Friday, August 15, 2014

ಕನಸಿನ ಹುಡುಗಿ -ಸಿಂಚನಾ ::ಭಾಗ-೫(ಪಿರಂಜೆಯಿಂದ ಧರ್ಮಸ್ಥಳಕ್ಕೆ ಹೊದುದ್ದು)


ಭಾಗ -೫ (ಪಿರಂಜೆಯಿಂದ ಧರ್ಮಸ್ಥಳಕ್ಕೆ ಹೊದುದ್ದು)
ಮಳೆಯಲ್ಲಿ ಬೆವತು ನಿಂತೆ. ಒಂದಿಷ್ಟು ರೈತ ಮಹಿಳೆಯರು ನನ್ನ ಮುಂದೆ ಹಾಡು ಹೊದುದ್ದು ಬಿಟ್ಟರೆ ಪಿರಂಜೆಯ ಯಾವ ಜೀವಿಯು ಬರಲಿಲ್ಲ. ಬಸ್ಸಿಗೆ ಕಾಯುತ್ತ, ವಿವಿಧ ವಿಚಾರ ಲಹರಿಯಲ್ಲಿ ಮುಳುಗಿದೆ.

ದೇವರ ದರ್ಶನಕ್ಕಾಗಿ ಬಂದು ಹುಡುಗಿಯ ಹಿಂದೆ ಬಿದ್ದು ಪಾಪವನ್ನು ಕಟ್ಟಿಕೊಂಡೆ ಎಂಬ ಪಾಪ ಪ್ರಜ್ಞೆ ಒಂದೆಡೆಯಾದರೆ,ಸೌಂದರ್ಯದ ಮಹಾನ್ ಚಲುವೆಯನ್ನು ಕಣ್ಣಲ್ಲಿ ಕಣ್ಣಿಟ್ಟು, ಕೊನೆಗೂ ಕೈಗೆ  ಸಿಗಲಾರದು ಎಂಬ ಹತಾಶ ಭಾವ ಇನೊಂದೆಡೆ. ಇತ್ತ ಅಳುವು ಇಲ್ಲ, ಹಾಗೆಂದು ನಗುವು ಇಲ್ಲ. ಆದರೆ ಏನು ಇಲ್ಲದ ಸಮ ಸ್ಥಿತಿಯೂ ಅಲ್ಲ. ಒಂದಿಷ್ಟು ದುಗುಡ, ಒಂದಿಷ್ಟು ಸಂತೋಷ, ಒಂದಿಷ್ಟು ಭಯ, ಒಂದಿಷ್ಟು ಕುತೂಹಲ ಎಲ್ಲ ಸೇರಿದ  ಮನಸ್ಸಿನ ಭಾವಗಳ ಮಸಾಲಾ ಪುರಿ.

ಹುಡುಗರು ಅಂದರೆ ಎಷ್ಟೊಂದು ಪಡಪೋಸಿಗಳುಗಳು ಅನಿಸಿತು. ಕೇವಲ ನೋಡಿದ ಹುಡುಗಿಗಾಗಿ ಬಸ್ಸಿಳಿದು ಬಂದೆ ಎಂಬ ವಿಷಯ ಯಾರಿಗಾದರು ಹೇಳಿದರೆ, ಅಥವಾ  ಯಾರಾದರು ನೋಡಿದ್ದರೆ ನನ್ನನ್ನು ಏನೆಂದು ಕರೆದಾರು?  ಎಂದೆಲ್ಲ ಚಿಂತಿಸುತ್ತಲೇ, ಇನ್ನೊಮ್ಮೆ ನಾನು ಯಾಕೆ ಹೆದರಬೇಕು? ನನಗೇನು ಬೇಕು ನಾನು ಮಾಡಿದ್ದೇನೆ, ಅದೆಲ್ಲ ಜನ ತಿಳಿದು ಮಾಡುವುದೇನಿದೆ ಎನ್ನುವ ಇನ್ನೊಂದು ಉತ್ತರವೂ ಸಿದ್ಧಗೊಂಡಿತ್ತು. ಹೀಗೆ ವಾದ-ಪ್ರತಿವಾದಗಳು ನನ್ನ ಮನಸ್ಸಲ್ಲೇ ಉಂಟಾಗಿ ನಾನು ಮಾತ್ರ ಬಳಲುತ್ತಲೇ ಇದೆ. ಇತ್ತ, ಬಸ್ಸುಗಳ ಸಂಖ್ಯೆ ಕೂಡ ಕಡಿಮೆ. ಛತ್ರಿ ಹಿಡಿದುಕೊಂಡು, ನಿಂತಲ್ಲಿ  ನಿಲ್ಲಲಾಗದೆ ಹಿಂದೆ ಮುಂದೆ ರಸ್ತೆಯ ಪಕ್ಕದಲ್ಲೇ ನಡೆದಾಡಿದೆ. ಸಮಯ ಸುಮಾರು ಹನ್ನೆಂದು ಆಗುತ್ತಲಿತ್ತು.

