Saturday, January 18, 2014

ಪ್ರೇಮ ಪತ್ರ...!

ಪ್ರೇಮ ಪತ್ರ ಇವತ್ತು ಅಪ್ರಸ್ತುತ ವಸ್ತು. ಬಹುಶ ನನ್ನ ಜಮಾನದ ಯಾವ ಹುಡುಗ-ಹುಡುಗಿ ಪ್ರೀತಿಯನ್ನು  ಪತ್ರದ ಮೂಲಕ ನಿವೇದನೆ ಮಾಡಿರುತ್ತಾರೆ ಅನಿಸುವುದೇ ಇಲ್ಲ. ಆದರೆ ನಾನು ಪ್ರೇಮ ಪತ್ರ ಬರೆದಿದ್ದೇನೆ... ಒಂದಲ್ಲ, ಎರಡಲ್ಲ..ಸುಮಾರು ಐದಕ್ಕು ಹೆಚ್ಚು..! ಆದರೆ ನಾನು ಪ್ರೇಮ ಪತ್ರ ಬರೆದಾಗ ನನ್ನ ವಯಸ್ಸು ಕೇವಲ ೧೪ ಇರಬಹುದು... ಆದರೆ ಇವತ್ತು, ೨೮ರ ಹರೆಯಕ್ಕೆ ಕಾಲಿಡುತ್ತಿರುವಾಗ ನಾನೊಂದು ಪ್ರೇಮ ಪತ್ರವನ್ನು ಬರೆಯಲು    ಸಾಧ್ಯವಿಲ್ಲದ ಕಾಲದಲ್ಲಿ ನಾನು ಬದುಕುತ್ತಿದ್ದೇನೆ ಅಂದುಕೊಂಡಾಗ ನನಗೆ ನೋವು ಇದೆ..! ಈ ಬದಲಾವಣೆ ಒಪ್ಪಿಕೊಳ್ಳುವುದು ನನಗೆ ಸಾಧ್ಯವಾಗುತ್ತಿಲ್ಲ.

ನಾನು ಹಳ್ಳಿಯ ಹುಡುಗ. ಹಳ್ಳಿಯಲ್ಲಿ ಕಲಿತ್ತುರವರ ಸಂಖ್ಯೆ  ತುಂಬಾ ಕಡಿಮೆ. ಬಡತನ ಅಥವಾ ಇನ್ನಾವುದೋ ಕಾರಣದಿಂದ ಓದುವ ಮಕ್ಕಳ ಸಂಖ್ಯೆ ಕಡಿಮೆ ಮಾತ್ರವಲ್ಲ; ಶಿಕ್ಷಣದ ಗುಣ ಮಟ್ಟ ತುಂಬಾ ಕಡಿಮೆಯೂ ಆಗಿರುತ್ತದೆ. ಆದರೆ ನಾನು ಯಕ್ಷಗಾನದ ಪ್ರಭಾವದಿಂದಗಾಗಿ, ರಾಮಾಯಣ-ಮಹಾಭಾರತ  ಕತೆ ಓದಲು ಉತ್ಸುನಾಗಿ ಬಿಟ್ಟಿದ್ದೆ.ಯಾವುದೇ ವ್ಯಕ್ತಿ ಹೇಳಿದ ಶಬ್ಧಗಳನ್ನು ವಾಕ್ಯಗಳಾಗಿ ಬರೆಯುವ ಸಾಮರ್ಥ್ಯ ನನಗಿತ್ತು ಆ ದಿನಗಳಲ್ಲಿ...(ಹಳ್ಳಿಯಲ್ಲಿ ಇದು ಅದ್ಭುತ ..! ಆ ಕಾಲದಲ್ಲಿ).  ಹೀಗಾಗಿ ಹಳ್ಳಿ ಮಂದಿಯ ತಲೆಯಲ್ಲಿ ನಾನೊಬ್ಬ ಓದುವ-ಬುದ್ದಿವಂತ ಹುಡುಗ.

