Sunday, July 21, 2013

ಮೋದಿಯ ಹಾದಿ ಗದ್ದುಗೆ ಯತ್ತ...!

ಇತ್ತೀಚಿಗೆ facebook,twitter ಗಳಿಂದ ಹಿಡಿದು ಎಲ್ಲ  ಸಮೂಹ ಮಾಧ್ಯಮಗಳು ನರೇಂದ್ರ ಮೋದಿಯ ಬಗ್ಗೆ ಬಹಳ ಹೋಗುಳುತ್ತಿವೆ;ಬಹಳ ಜನ ಈ ವಿಷಯದ ಕುರಿತಾಗಿ 'ಚಿಂತನೆ'ಗೊಳಗಾಗಿರುವುದು ಕಂಡು ಬಂದರೆ, ಕಾಂಗ್ರೆಸ್ಸಿಗರು ಮಾತ್ರ 'ಚಿಂತೆ'ಗೆ ಒಳಗಾಗಿದ್ದಾರೆ. ಮತದಾರ ಯಾವತ್ತು ಪಕ್ಷ, ವ್ಯಕ್ತಿಯನ್ನು ಗಮನಿಸುವುದಿಲ್ಲ ಬದಲಾಗಿ ಪುಂಕಾನುಪುಂಕವಾಗಿ ರಾಜಕೀಯ ನಾಯಕರ ಬಾಯಿಯಿಂದ ಬರುವ ಪ್ರಣಾಳಿಕೆಗಳಲ್ಲಿ ಯಾವದನ್ನು ಭರವಸೆದಾಯಕವೆಂದು ಗಮನಿಸುತ್ತ ಇರುತ್ತಾನೆ. ಹೀಗಾಗಿ,"ಮಾತುದಾರ(ರಾಜಕಾರಣಿ)" ರ ಬಗ್ಗೆ ಗಮನವಿಟ್ಟು ನೋಡುತ್ತಾನೆ ಒಳ್ಳೆಯ "ಮತದಾರ". 'ಪ್ರಣಾಳಿಕೆಯ  ಜೊತೆಗೆ ಅದನ್ನು ಇಡೆರಿಸುತ್ತೇನೆ'  ಎಂಬ ರಾಜಕೀಯ ಇಚ್ಚಾಶಕ್ತಿಯ  ಪ್ರದರ್ಶನ  ಇಂದಿನ ಅವಶ್ಯಕತೆ.

೬೦ರ ಸಂಭ್ರಮದಲ್ಲಿರುವ ಭಾರತಿಯ ಪ್ರಜಾಪ್ರಭುತ್ವಕ್ಕೆ ಅದೆಷ್ಟೋ ಚುನಾವಣೆಗಳು ನಡೆದು ಹೋಗಿಲ್ಲ?  ಅದೆಷ್ಟೋ ಪ್ರಣಾಳಿಕೆಗಳು ಚಪ್ಪಾಳೆಗಳ ಮೂಲಕವಾಗಿ ಸ್ವಾಗತಿಸಲ್ಪಟ್ಟು, ಸಾಮಿಯನ  ಕೆಳಗಿಲಿಸುವಾಗಲೇ ಕೊನೆ ಕಂಡಿಲ್ಲ? ಸತ್ಯವಾಗಿ ಆಡಿದಂತೆ, ಜನತೆಯ  ಭರವಸೆಗೆ ಕುಂದು ಬರದಂತೆ ಜಾರಿಗೆ ತಂದ ಪ್ರಣಾಳಿಕೆಗಳೆಷ್ಟು? ಹೀಗಾಗಿ ಪ್ರಣಾಳಿಕೆಗಳು ಕೇಳಿ ಕೇಳಿ ಸಾಕಾಗಿದೆ ಅನ್ನುವಷ್ಟು ನೋವು ಜನಕ್ಕೆ ಇದೆ. ಜನಕ್ಕೆ ಬೇಕಾಗಿರುವುದು ಪ್ರಣಾಳಿಕೆಗಳ ಉದ್ದುದ್ದ  ಭಾಷಣಗಳಲ್ಲ; ಬಣ್ಣ-ಬಣ್ಣಗಳಿಂದ ರಂಜಿತವಾದ ಪ್ರಣಾಳಿಕೆಯ  pamplet ಗಳಲ್ಲ,"ಭಾರತ ನವ ನಿರ್ಮಾಣ" ಎಂದು ಸಂಗೀತ ಸೇರಿಸಿ ಗುನುಗುವ ಹಾಡಲ್ಲ; ಬದಲಾಗಿ ಇಂದು ಹೇಳಿದ್ದನ್ನು ನಾಳೆ ಮಾಡಿಯೇ ತೀರುತ್ತೇನೆ ಎನ್ನುವ  "ಭರವಸೆಯ ನಾಯಕ". ಅಂತ ನಾಯಕತ್ವದ ಹುಡುಕಾಟದಲ್ಲಿ ಇದ್ದಾನೆ ಇಂದಿನ ಪಜ್ನಾವಂತ ಮತದಾರ. ಆ ಭರವಸೆಯಾಗಿ ಇಂದು ಗೋಚರಿಸುತ್ತಿರುವರು "ನರೇಂದ್ರ ಮೋದಿ ಮಾತ್ರ". ನೀವು ಇದನ್ನು ಗಮನಿಸಿರಬಹುದು-ಯಾರು ಕೂಡ BJP  ಬೇಕು ಅನ್ನುತ್ತಿಲ್ಲ, ಬದಲಾಗಿ ನರೇಂದ್ರ ಮೋದಿ ಬೇಕು ಅನ್ನುತಿದ್ದಾರೆ.

ಮೋದಿಯ ನಾಯಕತ್ವದ ಬಗ್ಗೆ  ಅಂತ ಒಂದು ಭರವಸೆ ಮೂಡಿರುವುದು ಇಂಗ್ಲಿಷ್ ಸೆ ಇರದ,  ಹಿಂದಿ ಭಾಷೆಯಿಂದಲೇ  ಮಾಡಿದ ಭಾಷಣಗಳಿಂದಲ್ಲ; ಯಾರಿಂದಲೂ ಪ್ರಶ್ನಿಸಿಲಾಗದ ನಾಯಕತ್ವ ಅವರಿಗೆ ಬಂದಿರುವುದು, ಅದನ್ನು ಜನ ಒಪ್ಪಿರುದಕ್ಕೆ ಕಾರಣ ಅವರು ಗುಜರಾತನಲ್ಲಿ ತಂದಿರುವ ಬದಲಾವಣೆ. ನಾವು ಯಾರು ಕೂಡ ಗುಜರಾತನ್ನು ನೋಡಿದವರಲ್ಲ,ಆದರೆ ಒಟ್ಟಾರೆಯಾಗಿ  ಸಮೂಹ ಮಾಧ್ಯಮಗಳು  ಟ್ವಿಟ್ಟರ್-ಫೇಸ್ಬುಕ್  ಅವಲೋಕಿಸಿದಾಗ ಸಿಗುವ ಧನಾತ್ಮಕ ಧೋರಣೆಗಳಿಂದ ಮೋದಿ ಯೊಬ್ಬ ಬದಲಾವಣೆಯ ಹರಿಕಾರ ಎಂದೇ ಭಾವಿಸುತ್ತೇವೆ.

ಮೊದಿಯಲ್ಲದ ನಾಯಕತ್ವ ಭಾರತದಲ್ಲಿ ಬೇರೊಂದು ಇಲ್ಲವೇ? ಇದ್ದಾರೆ ನಮ್ಮ ರಾಹುಲ್ ಗಾಂಧಿ ಸಾಹೇಬರು. ಅವರಿಗೆ 'ಗಾಂಧಿ' ಹೆಸರಿನಿಂದ ಹಾಗೂ ನೆಹರು-ಇಂದಿರಾ-ರಾಜೀವ ಈ ಮೂವರ ಕೆಲವು ಐತಿಹಾಸಿಕ ಸಾಧನೆಗಳಿಂದಾಗಿ ರಾಹುಲ್ ಒಬ್ಬ ರಾಜಕೀಯದಲ್ಲಿ ಕಡೆಗನಿಸಲಾರದ ವ್ಯಕ್ತಿ ಅಷ್ಟೇ ಅನಿಸುತ್ತದೆ. ಅವರ ಶಿಕ್ಷಣ ಅರ್ಹತೆಯಲ್ಲೂ ಅಲ್ಲ-ಸಲ್ಲದ ಆರೋಪಗಳು ಫೇಸ್ಬುಕ್ ತುಂಬಾ ಓಡಾಡುತ್ತಿದೆ. ಅವರಲ್ಲೊಂದು ಅನುಭವ, ಸಾಧನೆ ಅಥವಾ ಮುಂದಲೋಚನೆಯಿದೆ ಎಂದು ಭಾವಿಸಲು ಯಾವ ಕಾರಣಗಳು ಸಿಗುತ್ತಿಲ್ಲ. ಒಂದೊಮ್ಮೆ ಮಾನ್ಯ ಪ್ರಣಬ್ ಮುಖರ್ಜಿಯವರು ಕಾಂಗ್ರೆಸ್ ಕಡೆಯಿಂದ ಪ್ರಧಾನ ಮಂತ್ರಿ ಸ್ಥಾನಕ್ಕೆ ಏನಾದರು ನಾಮಾಂಕಿತರಾಗಿದ್ದರೆ ರಾಜಕೀಯ ಕಣದಲ್ಲಿ ರಾಜಕೀಯ ಅನುಭವದಲ್ಲಾದರು  ಮೋದಿಗೆ ಸರಿ ಸಮಾನರು ಎಂಬ ಭಾವ ಮತದಾರರಲ್ಲಿ ಮುಡುತಿತ್ತೋ ಏನೋ ? ಇವತ್ತು ಕಾಂಗ್ರೆಸ್ಸ್ ಕೇವಲ ವಂಶವಾಹಕ ಕಣಗಳ ಸಾಮರ್ಥ್ಯದಿಂದಲೇ ಗೆಲ್ಲಬೇಕು ಹೊರತು ಅದಕೊಂದು ಬೇರೆಯಾದ  ಕಾರಣ ನನಗಂತೂ ಸಿಗದು.

