Sunday, October 28, 2012

ಮದುವೆ -ಎರಡು ಕುಟುಂಬಗಳ ನಡುವೆಯೋ, ಜಾತಿಗಳ ನಡುವೆಯೋ ?

ಎಲ್ಲರು ನನ್ನಂತೆ ಅದೃಷ್ಟರಲ್ಲ. ಆ ಹಳ್ಳಿಯಿಂದ ಸಾಗುತ್ತಾ...ಓದುತ್ತ...ಸಾಗುತ್ತಾ... ಓದುತ್ತ ಇಂದು ಏರ್ ಕಂಡೀಶನ್ ರೂಂ ಗೆ ಬಂದು ಸೇರಿದೆ. ಬಹುಶ ಅದು ದೊಡ್ಡ ಸಾಧನೆಯೇ? ಗೊತ್ತಿಲ್ಲ. ಆದರೆ, ಹಳ್ಳಿಯಿಂದ ಇಲ್ಲಿಯ ತನಕ ನನ್ನ ಬದುಕಿನಲ್ಲಿ ನಡೆದ ಬದಲಾವಣೆ ಇಷ್ಟೇ. ಆದರೆ, ' ಸಾಗುತ್ತಾ...ಓದುತ್ತ...ಸಾಗುತ್ತಾ... ಓದುತ್ತ' ನಡೆದಿರುವ ಹಂತದಲ್ಲಿ ನನ್ನ ಜೊತೆಯಲ್ಲಿ ಎಷ್ಟೋ ಮಂದಿ ಕಳೆದು ಹೋಗಿದ್ದಾರೆ; ಎಷ್ಟೋ ಮಂದಿ ಅಲ್ಲಲ್ಲಿ ಸೇರಿ ಕೊಂಡಿದ್ದಾರೆ. ಸಾಮಾನ್ಯವಾಗಿ ನಮಗೆ ನೆನಪಿರುವುದು ಕೊನೆಯಲ್ಲಿ ಜೊತೆ ಇದ್ದವರು ಅಥವಾ  ಪ್ರೈಮರಿ ಸ್ಕೂಲ್ ನಲ್ಲಿ ಭೇಟಿಯಾದವರು. ಉಳಿದವರ ಬಗ್ಗೆ ಗೊತ್ತಿಲ್ಲ ಅಂತ ಅಲ್ಲ; ಆದರೆ ಹೇಳಿ ಕೊಳ್ಳುವಂತ ಅಟ್ಯಾಚ್ಮೆಂಟ್ ಇಲ್ಲ.

ಹೀಗೆ ಬಂದ ಜೀವನದ ಒಂದು ಘಟದಲ್ಲಿ,  ಸಂಜಯ  ೧೦೦ ಕ್ಕೆ ೩೫ ಮಾರ್ಕ್ಸ್ ಪಡೆಯಲಾಗದೆ  ಪ್ರೈಮರಿ- ಹೈ ಸ್ಕೂಲ್ ಮಧ್ಯೆ ಯಿದ್ದ ಬ್ರಿಜ್ ಕೆಳೆಗೆ ಬಿದ್ದು ಹೋಗಿದ್ದ. ಶಾಲೆ, ಶಿಕ್ಷಣ ಅನ್ನುವ ವಿಷಯದಿಂದ ನಿರ್ಗಮಿಸಿದ್ದ ನಾದರು, ವ್ಯವಹಾರಿಕ ಜ್ಞಾನ ಅವನಿಗೆ ಚೆನ್ನಾಗಿಯೇ ಇತ್ತು. ಅಪ್ಪನ ಅಡಿಕೆ ತೋಟ ಕಡಿಮೆಯೇನು ಇರಲಿಲ್ಲ. ಆ ವಿಚಾರದಲ್ಲಿ ಹೇಳುವುದಾದರೆ ಅವನು ನನಗಿಂತ ೯ ವರ್ಷಗಳಷ್ಟು ಮೊದಲು ಗಳಿಕೆಯಲ್ಲಿ ತೊಡಗಿದ್ದ. ತುಂಬಾ ಹುರುಪಿನ ವಿನಯ ಹುಡುಗ ಸಂಜಯ ಶೈಕ್ಷಣಿಕ  ಬದುಕಿಂದ ದೂರ ಸರಿದರು ನಾನು ಊರಿಗೆ ಹೋಗುವಾಗ/ಬರುವಾಗ ದಾರಿಯಲ್ಲಿ/ಬಸ್ಸಲ್ಲಿ ಅವಾಗವಾಗ ಸಿಗುತಿದ್ದ . ನಮ್ಮಿಬ್ಬರ ನಡುವೆ ಅಂತ ಹೇಳಿ ಕೊಳ್ಳುವ ಗೆಳೆತನವು ಅಲ್ಲ ಹಾಗಂತ ಮಾತನಾಡಿಸದೆ, ಮಾತನಾಡದೆ  ಇರುವಂತ ಸಂಬಂಧವು ಅಲ್ಲ.

