Friday, August 15, 2014

ಕನಸಿನ ಹುಡುಗಿ -ಸಿಂಚನಾ ::ಭಾಗ-೫(ಪಿರಂಜೆಯಿಂದ ಧರ್ಮಸ್ಥಳಕ್ಕೆ ಹೊದುದ್ದು)


ಭಾಗ -೫ (ಪಿರಂಜೆಯಿಂದ ಧರ್ಮಸ್ಥಳಕ್ಕೆ ಹೊದುದ್ದು)
ಮಳೆಯಲ್ಲಿ ಬೆವತು ನಿಂತೆ. ಒಂದಿಷ್ಟು ರೈತ ಮಹಿಳೆಯರು ನನ್ನ ಮುಂದೆ ಹಾಡು ಹೊದುದ್ದು ಬಿಟ್ಟರೆ ಪಿರಂಜೆಯ ಯಾವ ಜೀವಿಯು ಬರಲಿಲ್ಲ. ಬಸ್ಸಿಗೆ ಕಾಯುತ್ತ, ವಿವಿಧ ವಿಚಾರ ಲಹರಿಯಲ್ಲಿ ಮುಳುಗಿದೆ.

ದೇವರ ದರ್ಶನಕ್ಕಾಗಿ ಬಂದು ಹುಡುಗಿಯ ಹಿಂದೆ ಬಿದ್ದು ಪಾಪವನ್ನು ಕಟ್ಟಿಕೊಂಡೆ ಎಂಬ ಪಾಪ ಪ್ರಜ್ಞೆ ಒಂದೆಡೆಯಾದರೆ,ಸೌಂದರ್ಯದ ಮಹಾನ್ ಚಲುವೆಯನ್ನು ಕಣ್ಣಲ್ಲಿ ಕಣ್ಣಿಟ್ಟು, ಕೊನೆಗೂ ಕೈಗೆ  ಸಿಗಲಾರದು ಎಂಬ ಹತಾಶ ಭಾವ ಇನೊಂದೆಡೆ. ಇತ್ತ ಅಳುವು ಇಲ್ಲ, ಹಾಗೆಂದು ನಗುವು ಇಲ್ಲ. ಆದರೆ ಏನು ಇಲ್ಲದ ಸಮ ಸ್ಥಿತಿಯೂ ಅಲ್ಲ. ಒಂದಿಷ್ಟು ದುಗುಡ, ಒಂದಿಷ್ಟು ಸಂತೋಷ, ಒಂದಿಷ್ಟು ಭಯ, ಒಂದಿಷ್ಟು ಕುತೂಹಲ ಎಲ್ಲ ಸೇರಿದ  ಮನಸ್ಸಿನ ಭಾವಗಳ ಮಸಾಲಾ ಪುರಿ.

ಹುಡುಗರು ಅಂದರೆ ಎಷ್ಟೊಂದು ಪಡಪೋಸಿಗಳುಗಳು ಅನಿಸಿತು. ಕೇವಲ ನೋಡಿದ ಹುಡುಗಿಗಾಗಿ ಬಸ್ಸಿಳಿದು ಬಂದೆ ಎಂಬ ವಿಷಯ ಯಾರಿಗಾದರು ಹೇಳಿದರೆ, ಅಥವಾ  ಯಾರಾದರು ನೋಡಿದ್ದರೆ ನನ್ನನ್ನು ಏನೆಂದು ಕರೆದಾರು?  ಎಂದೆಲ್ಲ ಚಿಂತಿಸುತ್ತಲೇ, ಇನ್ನೊಮ್ಮೆ ನಾನು ಯಾಕೆ ಹೆದರಬೇಕು? ನನಗೇನು ಬೇಕು ನಾನು ಮಾಡಿದ್ದೇನೆ, ಅದೆಲ್ಲ ಜನ ತಿಳಿದು ಮಾಡುವುದೇನಿದೆ ಎನ್ನುವ ಇನ್ನೊಂದು ಉತ್ತರವೂ ಸಿದ್ಧಗೊಂಡಿತ್ತು. ಹೀಗೆ ವಾದ-ಪ್ರತಿವಾದಗಳು ನನ್ನ ಮನಸ್ಸಲ್ಲೇ ಉಂಟಾಗಿ ನಾನು ಮಾತ್ರ ಬಳಲುತ್ತಲೇ ಇದೆ. ಇತ್ತ, ಬಸ್ಸುಗಳ ಸಂಖ್ಯೆ ಕೂಡ ಕಡಿಮೆ. ಛತ್ರಿ ಹಿಡಿದುಕೊಂಡು, ನಿಂತಲ್ಲಿ  ನಿಲ್ಲಲಾಗದೆ ಹಿಂದೆ ಮುಂದೆ ರಸ್ತೆಯ ಪಕ್ಕದಲ್ಲೇ ನಡೆದಾಡಿದೆ. ಸಮಯ ಸುಮಾರು ಹನ್ನೆಂದು ಆಗುತ್ತಲಿತ್ತು.

ಅಂತು ಕೊನೆಗೂ ಬಸ್ಸು ಬಂತು. ಅದು ಕೆಂಪು ಬಸ್ಸು;ಹುಬ್ಬಳಿ-ಧರ್ಮಸ್ಥಳ ಬೋರ್ಡ್;ಹತ್ತಿ ಕುಳಿತೆ.ಎಲ್ಲವನ್ನು ಮರೆತು 'ಸಿಂಚು'(ಬಸ್ಸಿನಲ್ಲಿ ಆ ಹುಡುಗಿಯರು ಮಾತನಾಡುವಾಗ ಕೇಳಿದ್ದು) ಎಂಬ ಒಂದೇ ಶಬ್ದ ನನ್ನ ಹೃದಯದಲ್ಲಿ  ಮತ್ತೆ ವಿವಿಧ ಕನಸ್ಸುಗಳನ್ನು ಕಲ್ಪಿಸುತ್ತಲಿತ್ತು. ಮಣಿಪಾಲದಲ್ಲಿ ಬಸ್ಸು ಹತ್ತಿದಾಗ, ದೇವರಲ್ಲಿ ಹುಡುಗಿಯನ್ನು ಕೇಳಬೇಕು ಅಂದುಕೊಂಡಿದ್ದ ನಾನು, ಪಿರಂಜೆಯ ನಂತರದ ಪ್ರಯಾಣದಲ್ಲಿ 'ಸಿಂಚು' ನನ್ನ ಹೆಂಡತಿಯಾಗಬೇಕು ಎಂಬ ಭ್ರಮಿತ ಭಾವ ನನ್ನ ಕಾಡತೊಡಗಿತ್ತು. ಹಾಗೆಂದು ಮತ್ತೊಮ್ಮೆ ನನ್ನ ಜೀವನದಲ್ಲಿ 'ಸಿಂಚು'ನಾ ನೋಡುತ್ತೇನೆ ಎನ್ನುವ ಕಲ್ಪನೆ ಯಾಗಲಿ, ಸಾಧ್ಯತೆಯಾಗಲಿ ನನಗೆ ಉಳಿದಿರಲಿಲ್ಲ.

ಪ್ರಪಂಚದಲ್ಲಿ ಕಠಿಣ(ಹಾರ್ಡ್ ವರ್ಕ್) ಮೂಲಕ ಹಣವನ್ನು, ಹೆಸರನ್ನು, ಶಿಕ್ಷಣವನ್ನು, ಸ್ಥಾನ-ಮಾನಗಳನ್ನು ಗಳಿಸಬಹುದು. ಆದರೆ ಹುಡುಗಿಯನ್ನು ಪಡೆಯುವುದು ಹಾರ್ಡ್ ವರ್ಕ್ ಮೂಲಕ ಖಂಡಿತ ಅಲ್ಲ. ಅದು ಹಣೆ ಬರಹ. ಅದು ದೇವರ ನಿರ್ಧಾರ. ದೇವರಿಗೂ ಒಂದು ಚಟ ಇದೆ. ಅವನು ಎಲ್ಲವನ್ನು ದುಡಿದು ಗಳಿಸಬೇಕೆಂದು ಭಾವಿಸುತ್ತಾನೆ. ಆದರೆ ಹುಡುಗಿ ಮಾತ್ರ ಯಾರು ಎಂದು ಸ್ವರ್ಗದಲ್ಲೇ ನಿರ್ಧರಿಸಿ ಬಿಡುತ್ತಾನೆ. ಈ ದೇವರಿಗೆ ಹುಡುಗಿ ಹುಡುಕಿಕೊಳ್ಳುವ ಕೆಲಸದಲ್ಲಿ ಮಾತ್ರ ತನ್ನ ತೊಡಗಿಸಿ ನಮ್ಮ ಆಟ ಅಡಿಸುತ್ತನಲ್ಲ ಅನಿಸಿತು. ಆದರೂ ದೇವರಲ್ಲವೇ ? "ದೇವರೇ, ಮುಂದೇನು ನನಗೊತ್ತಿಲ್ಲ, ನನಗೆ 'ಸಿಂಚು' ಬೇಕು" ಎಂದು ಭಾವ ಪರವಶನಾಗಿ ನನ್ನ ತೊಡೆಯ ಮೇಲಿದ ಬ್ಯಾಗ್ ನನ್ನು ಒತ್ತಿಕೊಂಡು  ಒಂದಿಷ್ಟು ಕ್ಷಣ ಕುಳಿತುಬಿಟ್ಟೆ. ಅವಳು ಸಿಗಲ್ಲ ಆದರು ನನಗೆ ಆಶವಾದಿತನ ಮರೆಯಾಗಲಿಲ್ಲ.

ಭಾವನೆಗಳ ಸರಮಾಲೆಯಲ್ಲಿ ಮುಳುಗಿದ ನಾನು, ನೇತ್ರಾವತಿಯ ತೀರಕ್ಕೆ ಬಂದು ಇಳಿದೆ. ನದಿಯಲ್ಲಿ ಮುಳಿಗಿದೆ. ನಾನು ದೇವರದರ್ಶನಕ್ಕೆ ಬಂದು ಹುಡುಗಿಯ ಹಿಂದೆ ಹೋದ ಪಾಪಕ್ಕೆ ಪರಿಹಾರ ಕೊಡು ಎಂದು ಐದು ಭಾರಿ ಮುಳುಗಿ,ಮಡಿ ಬಟ್ಟೆಯಲ್ಲಿ ದೇವರದರ್ಶನಕ್ಕೆ ಸಾಗಿದೆ. ಸ್ನಾನದಿಂದ ಪಿರಂಜೆಯ ಮಣ್ಣು ತೊಳೆದಿದ್ದರು, ಮನಸ್ಸಿನಿಂದ  ಪಿರಂಜೆಯ ಹುಡುಗಿಯ ಚಿತ್ರ ಮಾತ್ರ ಹಾಗೆ ಇತ್ತು. ನನ್ನ ಮನಸ್ಸಿನೋಳಗಿದ್ದ ಸಿಂಚು ಚಿತ್ರ ಒಂದು ಕ್ಷಣವೂ ಮರೆ ಮಾಚಲು ಸಾಧ್ಯವಾಗಿಲ್ಲ. ದೇವರ ದರ್ಶನದುದ್ದಕ್ಕು 'ಸಿಂಚು' ನನಗೆ ಬೇಕು ಎಂದು ಮೊರೆ ಇಡುತ್ತಲೇ ಇದೆ. 'ಸಿಂಚು' ಹೆಸರಿನಲ್ಲಿ ಒಂದು ಮಂಗಲಾರತಿಯನ್ನು ಮಾಡಿಸಿದೆ. ಕೊನೆಗೂ ದೇವರ ದರ್ಶನ ಮುಗಿಸಿ, ಊಟ ಮಾಡಿ, ಧನಾತ್ಮಕ ವಿಚಾರಗಳಿಂದ  ಗೊಮ್ಮಟೇಶ್ವರ ಗುಡ್ಡದ ಮುಂದೆ ಸಾಗಿದೆ.

