Wednesday, December 25, 2013

ಅವನ್ಯಾಕೆ ಬದಲಾದ?

ಈ ಪ್ರಶ್ನೆ ನೀವು ಬಹಳ ಸಾರಿ ಕೇಳಿಯೇ ಇರುತ್ತೀರಿ. ಕೆಲವೊಮ್ಮೆ ನಿಮ್ಮ ಗೆಳೆಯ-ಗಳತಿ  ಅಥವಾ ಸಹಪಾಟಿ ನಿಮ್ಮ ಜೊತೆಯಲ್ಲಿದ್ದಾಗ ಚೆನ್ನಾಗಿಯೇ ಇದ್ದು ಯಾವುದೋ ಒಂದು ದಿನ ಅವನು/ಅವಳಲೊಂದು ಕನಿಷ್ಠ ಮಟ್ಟದ ಕೆಲಸದಲ್ಲಿ ನರಳಿದಾಗ ನೀವು ಹಿಗಿಯೇ ಹೇಳುತ್ತಿರಿ. "ಕಾಲೇಜ್ ನಲ್ಲಿ ಇದ್ದಾಗ ಅವನ ಫಿಲಾಸಫಿ ಚೆನ್ನಾಗಿಯೇ ಇತ್ತು..ಅವನು ಒಳ್ಳೆಯವನು ... ಹೀಗೆಲ್ಲಾ ಮಾಡಲು ಸಾಧ್ಯನೇ ಇಲ್ಲ ಅನ್ನುತ್ತಾ.." ನಿಮ್ಮ ಗೆಳೆಯನ ಕುರಿತಾಗಿ ಯಾರೋ ಕೀಳಾಗಿ ಪ್ರಶ್ನಿಸಿದರೆ  ಇದೆ ಉತ್ತರ.

ಹಾಗಿದ್ದರೆ ಮನುಷ್ಯ ಯಾವತ್ತು ಬದಲಾಗುವುದಿಲ್ಲವೇ? ಪ್ರತಿಕ್ಷಣದ ಅನುಭವು ಮನುಷ್ಯನ ಮನಸ್ಸಿನ ಮೇಲೆ, ಬದುಕುವ ರೀತಿಯ ಮೇಲೆ ಪ್ರಭಾವ ಬಿರಲಾರದೆ? ಅದಕ್ಕಾಗಿಯೆ ಅಲ್ಲವೇ ಮನೆಯಲ್ಲಿದ್ದಾಗ ಸಸ್ಯಹಾರಿಗಲಾದವರು  ಗೆಳೆಯರ ಮಧ್ಯೆ ಸಿಲುಕಿ  ಮಾಂಸಹಾರಿ ಕೂಡ ಆಗಿ ಬಿಡುತ್ತಾರೆ. ಮನೆಯಲ್ಲಿ ಅಪ್ಪ-ಅಮ್ಮ ಹಾಗೆ ಮಾಡಲಾರ ನಮ್ಮ ಮಗ ಅನ್ನುತ್ತಲೇ ಇರುತ್ತಾರೆ. ಆದರೆ ಮಗ ಬದಲಾವಣೆಗೆ ಗುರಿಯಾಗಿ, 'ಸ್ವಾಹ' ಅನ್ನುತ್ತಾನೆ. ಯಾವತ್ತು ನಾನು ಸ್ನಾನ ಮಾಡದೇ ತಿನ್ನಲಾರೆ ಅನ್ನುವರು ಕೂಡ, ಇಲ್ಲೊಂದು ಕಡೆ ಗೆಳೆಯರ ಮಧ್ಯದಲ್ಲಿ, "ಲೇ ಮಗನೆ, ತಿನ್ನಲೇ ನಾವೇನು ಸ್ನಾನ ಮಾಡಿದ್ದೇವಾ ?" ಎಂದು ಒತ್ತಡ ಹೇರಿದಾಗ, ಆಹಾರವನ್ನು ಮೊದಲು ಪ್ರಯಸದಾಯಕವಾಗಿ ಗಂಟಲೋಳಗಿರಿಸಿದ ಮಹನಿಯ ವರ್ಷವೊಂದು ಉರುಳಲು ಸ್ನಾನವೇ ಮರೆತು ತಿನ್ನಲು ಸಾಧ್ಯವಿದೆ. ಅಂದರೆ, ಮನೆಯಲಿ ಕಲಿಸಿದ ನೀತಿ, ಸಂಸ್ಕೃತಿ ಅಥವಾ ಬದುಕಿನ ಒಂದು ಫಿಲೋಸೋಪ್ಯ್ ಎಲ್ಲೊಂದೆಡೆ ಕಾಲ ಚಕ್ರದಲ್ಲಿ ಬದಲಾಗಲು ಸಾಧ್ಯವಿದೆ; ಆಗುತ್ತಲೇ ಇರುತ್ತದೆ.

