Saturday, August 31, 2013

ಬೆಂಗಳೂರಿ"ನಲ್ಲೇ" ಸೆಟ್ಲ್ ಆಗ್ತಿರಾ?

ಬೆಂಗಳೂರು ಅಭಿವೃದ್ದಿಗೆ  ಹಲವಾರು  ಸಂಸ್ಥೆಗಳಿವೆ :ಬೆಂಗಳೂರು ಮಹಾನಗರ ಪಾಲಿಕೆ ಹಾಗೂ BDA ಇರುವುದು ನಿಮಗೆಲ್ಲ ಗೊತ್ತೇ ಇದೆ. ಆದರೆ ಅದಕ್ಕಿಂತಲೂ ಹೆಚ್ಚಾಗಿ ಬೆಂಗಳೂರಿನ ಕುರಿತಾಗಿ ಸಮಗ್ರವಾಗಿ(a  holistic approach  in thinking ) ಯೋಚಿಸುವ ವ್ಯಕ್ತಿಗಳು ಎಂದರೆ ಹೊಸದಾಗಿ ಬೆಂಗಳೂರಿಗೆ ಬಂದು ಜೀವನ ಸಾಗಿಸಬೇಕು ಎಂದು ಕೊಂಡವರು. ನನ್ನ ಅನುಭವದಿಂದ ಹೇಳುವ ಮಾತೆಂದರೆ, ಇಂಥ ಹೊಸ ವ್ಯಕ್ತಿಗಳು ಬೆಂಗಳೂರಿನ ಭವಿಷ್ಯದ ಬಗ್ಗೆ ಬಹಳ ಯೋಚನೆ ಮಾಡುತ್ತಾರೆ ಅನಿಸುತ್ತದೆ.

ನನಗೆ ಮೊದಲಿಂದಲೂ ಬೆಂಗಳೂರಿನ ಬಗ್ಗೆ ಒಳ್ಳೆಯ ಅಭಿಪ್ರಾಯವಿರಲಿಲ್ಲ. ಅದಕ್ಕೆ ಕಾರಣ, ಹಳ್ಳಿಯಲ್ಲಿ  ಏಳೆಂಟು ಎಕರೆ ತೋಟ-ಗದ್ದೆಗಳಲ್ಲಿ ಓಡಾಡಿ ಕೊಂಡು ಬೆಳದು, ಊರಿನ ಯಾವ ಮನೆಯ ಒಲೆಯ ಮೇಲಿನ ಅನ್ನವಾದರು ಪರವಾಗಿಲ್ಲ ಎನ್ನುವಂತೆ ಬೆಳೆದು,  ಬೆಂಗಳೂರಿನ ೬ x  ೩ ಅಡಿ ಜಾಗದಲ್ಲಿ ಜೀವನ ಮಾಡಬೇಕು ಅಂದರೆ ಹೇಗೆ ಸಾಧ್ಯ? ಆ ಮನಸ್ಸು ಹೇಗೆ ಕುಗ್ಗಿಸಬೇಕು? ನೂರಾರು ಅಡಿ ರಸ್ತೆಗಳಿದ್ದರೂ ಬೈಕ್ ಓಡಿಸಲು ಬೇಕಾದ ೨ ಅಡಿಗೂ ಗುದ್ದಾಡಬೇಕು..:! 