ಮೋದಿ ಮುಸ್ಲಿಂ ವಿರೋಧಿ, ಅವರೊಬ್ಬ ಕೊಲೆಗಾರ ಎನ್ನುವ ಆರೋಪಗಳು ಕೇಳುತ್ತಲೇ ಇರುತ್ತೇವೆ..ಇದು ಒಪ್ಪವುದು ಬಹಳ ಕಷ್ಟ. ಒಂದೊಮ್ಮೆ ಮೋದಿ ಗೋದ್ರ ಹತ್ಯಾಕಾಂಡದಲ್ಲಿ ಭಾಗಿಯಾಗಿದ್ದರೆ ಕಾಂಗ್ರೆಸ್ಸ್ ಕೈಯಲ್ಲೇ ನಲಿದಾಡುತ್ತಿರುವ(ನಲಿದಾಡುತಿದ್ದ) ಪಂಜರದ ಗಿಳಿ ಸಿಬಿಐ ಇಷ್ಟು ದಿನ ಮೋದಿಗೆ ಜೈಲಿಗೆ ತಳ್ಳುತಿರಲಿಲ್ಲವೇ? ಅದನ್ನು ಇನ್ನು ತನಕ ಸಾಧ್ಯವಾಗದಿರುವಾಗ, ಇಲ್ಲಿಯ ತನಕ ಮೋದಿ ಬಗ್ಗೆ  ಕ್ಲೀನ್ ಚೀಟ್ (http://goo.gl/otX6O) ಇರುವಾಗ ಈ ಮಾಧ್ಯಮಗಳು, ಕಾಂಗ್ರೆಸ್ಸ್ ನಾಯಕರುಗಳು ಯಾಕೆ ಪದೆ ಪದೆ ಗೋದ್ರ-ಗೋದ್ರ ಎಂದು ಬಾಯಿ ಬಡಿತಾರೋ? ಒಂದೊಮ್ಮೆ ಮೋದಿ ಅಪರಾಧಿಯಾಗಿದ್ದರೆ ಅವರು ಜೈಲಿನಲ್ಲಿ ಕೊಳೆಯಲೇ ಬೇಕು ..! ಅದು ಕೇವಲ ಮುಸ್ಲಿಮರ ಕೊರಿಕೆಯಾಗಲಾರದು; ಸಮಸ್ತ ಭಾರತೀಯರು ಅಪರಾಧಿಯನ್ನು ನೋಡುವ ದೃಷ್ಟಿ ತಾನೇ?

ನಮ್ಮದು ಅತಿ ದೊಡ್ಡ ಪ್ರಜಾಪ್ರಭುತ್ವ. ಪ್ರಜೆಗಳ ಮಾತು ಹೇಳಲು-ಕೇಳಲು  ಕಾರಣವಾಗಿರುವುದೇ ಸಮೂಹ ಮಾಧ್ಯಮಗಳಿಂದ. ಇದಕ್ಕಾಗಿಯೇ, ಸಮೂಹ ಮಾಧ್ಯವನ್ನು ಪ್ರಜಾಪ್ರಭುತ್ವದ ನಾಲ್ಕನೆಯ ಅಂಗವೆಂದು ಭಾವಿಸಲಾಗುತ್ತದೆ. ನಾವೆಲ್ಲ ಇಂದು ಮೋದಿ ಕೆಟ್ಟವರು-ಒಳ್ಳೆಯವರು ಎಂದು ತಿರ್ಮಾನಿಸುತ್ತಿರುದು ಈ ಮಾಧ್ಯಮಗಳು ನಮ್ಮ ಮುಂದೆ ಇಟ್ಟ ವಿಷಯಗಳು ತಾನೆ? ನಾವೆಲ್ಲರೂ ಮೋದಿಯ ಜೊತೆ ಮಾತನಾಡಿದವರಲ್ಲ, ಗುಜರಾತಿನ ಮಣ್ಣು ಮೆಟ್ಟಿದವರಲ್ಲ.. ಹೀಗಿರುವಾಗ, ಯಾವುದೇ ವ್ಯಕ್ತಿ, ಪಕ್ಷದ ಕಡೆ ಮತದಾರ ವಾಲಲು ಕೇವಲ ಸಮೂಹ ಮಾಧ್ಯಮಗಳೇ ಕಾರಣ ವಾಗುತ್ತವೆ. ಒಂದೊಮ್ಮೆ ಅಂತ ನಿರ್ದಿಷ್ಟ ವಿಷಯಗಳಲ್ಲಿ ಮಾಧ್ಯಮ ಕೆಟ್ಟರೆ, ಲಾಬಿಗೆ ಒಳಗಾಗಿ ಕೆಲಸ ವಹಿಸಿದರೆ ದೇಶದ ಗತಿ ಏನು ಹೇಳಲು ಸಾಧ್ಯ? ಕೇವಲ ರಾಜಕಾರಣಿಗಳು ಒಳ್ಳೆಯ ದಾದರೆ ಸಾಲುವುದಿಲ್ಲ; ಒಳ್ಳೆಯ ಮಾಧ್ಯಮವೂ ಬೇಕು.

ಮಾಧ್ಯಮಗಳು ತಪ್ಪುತ್ತಿರುವ ಅಂಶಗಳು ಅನೇಕ ಇವೆ - ಜಾತ್ಯತೀತ ಭಾರತದಲ್ಲಿ ಜಾತಿವಾರು ಮತಗಳ ಕುರಿತಾಗಿ ಅವಲೋಕನ ಮಾಡುವುದು, ಯಾವೊದೋ ಒಬ್ಬ ಬಡಪಾಯಿ ಧರ್ಮ, ಜಾತಿ ಬಗ್ಗೆ ಮಾತನಾಡಿದನೆಂದು ಅದನ್ನೇ ಈಡಿ ದೇಶಕ್ಕೂ ಬೆಂಕಿ ಹತ್ತುವಂತೆ ಮಾಡುವುದು ಸರಿಯಲ್ಲ. ಮಾಧ್ಯಮವೂ ಕೂಡ ದೇಶದ ಒಳಿತಿಗಾಗಿ ಶ್ರಮಿಸುವ ವರ್ಗ ಎಂದು ಭಾವಿಸ ಬೇಕೇ ಹೊರತು, ವಾಕ್ ಸ್ವಾತಂತ್ರ್ಯವೆಂದು ದೇಶಕ್ಕೆ ನಷ್ಟವುಂಟು ಮಾಡುವ ವಿಷಯವನ್ನು  ಪ್ರಸರಿಸುವುದು, ವಾದಿಸುವುದು ತಪ್ಪು ಅನಿಸುತ್ತದೆ. ಮೋದಿಯವರಿಗೆ ಇಲ್ಲಿ ತನಕ ಎಲ್ಲ ನ್ಯಾಯಲಾಯಗಳು 'ಕ್ಲೀನ್' ಎಂದು ಹೇಳಿದ ಮೇಲೆ, ನ್ಯಾಲಯಗಳ ತೀರ್ಪು ತಪ್ಪು ಅನ್ನುವಂತೆ ಅವರನ್ನು ಮತ್ತೆ-ಮತ್ತೆ ಗೋದ್ರದ ಕುರಿತಾಗಿ ಪ್ರತಿ ದಿನ ಪ್ರಶ್ನಿಸುವುದು ತಪ್ಪಲ್ಲವೆ? ಒಮ್ಮೆ ನಿಮಗೆ  ಗೊದ್ರದ ಕುರಿತಾಗಿ ಸರಿಯಾದ ಮಾಹಿತಿ ಗೊತ್ತಿದ್ದರೆ, ಮೋದಿಯನ್ನು ಜೈಲಿಗೆ ತಳ್ಳಬೇಕು ಎನ್ನುವ ಮನಸ್ಸಿದ್ದರೆ ನೀವೇ ನ್ಯಾಲಯಕ್ಕೆ ಹೋಗಬಹುದಲ್ಲ? ನೀವು ಲಾಬಿ ಗೆ ಒಳಗಾಗಿದ್ದಿರಿ ಎಂದು ಭಾವಿಸಲೇ?

ಮೋದಿಗೆ ಗದ್ದುಗೆಯತ್ತ ನುಸುಳುವುದು ಅಷ್ಟು ಸುಲಭವಂತು ಅಲ್ಲ. ಅವರಲ್ಲಿ ಅರ್ಹತೆ ಇದೆ, ದೇಶದ ಬಗ್ಗೆ ಕಲ್ಪನೆಗಳಿವೆ ಎಂದು ನಾವು 'ಭರವಸೆಯ ನಾಯಕ' ನೆಂದು ನೆಚ್ಚಿ ಕೊಂಡರು ಅವರ ದಾರಿ  ಮುಳ್ಳಿನಿಂದ ಕೂಡಿದೆ. ಮೋದಿ ಒಳ್ಳೆಯ ನಾಯಕರಾದರು, ಗೋದ್ರ ಘಟನೆ ನಡೆದಿರುವುದು ಅವರ ಮೂಗಿನ ಕೆಳಗೆ ಅನ್ನುವ ಕಾರಣದಿಂದ ಅವರನ್ನು ಇಂದಿಗೂ ತೆಗಳಲಾಗುತ್ತಿದೆ. ಜೊತೆಗೆ , ಅವರ ಪಕ್ಷದಲ್ಲೇ ಅವರ ಬಗ್ಗೆ ಸಹ ಮತವಿಲ್ಲ. ಮೋದಿಯ ದಿನ-ದಿನ ಕಾಣುತ್ತಿರುವ ಏಳಗೆಯನ್ನು ಅವರ ಸಮಾನ ವಯಸ್ಕರು(ಅಥವಾ ಸಮಾನ ವೃತಿ ಬಾಂಧವರು) ಎತ್ತಿ ಹಿಡಿಯಲು ಮನಸ್ಸು ಮಾಡುತ್ತಿಲ್ಲ. ಅಮೇರಿಕಾದ(western ) ಅಭಿಮಾನಿಗಳು ದೇಶದಲ್ಲಿ ಹೆಚ್ಚುತ್ತಿರುವ ಕಾಲದಲ್ಲಿ, ಅಮೇರಿಕಾದ ವೀಸಾ ನಿರಾಕರಣೆ ಸಹ ಪ್ರಭಾವ ಬಿರುವ ಸಂಗತಿಯೇ ಆಗಿದೆ. ಅಷ್ಟೆಯಲ್ಲದೆ ಮೊದಿಯೊಬ್ಬ ಕೃತಿಯಿಂದ ಸಾಧಿಸಬಲ್ಲ ವ್ಯಕ್ತಿಯಾಗಿದ್ದರೂ ಮಾತಿನಿಂದ  'ನಾಯಿ ಮರಿ', 'ಬುರ್ಖಾ' ದಂತ ಶಬ್ಧಗಳಿಂದಾಗಿ ಹಾಗೂ ವಿರೋಧಿಗಳು ಪ್ರತಿಯೊಂದು ಮಾತನ್ನು ಮೋದಿ ಒಬ್ಬ 'ರಕ್ತ ಪಿಪಾಶು ' ಅನ್ನುವಂತೆ ಪ್ರೇರಿಪಿಸುವುದು ಕೂಡ ಅವರ ಹಿನ್ನಡೆಗೆ ಕಾರಣವಾಗಲಿದೆ. ಜೊತೆಗೆ ಬಿಜೆಪಿ, ಎಲ್ಲಕಡೆ ಒಳ್ಳೆಯ ಇಮೇಜ್ ಉಳಿಸಿಕೊಂಡಿಲ್ಲ. ಉದಾಹರಣೆಗೆ- ಕರ್ನಾಟಕದ ಬಿಜೆಪಿಯ ರೆಸಾರ್ಟ್ ರಾಜಕಾರಣ, ಭೃಷ್ಟಚಾರಗಳಿಂದ ಬೇಸೆತ್ತ ಮತದಾರ ಬೇರೆ ಪಕ್ಷಗಳನ್ನು ನೋಡಿಕೊಲ್ಲಬೇಕಾಯಿತು. ಇದರ ಪರಿಣಾಮವಾಗಿ, "ಕೇಂದ್ರದಲ್ಲಿ ಮೋದಿ ಬಂದರೆ ನಮಗೇನು ಫಲ,ಇಲ್ಲಿರುವ ಒಳ್ಳೆಯವರಲ್ಲದಿದ್ದರೆ?" ಎನ್ನುವ ಮತದಾರ ,ಮೋದಿಯ ನಾಯಕತ್ವದ ಕುರಿತಾದ ಭರವಸೆಯಿಂದ ಪಕ್ಷದ  ಲೋಕಲ್ ಲೀಡರ್ ಗಳನ್ನೂ  ಅಪ್ಪಿಕೊಳ್ಳುತ್ತಾನೆಯೇ?

