Thursday, July 4, 2013

"ಮದುವೆ ಇಲ್ಲದ ಮೇಲೆ.. !"

ಅದು ನನ್ನ ಸಂಬಂಧಿಕರೊಬ್ಬರ ಮನೆಯಿರುವ ಊರು. ನಾನು ಆಗಾಗ್ಗೆ ಆ ಊರಿಗೆ ಹೋಗುತಿದ್ದೆ. ನನ್ನ ಸಂಬಂಧಿಕರ ಮನೆಗೆ  ಹೋಗುವ ದಾರಿಯಲ್ಲಿ ಒಂದು ಬ್ರಾಹ್ಮಣರ ಮನೆಯಿದೆ(ಜಾತಿಯ ಬಗ್ಗೆ ಬರೆಯಬಾರದೆಂದು ಕೊಂಡಿದ್ದೆ.ಆದರೆ ಕತೆ ಹೇಳಬೇಕೆಂದರೆ ಸಮಾಜದ ಸ್ಥಿತಿಗೆ ಹೊಂದಿಕೊಂಡಿರಲೇ ಬೇಕಲ್ಲವೇ?). ಪಾಪ ಬಡ ಬ್ರಾಹ್ಮಣರು. ಆ ಮನೆಯಲ್ಲಿ ಮೂರೇ ಜನ:ಗಂಡ ಹೆಂಡತಿ ಹಾಗೂ ಒಬ್ಬ ಮಗ. ಒಂದಿಷ್ಟು ಭೂಮಿ,ಎರಡು ದನ ಹಾಗೂ ಹಳ್ಳಿಯ ಸಣ್ಣ ದೇವಲಾಯ ಅಷ್ಟೇ ಅವರ ಆಸ್ತಿ. ಅವರ ಮಗ ೩೫ ರಿಂದ ೪೦ ವರ್ಷದವನು.ನಾನು ಸಣ್ಣವನಿದ್ದಾಗ, ಆ ಸಂಬಂಧಿಕರ ಮನೆಗೆ ಹೋದಾಗ ಅವನಿಗೆ ಭೇಟಿಯಾಗಿ, ಮಾತನಾಡಿ ಬರುತಿದ್ದೆ. ಆ ದಿನಗಳಲ್ಲಿ ಅವನು ಆಟ ಆಡುವ ವಯಸ್ಸಿನ ಮಾಣಿ.  ಅವನು ಒಬ್ಬನೇ ಮಗನಾದ್ದರಿಂದ, ಬ್ರಾಹ್ಮಣರ ಬಡತನ ಸರ್ಕಾರದ ಲೆಕ್ಕಕ್ಕೆ ಸಿಗದೇ ಇರುವುದರಿಂದ ಅವನ ತಂದೆ ತಾಯಿ ಅವನ ಓದುವಿಗೆ ಪ್ರಯತ್ನ ಮಾಡಲೇ ಇಲ್ಲ ಅನಿಸುತ್ತದೆ. ಒಟ್ಟಾರೆ ಅವನು ೩- ೪ ಕ್ಲಾಸು ಓದಿ, ಮನೆ-ತೋಟ-ದನ ಎಂದು ಸ್ವಾಭಿಮಾನದಿಂದ ಬದುಕಿದ ಬಡ ಬ್ರಾಹ್ಮಣ. ವಯಸ್ಸಿನಲ್ಲಿ ನನಗಿಂತ ಸುಮಾರು ೧೦ ವರ್ಷಗಳಷ್ಟು ದೊಡ್ದವನಾಗಿದ್ದರು, ನಾನು ಓದಿ ಮುಂದೆ ಬಂದಿದರಿಂದಲೋ ಏನೋ ನನ್ನ ಜೊತೆ ಗೆಳೆತನ ಇಟ್ಟುಕೊಂಡಿದ್ದ.

