Saturday, August 9, 2014

ಕನಸಿನ ಹುಡುಗಿ -ಸಿಂಚನಾ ::ಭಾಗ-೩( ಮೂಡುಬಿದರೆಯಲ್ಲಿ ಸಿಂಚನಾ ಭೇಟಿ )

ಭಾಗ-೩:
 ಒಂದೂವರೆ ತಾಸಿನ ಸುದೀರ್ಘ ಬಸ್ಸಿನ ಪಯಣದಲ್ಲಿ ಹಾಯಾಗಿ ಮಲಗಿದ್ದೆ. ನಿದ್ರಾ ಲೋಕ ಅದ್ಭುತ. ಅಲ್ಲಿ ತಿರೋಕನೊಬ್ಬ ರಾಜನಾಗಿ, ಮೊದಲ ರಾಜನ ಮಗಳನ್ನೇ ಮದುವೆಯಾಗಿ ಮಕ್ಕಳನ್ನು ಪಡೆದ ಸುಂದರ ಹಾಡು ನೀವು ಶಾಲೆಯ ದಿನಗಳಲ್ಲಿ 'ತಿರುಕನ ಕನಸು'[೧] ಎಂದು ಓದಿರಬಹುದು. ಆದರೆ ನಾನು ಇಂಜಿನಿಯರ್ ವೃತ್ತಿಯಾದ್ದರಿಂದ ನನ್ನ ಕನಸನ್ನು 'ಇಂಜಿನಿಯರ್ ಕನಸು'ಎಂದು ಹೇಳಿ ಕೊಳ್ಳಬಹುದಷ್ಟೇ. ಆದರೆ ಇಲ್ಲಿ ಕನಸ್ಸಿಗೆ ಗೌರವ ಸಿಗುವುದು ಕನಸಿನ  ವಿಷಯದ ಮೇಲೆ ಹೊರತು  ಯಾರು ಕಂಡದ್ದು ಅಂತ ಅಲ್ಲ ಅಲ್ಲವೇ ? ಏನೇನೋ ಕನಸುಗಳು ಬಿದ್ದವು. ಕನಸಗಳು ಒಳ್ಳೆಯದ್ದಾಗಿದರೆ, ನಿದ್ದೆಯಿಂದ ಎದ್ದ ಬಳಿಕ ಆ ಕನಸಿನ ಕುತೂಹಲಕಾರಿ ಅಂಶಗಳು ಮತ್ತೆ ಮೆಲುಕು ಹಾಕಿ ವಿಚಿತ್ರವಾದ ವಿನೋದವನ್ನು, ಧನಾತ್ಮಕಭಾವನ್ನು ನೀಡುವುದಂತು ಸತ್ಯ.

ಕನಸ್ಸು ಯಾವ ಘಟ್ಟದಲ್ಲಿತ್ತೋ ಗೊತ್ತಿಲ್ಲ, ಆದರೆ ಮೂಡುಬಿದರಿಯ ಹತ್ತಿರ ಬಂದಾಗ, ಬಸ್ಸು ನೇರವಾಗಿ ಸಾಗದೆ  ಚಿಕ್ಕದಾದ ರಸ್ತೆಯಲ್ಲಿ ವಾಲುವಿಕೆ ಬಹಳವಾಗಿತ್ತು. ಬಸ್ಸಿನ ಯಾವ ವಾಲುವಿಕೆ ನನ್ನನ್ನು ನಿದ್ದೆಗೆ ಆಹ್ವಾನಿಸಿತ್ತೋ ಅದೇ ವಾಲುವಿಕೆ ನಿದ್ದೆಯಿಂದ ಎಚ್ಚರಿಸಿತ್ತು. ಕನಸು ಅಪೂರ್ಣವಾಗಿತ್ತು. ಆದರೆ ಕನಸ್ಸಿನ ಪರಿಣಾಮ ಮನಸ್ಸಿಗೆ ಹಿತವಾದ ಮುದವನ್ನು ನೀಡುತ್ತಿತ್ತು. ಕಣ್ಣುಗಳು ಕೈ ವಸ್ತ್ರದಿಂದ ವರೆಸಿದೆ; ಜಾರಿ-ಸರಿದು ಹೋಗಿದ್ದ  ಬಟ್ಟೆಗಳನ್ನು ಸರಿಸಿಕೊಂಡೆ; ಕೂದಲನ್ನು ನಿಳವಾಗಿಸಿದೆ. ಜಿಟಿ-ಜಿಟಿ ಮಳೆಯ ಮಧ್ಯೆ ತಂಗಾಳಿಯಲ್ಲಿ ಸಂತೋಷದ  ಪ್ರಯಾಣವಾಗಿತ್ತು.