ಹಾಗೆಂದು ಬೆಂಗಳೂರಿಗೆ ಬಂದ ಮೊದಲ ದಿನ ಒಂದು ವಿಶೇಷ ಅನುಭವವೇ... ನಾನು ರಾಜಧಾನಿ ನಗರಿಯಲ್ಲಿ ಓಡಾಡುತ್ತಿದ್ದೇನೆ ಎನ್ನುವುದು ಒಂದು ರೀತಿಯಲ್ಲಿ (ಹಳ್ಳಿಯಲ್ಲಿ) ಗೌರವದ ವಿಷಯ. ಇನ್ನು ನನ್ನ ಹಿತೆಶಿಗಳಿಗೆ ಬೆಂಗಳೂರಿಗೆ ಹೋಗುತ್ತೇನೆ ಅಂದಾಗ, "ಹೌದಾ, ಬೆಂಗಳೂರಿನಲ್ಲಿ ಇದ್ದೀರಿ ಅಂದ್ರೆ.... ನಿಮಗೆ ಕನ್ಯಾ ದಾನ ಮಾಡುವರ ಸಂಖ್ಯೆ ಕೂಡ ಹೆಚ್ಚಾಗುತ್ತೆ...!" ಎಂದು ಹಾಸ್ಯ ಚಟಾಕಿಯನ್ನೇ ಹಾರಿಸಿದ್ದರು. ಬೆಂಗಳೂರಿನ ಫ್ಲೈಓವರ್ ಗಳ ಮೇಲೆ  AC ಬಸ್ಸಿನಲ್ಲಿ ಓಡಾಡುವಾಗ ಸುಖವೇ ಬೇರೆ. ರಸ್ತೆಯ ಪಕ್ಕದಲ್ಲಿ ನಿಲ್ಲಿಸಿರುವ ಬಿಲ್ ಬೋರ್ಡ್ಸ ಗಳು, ವಿವಿಧ ದೀಪಾಲಂಕರಗಳು  ನೋಡುವಾಗ ಅದ್ಭುತ ಸೌಂದರ್ಯ ಲೋಕದ ಅನುಭವಾಗುತ್ತದೆ. AC  ಶಾಪಿಂಗ್ ಮಾಲ್ ಗಳು, ಸ್ವಿಚ್ ಒತ್ತಿದರೆ ಸಿಗುವ ಕಾಫಿ, ಕೈ ಹಿಡಿದರೆ ನೀರು ಬಿಡುವ ನಲ್ಲಿಗಳು ಎಲ್ಲವು ವಿಶೇಷವೇ..!

ಆದರೆ, ವಾರವೊಂದು ಕಳೆಯುತ್ತಿದ್ದಂತೆ ಬೆಂಗಳೂರು ಎಂದರೆ ಏನು? ರಾಜಧಾನಿಯ ಅಂತರಾಳದ ನೋವು ಏನು ಎನ್ನುವುದು ತಿಲಿಯಲಾರಮ್ಬಿಸಿತು. ಮೂಗನ್ನು ಪ್ರವೇಶ ಮಾಡುತ್ತಿರುವ ಧೂಳು ಕಣ್ಣಗಳು,ಕಿವಿಯನ್ನು ಕೆಂಗಡಿಸುತ್ತಿರುವ ವಾಹನಗಳ ಶಬ್ಧ, ಎತ್ತಿ-ಎತ್ತಿ ಬಿಸಾಡುವ ವಾಹನದ ಗಾಲಿಗಳು-ಕೆಟ್ಟಿರುವ ರಸ್ತೆಗಳು, ಮಾತನಾಡದ ಜನಗಳು, ಟ್ರಾಫಿಕ್ ನಲ್ಲಿ ಸಿಕ್ಕಿ ಹಾಕಿಕೊಂಡಿರುವ ಆಂಬುಲೆನ್ಸ್ ಗಳು, ರಸ್ತೆಯಲ್ಲಿ ಹರ ಸಾಹಸ ಮಾಡುತ್ತಿರುವ ಟ್ರಾಫಿಕ್ ಪೋಲಿಷ್ ಗಳು, ರಸ್ತೆಗಿಳಿದು ಕೆಲಸ ಹಗಲು-ರಾತ್ರಿ ದುಡಿಯುವ BBMP ನೌಕರು, ಕೆಟ್ಟ ವಾಸನೆಯಿಂದ ಸಹನೆಯನ್ನೇ ಪ್ರಶ್ನಿಸುವಂತ  ಕಸದ ರಾಸಿಗಳು, .....<removed>, ಈ ಜಗತ್ತೇ ತಮಗೆ ಸಂಬಂಧವಿಲ್ಲದಂತೆ AC ಬಸ್ಸಿನಲ್ಲಿ ಕಿವಿಗೆ earphone  ತುರುಕಿ, ಕಣ್ಣುಗಳನ್ನು ಮೊಬೈಲ್ ಸ್ಕ್ರೀನ್ ಗೆ ನಾಟಿಸಿ ಕುಳಿತುಕೊಳ್ಳುವ ಯೌವನದ ಯುವಕ-ಯುವತಿಯರು.... ಹೀಗೆ ಸಾವಿರಾರು ಬಗೆಯ ದೃಶ್ಯಗಳು ನಿತ್ಯ ಇಲ್ಲಿ ಲಭ್ಯ.