ಪ್ರೀತಿ ಪ್ರೇಮಗಳೇನು ಕೇವಲ ಕಾಲೇಜು ಮೆಟ್ಟಿಲು ಹತ್ತಿ, ಆಂಗ್ಲ ಭಾಷೆಯಲ್ಲಿ, "I LOVE YOU" ಅನ್ನಲು ಬರುವವರಿಗೆ ಮಾತ್ರ ಅಂದು ಕೊಂಡಿದ್ದಿರಾ? ಖಂಡಿತ ಇಲ್ಲ. ಮನುಷ್ಯನಾಗಿ ಹುಟ್ಟಿದ, ಶಿಕ್ಷಣ ಪಡೆಯದ ಹಳ್ಳಿಯ ಮುಗ್ದ ಜನರಲ್ಲೂ ಪ್ರೀತಿಯ ಕುರಿತಾಗಿ ನವಿರಾದ ಭಾವನೆಗಳಿರುತ್ತವೆ. ಆದರೆ ಮೊಬೈಲ್, ಲ್ಯಾಂಡ್ ಲೈನ್ ಗಳೇ ಇಲ್ಲದ ಕಾಲದಲ್ಲಿ ನಂಬಿಕಸ್ತ ವ್ಯಕ್ತಿಯ ಮೂಲಕ ಪ್ರೀತಿಯ ನಿವೇದನೆ ಹೇಳಿಕೊಳ್ಳುವುದು ಇಲ್ಲವೇ ಪ್ರೇಮ ಪತ್ರ ಮಾತ್ರ ದಾರಿ. ಆದರೆ ವ್ಯಕ್ತಿಯ ಮೂಲಕ ಇಷ್ಟ-ಕಷ್ಟಗಳನ್ನೂ ಹೇಳಿ ಕಳಿಹಿಸಬಹುದೇ ಹೊರತು ಭಾವನೆಗಳನ್ನು ತೆರೆದಿಡಲು ಸಾಧ್ಯವಿಲ್ಲ. ಹೀಗಾಗಿ ಪ್ರೇಮ ಪತ್ರಗಳೇ ಕೊನೆಯ ದಾರಿ. ಆದರೆ ದೂರದ ಹೃದಯದ ಬಾಗಿಲು ಬಡಿಯಲು ಅಕ್ಷರ ಬೇಕೇ ಬೇಕು!

ಹೀಗಾಗಿ, ನಾನು ೫-೬-೭ ನೆ ತರಗತಿಗಳಲ್ಲಿ ಓದುತ್ತಿದಾಗ ನೆರೆಯ ಹೆಣ್ಣುಮಕ್ಕಳು, ಗಂಡುಮಕ್ಕಳು ನನ್ನಿಂದ ಪ್ರೇಮ ಪತ್ರ ಬರೆಸಿಕೊಳ್ಳಲು ಬಂದಿದ್ದರು;ನನ್ನನು ತಮ್ಮ ಮನೆಗೂ ಕರಿಸಿ ಕೊಂಡಿದ್ದರು.ಒಂದು ದುರದೃಷ್ಟ ಅಂದರೆ ಒಂದು ಕಡೆ ಒಬ್ಬರಿಗಾಗಿ ಪ್ರೇಮ ಪತ್ರ ಬರೆದು ಕೊಟ್ಟ ಮೇಲೆ, ಅದು ಇನ್ನೊಬ್ಬರಿಗೆ ತಲುಪಿದ ಮೇಲೆ ನಾನೇ ಓದಿ ಹೇಳಿದ ಪ್ರಸಂಗವು ಇದೆ.  ಆ ಪತ್ರಗಳು ಹಳ್ಳಿಯಲ್ಲಿ ಸಿಗುತ್ತಿದ ಉದುಬತ್ತಿಯ ಬಾಕ್ಸ್ ನ ಪೇಪರ್ ಆದರು ಸರಿ, ಇಲ್ಲ ಹಳೆಯ ನೋಟ್ಬುಕ್ ಆದರು ಸರಿ..ಇಲ್ಲ ನನ್ನ ನೋಟ್ ಬುಕ್ ನ ಒಂದು ಹಾಳೆ ಆದರು ಸರಿ.. ಒಂದು ಪತ್ರದ ಸಾಧಾರಣ ವಿಷಯ ಹೀಗೆ ಇರುತ್ತಿತ್ತು:

ಶ್ರೀ ಮನೋಜನಿಗೆ ನಮಸ್ಕಾರಗಳು.
      ನಾನು  ಆರಂ ಇದ್ದೇನೆ. ನೀವು ಆರಂ ಇದ್ದಿರೆಂದು ಭಾವಿಸುತ್ತೇನೆ.
ನಾನು ಮುಂದಿನ ಹುಣ್ಣಿಮೆಯ  ನಂತರದ  ಪಾಡ್ಯದ ದಿನ, ಹೂವಿನತೋಟದಲ್ಲಿ ನಡುಯುವ ಸತ್ಯ ನಾರಾಯಣ ವೃತಕ್ಕೆ ಬರುತ್ತೇನೆ. ನೀವು ಬನ್ನಿ. ಮುದ್ದಾಂ ಬನ್ನಿ. ಉತ್ತರ ಬರೆದು ತಿಳಿಸಿ.

ಆಕಾಶಕ್ಕೆ ಚಂದ್ರಮ ಚಂದ, ಕೆರೆಗೆ ತಾವರೆ ಚಂದ, ನನಗೆ ನೀನೆ ಚಂದ.
ಗುಡಿ ಇಲ್ಲದ ನಾಡು, ನೀನಿಲ್ಲದ ಬಾಳು ಎರಡು ಹಾಳು...!
ಆಕಳು ಕಪ್ಪಾದರೆ ಹಾಲೂ ಕಪ್ಪಲ್ಲ.....
......

                                                                 ನಿನ್ನ ಪ್ರೀತಿಯ (ಮನೋಜಾಕ್ಷಿ).

ಪತ್ರ ಮುಗಿಯಿತು. ಈ ಪತ್ರಕ್ಕೆ ತಾರಿಖು ಹಾಕಿದ್ದು ನನಗಂತೂ ನೆನಪಿಲ್ಲ. ಅವರ ಸಹಿಯಂತು ಇಲ್ಲವೇ ಇಲ್ಲ . ಆದರು ಇವು ಜೀವಂತ ಪ್ರೇಮ ಪತ್ರಗಳು. ಈ ಪತ್ರಗಳು ಒಂದು ಕಡೆಯಿಂದ ಹೊರತು ಇನ್ನೊಂದು ಕಡೆ ಸೇರಲು ವಾರಗಳೇ ಬೇಕಾಗಿದ್ದವು. ಇಂತ ಪತ್ರವನ್ನು ನಂಬಿದ ಆ ಪ್ರೇಮಿಗಳ ಪ್ರೀತಿ ಅದೆಷ್ಟು ಮುಗ್ಧ ಹಾಗೂ ಭಾವುಕತೆಯಿಂದ ಕೂಡಿದ್ದು ಅನಿಸುವುದಿಲ್ಲವೇ? ಅಂತ ಪತ್ರಗಳನ್ನು ಬರೆದು ಪ್ರೀತಿಸಿ ಮದುವೆಯಾದವರ ಮಕ್ಕಳು ಇವತ್ತು ಕಾಲೇಜಿನ ಮೆಟ್ಟಿಲು ಏರಿದರೂ....ಮೊಬೈಲ್ ನಿಂದ ದಿವಾಳಿಯೆದ್ದು...ಪ್ರೇಮ ಪತ್ರದ ಮೂಲಕ ಪ್ರೀತಿಯ ನಿವೇದನೆ ಮಾಡಿಕೊಳ್ಳಲು ಸಾಧ್ಯವೇ ಇಲ್ಲ.