ಮೂಡುಬಿದರಿ ಬಸ್ ಸ್ಟಾಂಡ್ ಬಂದಾಗ, ಸಮಯ ೯ ಗಂಟೆ ಆಗಿರಬಹುದು. ಮತ್ತೆ ವಾಹನ ಸಹಾಯಕ(ಕ್ಲೀನರ್), ಬೆಳ್ತಂಗಡಿ ಎಂದು ಕೂಗಿದ. ಹಿಂದಿನ ಬಾಗಿಲಿಂದ ಕೆಲವು ಮಂದಿ ಮುಂದಿನ ಬಾಗಿಲಿನಿಂದ ಕೆಲವು ಮಂದಿ ಬಸ್ಸು ಏರಿದರು. ಬಸ್ಸು ಹತ್ತುವ ವಿಷಯದಲ್ಲಿ ಹೇಗೆ  ಸಾಲಾಗಿ, ನೂಕು-ನುಗ್ಗಲು ಇಲ್ಲದೆ ಹತ್ತಬೇಕು ಅಂದರೆ ನೀವು ಕರವಾಳಿಯಲ್ಲೇ ನೋಡಬೇಕು. ಬಸ್ಸು ಹತ್ತುವುದು-ಗೂಳಿ ನುಗ್ಗುವುದು  ಸರಿಸಮಾನವಾದುದ್ದು ಎಂದು ಬೈಲಹೊಂಗಲದಲ್ಲಿ ಜನ ಭಾವಿಸುತ್ತಾರೆ.ಅಲ್ಲಿಯ ಜನ ಒಬ್ಬರು ಹೋಗುವ ದಾರಿಯಲ್ಲಿ ನೂರು ಜನ ಕೂಡ ಒಳಪ್ರವೇಶ ಮಾಡಬಹುದು ಎಂದು ಸಾಧಿಸಿ ತೋರಿಸುತ್ತಾರೆ. ಅಲ್ಲಿ ಅಜ್ಜಿ-ಅಜ್ಜ, ಹೆಣ್ಣು-ಗಂಡು ಎಂಬ ಯಾವ ತಾರತಮ್ಯವು ಇಲ್ಲದೆ ನೂರಾರು ವರ್ಷ ಅದೇ ಸೀಟ್ ನಲ್ಲಿ ಕುಳಿತುಕೊಳ್ಳುವವರಂತೆ ಸೀಟ್ ಗೆ  ಜಗಳ ಕಾಯುತ್ತಾರೆ. ಒಮ್ಮೆ ಬೈಲಹೊಂಗಲದಲ್ಲಿ ಬಸ್ಸು ಹತ್ತುವ ವಿಷಯ ನೋಡಿ ನಾಚಿಕೆ ಅನಿಸಿತ್ತು.

ಕರಾವಳಿಯಲ್ಲಿ ಯಾರು ಸೀಟ್ ಗೆ ಓಡುವುದಿಲ್ಲ. ಸೀಟ್ ತಮ್ಮದು ಎಂದು ಅಧಿಕಾರ ಸ್ಥಾಪಿಸುವುದು ಬಹಳ ಕಡಿಮೆ. ಒಂದೊಮ್ಮೆ ಯಾರಾದರು ಕರವಸ್ತ್ರ-ಬಟ್ಟೆ-ಚೀಲಗಳಿಂದ ಸೀಟ್ ನ್ನು ಕಾಯ್ದಿರಿಸಿದ್ದಲ್ಲಿ ಅದನ್ನು ಯಾರು ಮುಟ್ಟಲಾರರು.ನಿಧಾನವಾಗಿ ಸೀಟ್ ಸಿಕ್ಕರೆ ಕುಳಿತಾರು, ಇಲ್ಲವೆಂದರೆ ನಿಂತಾರು. ಹಿಂದಿನಿಂದ ಬಂದವರಿಗೆ ಕೆಲವರಿಗೆ ಸೀಟ್ ಸಿಕ್ಕಿತ್ತು. ಇನ್ನುಳಿದವರಿಗೆ ಸಿಗಲಿಲ್ಲ.