ನಾನು ಒಬ್ಬನೇ. ಸಿಂಚು ಹೃದಯದ ಒಳಗೆ ಇದ್ದರು ಹೊರಗೆ ಬಂದು ಮಾತನಾಡುತ್ತಿರಲಿಲ್ಲ. ಹೀಗಾಗಿ ಭೌತಿಕವಾದ ಏಕಾಂತತೆ ನನಗೆ ಕಾಡುತ್ತಲೇ ಇತ್ತು. ಹೀಗಿರುವಾಗ, ಬೆಟ್ಟದ ಮೇಲೆ  ಆರು ಗಂಟೆಯ ಸಮಯದಲ್ಲಿ ತುಂಬಾ ಜನರು ತಿರುಗಾಡುತ್ತಿದ್ದರು. ಸಾವಿರಾರು ಜನರು ತಮ್ಮ ಮಕ್ಕಳ ಜೊತೆ, ಹೆಂಡತಿಯ ಜೊತೆ, ಗೆಳೆಯರ ಜೊತೆ ಹರಟುತ್ತ ಸಾಗುತ್ತಿದ್ದರು. ನಾನು ಹುಲ್ಲುಗಾವಲಿನ ಒಂದು ಬದಿಯಲ್ಲಿ ಕುಳಿತು ಏಕಾಂತತೆಯ ನಡುವೆ, ಸಿಂಚು ಎಂಬ ಒಳಗಿರುವ ವಿಷಯವನ್ನೇ ಮೆಲಕು ಹಾಕುತ್ತ ಒಂದಾದರೂ ದಾರಿ  ಸಿಗಬಹುದೇ? ಹಣಬರಹದಲ್ಲಿ ಏನಿದೆ ಅಂತೆಲ್ಲ ಯೋಚಿಸತೊಡಗಿದೆ.

ಹೀಗೆ ಹುಲ್ಲುಗಾವಲಿನ ಮೇಲೆ ಕುಳಿತಿರುವಾಗ, ನನ್ನ ಪಕ್ಕದಲ್ಲಿ ಕುಳಿತಿರುವ ದಂಪತಿಗಳು ತಮ್ಮ ಮೂರು ವರ್ಷದ ಹೆಣ್ಣು ಮಗುವಿನೊಂದಿಗೆ ಸಂತೋಷದ ಕ್ಷಣಗಳನ್ನು ಕಳೆಯುತ್ತಲಿದ್ದರು. ಮಗುವು ಪುಟ್ಟ ಹೆಜ್ಜೆಗಳನ್ನು ಇಡುತ್ತ, ಆ ಕಡೆ ಈ ಕಡೆ ಓಡಾಡುತ್ತ ಇತ್ತು. ಹೀಗೆ ಓಡುವ ತವಕದಲ್ಲಿ ಮಗುವು ಒಮ್ಮೆ ನನ್ನ ಬ್ಯಾಗ್ ಗೆ ಸಿಕ್ಕಿ ಬಿದ್ದು ಬಿಟ್ಟಿತ್ತು. ನಾನು ಮಗುವನ್ನು ಎತ್ತಿದೆ; ಅವಳ ಗಲ್ಲವನ್ನು ಹಿಡಿದು, ಅವಳ ನಗುವನ್ನು ನೋಡಲು ಉತ್ಸುಕನಾಗುತ್ತಿದ್ದಂತೆ,  ಅವಳ ಅಮ್ಮ ತಿರುಗಿ ನೋಡಿದ್ದೇ ರಂಪಾಟ ಮಾಡಿಬಿಟ್ಟರು. ನಾನು ಹೆದರಲಿಲ್ಲ. ಮಗುವನ್ನು ಬಿಟ್ಟೆ; ಅದು ನನ್ನ ನೋಡಿ ನಗುತ್ತಲೇ ಇತ್ತು. ಆದರೆ ಅಮ್ಮ ಮಾತ್ರ, ನಿಂತ ಭಂಗಿಯಲ್ಲೇ, ಕಣ್ಣು ಮಿಟಿಕಿಸದೆ ನೋಡಿದಾಗ ನನ್ನ ಹೃದಯ ತಲ್ಲಣ ಗೊಂಡಿತು. ಇವತ್ತಿನ ಪರಿಸ್ಥಿತಿಯಲ್ಲಿ ಈ ಅಮ್ಮಂದಿರಿಗೆ ಯಾರನ್ನು ನಂಬಲು ಸಾಧ್ಯವಾಗುತ್ತಿಲ್ಲ, ಮಕ್ಕಳು ಸಣ್ಣವರು ಮುಗ್ದರು ಎನ್ನುವ ಅರಿವಿಲ್ಲದ  ಮೃಗೀಯ ಜನರ ಮಧ್ಯೆ ನಮ್ಮಂತವರಿಗೆ  ಮಕ್ಕಳ ಮುಗ್ದ ನಗುವನ್ನು ಕಾಣುವ ಅವಕಾಶ ಕಳೆದಿದೆ ಎಂದು ಭಾವಿಸಿ ನಾನೇ ಶಪಿಸಿ ಕೊಂಡೆ. ಆದಿನದಿಂದ ಎಷ್ಟೇ ಮುಗ್ದ ಮಕ್ಕಳು ಕಂಡರೂ ದೂರದಿಂದ ನೋಡಿ, ನಗುವಿಗೆ ಪ್ರತಿ ನಗು ಕೊಟ್ಟು ಬೈ ಬೇ ಎಂದು ಹೇಳಿ ಹೋಗುತ್ತೇನೆ.

ಹೀಗೆಲ್ಲ ನಡೆದು, ಪ್ರತಿಯೊಂದು ಎದುರಾದ ಕಲ್ಲಿಗೂ 'ಸಿಂಚು' ಬೇಕು ಎಂದು ಮೊರೆಯಿಡುತ್ತ, ಶನಿವಾರ ರಾತ್ರಿ ಧರ್ಮಸ್ಥಳದಲ್ಲಿ  ಕಳೆದು ಬೆಳಿಗೆ ಅಲ್ಲಿಂದ ಹೊರಟು, ಮಂಗಳೊರು ಮೂಲಕ ಮಣಿಪಾಲ ಸೇರಿದೆ. ಮಣಿಪಾಲ ಸೇರಿದಾಗ ಸಂಜೆ ೪ ಗಂಟೆಯಾಗಿತ್ತು. ಮನಸ್ಸು ಖಾಲಿಯಾದ  ಭಾವವಿತ್ತು.ದೇಹ ಬಳಲಿತ್ತು; ಸ್ನಾನ ಮಾಡಿ ಎರಡು ತಾಸು ಮಲಗಿದೆ. ಏಳುಗಂಟೆಗೆ ಸರಿಯಾಗಿ ನಿತ್ಯ ಕ್ರಮದಂತೆ ದೇವರಿಗೆ ದೀಪ ಹಚ್ಚಿ, ಮಂಗಳೂರು ಆಕಾಶವಾಣಿ ಕೇಳುತ್ತ, ಸಿಂಚು ಮರೆಯ ಬೇಕು ಎಂದು ಪ್ರಯತ್ನ ಪಡುತ್ತಿದ್ದೆ. ಮರೆತರು ಮರೆಯಲಾಗದ ಸಿಂಚು ಮತ್ತೆ ಮತ್ತೆ ಬರುತ್ತಲಿದ್ದಳು.

ಭಾಗ ೬: (ಮಣಿಪಾಲದಲ್ಲಿ ಚಿಂತೆಗಳು) ಕಾಡು ನೋಡಿ.

Monday, August 11, 2014

ಕನಸಿನ ಹುಡುಗಿ -ಸಿಂಚನಾ ::ಭಾಗ-೪(ಪಿರಂಜೆಯಲ್ಲಿ ಸಿಂಚನಾ ಹಿಂದೆ ಹೊದುದ್ದು)

In order to understand the story you need to read previous parts. You can read the earlier parts  in   
-------------------------------------------------------
http://heartwaves4u.blogspot.in/ 
-------------------------------------------------------

ಭಾಗ-೪:
ನಾನು ಪಿರಂಜೆ ಎಂಬ ಊರಿನ ಬಗ್ಗೆಯಾಗಲಿ ಅಥವಾ ಯಾವುದೇ ತುಳು ಭಾಷೆಯ ಪದವಾಗಲಿ ಕೇಳಿದ ನೆನಪಿಲ್ಲ. ನನಗೆ ಗೊತ್ತಿರುವ ಎಲ್ಲ ಯಕ್ಷಗಾನ ದಿಗ್ಗಜರ ಹೆಸರಗಳ ಸುತ್ತ 'ಪಿರಂಜೆ' ಎಂಬ ಶಬ್ದ ಇದೆಯೇ ಎಂದು ಹುಡುಕಾಡಿದೆ. ಯಾವ ಪ್ರಯೋಜನವಾಗಲಿಲ್ಲ. ನನ್ನ ಪಕ್ಕದಲ್ಲಿ ಕುಳಿತ ಅಜ್ಜನಿಗೆ ವಿಷಯ ಕೇಳಬೇಕು ಎಂದು ಮಾತಿನಲ್ಲಿ ತೊಡಗಿದೆ.
' ಇಲ್ಲಿಂದ ಬೆಳ್ತಗಂಗಡಿ ಎಷ್ಟು ದೂರ ಉಂಟು?".
'ಇಲ್ಲಿಂದ ಸುಮಾರು ೨೦ ಮೈಲಿ ದೂರ ಇದೆ' ಎಂದ.
ನಾವೆಲ್ಲ ಹೊಸ ಜಮಾನದ ಹುಡುಗರು. ಅಮೆರಿಕನ್ ಪದ್ಧತಿಯಿಂದ ಪ್ರಭಾವಿತರೆ ಹೊರತು ಬ್ರಿಟನ್ ಮೈಲಿ ನಮಗೆ ಅರ್ಥವಾಗುವುದಿಲ್ಲ. ಆದರೆ ನನಗೆ ಕೆಲಬೇಕಾದುದ್ದು ಬೆಳ್ತಂಗಡಿಯ ದೂರ ಅಲ್ಲ. ಬದಲಾಗಿ 'ಪಿರಂಜೆ' ಒಂದು ಊರೇ? ಅದು ಎಲ್ಲಿದೆ ಅನ್ನುವುದು. ಅದಕ್ಕಾಗಿ ಇದು ಪ್ರಾರಂಭಿಕ ಮಾತು ಮಾತ್ರ. ಮತ್ತೆ ಅವನ ಕಡೆ ತಿರುಗಿ,
'ಮುಂದಿನ ಊರುಗಳು ಯಾವುವು? ಇಲ್ಲಯ ಊರುಗಳು ಚೆನಾಗಿವೆ".
'ತುಂಬಾ  ಊರುಗಳುಂಟು. ಮುಂದಿನದು ಪಿರಂಜೆ. ನೀವು ಎಲ್ಲಿಗೆ ಹೋಗುವುದು ಮಹಾರಾಯರೇ?".  ಎಂದು ಮುದುಕ ಮಾತನಾಡಿದ. ನನ್ನ ಉತ್ತರ ಸಿಕ್ಕಿತು. ಮುದುಕನ ಪ್ರಶ್ನೆಗೆ ಉತ್ತರಿಸಬೇಕೆಂಬ ಕನಿಷ್ಠ ಸೌಜನ್ಯ ನನಗೆ ಉಳಿಯಲಿಲ್ಲ. ನನ್ನ ಹುಡುಗಿಯ ಕುರಿತಾದ ಗಣಿತವೆ ನನ್ನ ಪ್ರಪಂಚ.