ಒಟ್ಟಾರೆ, ಮೋದಿ ದೇಶದ ಕೇಂದ್ರ ಸ್ಥಳದಿಂದ ಹಳ್ಳಿ-ಮನೆಯ ಜಗುಲಿಯ ತನಕವೂ ಬಿಜೆಪಿಯನ್ನು ನಿರೂಪಿಸುವ ಕಾರ್ಯದಲ್ಲಿ ತೊಡಗಬೇಕು. ಅವರ ಪ್ರನಾಳಿಕೆ  ದೇಶದ ಜನತೆಯ ಹೃದಯ ಗೆಲ್ಲಬೇಕು.

ಸರ್ವಧರ್ಮಗಳ ಸಮನ್ವಯ ಕಂಡಿರುವ ಭಾರತ ಭೂಮಿ ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ನಿಂದ ಆಳಲ್ಪಟ್ಟಿದೆ. ಅದಕ್ಕೂ ಸಮಾನ ಅವಕಾಶ, ಅಂತದನ್ನು ಒಪ್ಪಿಕೊಳ್ಳುವ ಉದಾರ ಹೃದಯ ಪ್ರತಿ ಭಾರತಿಯನಿಗೂ ಇದೆ. ಯಾರು ಕೂಡ ರಕ್ತ ಕ್ರಾಂತಿಯನ್ನು ಕಾಣಲು ಬಯಸುವುದಿಲ್ಲ. ಅಳುವ ಪಕ್ಷ ಕಾಂಗ್ರೆಸ್ಸ್ ಆಗಲಿ, ಬಿಜೆಪಿಯೇ ಆಗಲಿ ಗತ ಇತಿಹಾಸ ಸೇರಿದ ಭಯೋತ್ಪಾದನೆಯನ್ನು ಆಧಾರವಾಗಿಸಿ ದೇಶವನ್ನು ಕಟ್ಟಲು ಹಪಹಪಿಸುವವರಿಗೆ  ಖಂಡಿತ ಮತದಾರ ದೇಶವನ್ನು ಕೊಡಲಾರ. ನಮಗೆ ನಿಮ್ಮ(ರಾಜಕಾರಣಿಗಳ) ಸೌಂದರ್ಯ, ಜಾತಿ ಧರ್ಮಗಳು ಕಾರಣವಲ್ಲ. ನಮಗೆ ಈ ದೇಶದಲ್ಲಿ ಶಾಂತಿಯಿಂದ  ಸ್ವಾಭಿಮಾನದಿಂದ ಬದುಕಲು ಅವಕಾಶ ಸಿಕ್ಕಿದರೆ ಸಾಕು.

ಮೊದಿಯೋಬ್ಬರು  ಗುಜರಾತಿನ ಬದಲಾವಣೆಯ ಹರಿಕಾರರಾದ  ಕಾರಣ ಅವರ ಅರ್ಹತೆ-" ಭರವಸೆಯ ನಾಯಕ" ಅಷ್ಟೇ. ಒಂದೊಮ್ಮೆ ಕಾಂಗ್ರೆಸ್ಸ್ ಒಳ್ಳೆಯ ಭರವಸೆಯ ನಾಯಕನನ್ನು ೨೦೧೪ ರ ಲೋಕಸಭೆಯ ಒಳಗೆ  ನಿರೂಪಿಸಿದರೆ ನಾವು ಅವರನ್ನು ಇಷ್ಟೇ ಮುಕ್ತ ಹೃದಯದಿಂದ ಸ್ವಾಗತಿಸಬಹುದು. 

ಕಾಯಬೇಕು ೨೦೧೪- ಮೋದಿ  ಗದ್ದುಗೆಯತ್ತ  ಪಯಣಿಸುವರೆ?

ಮೋದಿ ಬದುಕಿನ ಪ್ರತಿಯೊಂದು
ಹಾದಿಯಲಿ ಸದ್ದು ಗದ್ದಳಗಲಿದ್ದು
ಓದಿ ತಿಳಿದು ಚಿಂತನೆಯಲಿ ಮುಳುಗಿ
ಬುದ್ದಿಗೆ ತಿಳಿದಂತೆ ಬರೆದೆ ಈ ಕತನ...

ಎದ್ದು ಬರುವರೆ ಮೋದಿ
ಬಿದ್ದವರನ್ನು ಎತ್ತಲು
ಸಿದ್ಧಿಸುವುದೇ ಅವರಿಗೆ
ಗದ್ದುಗೆಯ  ಅವಕಾಶವು?

Tuesday, July 16, 2013

ಪ್ರೇಮಿಗಳು ದೇಶ ಕಟ್ಟುತ್ತಾರೆಯೇ?

ದೇಶ ಪ್ರೇಮಿಗಳು ದೇಶ ಕಟ್ಟ ಬಹುದು; ಆದರೆ ಕೇವಲ ಪ್ರೇಮಿಗಳು ದೇಶ ಕಟ್ಟುವುದೆಂದರೇನು? ಮನೆಯಿಂದ ಹೊರಬಂದು, ಯಾವ ಕೆಲಸಕ್ಕೂ ಸಿಗದ, ಯಾವುದೊ ಮರದ ಕೆಳಗೆ, ಬೆಳಿಗ್ಗೆಯಿಂದ ಸಾಯಂಕಾಲದ ವರೆಗೂ ಒಬ್ಬರನೊಬ್ಬರ ತೋಳು ಬಂಧಿಯಲ್ಲಿ ಕುಳಿತು "ನನಗಾಗಿ ನೀನು, ನಿನಗಾಗಿ ನಾನು, ನಿನ್ನ ಹೃದಯದೊಳಗೆ  ನಾನು, ನನ್ನ ಹೃದಯದೊಳಗೆ  ನೀನು, ಹಾಗಿದ್ದರೆ ಉಳಿದಿದ್ದೇನು?" ಎಂದು ಹಾಡಿದನ್ನೇ ಹಾಡುತ ಕುಳಿತ ಪ್ರೇಮಿಗಳಿಂದ ದೇಶಕ್ಕೆ ಯಾವ ಪ್ರಯೋಜನ? ಹುಟ್ಟಿಸಿದ ಅಪ್ಪ-ಅಮ್ಮನಿಗೆ, ಕಳಿಸಿದ ಶಾಲೆಗೆ, ಬದುಕಲು ಕೊಟ್ಟ ಸಮಾಜಕ್ಕೆ, ಈ ದೇಶಕ್ಕೆ ಭಾರ ಅಂತೀರಾ??

ಕಳೆದ ವಾರ, ನನ್ನ ಆಫೀಸ್  badge  ಕೆಲಸ ಮಾಡದ ಕಾರಣ ನಾನು ಎರಡು ದಿನ ಆಫೀಸ್ ನಿಂದ ಹೊರಗೆ ಉಳಿಯ ಬೇಕಾಯಿತು. ಒಂದು ದಿನ ಒಬ್ಬನೇ ಮನೆಯಲ್ಲಿ ಕುಳಿತು ಪುಸ್ತಕ ಓದಿ ಕಳೆದೆಯಾದರು ಎರಡನೇ ದಿನ ನನ್ನಿಂದ ಒಬ್ಬನೇ ಇರುವುದು ಸಾಧ್ಯವಾಗಿಲ್ಲ. ನನಗೆ ಹತ್ತಿರದಲ್ಲಿ ಒಂದು ಬೆಟ್ಟ-ಗುಡ್ಡ ಅಥವಾ ಶಾಂತವಾಗಿರುವ ಪ್ರದೇಶವಿದ್ದರೆ ಹೇಳಿ ಎಂದು roomate ಗಳಿಗೆ ಕೇಳಿದಾಗ ಸಲಹೆ ನೀಡಿದ್ದು "Lal Bhag ". ಬೆಂಗಳೂರಿನ ಕೇಂದ್ರೀಯ ಬಸ್ ನಿಲ್ದಾಣದಿಂದ ಮೂರೂ ನಾಲ್ಕು ಕೀ. ಮಿ ದೂರದಲ್ಲಿರುವುದರಿಂದ ಹೋಗಿ ಬರುದು ಕೂಡ ಸುಲಭವೆಂದು Lal Bhag ನಟ್ಟ ಪ್ರಯಾಣ ಮಾಡಿದೆ.

Lal Bhag  ಪ್ರವೇಶ ದ್ವಾರದಲ್ಲಿ ಟಿಕೆಟ್ ಕೌಂಟರ್ ಗೆ ನಿಂತಾಗ, ದ್ವಾರ ಪಲಕ ಎರಡು ಟಿಕೆಟ್ ಕೈಗಿತ್ತು ೨೦/- ಕೇಳಿದ. "ಸರ್ ಎರಡು ಟಿಕೆಟ್ ಯಾಕೆ?" ಎಂದು ಮರು ಪ್ರಶ್ನೆಗೆ, "ಒಬ್ರೇನಾ?  by default ಎರಡು ಟಿಕೆಟ್ ಕೊಟ್ಟು ಬಿಡ್ತೇವೆ" ಎಂದು ಹೇಳಿ, ಒಂದು ಟಿಕೆಟ್ ಅನ್ನು ವಾಪಸು ಪಡೆದು ೧೦/- ಹಿಂದಿರುಗಿಸಿದ. ಆತನ ಬಾಯಿಂದ ಬಂದ, "by default " ಪದಕ್ಕೆ ನಾನ್ಯಾವ ಅರ್ಥವನ್ನು ಆ ಸಂದರ್ಭದಲ್ಲಿ ಕಲ್ಪಿಸಿ ಕೊಳ್ಳಲು ಸಾಧ್ಯವಾಗಿರಲಿಲ್ಲ.

ಲಾಲ್ ಭಾಗ್ ಬೃಹತ್ ಬೆಂಗಳೂರಿನ "ಬೃಹತ್ ಬೆಟ್ಟ-ಗುಡ್ಡ ಪ್ರದೇಶ" ಇರಬೇಕು. ಕಬ್ಬನ್ ಪಾರ್ಕ್ ಅನ್ನೋದೊಂದು ಇದೆಯಂತೆ. ಅಲ್ಲಿ ನಾನಂತೂ ಹೋಗಿಲ್ಲ. ಈ  ಲಾಲ್ ಭಾಗ್ ಪಶ್ಚಿಮ ಘಟದಲ್ಲಿ ಹುಟ್ಟಿ ಬೆಳುದು ಬಂದ ಹುಡುಗರಿಗೆ ಒಂದು ಸಣ್ಣ ತೋಟ ನೋಡಿದ ಅನುಭವ ಕೊಡಬಹುದಷ್ಟೇ. ಇರಲಿ, ಬೆಂಗಳೂರು ಎಂಬ ನಗರದ ಒಂದು ಭಾಗದಲ್ಲಿ  ನೋಡುವದಕ್ಕಾದರು ಒಂದು ಅರಣ್ಯ ಪ್ರೆದೇಶ ಇದೆಯಲ್ಲವೆಂದು  ಸಂತೋಷ ಪಡೋಣ.