ವಾಹನ ಚಾಲಕನ (ಡ್ರೈವರ್ ) ಹಿಂದಿನ ನಾಲ್ಕು ಸೀಟ್ ಗಳು ಮಹಿಳೆಯರಿಗೆ ಮಿಸಿಲು. ಇದು ಉಡುಪಿ RTO  ನಿಯಮವೆಂದು ಡ್ರೈವರ್ ಹಿಂದಿನ ಗೋಡೆಯ ಮೇಲೆ ಎದ್ದು ಕಾಣುತ್ತದೆ. ಈ ಬಸ್ಸಿನಲ್ಲಿ ಡ್ರೈವರ್ ಹಿಂದಿನ ಮೊದಲ ಎರಡು ಸೀಟ್ ಗಳು ಎದುರು-ಬದರು. ಇನ್ನೇನೋ ವಾಹನ ಬಿಡಬೇಕು ಅನ್ನುವಷ್ಟರಲ್ಲಿ, ಬಸ್ಸಿನ ಮುಂದಿನ ಭಾಗದಿಂದ ಎರಡು ಛತ್ರಿಗಳು ಬಸ್ಸು ಹತ್ತಲು ಬರಲಾರಂಭಿಸಿದವು. ಒಂದು ಛತ್ರಿ ತುಂಬಾ ಹೂವು-ಬಣ್ಣಗಳಿಂದ ಕೂಡಿದ್ದರಿಂದ 'ಹೆಣ್ಣು ಛತ್ರಿ' ಎಂದು ಮೊದಲೇ ಗುರುತಿಸಿದ್ದೆ. ಆದರೆ ಇನ್ನೊಂದು  ಬ್ಲಾಕ್ ಛತ್ರಿಯ ಲಿಂಗ ಶೋಧನೆ ಅಷ್ಟು ಸುಲಭ ಅಲ್ಲ. ಮುಂದಿನ ದ್ವಾರದ ಕ್ಲೀನರ್ ಸೀಟ್ ನ ಹಿಂದಿನ ಸೀಟ್ ನಲ್ಲಿದ್ದ ನಾನು, ಹತ್ತುತ್ತಿರುವ ಜೀವಿಗಳು ಮಾನವ ಹೆಣ್ಣು ಜೀವಿಗಳು ಎನ್ನುವುದನ್ನು ಅರ್ಥೈಸಿಕೊಂಡೆ.

ಛತ್ರಿಗಳು ಮುದುಡಿದವು.ಇಬ್ಬರು ಅದ್ಭುತ ಸುಂದರಿಯರು ಬಸ್ಸನ್ನು ಏರಿ, ಡ್ರೈವರ್ ಹಿಂದಿನ ಸೀಟ್ ನಲ್ಲಿ ಕುಳಿತರು. ಅವರಿಬ್ಬರೂ ಎದುರು ಬದುರು ಕುಳಿತರು. ಬಸ್ಸು ಹೊರಟಿತ್ತು.ಬಸ್ಸನ್ನು ಏರಿದ ಏರಿದ ರೀತಿ, ಛತ್ರಿಗಳನ್ನು ಮುದುಡಿ ಕೆಳಗಿರಿಸಿದ ರೀತಿ, ಸಲ್ವಾರ್ ಕಮೀಜ್ ಗಳನ್ನು ಸರಿಸಿ-ಸಿಲುಕಿಸಿದ  ರೀತಿ, ಮಳೆಯ ಹನಿಗಳಿಂದ ಕುಡಿದ ಮುಖವನ್ನು  ಕರವಸ್ತ್ರದಿಂದಲೂ, ಸಲ್ವಾರ್ನಿಂದಳು ವರೆಸಿಕೊಂಡ ರೀತಿ ಎಲ್ಲವು ನಾನು ಗಮನಿಸುತ್ತಿದ್ದೆ. ಒಂದುಕ್ಷಣ ಎಲ್ಲವು ಸರಿ ಎಣಿಸುತ್ತಿರುವಾಗಲೇ ನೀಳವಾದ ಕೇಶರಾಶಿಯನ್ನು ಮುಂದಕ್ಕೆ ತಿರುಗಿಸಿ, ಕೆನ್ನೆಯ ಮೇಲಿನ ಕೂದಲನ್ನು ಓರಣವಾಗಿಸಿ, ಬಿಂದಿಯ ಮೇಲೆ ಕೈ ಯಾಡಿಸಿ, ಎಲ್ಲವವು ಸರಿ ಎಂದು ಖಚಿತ ಪಡಿಸಿದ ನಂತರ ಇಬ್ಬರು ಮಾತಿಗೆ ತೊಡಗಿದರು.