ಬೆಂಗಳೂರು ನಗರದಲ್ಲಿ ಬದುಕು ಒಂದು ವಿಪರ್ಯಾಸದ ಸಂಕೇತ. ಬಸ್ಸುಗಳಲ್ಲಿ ಹತ್ತಿದರೆ ಆಸನ ಸಿಕ್ಕೀತು ಎನ್ನುವ ಭರವಸೆ ಇಲ್ಲ. ಜನ ಜನ್ಗಳುಲಿಯ ಮಧ್ಯೆ ಯಾರು ಮೊಬೈಲ್, ಪಾಕೆಟ್ ಗೆ ಕೈ ಹಾಕುತ್ತಾರೆ ಅನ್ನುವ ವಿಚಾರದಲ್ಲೇ ತಲೆ ಕೆಡಿಸಿ ಕೊಂಡಿರಬೇಕು. ಅದರಲ್ಲೂ ಈ BMTC  ಕಂಡಕ್ಟರ್ ಗಳು ಕೊಡಬೇಕಾದ ಚಿಲ್ಲರೆ ಹಣವನ್ನು  ಟಿಕೆಟ್ ಮೇಲೆ  ಬರೆದು ಕೊಟ್ಟರೆ ಅಂದರೆ ಬಹಳ  ಗಮನದಲ್ಲಿ ಇಟ್ಟು ಕೊಂಡಿರಬೇಕು. ಒಂದೊಮ್ಮೆ  ಇಳಿಯುವ  ಸ್ಥಳದ ಕುರಿತಾದ ಚಿಂತೆ, ಟ್ರಾಫಿಕ್ ಕಿರಿ ಕಿರಿ ಮಧ್ಯೆ ನಿವೇನಾದರು ಚಿಲ್ಲರೆ ಹಣ ಮರೆತಿರೋ... ಕೃಷ್ಣಾರ್ಪಣ ಅನ್ನಬೇಕು ಅಷ್ಟೇ. ರಾತ್ರಿ ೯ ಗಂಟೆಯಾಗಿದೆ ಅಂದರೆ ಗಂಡಸರಾದ  ನಮ್ಮಂತವರಿಗೂ ನಡೆದಾಡಲು ಒಳ್ಳೆಯ ನಗರ ಅಲ್ಲ. ಕುಡುಕ ಪುಂಡರ ಮಧ್ಯದಲ್ಲಿ ಒಮ್ಮೆ ಸಿಕ್ಕಿ ಹಾಕಿಕೊಂಡು ನಾನು ಹಾಗೂ ನನ್ನ ಗೆಳೆಯರು ಕಸಿ-ವಿಸಿ ಅನುಭವಿಸಿದ್ದೇವೆ.

