮ ಮೇಲೆ ಅಧಿಕಾರ ನಡೆಸಲು ಮುಂದೆ ಬಂದರೆ ಅಸಹ್ಯವಾಗುವುದು ಸಹಜ. ನಾನು ಸಿಂಚನಾಳ ಮೋಹ ಪಾಶದಲ್ಲಿ ಸಿಲುಕುತಿದ್ದಂತೆ ಕೆಲಸದಲ್ಲಿ ಏರುಪೆರು ಆದವು. ಸಮಯಕ್ಕೆ ಸರಿಯಾಗಿ ಇಮೇಲ್ ಮಾಡುತ್ತಿರಲಿಲ್ಲ, ಸಮಯಕ್ಕೆ ಸರಿಯಾಗಿ ಬೇರೆಯವರಿಗೆ ಉತ್ತರಿಸಲಿಲ್ಲ. ಆದರೆ ಜೊತೆಗೆ ಪ್ರೊಫೆಷನಲ್ ಆಗಿರಬೇಕಾದ ಇಮೇಲ್ ಗಳು  ಪ್ರೀತಿ-ಪ್ರೇಮ ಭಾವದ ಕಲ್ಪಿತ ಶಬ್ಧಗಳು ತೂರಿ ಬಂದವು. ಹಾಗೆಂದು ಕೆಲಸದಲ್ಲಿ ತೊಂದರೆ ಯಾಗಲಿಲ್ಲ.  ಭಾವದ ತುಡಿತಗಳು ತಳಹಬಂದಿಗೆ ಬಂದು 'ಅವಳು ಸಿಗುವಳೇ?' ಎಂಬ ಪ್ರಶ್ನೆ ಎದುರಾದಾಗ ಮಾತ್ರ ೧೫ ನಿಮಿಷ ನಾನು ವಿಚಲಿತನಾಗಿ, ಕಂಪ್ಯೂಟರ್ ನ ಹ್ಯಾಂಗ್ ಆದ ಮಾನಿಟರ್ ತರಹ ಕುಳಿತಿರುತ್ತಿದ್ದೆ.

ಆಲೋಚನೆಗಳ ಸರಣಿಯಲ್ಲಿ ಹಾಯಾಗಿದ್ದ ನಾನು ೫.೩೦ ಕ್ಕೆ ಆಫೀಸ್ ಬಿಟ್ಟು, ಬೈಕ್ ಹತ್ತಿ ಮೊದಲ ಭಾರಿ ನಾನೇ ನನ್ನನ್ನು ಹೀರೋ ಅಂದು ಕೊಂಡು ಬೈಕ್ ಹತ್ತಿ ಟೈಗರ್ ಸರ್ಕಲ್ ಗೆ ಹೋದೆ. ಯಾವ ಹುಡುಗಿಯನ್ನು ನೋಡಲಿಲ್ಲ. ನನಗೆ ಮನಸ್ಸು ಇಲ್ಲ. ನನಗೆ ಒಬ್ಬಳು ಸಿಕ್ಕಿದ್ದಳಲ್ಲವೇ? ಎಷ್ಟೊಂದು ಶುದ್ಧ ಭಾವನೆಗಳು...!. ಒಬ್ಬನೇ ಕುಳಿತು ಹೋಟೆಲ್ ಪಾಂಗಳಕ್ಕೆ ಬಂದು ಟೀ ಕುಡಿದೆ. ಹಾಗೆ  ತಿರುಗಿ ಬರುವಾಗ ದಾರಿಯಲ್ಲಿ ಕೀ ಚೈನ್ ಮಾರುತ್ತಿರುವುದನ್ನು ನೋಡಿದೆ. ಅಂತು ಹುಡುಕಾಡಿ 'S '(ಸಿಂಚು) ಮತ್ತು 'V ' (ವೆಂಕಟ್) ಎಂದು ಎರಡು ಅಕ್ಷರಗಳ ಜೊತೆಯನ್ನು ಮಾಡಿ ಕೀ ಚೈನ್ ರೆಡಿ ಮಾಡಿ ಮನೆಗೆ ಬಂದೆ. ನಾನು ಯಾವತ್ತು ಬೈಕ್ ಕೀ ಗೆ ಚೈನ್ ಹಾಕಿಸಿದವನಲ್ಲ.