ಆದರೆ, ಲಾಲ್ ಭಾಗ್ ಕೇವಲ ಬೆಟ್ಟ ಅಲ್ಲ, ಉದ್ಯನವಲ್ಲ ಅದು ಪ್ರೇಮಿಗಳ ಸ್ವರ್ಗ. ಒಂದೊಂದು ಮರದ ಕೆಳಗೆ ಒಂದೊಂದು ಜೋಡಿ. ಜೋಡಿಗಳ  ಚಲನ-ವಲನ, ತಪ್ಪಿ ಹೋಗುವರೆಂದು ಅಪ್ಪಿ ಕೊಂಡುವರ ದೃಶ್ಯಗಳು ನೋಡತ್ತ ಹೋದಂತೆ ಪ್ರೇಮಿಗಳು ಇರಬೇಕು ಅಂದರೆ ಕಾಡು ಇರಲೇ ಬೇಕು ಅನಿಸಿತು. ಹಾಗೊಮ್ಮೆ ಯೋಚಿಸಿದಾಗ   ಪಶ್ಚಿಮ ಘಟದ ನಾವೇ ಶ್ರೇಷ್ಠ ಪ್ರೇಮಿಗಳು ಎಂದು ಭಾವಿಸಿ ಕೊಂಡೆ. ಏನೇ ಇರಲಿ, ಪ್ರೇಮಿಗಳ ಸ್ವರ್ಗ ನೋಡಿದಾಗ ಇವರಿಂದ ಏನು ಪ್ರಯೋಜನ ಎಂಬ ಪ್ರಶ್ನೆ ಮೂಡುವುದು ಸಹಜ? ನನಗನ್ನಿಸಿದ್ದು ನಿಜವಾಗಿ ದೇಶವನ್ನು ಕಟ್ಟುವರು ಇವರೇ ಎಂದು ..!?

ಒಂದು ದೇಶವನ್ನು ಕಟ್ಟಬೇಕು ಅಂದರೆ ಮೊದಲು ಭಾವನಾತ್ಮಕವಾಗಿ ನಾವೆಲ್ಲಾ ಒಂದು ದೇಶದವರೆಂದು ಭಾವಿಸಬೇಕು. ಎಲ್ಲರು ಎದೆ ತಟ್ಟಿ ಇದು ನನ್ನ ದೇಶ ಎನ್ನಬೇಕಾದರೆ ಅದೆಂತ ಬೆಸುಗೆ ಈ ಜನರ ಮಧ್ಯೆ ಇರಬೇಕು? ಭಾರತದಲ್ಲಿ  ಇಂದಿಗೂ ಅಂತ ಬೆಸುಗೆಯ ವೈಫಲ್ಯತೆ ಇದೆ. ಹಿಂದೂ-ಮುಸಲ್ಮಾನ-ಕ್ರಿಶ್ಚಿನ ಎಂದು ಹೊಡೆದಾದುತ್ತೇವೆ; ಹಿಂದುಗಳಲ್ಲೇ ದಲಿತ, ಕೀಳು, ಕೆಟಗರಿ, ಬ್ರಾಹ್ಮಣ ಅಂತೆಲ್ಲ ಸಾಮಾಜಿಕ ಅಂತಸ್ತುಗಳನ್ನು ಸೃಷ್ಟಿ ಮಾಡಿ ಎಷ್ಟೇ ಗಾಮ್ಭಿರ್ಯದಿಂದ, ಪ್ರಖರಿತ ವಾಗ್ಜರಿಯಿಂದ ಭಾಷಣಗಳನ್ನು ಮಾಡಿದರು,ದೇಶದ ಜಾತ್ಯತೀತ ನಿಲುವಿನ ಮೇಲೆ ಉದ್ಗೃಂಥ ಗಳನ್ನೂ ಬರೆದರೂ ನಾವು-ನೀವು ಎಂಬ ಭೇಧವನ್ನು ಕಳೆದ ೬೦ ವರ್ಷಗಳಿಂದಲೂ ಈ ಜಾತ್ಯತೀತ ಭಾರತದಲ್ಲಿ ಉಳಿಸಿಕೊಂಡು ಬಂದಿದ್ದೇವೆ. ನಾವು ಏನೇ ಹೇಳಿದರು, ಮನಸ್ಸಿನ ಆಳದಲ್ಲಿ ಜಾತಿಗಳ, ಧರ್ಮಗಳ ಕುರಿತಾದ ಬೆಸುಗೆ ತೀರಾ ಕಳಪೇನೆ ಆಗಿರುತ್ತದೆ. ರಾಜಕಾರಣಿಗಳು ಮತಕ್ಕಾಗಿ, ಸ್ವಾಮಿಗಳು ತಮ್ಮ ಮಠ ಉಳಿಸಿಕೊಳ್ಳಲು, ಕೆಳವರ್ಗದವರೆಂದು ಕರೆಸಿ ಕೊಂಡವರು  ಸರ್ಕಾರದಿಂದ ಲಾಭ ಪಡೆಯಲು ಜಾತಿಯನ್ನು ಉಳಿಸಿಕೊಂಡೆ ಜಾತ್ಯತೀತ ನಿಲುವನ್ನು ಪ್ರಕಟಿಸುವುದು ಖೇಧಕರ.

ಇಂಥ ಜಾತಿ, ಮತ, ಧರ್ಮಗಳ  ಸಮ್ಮಿಲನವಾಗಿ ಭಾವನಾತ್ಮಕವಾಗಿ ಜಾತ್ಯತಿತತೆ ಎತ್ತು ಹಿಡಿಯುವ  ಒಂದು ವರ್ಗ ಈ ದೇಶದಲ್ಲಿದ್ದರೆ ಅದು ಪ್ರೇಮಿಗಳಾಗಿ ಅಂತರ್ ಜಾತಿಯ ವಿವಾಹವಾಗುವ  ವರ್ಗ.ಅವರಿಗೆ ಮೇಲು ಕೀಳು ಭಾವವಿಲ್ಲ. ಧರ್ಮದ ನೋವು ಇಲ್ಲ; ಅಂತ ಪ್ರೇಮಿಗಳಲ್ಲಿ ಇರುವುದು ಬುರ್ಖಾ secularism  ವೂ ಅಲ್ಲ; naked  secularism  ವೂ ಅಲ್ಲ; ಅದು ನಿಜಾವಾಗಿ ಭಾರತವನ್ನು ಒಂದು ಎಂದು ಹೇಳಬಲ್ಲ  real  secularism .

ಇಂಥ ಅಂತರ್ ಜಾತಿಯ ವಿವಾಹಗಳು ದೇಶದ ಒಳಿತಿಗೆ ಸಹಕಾರಿಯೆಂದು ನಾನು ಹೇಳಿದ್ದಲ್ಲ; ಯಾವೊದೋ ಒಬ್ಬ ಪ್ರೇಮಿ ಹೇಳಿದ ಮಾತಲ್ಲ; ಅದು ಭಾರತದ  ಮಾನ್ಯ ಸರ್ವೋಚ್ಚನ್ಯಾಲಯ ಹೇಳಿದ ಮಾತು(http://goo.gl/z538W). ಭಾರತದ ಸಧ್ಯದ ಪರಿಸ್ಥಿಯಲ್ಲಿ ಅಂತರ್ ಜಾತಿಯ ವಿವಾಹಗಳು ಸಾಮಾಜಿಕ ಸಂಪ್ರದಾಯಗಳಿಗೆ ವಿರುದ್ಧವಾಗಿರುವದರಿಂದ  ಅರೇಂಜ್ಡ್ ಇಂಟರ್ ಕಾಸ್ಟ  ಮ್ಯಾರೇಜ್ ಗಳು ಒಂದು ಮರೀಚಿಕೆ ಅನ್ನುವಂತಿದೆ. ಹೀಗಾಗಿ ಪ್ರೇಮಿಗಳು ಮಾತ್ರ ಈ ನಿಟ್ಟಿನಲ್ಲಿ ಅಸಾಧ್ಯವಾದನ್ನು ಸಾಧಿಸುತ್ತಾರೆ ಅನ್ನುವುದು ನನ್ನ ನಂಬಿಕೆ. ಅವರಿಗೆ ಒಂದು ಸಲಾಂ..!

ಪ್ರೇಮಿಗಳೇ,
 ನೀವು ಸಮಾಜದ  ದರಿದ್ರ ಜಾತಿ ಸಂಪ್ರದಾಯದ ವಿರುದ್ದ ಬಂಡಾಯವೆದ್ದು  ಬದುಕ ಬೇಕಾದವರು. ಹೀಗಾಗಿ ನಿಮ್ಮ ಪ್ರೇಮದ ಕತೆಯನ್ನು ಸುಖಂತವನ್ನಾಗಿಸಲು ನೀವು ಸಮಾಜದ ಎಲ್ಲ ಅಂಗ (ತಂದೆ, ತಾಯಿ,ಬಂಧು-ಬಳಗ, ಧರ್ಮ)ಗಳಿಂದಲೂ ದೂರವಾಗಿ ಬದುಕ ಬೇಕಾದ ಕಾಲದಲ್ಲೂ ಕೆಂಗೆಡದೆ  ಮುಂದುವರಿಯಬೇಕಾದರೆ ಅರ್ಥಿಕ ಸ್ವಲಂಬನೆ  ನಿಮಗೆ ಅಗತ್ಯವಾಗಿ ಬೇಕು. ಹೀಗಾಗಿ ಓದುವ ಕಾಲದಲ್ಲಿ ನೀವು ಯಾವುದೊ ಮರದ ಕೆಳಗೆ ಕುಳಿತು ಪ್ರೇಮ ಗೀತೆ ಹಾಡಿದರೆ, Newton ತಲೆಯ ಮೇಲೆ  apple    ಬಿದ್ದಹಾಗೆ  ನಿಮ್ಮ ತಲೆ ಮೇಲೆ apple  ಬಿದ್ದರೂ ಪ್ರಯೋಜನವಾಗಲಾರದು. ಓದುವ ಕಾಲದಲ್ಲಿ ಓದಿ ಸ್ವತಂತ್ರರಾದಾಗಲೇ ನಿಮ್ಮ ಪ್ರೀತಿ-ಪ್ರೇಮಕ್ಕೆ ಬೆಲೆ, ದೇಶಕ್ಕೊಂದು ಕೊಡುಗೆ. ಇಲ್ಲದೆ ಹೋದರೆ, 'ಕಿಸ್ಸಿಂಗ್' ಎಂದು ಯಾವ ಮರದ ಕೆಳಗೆ ಕುಳಿತಿದ್ದಿರೋ, ಅದೇ ಮರದ ಕೆಳಗೆ 'ಮಿಸ್ಸಿಂಗ್' ಎಂದು ಬರೆಯುವ ಕಾಲ ಬಂದೀತು. ಜೋಕೆ .....!