ಅಂತು ಕೊನೆಗೂ ಬಸ್ಸು ಬಂತು. ಅದು ಕೆಂಪು ಬಸ್ಸು;ಹುಬ್ಬಳಿ-ಧರ್ಮಸ್ಥಳ ಬೋರ್ಡ್;ಹತ್ತಿ ಕುಳಿತೆ.ಎಲ್ಲವನ್ನು ಮರೆತು 'ಸಿಂಚು'(ಬಸ್ಸಿನಲ್ಲಿ ಆ ಹುಡುಗಿಯರು ಮಾತನಾಡುವಾಗ ಕೇಳಿದ್ದು) ಎಂಬ ಒಂದೇ ಶಬ್ದ ನನ್ನ ಹೃದಯದಲ್ಲಿ  ಮತ್ತೆ ವಿವಿಧ ಕನಸ್ಸುಗಳನ್ನು ಕಲ್ಪಿಸುತ್ತಲಿತ್ತು. ಮಣಿಪಾಲದಲ್ಲಿ ಬಸ್ಸು ಹತ್ತಿದಾಗ, ದೇವರಲ್ಲಿ ಹುಡುಗಿಯನ್ನು ಕೇಳಬೇಕು ಅಂದುಕೊಂಡಿದ್ದ ನಾನು, ಪಿರಂಜೆಯ ನಂತರದ ಪ್ರಯಾಣದಲ್ಲಿ 'ಸಿಂಚು' ನನ್ನ ಹೆಂಡತಿಯಾಗಬೇಕು ಎಂಬ ಭ್ರಮಿತ ಭಾವ ನನ್ನ ಕಾಡತೊಡಗಿತ್ತು. ಹಾಗೆಂದು ಮತ್ತೊಮ್ಮೆ ನನ್ನ ಜೀವನದಲ್ಲಿ 'ಸಿಂಚು'ನಾ ನೋಡುತ್ತೇನೆ ಎನ್ನುವ ಕಲ್ಪನೆ ಯಾಗಲಿ, ಸಾಧ್ಯತೆಯಾಗಲಿ ನನಗೆ ಉಳಿದಿರಲಿಲ್ಲ.

