Wednesday, January 1, 2014

೨೦೧೩ಕ್ಕೆ ಧನ್ಯವಾದಗಳು;೨೦೧೪ಕ್ಕೆ ಸ್ವಾಗತ.

ಹೊಸ ವರ್ಷ ಬಂದಿದೆ ನಿಜ. ಹೊಸತನ ತಂದಿದೆಯೇ ಎನ್ನುವುದರ ಕುರಿತಾಗಿ ಒಂದು ಸಿಂಹಲೋಕನ ಮಾಡಿದರೆ ೨೦೧೩ ನನ್ನ ಬದುಕಿನಲ್ಲಂತೂ ಕೆಲವೊಂದು ಒಳ್ಳೆಯ ಬೆಳವಣಿಗೆಯನ್ನು ತಂದು ಕೊಟ್ಟಿದ್ದು, ೨೦೧೪ ಅತ್ಯಂತ  ಸಂತೋಷದಿಂದ ಕಳೆಯಬಹುದೆಂಬ ಭರವಷೆ ಇದೆ.

ಎಲ್ಲವು ನನ್ನ ಕನಸಿನಂತೆ, ನನ್ನ ಆಕಾಂಕ್ಷೆಯಂತೆ ನಡೆದಿದ್ದರೆ, ಉಡುಪಿಯ ಒಂದು ಓಣಿಯಲ್ಲಿ ನನ್ನದೇ ಒಂದು ಮನೆ ನಿರ್ಮಾಣ ಮಾಡಿ 'ನಂದನ ವನ' ಅಂತಲೋ, 'ನಂದ ಗೋಕುಲ' ಅಂತಲೋ ಹೆಸರಿಟ್ಟು, ನಿಮಗೆಲ್ಲರಿಗೂ ಕರೆಸಿ, ಒಂದು ಉಡುಪಿಯ ಊಟ ಹಾಕುತಿದ್ದೇನೋ ಏನೋ? ಆಗ  ನೀವೆಲ್ಲ, 'ವೆಂಕಿ ಉಡುಪಿಯಲ್ಲಿ ಸೆಟ್ಲ್' ಎಂದು ಹೇಳುವುದನ್ನು ಕೇಳಿ, ಅಂಗಿಯ ಕಾಲರ್ ಏರಿಸದೆ ಇರುತ್ತಿರಲಿಲ್ಲ.

   'ಕಾಲ'ದ ಪ್ರಭಾವ ಅದೆಷ್ಟು ಕ್ರೂರ ಅನಿಸುತ್ತದೆ ಕೆಲವೊಮ್ಮೆ. ಆದರೆ 'ಕಾಲ'ದ ಮೇಲೆ ನಮಗಾರಿಗೂ ನಿಯಂತ್ರಣ ಇಲ್ಲ. 'ಕಾಲ'ಕ್ಕೆ ಕೈ  ಮುಗಿದು ಮುಂದೆ ಸಾಗುವುದೇ ಬದುಕು; ಅದೇ ಸಾಧನೆ.

೨೦೧೩ರ ಆರಂಭದಲ್ಲಿ ನಾನು ಉಡುಪಿಯಲ್ಲಿದ್ದೆ. ಇತ್ತ ಕಡೆ ಉದುಪಿಯೆಂಬ ಭಾವನಾತ್ಮಕ ಸಾಂಸ್ಕೃತಿಕ ಪ್ರಪಂಚವನ್ನು ಬಿಡಲಾಗದೆ, ಅಲ್ಲಿಯೂ ಇರಲಾಗದ ಸನ್ನಿವೇಶ ನನಗೆ ಎದುರಾಗಿತ್ತು. ನಾನು ಉಡುಪಿಯನ್ ಎಂದು ಬದಲಾಗುತ್ತೇನೆ ಎಂದು ಬಹಳ ದಿನಗಳಿಂದಲೂ ಅಂದುಕೊಂಡಿದ್ದೆ. ಉಡುಪಿಯೇ ನನ್ನ ಕೊನೆಯ ಸ್ಥಾನ ಎಂದೆಲ್ಲ ಗೆಳೆಯರಿಗೆ ಹೇಳಿದ್ದೆ. ನಾನು ಮನೆಯನ್ನೂ ಖರದಿಸುವ ನಿರ್ಧಾರಕ್ಕೂ ಬಂದಿದೆ. ಆದರೆ, ೨೦೧೩ರ ಆರಂಭಿಕ ಕಾಲದ ವೃತ್ತಿಗತ ಘಟನೆಗಳು ನನ್ನನ್ನು ಬೆಂಗಳೂರಿಗೆ ದೂಡಿತು. ಇಷ್ಟ ಇಲ್ಲದ ನಗರದಲ್ಲಿ, ಸಾವಿರ ಜನರನ್ನು, ನನ್ನ ಶಿಕ್ಷಣವನ್ನು, ನನ್ನ ಹಣೆಬರಹವನ್ನು ಶಪಿಸುತ್ತ  ಹೆಜ್ಜೆ ಇಡುತ್ತಿದ್ದೆ. ಆಕಾಲದಲ್ಲಿ ಬಹಳ ದು:ಖದಲ್ಲಿದ್ದೆ.

