Monday, December 15, 2014

ಲಾ ಲಾ ಲೈಲಾ... ಮದುವೆ ಶೀಲಾ

ಶೈಲಾ ಮತ್ತು  ಲೀಲಾ SSLC ತನಕ ಸಹಪಾಠಿಗಳು. ಆದರೆ SSLC  ನಂತರ ಲೀಲಾ ವಾಣಿಜ್ಯ ವಿಭಾಗ ಆಯ್ಕೆ ಮಾಡಿಕೊಂಡರೆ ಶೈಲಾ ವಿಜ್ಞಾನವನ್ನು ಆಯ್ಕೆ ಮಾಡಿಕೊಂಡಳು.

ಲೀಲಾ ಬಡ ಹುಡುಗಿ. ಅದೇ ಕಾಲೇಜ್ ನಲ್ಲಿ PUC  ಮುಗಿಸಿ, ಅಲ್ಲಿಯೇ ಬಿಕಾಂ ಮುಗಿಸಿ, ತನ್ನ ೨೩ ನೇ ವಯಸ್ಸಿನಲ್ಲಿ ಬಿಸಿನೆಸ್ ಒಂದರಲ್ಲಿ ಕೆಲಸ ಮಾಡುತ್ತ ಇದ್ದ ಹುಡುಗನನ್ನು ತನ್ನ ತಂದೆ ತಾಯಿಗಳ ಆಶಿರ್ವಾದದಿಂದ ಕೈ ಹಿಡುದು, ತನ್ನ ೨೬ ನೇ ವಯಸ್ಸಿನಲ್ಲಿ ಕೀರ್ತಿಗೊಬ್ಬ ಮಗ, ಅರತಿಗೊಬ್ಬಳು ಮಗಳನ್ನು ಪಡೆದು ಹಳ್ಳಿಯು ಅಲ್ಲ, ನಗರವು ಅಲ್ಲದ ಪ್ರದೇಶದಲ್ಲಿ ಜೀವನ ಮಾಡುತ್ತಾ ಇದ್ದಾಳೆ.

ಶೈಲಾ ಬ್ಯಾಂಕ್ ಒಂದರಲ್ಲಿ ಕೆಲಸ ಮಾಡುವ ಗುಮಾಸ್ತೆಯ ಮಗಳು. ಅಪ್ಪನ ಬಗ್ಗೆ ನನಗೆ ಗೊತ್ತಿಲ್ಲ. PUC ಯಲ್ಲಿ ವಿಜ್ಞಾನ ಓದಿ, ೬೫ ರಷ್ಟು ಅಂಕ ಪಡೆದು, ಆ ಕೆಟಗರಿ, ಈ ಕನ್ನಡ ಕೃಪಾಂಕ ಇತ್ಯಾದಿ  ಆಧಾರದ ಮೇಲೆ  ಬೆಂಗಳೂರಿನ ಇಂಜಿನಿಯರಿಂಗ್ ಕಾಲೇಜ್ ಒಂದರಲಿ ಸೀಟ್ ಪಡೆದು, ನಾಲ್ಕು ವರ್ಷ ಇಂಜಿನಿಯರಿಂಗ್ ಮುಗಿಸಿದಳು. ಇಂಜಿನಿಯರಿಂಗ್ ಕೂಡ  ಬಿಕಾಂ ಹಾಗೆ ಒಂದು ಡಿಗ್ರಿ ಆದರೂ ವೃತ್ತಿಪರತೆ ಇದರಲ್ಲಿ ಇರುವುದರಿಂದಲೂ, ಸಾಫ್ಟ್ವೇರ್ ಎಂಬ ಮೋಹ ಜನ ಮಾನಸದಲ್ಲಿರುವುದರಿಂದಲೂ ಇಂಜಿನಿಯರಿಂಗ್ ಅಂದರೆ ಕಲಿತವರು ಎಂಬ ಭಾವ ಜನ ತೋರಿಸುತ್ತಾರೆ. ಏನೇ ಇರಲಿ.

ದುರದೃಷ್ಟವೆಂದರೆ, ಶೈಲಾ ಓದಿ ಹೊರ ಬರುವ ಹೊತ್ತಿಗೆ, ಸಾಫ್ಟ್ವೇರ್ ಲೋಕದಲ್ಲಿ ಎಲ್ಲಿಲ್ಲದ ಅರ್ಥಿಕ ಸಂಕಟ(ರಿಸೆಶನ್). ಅವಳು ಸಾಮಾನ್ಯ ಹುಡುಗಿ. ಹೇಳಿಕೊಳ್ಳುವಂತ ಪರ್ಸಂಟೇಜ್ ಕೂಡ ಅವಳದಲ್ಲ. ಕೆಲವು ಸಹಪಾಟಿಗಳು TCS , ಇನ್ಫೋಸಿಸ್ , accenture  ಮೊದಲಾದ ಕಂಪನಿಗಳಿಗೆ ಕ್ಯಾಂಪಸ್ ನಲ್ಲೆ ಸೇರಿದರು.ಆದರೆ ಅವಳಿಗೆ ಸಾಧ್ಯವಾಗಲಿಲ್ಲ. ನಂತರ ಅವಳು ಪ್ರಯತ್ನ ಮಾಡಿ, ಮೂರೂ ತಿಂಗಳು ತಿರುಗಾಡಿ ಒಂದು ಸಣ್ಣ ಸಾಫ್ಟ್ವೇರ್ ಕಂಪನಿಯಲ್ಲಿ ಡೆವೆಲಪರ್ ಆಗಿ ೮೦೦೦/- ಗೆ ಸೇರಿಕೊಂಡಳು.