ಪ್ರಪಂಚದಲ್ಲಿ ಕಠಿಣ(ಹಾರ್ಡ್ ವರ್ಕ್) ಮೂಲಕ ಹಣವನ್ನು, ಹೆಸರನ್ನು, ಶಿಕ್ಷಣವನ್ನು, ಸ್ಥಾನ-ಮಾನಗಳನ್ನು ಗಳಿಸಬಹುದು. ಆದರೆ ಹುಡುಗಿಯನ್ನು ಪಡೆಯುವುದು ಹಾರ್ಡ್ ವರ್ಕ್ ಮೂಲಕ ಖಂಡಿತ ಅಲ್ಲ. ಅದು ಹಣೆ ಬರಹ. ಅದು ದೇವರ ನಿರ್ಧಾರ. ದೇವರಿಗೂ ಒಂದು ಚಟ ಇದೆ. ಅವನು ಎಲ್ಲವನ್ನು ದುಡಿದು ಗಳಿಸಬೇಕೆಂದು ಭಾವಿಸುತ್ತಾನೆ. ಆದರೆ ಹುಡುಗಿ ಮಾತ್ರ ಯಾರು ಎಂದು ಸ್ವರ್ಗದಲ್ಲೇ ನಿರ್ಧರಿಸಿ ಬಿಡುತ್ತಾನೆ. ಈ ದೇವರಿಗೆ ಹುಡುಗಿ ಹುಡುಕಿಕೊಳ್ಳುವ ಕೆಲಸದಲ್ಲಿ ಮಾತ್ರ ತನ್ನ ತೊಡಗಿಸಿ ನಮ್ಮ ಆಟ ಅಡಿಸುತ್ತನಲ್ಲ ಅನಿಸಿತು. ಆದರೂ ದೇವರಲ್ಲವೇ ? "ದೇವರೇ, ಮುಂದೇನು ನನಗೊತ್ತಿಲ್ಲ, ನನಗೆ 'ಸಿಂಚು' ಬೇಕು" ಎಂದು ಭಾವ ಪರವಶನಾಗಿ ನನ್ನ ತೊಡೆಯ ಮೇಲಿದ ಬ್ಯಾಗ್ ನನ್ನು ಒತ್ತಿಕೊಂಡು  ಒಂದಿಷ್ಟು ಕ್ಷಣ ಕುಳಿತುಬಿಟ್ಟೆ. ಅವಳು ಸಿಗಲ್ಲ ಆದರು ನನಗೆ ಆಶವಾದಿತನ ಮರೆಯಾಗಲಿಲ್ಲ.

ಭಾವನೆಗಳ ಸರಮಾಲೆಯಲ್ಲಿ ಮುಳುಗಿದ ನಾನು, ನೇತ್ರಾವತಿಯ ತೀರಕ್ಕೆ ಬಂದು ಇಳಿದೆ. ನದಿಯಲ್ಲಿ ಮುಳಿಗಿದೆ. ನಾನು ದೇವರದರ್ಶನಕ್ಕೆ ಬಂದು ಹುಡುಗಿಯ ಹಿಂದೆ ಹೋದ ಪಾಪಕ್ಕೆ ಪರಿಹಾರ ಕೊಡು ಎಂದು ಐದು ಭಾರಿ ಮುಳುಗಿ,ಮಡಿ ಬಟ್ಟೆಯಲ್ಲಿ ದೇವರದರ್ಶನಕ್ಕೆ ಸಾಗಿದೆ. ಸ್ನಾನದಿಂದ ಪಿರಂಜೆಯ ಮಣ್ಣು ತೊಳೆದಿದ್ದರು, ಮನಸ್ಸಿನಿಂದ  ಪಿರಂಜೆಯ ಹುಡುಗಿಯ ಚಿತ್ರ ಮಾತ್ರ ಹಾಗೆ ಇತ್ತು. ನನ್ನ ಮನಸ್ಸಿನೋಳಗಿದ್ದ ಸಿಂಚು ಚಿತ್ರ ಒಂದು ಕ್ಷಣವೂ ಮರೆ ಮಾಚಲು ಸಾಧ್ಯವಾಗಿಲ್ಲ. ದೇವರ ದರ್ಶನದುದ್ದಕ್ಕು 'ಸಿಂಚು' ನನಗೆ ಬೇಕು ಎಂದು ಮೊರೆ ಇಡುತ್ತಲೇ ಇದೆ. 'ಸಿಂಚು' ಹೆಸರಿನಲ್ಲಿ ಒಂದು ಮಂಗಲಾರತಿಯನ್ನು ಮಾಡಿಸಿದೆ. ಕೊನೆಗೂ ದೇವರ ದರ್ಶನ ಮುಗಿಸಿ, ಊಟ ಮಾಡಿ, ಧನಾತ್ಮಕ ವಿಚಾರಗಳಿಂದ  ಗೊಮ್ಮಟೇಶ್ವರ ಗುಡ್ಡದ ಮುಂದೆ ಸಾಗಿದೆ.