ನಾನು ವರದಕ್ಷಿಣೆಯ ವಿರೋಧಿ. ಅದು ಸರಿಯಲ್ಲ ಎಂದು ಪ್ರಾಥಮಿಕ ಶಾಲೆಯಲ್ಲಿ ನನ್ನ ಗುರುಗಳು ಬರೆಸಿದ ನಿಬಂಧಗಳು  ಅಂತಹ ನಿಲುವು ನನ್ನ ಮನಸ್ಸಿನಲ್ಲಿ ಅಚ್ಚಳಿಯದಂತೆ ಮೂಡಿಸಿತ್ತು. ನಾನು, ಅದೆಷ್ಟೋ ಬಾರಿ ಗೆಳೆಯರ ಮಧ್ಯದಲ್ಲಿ ಮದುವೆಯ ಕುರಿತಾಗಿ ಮಾತನಾಡುವಾಗ, ಅಥವಾ ಯಾವುದೊ ಮದುವೆಗೆ  ಹೋದಾಗ ಗುಡ್ಡೆ ಹಾಕಿರುವ ವರದಕ್ಷಿಣೆಯ ರಾಶಿ ವಸ್ತುಗಳು, ಅಥವಾ ಇನ್ನಾರದೋ ಮಾವ ಕಾರು ಕೊಟ್ಟ, ಬಂಗಾರ ಕೊಟ್ಟ ಅಂದಾಗ ಅದೆಲ್ಲ ಸರಿಯಲ್ಲ ಎಂದು ನನ್ನ ವಿರೋಧಿ ನೀತಿಯನ್ನು ತೋರಿಸಿದ್ದು ಮಾತ್ರ ಅಲ್ಲ, ನಾನೊಬ್ಬ ಸಾಚಾ ಎನ್ನುವುದನ್ನು ತೋರಿಸಿದ್ದೆ. ಇಲ್ಲಿಯ ವರೆಗೂ ನಾನು ಸಾಚಾ ನೇ ಆಗಿದ್ದೆ. ಆದರೆ ಇನ್ನು ಸಾಚಾ ತನ ಒಳ್ಳೆಯದಲ್ಲ, ಅಂತ ಘನತೆಯ ಹಿಂದೆ ಕಹಿಯಾದ ಬೇವಿನ ರಸವಿದೆಯೆಂದು ಅರಿಕೆಯಾಗಿದೆ.

ಮದುವೆಗಾಗಿ ಹುಡುಗಿ ಹುಡುಕುತ್ತಿದ್ದೇನೆ  ಅನ್ನುವ ವಿಚಾರ ನಿಮಗೆ ಪ್ರತ್ಯೇಕವಾಗಿ ಹೇಳಲೇ ಬೇಕೆಂದೆನು ಇಲ್ಲ. ಅದು ವಯಸ್ಸಿನ ಸಹಜ ನಿಯಮ ಹಾಗೂ ನೀವು ಕೂಡ ಇಂತ ಕೆಲಸ ಕೆಲವರು  ಮಾಡಿರುತ್ತೀರಿ; ಕೆಲವರು ಮಾಡುತ್ತಲು ಇರಬಹುದು; ಇನ್ನು ಕೆಲವರು ಮಾಡುವವರು ಇರಬಹುದು.