ಇಷ್ಟೊತ್ತಿಗಾಗಲೇ, ದೇವರ ದರ್ಶನಕ್ಕೆ ಹೋರಾಟ ನಾನು ಹುಡುಗಿಯರನ್ನು ನೋಡಬಾರದು ಅನ್ನುವ ವಿಷಯವನ್ನು ಮರೆತುಬಿಟ್ಟೆ.ನೀಳವಾದ ಕೇಶ ರಾಶಿ, ಬಿಳಿಯಾದ ಮುಖ, ಕೆನ್ನೆಯ ಸುತ್ತಲಿನ ಗುಂಗುರು ಕೂದಲು, ಕಿವಿಗೆ ಜೋಕಲಿಯಾಡುತ್ತಿರುವ ಆಭರಣ, ಕೆಂಪಾದ ತುಟಿಗಳು,ಗಿಣಿಯ ಕೊಕ್ಕಿನಂತಿರುವ ಮೂಗು,ಸೂರ್ಯ ತೆಜ್ಜಸ್ಸಿನ ಕಣ್ಣುಗಳು, ಕೊರಳಲ್ಲಿ ಸುತ್ತುವರಿದಿರುವ ಚಿನ್ನದ ಸರಪಳಿ(ಚೈನ್),ದೇಹಕ್ಕೆ ಅಚ್ಚು ಮೆಚ್ಚುಗೆಯ ಅಪ್ಪಿ ಕೊಂಡಿರುವ ಸುಂದರ ಸಲ್ವಾರ್ ಕಮೀಜ್, ಎಡ ಗೈ ಯಲ್ಲಿರುವ ಒಂದು ಸಣ್ಣ ಗಡಿಯಾರ,ಉದ್ದವಾದ ಉಗುರುಗಳು-ಕೆಂಪು ಬಣ್ಣದ ನೈಲ್ ಪೋಲಿಷ್ ಎಲ್ಲವು ನಾನು ಗಮನಿಸಿದ್ದೆ. ಹುಡುಗಿಯೊಬ್ಬಳನ್ನು ಈ ಪರಿ ನಾನು ನೋಡಿದ್ದು ಇದೆ ಮೊದಲು. ಒಂದೊಮ್ಮೆ  ಅವಳ ಚಿತ್ರ ನನ್ನಿಂದ ಬಿಡಿಸುವುದಕ್ಕೆ ಸಾಧ್ಯವಾಗುವುದಾದರೆ, ಅವಳ ಒಂದು ಕೂದಲು ಕೂಡ ಅದಲು ಬದಲಾಗದ ಹಾಗೆ ಚಿತ್ರ ಬಿಡಿಸುವಷ್ಟು ಸೂಕ್ಷ್ಮವಾಗಿ ಅವಳನ್ನು ನೋಡಿದ್ದೇನೆ. ಸೌಂದರ್ಯದ ರಾಶಿ ಇಲ್ಲಿಯೇ ಬಂದು ನಿಂತಿದೆ ಅನ್ನುವುದರಲ್ಲಿ ಸಂದೇಹ ಇರಲಿಲ್ಲ.  ಅತ್ತ-ಇತ್ತ ಬಸ್ಸು ಅಲಗಾಡುತಿದ್ದರು, ನನ್ನ ದೃಷ್ಟಿ ರೇಖೆಗಳು ಅವಳ ಮುಖವನ್ನು ಛೇದಿಸುತ್ತಿದ್ದವು. ಅವಳು ನನ್ನ ಗಮನಿಸಿದಳೋ-ಇಲವೋ ಗೊತ್ತಿಲ್ಲ.