ಊರು-ಕೇರಿ-ಪಟ್ಟಣ ಸುತ್ತುವರಿಗೆ ಇಂಥ ದಾರಿಹೊಕರೆ ನಮಗೆ ನಿಜವಾದ ದಾರಿ ತೋರಿಸುವರು.ನಾವೆಲ್ಲಾ 'ಇಂಟರ್ನೆಟ್ ನಿಂದ ಗ್ಲೋಬ್ ಇಸ್  ವಿಲೇಜ್' ಎಂಬ ವಾಕ್ಯವನ್ನು ಹೇಳುತ್ತಾ ಜಿಪಿಎಸ್ ನಲ್ಲಿ ಎಲ್ಲವು ಇರುತ್ತೆ ಎಂದು ಮೊಬೈಲ್ ನ್ನು ಹಿಡಿದು ತಿರುಗುತ್ತಿದ್ದರೂ, ಮತ್ತೆ ಮೊಬೈಲ್ ಸರಿಯಾಗಿ  ತೋರಿಸುತ್ತದೋ ಇಲ್ಲವೋ ಎಂದು ಸಂದೇಹಕ್ಕೆ ಒಳಗಾಗಿ ಇಲ್ಲವೇ, ನಕ್ಷೆ ಹಾಗೂ ಇರುವ ಸ್ಥಿತಿಗಳು ಸಂಬಂಧಗಳೇ ಇರದೇ ದಾರಿಹೋಕರನ್ನು ಆಶ್ರಯಿಸುವುದು ಅನಿವಾರ್ಯವಾಗಿ ಬಿಡುತ್ತದೆ. ಇಂಥ ದಾರಿಹೋಕರು ನಮ್ಮ ತಂತ್ರಜ್ಞಾನಕ್ಕಿಂತಲೂ ಹೆಚ್ಚು  ನಂಬಿಕಾರ್ಹರು. ಕೆಲವೊಮ್ಮೆ ನಾವು 'ಥ್ಯಾಂಕ್ಸ್' ಎಂದು ಹೇಳಲು ಕೂಡ ಮರೆತು ಬಿಡುತ್ತೇವೆ.

ನನಗೆ ಉಳಿದಿರುವ ಸಮಯ ಬಹಳ ಕಡಿಮೆ. ಇಂಜಿನಿಯರಿಂಗ್ ನ  ಪರೀಕ್ಷೆಯ ಕೊನೆಯ 'ಐದು ನಿಮಿಷ ಇದೆ' ಇಂದು ಮೇಲ್ವಿಚಾರಕ ಹೇಳಿದಾಗ, ಉಂಟಾಗುವ ಉದ್ವೇಗ ನನಗಾಗುತ್ತಿದೆ. 'ಲವ್ ಆಟ್ ಫಸ್ಟ್ ಸೈಟ್' ಎಂಬ ನಿಯಮವನ್ನು  ನಿಜವಾಗಿ ಸತ್ಯವೆಂದು ತೋರಿಸಬೇಕಾದ  ಜವಾಬ್ಧಾರಿ ನನ್ನ ಮೇಲಿದೆ. ಇಷ್ಟೊಂದು ಹೊತ್ತು ಬಸ್ಸಿನಲ್ಲಿ  ಹುಡುಗಿಯ  ಮುಖವನ್ನು ನೋಡುತ್ತಾ, ರೋಮಾಂಚನ ಗೊಂಡಿರುವ ನಾನು ಮುಂದೇನು ಎಂದು ಯೋಚಿಸದೆ ಹೋದರೆ, ಅರ್ಜಿಯಯೊಂದನ್ನು ಬರೆದು ಸಹಿ ಮಾಡದ ಹಾಗಾಗುವುದಿಲ್ಲವೇ? ದೇವರು ಕೊಟ್ಟರೂ, ಸ್ವೀಕರಿಸುವ ಮನಸ್ಥಿತಿಯಿಲ್ಲದ ದರಿದ್ರ ನಾರಾಯಣ ನಾನಗುವುದಿಲ್ಲವೇ? ಮುಂದಿಂಗ ಜನಾಂಗಕ್ಕೆ 'ಪ್ರೀತಿಯಲ್ಲಿ ಬಿಳುವುದಕ್ಕೆ ಬಸ್ಸಾದರೂ ಅದೀತು' ಎಂಬ ಸಂದೇಶವನ್ನು ನನ್ನಿಂದ ಸಾಧ್ಯವಾಗುವ ಅವಕಾಶ ಬಂದಿರುವಾಗ ಕಳೆದುಕೊಳ್ಳಬೇಕೆ ? ಸಾವಿರಾರು ಪ್ರಶ್ನೆಗಳು! ಒಮ್ಮೆ ಹುಡುಗಿ ಇಳಿದು ಹೋದಳೆಂದರೆ ನನ್ನ ಮುಂದೆ ಇರುವುದು ಕೇವಲ ಅವಳು ಕುಳಿತ ಸೀಟ್ ಹಾಗೂ ಮನದ ಆಳದಲ್ಲಿ ಇವರೆಗೆ ನಾನು ಒತ್ತಿಕೊಂಡ ಅವಳ ಚಿತ್ರಣ ಮಾತ್ರ.

ಹೋಗಿ ಮಾತನಾಡಿಸಲೇ? ದಾರಿ ಹೋಕನ ಮುಖವನ್ನು ನೋಡದ ಸಭ್ಯ ಹುಡುಗಿ ನನ್ನನ್ನು ಎಂದು ತಿಳಿದಾಳು? ಸಮಾಜದ ಮಧ್ಯೆ  ಯಾರೆಂದು ಗೊತ್ತೇ ಇರದವಳ ಮುಂದೆ ಹೇಗೆ ನಿಲ್ಲಲಿ ? ಏನು ಹೇಳಲಿ ? ಧೈರ್ಯವಾದರೂ ಇರಬೇಕಲ್ಲ? ಪ್ರೀತಿಯಂದರೆ  ನಾನೇನು ಸೌಂದರ್ಯ ಕಂಡೆ ಎಂದು ತಲೆ ತಗ್ಗಿಸಿ 'ಆಯ್ ಲವ್ ಯು' ಎಂದು ಬಾಯಿ ಕಿಸಿಯುವ  ಮಂತ್ರವೇ ? ಇಂಥ ಸಂದರ್ಭವೊಂದು ನನ್ನ ಜೀವನದಲ್ಲಿ ಬರುವುದು ಎಂದು ನಾನು ಯಾವ ಪೂರ್ವ ನಿರೀಕ್ಷೆಯನ್ನು ಇಟ್ಟುಕೊಂಡಿರಲಿಲ್ಲ. ನೂರಾರು ರೀತಿಯಲ್ಲಿ ಆಲೋಚಿಸುವಾಗಲೇ, ಹಿಂದಿನ ಡೋರ್ ನಿಂದ "ಪಿರಂಜೆ" ಎಂದು ಕ್ಲೀನರ್  ಒದರಿ ಬಿಟ್ಟ.  ಹುಡುಗಿಯರು ಇಳಿಯಲಾರಂಭಿಸಿದರು. ನಾನು  ಮುಂದಿನ ಸೀಟ್ ನಿಂದ, ಜನಗಳನ್ನು ದೂರು ಸರಿಸುತ್ತ ಹಿಂದಿನ ಬಾಗಿಲಿಗೆ ಬಂದೆ. "ನೀವು ಬೆಳ್ತಂಗಡಿಗೆಯಲ್ವಾ? " ಎಂದು ಕ್ಲೀನರ್ ಹೇಳುತಿದ್ದರು ಇಳಿದು ಬಿಟ್ಟೆ. ನಾನು ಅವನಿಗೂ ಉತ್ತರಿಸಲಿಲ್ಲ. ನೂರಾರು ರುಪಾಯಿ ಕೊಟ್ಟು ಟಿಕೆಟ್ ತಗೆಸಿದ ನಾನು ತಲೆ ಕೆಡಿಸಿಕೊಂದಿರದಿದ್ದರು, ಟಿಕೆಟ್ ಕೊಟ್ಟ ಆತನಿಗೆ ನಾನು ಸೇರಬೇಕಾದ ಜಾಗಕ್ಕೆ ಸೇರಿಸಬೇಕಾದ ಜವಾಬ್ಧಾರಿಯಿತ್ತು.

ಇಳಿದ ಮೇಲೆ, ಇಬ್ಬರು ಹುಡುಗಿರಯರು ಛತ್ರಿಗಳನ್ನು ಹಿಡಿದು ತಮ್ಮದೇ ಲೋಕದ ಸಂಭಾಷಣೆಯಲ್ಲಿ ಪೋಸ್ಟ್ ಆಫೀಸ್ ಹತಿರದ ರಸ್ತೆಯಲ್ಲಿ ಸಾಗುತಿದ್ದರು. ಮೊದಲು ಪಿರಂಜೆಯಲ್ಲಿ ಇಳಿಯಲು ಹುಡುಗಿಯರು ಕಾರಣವಾಗಿದ್ದರು, ಇಳಿದ ಮೇಲೆ ಏನು ಉದೇಶ ಇರಲಿಲ್ಲ. ಚಂದ್ರನ ಮೇಲೆ ಇಳಿದ ನಿರ್ಲ ಆರ್ಮ್ ಸ್ಟ್ರಾಂಗ್ ನಿಗೂ ಚಂದ್ರನ ಮೇಲೆ ಇಳಿದ ಮೇಲೆ ನನ್ನ ಹಾಗೆ 'ಏನು' ಎನ್ನುವ ಪ್ರಶ್ನೆ ಕಾಡಿಯೇ ಇರಬೇಕು. ಹೀಗೆ ಯೋಚಿಸುತ್ತಲೇ ದೂರದಿಂದಲೇ ಅವರ ನಿರ್ಗಮನವನ್ನು ಅತ್ಯಂತ ಕಹಿ ಮನಸ್ಸಿನಿಂದ ನಿಂತು ನೋಡುತ್ತಾ ನಿಂತೇ. ಅವರೊಮ್ಮೆ ಸೂರ್ಯಾಸ್ತದ ಹಾಗೆ ತಿರುವಿನ ರಸ್ತೆಯಲ್ಲಿ ಮರೆಯಾದ ಹಾಗೆ ನಾನು ಹಿಂಬಾಲಿಸ ತೊಡಗಿದೆ. ಅದಾವ ಉದ್ದೇಶ ನನಗಿತ್ತೋ ಗೊತ್ತಿಲ್ಲ. ಹೀಗೆ ಅವರನ್ನು ಹಿಂಬಾಲಿಸುವ ಉದ್ದೇಶ ನನ್ನ ಮನಸ್ಸಿನ ನಿರ್ಧಾರವಲ್ಲ. ಅಲ್ಲಿ 'ಏನು ಮಾಡ್ಬೇಕು'  ಪ್ರಶ್ನೆಗೆ ಕಾಣದ ಸಾವಿರಾರು ಬಗೆಯ ಯೋಚನೆಗಳು ನನ್ನ ಭೌತಿಕ ದೇಹವನ್ನು ಅವರನ್ನು ಹಿಂಬಾಲಿಸುವಂತೆ ಪಿಡಿಸಿತು. ಹಾಗೆ ಸಾಗುವಾಗ, ಒಂದು ಸುಂದರ ಮನೆಯನ್ನು  ಪ್ರವೇಶ ಮಾಡಿದರು. ಅವರು ನನ್ನ ನೋಡಿಲ್ಲ.