ಆ ಪುಣ್ಯಾತ್ಮ ಎರಡು ಟಿಕೆಟ್ "by default" ಆಗಿ ಕೊಡುವುದಕ್ಕೆ ಕಾರಣ ಇಷ್ಟೊಂದು ಪ್ರೇಮಿಗಳ ಆಗಮನವೇ ಕಾರಣ ಎಂದು "ಲಾಲ್ ಭಾಗ್ ಗುಡ್ ಬೈ" ಹೇಳುವಾಗ ಅರಿವಿಗೆ ಬಂತು.

Saturday, July 13, 2013

ಪ್ರೀತಿ ಪ್ರೇಮ ಪ್ರಣಯ-ಅಷ್ಟೆಲ್ಲಾ...?

ನನಗೊತ್ತು...ಲವ್ ಬಗ್ಗೆ  ಮಾತಾಡುವುದಕ್ಕೆ ಬೇಕಾದಷ್ಟು ಜನ ಸಿಗುತ್ತಾರೆ. ಆದರೆ ಮದುವೆ ಬಗ್ಗೆ ಮಾತಾಡುವ ಮಂದಿ ಬಹಳ ಕಡಿಮೆ ಅಥವಾ ಸಿಗುವುದೇ ಇಲ್ಲ. ಅದಕ್ಕೆ ಕಾರಣ ಇಲ್ಲದಿಲ್ಲ. ಪ್ರೀತಿ-ಪ್ರೇಮ ಏನಿದ್ದರು ಅದು ಹುಡುಗ-ಹುಡುಗಿಗೆ ಸಂಬಧಿಸಿದ್ದು; ಮದುವೆ ತಮ್ಮ ಮನೆಯವರಿಗೆ ಸಂಬಂಧಿಸಿದ್ದು ಅನ್ನುವ ಧೋರಣೆ ಯೌವನದ ದಾರಿಯಲ್ಲಿದ್ದಾಗ ಎಲ್ಲರು ಭಾವಿಸುತ್ತಾರೆ. ಹಿರಿಯರು ಕೂಡ ಮದುವೆ ತಮ್ಮ ನಿರ್ಧಾರದಂತೆ ನಡೆಯಬೇಕೆಂದು ಹಂಬಲಿಸುತ್ತಲೇ ಇರುತ್ತಾರೆ(ಯಾಕೆ? ಮುಂದಿನ ಲೇಖನದಲ್ಲಿ).

ಮದುವೆಗೂ-ಪ್ರೀತಿಗೂ ಅಂತರ ಬಹಳ ಕಡಿಮೆ. ಪ್ರೀತಿಗೆ  'ಪ್ರೀತಿ'ಯ ಹುಟ್ಟು ಮಾತ್ರ ಗೊತ್ತು; ಆದರೆ ಮದುವೆಗೆ ಪ್ರೀತಿಯ ಹುಟ್ಟು-ಸಾವುಗಳೆರಡು ಗೊತ್ತು. ಪ್ರೀತಿಯೇ ಮದುವೆಯ ಮೂಲ ಹೆಜ್ಜೆ. ಒಂದೊಮ್ಮೆ ಪ್ರೀತಿಯ ಕುರಿತಾಗಿ ಕಲ್ಪನೆಗಳೇ ಇಲ್ಲದಿದ್ದರೆ ಯಾರು ಮದುವೆನೇ ಆಗುತ್ತಿರಲಿಲ್ಲವೋ  ಏನೋ? ಆದರೆ ಯೌವನದ ಬಿಸಿ ರಕ್ತದ ಪರಿಚಲನೆಯಲ್ಲಿ ದೇಹವೇ ಪ್ರೀತಿ-ಪ್ರೇಮದ ಕುರಿತಾಗಿ ಅಮರವಾದ ಸಂವೇದನೆಗಳನ್ನು ವ್ಯಕ್ತ ಪಡಿಸುತ್ತ ಸಾಗುವಾಗ ಅದೇ ಪ್ರೀತಿಯ ಭಾವನೆಗಳು ಮದುವೆಯೆಂಬ ಕಲ್ಪೆನೆಯಲ್ಲಿ, ಒಂದೇ ಮನೆಯಲ್ಲಿ, ಒಬ್ಬ ವ್ಯಕ್ತಿಯ ಜೊತೆಯಲ್ಲಿ ಬದುಕುವಾಗ ಹೇಗಿರಬಹುದು ಎಂದು ಭಾವಿಸುವದಕ್ಕೂ, ಉಹಿಸಿಕೊಲ್ಲುವುದಕ್ಕೂ  ಮನಸ್ಸಿಗೆ ಸ್ವಲ್ಪವೂ ಬಿಡುವು ಇರುವುದಿಲ್ಲ. ಸಮಾಜದಲ್ಲಿ ಮದುವೆಯ ನಂತರದ ದಿನಗಳಲ್ಲಿ ಗಂಡ-ಹೆಂಡತಿಯರ ಅದೆಷ್ಟು ಜಗಳಗಳು ನಮ್ಮ ಗಮನಕ್ಕೆ ಬಂದರು ನಾವು ಅಷ್ಟೊಂದು ಸೂಕ್ಷ್ಮವಾಗಿ ನೋಡುವುದೇ ಇಲ್ಲ.ಕಾರಣ, ಪ್ರೀತಿಯ ಸಂವೇದನೆ ಮುಂದೆ ಅವೆಲ್ಲ ಗಣಕವೇ ಅಲ್ಲ ಅಂದುಕೊಳ್ಳುದು ಒಂದು ವಿಚಾರ ವಾದರೆ, ಅಂತಹ ವಿಚಾರಗಳನ್ನು ನಾವೊಮ್ಮೆ ಮೆಲಕು ಹಾಕಲೇ ಬೇಕು ಅನ್ನುವ ಜವಾಬ್ಧಾರಿ ಕೂಡ ನಮ್ಮ ಮೇಲಿರುವುದಿಲ್ಲ.

ಆಹಾ!,

ಅದೊಂದು ದಿನ, ಮಣಿಪಾಲದಲ್ಲಿ ಫುಟ್ಬಾಲ್ ಆಟ ಆಡಿ, ಮನೆಯ ಹಾಲ್ ನಲ್ಲೆ ಶವಾಸನದಲ್ಲಿ  ಮಲಗಿಕೊಂಡಿದ್ದೆ. ಶವಾಸನ  ಮುಗಿದು, ಸ್ವಲ್ಪ ನಿದ್ರಾಸನಕ್ಕೆ(ಅಂತದೊಂದು ಆಸನ ಇದೆಯಾ?) ಜಾರುವ ಸಂದರ್ಭದಲ್ಲಿ ನನ್ನ ಫೋನ್ ರಿಂಗ್ ಹೊಡಿಯಿತು. ಎದ್ದು ನಿಂತು, ಹೊರಕ್ಕೆ ಬಂದು, "ಹಲ್ಲೋ ಯಾರು?" ಎಂದು..
"ನಾನು ವರದಾ ಹಸ್ಬಂಡ್, ಜಾನಕಿನಾಥ  ಹೈದರಬಾದ್ ನಿಂದ ಕಾಲ್ ಮಾಡ್ತಾ ಇದ್ದೇನೆ.."..
"ಯಾರು ?! , ವರದಾ!? ಯಾರು ಅಂತ ಗೊತ್ತಾಗುತ್ತಿಲ್ಲ ...ಏನು ವಿಚಾರ ಹೇಳಿ ?" . ಹೀಗೆ ಕೆಲವು ಸಮಯ ನಡೆದ  ಸಂಭಾಷಣೆಯಲ್ಲಿ, ನನ್ನ ಪರಿಚಯದವಲೋಬ್ಬಳು  ಅನ್ನುವುದು ತಿಳಿಯಿತು. ಮನೆಯ ಸೈಟವೊಂದನ್ನು ಖರಿದಿಸಬೇಕೆಂದು ವ್ಯವಹಾರಕ್ಕಿಳಿದಾಗ ಬ್ರೋಕರ್ ಆಗಿ ಸಿಕ್ಕ ವರದಾ,  ವ್ಯವಹಾರ ಚತುರೆಯಾಗಿದ್ದ ಆಕೆ ನನ್ನ ಜೊತೆ ಒಳ್ಳೆಯ ರೀತಿಯಲ್ಲಿ ನಡೆದು ಕೊಂಡಿದ್ದಳು. ಜೊತೆಗೆ, ನನ್ನಿಂದಾಗಿ ನನ್ನ ಕೆಲವು ಸಹೋದ್ಯೋಗಿಗಳ ಜೊತೆಗೂ ವ್ಯವಹಾರ ಕುದುರಿಸಬಹುದು ಅನ್ನುವುದು ಅವಳ ಮನೋಇಂಗಿತವಿದ್ದೀತು. ಹೀಗಾಗಿ ನನ್ನ ನಂಬರ್ ಅವಳ ಮೊಬೈಲ್ ನಲ್ಲಿ ಇತ್ತು.

ನಾವಿಬ್ಬರು ಹೀಗೆ ವ್ಯವಹಾರಕೆ  ಬಂದ ನಾಲ್ಕಾರು ತಿಂಗಳೊಳಗೆ ಅವಳ ಮದುವೆಯಾಯಿತು. ನಂತರ ಅವಳು ಎಲ್ಲಿಗೋ ಹೋದಳು... ನಾಪತ್ತೆ...!

