Friday, June 21, 2013

ಏನೇ ಇದ್ದರೂ ನಮಗೆ ಜನ ಬೇಕು.... !

ಒಂದು ವರ್ಷದ ಹಿಂದೆ, ಮಣಿಪಾಲದಿಂದ ಊರಿಗೆ ಹೋಗಿದ್ದೆ. ಸಂಜೆ ೭ ರ ಸಮಯದಲ್ಲಿ ನನ್ನ ಮನೆಯಲ್ಲಿ ಭಾರಿ ಸಭೆ. ತಮ್ಮ-ಅಮ್ಮನ  ನಡುವಿನ ಈ ಜಗಳಕ್ಕೆ ನಾನು ನ್ಯಾಯಾಧೀಶ. ತಮ್ಮನನ್ನು ಕುರಿತು ನನ್ನ ಬಳಿ ಅಮ್ಮನ ಆರೋಪ," ಅವನು, ಆರು ಗಂಟೆ ಆಗೋದೇ  ತಡ  ಮನೆಯಲ್ಲಿ ಎಲ್ಲ ಮರೆತು ಬೇರೆಯವರ ಮನೆಗೆ ಹೋಗಿ  ಕುಳಿತು ಕೊಳ್ತಾನೆ ... ಸ್ವಲ್ಪ ಅವನಿಗೆ ಸರಿಯಾಗಿ ಹೇಳಿ  ಹೋಗು" ಎಂದರು.  ತಮ್ಮ ಹೋಗುತಿದುದ್ದು ನಮ್ಮ ನೆರೆಯ ಮನೆಗೆ ಅವನಷ್ಟೇ ವಯಸ್ಸಿನ ಹುಡುಗನ ಜೊತೆ ಹರಟೆ ಹೊಡೆಯಲು.

ನಾನು ಸಿಕ್ಕಿದ್ದೇ ಚಾನ್ಸ್ ಎನ್ನುವಂತೆ ಅವನಿಗೆ ಮುಂದೆ ಕುಳ್ಳರಿಸಿ, " ನಿಂಗೆ ಮನೆಯ ಬಗ್ಗೆ  ಸ್ವಲ್ಪನೂ ಜವಾಬ್ಧಾರಿ ಇಲ್ಲ, ಬೇರೆಯವರ ಮನೆಗೆ ಹೋಗಿ ಕುಳಿತುಕೊಳ್ಳುವುದು   ಎಷ್ಟು ಸರಿ...? ನೀನು ಕೆಲಸ ಮಾಡಲ್ಲ ... ಅವರ ಮನೆಯ ಕೆಲಸಕ್ಕೂ ತೊಂದರೆ..!.  ಮನೆಯಲ್ಲಿ ನಿನಗೆ ಬೇಸರ ಆದರೆ ಟಿವಿ  ಇದೆ, ಪುಸ್ತಕ ಇದೆ, ಒಳ್ಳೆಯ ಮೊಬೈಲ ಇದೆ. ಮಾಡಲು ಬೇಕಾದಷ್ಟು ಕೆಲಸ ಇದೆ". ಆತನ ಉತ್ತರ ಅಷ್ಟೇ ಸರಳವಾಗಿತ್ತು: " TV, Mobile ಬೇಕಾದರೆ  ನೀನು ತಕ್ಕೊಂಡು  ಹೋಗು. ಅದೆಲ್ಲ ಎಷ್ಟೊತ್ತು  ನೋಡಲು ಸಾಧ್ಯ?. ನಾನು ಮನುಷ್ಯ....ನಂಗೆ ಮನುಷ್ಯರ ಜೊತೆ ಮಾತನಾಡದ  ಹೊರತು ಸರಿ ಬರದು."  ಮನೆಯ ಜಗಳ ಇಷ್ಟು  ಹೇಳಿಕೆಯೊಂದಿಗೆ ಮುಗಿಯಿತ್ತು. ಇಂಥ ಜಗಳಗಳು ಎಲ್ಲಿ ಪ್ರೀತಿ ಇರತ್ತೋ ಅಲ್ಲಿ ನಡೆದು ಮತ್ತೆ ಸ್ಮೃತಿ ಪಟಲದಿಂದ ದೂರ ಸರಿಯುತ್ತವೆ.