ನಾನು ಪಿರೆಂಜೆಗೆ ಅನಗತ್ಯವಾಗಿ ಬಂದಿರುವುದು ಆ ಬಸ್ಸಿನ ಕ್ಲೀನರ್ ಗೆ ಗೊತ್ತು ಹಾಗೂ ಅಲ್ಲಿದ ನಿಸರ್ಗದತ್ತ ಮರ ಗಿಡಗಳಿಗೆ ಗೊತ್ತಿರಬೇಕು. ಹುಡುಗಿಯರು ಮರೆಯಾಗಿ ಮನೆಯನ್ನು ಸೇರಿದ ಮೇಲೆ ನನ್ನ ಬಳಿ ಏನು ಉಳಿದಿಲ್ಲ. ಕಿಸಿಗೆ ಕೈ ಹಾಗಿದಾಗ, ನೂರಾರು ರುಪಾಯಿ ಟಿಕೆಟ್ ಹಾಲು ಮಾಡಿರುವುದು ಗಮನಕ್ಕೆ ಬಂತು. ಆದರೆ, ಸಂಸ್ಕೃತಿಯೆಂಬ ಪದಕ್ಕೆ, ಸೌಂದರ್ಯ ಎಂಬ ಪದಕ್ಕೆ ವಿರುದ್ಧವಾಗಿರುವ  ಸಿನೆಮಾದ ಹುಡುಗಿಯರ ಅರಬತ್ತಲೇ ಡಾನ್ಸ್ ನ್ನು ಸಿನೆಮಾಗಳಲ್ಲಿ ನೋಡಲು ನಾವು ನೂರಾರು ರುಪಾಯಿ ತೆತ್ತುವಾಗ, ನಮ್ಮ ಸಂಸ್ಕೃತಿಯ, ಸೌಂದರ್ಯದ ಚಿಲುಮೆಯನ್ನು ನೋಡಲು ನಾನು ದುಡ್ಡು ಕಳೆದುಕೊಂಡುದ್ದರಲ್ಲಿ  ಏನು ಮಹಾ..! ಎಂದು ಸಮಾಧಾನಿಸಿಕೊಂಡೆ. ದೇವರನ್ನು ಕಾಣಲು ಬಂದ ನಾನು, ವಿಶ್ವಾಮಿತ್ರನ ಹಾಗೆ, ಹೆಣ್ಣಿನತ್ತ  ಆಕರ್ಷಿತನಾಗಿ ಮೂಲೋದ್ದೇಶ ಮರೆತುದ್ದು ನೋವು ತರಿಸಿತು. ರಸ್ತೆಯಲ್ಲಿ, ಚಪ್ಪಲಿ ಎಸೆದು ಕಣ್ಣು ಮುಚ್ಚಿ ದೇವರಿಗೆ 'ದೇವರೇ ಕ್ಷಮಿಸು' ಎಂದು ಬೇಡಿಕೆ ಇಟ್ಟೆ. ಮತ್ತೆ, ಬಸ್ಸು ಇಳಿದ ಸ್ಥಳಕ್ಕೆ ಬಂದು, ಧರ್ಮಸ್ಥಳದ ಬಸ್ಸಿಗೆ ಕಾಯುತ್ತ ನಿಂತೇ.


ಮುಂದಿನ ಭಾಗ:೫ ರಲ್ಲಿ  ಮುಂದಿನ ಕತೆ ನಿರೀಕ್ಷಿಸಿ.

Saturday, August 9, 2014

ಕನಸಿನ ಹುಡುಗಿ -ಸಿಂಚನಾ ::ಭಾಗ-೩( ಮೂಡುಬಿದರೆಯಲ್ಲಿ ಸಿಂಚನಾ ಭೇಟಿ )

ಭಾಗ-೩:
 ಒಂದೂವರೆ ತಾಸಿನ ಸುದೀರ್ಘ ಬಸ್ಸಿನ ಪಯಣದಲ್ಲಿ ಹಾಯಾಗಿ ಮಲಗಿದ್ದೆ. ನಿದ್ರಾ ಲೋಕ ಅದ್ಭುತ. ಅಲ್ಲಿ ತಿರೋಕನೊಬ್ಬ ರಾಜನಾಗಿ, ಮೊದಲ ರಾಜನ ಮಗಳನ್ನೇ ಮದುವೆಯಾಗಿ ಮಕ್ಕಳನ್ನು ಪಡೆದ ಸುಂದರ ಹಾಡು ನೀವು ಶಾಲೆಯ ದಿನಗಳಲ್ಲಿ 'ತಿರುಕನ ಕನಸು'[೧] ಎಂದು ಓದಿರಬಹುದು. ಆದರೆ ನಾನು ಇಂಜಿನಿಯರ್ ವೃತ್ತಿಯಾದ್ದರಿಂದ ನನ್ನ ಕನಸನ್ನು 'ಇಂಜಿನಿಯರ್ ಕನಸು'ಎಂದು ಹೇಳಿ ಕೊಳ್ಳಬಹುದಷ್ಟೇ. ಆದರೆ ಇಲ್ಲಿ ಕನಸ್ಸಿಗೆ ಗೌರವ ಸಿಗುವುದು ಕನಸಿನ  ವಿಷಯದ ಮೇಲೆ ಹೊರತು  ಯಾರು ಕಂಡದ್ದು ಅಂತ ಅಲ್ಲ ಅಲ್ಲವೇ ? ಏನೇನೋ ಕನಸುಗಳು ಬಿದ್ದವು. ಕನಸಗಳು ಒಳ್ಳೆಯದ್ದಾಗಿದರೆ, ನಿದ್ದೆಯಿಂದ ಎದ್ದ ಬಳಿಕ ಆ ಕನಸಿನ ಕುತೂಹಲಕಾರಿ ಅಂಶಗಳು ಮತ್ತೆ ಮೆಲುಕು ಹಾಕಿ ವಿಚಿತ್ರವಾದ ವಿನೋದವನ್ನು, ಧನಾತ್ಮಕಭಾವನ್ನು ನೀಡುವುದಂತು ಸತ್ಯ.

ಕನಸ್ಸು ಯಾವ ಘಟ್ಟದಲ್ಲಿತ್ತೋ ಗೊತ್ತಿಲ್ಲ, ಆದರೆ ಮೂಡುಬಿದರಿಯ ಹತ್ತಿರ ಬಂದಾಗ, ಬಸ್ಸು ನೇರವಾಗಿ ಸಾಗದೆ  ಚಿಕ್ಕದಾದ ರಸ್ತೆಯಲ್ಲಿ ವಾಲುವಿಕೆ ಬಹಳವಾಗಿತ್ತು. ಬಸ್ಸಿನ ಯಾವ ವಾಲುವಿಕೆ ನನ್ನನ್ನು ನಿದ್ದೆಗೆ ಆಹ್ವಾನಿಸಿತ್ತೋ ಅದೇ ವಾಲುವಿಕೆ ನಿದ್ದೆಯಿಂದ ಎಚ್ಚರಿಸಿತ್ತು. ಕನಸು ಅಪೂರ್ಣವಾಗಿತ್ತು. ಆದರೆ ಕನಸ್ಸಿನ ಪರಿಣಾಮ ಮನಸ್ಸಿಗೆ ಹಿತವಾದ ಮುದವನ್ನು ನೀಡುತ್ತಿತ್ತು. ಕಣ್ಣುಗಳು ಕೈ ವಸ್ತ್ರದಿಂದ ವರೆಸಿದೆ; ಜಾರಿ-ಸರಿದು ಹೋಗಿದ್ದ  ಬಟ್ಟೆಗಳನ್ನು ಸರಿಸಿಕೊಂಡೆ; ಕೂದಲನ್ನು ನಿಳವಾಗಿಸಿದೆ. ಜಿಟಿ-ಜಿಟಿ ಮಳೆಯ ಮಧ್ಯೆ ತಂಗಾಳಿಯಲ್ಲಿ ಸಂತೋಷದ  ಪ್ರಯಾಣವಾಗಿತ್ತು.

ಮೂಡುಬಿದರಿ ಬಸ್ ಸ್ಟಾಂಡ್ ಬಂದಾಗ, ಸಮಯ ೯ ಗಂಟೆ ಆಗಿರಬಹುದು. ಮತ್ತೆ ವಾಹನ ಸಹಾಯಕ(ಕ್ಲೀನರ್), ಬೆಳ್ತಂಗಡಿ ಎಂದು ಕೂಗಿದ. ಹಿಂದಿನ ಬಾಗಿಲಿಂದ ಕೆಲವು ಮಂದಿ ಮುಂದಿನ ಬಾಗಿಲಿನಿಂದ ಕೆಲವು ಮಂದಿ ಬಸ್ಸು ಏರಿದರು. ಬಸ್ಸು ಹತ್ತುವ ವಿಷಯದಲ್ಲಿ ಹೇಗೆ  ಸಾಲಾಗಿ, ನೂಕು-ನುಗ್ಗಲು ಇಲ್ಲದೆ ಹತ್ತಬೇಕು ಅಂದರೆ ನೀವು ಕರವಾಳಿಯಲ್ಲೇ ನೋಡಬೇಕು. ಬಸ್ಸು ಹತ್ತುವುದು-ಗೂಳಿ ನುಗ್ಗುವುದು  ಸರಿಸಮಾನವಾದುದ್ದು ಎಂದು ಬೈಲಹೊಂಗಲದಲ್ಲಿ ಜನ ಭಾವಿಸುತ್ತಾರೆ.ಅಲ್ಲಿಯ ಜನ ಒಬ್ಬರು ಹೋಗುವ ದಾರಿಯಲ್ಲಿ ನೂರು ಜನ ಕೂಡ ಒಳಪ್ರವೇಶ ಮಾಡಬಹುದು ಎಂದು ಸಾಧಿಸಿ ತೋರಿಸುತ್ತಾರೆ. ಅಲ್ಲಿ ಅಜ್ಜಿ-ಅಜ್ಜ, ಹೆಣ್ಣು-ಗಂಡು ಎಂಬ ಯಾವ ತಾರತಮ್ಯವು ಇಲ್ಲದೆ ನೂರಾರು ವರ್ಷ ಅದೇ ಸೀಟ್ ನಲ್ಲಿ ಕುಳಿತುಕೊಳ್ಳುವವರಂತೆ ಸೀಟ್ ಗೆ  ಜಗಳ ಕಾಯುತ್ತಾರೆ. ಒಮ್ಮೆ ಬೈಲಹೊಂಗಲದಲ್ಲಿ ಬಸ್ಸು ಹತ್ತುವ ವಿಷಯ ನೋಡಿ ನಾಚಿಕೆ ಅನಿಸಿತ್ತು.

ಕರಾವಳಿಯಲ್ಲಿ ಯಾರು ಸೀಟ್ ಗೆ ಓಡುವುದಿಲ್ಲ. ಸೀಟ್ ತಮ್ಮದು ಎಂದು ಅಧಿಕಾರ ಸ್ಥಾಪಿಸುವುದು ಬಹಳ ಕಡಿಮೆ. ಒಂದೊಮ್ಮೆ ಯಾರಾದರು ಕರವಸ್ತ್ರ-ಬಟ್ಟೆ-ಚೀಲಗಳಿಂದ ಸೀಟ್ ನ್ನು ಕಾಯ್ದಿರಿಸಿದ್ದಲ್ಲಿ ಅದನ್ನು ಯಾರು ಮುಟ್ಟಲಾರರು.ನಿಧಾನವಾಗಿ ಸೀಟ್ ಸಿಕ್ಕರೆ ಕುಳಿತಾರು, ಇಲ್ಲವೆಂದರೆ ನಿಂತಾರು. ಹಿಂದಿನಿಂದ ಬಂದವರಿಗೆ ಕೆಲವರಿಗೆ ಸೀಟ್ ಸಿಕ್ಕಿತ್ತು. ಇನ್ನುಳಿದವರಿಗೆ ಸಿಗಲಿಲ್ಲ.