ಮೊನ್ನೆ ನವರಾತ್ರಿ ಹಬ್ಬಕ್ಕಾಗಿ ನಾನು ಊರಿಗೆ ಹೋಗುತಿದ್ದಾಗ  ಭೇಟಿಯಾಗಿದ್ದ. ಅವನು ನವರಾತ್ರಿ ಉತ್ಸವಕ್ಕಾಗಿ ಸಾಮಾನು ಖರೀದಿಸಲು ಮಾರ್ಕೆಟ್ ಗೆ ಬಂದಿದ್ದ. ಆದರೆ ಅವನ ಬಾಯಿಯಲ್ಲಿ 'ಉತ್ಸವ'ದ ಕುರಿತಾದ ಮಾತುಗಳಿದ್ದವು ಹೊರತು ಮುಖದಲ್ಲಿ 'ಉತ್ಸಾಹ' ಮಾತ್ರ ಇರಲಿಲ್ಲ. ನಾನು ಸ್ವಲ್ಪ, ಆಶ್ಚರ್ಯಚಕಿತನಾಗಿ ನೋಡಿ, ಹಣ ಏನಾದ್ರು ಸಮಸ್ಯೆ ಇರಬಹುದೇ ಅಂದು ಕೊಂಡು, 'ಹೇಯ್, ಸಂಜಯ ದುಡ್ಡು ಏನಾದ್ರು ಬೇಕಾ ? ಏನೋ ಟೆನ್ಶನ್ ಮಾಡಿಕೊಂಡಿದ್ದಿಯಲ್ಲ..?' . ಆತನ ಉತ್ತರವು ಅಷ್ಟೇ ಸರಾಗ ವಾಗಿ, ' ಇಲ್ಲಯ್ಯ, ಹಬ್ಬ ಹೇಗೆ ನಡಿಬಹುದು ಅಂತ ವಿಚಾರ ಮಾಡ್ತಾ ಇದ್ದೆ.... ಇರಲಿ, ನೀನು ಇಲ್ಲೇ ಇರ್ತಿಯಲ್ಲ, ನಾನು ಎರಡು ಪ್ಯಾಕ್ ಹಾಲು ತರ್ತೇನೆ' ಎಂದು ಹೇಳಿ ನನಗೆ ಅವನ ಸಾಮಾನು ಚೀಲ ಕಾಯಲು ಹೇಳಿ  ಹಾಲು ತರಲು ಸಮೀಪದ ಅಂಗಡಿಗೆ ಹೋದ.