ಬೆಂಗಳೂರಿಗೆ ಬಂದ ಅವಳು ಮನಸ್ಸು ಜಾಗತಿಕ ಬದಲಾವಣೆಗಳಿಗೆ ಸ್ಪಂದಿಸತೊಡಗಿತು. ಅವಳ ಗೆಳತಿಯರು TCS , ಇನ್ಫೋಸಿಸ್ ದಂತಹ  ಕಂಪೆನಿಗಳಿಂದ ಜರ್ಮನಿ, ಸಿಂಗಪುರ್ ಕಡೆ ಹೋದ ಫೇಸ್ಬುಕ್ ಫೋಟೋ ನೋಡಿ ತನಗೂ ಹೋಗಬೇಕು ಅನ್ನುವ ಆಕಾಂಕ್ಷೆ. ಆದರೆ ಬೆಂಗಳೂರಿನಲ್ಲಿ ಹುಟ್ಟಿಕೊಂಡಿರುವ ಸಣ್ಣದಾದ ಅವಳ ಕಂಪನಿಯಲ್ಲಿ ಅಂತ ಅವಕಾಶಗಳೇನು ಇರಲಿಲ್ಲ. ಅವಳಿಗೆ ಬಹಳ ಬೇಸರವಾಗಿತ್ತು. ಆದರೆ, ಅವಳಿಗೆ ನಿಜವಾದ ಆತಂಕವಾದುದ್ದು-ಇಬ್ಬರು ಅವಳ  ಇಂಜಿನಿಯರಿಂಗ್  ಕ್ಲಾಸ್ ಮೇಟ್ ಗಳು ಅಮೆರಿಕದಲ್ಲಿರುವ ಹುಡುಗರನ್ನು ಮದುವೆಯಾಗಿ ಹೋಗುತ್ತಾರೆ ಎಂಬುದನ್ನು ಕೇಳಿ ತಿಳಿದಾಗ.  ಸಹಜವಾಗಿ ಹಳ್ಳಿಯವರಿಗೆ ಬೆಂಗಳೂರು ಹುಡುಗರು, ಬೆಂಗಳೂರಿನವರಿಗೆ ಅಮೆರಿಕಯ ಹುಡುಗರು ಅಂದರೆ ಒಂದು ರೀತಿಯ  ಸಮಾಧಾನ.

ಹೀಗಿರುವಾಗ ಶೈಲಾ ತಾನು ಅಮೆರಿಕೆಯಲ್ಲಿರುವ ಹುಡುಗನನ್ನೇ ಮದುವೆಯಾಗಬೇಕು ಎಂದು ಬಯಸಿದಳು. ತನಗೆ ಹಾಗೆ ಹೋಗಲು ಸಾಧ್ಯವಾಗಿಲ್ಲ, ಅಮೆರಿಕೆಯ ಹುಡುಗ ಸಿಕ್ಕಿದರೆ ಸಾಕು ಎಂದು  ದೇವರ ಮೊರೆ ಹೋದಳು. ಅವಳಿಗೆ ಬೆಂಗಳೂರಿನ ಸಣ್ಣ ನೌಕರಿ ಯಾವ ಖರ್ಚಿಗೂ ಸಾಲುತ್ತಿರಲಿಲ್ಲ . ಆದರೆ ಒಂದೊಮ್ಮೆ ಜಾಬ್ ಬಿಟ್ಟರೆ ಅಮೆರಿಕೆಯ ಹುಡುಗ ಅವಳ ಹಳ್ಳಿಗೆ ಬಂದು ನೋಡಲಾರ ಅನ್ನುವ ಭಯ ಅವಳಿಗಿತ್ತು. ಹೀಗಾಗಿ ಗೆಳೆಯರ ಮಧ್ಯೆ ಅಂತು ಇಂತೂ ಜೀವನ ದೂಡುತ್ತಲೇ  ಇದ್ದಳು.