ವಾಹನ ಚಾಲಕನ (ಡ್ರೈವರ್ ) ಹಿಂದಿನ ನಾಲ್ಕು ಸೀಟ್ ಗಳು ಮಹಿಳೆಯರಿಗೆ ಮಿಸಿಲು. ಇದು ಉಡುಪಿ RTO  ನಿಯಮವೆಂದು ಡ್ರೈವರ್ ಹಿಂದಿನ ಗೋಡೆಯ ಮೇಲೆ ಎದ್ದು ಕಾಣುತ್ತದೆ. ಈ ಬಸ್ಸಿನಲ್ಲಿ ಡ್ರೈವರ್ ಹಿಂದಿನ ಮೊದಲ ಎರಡು ಸೀಟ್ ಗಳು ಎದುರು-ಬದರು. ಇನ್ನೇನೋ ವಾಹನ ಬಿಡಬೇಕು ಅನ್ನುವಷ್ಟರಲ್ಲಿ, ಬಸ್ಸಿನ ಮುಂದಿನ ಭಾಗದಿಂದ ಎರಡು ಛತ್ರಿಗಳು ಬಸ್ಸು ಹತ್ತಲು ಬರಲಾರಂಭಿಸಿದವು. ಒಂದು ಛತ್ರಿ ತುಂಬಾ ಹೂವು-ಬಣ್ಣಗಳಿಂದ ಕೂಡಿದ್ದರಿಂದ 'ಹೆಣ್ಣು ಛತ್ರಿ' ಎಂದು ಮೊದಲೇ ಗುರುತಿಸಿದ್ದೆ. ಆದರೆ ಇನ್ನೊಂದು  ಬ್ಲಾಕ್ ಛತ್ರಿಯ ಲಿಂಗ ಶೋಧನೆ ಅಷ್ಟು ಸುಲಭ ಅಲ್ಲ. ಮುಂದಿನ ದ್ವಾರದ ಕ್ಲೀನರ್ ಸೀಟ್ ನ ಹಿಂದಿನ ಸೀಟ್ ನಲ್ಲಿದ್ದ ನಾನು, ಹತ್ತುತ್ತಿರುವ ಜೀವಿಗಳು ಮಾನವ ಹೆಣ್ಣು ಜೀವಿಗಳು ಎನ್ನುವುದನ್ನು ಅರ್ಥೈಸಿಕೊಂಡೆ.

ಛತ್ರಿಗಳು ಮುದುಡಿದವು.ಇಬ್ಬರು ಅದ್ಭುತ ಸುಂದರಿಯರು ಬಸ್ಸನ್ನು ಏರಿ, ಡ್ರೈವರ್ ಹಿಂದಿನ ಸೀಟ್ ನಲ್ಲಿ ಕುಳಿತರು. ಅವರಿಬ್ಬರೂ ಎದುರು ಬದುರು ಕುಳಿತರು. ಬಸ್ಸು ಹೊರಟಿತ್ತು.ಬಸ್ಸನ್ನು ಏರಿದ ಏರಿದ ರೀತಿ, ಛತ್ರಿಗಳನ್ನು ಮುದುಡಿ ಕೆಳಗಿರಿಸಿದ ರೀತಿ, ಸಲ್ವಾರ್ ಕಮೀಜ್ ಗಳನ್ನು ಸರಿಸಿ-ಸಿಲುಕಿಸಿದ  ರೀತಿ, ಮಳೆಯ ಹನಿಗಳಿಂದ ಕುಡಿದ ಮುಖವನ್ನು  ಕರವಸ್ತ್ರದಿಂದಲೂ, ಸಲ್ವಾರ್ನಿಂದಳು ವರೆಸಿಕೊಂಡ ರೀತಿ ಎಲ್ಲವು ನಾನು ಗಮನಿಸುತ್ತಿದ್ದೆ. ಒಂದುಕ್ಷಣ ಎಲ್ಲವು ಸರಿ ಎಣಿಸುತ್ತಿರುವಾಗಲೇ ನೀಳವಾದ ಕೇಶರಾಶಿಯನ್ನು ಮುಂದಕ್ಕೆ ತಿರುಗಿಸಿ, ಕೆನ್ನೆಯ ಮೇಲಿನ ಕೂದಲನ್ನು ಓರಣವಾಗಿಸಿ, ಬಿಂದಿಯ ಮೇಲೆ ಕೈ ಯಾಡಿಸಿ, ಎಲ್ಲವವು ಸರಿ ಎಂದು ಖಚಿತ ಪಡಿಸಿದ ನಂತರ ಇಬ್ಬರು ಮಾತಿಗೆ ತೊಡಗಿದರು.

ಇಷ್ಟೊತ್ತಿಗಾಗಲೇ, ದೇವರ ದರ್ಶನಕ್ಕೆ ಹೋರಾಟ ನಾನು ಹುಡುಗಿಯರನ್ನು ನೋಡಬಾರದು ಅನ್ನುವ ವಿಷಯವನ್ನು ಮರೆತುಬಿಟ್ಟೆ.ನೀಳವಾದ ಕೇಶ ರಾಶಿ, ಬಿಳಿಯಾದ ಮುಖ, ಕೆನ್ನೆಯ ಸುತ್ತಲಿನ ಗುಂಗುರು ಕೂದಲು, ಕಿವಿಗೆ ಜೋಕಲಿಯಾಡುತ್ತಿರುವ ಆಭರಣ, ಕೆಂಪಾದ ತುಟಿಗಳು,ಗಿಣಿಯ ಕೊಕ್ಕಿನಂತಿರುವ ಮೂಗು,ಸೂರ್ಯ ತೆಜ್ಜಸ್ಸಿನ ಕಣ್ಣುಗಳು, ಕೊರಳಲ್ಲಿ ಸುತ್ತುವರಿದಿರುವ ಚಿನ್ನದ ಸರಪಳಿ(ಚೈನ್),ದೇಹಕ್ಕೆ ಅಚ್ಚು ಮೆಚ್ಚುಗೆಯ ಅಪ್ಪಿ ಕೊಂಡಿರುವ ಸುಂದರ ಸಲ್ವಾರ್ ಕಮೀಜ್, ಎಡ ಗೈ ಯಲ್ಲಿರುವ ಒಂದು ಸಣ್ಣ ಗಡಿಯಾರ,ಉದ್ದವಾದ ಉಗುರುಗಳು-ಕೆಂಪು ಬಣ್ಣದ ನೈಲ್ ಪೋಲಿಷ್ ಎಲ್ಲವು ನಾನು ಗಮನಿಸಿದ್ದೆ. ಹುಡುಗಿಯೊಬ್ಬಳನ್ನು ಈ ಪರಿ ನಾನು ನೋಡಿದ್ದು ಇದೆ ಮೊದಲು. ಒಂದೊಮ್ಮೆ  ಅವಳ ಚಿತ್ರ ನನ್ನಿಂದ ಬಿಡಿಸುವುದಕ್ಕೆ ಸಾಧ್ಯವಾಗುವುದಾದರೆ, ಅವಳ ಒಂದು ಕೂದಲು ಕೂಡ ಅದಲು ಬದಲಾಗದ ಹಾಗೆ ಚಿತ್ರ ಬಿಡಿಸುವಷ್ಟು ಸೂಕ್ಷ್ಮವಾಗಿ ಅವಳನ್ನು ನೋಡಿದ್ದೇನೆ. ಸೌಂದರ್ಯದ ರಾಶಿ ಇಲ್ಲಿಯೇ ಬಂದು ನಿಂತಿದೆ ಅನ್ನುವುದರಲ್ಲಿ ಸಂದೇಹ ಇರಲಿಲ್ಲ.  ಅತ್ತ-ಇತ್ತ ಬಸ್ಸು ಅಲಗಾಡುತಿದ್ದರು, ನನ್ನ ದೃಷ್ಟಿ ರೇಖೆಗಳು ಅವಳ ಮುಖವನ್ನು ಛೇದಿಸುತ್ತಿದ್ದವು. ಅವಳು ನನ್ನ ಗಮನಿಸಿದಳೋ-ಇಲವೋ ಗೊತ್ತಿಲ್ಲ.

ಹಾಗೆಂದು ನಾನು ಹುಡುಗಿಯರನ್ನು ನೋಡಿಯೇ ಇಲ್ಲ ಅಂದರೆ ತಪ್ಪಾಗಿತ್ತು. ಬಾರಿನಲ್ಲಿ ಕುಳಿತು ಕುಡಿಯಲಿಲ್ಲ ಅನ್ನುವುದು; ಮಣಿಪಾಲದಲ್ಲಿದ್ದು ಹುಡುಗಿಯರನ್ನು ನೋಡಿಯೇ ಇಲ್ಲವೆನ್ನುವುದು  ಯಾರು ಒಪ್ಪಲಾರರು. ನೋಡುವಿಕೆಯಲ್ಲಿ ಬಹಳ ವಿಧಗಳಿವೆ. ಭರತನಾಟ್ಯದಲ್ಲಿ ತೊಡಗಿರುವ ಹುಡುಗಿಯ ಅಂಗ-ಸೌಷ್ಟವಗಳನ್ನು ನೋಡುತ್ತಿದ್ದರು ಅದು ಕಲೆಯ ಒಂದು ಭಾಗವಾಗಿ, 'ಹುಡುಗಿಯನ್ನು ನೋಡುತ್ತೇವೆ' ಎಂದು ಹೇಳಲಾಗದು. ದಾರಿಯಲ್ಲಿ ಸಾಗುವಾಗ  ಸಹಜವಾಗಿ ಕಲ್ಲು-ಮಣ್ಣು-ಅಂಗಡಿ-ಬಸ್ಸು ನೋಡುವಂತೆ ಒಂದು ಹುಡುಗಿಯನ್ನು ನೋಡಿ ಮರೆತು ಬಿಟ್ಟಿರುತ್ತೇವೆ. ಇನ್ನು ಕೆಲವೊಮ್ಮೆ ಮುಖ ನೋಡಿದಾಗ, ಏನೋ ವಿಶೇಷ ಹುಡುಗಿ ಅನಿಸಿ ಒಂದೆರಡು ಸಾರಿ ನೋಡುತ್ತಾ ನೋಡುತ್ತಾ  ಹೋಗುತ್ತೇವೆ. ಆದರೆ, ಕೆಲವು ಹುಡುಗಿಯರು ಸೌಂದರ್ಯವೆಂಬುದನ್ನು ತಪ್ಪಾಗಿ ಅರ್ಥೈಸಿ, ದೇಹಕ್ಕೆ ಬೇಕಾದಷ್ಟು ಧರಿಸಬೇಕದಷ್ಟು ಬಟ್ಟೆಯನ್ನು ಧರಿಸದೆ ವಿಚಿತ್ರವಾಗಿ ಬೀದಿಗೆ ಇಳಿದು ಬಿಡುತ್ತಾರೆ. ಹುಡುಗಿಯರು ಬೇಕಾದನ್ನು ಧರಿಸದೆ ಹೋದಾಗ ಸೌಂದರ್ಯ ಮರೆಯಾಗಿ ಮೋಹಕತೆ ಉಂಟಾಗಿ, ನೊಡುವಿಕೆ ಬದಲಾಗಿ ದಿಟ್ಟಿಸುವ ಗುಣ ಹುಟ್ಟಿಕೊಳ್ಳುತ್ತದೆ. ಕೆಲವರು ಅದೆಷ್ಟು ವಿಚಿತ್ರವೆಂದರೆ ಸ್ನಾನ ಗೃಹದಿಂದ ಬೀದಿಗೆ ಬಂದು ಬಿಟ್ಟರೋ ಏನು ಎಂಬಂತೆ..!

