Sunday, June 30, 2013

ರಾಜಕೀಯ..! ಛಿ ಥೂ...!

     ರಾಜಕೀಯ ಚದುರಂಗ ಆಟದ ಕುರಿತಾಗಿ ಯಾರಿಗೆ ತಾನೇ ಗೊತ್ತಿಲ್ಲ?ರಾಜಕೀಯ ಗೊತ್ತೇ ಇಲ್ಲ ಅನ್ನುವ ಅಥವಾ ನನಗೆ ಇಷ್ಟವಿಲ್ಲದ ವಿಷಯ ಎಂದು ಖಂಡಿತ ಹೇಳುವ ಹಾಗಿಲ್ಲ. ದಿನ ನಿತ್ಯದ ಬದುಕಿನಲ್ಲಿ ರಾಜಕೀಯ ಇದ್ದೆ ಇದೆ.

    ನಾನೊಂದು ದಿನ ಊರಿಗೆ ಬಸ್ಸಿನಲ್ಲಿ ಹೋಗುವಾಗ, ನನ್ನ ಜೊತೆಯಲ್ಲಿ ಒಬ್ಬ BA  ವಿದ್ಯಾರ್ಥಿ ಪಕ್ಕದಲ್ಲಿ ಕುಳಿತ. ಹೀಗೆ-ಹಾಗೆ ಪರಿಚಯ ಮಾಡಿಕೊಂಡು, "ಯಾವ ವಿಷಯ ಓದುತ್ತಿದ್ದಿಯಾ?" ಎಂದು ಕೇಳಿದೆ. "HPE ". ಎಂದ. "ಅಂದ್ರೆ" ಎಂದು ಪುನ ಪ್ರಶ್ನೆ ಮಾಡಿದಾಗ," History , Politics , Economics  ಎಂದು ಹೇಳಿದ. "ಒಹ್ ಹೌದಾ..!...ಹಾಗಿದ್ರೆ, ಕರ್ನಾಟಕದ ಮುಂದಿನ ಮುಖ್ಯಮಂತ್ರಿ ಯಾರಾಗಬಹುದು ಅಂತಿಯ?". (ಕಳೆದ ಚುನಾವಣೆಗಿಂತ ಎರಡು ತಿಂಗಳು ಮೊದಲು ನಡೆದ ಮಾತಿದು).  "ಏನಣ್ಣ... ನನಗಂತೂ ರಾಜಕೀಯ ಅಂದ್ರೇನೆ ಇಷ್ಟ ಇಲ್ಲ... ಇವರೆಲ್ಲ ಕ್ರಿಮಿನಲ್ಸ್.... ಆಡಿದ ಹಾಗೆ ಮಾಡಲ್ಲ.... ಓಟು ಬೇಕಂದ್ರೆ ಮಾತ್ರ ಅವರಿಗೆ ನಮ್ಮ ನೆನಪು... ಒಂದಿಷ್ಟು ದುಡ್ಡು ಮಾಡ್ಕೊಂಡು ಹೋಗಿ ಬಿಡ್ತಾರೆ.. ಅವರ ಬಗ್ಗೆ ತಿಳಿದೇನು ಆಗಬೇಕು?....ನಾನು ಪೊಲಿಟಿಕಲ್ ನ್ಯೂಸ್ ಅಂದ್ರೆ ಆಗಲ್ಲ... I  hate  politics ...!"

ಇದು ಒಬ್ಬ ಸಾಮಾನ್ಯ ಹಳ್ಳಿಯ ಸಾವಿನ ಅಂಚಿನಲ್ಲಿರುವ ಮುದುಕ ಅಥವಾ ಶಿಕ್ಷಣವೇ ಸಿಗದೇ ಹಳ್ಳಿಯ ಮೂಲೆಯಲ್ಲಿ ದನ-ಕುರಿ ಕಾಯ್ದು ಕೊಂಡು ಬದುಕುತ್ತಿರುವ ಒಬ್ಬ ಹುಡುಗ ಹೇಳಿದ ಮಾತಗಿದ್ದರೆ ನಾನು ತೆಪ್ಪಗೆ ಕುಳಿತಿರಬಹುದಿತ್ತು. ಆದರೆ, ಹುಡುಗ ಕಾಲೇಜು ವಿದ್ಯಾರ್ಥಿ. ಇವತ್ತೇ ೧೮ ದಾಟಿದ  ಭಾವಿ ಪ್ರಜೆ..! ಪಾಲಿಟಿಕ್ಸ್ ಓದಿತ್ತಿರುವ ವಿದ್ಯಾವಂತ. ಇಂಥವರು I  hate  politics ...! ಎಂದು ಹೇಳಿದರೆ ಮುಂದಿನ ಪ್ರಜೆಗಳ ರಾಜ ಯಾರು ?