ನಾನು ಒಬ್ಬನೇ. ಸಿಂಚು ಹೃದಯದ ಒಳಗೆ ಇದ್ದರು ಹೊರಗೆ ಬಂದು ಮಾತನಾಡುತ್ತಿರಲಿಲ್ಲ. ಹೀಗಾಗಿ ಭೌತಿಕವಾದ ಏಕಾಂತತೆ ನನಗೆ ಕಾಡುತ್ತಲೇ ಇತ್ತು. ಹೀಗಿರುವಾಗ, ಬೆಟ್ಟದ ಮೇಲೆ  ಆರು ಗಂಟೆಯ ಸಮಯದಲ್ಲಿ ತುಂಬಾ ಜನರು ತಿರುಗಾಡುತ್ತಿದ್ದರು. ಸಾವಿರಾರು ಜನರು ತಮ್ಮ ಮಕ್ಕಳ ಜೊತೆ, ಹೆಂಡತಿಯ ಜೊತೆ, ಗೆಳೆಯರ ಜೊತೆ ಹರಟುತ್ತ ಸಾಗುತ್ತಿದ್ದರು. ನಾನು ಹುಲ್ಲುಗಾವಲಿನ ಒಂದು ಬದಿಯಲ್ಲಿ ಕುಳಿತು ಏಕಾಂತತೆಯ ನಡುವೆ, ಸಿಂಚು ಎಂಬ ಒಳಗಿರುವ ವಿಷಯವನ್ನೇ ಮೆಲಕು ಹಾಕುತ್ತ ಒಂದಾದರೂ ದಾರಿ  ಸಿಗಬಹುದೇ? ಹಣಬರಹದಲ್ಲಿ ಏನಿದೆ ಅಂತೆಲ್ಲ ಯೋಚಿಸತೊಡಗಿದೆ.