ಹುಡುಗಿಯರು ಒಂದು ನೆನಪಿನಲ್ಲಿಡಬೇಕು. ಹೆಣ್ಣಿನ ದೇಹದಲ್ಲಿ ವಕ್ರತೆ ಇದೆ; ಸೌಂದರ್ಯವಿದೆ; ಸೂಕ್ಷ್ಮತೆ ಇದೆ;ಅದು ನಿಸರ್ಗದ ಕೂಡುಗೆ. ಅದನ್ನು ಸಂಸ್ಕೃತಿಯೆಂಬ ನಿಯಮದ ಒಳಗೆ ಓದನ್ನು ಪೋಸಿಸಿದರೆ ಅದಕ್ಕೆ ಬೆಲೆ. ನಿಮ್ಮ ಸ್ವಾತಂತ್ರ್ಯವನ್ನು ಖಂಡಿತ ನಾನು ಅರ್ಥೈಸಿ ಕೊಳ್ಳಬಲ್ಲೆ.ತುಂಬು ಹೃದಯದಿಂದ ನಿಮ್ಮನ್ನು ಗೌರವಿಸುತ್ತೇನೆ. ಆದರೆ ಡ್ರೆಸ್ ಎಂಬ ವಿಷಯದಲ್ಲಿ ಯಾಕೋ ಏನೋ ತಮ್ಮ ಬದುಕಿಗೆ  ಮಾರಕವಾಗುವುದನ್ನು  ದೂರವಿಡಬೇಕು ಎಂಬ ಸಲಹೆ ನಗಣ್ಯವಾಗಿ ಕಾಣುತ್ತಾರೆ. ಆದರೆ ನಿಮ್ಮ ಕಡೆ  ಗಂಡು ಜಾತಿ ನೋಡುವ ರೀತಿ, ನಿಮ್ಮ ಡ್ರೆಸ್ ಕೂಡ ನಿರ್ಧರಿಸುತ್ತದೆ. ಅದು ನಿಸರ್ಗದ ನಿಯಮವೇ..!

ಅಂದಹಾಗೆ, ನನ್ನ ಮುಂದೆ ಕುಳಿತುಕೊಂಡಿರುವ ಹುಡುಗಿ ಡ್ರೆಸ್ ಎಂಬ ವಿಷಯದಲ್ಲಿ ತುಂಬಾ ನಾಜುಕುತನವಿದೆ. ನೋಡುವಿಕೆಯಲ್ಲಿ ಯಾವ ಮೋಹಕ ಭಾವ ಇಲ್ಲ. ದೇವತೆಯೆಂಬ ಭಾವ ನನಗಾಗುತ್ತಿದೆ. ಸೌಂದರ್ಯದ ವಿಷಯದಲ್ಲಿ ನಾನು ಸೋತು ಬಿಟ್ಟೆ. ಕೆಲವೊಮ್ಮೆ ಸುತ್ತಲು ತಿರುಗಿ ಯಾರಾದರು ನನ್ನ ಕಡೆ ನೋಡುತ್ತಾರೋ ಎಂದು ನೋಡುತ್ತಾ, ಹುಡುಗಿಯ ಮುಖವನ್ನು ನೋಡುತ್ತಾ   ಕುಳಿತಿದ್ದೆ. ಅವಳು ಮಾತನಾಡುವಾಗ ಅವಳ ತುಟಿಗಳ ಕಂಪನ, ಗಂಟಲಿನಲ್ಲಿ ಧ್ವನಿ ನಾಳಗಳಗಳ ಚಲನ, ಅತ್ತಿತ್ತ ಕೈ ಯಿಂದ ಡ್ರೆಸ್ ನ್ನು ಕಾಪಿಟ್ಟುಕೊಳ್ಳುವ ಪರಿ ನೋಡುತ್ತಾ ನಾನು ಕಲ್ಪನಾ ಲೋಕದಲ್ಲಿ ವಿಹರಿಸುತ್ತಾ ಕುಳಿತೆ.  ಹೀಗಿರುವಾಗ, ನಾನು ನೋಡುತ್ತಿರುವ ಹುಡುಗಿಗೆ ಎದುರಾಗಿ ಕುಳಿತಿರುವ ಹುಡುಗಿ ಅವಳನ್ನು ಉದ್ದರಿಸುತ್ತ,
" ಸಿಂಚು , ಯಾನ್ ಆಗಲ್ ಪಂಡ್ಲ್ಕಾ  ನಲ್ಪೋಲಿಯಾ ?(ಸಂಚು, ನಾನು ಅವರು ಹೇಳಿದ ಹಾಗೆ
ಹೆಜ್ಜೆ ಹಾಕಬಹುದಾ?)

ಸೌಂದರ್ಯದ ಚಿಲುಮೆ ಬಾಯಿ ತೆರಿಯಿತು, ವಾಕ್ಯಗಳು  ತುಳುವಿನಲ್ಲಿ  ನನ್ನ ಕಿವಿಗೆ ಅಪ್ಪಳಿಸಿದ್ದು  ಹೀಗೆ  " ಯಾನ್, .... ಪ್ರಾಕ್ಟೀಸ್ ಮಲ್ಪೆರ್ ..... ಬೊಕ ....  ಮುಂಜಿ ಸ್ಟೆಪ್ .... ಶಂಕರಾಭರಣ ತಾಳ ಉಂಡು.............". 

ತುಳು ನಾಡಿನಲ್ಲಿ ಕೆಲವು ವರ್ಷಗಳು ಕಳೆದಿದ್ದರು ನನಗೆ ಭಾಷೆಯ ಹಿಡಿತವಿರಲಿಲ್ಲ. ಯಾರು ಕೂಡ ತುಳು ನಾಡಿನ ಗೆಳೆಯರಿರಲಿಲ್ಲ; ಅವಶ್ಯಕತೆಯೂ ಬಂದಿರಲಿಲ್ಲ. ಆದರೆ ಅಂಗಡಿಯಲ್ಲಿ, ಬಸ್ಸನಲ್ಲಿ ಕೇಳಿದ ತುಳುವೆ ನನಗೆ ಕೆಲವು ಶಬ್ಧಗಳನ್ನು ಅರ್ಥೈಸಲು ಸಾಧ್ಯವಾಗಿತ್ತು. ಯಾವುದೋ ಡಾನ್ಸ್ ಬಗ್ಗೆ ಇವರು ಮಾತನಾಡುತ್ತಿರುವುದು ನನಗೆ ಅರ್ಥವಾಯಿತು. ಆ ಹುಡುಗಿಯ ಹೆಸರು 'ಸಿಂಚು' ಎಂದು ತಿಳಿಯಿತು.ಆದರೆ 'ಸಿಂಚು' ಎಂದು ಹೆಸರು ಇರಲು ಸಾಧ್ಯವಾ ?  ಇವರ ಸಂಭಾಷಣೆಯಿಂದ ಇವರಿಬ್ಬರು ತುಳು ನಾಡಿನ ಕುವರಿಯರು ಎಂಬುದು ಪಕ್ವವಾಯಿತು.

ಅಷ್ಟು ಹೊತ್ತಿಗೆ, ಹಿಂದಿನಿಂದ ಟಿಕೆಟ್(ಚಲನ ರಶೀದಿ) ಕೊಡುತ್ತ ಬಂದ ಕಂಡಕ್ಟರ್ (ನಿರ್ವಾಹಕ), "ವೋಡೆಗ್ ಟಿಕೆಟ್
?" ಎಂದು ಕೇಳಿದ. ಇವರ ಉತ್ತರ: "ರಡ್ಡ್ ಪಿರಂಜೆಗ".  ನಾನು ಗೊಂದಲಕ್ಕೆ ಒಳಗಾದೆ. ಪಿರಂಜೆ  ಊರಿನ ಹೆಸರೇ ? ಬೆಳ್ತಂಗಡಿ ನಂತರವೋ ಅಥವಾ ಮೊದಲೋ ? ನನಗೆ ಏನಾಗಿದೆ ? ಏನು ಗೊಂದಲ ? ಹೃದಯ ಬಡಿತ ಹೆಚ್ಚಾಗಿದೆ. 

ಮುಂದೇನಾಯಿತು ?  ಭಾಗ-೪
       ಹುಡುಗಿ ಎದ್ದು ಬಂದು ಕಪಾಳಕ್ಕೆ ಬಾರಿಸಿದಳೆ?  ಸುಮ್ಮನೆ ಇಳಿದು ಹೊಗುವುದನ್ನು ನೋಡುತ್ತಾ ನಾನು ಸುಮ್ಮನೆ ಇದ್ದೆನೇ?
Reference: 
Tirukana kanasu haadu :http://goo.gl/ICsF9J
My sincere thanks to the writer in above link. 

Thursday, August 7, 2014

ಕನಸಿನ ಹುಡುಗಿ -ಸಿಂಚನಾ ::ಭಾಗ-೨ (ಮಣಿಪಾಲದಿಂದ ಪಿರಂಜೆಯ ತನಕ)

ಅಂತು ಬಸ್ಸು ಏರಿದೆ. ಬಸ್ಸಿನ ಸಹಾಯಕ ದುಂಬ ಪೋಲೇ(ತುಳು:ಮುಂದೆ ಹೋಗು) ,ಮಿಥ್ ಪೋಲೆ (ತುಳು:ಮೇಲೆ ಹೋಗು) ಅನ್ನುತ್ತಲಿದ್ದ. ಮುಂದಿನ ಬಾಗಿಲ ಹತ್ತಿರದ ಎಡಭಾಗದ ಸೀಟ್ ನಲ್ಲಿ ಕುಳಿತು ಕೊಂಡೆ.

ಅದು HMT ಬಸ್ಸು. ಅವಿಭಜಿತ ದಕ್ಷಿಣ ಕನ್ನಡದಲ್ಲಿ ಸರ್ಕಾರಿ ಬಸ್ಸು ವ್ಯವಸ್ಥೆಯಿಲ್ಲ. ಆದರು ಈಗ ಮಂಗಳೂರು ಹಾಗೂ ಮಣಿಪಾಲದ ನಡುವೆ ಕೆಲವು ಸರ್ಕಾರಿ ವೋಲ್ವೋ ಬಸ್ಸುಗಳ ಓಡಾಟ ಇದೆ. ಈ ಬಸ್ಸುಗಳ ವಿಶೇಷ ಅಂದರೆ ಪರಿ ಪೂರ್ಣವಾಗಿ ಸ್ಥಳೀಯ ಉದ್ಯಮಿಗಳೇ ನಡೆಸುತ್ತಾರೆ. ಬಹುತೇಕ ಬಸ್ಸುಗಳ ಕಿಡಕಿಗಳಿಗೆ ಗ್ಲಾಸ್ಸು ಇರುವುದಿಲ್ಲ. ಮಳೆಯಿಂದ ರಕ್ಷಿಸಿಕೊಳ್ಳಲು ದಪ್ಪನೆಯ ಪರದೆಯನ್ನು ಕಿಡಕಿಗಳಿಗೆ ಕಟ್ಟಲಾಗುತ್ತದೆ. ರಸ್ತೆಗಳು ಕಿರಿದಾಗಿರುವುದರಿಂದ ಬಸ್ಸುಗಳ ಉದ್ದ ಕೂಡ ಕಡಿಮೆ. ಅದರ ಸ್ಪೀಡ್ ಹಾಗೂ ಓವರ್ ಟೇಕಿಂಗ್ ಮಾತ್ರ ಕೆಲವೊಮ್ಮೆ ಅನಾಹುತಕಾರಿ ಎಂದು ನನಗೆ ಅನಿಸಿದೆ.