ಕೆಲವು ತಿಂಗಳ ಹಿಂದೆ ಮೊದಲ ಹುಡುಗಿ ನೋಡಲು ಹೋದಾಗ, ನೇರವಾಗಿ ಭಾವಿ ಮಾವ ತನ್ನ ಏಕೈಕ ಕನ್ಯಾ ಮಣಿಯನ್ನು  ನೀಡಲು ಕಾತರನಾಗಿ, ವರದಕ್ಷಿಣೆಯ ಕುರಿತಾಗಿ ಮೊದಲ ದಿನವೇ ಪ್ರಶ್ನಿಸಲ್ಪಟ್ಟೆ. ಯಕ್ಷಗಾನದ ವೀರ ಬಬ್ರುವಾಹನ ಹಾಗೆ ಎದೆತಟ್ಟಿ, " ಭಾವಿ ಮಾವ, ಉಟ್ಟ ಬಟ್ಟೆಯಲ್ಲಿ ನಿನ್ನ ಮಗಳನ್ನು ಕರೆದುಕೊಂಡು  ಹೋಗುತ್ತೇನೆ. ನನ್ನ ಮನೆಯಲ್ಲಿ ವರದಕ್ಷಿಣೆ ಸರಿಯೆಂದು ನಾವು ಯಾರು ಭಾವಿಸುವುದಿಲ್ಲ. ಅದಕ್ಕಾಗಿ ಆ ವಿಷಯಕ್ಕೆ ತಿಲಾಂಜಲಿ ಇಟ್ಟರೆ ಒಳ್ಳೇದು" ಎಂದು  ಹೇಳುವುದರ ಮೂಲಕ, ನನ್ನ ಗುರುಗಳನ್ನು ಒಮ್ಮೆ  ನೆನೆದು ಆ ಮನೆಯಿಂದ ಹೊರಬಂದೆ.

 ಆದರೆ, ಕೆಲವು ದಿನಗಳು ಕಳೆದ ಮೇಲೆ, ಈ ಮದುವೆಯ ಸಂಬಂಧದ ಏರ್ಪಡಿಸಿದ ಅವರ ಸಂಬಂಧಿ, " ನೀವು ಯಾಕೆ  ವರದಕ್ಷಿಣೆ ಬೇಡ ಅಂದಿದ್ದಿರಿ, ಅಂತಾ ಅವರು  ವಿಚಾರ ಮಾಡ್ತಾ ಇದ್ದಾರೆ, ಅವರ ಮನಸ್ಸಿನಲ್ಲಿ ಹುಡುಗ ಏನೋ ಸರಿಯಲ್ಲ ಅದಕ್ಕೆ ವರದಕ್ಷಿಣೆ ಬೇಡ ಅಂತ ಇದ್ದಾನೆ ಅಂತ, ಅವರು ನನ್ನ  ಜೊತೆ  ಒಮ್ಮೆ ಹೇಳಿದರು. ನೀವು ಈಗ, ನಿಮ್ಮ ತಂದೆ ತಾಯಿ ಮೂಲಕ ವರದಕ್ಷಿಣೆಗೆ ಬೇಡಿಕೆ ಇಟ್ಟರೆ, ಈ ಮದುವೆ ಮುಂದುವರಿಯಬಹುದು. ಇಲ್ಲ ಅಂದರೆ  ಅವರು ಸಂದೇಹ ಬಗೆಹರಿಸಿಕೊಂಡು ನಿಮಗೆ ಹುಡುಗಿ ಕೊಡ್ತಾರೆ ಅಂತ ಅನ್ಸ್ತಾ ಇಲ್ಲ...ನೀವು ಎನ್ಮಾಡ್ತಿರಾ?"
"ನಮಗೆ ಇಷ್ಟ ಇಲ್ಲ ಅಂತ ಹೇಳಿ" ಎಂದು ಸಂಬಂಧ ಕಡಿದುಕೊಂಡು  ಸುಮ್ಮನಾದೆ.