ಈ  ಘಟನೆ ನಡೆದು ಮೂರು-ನಾಲ್ಕು ತಿಂಗಳ ನಂತರ ನಾನು ವೃತ್ತಿ ಅನಿವಾರ್ಯತೆಯಿಂದ ಬೆಂಗಳೂರಿಗೆ  ಬಂದೆ. ಬೆಂಗಳೂರಿನ  ಸದ್ದು ಗದ್ದಲಗಳ  ನಡುವೆ, ವಾಹನ ಸಂದಣಿಯ ನಡುವೆಯ, ಸ್ವಿಚ್ ಒತ್ತಿದ್ದರೆ ಬೇಕಾದುದ್ದೆಲ್ಲ ಸಿಗುವ ವ್ಯವಸ್ತೆಯ ನಡುವೆಯ  ಮಾನವ  ಹೃದಯಗಳ ನಿರವ ಮೌನ ನನ್ನ ಪಾಲಿಕೆ ಕತ್ತು ಹಿಸಿಕಿದಂತೆ ಭಾಸವಾಗುತಿತ್ತು. ಮೊದಲ ಹದನೈದು ದಿನ, ಜೀವನದಲ್ಲೇ ಅತಿ ಮೌನದಿಂದ ಕಳೆದ  ದಿನಗಳು ಅನಿಸಿವೆ. ನನ್ನ ಮಾತುಗಳು ಸೆಕ್ಯೂರಿಟಿ  ಜೊತೆ, ಮ್ಯಾನೇಜರ್  ಜೊತೆ, ಊಟಕ್ಕೆ  ಹೋದಾಗ ವೈಟೆರ್  ಜೊತೆ ಬಿಟ್ಟರೆ  ಇನ್ನೆಲ್ಲಿಯೂ  ನಕ್ಕು-ಸಲುಗೆಯಿಂದ ಮಾತನಾಡುವ ಅವಕಾಶವೇ ಇರಲಿಲ್ಲ. ಬಸ್ಸಿನ ನಲ್ಲಿ ನಮ್ಮ ಜೊತೆ ಕೆಲಸ ಮಾಡುವ ಅದೆಷ್ಟೋ ಮಂದಿ ಇದ್ದರೂ  ಕಂಪನಿಯ  ಗೇಟ್ ಹೊರಗೆ ಬಂದ ಮೇಲೆ ಅವರ್ಯಾರೋ-ನಾನ್ಯಾರೋ..!  ಹೃದಯ ಸಂವೇದನೆ  ಹೇಳಿಕೊಳ್ಳದಿದ್ದರೆ ಹೇಗೆ ಅರ್ಥವಾಗಬೇಕು? ಮಾತನಾಡಿದರೆ  ತಾನೇ ಮತ್ತೊಬ್ಬ ಮನುಷ್ಯನ ಕೋರಿಕೆಗಳು ಅರ್ಥವಾಗುವುದು? earphone ಗಳು ಹಾಗೂ  ಸ್ಮಾರ್ಟ್ ಫೋನ್ ಗಳು  ಇಂಥ ಸಂಭಾಷಣೆಯನ್ನೇ ಕೊಲೆಮಾಡಿದ್ದವು.  ಆದರೂ ಒಂದು ದಿನ, ಧೈರ್ಯ ಮಾಡಿ, ನನ್ನ ಬಾಜು ಕುಳಿತವನನ್ನು, "Where do you work ?" ಎಂದು ಕೇಳುವ ಮೂಲಕ ನಾನೇ ಸಂಭಾಷಣೆಗೆ  ಬೀಜ ಹಾಕೋಣವೆಂದುಕೊಂಡರೆ, ಗಂಭಿರವಾಗಿ  ಕಣ್ಣುಗಳಿಂದ ನನ್ನತ್ತ ನೋಡುತ್ತಾ, ಸಂಭಾಷಣೆಯ ಕೊಲೆಗಾರನಾಗಿದ್ದ  earphone  ಒಂದು ಕಿವಿಯಿಂದ ಹೊರತೆಗೆದು ಒರಟು ಧ್ವನಿಯಲ್ಲಿ, "Why ... !?" ಎಂದ. "Simply asked"... ಎಂದು ನಾನು ಹೇಳುತ್ತಿರುವಾಗಲೇ  ಅವನ earphone  ಮತ್ತೆ ಮೊದಲ ಸ್ಥಾನಕ್ಕೆ ಸೇರಿಕೊಂಡಿತ್ತು. ಕಲಿತು ಸಂತೋಷ ಅನುಭವಿಸಬೇಕೆಂದು  ಬೆಂಗಳೂರಿಗೆ  ಬಂದ  ಇಂಜಿನಿಯರ್ ಗಳು, ಪ್ರತಿನಿತ್ಯ  ಯಾರೊಂದಿಗೂ  ಮಾತನಾಡದೆ, ನಿರ್ಜೀವಿ ವಸ್ತುಗಳ(ಮೊಬೈಲ್ earphone ) ಜೊತೆ  ಹೆಣಗಾಡುತ್ತ,  'ಇವರಿಗೆಲ್ಲ ಸೂತಕದ ಛಾಯೆ ಯಾಕಿದೆ?' ಎನ್ನುವಷ್ಟು ಶ್ಮಶಾನ ಮೌನದಲ್ಲಿರುವುದನ್ನು ಕಂಡಾಗ  ನನಗಂತೂ ನೋವು ಕಣ್ರೀ. ಮಣಿಪಾಲದ ವಿಶಾಲವಾದ ಜಗತ್ತಿನಿಂದ ಬೆಂಗಳೂರು ಎಂಬ ಜೈಲ್ ಗೆ ಬಂದೆ ಅನ್ನುವಂತಿತ್ತು ನನ್ನ ಜೀವನ.