ನಿಮಗೆಲ್ಲ ಗೊತ್ತಿರುವಂತೆ, SSLC  ಮುಗಿದ ಕೊಡಲೇ PUC  ಬಗ್ಗೆ , PUC ಮುಗಿದ ಕೂಡಲೇ ಇಂಜಿನಿಯರಿಂಗ್ ಬಗ್ಗೆ, ಇಂಜಿನಿಯರಿಂಗ್ ಮುಗಿದ ಕೂಡಲೇ ಜಾಬ್ ಬಗ್ಗೆ, job  ಸಿಕ್ಕಿದ ಕೂಡಲೇ ಮದುವೆಯ ಬಗ್ಗೆ  ಜನ ಪ್ರಶ್ನೆಗಳನ್ನು ಕೇಳಲು ಕಾತರವಾಗಿರುತ್ತಾರೆ. ನಮಗಿಂತಲೂ ಅದೆಷ್ಟೋ ಮಂದಿ ನಮ್ಮ ಬಗ್ಗೆ ತಿಳಿಯಲು ಉತ್ಸುಕಾರಾಗಿರುವಂತೆ ಕೆಲವೊಮ್ಮೆ ಅನಿಸಿಬಿಡುತ್ತದೆ. ಹೀಗಿರುವಾಗ, ಇಂಜಿನಿಯರಿಂಗ್ ಮುಗಿಸಿ, ನೌಕರಿ ಸಿಕ್ಕಿ ಒಂದು ಒಂದೆರಡು ವರ್ಷಗಳ ಬಳಿಕ ಅವನಿಗೆಲ್ಲ ನನ್ನ job ಕುರಿತಾಗಿ ಮಾಹಿತಿ ಸಿಕ್ಕಿದೆ. ಒಂದು ದಿನ, ಸಂಬಂಧಿಕರ ಮನೆಗೆ ಹೋಗುವಾಗ ಸಿಕ್ಕಿದ, ದೇವರಾಜ, "ಎಷ್ಟು ದೂರ ?.... ಜಾಬ್ ಸಿಕ್ಕೆದೆಯಂತೆ ! ನಮಗೆಲ್ಲ ಗೊತ್ತೇ ಇಲವಲ್ಲ ಮಹರಾಯ! ಮದುವೆ ಯಾವಾಗ? ಮದುವೆಗಾದರೂ ಕರಿತಿಯಾ ತಾನೇ?.. ನೀವೆಲ್ಲಕಾಲೇಜ್ ಹುಡುಗರು ಇವಗಲೇ ಫಿಕ್ಸ್ ಮಾಡಿಕೊಂಡು ಇರ್ತಿರಾ !". ಒಂದು ಮಾರ್ಕ್ಸ್ ಗೆ ಸರಿಯಾಗಿ ಉತ್ತರಿಸಲೇ ಅಥವಾ ೧೦ ಮಾರ್ಕ್ಸ್ ಗೆ ಸರಿಯಾಗಿ ಉತ್ತರಿಸಲೇ ಎಂದು ಯೋಚಿಸುತ್ತಲೇ, " ಹಾಗೇನಿಲ್ಲ, ದೇವರಾಜರವರೆ, ಜಾಬ್ ಸಿಕ್ಕಿ ಎರಡು ವರ್ಷ ಆಯಿತು. ಈ ಕಡೆ ಬರ್ಲಿಕ್ಕು ಆಗಿಲ್ಲ. ಮದುವೆ ಬಗ್ಗೆ ನಮ್ಮದೇನಿದೆ... ಅಪ್ಪ-ಅಮ್ಮ ನೋಡ್ಕೊತ್ತಾರೆ..." ಎಂದು  ಉತ್ತರಿಸಿ, ಅವರ ಅಂಗಳಕ್ಕೆ ಇಳಿದು ಸ್ವಲ್ಪ ನೀರು ಕುಡಿಯಲು ಮುಂದೆ ಬಂದೆ.