ಬೆಂಗಳೂರು ನಗರದಲ್ಲಿ ಇರುವುದು ಹಣ ಮಾತ್ರ; ಮಾನವೀಯತೆಗೆ ಬೆಲೆ ಇಲ್ಲ; ನೀರು ಇಲ್ಲ; ರಸ್ತೆಗಳು ಸಾಕಾಗುತ್ತಿಲ್ಲ; ವಿಸ್ತಾರವಾದ ಮನೆಗಳಿಲ್ಲ. ಹಾಗೆಂದು ಎನೂ ಇಲ್ಲವೆಂದು ಹುಬ್ಬೇರಿಸಲು ಹೋಗಬೇಡಿ...! ೨೦೦ ಇಂಜಿನಿಯರಿಂಗ್ ಕಾಲೇಜ್ ಗಳಿವೆ, ವಿಧಾನ ಸೌಧವಿದೆ, ಸರ್ಕಾರದ ಸಂಸ್ಥೆಗಳಿವೆ, ಸಾಂಸ್ಕೃತಿಕ ನೆಲೆಯಲ್ಲಿ ಹುಟ್ಟಿರುವ ಪುರಭವನದಂತ ಸ್ಥಗಳಿವೆ, ರಾಜ-ಮಹಾರಾಜರ ನೆನಪಿನ ಅರಮನೆ ಇದೆ; ದೇಶದ ಪ್ರತಿಷ್ಥಿತ DRDO , ಇಸ್ರೋ ದಂತಹ ಸಂಸ್ಥೆಗಳಿವೆ,   ಸಾವಿರಾರು ಹೋಟೆಲ್ ಗಳಿಗಳಿವೆ, ಸಕಲ ಸೌಲಭ್ಯದಿಂದೊದಗುಡಿದ ಆಸ್ಪತ್ರೆಗಳಿವೆ. ಆದರೆ ಇವೆಲ್ಲ ಇದ್ದು  ಕಣ್ಣಿಗೆ ಕಾಣುತ್ತಿದ್ದರೂ, ಅತಿ ಕಡಿಮೆ ದೂರದಲ್ಲಿದ್ದರು ವಾಹನ ಸಂದಣಿಯ ಮಧ್ಯೆ ಯಾವುದು ಕೂಡ ಸರಳವಾಗಿ ಲಭ್ಯವಾಗುವಂತದಲ್ಲ. ಕೆಲವೊಮ್ಮೆ, ಗುಯಂ ಗುಯಂ ಎಂದು ಹಾರ್ನ ಮಾಡುತ್ತ ಟ್ರಾಫಿಕ್ ನ ಮಧ್ಯೆ ಸಿಕ್ಕಿ ಹಾಕಿಕೊಂಡು ಒದ್ದಾಡುವ ಆಂಬುಲೆನ್ಸ್ ಗಳನ್ನೂ ನೋಡಿದಾಗ, ನಗರದಿಂದ ೫೦ ಕಿಮಿ ದೂರದಲ್ಲಿ ಇರುವ ನಮ್ಮ ಹಳ್ಳಿಯ ಜನ ಬೆಂಗಳೂರಿನ ಜನಕ್ಕಿಂತಲೂ ಬೇಗ ಆಸ್ಪತ್ರೆಗೆ ತಲುಪತ್ತಾರೆ ಅನಿಸುತ್ತದೆ.

ಬೆಂಗಳೂರಿನಲ್ಲಿ ಪೂರ್ಣವಾಗಿ ಸೆಟ್ಲ್ ಆಗಬೇಕು ಅಥವಾ ಆಗುತ್ತಿರುವ ನನ್ನ ಸಹೋದ್ಯೋಗಿಗಳ ವಿಷಯಗಳನ್ನು ತಿಳಿದಾಗ ಬಹಳ ಸಾರಿ ನಾನು ಏನು  ಮಾಡಬೇಕು ಎಂದು ಪ್ರಶ್ನಿಸಿ ಕೊಂಡಿದ್ದೇನೆ.ಬೆಂಗಳೂರಿನಲ್ಲಿ ಒಂದು ಸಾಮಾನ್ಯ ಅರ್ಧ ಹಳ್ಳಿಯನ್ನೇ ಕೊಂಡುಕೊಳ್ಳಬಹುದಾದಷ್ಟು ಹಣವನ್ನು 35 x 40 ಸೈಟ್ ಗೆ ಸುರಿಯ ಬೇಕು. ಅದರ ಜೊತೆಗೆ ತಮಿಳುನಾಡು-ಕರ್ನಾಟಕ ಪ್ರೀತಿಯಿಂದ ವರ್ತಿಸಿದರೆ, ವರುಣ ದೇವನು ಕೃಪೆ ತೋರಿಸಿದರೆ ಮಾತ್ರ ನೀರು..ಇಲ್ಲಾಂದರೆ ಬೆಂಗಳೂರು ಥಾರ್ ಮರುಭೂಮಿಯೇ..! ಬೈಕ್ ನಲ್ಲಿ ಓಡಾಡುವುದು ಕಷ್ಟ.. ಕಾರಗೆ ರಸ್ತೆಯು ಇಲ್ಲ; ಪಾರ್ಕಿಂಗ್ ಜಾಗವು ಇಲ್ಲ. ಟ್ರಾಫಿಕ್ ಮಧ್ಯೆ ಸಿಕ್ಕಿ ಹಾಕಿಕೊಂಡು ಕೋಪಗೊಂಡು, "ಬಿಡ್ರಲೇ ನನ್ನ" ಅನ್ನುವುದರ  ಪರಿಣಾಮವಾಗಿ "BDA " ಎಂಬ ಶಬ್ಧ ಬಂದಿದೆಯೋ ಏನೋ !