ಇನ್ನೊಂದು ಸಂಬಂಧ.... ಮನೆಗೆ ಕರೆದರು. ಮನೆಯ ಮಂದಿ ನೆರದಿದ್ದರು. " ಮತ್ತೆ ಏನು ಹೇಳ್ತಿರ ವೆಂಕಟ್, ನೋಡಿ ಇಷ್ಟು ದೂರ ಸಣ್ಣ ಸಣ್ಣ ವಿಷಯಕ್ಕೆ ಮತ್ತೆ ನಿಮ್ಮ ಕರೆಸುದು ಅಂದ್ರೆ ಕಷ್ಟ. ಅದಕ್ಕೆ ನೀವು ಬೇಸರ ಇಲ್ಲ ಅಂದರೆ, ನೀವು ಮದುವೆ ಬಗ್ಗೆ ಡೀಟೇಲ್ ಆಗಿ ಮಾತನಾಡಬಹುದು... ಅಂದರೆ  ವರದಕ್ಷಿಣೆ ಎಷ್ಟು ಬೇಕು? ನಿಮ್ಮ ಮನೆ ಕಡೆಯಿಂದ ಯಾರು ಮಾತನಾಡುತ್ತಾರೆ".  ನಾನು ಮತ್ತೆ ಹಳೆಯ ರಾಗದಲ್ಲಿ, " ಅಂಕಲ್ ನಮ್ಮ ಮನೆಯಿಂದ ತಂದೆ-ತಾಯಿ ಮಾತನಾಡ್ತಾರೆ. ಮನೆಗೆ ಹೋಗಿ ವಿಷಯ ಹೇಳಿದ ಮೇಲೆ ಎಲ್ಲವನ್ನು ಮಾತನಾಡೋಣ. ಆದರೆ ವರದಕ್ಷಿಣೆ ವಿಷಯದಲ್ಲಿ ನನ್ನ ನಿರ್ಧಾರವೇ ಅಂತಿಮ. ನನಗೆ  ವರದಕ್ಷಿಣೆ ಖಂಡಿತ ಬೇಡ. ಇದರಲ್ಲಿ ತಂದೆ-ತಾಯಿಗೆ ಕೇಳುವುದು ಏನು ಇಲ್ಲ" ಎಂದು ಹೇಳಿ, ಹುಡುಗಿಯೋನ್ನೊಮ್ಮೆ ಒರೆ ದೃಷ್ಟಿಯಿಂದ ನೋಡಿ ಮನೆಯಿಂದ ಹೊರಬಂದೆ.