ಮಳೆಗಾಲದ ಚಳಿಗೆ, ಬೆಳಿಗ್ಗೆಯ ಗಾಳಿ 'ಸಖತ್ ಹೊಟ್ ಮಗಾ' ಎಂಬ ರೇಡಿಯೋ ಮಿರ್ಚಿಯ ವಾಕ್ಯ ಬದಲಿಸಿ 'ಸಖತ್ ಚಳಿ ಮಗಾ' ಅನ್ನುವಷ್ಟು ಖಡಕ್ ಆಗಿತ್ತು. ಈ ಚಳಿ-ಮಳೆಯ ಬಗ್ಗೆ ಯೋಚಿಸುತ್ತಿರುವಾಗ, ಹಾಲು ಹಾಕುವ ಹುಡುಗರು, ಪೇಪರ್ ಹಾಕುವ ಹುಡುಗರು, ಆಫೀಸ್ ಗೆ ಏಳು ಗಂಟೆಯೊಳಗೆ ಬಂದು ಹೌಸ್ ಕೀಪಿಂಗ್ ಮಾಡುವರ ನೆನಪು ನನ್ನ ಮನಸ್ಸಿನಲ್ಲಿ ನಡೆದಾಡಿತು. ಒಂದು ಒಳ್ಳೆಯ ಅಂಗಿ ಕೂಡ ಕೊಂಡು ಕೊಳ್ಳಲಾರದ ಬಡ ಹುಡುಗರು ಈ ಬೆಳಿಗ್ಗೆಯ ಚಳಿಯಲ್ಲಿ ಹೇಗೆ ಪೇಪರ್, ಹಾಲು ಹೋಗುತಾರೋ ದೇವರೇ ಬಲ್ಲ. ನಾವು ಯಾವತ್ತು ಮುಖವು ಕೂಡ ನೋಡಿರುವುದಿಲ್ಲ. ಒಂದೊಮ್ಮೆ ಸಕಾಲಕ್ಕೆ ನಮ್ಮ ಅಗತ್ಯತೆ ಬರದಿದ್ದರೆ ನಾವು ಓದಾರಡಿ ಬಿಟ್ಟಿರುತ್ತೇವೆ. ಆದರೆ, ರಾತ್ರಿಯೆಲ್ಲ ಇಂಟರ್ನೆಟ್ ಕೇಬಲ್ ಗೆ ಜೋತು ಬಿದ್ದು ಬೆಳಿಗ್ಗೆ ಸೂರ್ಯ ಬಂದುದ್ದು ಎಲ್ಲಿಂದ ಎಂದು ತಿಳಿಯಲು ಕೂಡ ಗೂಗಲ್ ಉಪಯೋಗಿಸುವ ಪರಿಸ್ಥಿತಿ ಇಂಜಿನಿಯರಿಂಗ್ ಹುಡುಗರದ್ದು. ನಾವು ಸುಖ ಜೀವಿಗಳೋ ಅಥವಾ ಬೆಳಿಗಿನ ಜಾವದಲ್ಲಿ ಏನು ನಡೆಯುತ್ತದೆ ತಿಳಿಯದ ಅಜ್ಞಾತ ಜೀವಿಗಳೋ ಎನ್ನುವ ಪ್ರಶ್ನೆಗಳು ಮೂಡಿದವು.

ಇಷ್ಟು ಯೋಚಿಸುವಾಗ ಬಸ್ಸು ಮಣಿಪಾಲದಿಂದ ಪರ್ಕಳ ದಾಟಿತ್ತು. ಬಸ್ಸಿನ ಪ್ರತಿ ವಾಲುವಿಕೆಯೂ ನನ್ನ ವಿಚಾರದ ದಾರಿಯನ್ನು ಬದಲಿಸುತ್ತಲಿತ್ತು. ಅದೆಷ್ಟೋ ವಿಚಾರಗಳು-ಬಸ್ಸು ಬಿದ್ದರೆ, ಯಾವ ಮರ, ಯಾವ ಬೋರ್ಡ್ ಹೀಗೆ ಏನೇನೋ ವಿಚಾರಗಳು ತಲೆಯಲ್ಲಿ ನಡೆಯುತ್ತಲೇ ಇರುತ್ತವೆ. ಒಂದೊಮ್ಮೆ ಮನುಷ್ಯನ ತಲೆ ಎಲೆಕ್ಟ್ರಾನಿಕ್ಸ್ ಚಿಪ್ ನಿಂದ ಮಾಡಿದ್ದಾಗಿದ್ದರೆ, ಅದರಿಂದ ಉಂಟಾದ ಬಿಸಿಯನ್ನು ಒಬ್ಬನಿಗೆ ಸ್ನಾನ ಮಾಡಲು ಸಾಕಾಗುವಷ್ಟು ನೀರು ಹದನೈದು ನಿಮಿಷದಲ್ಲಿಯೇ ಕಾಯಿಸಬಹುದೋ ಏನು..!

ದೇವರ ದರ್ಶನಕ್ಕೆ ಹೊರಟಿದ್ದರಿಂದ ದೇವರ ಕುರಿತಾಗಿ ವಿಶೇಷ ದೇವರ ಧ್ಯಾನ ಕೂಡ ಮನಸ್ಸಿನಲ್ಲಿ ಉಂಟಾಗಿತ್ತು.ನಾನು ಅಮ್ಮನ ಆದೇಶದ ಮೇರೆಗೆ ದೇವರ ದರ್ಶನಕ್ಕೆ ತೆರಳುತ್ತಿದ್ದರು ದೇವರಲ್ಲಿ ಏನಾದರು ಬೇಡಿಕೆ ಇಡಬೇಕಲ್ಲವೇ ಅನ್ನುವ ಸಣ್ಣದೊಂದು ಪ್ರಶ್ನೆ ಕೂಡ ಹುಟ್ಟಿಕೊಂಡಿತ್ತು. ಅರೋಗ್ಯ ಇದೆ;ಹಣ ಇದೆ;ಉದ್ಯೋಗ ಇದೆ; ನೆಚ್ಚಿನ ಗೆಳೆಯರಿದ್ದಾರೆ. ಎಲ್ಲವು ಇದೆ ಅಂದುಕೊಳ್ಳುತ್ತಲೇ 'ಒಂದು ಹುಡುಗಿಯನ್ನು ಕೇಳಿದರೆ ತಪ್ಪೇ?' ಎಂದು ಪ್ರಶ್ನಿಸಿ ಕೊಂಡು ಹೇಗೆ ಕೇಳುವುದು ಎಂದು ವಾಕ್ಯಗಳನ್ನು ಸರಿ ಹೊಂದಿಸುತ್ತಲೇ ಸೀಟ್ ಗೆ ಒರಗಿ ಕುಳಿತುಕೊಂಡೆ. ಕಣ್ಣು ಮುಚ್ಚಿದವು. ವಾಕ್ಯಗಳು ದೇವರ ಮುಂದಿಡ ಬಹುದಾದ ಪರಿಪೂರ್ಣ ಬೇಡಿಕೆಯಾಗಿ ಮನಸ್ಸಿನಲ್ಲಿ ನುಸುಳಿದವು. ಭಕ್ತಿಯ ಪರಾಕಾಷ್ಟತೆಯೇಮ್ಬಂತೆ, ದೇವರ ಪರಿ ಸಾನಿಧ್ಯದ ಮುಂದೆ ನಿಂತಂತೆ ಭಾಸವಾಯಿತು.ಆದರೆ, ಮುಂದೇನಾಯಿತು ತಿಳಿಯಲಿಲ್ಲ. ಬಸ್ಸಿನ ವಾಲುವಿಕೆ ಜೋಕಾಲಿಯಾಗಿ, ಮಿತ್ತ ಪೋಲೆ-ದುಂಬ ಪೋಲೆ ಗಳು ಜೋಗುಲಾವಾಗಿ, ಬಸ್ಸಿನ ಸೀಟ್ ತೊಟ್ಟಿಲು ಎಂಬಂತೆ ಸುಖ ನಿದ್ರೆಗೆ ಜಾರಿದೆ.

ಮುಂದಿನ ಭಾಗ -೩.

ಕಂಚಿನ ಕಂಠದ ಸಿಂಚನಾ ಕಾಣಲು
ವಂಚನೆಯಿಲ್ಲದ ಭಾವವ ಜನಿಸಲು
ಕೊಂಚ ನಾಚಿಕೆಯೋಳಂದೆ ' ಇಂಚಿನ ಪೋನ್ನು' ಮಹಾರಾಯರೇ??
ಮಿಂಚಿನ ಕಣ್ಣಗಳು, ಸೂರ್ಯ ತೇಜಸ್ಸು
ಮಂಚದ ಮೇಲಿನ ರಾಣಿಯ ಹಾಗೆ
ಮಿಂಚಿದ ಸಿಂಚನಾ ನೋಡಿ, ಭಕ್ತಿಗಾಯಿತು ವಿರುಕ್ತಿ ಭಾವದ ಸೋಲು .

ಕನಸಿನ ಹುಡುಗಿ -ಸಿಂಚನಾ ::ಭಾಗ-೧ (ಮಣಿಪಾಲದಲ್ಲಿ ಬಸ್ಸು ಹತ್ತಿದ್ದು)

ಕತೆಯ ಕಾಲ-2010. ಈ ಸಮಯದಲ್ಲಿ ನಾನು ಮಣಿಪಾಲದಲ್ಲಿ ನಾನು ಕೆಲಸದಲ್ಲಿದ್ದೆ.
ನನಗೆ ೨೫೦ ಜನ ಸಹೋದ್ಯೋಗಿಗಳು, ಅದರಲ್ಲಿ ೭೦ ಜನ ನನ್ನ ಜೂನಿಯರ್ ಗಳು ಇದ್ದರು. ಈ ಕತೆ ನನ್ನ ಸುತ್ತಲೇ ಕಟ್ಟಿದ್ದೇನೆ. ಯಾವುದೇ ವ್ಯಕ್ತಿಯ ಬದುಕನ್ನು, ಅಥವಾ ಹಿಂದಿನ ನನ್ನ ಕಂಪನಿಯ ಯಾವುದೇ ವಿಷಯವನ್ನು ನಾನು ಬಳೆಸುತ್ತಿಲ್ಲ.


ಭಾಗ-೧ :

ಶ್ರಾವಣ ಮಾಸ. ಹಬ್ಬಗಳ ಆರಂಭದ ದಿನಗಳು. ಮಣಿಪಾಲದಲ್ಲಿ ಭಾರಿ ಮಳೆಯೂ ಪ್ರಾರಂಭವಾಗಿ ಹಲವು ದಿನಗಳು ಕಳೆದಿದ್ದವು .