ಅವನ ಅಪ್ಪ-ಅಮ್ಮ  ಸಂಬಂಧಿಕರೊಬ್ಬರ ಮದುವೆಗೆಂದು ಒಂದು ವಾರದ ಹಿಂದೆ ಘಟ್ಟ ಇಳಿದು ಹೋಗಿದ್ದಾರೆ. ಮನೆಯ ದಿನ-ನಿತ್ಯದ ಅಡುಗೆ, ದೇವರ ಪೂಜೆ, ದನಗಳ ಚಾಕರಿ ಎಲ್ಲವು ದೇವರಾಜ ಅಚ್ಚು ಕಟ್ಟಾಗಿ ಮಾಡಿಕೊಂಡು ಇರುತ್ತಾನೆ. ಏನೇ ತಪ್ಪಿದರು, ಮನೆ ಮುಂದಿರುವ ದೇವಲಾಯದ  ದೇವರಿಗೆ ಸರಿಯಾದ ಸಮಯದಲ್ಲೊಂದು ಪೂಜೆ,  ಸಂಧ್ಯಾವಂದನೆ ಆಗಲೇ ಬೇಕು- ಹಿರಿಯರು ಕೂಡ ನಡೆದುಕೊಂಡು ಬಂದ ದಾರಿ ಅದು. ಒಬ್ಬನೇ ಇದ್ದ ದೇವರಾಜನಿಗೆ ನನ್ನ ಆಗಮನ, ಮೌನದ ಕದ ತೆರೆದಂತಿತ್ತು.

ಹಲವರು ವಿಚಾರಗಳು ಮಾತನಾಡುತ್ತ, ಉಡುಪಿಯಲ್ಲಿ ನನ್ನ ವಿಹಾರ, ನಾನು ನೋಡಿದ ಯಕ್ಷಗಾನಗಳು, ಭೇಟಿಮಾಡಿದ ವ್ಯಕ್ತಿಗಳು ಎಲ್ಲವನ್ನು ಸೋಗಾಸಾಗಿ ಹೇಳಿ ಎರಡು ತಾಸು ನಾನೇ ಹರಣ ಮಾಡಿರಬೇಕು. ಆತನೊಬ್ಬ ಯಕ್ಷಗಾನದ ಪರಮ ಹುಚ್ಚ...! ಮಾತನಾಡುತ್ತ," ನೀವು ಮದುವೆ ಯಾಗುವುದಿಲ್ಲವೇ ? " ಎಂದು ಪ್ರಶ್ನಿಸಿ ಬಿಟ್ಟೆ. ಆ ಕಾಲದಲ್ಲಿ ಅವರ (ಹಳ್ಳಿಯ ಬಡ, ಓದಿರದ ಬ್ರಾಹ್ಮಣ ಹುಡುಗರ) ಬದುಕಿನ ನೋವು ನನಗೆ  ಗೊತ್ತೇ ಇರಲಿಲ್ಲ.

ಉತ್ತರ ಕನ್ನಡ ಜಿಲ್ಲೆಯಲ್ಲಿರುವ ಬ್ರಾಹ್ಮಣರು  ಶುದ್ಧ ಚಾರಿತ್ರ್ಯಕಾಗಿ ಸ್ವಾಭಿಮಾನದಿಂದ ಬದುಕುವಂತವರು. ಆದರೆ,ಈ ತಲೆಮಾರಿನಲ್ಲಿ ಹೆಣ್ಣು ಮಕ್ಕಳ  ಸಂಖ್ಯೆ ತಿರವೇ ಕುಸಿದಿದೆ. ಹಾಗೆಂದು ಜಾತಿಯನ್ನು ಮೀರಿದ ಮದುವೆಯನ್ನು ಮಾಡಲು ಅವರ ಸಂಪ್ರದಾಯ ಖಂಡಿತ ಒಪ್ಪದು. ಹೀಗಾಗಿ ಕೇವಲ ಓದಿದ, ಹೊರದೇಶಗಳಲ್ಲಿ ಅಥವಾ ಉನ್ನತ ಸ್ಥಾನದಲ್ಲಿರುವ ಹುಡುಗರಿಗೆ ಮಾತ್ರ ಮದುವೆಯ ಭಾಗ್ಯ. ಹಳ್ಳಿಯಲ್ಲಿದ್ದು, ದೇವಸ್ಥಾನ, ದನ, ಕೃಷಿ ಎಂದುಕೊಂಡ ಬದುಕು ಸವೆಸುತ್ತಿರುವ ಹುಡುಗರ  ಹಣೆಬರಹಕ್ಕೆ ಬ್ರಹ್ಮ ದೇವ ಒಳ್ಳೆದನ್ನು ಬರೆಯಲೇ ಇಲ್ಲ ಅನಿಸುತ್ತದೆ.