 ಇನ್ನು ಮನೆಯನ್ನು ತಲುಪುವಾಗಲೇ, ನನ್ನ ಮೊಬೈಲ್ ಗೆ ಒಂದಿಷ್ಟು  sms ಗಳು ಬಂದವು. ಆ ಮಸೇಜ್  ಮಾಡಿದವರು ಮತ್ತಾರು ಅಲ್ಲ, ನಾನು ನೋಡಿ ಬಂದ ಹುಡುಗಿ. ತನ್ನ ಹೆಸರನ್ನು ಹೇಳಿ, ನಿಮ್ಮ ಜೊತೆ ಮಾತನಾಡಬಹುದ ಎಂದು ಕೇಳಿದ್ದಳು. ನಾನು ಕಾಲ್ ಮಾಡಿಬಿಟ್ಟೆ. " ಹೇಯ್, ಪ್ಲೀಸ್ ನಾನು ಕಾಲ್ ಮಾಡಿದ್ದೇನೆ ಅಂತ ಅಮ್ಮಗೆ ಹೇಳ್ಬೇಡಿ. ಅವರ ಮೊಬೈಲ್ ನಿಂದ ನಿಮ್ಮ ನಂಬರ್ ತಕೊಂಡೆ. ನೀವೇನು ಚೆನ್ನಾಗಿದ್ದೀರಾ..! ನಾನು ನಿಮಗೊಂದು ಪ್ರಶ್ನೆ ಕೇಳಲಾ?" ಎಂದು ತವಕಿಸಿ ಮಾತನಾಡಿದ್ದಳು. ನಾನು ಭಾವಪರವಸನಾಗಿಯೇ ಇದ್ದೆ. "ನೀವು ಇಂಜಿನಿಯರ್ ಓದ್ದಿದ್ದಿರಿ ಅಂತಿರಲ್ಲ... ಹಾಗಿದ್ದು ಯಾಕ್ರೀ ವರದಕ್ಷಿಣೆ ಬೇಡ ಅಂತ ಹೇಳಿ ಬಿಟ್ರಿ?. ನನಗೆ ಈ ನಿಮ್ಮ ಮಾತು ಸರಿಯನಿಸಲಿಲ್ಲ. ನಾಳೆ ಮದುವೆಯಾಗಿ ಬರುವಳು ನಾನು ತಾನೇ? ನೀವು ಇಷ್ಟು ಹೇಳಿದಕ್ಕೆ ಅಪ್ಪ-ಅಮ್ಮ ಕುಷಿಯಾಗಿದ್ದಾರೆ. ಅವರು ನನ್ನ ಅಕ್ಕನಿಗೆ ಕಾರು-ಚಿನ್ನ ಕೊಟ್ಟಿದ್ದಾರೆ. ನೀವು ಬೇಡ ಅಂದರೆ ನಮಗೆ ಏನು ಕೊಡಲ್ಲ ಗೊತ್ತ? 'atleast  ನಿಮ್ಮ ಇಷ್ಟ' ಅಂತ ಹೇಳುವ ಮನಸ್ಸು ಕೂಡ ನಿಮಗೆ ಅಗಿಲ್ಲಿಲ್ವಾ? ". ಭಯಾನಕ ಅನಿಸಿತ್ತು;ಅವಳು ನನ್ನ ತರಾಟೆಗೆ ತೆಗೆದು ಕೊಂಡಿದ್ದಳು; ಮನಸ್ಸಿನ ಭಾವ ಜಾರಿತ್ತು. ಅವಳಿಗೆ ಹೇಳಿದ್ದು ಒಂದೇ ಉತ್ತರ... " ಮದುವೆಯ ಮುನ್ನ ಎಲ್ಲವು ನನ್ನ ನಿರ್ಧಾರ... ನಿನ್ನ ವಿಚಾರಕ್ಕೆ ನನ್ನಿಂದ ಉತ್ತರ ಇಲ್ಲ. ಆದರೆ ನಿನ್ನ ಅಪ್ಪ-ಅಮ್ಮನ ಬಗ್ಗೆ ನೀನೆ ಯೋಚಿಸ ಬೇಕು ಹೊರತು, ನಾನು ಏನು ಹೇಳಲು ಸಾಧ್ಯವಿಲ್ಲ" ಅಂದೆ. " ಹಾಗಲ್ಲರಿ... ನಾಳೆ ಮದ್ವೇಯಾದ್ರೆ ಖರ್ಚುಗಳು ಬಹಳ ಇರ್ತವಲ್ರಿ... ಸಿಗುದನ್ನು ಯಾಕೆ ಬಿಡ್ತಿರಿ" ಎಂದು ನನ್ನ ಸಮಾಧಾನಿಸಿದ್ದಳು. ಅವಳಿಗಾಗಿ ಕೊನೆಗೆ, "ನಿಮ್ಮ ಮಗಳಿಗೆ ಏನು ಬೇಕು ಅವಳಿಗೆ ಕೊಡಿ ...ನನಗಂತೂ ಏನು ಬೇಡ' ಎಂದು ಅವಳ ತಂದೆ ತಾಯಿಗೆ ನಾನು ಹೇಳುವಂತ ನಿರ್ಧಾರಕ್ಕೆ ನಾವಿಬ್ಬರು, ನೋಡಿದ ೬ ಗಂಟೆಯೊಳಗೆ, ಇಂತ ಒಪ್ಪಂದ ಮಾಡಿಕೊಂಡಿದ್ದೆವು. ಆದರೆ ಗ್ರಹಗಳು ಕೈ ಕೊಟ್ಟಿದ್ದರಿಂದ, ಒಪ್ಪಂದದೊಂದಿಗೆ ಮದುವೆಯು ಮುರಿದುಹೋಯಿತು. ನನ್ನ ವರದಕ್ಷಿಣೆ  ರಹಿತ ಮದುವೆಯ ನನ್ನ ವಿಚಾರದ originality  ಹಾಗೂ variginality ಎರಡು ಉಳಿಸಿಕೊಂಡು ಬಂದೆ.