ದೇಶ ಭಾಷೆಗಳರಿಯದ, ಕುಡಿ ಮಿಸೆಯೇ ಇರದ
ಮೋಸ ವಂಚನೆ ತಿಳಿಯದ ಬಾಲ್ಯದಲ್ಲೊಂದು
ವಿಷಯ ಭರಿತ ಪ್ರೇಮ ಪತ್ರವನು ಬರೆದು
ಅಸಮ ಸಾಹಸಿ ನಾನೆಂದರೆ  ನಿವೋಪ್ಪುವಿರೆನು?

ನನ್ನ ಕನ್ನಡ ಉಪಾಧ್ಯಾಯರು ಒಮ್ಮೆ ಕಾಳಿದಾಸನ 'ಮೇಘದೂತ ' ಪ್ರೇಮಿಗಳ ವಿರಹ ಅಗ್ನಿಯ ಪ್ರೇಮ ಒಡಲಿಂದ ಸಿಳಿದು ಬಂದ ಭಾವನೆಗಳ ಸಮಗ್ರ ಕಥನ ಎಂದು ಹೇಳಿದ್ದರು. ಪ್ರೇಮದ ಹಿಂದೆ ಮಧುರ ಭಾವನೆಗಳಿವೆ, ಅದರಲ್ಲಿ ಅಪಾರ ಶಕ್ತಿಯಿದೆ ಎಂದು ಅವರು ಹೇಳಿದ್ದರು. ಆದರೆ ಅವರೆಂದೂ ನೀವು ಪ್ರೇಮ ಪತ್ರ ಬರೀರಿ ಎಂದು ಹೇಳಿಯೇ ಇಲ್ಲ ಅಂತ ನನಗೆ ಇವತ್ತು ಬೇಸರವಾಗುತ್ತಿದೆ. 'ಮೇಘದೂತ' ಇಂದಿಗೂ ನಾನು ಓದಿಲ್ಲ..

ತಂತ್ರಜ್ಞಾನ ಬೆಳೆಯಿತು.. ಕುಳಿತಲ್ಲೇ ಪ್ರೇಮಿಗೆ ಸಂದೇಶವನ್ನು ಕಳಿಸಬಹುದಾದ ಮಾತ್ರವಲ್ಲ ನೋಡಬಹುದಾದ ಸಾಧನಗಳು ಬಂದವು. ಆದರೆ ಇಂದಿನ ಪ್ರೇಮದ ಅತಿದೊಡ್ಡ  ಪ್ರೇಮ ಸಂದೇಶದಲ್ಲಿ ಇರಬಹುದಾದ  ಅಕ್ಷರಗಳ ಸಂಖ್ಯೆ ೮ ಮಾತ್ರ (I LOVE YOU )... ಅಥವಾ ಇನ್ನು ಕೆಲವರು ಅದನ್ನೂ ಕೂಡ ILY  ಎನ್ನುವವರಿದ್ದಾರೆ. ಎಷ್ಟು ಸಣ್ಣದಾಗಿ ಹೇಳಬಹುದು? ಸಮಯ ಉಳಿದಿದೆ ಎಂದು ನಾವು ಭಾವಿಸಿ ಸಮಧಾನ ಪಡಿಸಿಕೊಳ್ಳಬಹುದಾದರು ಇಲ್ಲೊಂದು ದುರಂತ ಸಂಭವಿಸಿದೆ.