ಅವನೊಬ್ಬ ಹಳ್ಳಿಯ ಹುಡುಗ. ಹಳ್ಳಿಗಳಲ್ಲಿ ಕುಡಿ ಮೀಸೆ ಕಂಡರೆ ಸಾಕು ಮದುವೆ ನಡೆಯಲೇ ಬೇಕು. ಹೀಗಿರುವಾಗ ನಾನು engeering ನ ಮೂರನೇ ವರ್ಷದಲ್ಲಿದ್ದಗಲೇ ಅವನ ಮದುವೆ ನಡೆದಿತ್ತು. ಆದರೆ ಅವನ ಮದುವೆ ಸ್ವಲ್ಪ ವಿಚಿತ್ರ. ಅವನು ಇಂದಿನ ಜಾತಿ ಪದ್ಧತಿಯಲ್ಲಿ ಉತ್ತಮ ಜಾತಿಗೆ ಸೇರಿದವನು.ಅವನು ತನ್ನ ಜಾತಿ ಉತ್ತಮತೆಯನ್ನು ನನ್ನಲ್ಲಿ ಯಾವತ್ತೂ ಹೇಳಿಕೊಂಡಿರದಿದ್ದರೂ ಅವನ ಪುರ್ವಾಪರಗಳು ನನಗೆ ಗೊತ್ತಿದ್ದವು. ಹೀಗಾಗಿ ನಾವೆಲ್ಲ ಆ ಪ್ರದೇಶದ ಚೌಕಟ್ಟಿನಲ್ಲಿ ನಡೆಯ ಬೇಕಾದ ಸಹಜವಾಗಿ ಪಾಲಿಸಿಕೊಂಡು ಬಂದ ನಿಯಮಗಳು- ಮಡಿ ಮೈಲಿಗೆ ಪಾಲಿಸಿ ಕೊಂಡೆ ಬಂದಿದ್ದೆವು. ದೂರದೃಷ್ಟ ವಶಾತ್ ಅವನಿಗೆ ಅವನ ಜಾತಿಯಲ್ಲಿ ಹುಡುಗಿಯೇ ಸಿಗಲಿಲ್ಲ. ಸೆಕ್ಸ್ ರೇಶಿಯೋ ಉಲ್ಟಾ ಹೊಡೆದಿರುವಾಗ ಯಾರಿಗೆ ತಾನೇ ಹೆಣ್ಣು? ಓದದೇ ಇರುವ ಇವನಿಗಂತೂ ಅಸಾಧ್ಯವೇ ಆಗಿ ಹೋಗಿತ್ತು. ಅಂತು- ಇಂತೂ  ತಂದೆ-ತಾಯಿಗೆ ಒಪ್ಪಿಸಿ ಬೇರೆ ಜಾತಿಯ ಹೆಣ್ಣು ಆದರು  ಸರಿ ಎಂದು,  ಕೆಳವರ್ಗದ (ಹಾಗೆ ಹೇಳಲು ಮನಸಿಲ್ಲ. ಆದರೆ ಕತೆ? ) ಹೆಣ್ಣು ಮದುವೆ ಯಾದ. ಇಂತ ಮದುವೆ ಸಮಾಜದಲ್ಲಿ ಉತ್ಪ್ರೇಕ್ಷೆಗೆ ಒಳಗಾಗುವುದರಿಂದ ಅವನು ಬೇರೆಳನಿಕೆಯಷ್ಟು ಬಂಧು-ಬಾಂಧವರನ್ನು ಕರೆಸಿ ಸಪ್ತಪದಿ ತುಳಿದಿದ್ದ. ಅವನ ಮದುವೆ ನಡೆದಿದ್ದು ನನಗೂ ಗೊತ್ತಿರಲಿಲ್ಲ. ಅಂತರ್ಜಾತೀಯ ವಿವಾಹವೊಂದು ನಡೆದಿದೆ ಎಂದು ಊರಿಗೆ ಹೋದಾಗ ನನಗೆ ಯಾರೋ ಹೇಳಿದ್ದರು.  ಅವನ ತಂದೆ-ತಾಯಿ ಮದುವೆ ಸಮಸ್ಯೆ ಅರಿತಿದ್ದರಿಂದ ಮಗನ ಬಗ್ಗೆ, ಸೊಸೆಯ ಬಗ್ಗೆ ಗೌರವನ್ನು ಹೊಂದಿ ಒಳ್ಳೆಯ ಸಂಸಾರ ಸಾಗಿಸುತ್ತಿದರು. ಆದರೆ  ಅವನ ಬದುಕು ಹಬ್ಬ-ಹರಿದಿನಗಳಲ್ಲಿ  ನಾಯಿಗೂ ಬೇಡ ಅನಿಸುವ ಕತೆ ಅವನ ಬಾಯಿಂದಲೇ ಕೇಳಿ.