ಅದಕ್ಕೆ ಕಾರಣ ಇಲ್ಲದಿಲ್ಲ. ನಮ್ಮ ರಾಜಕೀಯ ರಂಗ ಮಲಿನ ಗೊಂಡಿದ್ದು ಸತ್ಯ. ಅಪರಾಧಿಗಳು, ಶ್ರೀಮಂತರು ಹಾಗು ವಂಶಾವಳಿಯ ಶಾಪ ಗ್ರಸ್ತ ಕುಡಿಗಳಿಂದ ಒಬ್ಬ ಸಾಮಾನ್ಯ ಯುವಕನಿಗೆ ಪಾಲಿಟಿಕ್ಸ್ ಅಂದರೆ ಒಂದು ಅಲರ್ಜಿ ಸಹಜ. ನಮ್ಮ ದೇಶದಲ್ಲಿ ಎಲ್ಲ ಬಗೆಯ ವೃತ್ತಿಗಳಿಗೆ ಒಂದಲ್ಲ ಒಂದು ಬಗೆಯ  ಅರ್ಹತೆ ಅವಶ್ಯಕ. ಆದರೆ ಪಾಲಿಟಿಕ್ಸ್ ಕ್ಷೇತ್ರಕ್ಕೆ ಮಾತ್ರ ಅದು ಇಲ್ಲವೇ ಇಲ್ಲ. ಕ್ರೈಮ್ ಇದ್ದರು ಸರಿ,ತಲೆ ಇಲ್ಲದಿದ್ದರೂ ಸರಿ, ಹಲ್ಲುದುರಿ ಯಾವ ಪ್ರಶ್ನೆ ಇನ್ನು ಕೇಳಲಾರ ಎನ್ನುವ ಮುದಿತನ ಇದ್ದರು ಸರಿ  ರಾಜಕೀಯ ಕ್ಷೇತ್ರದಲ್ಲಿ ಒಂದು ಸ್ಥಾನ ಇದ್ದೆ ಇದೆ. ಇದಕ್ಕೆ ಮೂಲ ಕಾರಣ ನಮ್ಮ ರಾಜಕೀಯ ವ್ಯವಸ್ತೆ ವ್ಯಕ್ತಿಯ ಅರ್ಹತೆಗಿಂತಲೂ ಅವನ ಜಾತಿ,ಅವನಾವ ರೀತಿಯಲ್ಲಿ ಜನ ಪರವಾಗಿ (ಜನ ಹಿತಕ್ಕಾಗಿ ಅಲ್ಲ) ನಿಲ್ಲ ಬಲ್ಲ, ಅವನಿಗಿರುವ ವಂಶಾವಳಿಯ ಪರಿಚಯ ಹಾಗೂ ಆ ವಂಶದ ಕುರಿತಾಗಿ ಇರುವ ಭಾವನಾತ್ಮಕ ಸಂವೇದನೆಗಳೇ ನಮಗೆ ಮುಖ್ಯ ವಿಷಯವಾಗಿ ಬಿಡುತ್ತಾವೆ. ಅವನ ಯೋಜನೆಗಳ ಕುರಿತಾಗಿಯಾಗಲಿ, ಅವನ ಬುದ್ಧಿವನ್ತಿಕೆಯಾಗಲಿ ನಮಗೆ ಒಂದು ಅವಶ್ಯಕ ಸಂಗತಿಯಾಗಲಿ ನಾವು ಗುರುತಿಸುವುದೇ ಇಲ್ಲ.