ಅವಳ ಮದುವೆಯಾಗಿ ೬ ತಿಂಗಳು ಕಳೆದ ಬಳಿಕ ಅವಳ ಗಂಡ ಜಾನಕಿನಾಥ, ಅವಳಿಗೆ ತಿಳಿಯದ ಹಾಗೆ  ಅವಳ ಮೊಬೈಲ್ ಶೋಧಿಸಿ ಅವಳ ಮೊಬೈಲ್ contacts ಗೆ ಕಾಲ್ ಮಾಡಲಾರಂಭಿಸಿದ್ದ.
"ಒಹ್, ಗೊತ್ತಾಯಿತು  ವಿಷಯ ಹೇಳಿ? " ಎಂದೇ.
"ಏನಿಲ್ಲ, ಬೇಸರ ಮಾಡ್ಕೋ ಬಾರದು. ನಿಮ್ಮ ಮೇಲೆ ನನಗೇನು ಸಂಶಯ ಅಂತ ಭಾವಿಸಬಾರದು. ನಿಮ್ಮಿಂದ ನನಗೊಂದು ಹೆಲ್ಪ್ ಬೇಕು ಅಷ್ಟೇ". ಅವನಿಗೆ ಧೈರ್ಯ ಸ್ಪಂದನೆ ನೀಡಿದ ಮೇಲೆ ಅವನು ಹೇಳಿದಿಷ್ಟು :

" ನಾನು ೪ ತಿಂಗಳ ಹಿಂದೆ ವರದಾಳನ್ನು  ಮದುವೆಯಾದೆ. ಮದುವೆ ನಮ್ಮ ಮನೆಯವರು ಸೇರಿ, ಜಾತಕ ನೋಡಿ ಮದುವೆ ಮಾಡಿದ್ದು ಸರ್. ಆದರೆ ಅವಳಿಗೆ ನನ್ನ ಜೊತೆಗೆ ಸರಿ ಬರ್ತಿಲ್ಲ... ಏನು ಹೇಳಿದರು ಕೊಪ್ಪಿಸಿ ಕೊಳ್ಳುತ್ತಾಳೆ. ಅವಳು ಯಾಕಿಗೆ ಮಾಡ್ತಾಳೆ ಅಂತ ಗೊತ್ತಿಲ್ಲ...ನನಗೇನು ಜಾತಕ-ಗಿತ್ಕ ನಂಬಿಕೆಯಿಲ್ಲ. Atleast , psycologist ಗೆ ತೋರಿಸಿ ಬರೋಣ ಅಂದ್ಕೊಂಡೆ. ಆದರೆ ಅವಳ ಪೂರ್ವಾಪರ ಏನು ಅಂತಾನೆ ಗೊತ್ತಿಲ್ಲ ಸರ್. ಬಹಳ ಹಿಂದೆ ನೀವೇ ಈ ಮೊಬೈಲ್ ಗೆ ಕಾಲ್ ಮಾಡಿ 'ವರದಾ  ಇದ್ದರಾ' ಅಂತ ಕೇಳಿದ್ದಿರಿ. ಅದಕ್ಕೆ ನೀವು ಅವಳ ಫ್ರೆಂಡ್ ಅಂದ್ಕೊಂಡು ಕೇಳ್ತಾ ಇದ್ದೇನೆ... ದಯವಿಟ್ಟು ತಪ್ಪಾಗಿ ತಿಳಿಬಾರದು".

ಆತನ ಮಾತುಗಳನ್ನು ಕೇಳುತಿದ್ದರೆ  ಒಂದು ಬಗೆಯ ವಿನಮ್ರತೆ ಇತ್ತು ಆದರೆ ಅದೊಂದು ಸಂಶಯ ಬುದ್ದಿಯೋ,ಏನೋ ನೋವಿನ ಸಂಗತಿಯೋ ತಿಳಿಯಲಿಲ್ಲ. ಆದರೆ, ಮದುವೆಯಾದ ಮೇಲೆ, ತನ್ನ ಹೆಂಡತಿಯಂದು ಒಪ್ಪಿದವಳನ್ನು ನಾಲ್ಕು ಜನರಲ್ಲಿ "ಅವಳು ಹೇಗೆ?" ಎಂದು ಪ್ರಶ್ನಿಸಿದರೆ ಯಾರು ತಾನೇ ಹೇಳಿಯಾರು? ಅದೆಷ್ಟು ಸರಿ ?ನಾನು ಯಾಕಾಗಿ ಅವಳ ಜೊತೆ ಮಾತನಾಡಿದೆ ಎಂದು ತಿಳಿಸಿ, ಅವಳ ಬಗ್ಗೆ ವಯಕ್ತಿಕ ವಿಚಾರಗಳ ಕುರಿತಾಗಿ ತಿಳಿದಿಲ್ಲವೆಂದು ಹೇಳಿ,     
"ಹೆಂಡಿತಿಯೆಂದು ಕರೆತಂದ ಹೆಣ್ಣನ್ನು ಕುರಿತಾಗಿ  ಮತ್ತೊಬ್ಬರಲ್ಲಿ ನೀವು ಹೀಗೆ ಪ್ರಶ್ನಿಸುವುದು ತಪ್ಪು, ಬೇಕಾದರೆ ನೀವು ಇಬ್ಬರು ಚೆನ್ನಾಗಿ ಸಂಯಮದಿಂದ ಚರ್ಚೆ ಮಾಡಿ. ಇಲ್ಲವೇ ನೀವಿಬ್ಬರೂ ಡಾಕ್ಟರಗೆ ಭೇಟಿಯಾಗಿ.." ಎಂದು ಸಲಹೆ ನೀಡಿ  ಕಾಲ್ ಮುಗಿಸಿದ್ದೆ.

ಈ ಘಟನೆಯ ಮೂಲಕವಾಗಿ, ನಾನು ಮದುವೆಯ ಕುರಿತಾಗಿ ಪ್ರೀತಿ-ಪ್ರೇಮ-ಪ್ರಣಯದ ಆಚೆಗೂ ಒಂದು ವಿಶಾಲವಾದ ಜಗತ್ತು ಇದೆ ಎಂಬುದನ್ನು ಅರಿತೆ. ಈ ಘಟನೆಯ ನಂತರ ಮದುವೆಯಾದ ಅಂಕಲ್-ಗಳ ಜೊತೆ ಮದುವೆ ನಂತರದ ವಿಷಯವಾಗಿ ಅಲ್ಲಿ-ಇಲಿ ಮಾತನಾಡಿದೆ. ಅವರ ವಿಚಾರಗಳ  ಒಟ್ಟು ಸಾರ ಹೀಗಿದೆ:

ಮದುವೆ ಎಂಬ ಸಂಕೀರ್ಣ ಸಂಬಂಧ ನಾವು ಭಾವಿಸಿಕೊಳ್ಳುವಷ್ಟು ಸರಳ ಅಂತೂ ಖಂಡಿತ ಅಲ್ಲ. ಹಾಗೆಂದು ದಂಪತಿಗಳೆಂಬ ಜೀವಿಗಳ ನಡುವೆ ವಾದ-ಪ್ರತಿವಾದ-ಸಂವಾದ, ಜಗಳ-ಮೌನ-ಮಾತು ಇವುಗಳ ಸರಣಿ ಇದ್ದರೇನೆ ಸುಖವೇನು-ದುಖವೇನು ಎಂಬುದು ಮನುಷ್ಯನ ಸ್ಮೃತಿಗೆ ಬರಲು ಸಾಧ್ಯ, ಹದವಾದ ಸಾಂಬರನ  ಒಗ್ಗರಣೆಯಂತೆ ಸುಖ-ದುಖಗಳ ಮಿಶ್ರಣ ಇರಲೇ ಬೇಕು. ಒಂದೊಮ್ಮೆ, ಸುಖವೊಂದೆ ಇದೆ ಅಥವಾ ದುಖವೊಂದೆ ಇದೆ ಅನ್ನುವುದಾದರೆ ದಾಂಪತ್ಯ ಹಳಿ ತಪ್ಪಿದೆ ಅಂತಾನೆ ಅರ್ಥ.ಮದುವೆಯಾದ ಮೇಲೆ ಗಂಡಸರು ಯಾವಾಗಲು ಹೆಣ್ಣಿಗೆ ಸೋಲುವ, ಸೋಲಲೇ ಬೇಕಾದ ಜೀವಿಗಳು. ಹಾಗಾಗಿ ಹೆಂಡತಿಯ ಜೊತೆ ಬಹಳ ಸಮಯ ಜಗಳ ಮಾಡಿ ಸಮಯ ವ್ಯರ್ಥ ಮಾಡುವುದು ಒಳ್ಳೆಯದಲ್ಲವಂತೆ.

ಮನುಷ್ಯನ ಜೀವನದ ಮೇಲೆ ಏನೋ ಕೆಲಸವಿಲ್ಲದ ಗ್ರಹಗಳು ಅದೆಷ್ಟೋ  ಪ್ರಭಾವ ಬಿರುತ್ತಾವೆ ಗೊತ್ತಿಲ್ಲ. ಆದರೆ ಜಾತಕಗಳು ಎಲ್ಲವನ್ನು ನಿರ್ಧರಿಸಿ, ಯಾವಾಗಲು ಅಮೃತಮಯವಾದ ಸಂಬಂಧ ಒದಗಿ ಬರುತ್ತವೆ ಎಂದು ಹೇಳುವ ಹಾಗಿಲ್ಲ.ಹಿರಿಯರೇ ಮದುವೆ ಮಾಡುವಾಗ ಹುಡುಗಿಯ 'ಬಗೆ'ಯಾಗಲಿ("ಬಗ್ಗೆ" ತಿಳಿದಿರುತ್ತವೆ),  ಹುಡುಗನ 'ಬಗೆ'ಯಾಗಲಿ ತಿಳಿದು ಕೊಳ್ಳಲು ಅವಕಾಶ, ಅದಕೊಂದು ಸಮಯ ಇರುವುದು ತುಂಬಾ ಕಡಿಮೆ. ಕೇವಲ ಬಾಹ್ಯವಾಗಿ ಅವರವರ ಬಗ್ಗೆ ಮಾತ್ರ ತಿಳಿದುಕೊಂಡು ಸಪ್ತಪದಿ ತುಳಿದ ಮೇಲೆ, ಬಗೆಯ ಕುರಿತಾಗಿ ತಿಳಿಯಲು ಹೊರಟಾಗ ಕಾಣುವ ವತ್ಯಾಸಗಳು ಮದುವೆಯೊಂದು ಗೋಳಾಗಿಸಿತು-ಇದು ವರದಾ ಬದುಕಿನ ಸತ್ಯ. ಹೀಗಾಗಿ ಅರೇಂಜ್ಡ್  ಮ್ಯಾರೇಜ್ ನಲ್ಲಿ ಅಂತದೊಂದು ನೋವು ಇದೆ ಅನಿಸುತ್ತಿದೆ. 

ಆದರೆ, ಮುಂದೇನು ಆಗುವುದೋ ನಾ ತಿಳಿಯೆ ? ನನಗೆ ಜೋತಿಷ್ಯವಾಗಲಿ, ರವಿ-ಚಂದ್ರರನ್ನು ಕಾಗದ ಮೇಲೆ ಕುಳ್ಳಿರಿಸಿ
ಮತ್ತೊಂದು ಹುಡುಗಿ ಅಥವಾ ಹುಡುಗನ ಬದುಕಿನ ವ್ಯವಹಾರದ ನೀತಿ ತಿಳಿಯಲು ಸಾಧ್ಯವಾಗಿಲ್ಲ. 

Thursday, July 4, 2013

"ಮದುವೆ ಇಲ್ಲದ ಮೇಲೆ.. !"