ದೇವರಾಜ ಕೂಡ ಇಂಥ ಹಳ್ಳಿಯ ಸಂಪ್ರದಾಯ ಬದ್ಧ  ಕುಟುಂಬಕ್ಕೆ ಸೇರಿದ ಹುಡುಗ. ಯೌವನದ ಕಾಲದಲ್ಲಿ ಒಂದೆರಡು ಹುಡುಗಿಯರನ್ನು ನೋಡಿದ್ದರು, ಹಳ್ಳಿಯ ಹುಡುಗ, ಓದಿರದ ಹುಡಗ ಎಂದೆಲ್ಲ ಮೂಗು ಮುರಿದು ಹೋದ ಕನ್ಯಾಪಿತ್ರುಗಳೇ ಬಹಳ. ಒಂದು ಹಂತದಲ್ಲಿ ಅವನಿಗೆ, ತನ್ನ ಬಗ್ಗೆ ಕೀಳಾಗಿ ಕಾಣುವ  ಇಂಥ 'ಸ್ವಜಾತಿಯ'  ಕನ್ಯಾ ಪಿತೃಗಳಲ್ಲಿ ಭಿಕ್ಷೆ ಬೇಡುವದು ಸಾಕೆಂದು, ಅಂತರ ಜಾತಿಯ ವಿವಾಹದ ಬಗ್ಗೆಯೂ ತನ್ನ ಹಿತೈಸಿಗಳಿಂದ ತಂದೆ-ತಾಯಿಗಳಿಗೆ ಒಪ್ಪಿಸಲು ಪ್ರಯತ್ನಿಸಿದ. ಉದ್ದಾಮ ಪಂಡಿತರು ಎನಿಸಿಕೊಂಡಿರುವ ಅವನ ತಂದೆ, ಮುಂದೆ ಸ್ವರ್ಗದಲ್ಲಿ ಸಿಗಬೇಕಾದ ಸ್ಥಾನ-ಮಾನ ಸಿಗದೇ ಹೋದಿತೆಂದು, ಸ್ವಜಾತಿಯರಲ್ಲದ ಮದುವೆಗೆ ಖಂಡಿತ ಒಪ್ಪದಿರುವುದು ಮಾತ್ರವಲ್ಲ, ತಾನು ಬದುಕಿರುವಾಗ ಹಾಗೇನು ನಡೆದರೆ ಮುಂದಿನ ವಿಷಯಕ್ಕೆ ನೀವೇ ಹೊಣೆ ಎಂದು ಹಿತೈಸಿಗಳಿಗೆ ಬಿಸಿ ಮುಟ್ಟಿಸಿದ್ದರು.