ಹಾಗೆಂದು ನಾನು ಹುಡುಗಿಯರನ್ನು ನೋಡಿಯೇ ಇಲ್ಲ ಅಂದರೆ ತಪ್ಪಾಗಿತ್ತು. ಬಾರಿನಲ್ಲಿ ಕುಳಿತು ಕುಡಿಯಲಿಲ್ಲ ಅನ್ನುವುದು; ಮಣಿಪಾಲದಲ್ಲಿದ್ದು ಹುಡುಗಿಯರನ್ನು ನೋಡಿಯೇ ಇಲ್ಲವೆನ್ನುವುದು  ಯಾರು ಒಪ್ಪಲಾರರು. ನೋಡುವಿಕೆಯಲ್ಲಿ ಬಹಳ ವಿಧಗಳಿವೆ. ಭರತನಾಟ್ಯದಲ್ಲಿ ತೊಡಗಿರುವ ಹುಡುಗಿಯ ಅಂಗ-ಸೌಷ್ಟವಗಳನ್ನು ನೋಡುತ್ತಿದ್ದರು ಅದು ಕಲೆಯ ಒಂದು ಭಾಗವಾಗಿ, 'ಹುಡುಗಿಯನ್ನು ನೋಡುತ್ತೇವೆ' ಎಂದು ಹೇಳಲಾಗದು. ದಾರಿಯಲ್ಲಿ ಸಾಗುವಾಗ  ಸಹಜವಾಗಿ ಕಲ್ಲು-ಮಣ್ಣು-ಅಂಗಡಿ-ಬಸ್ಸು ನೋಡುವಂತೆ ಒಂದು ಹುಡುಗಿಯನ್ನು ನೋಡಿ ಮರೆತು ಬಿಟ್ಟಿರುತ್ತೇವೆ. ಇನ್ನು ಕೆಲವೊಮ್ಮೆ ಮುಖ ನೋಡಿದಾಗ, ಏನೋ ವಿಶೇಷ ಹುಡುಗಿ ಅನಿಸಿ ಒಂದೆರಡು ಸಾರಿ ನೋಡುತ್ತಾ ನೋಡುತ್ತಾ  ಹೋಗುತ್ತೇವೆ. ಆದರೆ, ಕೆಲವು ಹುಡುಗಿಯರು ಸೌಂದರ್ಯವೆಂಬುದನ್ನು ತಪ್ಪಾಗಿ ಅರ್ಥೈಸಿ, ದೇಹಕ್ಕೆ ಬೇಕಾದಷ್ಟು ಧರಿಸಬೇಕದಷ್ಟು ಬಟ್ಟೆಯನ್ನು ಧರಿಸದೆ ವಿಚಿತ್ರವಾಗಿ ಬೀದಿಗೆ ಇಳಿದು ಬಿಡುತ್ತಾರೆ. ಹುಡುಗಿಯರು ಬೇಕಾದನ್ನು ಧರಿಸದೆ ಹೋದಾಗ ಸೌಂದರ್ಯ ಮರೆಯಾಗಿ ಮೋಹಕತೆ ಉಂಟಾಗಿ, ನೊಡುವಿಕೆ ಬದಲಾಗಿ ದಿಟ್ಟಿಸುವ ಗುಣ ಹುಟ್ಟಿಕೊಳ್ಳುತ್ತದೆ. ಕೆಲವರು ಅದೆಷ್ಟು ವಿಚಿತ್ರವೆಂದರೆ ಸ್ನಾನ ಗೃಹದಿಂದ ಬೀದಿಗೆ ಬಂದು ಬಿಟ್ಟರೋ ಏನು ಎಂಬಂತೆ..!