ಹೀಗಾಗಿ ರಾಜಕಾರಣಿಗಳು ಅಂದರೆ ಒಂದು ಬಗೆಯ ತಲೆಯಿಲ್ಲದ,ಅಧಿಕಾರ ಇರುವ, ಖಾಖಿಗಳಿಂದ ಸುತ್ತುವರಿದಿರುವ ಒಂದು ಎಡಬಿಡಂಗಿಗಳು  ಎನ್ನುವಂತೆ ಜನ ಮಾತನಾಡುತ್ತಾರೆ. ಅವರ ಖಾದಿ ಬಟ್ಟೆ ಕೇವಲ ಅವರ ಸಮವಸ್ತ್ರ ಎಂದು ಭಾವಿಸಿ ಕೊಳ್ಳುವ ಮನೋಭಾವ ನಮ್ಮದ್ದು. ಆದರೆ ಜೊತೆಗೆ, ಕೆಲವೊಮ್ಮೆ, ನಾವು ಯಾವುದೊ ತಪ್ಪಿ ಮಾಡಿ ಪೋಲಿಸ್ ಗೆ ಸಿಕ್ಕಿ ಬಿದ್ದಾಗ ಧೈರ್ಯದಿಂದ "ಆ ರಾಜಕೀಯ ವ್ಯಕ್ತಿಗೆ ನನ್ನ ಹತ್ತಿರದ ಸಂಬಂಧವಿದೆ" ಎಂದು ಹೇಳಿ ತಪ್ಪಿಸಿ ಕೊಳ್ಳಲು ಬಳಸಲ್ಪಡುವ ವ್ಯಕ್ತಿ ಅನ್ನುವ ಸಾಮಾನ್ಯ ಅಜ್ಞಾನ ನಮಗೆಲ್ಲರಿಗೂ ಇದೆ. ಅದೆಷ್ಟೋ ಬಾರಿ ಕಾನುನಾತ್ಮಕ ವಿಷಯಗಳಲ್ಲಿ ಅನುಪಯುಕ್ತ ರಾಜಕಾರಣಿಗಳ ಪ್ರವೇಶ ನಿಜವಾದ ನ್ಯಾಯ ವ್ಯವಸ್ತೆಯಲ್ಲಿ ಅನ್ಯಾಯ ವಾಗಿಸುತ್ತದೆ.

ಹಾಗಿದ್ರೆ ರಾಜಕೀಯ ಅಂದ್ರೆ ಅಷ್ಟೇನಾ? ಇದು ನನ್ನ ಪ್ರಶ್ನೆ ಅಲ್ಲ... ಈ ದೇಶದ ಪ್ರಶ್ನೆ, ಈ ದೇಶದ ಜನರ ಪ್ರಶ್ನೆ, ಇಲ್ಲ ನನ್ನ ಜೊತೆ ಕುಳಿತ BA ವಿದ್ಯಾರ್ಥಿಯ ಪ್ರಶ್ನೆಯೂ ಹೌದು?

ರಾಜಕೀಯ ಕ್ಷೇತ್ರ ದೇಶದ ಸೇವೆಯ, ಸಮಾಜ ಸೇವೆಯ ಅತ್ಯುನ್ನತ ಕ್ಷೇತ್ರ.ಅದಕ್ಕೆ ಜಾತಿ-ಮತಗಳ ಹೊರತಾಗಿ ಪವಿತ್ರವಾದ ಭಾವದಿಂದ ಶ್ರಮಿಸುವವರಿಗೆ ಅದು ಖಂಡಿತ ಕೈ ಬಿಡಲಾರದು.ಆದರೆ ಮಥಾಂದ,ಅಧಿಕಾರ ದಾಹ ಪಶುಗಳಿಗೆ ಅದು ಖಂಡಿತ  ಒಳ್ಳೆಯ ಕ್ಷೇತ್ರ ಅಲ್ಲ.