ಸ್ವರ್ಗ, ದೇವರು, ಸಂಪ್ರದಾಯ, ಜಾತಿ ಏನೇ ಹೇಳಿದರು ಮನುಷ್ಯರೆಲ್ಲರೂ ಉಪ್ಪು ತಿಂದು ಬದುಕಿದವರೇ. ಎಲ್ಲರಿಗು ಒಂದು ಸ್ವಾಭಿಮಾನ, ಭಾವನಾತ್ಮಕ ಸಂವೇದನೆ ಇದ್ದೆ ಇರುತ್ತದೆ. ಕನ್ಯಾ ಪಿತೃಗಳ  ತಿರಸ್ಕಾರ, ಅಪ್ಪನ ಸ್ವರ್ಗದ ಆಸೆ  ಇವುಗಳ ನಡುವೆ ತನ್ನ ಯೌವನದ ಆಕಾಂಕ್ಷೆಗಳನ್ನು ದಿನ-ದಿನ ಯೋಚಿಸುತ್ತ, ಬದುಕಿನ ಉತ್ತರಕ್ಕಾಗಿ ಹೆಣಗುತಿದ್ದಾನೆ ದೇವರಾಜ. ಒಂದು ಹಂತದಲ್ಲಿ ತನ್ನ ಜೀವನದಲ್ಲಿ ಮದುವೆ ಇಲ್ಲಎಂದು  ನಿರ್ಧಾರಕ್ಕೆ ಬಂದು, ಬದುಕಿನಲ್ಲಿ ತುಂಬಾ ಜಿಗುಪ್ಸೆ ಹೊಂದಿ ದುರಲೋಚನೆಗಲಿಗೂ ಒಳಗಾದ.

ಕೊನೆಗೆ ಅವನ ಮಾತು ಈ ರೀತಿಯಾಗಿ ನನ್ನ ಮುಂದೆ  ನಿಂತಿತು:
"ಕಮಲದ ಹೂವು, ಗುಲಾಬಿ ಹೂವು ಯಾರೋ ಒಬ್ಬರು ಮುಡಿದು ಕೊಳ್ಳಬಹುದು ಎಂದು ಹುಟ್ಟಿದಲ್ಲ. ಹಾಗೆಯ ನಾನು ಕೂಡ ಯಾರಿಗಾಗಿಯೂ ಬದುಕಬಾರದು. ಕನ್ಯಾಪಿತೃಗಳ ತಿರಸ್ಕಾರ ನನೆಗೇನು ಎಂದು ಕೊಂಡು ಸಮಾಧಾನಿಸಿ ಕೊಂಡೆ. ಆದರೆ ಕಮಲ ಅರಳಿ ನಿಲ್ಲ ಬೇಕಾದರೆ ಕನಿಷ್ಠ ನೀರು-ಕೆಸರು ಇರಲೇ ಬೇಕಲ್ಲವೇ? ಮನುಷ್ಯನಿಗೆ ಸ್ವಾಭಿಮಾನ - ಭಾವನೆ, ಪ್ರೀತಿಗಳೇ ಅಧಾರ. ಅದಿಲ್ಲದಿದ್ದರೆ  ಹೇಗೆ ತಾನೇ ಬದುಕ ಬೇಕು? ಮದುವೆ ಇಲ್ಲದ ಮೇಲೆ ಮಕ್ಕಳು ಎಂಬ ಭಾಗ್ಯವಿದೆಯೇ?  ನಾನು ಯಾರಿಗಾಗಿ ಬದುಕಬೇಕು? ಅದಕ್ಕೆ ನಾನು ಕಳೆದ ಒಂದೆರಡು ವರ್ಷಗಳಿಂದ ನಮ್ಮ ಭೂಮಿಯ ಅರ್ಧ ಭಾಗ ಸಾಗುವಳಿನೇ ಮಾಡಿಲ್ಲ. ಒಂದು ದೇವರ ಪೂಜೆ, ಒಂದು ಊಟ...ಅಷ್ಟೇ ಸಾಕು....ಅರ್ಧ ಜೀವನ ಮುಗಿದಿದೆ ... ಮತ್ತೇನು ಬೇಕು ಈ ಜೀವನದಲ್ಲಿ...?"