ಬೆಂಗಳೂರಿನ ಪರಿಸ್ಥಿಗೆ ಉತ್ತರವಿಲ್ಲ. ಇಲ್ಲಿಯ ಬದುಕು ಪೂರ್ಣವಾಗಿ ಪೆಟ್ರೋಲಿಯಂ  ಹಾಗೂ ವಿದ್ಯುತ್ ಮೇಲೆ ಆಧಾರಿತ(ಎಲ್ಲ ನಗರಗಳು ಅಷ್ಟೇ). ಆದರೆ ಪೆಟ್ರೋಲಿಯಂ ಅಗಲಿ ವಿದ್ಯುತ ಅಗಲಿ ಯಾವತ್ತು ಸಿಗುತ್ತಲೇ ಇರುವ ವಸ್ತುಗಳಲ್ಲ. ಇದರಿಂದಾಗಿ ಕೆಲವೇ ವರ್ಷಗಳಲ್ಲಿ $ ಏರು ಮುಖ, ಎಣ್ಣೆಯ ಅತಿ ಹೆಚ್ಚು ಕರ್ಚುಗಳಿಂದ ಬೆಂಗಳೂರಿನ ಜೀವನ ಬಹಳ ಕಷ್ಟವಾಗಲಿದೆ ಅನ್ನುವ ಒಂದು ಲೆಕ್ಕಾಚಾರ ಕೂಡ ನನ್ನ ತಲೆಯಲ್ಲಿದೆ. ಅದರಲ್ಲೂ, "Small is Beautiful" ಪುಸ್ತಕದ ಕೆಲವು ಹಾಳೆಗಳನ್ನು ತಿರುವಿ ಹಾಕಿದಾಗ ಮಾನವ ಜಗತ್ತು  ಅತಿ ಹೆಚ್ಚಾಗಿ ನವಿಕರಿಸಲಾಗದ ಶಕ್ತಿಗಳ ಮೇಲೆ ಅವಲಂಬಿಸಿರುವುದರ ಪರಿಣಾಮವಾಗಿ ನೋವು ಕಟ್ಟಿಟ್ಟ ಬುತ್ತಿ ಎನ್ನುವುದು ಅರಿವಿಗೆ ಬಂದಿದೆ.

ಬೆಂಗಳೂರಿನ ಸಮಸ್ಯೆಗಳಿಗೆ ಜನ-ಸರ್ಕಾರಗಳು ಬಹಳ ಉಪಾಯ-ತಂತ್ರಜ್ಞಾನ ಕಂಡುಕೊಂಡಿರುವುದಂತು ನಿಜ. ಅಗಲವಾದ ರಸ್ತೆಗಳು, ಫ್ಲ್ಯವೆರ್ ಗಳು, ಮೆಟ್ರೋ, ಅಪಾರ್ಟ್ ಮೆಂಟ್ ಗಳು. ಆದರೆ ವರುಣ ಅವಕೃಪೆ ಯಾದರೆ ಉತ್ತರ ವಿದೆಯೇ? ಮಳೆಯಿಲ್ಲದಿದ್ದರೆ ಬೆಂಗಳೂರಿಗೆ ಯಾವ ತಂತ್ರಜ್ಞಾನವು ನೀರು ತರಲಾರದು. ಅತಿ ಮಳೆ, ಭೂಕಂಪನ ದಂತ ಸಣ್ಣ  ಸಣ್ಣ ವಿಷಯಕ್ಕೂ ನಗರದ ಜೀವನ ಅಸ್ತವ್ಯಸ್ತ ಗೊಳ್ಳುತ್ತದೆ. ಒಂದೊಮ್ಮೆಇಡಿ ನಗರ ಮರು ನಿರ್ಮಾಣ ಮಾಡಬೇಕಾದಾರೆ  ಊಹಿಸಿ ಕೊಳ್ಳಲು ಸಾಧ್ಯವಾಗದಷ್ಟು ನೋವು ಇಲ್ಲಿ ಬರಲಿದೆ. ಹಾಗೆ ಆಗದೆ ಇರಲಿ ಅನ್ನೋದೇ ನನ್ನ ಆಶಯ. ಆದರೆ ಸರ್ಕಾರಗಳು  ಸರಿಯಾಗಿ ಗಮನ ಹರಿಸದಿದ್ದರೆ, ಅಮೆರಿಕಾದ ಡೆಟ್ರಾಯಿಟ್ ನಗರದಂತೆ ಬೆಂಗಳೂರಿನ ಸ್ಥಿತಿ ತಲುಪುದಂತು ನಿಜ.

