Thursday, January 9, 2014

ನಿಮ್ಮ ಹವ್ಯಾಸಗಳೇನು ?

ನಾನು ಯಾರನ್ನಾದರು ಹೊಸದಾಗಿ ಭೇಟಿಯಾದಾಗ ಕೇಳುವ ಪ್ರಶ್ನೆಗಳಲ್ಲಿ ಇದು ಒಂದು. ಕೆಲವರಿಗೆ ಇದು ಬಹಳ ತಲೆ ನೋವಿನ ಪ್ರಶ್ನೆ. ಆದರೆ ಹವ್ಯಾಸಗಳ ಹಿಂದೆ ಏನಿದೆ?

ಹವ್ಯಾಸಗಳು ಯಾವುದೇ ವ್ಯಕ್ತಿಯ ಸೃಜನಶೀಲ ಅಭಿವ್ಯಕ್ತಿಯ ಪದರಗಳು. ಒಂದು ವ್ಯಕ್ತಿಯ ಹವ್ಯಾಸಗಳಿಂದ ಅವನ ಆಸಕ್ತಿ, ಅವನ ವ್ಯಕ್ತಿತ್ವದ ಕೆಲ ಭಾಗಗಳನ್ನೂ ಗಮನಿಸಲು ಸಾಧ್ಯವಿದೆ. ಹಾಗಿರುವುದಕ್ಕು ಕಾರಣವಿದೆ. ಯಾವುದೇ ಹವ್ಯಾಸ ಮನುಷ್ಯನ ಹೃದಯದಲ್ಲಿನ ಸೃಜನ ಶೀಲ ಭಾವದ ತುಡಿತದಿಂದ ಮೇಲೆ ಬಂದಿರುತ್ತದೆ. ಹವ್ಯಾಸಗಳು ಹಣವನ್ನು ತರುವ  ಉದ್ಯೋಗ ಆಗುವುದು ತುಂಬಾ ಕಡಿಮೆ.ಆದರೆ ಇವು ತರುವ ಮಾನಸಿಕ ಸಂತೃಪ್ತಿ ಹೇಳಲಾಗದು. ಯಾವನಿಗೆ ಒಳ್ಳೆಯ ಹವ್ಯಾಸಗಳು ಇರುತ್ತವೋ ಅಂತ ವ್ಯಕ್ತಿ  ಪಾದರಸದಂತೆ ಕೆಲಸದಲ್ಲಿರುತ್ತಾನೆ.

ಆದರೆ ಹವ್ಯಾಸಗಳು ಅಂದರೇನು? ಕೆಲವರಿಗೆ ತಾವು ಏನು ಮಾಡುತ್ತೇವೋ ಅವೆಲ್ಲ ಹವ್ಯಾಸಗಳೇ ಎಂಬ ಭಾವ ವಿದೆ. ಆದರೆ ಅದು ಖಂಡಿತ ಹಾಗಲ್ಲ..! ಹವ್ಯಾಸದಲ್ಲಿ ಗಮನಿಸುವಿಕೆ ಬಹಳ ಮುಖ್ಯ. ಜೊತೆಗೆ ಆ ಗಮನಿಸುವಿಕೆಯಲ್ಲಿ ಒತ್ತಡವಿಲ್ಲ ;ಬದಲಾಗಿ ವಿನೋದವಿದೆ.  ಉದಾಹರಣೆಗೆ TV ನೋಡುವುದು ಹವ್ಯಾಸವಲ್ಲ; ಆದರೆ ನೀವು ಟಿವಿಯಲ್ಲಿ ಬರುವ ಯಾವೊದೋ ಕಾರ್ಯಕ್ರಮ  ಕುರಿತಾಗಿ ಸತತವಾಗಿ ತಿಳಿದು ಕೊಳ್ಳುತ್ತಿರಿ ಅಂದರೆ ನಿಮಗೆ ಆ ವಿಷಯದಲ್ಲಿ ಆಸಕ್ತಿ ಇದೆ ಎಂದರ್ಥ. ಆದರೆ ಸಮಯವನ್ನು ನೀಗಿಸಲು tv  ರಿಮೋಟ್ ಒತ್ತುತ್ತಾ ಚಾನೆಲ್ ಸ್ಕ್ಯಾನ್ ಮಾಡುತ್ತಿರಿ ಅಂದರೆ ನಿಮ್ಮ ಹವ್ಯಾಸ TV  ನೋಡುವುದಾಗಿರುವುದಿಲ್ಲ; ಬದಲಾಗಿ ರಿಮೋಟ್ ಒತ್ತುವ ಹವ್ಯಾಸವೆಂದೆ ಹೇಳಬೇಕು.