ಬಸ್ಸಿನಲ್ಲಿ ಕುಳಿತ ಕೂಡಲೇ(ನಾವಿಬ್ಬರು ಒಂದೇ ಕಡೆ ಹೋಗುವವರು)  ಏನು ಕತೆ ಎಂದು ವಿಚಾರಿಸಿದಾಗ ಅವನು ಹೇಳಿದ ಕತೆ ಹೀಗಿತ್ತು: " ನಾನು ಮದುವೆ ಯಾದುದ್ದು  ಗೊತಲ್ಲ?, ಬೇರೆ ಜಾತಿ ಹುಡುಗಿ..? ಸಂಸಾರ ಚೆನ್ನಾಗಿದೆ ..." ಹೀಗೆ ಮುಂದುವರಿಯುವಾಗಲೇ ನನಗೆ ಏನು ಗೊತ್ತಿಲ್ಲ ಅನ್ನುವ ರೀತಿಯಲ್ಲಿ " ಮಗಾ, ಹಳ್ಳಿಯಲ್ಲಿದ್ದು ಲವ್  ಮಾಡಿದೆನೋ? ಈಗ ಅಪ್ಪ- ಅಮ್ಮ ?". ಅವನು ಮತ್ತೆ,  ಹುಡುಗಿಯರು ಜಾತಿಯಲ್ಲಿ ಸಿಕ್ತಾ ಇಲ್ಲ.....ಅಪ್ಪ ಅಮ್ಮ ಒಪ್ಪಿದರು ...ಯಾರಿಗೂ ಕರೆಯಲಿಲ್ಲ ...ಹೀಗೆ ನನಗೆ ಗೊತ್ತಿರುವ ವಿಷಯಗಳನ್ನೂ ಹೇಳಿ "....ಹಬ್ಬಗಿಬ್ಬ ಬಂದರೆ ಬಹಳ ಜನ ಅಕ್ಕಂದಿರು, ಸಂಬಂಧಿಕರು ಬರುತ್ತಾರೆ... ಹೇಳಿ ಕೇಳಿ ನಾವೆಲ್ಲ ದೇವರ ಕೆಲಸಗಳಲ್ಲಿ ಇರುವುದೇ ಹೆಚ್ಚು ನೋಡು.....ಆದರೆ, ನನ್ನ ಹೆಂಡತಿ ಕೆಳವರ್ಗದಳು ಅನ್ನುವ ಕಾರಣಕ್ಕಾಗಿ ಕುಟುಂಬದ ಮುಖ್ಯ ಪೂಜೆ-ಭೋಜನಾದಿಗಳಿಗೆ ನಮಗೆ ಪ್ರವೇಶ ಇರುವುದಿಲ್ಲ. ನಾನು ಮದುವೆ ಆದಮೇಲೆ, ಬೇರೆ ಯಾರಾದರು ಇದ್ದರೆ ಮನೆಯ ದೇವರ ಕೋಣೆ ಪ್ರವೇಶ ಮಾಡುವುದೇ ಇಲ್ಲ. ಹೀಗಾಗಿ ನಮ್ಮ ಮನೆಯಲ್ಲಿ ನಾನೇ ಬಾಹ್ಯ ನಾಗಿ ಕಾಣುವ ದಿನ ಬಂತಲ್ಲ ಅಂತ ಸ್ವಲ್ಪ ದುಃಖ ಆಗ್ತಾ ಇದೆ " ಹೇಳುತ್ತಲೇ ಓಂದು ಕಣ್ಣಿನ ಹನಿಯನ್ನು ವರೆಸಿ ಕೈ ಬೆರಳನ್ನು ಬಸ್ಸಿನ ಕನ್ನಡಿಗೆ ಹೊರೆಸಿದ. ನಾನು, ಇಂತದೊಂದು ದುಃಖಿತ ವಿಷಯವೇ? ಆಶ್ಚರ್ಯ ಪಟ್ಟು, " ಅವರು ಹಾಗೆ ಮಾಡಿದ್ರೆ...