ಅದೇನೆಂದರೆ, ಯಾವುದಕ್ಕೂ ಅಭ್ಯಾಸ ಬೇಕು. ಅದಕ್ಕಾಗಿಯೆ "ಪ್ರಾಕ್ಟೀಸ್ ಮೇಕ್ಸ್ ಮ್ಯಾನ್ ಪರ್ಫೆಕ್ಟ್" ಎಂದಿದ್ದು. ಪ್ರೇಮ ಪತ್ರಗಳನ್ನು ಬರೆಯುವ ಕಾಲದಲ್ಲಿ, ಹೇಗೆ ಬರೆದರೆ ಸರಿ ? ಎಂಬ ಪ್ರಮೇಯಗಳು ಸಾವಿರಾರು ಬಗೆಯಲ್ಲಿ ಮನಸ್ಸಿಗೆ ಯೋಗ ಅಭ್ಯಾಸ ಮಾಡಿಸುತ್ತಿತ್ತು... ಮನಸ್ಸು ಪ್ರೇಮದ ವಿಷಯದಲ್ಲಿ ಪರಿ ಪಕ್ವತೆಯನ್ನು ಹೊಂದುತ್ತಿತ್ತು. ವಿರಹದ ಬೆಂಕಿ  ಸಾಹಿತ್ಯವನ್ನು, ನವಿರಾದ ಕಲ್ಪನೆಗಳನ್ನು, ಮಾನವೀಯ ದೃಷ್ಟಿಯನ್ನು  ಬೆಳೆಸಲು ಒತ್ತಡ ಹೆರುತಿತ್ತು. ಆದರೆ, ಇಂದು ಒಂದು ಕ್ಷಣದಲಿ ಪ್ರೇಮ ನಿವೇದನೆಯಾಗಿ, ಎರಡು ದಿನದಲ್ಲಿ ಮದುವೆಯಾಗಿ, ಫೇಸ್ಬುಕ್ ನಲ್ಲಿ ಫೋಟೋ ಹಾಕಿಸಿ ... ಒಂಬತ್ತು ತಿಂಗಳು ಕಳೆಯುವದರಲ್ಲಿಯೇ ಡಿವೋರ್ಸ್  ಅಂತ ಅಲೆಯುವ ಮಂದಿ ಕಂಡಾಗ, ನಾನು ಅಂದು ಕೊಳ್ಳುವುದು..."ಒಹ್ ಇವರ ಮನಸ್ಸಿಗೆ ಪ್ರೇಮದ ಕುರಿತಂತೆ ಯೋಗ ಆಗಿಯೇ ಇಲ್ಲ ಅಂತಾ".

ಏನೇ ಆದರು, ನನ್ನ ಕಾಲದಲ್ಲಿ ಪ್ರೇಮ ಪತ್ರ ಬರೆಯುವ ದಿನಗಳೇ ಅಲ್ಲವಲ್ಲ ಅಂತ ತುಂಬಾ ನೋವು ಇದೇ ರೀ ....ನೀವು ಯಾರಾದರು  ಈ ಕಾಲದಲ್ಲೂ ಪ್ರೇಮ ಪತ್ರ ಬರೆದಿದ್ದಿರಾ? ಹೋಗಲಿ ಬಿಡಿ ಒಂದು ಪತ್ರವನ್ನಾದರೂ ಬರೆದಿದ್ದಿರಾ? ಒಟ್ಟಾರೆ ಮೊಬೈಲ್ ಭಾವನೆಗಳನ್ನೇ ಕೊಲೆ ಮಾಡಿದೆ ರೀ ... ಅದಕ್ಕೆ ಮನುಷತ್ವನು ಕೊಲೆಯಾಗಿದೆ ರೀ ...ಮನುಷತ್ವ ಇಲ್ಲದ ಮೇಲೆ ಮನುಷ್ಯ ಒಂದು ರೋಬೋಟ್ ಅಗ್ತನ್ ರೀ... ಅದಕ್ಕೆ ಪತ್ರ ಬರೇರಿ(ನೀವು ನಿಮ್ಮ ಪ್ರೇಮಿಗೆ )

No comments:

Post a Comment