ಹವ್ಯಾಸಗಳ ಇನ್ನೊಂದು ವಿಷಯವೆಂದರೆ, consistancy -ನಿರಂತರತೆ. ನೀವು ಯಾವುದೋ ನೋವಿನಲ್ಲಿರಬಹುದು, ನಿದ್ದೆಯ ಗುಂಗಿನಲ್ಲಿರಬಹುದು, ಆದರೆ ನಿಮ್ಮ ಹವ್ಯಾಸದತ್ತ ಕೈ ಹಾಕಿದರೆ ಅವೆಲ್ಲ ಮರೆಗೆ ಸೇರುತ್ತವೆ. ಒಳ್ಳೆಯ ಹವ್ಯಾಸಗಳು ನಿರಂತರತೆ ಹಾಗೂ ಹೊರ ಜಗತ್ತನ್ನು ಮರೆಸಿ ಬಿಡುತ್ತವೆ.

ಹವ್ಯಾಸಗಳು ಹಣ ತರುವುದು ತುಂಬಾ ಕಡಿಮೆ. ಹಾಗೆಂದು ಹವ್ಯಾಸಗಳು ಉದ್ಯಮವಾದಾಗ ಒಳ್ಳೆಯ ಸಾಧನೆಯೇನೋ ಮಾಡಬಹುದು. ಆದರೆ, ಯಾವುದೇ ಹವ್ಯಾಸ ಉದ್ಯಮವಾಗಿಸಲು ಹೊರಟಾಗ, ನಾಲ್ಕಾರು ಜನರನ್ನು ಸೇರಿಸಲೇ ಬೇಕಾಗಿಬರುತ್ತದೆ. ಹೀಗಾಗಿ ಹವ್ಯಾಸದ ನಿಜವಾದ ಕೆಲಸಕ್ಕಿಂತ ನಾಲ್ಕು ಜನರ ಮ್ಯಾನೇಜ್ಮೆಂಟ್ ಹವ್ಯಾಸವಾಗಿ ಮಾನಸಿಕ ನೆಮ್ಮದಿ ದೂರ ಸರಿಯುತ್ತದೋ ಏನೋ  ಜಿಜ್ಞಾಸೆ ನನಗಿದೆ. ಯಾರಾದರು ಹವ್ಯಾಸವನ್ನು  ಬಿಸಿನೆಸ್ ಮಾಡಿಕೊಂಡವರಿಗೆ ಕೇಳಿದರೆ ತಿಳಿಯಬಹುದು ಅಷ್ಟೇ.

ನಾವು ಮಾಡುವ ಪ್ರತಿಯೊಂದು ಕೆಲಸ ಹವ್ಯಾಸವಾಗಿರಲು ಸಾಧ್ಯವಿಲ್ಲ. ಆಫೀಸ್ ನ ಕೆಲಸದಲ್ಲಿ, ಮನೆಯ ಕೆಲಸದಲ್ಲಿ ಅದೆಷ್ಟೋ ವಿಷಯಗಳು ಒತ್ತಡಕ್ಕೆ ಒಳಗಾಗಿ ಮಾಡಬೇಕಾಗಿ ಬರುತ್ತವೆ. ಅದು ಸಹಜ ನಿಯಮ. ಸಮಾಜದ ಜೊತೆಗಿನ ಜೀವನ ಹಾಗೂ ಹಣವನ್ನು ಗಮನಿಸಿ ನಾವು ಕೆಲಸವನ್ನು-ವೃತ್ತಿಯನ್ನು ಮಾಡಬೇಕು. ಆದರೆ ಪ್ರವೃತ್ತಿ ಹಾಗಲ್ಲ; ಅದು ನಮಗಾಗಿ ಮತ್ತು ಕೇವಲ ನಮಗಾಗಿ ಮಾತ್ರ.