ವಯಸ್ಸು ಅನ್ನುದೆ ಹಾಗೆ... ಪ್ರತಿಕ್ಷಣ ೨೧ ಕಳೆಯಿತು; ೨೨ ಕಳೆಯಿತು.... ೨೪ ಕಳೆಯಿತು ....೨೬ ಕಳೆಯಿತು..!  ಬೇಡ...ಯಾವ ಹಳ್ಳಿಯ ಹುಡುಗ ಬೇಡ..!... ಬೆಂಗಳೂರಿನ ಹುಡುಗ ಬೇಡ...!. ಈ ಬದುಕಿನ ಸಾಧನೆ ಅಂತಿದ್ದರೆ ಅದು ಅಮೆರಿಕೆಯ ಹುಡುಗನನ್ನು ಪಡೆಯುವುದು. ಮಗಳ ಮದುಯೇ ಆತಂಕ ಅಮ್ಮನಿಗೆ ಎಷ್ಟಾದರೂ ದುಖದ ವಿಷಯ. ಇವಳಿಗೆ ಇದಾವುದು ಅರ್ಥವೇ ಆಗುತ್ತಿಲ್ಲ.

ಕೊನಗೆ ೨೭..!  ಅದೊಂದು ದಿನ, ಅಣ್ಣ ಶೈಲಾಳಿಗೆ ಹೇಳಿದ, " ನೋಡಮ್ಮ ನಿಂಗೆ ೨೭ ವರ್ಷ. ನೀನು ಮದುವೆಯಾಗದೆ ನಮ್ಮನೆಲ್ಲ ಸತಾಯಿಸ್ತ ಇದ್ದೀಯ? ನಿನಗೆ ಒಳ್ಳೆಯ ಹುಡುಗರು ಬಂದರು ....ಅಮೇರಿಕ ....ಅಮೇರಿಕ ಅಂತ ಕೂಗ್ತಾ ಇರ್ತಿಯ... ನೀನು ಏನು ಮಾಡ್ತಿಯಾ ಗೂತ್ತಿಲ್ಲ... ಆರು ತಿಂಗಳು ಅವಕಾಶ ಅಷ್ಟೇ" ಎಂದು ಬಹಳ ನೋವಿನಿಂದ...೨೫ ಯುವಕರನ್ನು ಇವಳ ಮುಂದೆ ತಂದು ನಿಲ್ಲಿಸಿದ ಅಣ್ಣ ಹೇಳಿದ್ದ. ಇವಳಿಗೆ ಮನಸ್ಸು ಮುರಿದಿತ್ತು. ಜೋಬನ್ನು ಬಿಟ್ಟು ಬೆಂಗಳೂರಿಂದ ಊರಿಗೆ ಮರುಳಿದಳು. ಮದುವೆಯ ಚಿಂತೆಯಲ್ಲಿ ಮನೆಯಲ್ಲಿ ಎಲ್ಲರು ದೂರುವವರೇ...! ಹಳೆಯ ಗೆಳತಿ ಲೀಲಾ ಮಾತಾಡಿಸೋಣ ಎಂದು ಅವಳ ಊರಿಗೆ ಹೋಗುತ್ತಾಳೆ...! ಎರಡು ಮಕ್ಕಳ ತಾಯಿ ಲೀಲಾ, ಒಳ್ಳೆಯ ಗಂಡ..ತುಂಬಿದ ಮನೆಯ ಕತೆ ಹೇಳಿದಾಗ ಮದುವೆಯ ಕಲ್ಪನೆಯಲ್ಲಿ ಅವಳಿಗೆ ಜ್ಞಾನೋದಯವಾಗುತ್ತದೆ.

ಮೂರೂ ತಿಂಗಳೊಳಗೆ, ಲೀಲಾಳ   ಗಂಡನ  ಸಂಬಂಧದಲ್ಲಿ ಪೋಲಿಸ್ ಒಬ್ಬನನ್ನು ಮದುವೆಯಾಗಿ, ಕೇರಳಕ್ಕೆ ಹನಿಮೂನ್ ಗೆ ಹೋಗಿದ್ದಾಳೆ ನಮ್ಮ ಶೈಲಾ..!

ಯಾಕೆ ಹೇಳಿದೆ ಅಂದರೆ, ಇದೆ ಶೈಲಾ ನಾನು ಒಂದು ವರ್ಷದ ಹಿಂದೆ ಮಾತಾಡುವಾಗ, ನೀವು ಅಮೇರಿಕಾದಲ್ಲಿ ಸೆಟ್ಲ್ ಆಗ್ತೀರಾ  ಅಂತ ಆರು ಭಾರಿ ಕೇಳಿ, ನಾನು ಉತ್ತರ ಕೊಡದೆ ಇದ್ದಾಗ whatsapp ನಲ್ಲಿ ನನ್ನ ಬ್ಲಾಕ್ ಮಾಡಿ ಹೋಗಿದ್ದಳು.

No comments:

Post a Comment