ಮಣಿಪಾಲದಲ್ಲಿ ಮಳೆ ಅಂದರೆ ಮೂರೂ ನಾಲ್ಕು ತಿಂಗಳು ಗೃಹ ಬಂಧನ ಇದ್ದಹಾಗೆ. ಎಷ್ಟು ಹೊತ್ತಿಗೆ 'ಎಂಥಾ' ಮಳೆ ಬರುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಒಂದೇ ಕ್ಷಣ ಮಾತ್ರದಲ್ಲಿ ರಸ್ತೆ, ಕಾಲುವೆ, ಹಳ್ಳಗಳು ತುಂಬಿ ಹೋಗುತ್ತವೆ.ರಭಸದಿಂದ ಗಾಳಿ ಬೀಸುತ್ತದೆ. ಛತ್ರಿ ಗಟ್ಟಿಯಾಗಿದ್ದರೆ ಮಾತ್ರ ಗಾಳಿಗೆ-ಮಳೆಗೆ ನಿಮ್ಮ ರಕ್ಷಿಸೀತು! ಆದರೆ ಒಮ್ಮೆ ಮಳೆ ನಿಂತಿದೆಯಂದರೆ ಎಲ್ಲವು ಸ್ವಚ್ಚ. ಇರು ಇಲ್ಲ; ಗಾಳಿಯು ಇಲ್ಲ. ನಿರಾಳವಾಗಿ ಹೆಜ್ಜೆ ಹಾಕ ಬಹುದು. ಒಂದೊಮ್ಮೆ ಮಣಿಪಾಲದ ಹಾಗೆ ಹುಬ್ಬಳಿಯಲ್ಲೆನಾದರು ಮಳೆ ಬಿದ್ದರೆ ಹತ್ತು ವರ್ಷ ಹುಬ್ಬಳಿ ನೀರಿನ ಕೆರೆಯೇ ಆಗಿ ಬಿಡಬಹುದು. ಮಳೆ ಆರಂಭವಾಗುತ್ತಿದ್ದನತೆ ಎಲ್ಲವು ಹಸಿರು. ಸುತ್ತಲು ಗಿಡ-ಪೊದೆಗಳು ಹಬ್ಬಿ ಎಲ್ಲವು 'ಗ್ರೀನ್ ವ್ಯೂ' ಅಥವಾ ಎಸಿ ರೂಂ ನಲ್ಲಿ ಕೊಳೆಯುತ್ತಿದವರಿಗೆ 'ನ್ಯಾಚುರಲ್ ಸೀನ್'.

ಮಣಿಪಾಲಕ್ಕೆ ಹೊರಗಿನಿಂದ ಬಂದವರಿಗೆ ಮಣಿಪಾಲದ ಮಳೆ ಒಂದು ರೀತಿಯ ಶಾಪ. ಅದರಲ್ಲೂ ಉತ್ತರ ಕರ್ನಾಟಕದ ಯಾವುದೊ ಪ್ರದೇಶದಲ್ಲಿ ಮಣಿಪಾಲದಲ್ಲಿ ಬೇಸಿಗೆಯಲ್ಲಿ ಬೀಳುವ ಇಬ್ಬನಿಯಷ್ಟು ಮಳೆಯನ್ನೂ ನೋಡಿದವರಿಗೆ ಮಣಿಪಾಲದಲ್ಲಿ ಅವರಿಗೆ ಪ್ರವಾಹ ಅನಿಸುವುದು ಸಹಜವಾಗಿತ್ತು. ಯಾರಿಗಾದರು ಹೊರಗಡೆ ಹೋಗೋಣ ಅಂದರೆ, " ಸಾಕಲೇ...ಈ ಮಳೆ ಕೊಲ್ತಾ ಇದೆ ಲೇ " ಎಂದು ಕೊರಗುತ್ತಲೇ ಕಚೇರಿಯತ್ತ ತೆರಳುವರೆ ಜಾಸ್ತಿ. 'ಇಂಚಿನ ಸಾವು ಮಹರಾಯ !'.

ಅದು ಶ್ರಾವಣ ಮಾಸದ ಮೊದಲ ಶುಕ್ರವಾರ. "ವೀಕೆಂಡ್ ಪ್ಲಾನ್ ?" ಎನ್ನುತ್ತಲೇ ಎಲ್ಲರು ಕೇಳುತ್ತಲಿದ್ದರು. ಎಲ್ಲರು ಒಂದೊಂದು ಸಬೂಬು. ಮಳೆ ಬೇರೆ. ಹೀಗಿರುವಾಗ ನಾನು ಧರ್ಮಸ್ಥಳಕ್ಕೆ ಹೋಗಬೇಕು, ಶ್ರಾವಣ ಮಾಸದ ಪೂಜೆ ಸಲ್ಲಿಸಬೇಕು ಎಂದು ನನ್ನ ಮನೆಯಿಂದ ಆದೇಶ ಬಂತು. ಶನಿವಾರ ಬೆಳಿಗ್ಗೆ ನಾನು ಧರ್ಮಸ್ತಳಕ್ಕೆ ತೆರಳಲು ನಾನು ನಿರ್ಧಾರ ಮಾಡಿ, ಬದುಕಿನ ಏಕಾಂಗಿತನದ ಜೊತೆಯಲ್ಲೂ ನನ್ನ ಜೊತೆಯಿದ್ದ ಗೆಳತಿ ಆಕಾಶವಾಣಿ ಯನ್ನು ಕೇಳುತ್ತ, ಉಡುಪಿಯ ಬಗ್ಗೆ ಕನಸುಗಳನ್ನು ಕಾಣುತ್ತ, ಭರತನಾಟ್ಯ, ಸಂಗೀತ, ರಾಜಾಂಗಣ, ಯಕ್ಷಗಾನ, ಆಭರಣ, ಡಯಾನಾ ಚಿತ್ರಗಳನ್ನು ಕಾಣುತ್ತ ಮಲಗಿದ್ದೆ. ಕೆಲವೊಮ್ಮೆ ಮಳೆಯ ತಪ-ತಪ ಎನ್ನುವ ಹನಿಗಳ ಸದ್ದು , ಗಡಿಯಾರದ ಟಿಕ್ ಟಿಕ್ ಶಬ್ಧವು ಕೂಡ ನನ್ನ ಕನಸ್ಸಿಗ್ಗೆ ತೊಂದರರೆ ಕೊಡುತ್ತಿತ್ತು. ಎಲ್ಲವು ಕನಸಿನೊಳಗೆ ಕನಸಾಗಿ, ನಿದ್ದೆಯೇ ಮುಗಿಯದ ಕಾಲದಲ್ಲಿ ಬೆಳಿಗ್ಗೆ ೬ ಗಂಟೆಗೆ ಅಲರಾಮ ನನ್ನ ಏಳಿಸಿತು...!

ತಣ್ಣೀರಿನ ಸ್ನಾನ ಮಾಡಿ, ಬೆಳಿಗ್ಗಿನ ಜಾವದಲ್ಲಿ ಟೈಗರ್ ಸರ್ಕಲ್(ಹುಲಿ ವೃತ್ತ) ಕ್ಕೆ ಬಂದೆ. ದೇವರ ದರ್ಶನಕ್ಕೆ ಹೊರಟಾಗ ದೇವರ ಭಕ್ತಿ ರೋಮ-ರೋಮ ಗಳಲ್ಲೂ ಸಂಚರಿಸುತ್ತಿತ್ತು. ಬೆಳಿಗಿನ ಜಾವದಲ್ಲಿ ಯಾವ ಹುಡುಗಿಯು ವೃತ್ತದಲ್ಲಿ ಇದ್ದಿರಲಿಲ್ಲ, ಜೊತೆಗೆ ದೇವಲಾಯಕ್ಕೆ ಹೋಗುವಾಗ ಯಾರನ್ನು ನೋಡಬಾರದು ಎಂದು ಕೊಂಡೆ ಬಸ್ಸಿಗೆ ಕಾಯುತ್ತ ಬಸ್ ಸ್ಟಾಂಡ್ ನಲ್ಲಿ ನಿಂತು ಕೊಂಡೆ. ಮಳೆಯ ಮಧ್ಯೆ, ಬೆಳಿಗಿನ ಛಳಿಯ ಕಾಟದಿಂದ ಮೈ ಮನಸ್ಸು ನಡುಕುತ್ತಲಿತ್ತು.

ಸೋಮೆಂದ್ರ( ನನ್ನ ಕಿರಿಯ ಸಹೋದ್ಯೋಗಿ ) KMC ಯ ಯೋಗ ತರಬೇತಿ ಮುಗಿಸಿ, ಹಂಗ್ಯೋ ಸೈಬಾ(ಹೋಟೆಲ್) ಮುಂದೆ ಹಾಸಿ ನನ್ನ ಮುಂದೆ ನಿಂತು,

"ಹಾಯ್ ಗುಡ್ ಮಾರ್ನಿಂಗ್ ವೆಂಕಟ್ ಸರ್, ಏನು ಇಷ್ಟು ಬೆಳಿಗ್ಗೆ ?? "

"ಏನಿಲ್ಲಪ್ಪ ಸೋಮೆಂದು... ಧರ್ಮಸ್ಥಳ ಕಡೆಗೆ ಹೊರೆತಿದ್ದೇನೆ. ನೀನೇನು ಇಲ್ಲಿ ?" ಎಂದು ಪ್ರಶ್ನಿಸಿ. ಅವನ ಹಿಂದೆ ನಿಂತ ಪಡೆಯಲ್ಲಿ, ರೋಶನ್, ದಿವ್ಯ , ಶ್ರಾವ್ಯ, ಕಂಚಿಕಾ, ರೋಶನಿ...ಎಲ್ಲರನ್ನು ನೋಡಿ. ಅಂತು ದೇವರ ದರ್ಶನದಲ್ಲೂ ಸೌಂದರ್ಯದ ಪಿಂಡಗಳು ಮುಂದೆ ಬಂದವಲ್ಲ; ನನ್ನ ಭಕ್ತಿ ಮಾರ್ಗಕ್ಕೆ ತಡೆ ಅಂದು ಕೊಂಡೆ. ಜೊತೆಗೆ, ಸೂರ್ಯೋದಯವನ್ನು ಎಂದು ನೋಡಿಯೇ ಇರಲಾರದ ಸೋಮೆಂದು ನಂತಹ ಪಿಂಡ ಮಳೆಗಾಲದ ಚಳಿಯಲ್ಲಿ ಯೋಗವೆಂದು ೫ ಗಂಟೆಗೆ ಎದ್ದು ಬರುತ್ತಾನೆ ಎಂದರೆ ಹೆಣ್ಣು ಉತ್ಸಾಹದ ಮೂರ್ತಿಯೇ ಇರಬೇಕು ಅನ್ನುವುದು ಕಂಚಿಕಾಳ ಮುಖ ಒಮ್ಮೆ ನೋಡಿದಾಗಲೇ ನನಗೆ ಅನಿಸಿತ್ತು. ಇವರಿಂದಾಗಿ ಯೋಗದ ಬಗ್ಗೆ ನನಗೂ ಆಸಕ್ತಿ ಹುಟ್ಟಿತ್ತು. ಆದರೆ ಇವರಲ್ಲಿ ನೋಡಿದ ಮುಖ ಯಾವುದು ಕೂಡ ಉಡುಪಿಯದಲ್ಲ; ಕರಾವಳಿಯದಲ್ಲ. ನನ್ನ ಗುರಿ ಏನಿದ್ದರು ಉಡುಪಿ. ನೋ ಯೋಗ..! ಎಂದು ಸಮಾಧಾನಿಸಿ ಕೊಂಡು, ಕಣ್ಣುಗಳನ್ನು ಬಸ್ಸಿನ ಅಗಮನದತ್ತ ನೋಡಿದೆ.
"ಬೈ ಸರ್" ಎನುತ್ತಲೆ ಎಲ್ಲರು ಹೊರಟರು. ನೋಡ ಬಾರದು ಅಂದುಕೊಂಡರು ಮತ್ತೆ ಅವರತ್ತ ನೋಡಿದೆ. ನಾವು ಏನೇ ಮಾಡಿದರು ಹುಡುಗರೇ ಬಿಡಿ!

ಬಸ್ಸು ಬಂತು. ಕರ್ಕರ (ಕಾರ್ಕಳ), ಬಿದ್ರೆ( ಮೂಡುಬಿದರೆ), ಬೆಳ್ತಂಗಡಿ ಎನ್ನುತ್ತಾ ವಾಹನ ಸಹಾಯಕ ಕೂಗಿದ ಧ್ವನಿ ಕೇಳಿ ಬಸ್ಸು ಏರಿ ಕುಳಿತೆ. (ಭಾಗ -೨ ರಲ್ಲಿ ಮುಂದಿನ ಕತೆ ಇದೆ)