ಮನೆಗೆ ಬಂದವನು ಜೀವನದಲ್ಲಿ ಇಂಜಿನಿಯರಿಂಗ್ ಗೆ ಸಂಬಂಧ ಪಡದ ಮೊದಲ ಚಿತ್ರ ಬಿಡಿಸಲು ಕುಳಿತುಕೊಂಡೆ. ಸಿಂಚನಾ ಚಿತ್ರ ಸಿಗದೇ ಇದ್ದರಿಂದ ನಾನೇ ಬಿಡಿಸಬೇಕು ಎಂಬ ಅಭಿಮತ. ಆದರೆ ಚಿತ್ರ ಕುರೂಪಿಯಾಗುತ್ತಲೇ ಇತ್ತು. ಜಡೆ ಬಿಡಿಸದರೆ ಕಿವಿಯ ಓಲೆ ಕಾಣಿಸುತ್ತಿರಲಿಲ್ಲ. ಮೂಗು ಬಿಡಿಸಿದರೆ ತುಟಿಗಳ ಅಂದ ಕೆಡುತ್ತಿತ್ತು. ಗಲ್ಲದ ಎತ್ತರ ತಗ್ಗುಗಳು ಎದ್ದು ಬರುತ್ತಲೇ ಇರಲಿಲ್ಲ. ಕಣ್ಣಿನ ರೆಪ್ಪೆಗಳು ಮೂಡಿಸುವುದು ಸಾಧವೇ ಆಗುತ್ತಿರಲಿಲ್ಲ.ಯಾಕಾದರೂ ನಾನು ಚಿತ್ರಕಲೆ ಕಲಿಯಲಿಲ್ಲ ಎಂದು ಶಪಿಸಿಕೊಂಡೆ.

ನನ್ನ ಕೈ ಯಲ್ಲಿ ಸ್ಮಾರ್ಟ್ ಫೋನ್ ಇತ್ತು. ಆದರೆ ಅವಳ ಚಿತ್ರ ತೆಗೆಯ ಬೇಕೆಂದು ಬಸ್ಸಿನಲ್ಲಿ ಸಾಧ್ಯವಾಗಲಿಲ್ಲ. ಅದು ಸಾಮಾಜಿಕವಾಗಿ ಸರಿಯೂ ಆಗುತ್ತಿರಲಿಲ್ಲ. ಅಂತು...ಚಿತ್ರಕಲೆ ಗೆ ಮೊದಲ ಬಾರಿ ಪ್ರಯತ್ನ ಮಾಡಿ, ನನಗೆ ಒಲಿಯದ ಕಲೆಯೆಂದು ಪೇಪರ್ ಹರಿದು ಹಾಕಿ, ಹಾಡು ಬರೆಯಲು ಪ್ರಯತ್ನ ಮಾಡಿದೆ.

ಹಾಡು ಸುಲಭವೇ? ಚಿತ್ರ ಕಲೆಯಾದರೂ ಕೈಯಿಂದ ಗೆರೆ ಎಳೆಯುವುದು...! ಹಾಡು ತಲೆಯಿಂದ ಬರಬೇಕು..! ಭಾವ ಇದ್ದರೇನಂತೆ ಅದನ್ನು ವ್ಯಕ್ತ ಪಡಿಸಲು ಶಬ್ಧಗಳು ಬೇಕು;ಅಚ್ಚುಕಟ್ಟಾದ ಆದಿ-ಅಂತ್ಯ ಪ್ರಾಸಗಳು ಬೇಕು! ಎಲ್ಲೋ ಕೇಳಿದ ಯಕ್ಷಗಾನ ಹಾಡುಗಳ ಶಬ್ಧಗಳೇ ನನ್ನ ಹಾಡುಗಳಾಗಿ ಬರುತ್ತಿದ್ದವು. ಏನೇ ಪ್ರಯತ್ನ ಮಾಡಿದರು ನನ್ನ ಸ್ವಂತ ಹಾಡು ಎದ್ದು ಬರಲೇ ಇಲ್ಲ. ಎಷ್ಟೇ ಪ್ರಯತ್ನ ಮಾಡಿದರು
     'ಸಿಂಚು ನಿನ್ನ ನೋಡಿದೆ....
      ನಿ ಎನ್ನ ಕಾಡಿದೆ'
 ಎಂದು ಬರೆದು ಸಾಕಾಗಿ ಮಲಗಿದೆ.