ಹೀಗೆ ಸಾವಿರಾರು ಸಮಸ್ಯೆಗಳನ್ನು ನಾನು ಪಟ್ಟಿ ಮಾಡಬಲ್ಲೆ. ಆದರೆ ನನ್ನ ಹಾಗೆ ಸಾವಿರಾರು ಜನ ಬೆಂಗಳೂರಿನಲ್ಲಿ ಇಲ್ಲವೆ? ಅದರ ಜೊತೆಗೆ ನಾನೇ ಕೆಲವು ವಾಕ್ಯಗಳನ್ನು ಜೋಡಿಸಿ ಕೊಂಡಿದ್ದೇನೆ, "ಕೋಟಿಗಟ್ಟಲೆ ಜನ ಇರುವ ನಗರಕ್ಕೆ ನಾನೊಬ್ಬ ಭಾರವೇ?", "ಹುಟ್ಟಿಸಿದ ದೇವರು ಹುಲ್ಲು ಮೇಯಿಸಿಯನೆ?(ದೇವರು ನನಗೂ ಇಲ್ಲಿ ಒಂದು ಮನೆ ಕೊಟ್ಟಾನು)," ನೂರು ವರ್ಷದ ಬಾಳುವೆಗಾಗಿ ಇಷ್ಟೊಂದು ಚಿಂತೆಯಾಕೆ?". ಹೀಗೆಲ್ಲ ಯೋಚಿಸಿ...ಕೊನೆಗೂ ನಾನು ಬೆಂಗಳೂರು ನನ್ನದಲ್ಲ ಅನ್ನುತ್ತಲೇ ನಾನು ಬೆಂಗಳೂರಿನವನಾಗುತ್ತಿದ್ದೇನೆ. ಬೆಂಗಳೂರಿಗೆ ಬಂದು ೯ ತಿಂಗಳು ಕಳೆದಿವೆ(ನವ ಮಾಸ ತುಂಬಿದೆ).

ಹುಟ್ಟೂರು ದೂರ ಉಳಿಯಿತು;ಉಡುಪಿ  ಮರೆಗೆ ಸರಿಯಿತು; ಹೊಸ ಬದುಕು-ಹೊಸ ಕಲ್ಪನೆ. ಜೀವನಕ್ಕೆ user guide, reference guide ಇರಲ್ಲ ನೋಡಿ. ಬದುಕು ಹೇಗಾದರೂ ನಡಿತನೇ ಇರುತ್ತೆ... ಏನಂತಿಯ ಮಗಾ? ಆದರೆ, ನನ್ನ ದೊಡ್ಡ ಚಿಂತೆ, "ನೀವು  ಬೆಂಗಳೂರಿ"ನಲ್ಲೆ" ಸೆಟ್ಲ್ ಆಗ್ತಿರಾss...?!" ಅಂತ ಕೇಳ್ತಾರಲ್ಲ... ಅವರಿಗೆ ಏನು ಹೇಳುದು? ಹೇಗೆ ಹೇಳುದು?

No comments:

Post a Comment