ಅದು ನನ್ನ ಸಂಬಂಧಿಕರೊಬ್ಬರ ಮನೆಯಿರುವ ಊರು. ನಾನು ಆಗಾಗ್ಗೆ ಆ ಊರಿಗೆ ಹೋಗುತಿದ್ದೆ. ನನ್ನ ಸಂಬಂಧಿಕರ ಮನೆಗೆ  ಹೋಗುವ ದಾರಿಯಲ್ಲಿ ಒಂದು ಬ್ರಾಹ್ಮಣರ ಮನೆಯಿದೆ(ಜಾತಿಯ ಬಗ್ಗೆ ಬರೆಯಬಾರದೆಂದು ಕೊಂಡಿದ್ದೆ.ಆದರೆ ಕತೆ ಹೇಳಬೇಕೆಂದರೆ ಸಮಾಜದ ಸ್ಥಿತಿಗೆ ಹೊಂದಿಕೊಂಡಿರಲೇ ಬೇಕಲ್ಲವೇ?). ಪಾಪ ಬಡ ಬ್ರಾಹ್ಮಣರು. ಆ ಮನೆಯಲ್ಲಿ ಮೂರೇ ಜನ:ಗಂಡ ಹೆಂಡತಿ ಹಾಗೂ ಒಬ್ಬ ಮಗ. ಒಂದಿಷ್ಟು ಭೂಮಿ,ಎರಡು ದನ ಹಾಗೂ ಹಳ್ಳಿಯ ಸಣ್ಣ ದೇವಲಾಯ ಅಷ್ಟೇ ಅವರ ಆಸ್ತಿ. ಅವರ ಮಗ ೩೫ ರಿಂದ ೪೦ ವರ್ಷದವನು.ನಾನು ಸಣ್ಣವನಿದ್ದಾಗ, ಆ ಸಂಬಂಧಿಕರ ಮನೆಗೆ ಹೋದಾಗ ಅವನಿಗೆ ಭೇಟಿಯಾಗಿ, ಮಾತನಾಡಿ ಬರುತಿದ್ದೆ. ಆ ದಿನಗಳಲ್ಲಿ ಅವನು ಆಟ ಆಡುವ ವಯಸ್ಸಿನ ಮಾಣಿ.  ಅವನು ಒಬ್ಬನೇ ಮಗನಾದ್ದರಿಂದ, ಬ್ರಾಹ್ಮಣರ ಬಡತನ ಸರ್ಕಾರದ ಲೆಕ್ಕಕ್ಕೆ ಸಿಗದೇ ಇರುವುದರಿಂದ ಅವನ ತಂದೆ ತಾಯಿ ಅವನ ಓದುವಿಗೆ ಪ್ರಯತ್ನ ಮಾಡಲೇ ಇಲ್ಲ ಅನಿಸುತ್ತದೆ. ಒಟ್ಟಾರೆ ಅವನು ೩- ೪ ಕ್ಲಾಸು ಓದಿ, ಮನೆ-ತೋಟ-ದನ ಎಂದು ಸ್ವಾಭಿಮಾನದಿಂದ ಬದುಕಿದ ಬಡ ಬ್ರಾಹ್ಮಣ. ವಯಸ್ಸಿನಲ್ಲಿ ನನಗಿಂತ ಸುಮಾರು ೧೦ ವರ್ಷಗಳಷ್ಟು ದೊಡ್ದವನಾಗಿದ್ದರು, ನಾನು ಓದಿ ಮುಂದೆ ಬಂದಿದರಿಂದಲೋ ಏನೋ ನನ್ನ ಜೊತೆ ಗೆಳೆತನ ಇಟ್ಟುಕೊಂಡಿದ್ದ.

ನಿಮಗೆಲ್ಲ ಗೊತ್ತಿರುವಂತೆ, SSLC  ಮುಗಿದ ಕೊಡಲೇ PUC  ಬಗ್ಗೆ , PUC ಮುಗಿದ ಕೂಡಲೇ ಇಂಜಿನಿಯರಿಂಗ್ ಬಗ್ಗೆ, ಇಂಜಿನಿಯರಿಂಗ್ ಮುಗಿದ ಕೂಡಲೇ ಜಾಬ್ ಬಗ್ಗೆ, job  ಸಿಕ್ಕಿದ ಕೂಡಲೇ ಮದುವೆಯ ಬಗ್ಗೆ  ಜನ ಪ್ರಶ್ನೆಗಳನ್ನು ಕೇಳಲು ಕಾತರವಾಗಿರುತ್ತಾರೆ. ನಮಗಿಂತಲೂ ಅದೆಷ್ಟೋ ಮಂದಿ ನಮ್ಮ ಬಗ್ಗೆ ತಿಳಿಯಲು ಉತ್ಸುಕಾರಾಗಿರುವಂತೆ ಕೆಲವೊಮ್ಮೆ ಅನಿಸಿಬಿಡುತ್ತದೆ. ಹೀಗಿರುವಾಗ, ಇಂಜಿನಿಯರಿಂಗ್ ಮುಗಿಸಿ, ನೌಕರಿ ಸಿಕ್ಕಿ ಒಂದು ಒಂದೆರಡು ವರ್ಷಗಳ ಬಳಿಕ ಅವನಿಗೆಲ್ಲ ನನ್ನ job ಕುರಿತಾಗಿ ಮಾಹಿತಿ ಸಿಕ್ಕಿದೆ. ಒಂದು ದಿನ, ಸಂಬಂಧಿಕರ ಮನೆಗೆ ಹೋಗುವಾಗ ಸಿಕ್ಕಿದ, ದೇವರಾಜ, "ಎಷ್ಟು ದೂರ ?.... ಜಾಬ್ ಸಿಕ್ಕೆದೆಯಂತೆ ! ನಮಗೆಲ್ಲ ಗೊತ್ತೇ ಇಲವಲ್ಲ ಮಹರಾಯ! ಮದುವೆ ಯಾವಾಗ? ಮದುವೆಗಾದರೂ ಕರಿತಿಯಾ ತಾನೇ?.. ನೀವೆಲ್ಲಕಾಲೇಜ್ ಹುಡುಗರು ಇವಗಲೇ ಫಿಕ್ಸ್ ಮಾಡಿಕೊಂಡು ಇರ್ತಿರಾ !". ಒಂದು ಮಾರ್ಕ್ಸ್ ಗೆ ಸರಿಯಾಗಿ ಉತ್ತರಿಸಲೇ ಅಥವಾ ೧೦ ಮಾರ್ಕ್ಸ್ ಗೆ ಸರಿಯಾಗಿ ಉತ್ತರಿಸಲೇ ಎಂದು ಯೋಚಿಸುತ್ತಲೇ, " ಹಾಗೇನಿಲ್ಲ, ದೇವರಾಜರವರೆ, ಜಾಬ್ ಸಿಕ್ಕಿ ಎರಡು ವರ್ಷ ಆಯಿತು. ಈ ಕಡೆ ಬರ್ಲಿಕ್ಕು ಆಗಿಲ್ಲ. ಮದುವೆ ಬಗ್ಗೆ ನಮ್ಮದೇನಿದೆ... ಅಪ್ಪ-ಅಮ್ಮ ನೋಡ್ಕೊತ್ತಾರೆ..." ಎಂದು  ಉತ್ತರಿಸಿ, ಅವರ ಅಂಗಳಕ್ಕೆ ಇಳಿದು ಸ್ವಲ್ಪ ನೀರು ಕುಡಿಯಲು ಮುಂದೆ ಬಂದೆ.

ಅವನ ಅಪ್ಪ-ಅಮ್ಮ  ಸಂಬಂಧಿಕರೊಬ್ಬರ ಮದುವೆಗೆಂದು ಒಂದು ವಾರದ ಹಿಂದೆ ಘಟ್ಟ ಇಳಿದು ಹೋಗಿದ್ದಾರೆ. ಮನೆಯ ದಿನ-ನಿತ್ಯದ ಅಡುಗೆ, ದೇವರ ಪೂಜೆ, ದನಗಳ ಚಾಕರಿ ಎಲ್ಲವು ದೇವರಾಜ ಅಚ್ಚು ಕಟ್ಟಾಗಿ ಮಾಡಿಕೊಂಡು ಇರುತ್ತಾನೆ. ಏನೇ ತಪ್ಪಿದರು, ಮನೆ ಮುಂದಿರುವ ದೇವಲಾಯದ  ದೇವರಿಗೆ ಸರಿಯಾದ ಸಮಯದಲ್ಲೊಂದು ಪೂಜೆ,  ಸಂಧ್ಯಾವಂದನೆ ಆಗಲೇ ಬೇಕು- ಹಿರಿಯರು ಕೂಡ ನಡೆದುಕೊಂಡು ಬಂದ ದಾರಿ ಅದು. ಒಬ್ಬನೇ ಇದ್ದ ದೇವರಾಜನಿಗೆ ನನ್ನ ಆಗಮನ, ಮೌನದ ಕದ ತೆರೆದಂತಿತ್ತು.

ಹಲವರು ವಿಚಾರಗಳು ಮಾತನಾಡುತ್ತ, ಉಡುಪಿಯಲ್ಲಿ ನನ್ನ ವಿಹಾರ, ನಾನು ನೋಡಿದ ಯಕ್ಷಗಾನಗಳು, ಭೇಟಿಮಾಡಿದ ವ್ಯಕ್ತಿಗಳು ಎಲ್ಲವನ್ನು ಸೋಗಾಸಾಗಿ ಹೇಳಿ ಎರಡು ತಾಸು ನಾನೇ ಹರಣ ಮಾಡಿರಬೇಕು. ಆತನೊಬ್ಬ ಯಕ್ಷಗಾನದ ಪರಮ ಹುಚ್ಚ...! ಮಾತನಾಡುತ್ತ," ನೀವು ಮದುವೆ ಯಾಗುವುದಿಲ್ಲವೇ ? " ಎಂದು ಪ್ರಶ್ನಿಸಿ ಬಿಟ್ಟೆ. ಆ ಕಾಲದಲ್ಲಿ ಅವರ (ಹಳ್ಳಿಯ ಬಡ, ಓದಿರದ ಬ್ರಾಹ್ಮಣ ಹುಡುಗರ) ಬದುಕಿನ ನೋವು ನನಗೆ  ಗೊತ್ತೇ ಇರಲಿಲ್ಲ.

ಉತ್ತರ ಕನ್ನಡ ಜಿಲ್ಲೆಯಲ್ಲಿರುವ ಬ್ರಾಹ್ಮಣರು  ಶುದ್ಧ ಚಾರಿತ್ರ್ಯಕಾಗಿ ಸ್ವಾಭಿಮಾನದಿಂದ ಬದುಕುವಂತವರು. ಆದರೆ,ಈ ತಲೆಮಾರಿನಲ್ಲಿ ಹೆಣ್ಣು ಮಕ್ಕಳ  ಸಂಖ್ಯೆ ತಿರವೇ ಕುಸಿದಿದೆ. ಹಾಗೆಂದು ಜಾತಿಯನ್ನು ಮೀರಿದ ಮದುವೆಯನ್ನು ಮಾಡಲು ಅವರ ಸಂಪ್ರದಾಯ ಖಂಡಿತ ಒಪ್ಪದು. ಹೀಗಾಗಿ ಕೇವಲ ಓದಿದ, ಹೊರದೇಶಗಳಲ್ಲಿ ಅಥವಾ ಉನ್ನತ ಸ್ಥಾನದಲ್ಲಿರುವ ಹುಡುಗರಿಗೆ ಮಾತ್ರ ಮದುವೆಯ ಭಾಗ್ಯ. ಹಳ್ಳಿಯಲ್ಲಿದ್ದು, ದೇವಸ್ಥಾನ, ದನ, ಕೃಷಿ ಎಂದುಕೊಂಡ ಬದುಕು ಸವೆಸುತ್ತಿರುವ ಹುಡುಗರ  ಹಣೆಬರಹಕ್ಕೆ ಬ್ರಹ್ಮ ದೇವ ಒಳ್ಳೆದನ್ನು ಬರೆಯಲೇ ಇಲ್ಲ ಅನಿಸುತ್ತದೆ.