ಇದನ್ನು ಎಷ್ಟು ಜನ ಸತ್ಯವೆಂದು ಭಾವಿಸುತ್ತಿರೋ ಗೊತ್ತಿಲ್ಲ. ಗಂಡು ಜಾತಿಗೆ ಏನಾದರು ಒಂದು ಸಾಧನೆ  ಮಾಡಬೇಕು ಎಂಬ  ಉತ್ಸಾಹ ಇರಬೇಕು ಅಂದರೆ : ಒಂದು ಅವರು ಹೆಣ್ಣಿನ ಭಾವದ ಸಮಿಪ್ಪಕ್ಕೆ ಬಂದಿರಲೇಬಾರದು  ಅಥವಾ ಭಾವದ ಅಲೆಗಳ ಅಪ್ಪಳಿಸುವಿಕೆ ನಿತ್ಯವೂ ಆಗುತ್ತಿರಬೇಕು. ಯಾಕೆ ಹೇಳಿದೆ ಅಂದರೆ ಸಿಂಚನಾ ಭೇಟಿಯಾಗದೆ ಹೋಗಿದ್ದಾರೆ ಯಾವತ್ತು ನನ್ನಿಂದ ಚಿತ್ರ ಕಲೆ ಸಾಧ್ಯವೇ ಎಂದು ಒಂದು  ನಿಮಿಷ ಕೂಡ ನಾನು ಯೋಚಿಸುತ್ತಿರಲಿಲ್ಲವೋ ಏನೋ!.

ಹೆಣ್ಣು ಉತ್ಸದ ಚಿಲುಮೆ. ಹೆಣ್ಣು ಭಾವದ ಸೃಜನಾತ್ಮಕ ಕ್ರಿಯೆಯ ಮೇಲೆ ಪ್ರಭಾವ ಬಿರುವ ವಿಶೇಷ ಗುಣ ಹೊಂದಿದ್ದಾಳೆ. ಬಹುಶ: ಈ ಕಾರಣದಿಂದಲೇ ಹೆಣ್ಣು ವಿವಿಧ ಭಂಗಿಗಳಿಂದ ಶಿಲಾಬಾಲಿಕೆಯಾರಾಗಿ ನಿರ್ಮಿಸಿರಬೇಕು.ಶಿಲಾಬಾಲಿಕೆಯರ ದೇಹ ರಚನೆಯಿಂದ ನೋಡುವ ದೃಷ್ಟಿಯಿಂದ ಕಾಮ ಭಾವ ಸ್ಪೂರಣ ಗೊಳ್ಳಬಹುದು; ಆದರೆ ಕಾಲ್ಪನಿಕ ಜಗತ್ತಿನ ಸೌಂದರ್ಯ ಭಾವದಿಂದ ನೋಡಿದಾಗ ಅದೊಂದು ಬದುಕಿನ ಉತ್ತೇಜಕ ಶಕ್ತಿ. ಭರತ ನಾಟ್ಯದಲ್ಲೂ ಇದೆ ಭಾವ.  ದೇಹದ ಆಂಗಿಕ ರಚನೆಯ ಸೌಂದರ್ಯಗಿಂತಲೂ  ಅಂಗ-ಸೌಷ್ಟವಗಳ ಭಾವ ಪೂರಿತ ಚಲನ ವಲನ ಅಸಕ್ತಿಯಾಗಿರುತ್ತದೆ. ಹೀಗಾಗಿ ಎಲ್ಲ ಹೆಣ್ಣುಗಳು ಒಂದೇ, ಆದರೆ ನಾವು ನೋಡುವ ದೃಷ್ಟಿ ನಮ್ಮ ಭಾನೆಗಳನ್ನು ನಿರ್ಮಿಸುತ್ತಾ ಸಾಗುತ್ತದೆ.

ಇಷ್ಟೊಂದು ಆಲೋಚನೆಯ ಮಧ್ಯೆ ಸ್ನಾನ-ಊಟ ಮುಗಿಸಿ, ಹಾಸಿಗೆಯ ಮೇಲೆ ಹೊರಳಾಡುತ್ತಿದ್ದೆ. ನಿದ್ದೆಯ ಸಮಯ ಗೊತ್ತಿಲ್ಲ.

ಮುಂದಿನ ಭಾಗದಲ್ಲಿ ಸಿಂಚನಾ ಕತೆ ಮುಂದುವರಿಯುತ್ತದೆ.