ನಾವು ವಿಜ್ಞಾನ ಓದಬಹುದು,ಅರ್ಥಶಾಸ್ತ್ರ ಓದಬಹುದು ಅವುಗಳ ಓದುವಿಕೆಯಿಂದ ದೇಶಕ್ಕೆ, ನಮ್ಮ ಜನಕ್ಕೆ ಅವು ಒಳ್ಳೇದನ್ನೇ ಮಾಡುತ್ತಾವೆ ಎಂದು ಖಂಡಿತ ಸಾಧ್ಯವಿಲ್ಲ. ಒಬ್ಬ ರಾಜಕಾರಣಿ ಮನುಕುಲದ ಏಳಗೆಯನ್ನು ಬಯಸಿ ಎಲ್ಲ ಕ್ಷೇತ್ರದ ಪರಿಣಿತರನ್ನು 'ದೇಶ' ಎಂಬ  ಪರಿಮಿತಿಯಲ್ಲಿ ದುಡಿಯುವಂತೆ ಅದರ ನೇರ ಜವಾಬ್ಧಾರಿಯನ್ನು ಹೊರುವ ಕುದುರೆ. ಅದೆಷ್ಟೋ ಮಂದಿ ವಿಜ್ಞಾನಿಗಳು- ಇಂಜಿನಿಯರ್ ಗಳು ನಮ್ಮಲ್ಲಿ ಮೊಬೈಲ್ ಚಿಪ್ ತಯಾರಿಕ ತಂತ್ರ-ಜ್ಞಾನ  ತಿಳಿದವರಿದ್ದಾರೆ .ಆದರೆ  ಇಂದಿಗೂ  ಭಾರತದಲ್ಲಿ ಸಂಪೂರ್ಣವಾಗಿ ಒಂದು ದೇಶಿಯ ತಂತ್ರಜ್ಞಾನ ವನ್ನು ಬಳಸುವಲ್ಲಿ ವಿಫಲವೇ..! ಇದಕ್ಕೆ ಕಾರಣ ರಾಜಕೀಯ ಇಚ್ಚಾ ಶಕ್ತಿ!  ಹೀಗಾಗಿ ರಾಜಕಾರಣಿ ನಾಳೆಗಳ ಅವಶ್ಯಕತೆಗಳ ಚಿಂತನೆಯನ್ನು ನಡೆಸಬಲ್ಲ ಬುದ್ದಿವಂತನಿರಬೇಕು.

ಎಲ್ಲ ರಾಜಕಾರಣಿಗಳನ್ನು ಕೆಟ್ಟವರು ಎಂದು ಭಾವಿಸಬಾರದು. ಅವರು  ಸಮಾಜದ ಕೋಟಿ-ಕೋಟಿ ಜನರ ಆಶೋತ್ತರಗಳಿಗೆ ಸ್ಪಂದಿಸಬೇಕದಾಗ ಸಾವಿರಾರು ಬಗ್ಗೆಯ ಒತ್ತಡಗಳನ್ನು ಅನುಭವಿಸಲೇ ಬೇಕಾಗಿರುತ್ತದೆ. ಏಕ ವ್ಯಕ್ತಿಯಿಂದ ಸರ್ಕಾರ ನಡೆಸಲು ಖಂಡಿತ ಸಾಧ್ಯವಿಲ್ಲ. ಹೀಗಾಗಿ ಅನಿವಾರ್ಯವಾಗಿ ಕೆಲವು ಒಳ್ಳೆಯ ರಾಜಕಾರಣಿಗಳು  ನಾವೇ ಆರಿಸಿ ಕಳುಹಿಸಿದ "ಎಡಬಿಡಂಗಿ"ಗಳ ಜೊತೆ  ಸಂಹನದಲ್ಲಿ ಇರಲೇ ಬೇಕಾಗುತ್ತದೆ. ಬೇಡವಾದ ವ್ಯಕ್ತಿಯನ್ನು ಯಾವುದೋ ಅಮಿಶಕ್ಕೋ, ಜಾತಿ-ಭಾಷೆ-ಮತಗಳ ಅಂಧತೆಗೋ ಬಲಿಯಾಗಿ ನಾವೇ  ಆರಿಸಿ ಕಳಿಸಿದ ಮೇಲೆ, ಒಳ್ಳೆಯ ರಾಜಕಾರಣಿಗಳು ತಪ್ಪು ಮಾಡುತ್ತಾರೆ ಎಂದು ಬೊಟ್ಟು ಯಾರ  ಕಡೆ ಮಾಡಬೇಕು ?

ಒಟ್ಟಾರೆ ರಾಜಕೀಯ ದೇಶದ ಸರ್ವ ಶ್ರೇಷ್ಠ ಕ್ಷೇತ್ರ. ರಾಜಕಾರಣಿಗಳ ಬಗ್ಗೆ ತಾತ್ಸರವು ಬೇಡ. ಇವತ್ತು ಎಲ್ಲರ ಬಗ್ಗೆ ತಿಳಿದು ಕೊಳ್ಳಿ, ಮುಂದಿನ ಚುನಾವಣೆಯಲ್ಲಿ ಅವರಿಗೆ ಬುದ್ಧಿ ಕಲಿಸಿ... ಅಥವಾ ನಿಮಗೇನಾದ್ರು ಇಷ್ಟ ಇದ್ರೆ ಮುಂದಿನ ಚುನಾವಣೆಗೆ ನಿಲ್ಲಿ!

No comments:

Post a Comment