ನಾನು ಬಹಳ ಸಾರಿ ಹವ್ಯಾಸಗಳನ್ನು ಕೇಳಿದಾಗ ಕೆಲವರ ಉತ್ತರಗಳು ಹೇಗಿರುತ್ತವೆ ಗೊತ್ತ ?
"ನನಗೆ ಹವ್ಯಾಸಗಳು ಅಂತ ಏನು ಇಲ್ಲ... tv  ನೋಡ್ತೇನೆ ಅಷ್ಟೇ".
ಇನ್ನು ಕೆಲವರ ಉತ್ತರ ಇನ್ನು ವಿಚಿತ್ರ, " ನಾನು ಚಿತ್ರ ಬಿಡಿಸುತ್ತಿದ್ದೆ, ಡಾನ್ಸ್ ಮಾಡುತ್ತಿದೆ, ಹಾಡುತ್ತಿದೆ,....ಆದರೆ SSLC  ತನಕ ಮಾತ್ರ. ಆದರೆ SSLC  ಓದಬೇಕು ಅಂತ ಅಪ್ಪ-ಅಮ್ಮ ಬೈದು ಎಲ್ಲ ಬಿಡಿಸಿದರು. ಇವಾಗ ಇವಾವುದನ್ನು ನಾನು ಮಾಡುವುದಿಲ್ಲ".

ಈ ಉತ್ತರಗಳನ್ನೂ ಗಮನಿಸಿದಾಗ ಮನುಷ್ಯನ ಒರಿಜಿನಲ್  ಆಸಕ್ತಿಯನ್ನೇ ಶಿಕ್ಷಣಕ್ಕಾಗಿ ಬಲಿಕೊಟ್ಟು ಮತ್ತೆ ಬೇರೆ ಏನೋ ಒಂದನ್ನು ಆಗಬೇಕು ಎಂದು ಅಪೇಕ್ಷೆ ಪಡುತ್ತೇವೆ; ಹಣವನ್ನೇನೋ  ತರುತ್ತೇವೆ;ಆದರೆ ಸಂತೋಷ ಹೊಂದುವುದು ಹೇಗೆಂಬ ಪ್ರಶ್ನೆಯೇ ಹವ್ಯಾಸವಾಗಿರುತ್ತದೆ.

ನಾನು ಹೇಳುವುದಿಷ್ಟೇ. ನಿಮ್ಮ ಹವ್ಯಾಸ ನಿಮ್ಮ ಸಹಿ ಅಷ್ಟೇ ಸತ್ಯ(ಯುನಿಕ್). ಸಾವಿರ ಜನ ಚಿತ್ರ ಬಿಡಿಸಬಹುದು  ಆದರೆ ಪ್ರತಿಯೊಬ್ಬರ ಚಿತ್ರ ಬೇರೆ ಬೇರೆನೆ. ನಿಮ್ಮ ಹವ್ಯಾಸಗಳು ಯಾವತ್ತು ನಿಮ್ಮ ನೆಮ್ಮದಿಯ ಕೇಂದ್ರ ಬಿಂದುಗಳು.ದಿನದ ೨೪ ಗಂಟೆಗಳಲ್ಲಿ, ೮ ತಾಸುಗಳನ್ನು ವೃತ್ತಿಗೆ, ೮ ಗಂಟೆಗಳನ್ನು ಪ್ರವೃತ್ತಿಗೆ, ಹಾಗೂ ಉಳಿದೆಂಟು ಗಂಟೆ ನಿದ್ರೆಗೆ ಮಿಸಲಾಗಿರಿಸಿದರೆ ಉತ್ತಮವಂತೆ. ಒಂದೊಮ್ಮೆ ನೀವು ಈ ವಿಷಯದಲ್ಲಿ ಫೇಲ್ ಆಗಿದ್ದರೆ ಪರವಾಗಿಲ್ಲ, ನಿಮ್ಮ ಮುಂದಿನ ಮಕ್ಕಳಿಗಾದರೂ ಹವ್ಯಾಸಗಳನ್ನು ಬೆಳೆಸಿಕೊಳ್ಳಲು ಅವಕಾಶಕೊಡಿ. 

 ನಿಮ್ಮ ಒಳ್ಳೆಯ ಹವ್ಯಾಸಗಳು ನಮಗೂ ದಾರಿದೀಪವಾಗಬಹುದು.ತಮ್ಮ ಹವ್ಯಾಸಗಳನ್ನು ನಮಗೆ ತಿಳಿಸುತ್ತಿರಾ?

No comments:

Post a Comment