ಹುಡುಗಿಯರು ಒಂದು ನೆನಪಿನಲ್ಲಿಡಬೇಕು. ಹೆಣ್ಣಿನ ದೇಹದಲ್ಲಿ ವಕ್ರತೆ ಇದೆ; ಸೌಂದರ್ಯವಿದೆ; ಸೂಕ್ಷ್ಮತೆ ಇದೆ;ಅದು ನಿಸರ್ಗದ ಕೂಡುಗೆ. ಅದನ್ನು ಸಂಸ್ಕೃತಿಯೆಂಬ ನಿಯಮದ ಒಳಗೆ ಓದನ್ನು ಪೋಸಿಸಿದರೆ ಅದಕ್ಕೆ ಬೆಲೆ. ನಿಮ್ಮ ಸ್ವಾತಂತ್ರ್ಯವನ್ನು ಖಂಡಿತ ನಾನು ಅರ್ಥೈಸಿ ಕೊಳ್ಳಬಲ್ಲೆ.ತುಂಬು ಹೃದಯದಿಂದ ನಿಮ್ಮನ್ನು ಗೌರವಿಸುತ್ತೇನೆ. ಆದರೆ ಡ್ರೆಸ್ ಎಂಬ ವಿಷಯದಲ್ಲಿ ಯಾಕೋ ಏನೋ ತಮ್ಮ ಬದುಕಿಗೆ  ಮಾರಕವಾಗುವುದನ್ನು  ದೂರವಿಡಬೇಕು ಎಂಬ ಸಲಹೆ ನಗಣ್ಯವಾಗಿ ಕಾಣುತ್ತಾರೆ. ಆದರೆ ನಿಮ್ಮ ಕಡೆ  ಗಂಡು ಜಾತಿ ನೋಡುವ ರೀತಿ, ನಿಮ್ಮ ಡ್ರೆಸ್ ಕೂಡ ನಿರ್ಧರಿಸುತ್ತದೆ. ಅದು ನಿಸರ್ಗದ ನಿಯಮವೇ..!

ಅಂದಹಾಗೆ, ನನ್ನ ಮುಂದೆ ಕುಳಿತುಕೊಂಡಿರುವ ಹುಡುಗಿ ಡ್ರೆಸ್ ಎಂಬ ವಿಷಯದಲ್ಲಿ ತುಂಬಾ ನಾಜುಕುತನವಿದೆ. ನೋಡುವಿಕೆಯಲ್ಲಿ ಯಾವ ಮೋಹಕ ಭಾವ ಇಲ್ಲ. ದೇವತೆಯೆಂಬ ಭಾವ ನನಗಾಗುತ್ತಿದೆ. ಸೌಂದರ್ಯದ ವಿಷಯದಲ್ಲಿ ನಾನು ಸೋತು ಬಿಟ್ಟೆ. ಕೆಲವೊಮ್ಮೆ ಸುತ್ತಲು ತಿರುಗಿ ಯಾರಾದರು ನನ್ನ ಕಡೆ ನೋಡುತ್ತಾರೋ ಎಂದು ನೋಡುತ್ತಾ, ಹುಡುಗಿಯ ಮುಖವನ್ನು ನೋಡುತ್ತಾ   ಕುಳಿತಿದ್ದೆ. ಅವಳು ಮಾತನಾಡುವಾಗ ಅವಳ ತುಟಿಗಳ ಕಂಪನ, ಗಂಟಲಿನಲ್ಲಿ ಧ್ವನಿ ನಾಳಗಳಗಳ ಚಲನ, ಅತ್ತಿತ್ತ ಕೈ ಯಿಂದ ಡ್ರೆಸ್ ನ್ನು ಕಾಪಿಟ್ಟುಕೊಳ್ಳುವ ಪರಿ ನೋಡುತ್ತಾ ನಾನು ಕಲ್ಪನಾ ಲೋಕದಲ್ಲಿ ವಿಹರಿಸುತ್ತಾ ಕುಳಿತೆ.  ಹೀಗಿರುವಾಗ, ನಾನು ನೋಡುತ್ತಿರುವ ಹುಡುಗಿಗೆ ಎದುರಾಗಿ ಕುಳಿತಿರುವ ಹುಡುಗಿ ಅವಳನ್ನು ಉದ್ದರಿಸುತ್ತ,
" ಸಿಂಚು , ಯಾನ್ ಆಗಲ್ ಪಂಡ್ಲ್ಕಾ  ನಲ್ಪೋಲಿಯಾ ?(ಸಂಚು, ನಾನು ಅವರು ಹೇಳಿದ ಹಾಗೆ
ಹೆಜ್ಜೆ ಹಾಕಬಹುದಾ?)