ಇನ್ನು ಸಾಚಾತನ ಬೇಕಾ ? ವರದಕ್ಷಿಣೆ ಯಾಕೆ ಬೇಕು ? ಬೇಡ ಅನ್ನುದು ಅಷ್ಟು ಸುಲಭನಾ? ಯೋಚನೆಯಲಿರುವಾಗ ಇರುವಾಗಲೇ ಇನ್ನೊಂದು ಘಟನೆ ನನ್ನ ಹೃದಯ ಕಲುಕಿತು.

ಮೂರನೆ ಸಂಬಂಧ: ಅದು ನನ್ನ ಪರಿಚಯದವರೊಬ್ಬರು ಕುದಿರಿಸಿದ ಸಂಬಂಧ. ನನ್ನ ಬೇಡಿಕೆಯ ಮೇರೆಗೆ ಹುಡುಗಿಯ ಅಣ್ಣ ನನಗೆ ಕೆಲವು ಫೋಟೋ ಗಳನ್ನೂ ನನಗೆ ಇಮೇಲ್ ಮಾಡಿದ್ದರು. ಮೊದಲು ಆ ಫೋಟೋಗಳು ಹುಡುಗಿಯ ಇಮೇಲ್ ನಿಂದ ಅಣ್ಣನ ಇಮೇಲ್ ಗೆ ಬಂದಿದ್ದವು. ಅಣ್ಣ ಇಮೇಲ್ ಗೆ ರಿಪ್ಲೈ ಆಲ್ ಮಾಡಿ ನನ್ನ ಇಮೇಲ್ ಸೇರಿಸಿದ್ದ ರಿಂದ  ಹುಡುಗಿಯ ಇಮೇಲ್ ಅದರಲ್ಲಿ ಸೇರಿಕೊಂಡಿತ್ತು. ನಾನು ರಿಪ್ಲೈ ಮಾಡಿ, ಥ್ಯಾಂಕ್ಸ್ ಎಂದು ಕೆಳಗೆ ಮೊಬೈಲ್ ನಂಬರ್ ಸೇರಿಸಿದ್ದೆ. ಇದರಿಂದಾಗಿ ಹುಡುಗಿಗೂ ನನ್ನ  ಮೊಬೈಲ್ ನಂಬರ್ ಹೋಗಿತ್ತು.

ಈ ಸಂಬಂಧದ ಕುರಿತಂತೆ ಅಣ್ಣ, ಅಣ್ಣ ಜೊತೆಯಲ್ಲಿ ಮಾತುಕತೆಗಿಳಿದು, ಯಾವಾಗ ಬರುತ್ತಿರ?, ಎಲ್ಲಿ? ಅಂತೆಲ್ಲ ನಿರ್ಧಾರ ಮಾಡುವ ವಿಷಯದ ಕುರಿತಾಗಿ ಹೇಳುತ್ತಿದ್ದ. ಅದನ್ನೆಲ್ಲಾ ಕೇಳುತ್ತಲಿದ್ದ  ಹುಡುಗಿ ಮರುದಿನ ನನಗೆ ಮಾತನಾಡಬೇಕು ಎಂದು  msg  ಮಾಡಿದ್ದಳು. ಅಗಾ ಅವಳು ಹೇಳಿದ್ದೇನು ಗೊತ್ತೇ?
"ನೀವು ನನ್ನ ನೋಡಲಿಕ್ಕೆ ಬರುತ್ತಿರಂತೆ. ಅಣ್ಣ ನಿಮ್ಮ ಜೊತೆ ಮಾತನಾಡುತ್ತಿರುವುದು ನಾನು ಕೇಳಿದ್ದೇನೆ. ಆದರೆ ಒಂದು ವಿಷಯ. ನೀವು ಇಂಜಿನಿಯರ್ ಅಂತೆ. ನೀವು ವರದಕ್ಷಿಣೆ ಕೇಳಿಯೇ ಕೆಳುತ್ತಿರಿ.! ಆದರೆ ನಾನು ಪೂರ್ ಗರ್ಲ್. ನನಗೆ ತಂದೆ ಇಲ್ಲ. ನೀವು ವರದಕ್ಷಿಣೆ ಕೆಳುದೇ ಆದರೆ ಬರುದೆ ಬೇಡ...ನನ್ನ ಮದುವೆಗಾಗಿ ನನ್ನ ಅಣ್ಣ-ಅಮ್ಮ ಏನು ಬೇಕಾದ್ರೂ ಮಾಡಬಹುದು ಆದರೆ ನನಗೆ ಇಷ್ಟ ಇಲ್ಲ" ಎಂದು ಹೇಳುತ್ತಾ ಸಾಗಿದ ಹುಡುಗಿಗೆ ನಾನು ಮಾತನಾಡಲು ಸಾಧ್ಯವೇ ಇರಲಿಲ್ಲ. ಕೊನೆಗೂ," ನಾನು ವರದಕ್ಷಿಣೆಯ ಕುರಿತಾಗಿ  ಏನು ಹೇಳಿಯೇ ಇಲ್ಲ.. ನೀವು  ಯಾಕೆ ಇದನೆಲ್ಲ ಹೇಳುತ್ತಿರಿ? " ಎಂದು ಕೇಳಿದಾಗ, ಹುಡುಗಿ ಗದ್ಗದಿತಲಾಗಿದ್ದಳು... " ಹಿಂದೆ ನನಗೆ ಇಂಜಿನಿಯರ್ ಪ್ರಪೋಸಲ್ ಬಂದಿತ್ತು. ಇಷ್ಟವು ಆಗಿತ್ತು. ಆದರೆ ಮದುವೆ ಆಗುವ ಲೆವೆಲ್ ಗೆ ಬಂದಾಗ ಬಹಳ ದೊವ್ರಿ ಕೇಳಿದ್ರು. ನಮ್ಮ ಅಮ್ಮ ಮನೆ ಮಾರೋಣ ಅಂದು ಹೇಳಿದ್ರು... ನಾನು ಆ ಮದುವೆ ಬೇಡ ಅಂತ ಹೇಳಿದೆ".