ಆದರೆ, ಇಂಥ ಭಾವನಾತ್ಮಕ ಸಮಯದಲ್ಲೂ ಒಳ್ಳೆಯ roomates  ಸಿಕ್ಕಿದ್ದು  ನನ್ನ ಪುಣ್ಯ. ಯಾರೇ ಇದ್ದರು, ಅವರೆಲ್ಲ ಕೈ ಕೊಟ್ಟು ಇವತ್ತು  ತಮ್ಮ ಊರಿಗೆ ಹೋಗಿ ಬಿಟ್ಟಿದ್ದಾರೆ. ಮನೆಯಲ್ಲಿ ಮೌನ. ಅಡಿಗೆ ಮಾಡಲು  ಮನಸಿಲ್ಲ. ಹೊರಗೆ ಹೋಗಲು ಮಳೆ. ನಿದ್ದೆ ಬಾರದು. ಹಾಸಿಗೆಯಲ್ಲಿ ಬಿದ್ದುಕೊಂಡರೂ ಗೋಡೆ ಗಡಿಯಾರದ  ಟಿಕ್ ಟಿಕ್ ಶಬ್ಧ , ಬಾತ್ ರೂಮ್ ನಲ್ಲಿ ಟಪ್  ಎಂದು ಬೀಳುವ ನೀರಿನ ಹನಿಯ ಶಬ್ಧ,  ಬಾಜು ಮನೆಯ  ಬುರ್  ಬುರ್  ಎಂದು ಗಿರಗಿಟಗೆ  ಹೊಡೆಯುವ ಫ್ಯಾನ್ ಶಬ್ದ, ಕಿಡಕಿಯ ಸಂದಿನಿಂದ  ಹಾಸಿಗೆಗೆ ಸಮೀಪಿಸುತ್ತಿರುವ  ಸ್ಟ್ರೀಟ್  ಲೈಟ್  ಎಲ್ಲವು ಮನಸ್ಸು ಗೊಂದಲಕ್ಕೆ  ಇಡು ಮಾಡಿದೆ.

ಹಾಗೆಂದು ಮನೆಯಲ್ಲಿ  ಏನೆಲ್ಲಾ ಇದೆ....ಇಂಟರ್ನೆಟ್... ಬೇಕಾದ ಹಾಡು, ಸಣ್ಣ ಸೌಂಡ್ ಬೇಕೇ --- earphone, ಬಾಜು ಮನೆಯವರನ್ನು ಏಳಿಸಬೇಕೆ- ಸ್ಪೀಕರ್ , ತಿರುಗಾಡುತ್ತ ಹಾಡು ಕೇಳಬೇಕೆ -bluethooth headset, ಓದಬೇಕೆ ಅದೆಷ್ಟೋ  ಪುಸ್ತಕಗಳು. ತಿನ್ನಲು ಹಸಿವೆಯು ಇಲ್ಲ.  ಹಾಗಿದ್ರೆ ಸಮಸ್ಯೆ ಏನು?

ಅದೇ  ನಿರವ ಮೌನ,ನಗುವಿಲ್ಲದ ಮುಖ, ಹರುಪು ಇಲ್ಲದ ಮನಸು, ಕನಸುಗಳೇ ಇಲ್ಲದ  ನಿದ್ದೆ, ಹಸಿವೆ ಇಲ್ಲದ ಊಟ. ಬಹುಶ ತಮ್ಮ ಹೇಳಿದ್ದ ," ಏನೇ ಇದ್ದರೂ  ನಮಗೆ ಜನ ಬೇಕು.... !?"  ಮನುಷ್ಯನಿಗೆ  ಕೇಳುವ-ಹೇಳುವ ಮನುಷ್ಯ ಮತ್ತೊಬ ಇರಲೇ ಬೇಕು.  ಬದುಕಿನ ಸಂತೋಷ ಬ್ಯಾಂಕ್  ಅಕೌಂಟ್ ನಲ್ಲಿ ಇಲ್ಲ, ನಿಮ್ಮನ್ನು ಅರಿತು ನಿಮ್ಮ ಜೊತೆ ವ್ಯವಹರಿಸುವ ಇನ್ನೊಂದು  ಹೃದಯದಲ್ಲಿದೆ.

No comments:

Post a Comment