ಸೌಂದರ್ಯದ ಚಿಲುಮೆ ಬಾಯಿ ತೆರಿಯಿತು, ವಾಕ್ಯಗಳು  ತುಳುವಿನಲ್ಲಿ  ನನ್ನ ಕಿವಿಗೆ ಅಪ್ಪಳಿಸಿದ್ದು  ಹೀಗೆ  " ಯಾನ್, .... ಪ್ರಾಕ್ಟೀಸ್ ಮಲ್ಪೆರ್ ..... ಬೊಕ ....  ಮುಂಜಿ ಸ್ಟೆಪ್ .... ಶಂಕರಾಭರಣ ತಾಳ ಉಂಡು.............". 

ತುಳು ನಾಡಿನಲ್ಲಿ ಕೆಲವು ವರ್ಷಗಳು ಕಳೆದಿದ್ದರು ನನಗೆ ಭಾಷೆಯ ಹಿಡಿತವಿರಲಿಲ್ಲ. ಯಾರು ಕೂಡ ತುಳು ನಾಡಿನ ಗೆಳೆಯರಿರಲಿಲ್ಲ; ಅವಶ್ಯಕತೆಯೂ ಬಂದಿರಲಿಲ್ಲ. ಆದರೆ ಅಂಗಡಿಯಲ್ಲಿ, ಬಸ್ಸನಲ್ಲಿ ಕೇಳಿದ ತುಳುವೆ ನನಗೆ ಕೆಲವು ಶಬ್ಧಗಳನ್ನು ಅರ್ಥೈಸಲು ಸಾಧ್ಯವಾಗಿತ್ತು. ಯಾವುದೋ ಡಾನ್ಸ್ ಬಗ್ಗೆ ಇವರು ಮಾತನಾಡುತ್ತಿರುವುದು ನನಗೆ ಅರ್ಥವಾಯಿತು. ಆ ಹುಡುಗಿಯ ಹೆಸರು 'ಸಿಂಚು' ಎಂದು ತಿಳಿಯಿತು.ಆದರೆ 'ಸಿಂಚು' ಎಂದು ಹೆಸರು ಇರಲು ಸಾಧ್ಯವಾ ?  ಇವರ ಸಂಭಾಷಣೆಯಿಂದ ಇವರಿಬ್ಬರು ತುಳು ನಾಡಿನ ಕುವರಿಯರು ಎಂಬುದು ಪಕ್ವವಾಯಿತು.

ಅಷ್ಟು ಹೊತ್ತಿಗೆ, ಹಿಂದಿನಿಂದ ಟಿಕೆಟ್(ಚಲನ ರಶೀದಿ) ಕೊಡುತ್ತ ಬಂದ ಕಂಡಕ್ಟರ್ (ನಿರ್ವಾಹಕ), "ವೋಡೆಗ್ ಟಿಕೆಟ್
?" ಎಂದು ಕೇಳಿದ. ಇವರ ಉತ್ತರ: "ರಡ್ಡ್ ಪಿರಂಜೆಗ".  ನಾನು ಗೊಂದಲಕ್ಕೆ ಒಳಗಾದೆ. ಪಿರಂಜೆ  ಊರಿನ ಹೆಸರೇ ? ಬೆಳ್ತಂಗಡಿ ನಂತರವೋ ಅಥವಾ ಮೊದಲೋ ? ನನಗೆ ಏನಾಗಿದೆ ? ಏನು ಗೊಂದಲ ? ಹೃದಯ ಬಡಿತ ಹೆಚ್ಚಾಗಿದೆ. 

ಮುಂದೇನಾಯಿತು ?  ಭಾಗ-೪
       ಹುಡುಗಿ ಎದ್ದು ಬಂದು ಕಪಾಳಕ್ಕೆ ಬಾರಿಸಿದಳೆ?  ಸುಮ್ಮನೆ ಇಳಿದು ಹೊಗುವುದನ್ನು ನೋಡುತ್ತಾ ನಾನು ಸುಮ್ಮನೆ ಇದ್ದೆನೇ?
Reference: 
Tirukana kanasu haadu :http://goo.gl/ICsF9J
My sincere thanks to the writer in above link. 

1 comment:

  1. En madti!! I am sure you did not got to Dharmastala that day!!

    ReplyDelete