ಆದರೆ, ಆಗುವುದೆಲ್ಲ ಒಳ್ಳೆಯದಕ್ಕೆ ಅನ್ನುವಂತೆ, ನಾನು ಬಯಸದ ಎದುರಾದ ಕಾಲದ ಬದಲಾವಣೆಗಳು ನನ್ನನ್ನು ಒಂದು ರೀತಿಯಲ್ಲಿ ಹೊಸತನವನ್ನು ತಂದು ಕೊಟ್ಟಿತ್ತು. ಉಡುಪಿ ಎಂಬ ನಗರದ ಜೊತೆ ನಾನು ಹೊಂದಿದ್ದ ಅವಿನಾಭಾವ ಸಂಬಂಧ ವನ್ನು ಕಳೆದು ಕೊಳ್ಳಬೇಕಾಗಿ ನಿರ್ಧಾರಕ್ಕೆ ಬಂದೆ. ನನ್ನನ್ನು ೬ ವರ್ಷ ನೌಕರಿ ನೀಡಿ ,ಸೇವೆಗೆ ಅನುವು ಮಾಡಿಕೊಟ್ಟ  ಕರ್ನಾಟಕ ಮೈಕ್ರೋಎಲೆಕ್ಟ್ರಾನಿಕ್ಸ್  ಸಂಸ್ಥೆಗೆ ಕೊನೆಯ ನಮನ ಸಲ್ಲಿಸಿದೆ. ಆರು ವರ್ಷಗಳಲ್ಲಿ  ಸಹೋದ್ಯೋಗಿಗಳ ಜೊತೆ  ಗಳಿಸಿದ್ದ  ಬಾಂಧವ್ಯಕ್ಕೆ ಪ್ರತಿಯಾಗಿ, 'ಬೈ ಬೆಸ್ಟ್ ಆಫ್ ಲಕ್' ಎಂದು ಕೈ ಕಲುಕಿ ಶುಭ ವಿದಾಯ ಹೇಳಿದೆ. ಯಾವತ್ತು ನನಗೆ ಪುಸ್ತಕಗಳನ್ನು ನೀಡಿ ಸಹಕರಿಸಿದ್ದ,ಮಣಿಪಾಲದ ನೆಹರು ಗ್ರಂಥಲಾಯಕ್ಕೆ ನಮನ ಸಲ್ಲಿಸಿದೆ. ಯಕ್ಷಗಾನ ರೂಪದಲ್ಲಿ ನನ್ನ ಮನಸ್ಸಿನ ಮೇಲೆ ಅಹ್ವನೆಗೆ ಬರುವ ದೇವ ಶ್ರೀ ಕೃಷ್ಣನಿಗೆ ನಮಸ್ಕರಿಸಿದೆ. ಕಲೆ-ಸಂಸ್ಕೃತಿಯ ಸಂಕೇತದಂತಿದ್ದ 'ರಾಜಾಂಗಣ'ಕ್ಕೆ ಅಷ್ಟಾಂಗ ನಮಸ್ಕಾರ ಮಾಡಿದೆ. ಯಕ್ಷಗಾನ ಮತ್ತು ಮಕ್ಕಳ ಶಿಕ್ಷಣಕ್ಕಾಗಿ ದುಡಿಯುತ್ತಿರುವ ಸಂಸ್ಥೆ 'ಕಲಾರಂಗ ' ಕ್ಕೆ ವಿದಾಯ ಹೇಳಿದೆ.ಸಾಕು, ಎಲ್ಲವು ಮುಗಿದಿದೆ.... ಎಂದು  ಹೇಳಿ ಬೃಹತ ನಗರಕ್ಕೆ ಬಂದೆ. ಸಾವಿರ ಜನರ ಮಧ್ಯದಲ್ಲಿ ಒಬ್ಬನಾಗಿ ಬದುಕುತ್ತಿದೇನೆ.

ಇಷ್ಟು ಬದಲಾವಣೆಗಳ ಮಧ್ಯೆ ನನ್ನ ಅನುಭವಕ್ಕೆ ಬಂದಿರುವ ವಿಷಯ ಅಂದರೆ, ಯಾವುದೇ ಪ್ರದೇಶ, ಮನುಷ್ಯನ ಧನಾತ್ಮಕ ಯೋಚನೆ, ಧನಾತ್ಮಕವಾಗಿ ಪ್ರೋತ್ಸಾಹ ನೀಡುವ ಗೆಳೆಯರು, ಅತ್ಮವಿಶ್ವಾಶವನ್ನು  ಕಾಪಿಟ್ಟು ಕೊಳ್ಳುವ ವ್ಯಕ್ತಿತ್ವಕ್ಕಿಂತ  ಶ್ರೇಷ್ಠವಾಗಲಾರದು.

ಹೀಗೆ, ೨೦೧೩ ಒಳಿತನ್ನು, ೨೦೧೪ ಒಳಿತಿನ ಫಲವನ್ನು ಅನುಭವಿಸುವ ಅವಕಾಶ ಕೊಟ್ಟಿದೆ. ಸ್ವಲ್ಪ ಮಜಾ ಮಾಡೋಣ..
ಹ್ಯಾಪಿ ನ್ಯೂ ಇಯರ್... ಹ್ಯಾಪಿ  ನ್ಯೂ ಇಯರ್...
ಹಾಡು ಸಂತೋಷ ಕೆ... ಹಾಡು ಸಂತೋಷ ಕೆ.....!

ನಿಮಗೂ ಒಳ್ಳೆಯ ದಿನಗಳು ಎದುರಾಗಲಿ ಎಂಬ ಹಾರೈಕೆಗಳೊಂದಿಗೆ...
Good  bye  2013 . WELCOME  2014 .

1 comment:

  1. when good time comes everything can be forgotten and forgiven, if god making u to sruggle means he want to giv u a big surprise be ready for that my friend. take care .

    ReplyDelete