ನೀನು ಯಾಕೆ ತಲೆ ಕೆಡಿಸಿ ಕೊಳ್ತಿಯಾ?  ದೇವರಿಗೆ ಎಲ್ಲ ತಿಳಿಯುತ್ತೆ" ಎಂದು ಸಮಾಧಾನ ಪಡಿಸಲು ಹೊರಟಾಗ  ಮತ್ತೆ ಮುಂದೆ ವರಿಸಿದ ," ನನಗೆ ಏನು ಅಂತ ಸಮಸ್ಯೆ ಇಲ್ಲ... ಆದರೆ, ಅವಳು(ಹೆಂಡತಿ) ಬಹಳ ಮನಸ್ಸಿಗೆ ಹಚ್ಚಿಕೊಳ್ಳುತ್ತಾಳೆ... ಅವಳು ತಿಂಗಳು ಇದ್ದಾಳೆ (ಹಳ್ಳಿ ಭಾಷೆ)...ಹೊಟ್ಟೆಯಲ್ಲಿನ ಮಗುವಿಗೂ  ತೊಂದರೆ ಅಲ್ವಾ? ಇವತ್ತು ಹೋಗಿ ಹೇಗೆ ಸಮಾಧಾನ ಮಾಡ್ಲಿ ಅಂತ ಯೋಚಿಸ್ತಾ ಇದ್ದೇನೆ". ನಾನು ಬಹಳ ಹೊತ್ತು ಮೌನ ವಹಿಸಿದೆ.
ಕೊನೆಗೆ ಅವನಿಗೆ ಹೇಳಿ ಕಳಿಸಿದ್ದು ಹೀಗೆ: " ನೋಡು, ಯಾರು ಮೇಲು ಕೀಳು ಅಂತ ಇರಲ್ಲ. ಇವೆಲ್ಲ ಜನ ಮಾಡಿದ ಪದ್ಧತಿ. ಉಡುಪಿಯಲ್ಲಿನ ಕನಕನ ಕಿಂಡಿಯ ಕತೆ ಗೊತ್ತಲ್ಲ...!?. ಕೆಳವರ್ಗದವನಾಗಿದ್ದ ಕನಕದಾಸರಿಗೆ ಶ್ರೀ ಕೃಷ್ಣಾ ದರ್ಶನ ಭಾಗ್ಯ ನೀಡಿಲ್ಲವೇ? " . ಆತ ಒಮ್ಮೇ ಸಂತೋಷದ ನಗೆ ಚೆಲ್ಲಿದ್ದ. ಅವನು ನವರಾತ್ರಿ ಹೇಗೆ ಕಳೆದನು ಗೊತ್ತಿಲ್ಲ. ಆದರೆ ನಾನು ಮಾತ್ರ 'ನವರಾತ್ರಿ'  ಕಳೆದೂ ನಂತರದ 'ರಾತ್ರಿ'ಗಳಲ್ಲೂ ಅವನ್ನ ದುಃಖದ ಕುರಿತಾಗಿ ವಿಮರ್ಶೆ ಮಾಡುತ್ತಲಿದ್ದೇನೆ. ದೇವರೇ ಗತಿ.
'ಮದುವೆ ಕೇವಲ ಗಂಡು ಹೆಣ್ಣಿನ ನಡುವೆ ಅಲ್ಲ; ಎರಡು ಕುಟುಂಬಗಳ ನಡುವೆ ' ಅನ್ನುವ ನಮ್ಮವರು ಯಾವಾಗ '...ಎರಡು ಜಾತಿಗಳ ನಡುವೆ' ಎಂಬುದನ್ನೂ ಸೇರಿಸುತ್ತರೋ ಗೊತ್ತಿಲ್ಲ? ಆದರೆ ಅದು ಇಂದಿನ ಅನಿವಾರ್ಯತೆ ಅಂತು ಹೌದು.

No comments:

Post a Comment