ನನ್ನ ಹೃದಯದಲ್ಲಿ ರಕ್ತವೇ ನಿಂತತೆ ಆಯಿತು. ಹುಡುಗಿಯೊಬ್ಬಳು ಒಂದು ಮನೆಯನ್ನು ಕಟ್ಟಲು ಇನ್ನೊಂದು ಮನೆಯನ್ನು ವಿನಾಶಕ್ಕೆ ತಳ್ಳಬೇಕಾದ ಪರಿಸ್ಥಿತಿ ಸಮಾಜವೇ ನಿರ್ಮಿಸುತ್ತದೆ.

ಯಾವುದು ಸರಿ? ವರದಕ್ಷಿಣೆ ಹುಡುಗನ ಆರೋಗ್ಯದ  ಸಂಕೇತವೇ? ವರದಕ್ಷಿಣೆ ಹೆಂಡತಿಯೆಂಬ ಜೀವಿ ಬಂದಾಗ ಆಗಬಹುದಾದ ಖರ್ಚುಗಳಿಗೆ ಕೊಡುವ ಬಾಬತ್ತೆ ? ಇಲ್ಲ ಬಡ ಹೆಣ್ಣು ಮಕ್ಕಳ ಕಣ್ಣಿರೆ ? ಕಾನೂನು ಹೇಗೆ ಇದ್ದರು, ಮನುಷ್ಯನ ಸಮಾಜದ ರೀತಿ-ನೀತಿಗಳೇ ಸಮಾಜವನ್ನು ಆಳುತ್ತವೆ. ನಾನು ಇದೆ ಸಮಾಜಕ್ಕೆ ಒಳಪಟ್ಟವನು. ನನಗೂ ವರದಕ್ಷಿಣೆ ಬೇಕು. ನಾಳೆ ನನ್ನ ಬೆಲೆ ಎಷ್ಟು ಅಂತ ebay ಯಲ್ಲಿ ನೋಡಬಹುದು..! ಯಾಕಂದ್ರೆ, ನಾನು ಈ ಘಟನೆಗಳಿಂದಾಗಿ ಬದಲಾಗಿದ್ದೇನೆ.

ಛೆ...ಈ ಬದುಕೇ..!

1 comment:

  1. i am nethra , nice to read ,and i got to know that a ur a social person and u think as u learnd in school and in u r childhood days . dont be so sensitive becouse life will hurt u as much as possible, i wish u never get hurt.

    ReplyDelete