ಹಳ್ಳಿಗಾಡಿನ ಮಧ್ಯೆ, ಶಿಕ್ಷಣವೇ  ಇಲ್ಲದಿದ್ದರೂ ಬದುಕಿನ ಬಗ್ಗೆ ಅದೆಷ್ಟೋ ನೋವು ಇದ್ದರು ಮನೆ ಯೊಂದನ್ನು ಏಕಾಂಗಿಯಾಗಿ ನಡೆಸುತ್ತ  ಬದುಕಿಗೊಂದು ಅರ್ಥ ಬರೆಯಲು ಹೋರಾಟ ಅವನಿಗೆ  ನನ್ನಲ್ಲಿ ಉತ್ತರವೇ ಇರಲಿಲ್ಲ. ಮದುವೆಯ ಪರಿಕಲ್ಪನೆ, ಅದರ ಹಿಂದೆ ಅಂತಹ ನೋವುಗಳು ಅಷ್ಟೊಂದು ಆಳವಾಗಿ ಇರುತ್ತವೆ ಎಂದು ನಾನು ಭಾವಿಸಿಯೇ ಇರಲಿಲ್ಲ. ಪುರುಷ ಜೀವನದ ಯಾವುದೇ ಗುರಿ-ಕಲ್ಪನೆಗಳಿದ್ದರು ಅದು ಒಂದು ಹೆಣ್ಣಿನೊಂದಿಗೆ ತಳಕು ಹಾಕಿ ಕೊಂಡಿರುತ್ತದೆ. ಪುರುಷನ ಕ್ರಿಯಾತ್ಮಕ ಚಟುವಟಿಕೆಗಳಿಗೆ ಹೆಂಡತಿಯ ನೋಟ, ಮಕ್ಕಳ ಆಟ  ಪ್ರೇರಣೆಯಾಗಿರುತ್ತದೆ.
ಹೆಣ್ಣಿನ ತಾರತಮ್ಯ, ವರದಕ್ಷಿಣೆ ಮತ್ತು 'ಹೆಣ್ಣು ಒಂದು ವಸ್ತು' ಎಂದು ಪರಿಗಣಿಸುವ ಸಾಮಾಜಿಕ ಧೋರಣೆಯಿಂದಾಗಿ 'ಹೆಣ್ಣು ಮಗು ಬೇಡ' ಎಂಬ ಕೂಗು ಇದೆ. 'ಹೆಣ್ಣು  ಮಗು ಹುಟ್ಟಲಿ" ಎಂದು ದೇವರಲ್ಲಿ ಮೊರೆ ಇಡುತ್ತಿರುವ  ಹೆಣ್ಣುಗಳಿಗೆ ಈ ಲೇಖನ ಅರ್ಪಿಸುತ್ತೇನೆ.

ನನ್ನ  ಸಹೋದ್ಯೋಗಿಯೊಬ್ಬ  ಇತ್ತೀಚಿಗೆ ಒಂದು ಹುಡುಗಿಯನ್ನು ನೋಡಿ ಬಂದ . ಅವನಿಗೆ  ಅವಳು ಇಷ್ಟವಾಗಿದ್ದಳು. ಆದರೆ ಕುಟುಂಬದ ಹಿರಿಯರಿಗೆ ಯಾವೊದೋ ಕಾರಣಕ್ಕೆ ಸರಿಬರದಿದ್ದರಿಂದ ಸಂಬಂಧವನ್ನೇ ಮುರಿದುಕೊಂಡರು. ತನ್ನ ಕತೆಯನ್ನು ವಿವರಿಸುವಾಗ ,"ಏನ್  ಐತ್ಲೇ  ಜೀವನ... ಎಷ್ಟು ಓದಿದರೂ , ಎಷ್ಟು ಸಂಪಾದನೆ ಮಾಡಿದರೂ  ಜೀವನ ಅಷ್ಟೇ ...ನಮ್ಮ ಬೇಕು-ಬೇಡಗಳನ್ನು  ನಿರ್ಧರಿಸುವರು ಬೇರೆಯವರೇ ಆಗಿರುತ್ತಾರೆ". ಈ ಮಾತು ದೇವರಾಜನ ನೆನಪು ತಂದು ಕೊಟ್ಟಿತ್ತು . 

1 comment:

  1. NICE TO REAT BUT I SUGGEST U TO WRITTE SMALL AND SHORT .

    ReplyDelete