ಹೀಗೆ ಹುಲ್ಲುಗಾವಲಿನ ಮೇಲೆ ಕುಳಿತಿರುವಾಗ, ನನ್ನ ಪಕ್ಕದಲ್ಲಿ ಕುಳಿತಿರುವ ದಂಪತಿಗಳು ತಮ್ಮ ಮೂರು ವರ್ಷದ ಹೆಣ್ಣು ಮಗುವಿನೊಂದಿಗೆ ಸಂತೋಷದ ಕ್ಷಣಗಳನ್ನು ಕಳೆಯುತ್ತಲಿದ್ದರು. ಮಗುವು ಪುಟ್ಟ ಹೆಜ್ಜೆಗಳನ್ನು ಇಡುತ್ತ, ಆ ಕಡೆ ಈ ಕಡೆ ಓಡಾಡುತ್ತ ಇತ್ತು. ಹೀಗೆ ಓಡುವ ತವಕದಲ್ಲಿ ಮಗುವು ಒಮ್ಮೆ ನನ್ನ ಬ್ಯಾಗ್ ಗೆ ಸಿಕ್ಕಿ ಬಿದ್ದು ಬಿಟ್ಟಿತ್ತು. ನಾನು ಮಗುವನ್ನು ಎತ್ತಿದೆ; ಅವಳ ಗಲ್ಲವನ್ನು ಹಿಡಿದು, ಅವಳ ನಗುವನ್ನು ನೋಡಲು ಉತ್ಸುಕನಾಗುತ್ತಿದ್ದಂತೆ,  ಅವಳ ಅಮ್ಮ ತಿರುಗಿ ನೋಡಿದ್ದೇ ರಂಪಾಟ ಮಾಡಿಬಿಟ್ಟರು. ನಾನು ಹೆದರಲಿಲ್ಲ. ಮಗುವನ್ನು ಬಿಟ್ಟೆ; ಅದು ನನ್ನ ನೋಡಿ ನಗುತ್ತಲೇ ಇತ್ತು. ಆದರೆ ಅಮ್ಮ ಮಾತ್ರ, ನಿಂತ ಭಂಗಿಯಲ್ಲೇ, ಕಣ್ಣು ಮಿಟಿಕಿಸದೆ ನೋಡಿದಾಗ ನನ್ನ ಹೃದಯ ತಲ್ಲಣ ಗೊಂಡಿತು. ಇವತ್ತಿನ ಪರಿಸ್ಥಿತಿಯಲ್ಲಿ ಈ ಅಮ್ಮಂದಿರಿಗೆ ಯಾರನ್ನು ನಂಬಲು ಸಾಧ್ಯವಾಗುತ್ತಿಲ್ಲ, ಮಕ್ಕಳು ಸಣ್ಣವರು ಮುಗ್ದರು ಎನ್ನುವ ಅರಿವಿಲ್ಲದ  ಮೃಗೀಯ ಜನರ ಮಧ್ಯೆ ನಮ್ಮಂತವರಿಗೆ  ಮಕ್ಕಳ ಮುಗ್ದ ನಗುವನ್ನು ಕಾಣುವ ಅವಕಾಶ ಕಳೆದಿದೆ ಎಂದು ಭಾವಿಸಿ ನಾನೇ ಶಪಿಸಿ ಕೊಂಡೆ. ಆದಿನದಿಂದ ಎಷ್ಟೇ ಮುಗ್ದ ಮಕ್ಕಳು ಕಂಡರೂ ದೂರದಿಂದ ನೋಡಿ, ನಗುವಿಗೆ ಪ್ರತಿ ನಗು ಕೊಟ್ಟು ಬೈ ಬೇ ಎಂದು ಹೇಳಿ ಹೋಗುತ್ತೇನೆ.

ಹೀಗೆಲ್ಲ ನಡೆದು, ಪ್ರತಿಯೊಂದು ಎದುರಾದ ಕಲ್ಲಿಗೂ 'ಸಿಂಚು' ಬೇಕು ಎಂದು ಮೊರೆಯಿಡುತ್ತ, ಶನಿವಾರ ರಾತ್ರಿ ಧರ್ಮಸ್ಥಳದಲ್ಲಿ  ಕಳೆದು ಬೆಳಿಗೆ ಅಲ್ಲಿಂದ ಹೊರಟು, ಮಂಗಳೊರು ಮೂಲಕ ಮಣಿಪಾಲ ಸೇರಿದೆ. ಮಣಿಪಾಲ ಸೇರಿದಾಗ ಸಂಜೆ ೪ ಗಂಟೆಯಾಗಿತ್ತು. ಮನಸ್ಸು ಖಾಲಿಯಾದ  ಭಾವವಿತ್ತು.ದೇಹ ಬಳಲಿತ್ತು; ಸ್ನಾನ ಮಾಡಿ ಎರಡು ತಾಸು ಮಲಗಿದೆ. ಏಳುಗಂಟೆಗೆ ಸರಿಯಾಗಿ ನಿತ್ಯ ಕ್ರಮದಂತೆ ದೇವರಿಗೆ ದೀಪ ಹಚ್ಚಿ, ಮಂಗಳೂರು ಆಕಾಶವಾಣಿ ಕೇಳುತ್ತ, ಸಿಂಚು ಮರೆಯ ಬೇಕು ಎಂದು ಪ್ರಯತ್ನ ಪಡುತ್ತಿದ್ದೆ. ಮರೆತರು ಮರೆಯಲಾಗದ ಸಿಂಚು ಮತ್ತೆ ಮತ್ತೆ ಬರುತ್ತಲಿದ್ದಳು.

ಭಾಗ ೬: (ಮಣಿಪಾಲದಲ್ಲಿ ಚಿಂತೆಗಳು) ಕಾಡು ನೋಡಿ.

No comments:

Post a Comment