ದೇವರಾಜ ಕೂಡ ಇಂಥ ಹಳ್ಳಿಯ ಸಂಪ್ರದಾಯ ಬದ್ಧ  ಕುಟುಂಬಕ್ಕೆ ಸೇರಿದ ಹುಡುಗ. ಯೌವನದ ಕಾಲದಲ್ಲಿ ಒಂದೆರಡು ಹುಡುಗಿಯರನ್ನು ನೋಡಿದ್ದರು, ಹಳ್ಳಿಯ ಹುಡುಗ, ಓದಿರದ ಹುಡಗ ಎಂದೆಲ್ಲ ಮೂಗು ಮುರಿದು ಹೋದ ಕನ್ಯಾಪಿತ್ರುಗಳೇ ಬಹಳ. ಒಂದು ಹಂತದಲ್ಲಿ ಅವನಿಗೆ, ತನ್ನ ಬಗ್ಗೆ ಕೀಳಾಗಿ ಕಾಣುವ  ಇಂಥ 'ಸ್ವಜಾತಿಯ'  ಕನ್ಯಾ ಪಿತೃಗಳಲ್ಲಿ ಭಿಕ್ಷೆ ಬೇಡುವದು ಸಾಕೆಂದು, ಅಂತರ ಜಾತಿಯ ವಿವಾಹದ ಬಗ್ಗೆಯೂ ತನ್ನ ಹಿತೈಸಿಗಳಿಂದ ತಂದೆ-ತಾಯಿಗಳಿಗೆ ಒಪ್ಪಿಸಲು ಪ್ರಯತ್ನಿಸಿದ. ಉದ್ದಾಮ ಪಂಡಿತರು ಎನಿಸಿಕೊಂಡಿರುವ ಅವನ ತಂದೆ, ಮುಂದೆ ಸ್ವರ್ಗದಲ್ಲಿ ಸಿಗಬೇಕಾದ ಸ್ಥಾನ-ಮಾನ ಸಿಗದೇ ಹೋದಿತೆಂದು, ಸ್ವಜಾತಿಯರಲ್ಲದ ಮದುವೆಗೆ ಖಂಡಿತ ಒಪ್ಪದಿರುವುದು ಮಾತ್ರವಲ್ಲ, ತಾನು ಬದುಕಿರುವಾಗ ಹಾಗೇನು ನಡೆದರೆ ಮುಂದಿನ ವಿಷಯಕ್ಕೆ ನೀವೇ ಹೊಣೆ ಎಂದು ಹಿತೈಸಿಗಳಿಗೆ ಬಿಸಿ ಮುಟ್ಟಿಸಿದ್ದರು.

ಸ್ವರ್ಗ, ದೇವರು, ಸಂಪ್ರದಾಯ, ಜಾತಿ ಏನೇ ಹೇಳಿದರು ಮನುಷ್ಯರೆಲ್ಲರೂ ಉಪ್ಪು ತಿಂದು ಬದುಕಿದವರೇ. ಎಲ್ಲರಿಗು ಒಂದು ಸ್ವಾಭಿಮಾನ, ಭಾವನಾತ್ಮಕ ಸಂವೇದನೆ ಇದ್ದೆ ಇರುತ್ತದೆ. ಕನ್ಯಾ ಪಿತೃಗಳ  ತಿರಸ್ಕಾರ, ಅಪ್ಪನ ಸ್ವರ್ಗದ ಆಸೆ  ಇವುಗಳ ನಡುವೆ ತನ್ನ ಯೌವನದ ಆಕಾಂಕ್ಷೆಗಳನ್ನು ದಿನ-ದಿನ ಯೋಚಿಸುತ್ತ, ಬದುಕಿನ ಉತ್ತರಕ್ಕಾಗಿ ಹೆಣಗುತಿದ್ದಾನೆ ದೇವರಾಜ. ಒಂದು ಹಂತದಲ್ಲಿ ತನ್ನ ಜೀವನದಲ್ಲಿ ಮದುವೆ ಇಲ್ಲಎಂದು  ನಿರ್ಧಾರಕ್ಕೆ ಬಂದು, ಬದುಕಿನಲ್ಲಿ ತುಂಬಾ ಜಿಗುಪ್ಸೆ ಹೊಂದಿ ದುರಲೋಚನೆಗಲಿಗೂ ಒಳಗಾದ.

ಕೊನೆಗೆ ಅವನ ಮಾತು ಈ ರೀತಿಯಾಗಿ ನನ್ನ ಮುಂದೆ  ನಿಂತಿತು:
"ಕಮಲದ ಹೂವು, ಗುಲಾಬಿ ಹೂವು ಯಾರೋ ಒಬ್ಬರು ಮುಡಿದು ಕೊಳ್ಳಬಹುದು ಎಂದು ಹುಟ್ಟಿದಲ್ಲ. ಹಾಗೆಯ ನಾನು ಕೂಡ ಯಾರಿಗಾಗಿಯೂ ಬದುಕಬಾರದು. ಕನ್ಯಾಪಿತೃಗಳ ತಿರಸ್ಕಾರ ನನೆಗೇನು ಎಂದು ಕೊಂಡು ಸಮಾಧಾನಿಸಿ ಕೊಂಡೆ. ಆದರೆ ಕಮಲ ಅರಳಿ ನಿಲ್ಲ ಬೇಕಾದರೆ ಕನಿಷ್ಠ ನೀರು-ಕೆಸರು ಇರಲೇ ಬೇಕಲ್ಲವೇ? ಮನುಷ್ಯನಿಗೆ ಸ್ವಾಭಿಮಾನ - ಭಾವನೆ, ಪ್ರೀತಿಗಳೇ ಅಧಾರ. ಅದಿಲ್ಲದಿದ್ದರೆ  ಹೇಗೆ ತಾನೇ ಬದುಕ ಬೇಕು? ಮದುವೆ ಇಲ್ಲದ ಮೇಲೆ ಮಕ್ಕಳು ಎಂಬ ಭಾಗ್ಯವಿದೆಯೇ?  ನಾನು ಯಾರಿಗಾಗಿ ಬದುಕಬೇಕು? ಅದಕ್ಕೆ ನಾನು ಕಳೆದ ಒಂದೆರಡು ವರ್ಷಗಳಿಂದ ನಮ್ಮ ಭೂಮಿಯ ಅರ್ಧ ಭಾಗ ಸಾಗುವಳಿನೇ ಮಾಡಿಲ್ಲ. ಒಂದು ದೇವರ ಪೂಜೆ, ಒಂದು ಊಟ...ಅಷ್ಟೇ ಸಾಕು....ಅರ್ಧ ಜೀವನ ಮುಗಿದಿದೆ ... ಮತ್ತೇನು ಬೇಕು ಈ ಜೀವನದಲ್ಲಿ...?"

ಹಳ್ಳಿಗಾಡಿನ ಮಧ್ಯೆ, ಶಿಕ್ಷಣವೇ  ಇಲ್ಲದಿದ್ದರೂ ಬದುಕಿನ ಬಗ್ಗೆ ಅದೆಷ್ಟೋ ನೋವು ಇದ್ದರು ಮನೆ ಯೊಂದನ್ನು ಏಕಾಂಗಿಯಾಗಿ ನಡೆಸುತ್ತ  ಬದುಕಿಗೊಂದು ಅರ್ಥ ಬರೆಯಲು ಹೋರಾಟ ಅವನಿಗೆ  ನನ್ನಲ್ಲಿ ಉತ್ತರವೇ ಇರಲಿಲ್ಲ. ಮದುವೆಯ ಪರಿಕಲ್ಪನೆ, ಅದರ ಹಿಂದೆ ಅಂತಹ ನೋವುಗಳು ಅಷ್ಟೊಂದು ಆಳವಾಗಿ ಇರುತ್ತವೆ ಎಂದು ನಾನು ಭಾವಿಸಿಯೇ ಇರಲಿಲ್ಲ. ಪುರುಷ ಜೀವನದ ಯಾವುದೇ ಗುರಿ-ಕಲ್ಪನೆಗಳಿದ್ದರು ಅದು ಒಂದು ಹೆಣ್ಣಿನೊಂದಿಗೆ ತಳಕು ಹಾಕಿ ಕೊಂಡಿರುತ್ತದೆ. ಪುರುಷನ ಕ್ರಿಯಾತ್ಮಕ ಚಟುವಟಿಕೆಗಳಿಗೆ ಹೆಂಡತಿಯ ನೋಟ, ಮಕ್ಕಳ ಆಟ  ಪ್ರೇರಣೆಯಾಗಿರುತ್ತದೆ.
ಹೆಣ್ಣಿನ ತಾರತಮ್ಯ, ವರದಕ್ಷಿಣೆ ಮತ್ತು 'ಹೆಣ್ಣು ಒಂದು ವಸ್ತು' ಎಂದು ಪರಿಗಣಿಸುವ ಸಾಮಾಜಿಕ ಧೋರಣೆಯಿಂದಾಗಿ 'ಹೆಣ್ಣು ಮಗು ಬೇಡ' ಎಂಬ ಕೂಗು ಇದೆ. 'ಹೆಣ್ಣು  ಮಗು ಹುಟ್ಟಲಿ" ಎಂದು ದೇವರಲ್ಲಿ ಮೊರೆ ಇಡುತ್ತಿರುವ  ಹೆಣ್ಣುಗಳಿಗೆ ಈ ಲೇಖನ ಅರ್ಪಿಸುತ್ತೇನೆ.

ನನ್ನ  ಸಹೋದ್ಯೋಗಿಯೊಬ್ಬ  ಇತ್ತೀಚಿಗೆ ಒಂದು ಹುಡುಗಿಯನ್ನು ನೋಡಿ ಬಂದ . ಅವನಿಗೆ  ಅವಳು ಇಷ್ಟವಾಗಿದ್ದಳು. ಆದರೆ ಕುಟುಂಬದ ಹಿರಿಯರಿಗೆ ಯಾವೊದೋ ಕಾರಣಕ್ಕೆ ಸರಿಬರದಿದ್ದರಿಂದ ಸಂಬಂಧವನ್ನೇ ಮುರಿದುಕೊಂಡರು. ತನ್ನ ಕತೆಯನ್ನು ವಿವರಿಸುವಾಗ ,"ಏನ್  ಐತ್ಲೇ  ಜೀವನ... ಎಷ್ಟು ಓದಿದರೂ , ಎಷ್ಟು ಸಂಪಾದನೆ ಮಾಡಿದರೂ  ಜೀವನ ಅಷ್ಟೇ ...ನಮ್ಮ ಬೇಕು-ಬೇಡಗಳನ್ನು  ನಿರ್ಧರಿಸುವರು ಬೇರೆಯವರೇ ಆಗಿರುತ್ತಾರೆ". ಈ ಮಾತು ದೇವರಾಜನ ನೆನಪು ತಂದು ಕೊಟ್ಟಿತ್ತು .